ಗಣೇಶ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಮುಂಬೈಯಲ್ಲಿ ಮಾತ್ರ ವಾರ್ಷಿಕವಾಗಿ ಸುಮಾರು ೧,೫೦,೦೦೦ ಪ್ರತಿಮೆಗಳು ಮುಳುಗಿಸಲಾಗುತ್ತದೆ.
ಗಣೇಶ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂತಲೂ ಕರೆಯುತ್ತಾರೆ. ಹಿಂದೂ ಹಬ್ಬಗಳಲ್ಲಿ ಗಣೇಶ ಹಬ್ಬ ಒಂದು ವಿಶೇಷವಾದ ಹಬ್ಬವಾಗಿದೆ. ವಿಗ್ನಗಳ ನಿವಾರಕ ಗಣೇಶ. ವರ್ಷಾರಂಭದಲ್ಲಿ ಗಣೇಶನನ್ನು ಪೂಜಿಸುವ ಮೂಲಕ ಇತರೆ ಹಬ್ಬಕ್ಕೆ ಚಾಲನೆ ಸಿಗುತ್ತದೆ. ಮಣ್ಣಿನಲ್ಲಿ ಗಣೇಶನ ವಿಗ್ರಹಗಳನ್ನು ಮಾಡಿ, ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ವಿಸ್ತಾರವಾದ ಪೆಂಡಾಲ್ ಗಳನ್ನೂ ಹಾಕಿ (ತಾತ್ಕಾಲಿಕ ಹಂತಗಳು) ಯಾವ ಜಾತಿ -ಮತ ಭೇದಗಳಿಲ್ಲದೆ ಎಲ್ಲರೂ ಸೇರಿ ಈ ಹಬ್ಬವನ್ನು ಅತಿ ಸಂತೋಷದಿಂದ ಆಚರಿಸುತ್ತಾರೆ.
ಇತಿಹಾಸಕಾರರು, ವಿದ್ವಾಸರು ಹೇಳುವ ಪ್ರಕಾರ ೧೮೯೨ ರಲ್ಲಿ ಪುಣೆಯಲ್ಲಿ ಮೊದಲ ಸಾರ್ವಜನಿಕ ಗಣೇಶನ ವಿಗ್ರಹವನ್ನು ಸ್ಥಾಪಿಸಿದರು. ೧೮೯೩ ರಲ್ಲಿ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ತಿಲಕ್ ಅವರು ತಮ್ಮ ಪತ್ರಿಕೆ ‘ಕೇಸರಿ’ಯಲ್ಲಿ ಸಾರ್ವಜನಿಕ ಗಣೇಶ ಉತ್ಸವ ಆಚರಣೆಯನ್ನು ಶ್ಲಾಘಿಸಿದರು. ಮತ್ತು ವಾರ್ಷಿಕ ದೇಶೀಯ ಉತ್ಸವವನ್ನು ದೊಡ್ಡ, ಸುಸಂಘಟಿತ ಸಾರ್ವಜನಿಕ ಕಾರ್ಯಕ್ರಮವಾಗಿ ಪ್ರಾರಂಭಿಸಲು ತಾವು ಕೂಡ ಮುಂದಾದರು ಎಂದು ಒಂದು ಕಡೆ ಹೇಳಿದರೆ, ಇನ್ನೊಂದು ಕಡೆ ಬ್ರಿಟಿಷರ ವಿರುದ್ಧ ಹೋರಾಡಲು ಹಿಂದೂಗಳನ್ನೂ ಸಾರ್ವಜನಿಕ ಸಭೆಯಲ್ಲಿ ಸೇರಿಸುವ ಉದ್ದೇಶದಿಂದ ಗಣೇಶ ಚತುರ್ಥಿಯನ್ನು ಆಚರಿಸಲು ಶುರುಮಾಡಿದರು. ಗಣೇಶನ ದೊಡ್ಡ ಸಾರ್ವಜನಿಕ ಚಿತ್ರಗಳನ್ನು ಬಾಂಬೆ ಪ್ರೆಸಿಡೆನ್ಸಿಯ ಮಂಟಪಗಳಲ್ಲಿ ಸ್ಥಾಪಿಸಿದರು ಎನ್ನಲಾಗುತ್ತದೆ.
ರಿಚರ್ಡ್ ಕ್ಯಾಶ್ಮನ್ ಅವರ ಪ್ರಕಾರ, ಬಾಂಬೆಯಲ್ಲಿ ನಡೆದ ೧೮೯೩ ರ ಹಿಂದೂ-ಮುಸ್ಲಿಂ ಕೋಮು ಹಿಂಸಾಚಾರ ಮತ್ತು ಡೆಕ್ಕನ್ ಗಲಭೆಗಳ ನಂತರ ಲೋಕಮಾನ್ಯ ತಿಲಕ್ ಗಣೇಶ ಉತ್ಸವವನ್ನು ಆರಂಭಿಸಿದರು. ಮತ್ತು ಉತ್ಸಾಹದಿಂದ ತಮ್ಮನ್ನು ತಾವು ತೊಡಗಿಸಿಕೊಂಡರು ಎಂದು ಹೇಳುತ್ತಾರೆ .
ಫೋಟೋ ಕೃಪೆ : Bookpooja Online
ಹೀಗೆ ಒಬ್ಬೊಬ್ಬರು ಒಂದೊಂದು ಪ್ರಕಾರದಲ್ಲಿ ಗಣೇಶನ ಉತ್ಸವಕ್ಕೆ ಚಾಲನೆ ಸಿಕ್ಕ ಕತೆಗಳನ್ನು ಹೇಳುತ್ತಾರೆ. ಎಲ್ಲಿಯೂ ನಿಖರವಾದ ಮಾಹಿತಿಗಳಿಲ್ಲ. ಆದರೆ ಗಣೇಶ ಹಬ್ಬದಲ್ಲಿ ಒಂದು ಸಂತೋಷ ಅಡಗಿರುವುದು ಸತ್ಯ. ಗಣೇಶನ ಮೂರ್ತಿಗಳು ಕಣ್ಣುಗಳಿಗೆ ಸಂಭ್ರಮ ನೀಡಿದರೆ, ಉದಯೋನ್ಮುಖ ಕಲಾವಿದರಿಗೆ ಕೈ ತುಂಬಾ ಕೆಲಸ ನೀಡುತ್ತಾ ಬಂದಿದೆ. ಮುಂಬೈ, ಸೂರತ್, ಪುಣೆ, ಹೈದರಾಬಾದ್, ಬೆಂಗಳೂರು, ಚೆನ್ನೈ ಮತ್ತು ಕರ್ನೂಲ್‌ನಲ್ಲಿ ಪ್ರಮುಖ ಆರ್ಥಿಕ ಚಟುವಟಿಕೆ ಮೂಲವು ಆಗಿದೆ.
ಗಣೇಶ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.ತಮಿಳುನಾಡಿನಲ್ಲಿ ‘ವಿನಾಯಕ ಚತುರ್ಥಿ’ ಅಥವಾ ‘ಪಿಳ್ಳಾರ್ ಚತುರ್ಥಿ’ ಎಂದೂ ಕರೆಯಲ್ಪಡುವ ಈ ಹಬ್ಬವು ತಮಿಳು ಕ್ಯಾಲೆಂಡರ್‌ನಲ್ಲಿ ಅಮಾವಾಸ್ಯೆಯ ನಂತರ ನಾಲ್ಕನೇ ದಿನ ಬರುತ್ತದೆ. ಗಣೇಶನ ವಿಗ್ರಹಗಳನ್ನು ಸಾಮಾನ್ಯವಾಗಿ ಜೇಡಿಮಣ್ಣುನಿಂದ ತಯಾರಿಸಲಾಗುತ್ತದೆ. ಏಕೆಂದರೆ ಅಲ್ಲಿ ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳನ್ನು ರಾಜ್ಯ ಸರ್ಕಾರವು ನಿಷೇಧಿಸಿದೆ. ಇನ್ನು ಕೇರಳದಲ್ಲಿ ಈ ಹಬ್ಬವನ್ನು ‘ಲಂಬೂಧರ ಪಿರಾನಲು’ ಎಂದೂ ಕರೆಯುತ್ತಾರೆ. ಇದು ಚಿಂಗಂ ತಿಂಗಳಲ್ಲಿ ಬರುತ್ತದೆ. ತಿರುವನಂತಪುರಂನಲ್ಲಿ ಪಜ್ವಾವಂಗಡಿ ಗಣಪತಿ ದೇವಸ್ಥಾನದಿಂದ ಶಂಕುಮುಗಂ ಬೀಚ್ ನವರೆಗೆ ಮೆರವಣಿಗೆ ನಡೆಸಲಾಗುತ್ತದೆ.
ನಮ್ಮ ರಾಷ್ಟ್ರದಲ್ಲಿಯಷ್ಟೇ ಅಲ್ಲದೆ ಹೊರದೇಶಗಳಿಗೆ ವಲಸೆ ಹೋದ ಹಿಂದೂಗಳು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕೆನಡಾ, ಮಲೇಷ್ಯಾ, ಟ್ರಿನಿಡಾಡ್ ಮತ್ತು ಟೊಬಾಗೊ, ಗಯಾನಾ, ಸುರಿನಾಮ್, ಕೆರಿಬಿಯನ್, ಫಿಜಿ, ಮಾರಿಷಸ್, ದಕ್ಷಿಣ ಆಫ್ರಿಕಾ, ಯುಕೆ, ನೇಪಾಳ ಗಳಲ್ಲಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯನ್ನು ಲಂಡನ್‌ನಲ್ಲಿ ೨೦೦೫ ರಲ್ಲಿ ಸೌತಾಲ್ ಮೂಲದ ಹಿಂದೂ ಕಲ್ಚರ್ ಅಂಡ್ ಹೆರಿಟೇಜ್ ಸೊಸೈಟಿ, ಅಲ್ಲಿನ ವಿಶ್ವ ಹಿಂದೂ ದೇವಾಲಯದಲ್ಲಿ ಮೊದಲ ಬಾರಿಗೆ ಆಚರಿಸಿತು. ಮತ್ತು ವಿಗ್ರಹವನ್ನು ಪುಟ್ನಿ ಪಿಯರ್‌ನಲ್ಲಿ ಥೇಮ್ಸ್ ನದಿಯಲ್ಲಿ ಮುಳುಗಿಸಲಾಯಿತು ಎನ್ನಲಾಗುತ್ತದೆ.( ಇದಕ್ಕೆ ನಿಖರವಾದ ಮಾಹಿತಿ ಇಲ್ಲ.)
ಫೋಟೋ ಕೃಪೆ : YouTube
ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಯನ್ನು ಗಣೇಶೋತ್ಸವದ ಹೆಸರಿನಲ್ಲಿ ೧೧ ದಿವಸ ಅಥವಾ ೨೧ ದಿವಸ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಮುಂಬೈಯಲ್ಲಿ ಪ್ರತಿವರ್ಷ ಸುಮಾರು ೧,೫೦,೦೦೦ ಪ್ರತಿಮೆಗಳನ್ನೂ ನೀರಿನಲ್ಲಿ ಮುಳುಗಿಸಲಾಗುತ್ತದೆ. ಹಬ್ಬದ ಸಮಯದಲ್ಲಿ ಕುಟುಂಬಗಳು ಪೂಜೆಗೆ ಸಣ್ಣ ಮಣ್ಣಿನ ಪ್ರತಿಮೆಗಳನ್ನು ಸ್ಥಾಪಿಸುತ್ತವೆ. ಮೂರ್ತಿಗಳನ್ನು ಬೆಳಿಗ್ಗೆ ಮತ್ತು ಸಂಜೆ ಪೂಜೆ ಮಾಡಲಾಗುತ್ತದೆ. ಹೂವುಗಳು, ಗರಿಕೆ ಹುಲ್ಲು, ಬೆಲ್ಲ,ತೆಂಗಿನ ಕಾಯಿ ಅರ್ಪಿಸಲಾಗುತ್ತದೆ. ಗೌರವಾರ್ಥ ಆರತಿ ಹಾಡುವ ಮೂಲಕ ಪೂಜೆ ಕೊನೆಗೊಳ್ಳುತ್ತದೆ. ಉತ್ಸವದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಾದ ಹಾಡುಗಾರಿಕೆ, ನಾಟಕ ಮತ್ತು ವಾದ್ಯವೃಂದದ ಪ್ರದರ್ಶನಗಳು ಮತ್ತು ಸಮುದಾಯ ಚಟುವಟಿಕೆಗಳಾದ ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಸ್ಥಳಗಳು ಮತ್ತು ಬಡವರಿಗೆ ದೇಣಿಗೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಅನೇಕ ಕಲಾವಿದರು, ಕೈಗಾರಿಕೆಗಳು ಮತ್ತು ವ್ಯವಹಾರಗಳು ಉತ್ಸವದಿಂದ ತಮ್ಮ ಜೀವನದ ಗಮನಾರ್ಹ ಮೊತ್ತವನ್ನು ಗಳಿಸುತ್ತವೆ.
ಕಷ್ಟಗಳ ನಿವಾರಕ, ಸಂತೋಷ ನೀಡುವ ಗಣಪ, ದುಡಿಯುವರಿಗೆ ಕೈತುಂಬಾ ಕೆಲಸ ನೀಡುವ ದೇವಾ…ಬಂದ ಕಷ್ಟಗಳನ್ನು ನಿವಾರಿಸಿ ಎಲ್ಲರಿಗೂ ಸುಖ, ಸಂತೋಷ, ನೆಮ್ಮದಿ ಗೌರಿಗಣೇಶ ನೀಡಲಿ ಎಂದು ಆಕೃತಿ ಕನ್ನಡ ಬಳಗ ಶುಭ ಹಾರೈಸುತ್ತದೆ.
ಗಣಪತಿ ಬಪ್ಪ ಮೋರ್ಯ….
- ಶಾಲಿನಿ ಹೂಲಿ ಪ್ರದೀಪ್