‘ಬೆಳಕು ತಂದವರ ಕತ್ತಲ ಕತೆ’- ಇಡೀ ಕಾಳೀ ಯೋಜನೆಯಲ್ಲಿ ನದಿಯ ಒಳ ಹರವಿನ ವೇಗವನ್ನು ಗುರುತಿಸುವ ಸಲುವಾಗಿ ಸಜ್ಜು ಮಾಡಿದ ಏಕೈಕ (velacity) ಯಂತ್ರ ಇದಾಗಿತ್ತು.
ಡ್ಯಾಮಿನಲ್ಲಿ ಸಿಕ್ಕ ಮತ್ತೊಬ್ಬ ಹೊಸ ಗೆಳೆಯ
ನಾವಿಬ್ಬರೂ ನದಿಯ ದಡದಲ್ಲಿ ನಿಂತು ನೀರಿನ ಒಳ ಹರಿವಿನ ಪ್ರಮಾಣವನ್ನು ದಾಖಲಿಸುತ್ತಿದ್ದ ಶ್ರೀಧರ್ ಕಾಣಕೋಣಕರ ಬಳಿ ಹೋದೆವು. ಅಲ್ಲಿ ಎಂಟು ತಗಡಿನ ಶೀಟುಗಳನ್ನು ಸುತ್ತ ಬಡಿದು ಗಾಳಿ-ಮಳೆಗೆ ಮಶೀನು ಹಾಳಾಗದಂತೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ನಿಂತು ನೋಡಿದರೆ ಎರಡೂ ದಂಡೆಯ ಮೇಲಿದ್ದ ಬೆಟ್ಟಗಳ ತುದಿಯನ್ನು ನೋಡಬಹುದಿತ್ತು. ಇಲ್ಲಿಂದ ಎತ್ತರಕ್ಕೆ ತಂತಿ ಹಗ್ಗವನ್ನು ಕಟ್ಟಿ ನದಿಯ ಆಚೆಯ ದಡಕ್ಕೆ ಉಕ್ಕಿನ ಕಂಬಿ ನೆಟ್ಟು ಅದಕ್ಕೆ ಈ ತಂತಿ ಹಗ್ಗವನ್ನು ಬಿಗಿಯಲಾಗಿತ್ತು. ಮತ್ತು ಇದೇ ಹಗ್ಗದ ಸಹಾಯದಿಂದ ಮಶೀನನ್ನು ನದಿಗೆ ಅಡ್ಡಲಾಗಿ ಆಚೆಯ ದಡದವರೆಗೂ ಕಳಿಸಿ ಅದನ್ನು ಹರಿಯುತ್ತಿದ್ದ ನದಿಯ ನೀರಿನ ಆಳಕ್ಕೆ ಇಳಿಸಿ ಹರಿದು ಬರುತ್ತಿರುವ ನೀರಿನ ವೇಗ ಮತ್ತು ಒಳ ಹರಿವಿನ ಪ್ರಮಾಣವನ್ನು (velacity) ಗುರುತಿಸಿ ದಾಖಲಿಸುವ ಕೆಲವನ್ನು ಶ್ರೀಧರ ಮಾಡುತ್ತಿದ್ದರು. ಅದು ಆಣೆಕಟ್ಟು ಕಟ್ಟುವ ಪೂರ್ವದಲ್ಲಿ ಅನ್ವೇಷಣಾ ವಿಭಾಗದಿಂದ ನಡೆಯುವ ಮತ್ತೊಂದು ಪ್ರಕ್ರಿಯೆಯಾಗಿತ್ತು. ಹಾಗೂ ಇಡೀ ಕಾಳೀ ಯೋಜನೆಯಲ್ಲಿ ನದಿಯ ಒಳ ಹರವಿನ ವೇಗವನ್ನು ಗುರುತಿಸುವ ಸಲುವಾಗಿ ಸಜ್ಜು ಮಾಡಿದ ಏಕೈಕ ಯಂತ್ರ ಇದಾಗಿತ್ತು.
ಫೋಟೋ ಕೃಪೆ : Newskarnataka.com
ನಾನು ಒಮ್ಮೆ ಹರಿಯುವ ನೀರಿನ ವೇಗವನ್ನು ಮತ್ತು ನದಿಯೊಳಗೆ ಮುಳುಗಿ ನೀರಿನ ವೇಗಕ್ಕೆ ತಿರುಗುತ್ತ ಸದ್ದು ಮಾಡುತ್ತಿದ್ದ ಯಂತ್ರವನ್ನು ಸೂಕ್ಷ್ಮವಾಗಿ ಗಮನಿಸುತ್ತ ನಿಂತೆ. ಶ್ರೀಧರ ಆ ಕ್ಷಣ ಏನೂ ಮಾತಾಡದೆ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಮಾಡುತ್ತಿದ್ದರು.
‘’ಹ್ಹಹ್ಹಹ್ಹ… ನೋಡ್ರಿ ಶ್ರೀಧರ್. ಇವ್ರು ಶೇಖರ್ ಅಂತ. ನಮ್ಮ ಕಡೆಯವ್ರಪಾ ಮತ್ತ. ಹೂಂ…ಹ್ಹಹ್ಹಹ್ಹ…ಎಫ್.ಆರ್.ಎಲ್. ಸರ್ವೇ ಟೀಮಿನಾಗ ಇದ್ರು ಇಷ್ಟು ದಿನ. ಈಗ ಡ್ಯಾಮಿಗೆ ವರ್ಗ ಆಗಿ ಬಂದಾರು. ಹೂಂ…
ಹ್ಹಹ್ಹಹ್ಹ… ಶೇಖರವರ಼ಽ ನೀವೂ ಮುಂದ ಈ ಕೆಲಸಾ ಮಾಡೂದು ಬರತೈತ್ರೆಪಾ. ಯಾಕಂದ್ರ ನೀವೂ ಹೆಚ್ಚ ಕಲ್ತಾವ್ರು ಅದೀರಿ. ನಮ್ಮ ಸಾಹೇಬರು ಎಲ್ಲಾ ಲೆಕ್ಕಾ ಹಾಕೇ ನಿಮ್ಮನ್ನ ಇಲ್ಲೀಗೆ ಕರಿಸ್ಯಾರ ತಗೋರಿ. ಹೂಂ..! ಹ್ಹಹ್ಹಹ್ಹ… ಶ್ರೀಧರ ಹತ್ರ ನೋಡಿ ಕಲಕೋರಿ ಹೆಂಗೆಂಗಂತ… ಹ್ಹಹ್ಹಹ್ಹ… !’’ ಅನ್ನುತ್ತ ನಕ್ಕರು. ಅವರ ನಗೆಯಲ್ಲಿ ನನಗೆ ಎಚ್ಚರಿಕೆಯೂ ಇತ್ತು.
ಆತ ಮ್ಯಾಟ್ರಿಕ್ ನಲ್ಲಿ ಮೂರು ಸಲ ಢುಮುಕಿ ಹೊಡೆದಿದ್ದ
ಶ್ರೀಧರ್ ಹುಟ್ಟಿ ಬೆಳೆದದ್ದು ಸೂಪಾದಲ್ಲಿಯೇ ಅಂದಾಗ ನನಗೆ ತುಸು ಕುತೂಹಲವಾಯಿತು. ಇವರು ಸ್ಥಳೀಕರು. ಇವರಿಗೆ ಶೂರ್ಪನಖಿಯ ಬಗ್ಗೆ ಗೊತ್ತಿರಲಿಕ್ಕೇಬೇಕು. ಇನ್ನಷ್ಟು ಮಾಹಿತಿ ಸಿಗಬಹುದು. ಹಾಗೆಯೇ ಇವರ ಮೂಲಕ ಸೂಪಾ ಊರಿನ ಪರಿಚಯ ಮಾಡಿಕೊಳ್ಳಬೇಕು. ಇಷ್ಟು ಸಣ್ಣ ಊರಲ್ಲಿ ಇವರೆಲ್ಲ ಹೇಗಿದ್ದಾರೋ ಎಂದು ನನ್ನಲ್ಲಿಯ ಲೇಖಕ ಪ್ರಶ್ನೆ ಮಾಡತೊಡಗಿದ.
‘’ಹ್ಹಹ್ಹಹ್ಹ…ಇತ್ಲಾಗ ಬರ್ರಿ ಶೇಖರವರ. ಮೊದ್ಲು ಶ್ರೀಧರ್ ತಮ್ಮ ಕೆಲಸಾ ಮುಗಿಸ್ಲಿ. ಇವರ ಬಗ್ಗೆ ಹೇಳತೀನಿ ನೋಡ್ರಿ. ಸೂಪಾದಾಗ ಶ್ರೀ ರಾಮ ಹೈಸ್ಕೂಲ ಅಂತ ಐತ್ರೆಪಾ. ಇವ್ರು ಸೂಪಾದೊಳಗ ಸರಕಾರೀ ಮರಾಠೀ-ಕನ್ನಡ ಪ್ರಾಥಮಿಕ ಶಾಲೆಯೊಳಗ ಓದಿ ಆಮ್ಯಾಲ ಅದ಼ಽ ಹೈಸ್ಕೂಲಿನ್ಯಾಗ ಸೇರಿಕೊಂಡ್ರಂತ. ಹೂಂ… ಮೀನಾ ತಿನ್ನೂ ತಲೀ ಚುರುಕಾಗಿರ ಬೇಕಾಗಿತ್ತು. ಆದ್ರ ಇವ್ರು ಅದ್ಯಾಕೋ ಮೂರು ಸಲ ಮ್ಯಾಟ್ರಿಕ್ನೊಳಗ ಢುಮುಕಿ ಹೊಡದ್ರು. ಕಡೀಕ ಮಾಸ್ತರಗನ ಬ್ಯಾಸರಾಗಿ ಅದೆಂಗೋ… ಪಾಸಾಗೂ ಹಂಗ ಮಾಡಿ ಮುಂದಕ್ಕ ದಾಟಿಸಿದ್ರಂತ ಹ್ಹಹ್ಹಹ್ಹ…’’ ನನಗೆ ಕುತೂಹಲವಾಯಿತು. ಚಾಂದಗೋಡಿವರ ಮುಖ ನೋಡುತ್ತ ನಿಂತೆ.
(ಚಾಂದಗೋಡಿವರ ಫೋಟೋ)
ಸೂಪಾದಲ್ಲಿ ಶ್ರೀ ರಾಮ ಹೈಸ್ಕೂಲು. ದಂಡಕಾರಣ್ಯದಲ್ಲಿ ಶ್ರೀ ರಾಮಚಂದ್ರನ ನೆನಪು ‘’ಏನೂ ಸೂಪಾ ಊರಾಗ ಹೈಸ್ಕೂಲೂ ಐತರೀ?’’
ನಾನು ಕೇಳಿದ್ದೇ ತಡ ಚಾಂದಗುಡೇಯವರ ಉತ್ಸಾಹ ಇಮ್ಮಡಿಸಿತು.
‘’ಹೂನ್ರಿ. ಹ್ಹಹ್ಹಹ್ಹ… ಸೂಪಾ ಊರ ದೇವರು ಶ್ರೀ ರಾಮಚಂದ್ರ. ಯಾಕಂದ್ರ ಇದು ದಂಡಕಾರಣ್ಯದ ಸೆರಗಿನೊಳಗ ಇರೂ ಊರು ನೋಡ್ರಿ. ಅಲ್ಲಿ ರಾಮ-ಲಕ್ಷ್ಮಣರಿದ್ರು ಇಲ್ಲಿ ಶೂರ್ಪನಖಿ ಇದ್ಲು. ಹಾಂ…ನಾಳೆ ಆ ದೇವರ ದರ್ಶನಾ ಮಾಡಿಸ್ತೀನಿ ತಗೋರಿ. ಅಲ್ಲಿ ಹೈಸ್ಕೂಲಿನಾಗ ಡಿ.ಜಿ.ಭಟ್ರು, ಸುಭಾಸ ಕುಲಕರ್ಣಿ, ಸುಮಂಗಲಾಬಾಯಿ, ಚೆಂಬೂ ಸಿದ್ದೀ ಅಂತ ಪಿ.ಟಿ. ಮಾಸ್ತರು ಅದಾರ. ಹೂಂರೆಪಾ… ನಮ್ಮ ನಾಯಕ ಸಾಹೇಬರೂ ಮತ್ತ ಡಿ.ಜಿ.ಭಟ್ ಮಾಸ್ತರು ಒಂದಽಽ ಚಾಳದಾಗನ ಭಾಡಗೀ ಇರೂದು. ಹೂಂ.. ಹ್ಹಹ್ಹಹ್ಹ… ಹಂಗನ ಶ್ರೀ ರಾಮ ಮಂದಿರ ಹತ್ತಿರ ಇರೂ ಶ್ರೀಧರ ಕಾಣಕೋಣಕರ ಅವರ ಚಾದ ಅಂಗಡೀಗೂ ಭೆಟ್ಟಿ ಕೊಡೂನು’’ ಅಂದು ಮಾತು ನಿಲ್ಲಿಸಿದರು. ಆದರೆ ನನಗೆ ಕುತೂಹಲ. ‘’ಸೂಪಾದಲ್ಲಿ ಶ್ರೀಧರರ ಹೋಟೆಲ್ಲು ಇದೆಯೇ’’ ಎಂದು ಮತ್ತೆ ಕೇಳಿದೆ. ಚಾಂದುಗುಡೆಯವರು ಒಂದು ಚಿಟಿಕೆ ನಸ್ಯವನ್ನು ಮೂಗಿಗೇರಿಸಿ ಮತ್ತೆ ಹುರುಪಾದರು.
‘’ಅದು ಹೋಟೇಲು ಅಲ್ಲ. ಬರೇ ಚಾದಂಗಡಿ. ಯಾವತ್ತೋ ಮಾಡಿದ ಚಕ್ಕಲಿ, ಕಾರದಾನೀ ಇಟ್ಟಿರತಾರ ಕಾಜಿನ ಭರಣೀಯೊಳಗ. ಅದು ಬಿಟ್ಟರ ಸಿಗೂದು ಚಾ ಒಂದ. ಅದನೂ ಮುಂಜಾನಿ ಸೂರ್ಯೋದಯಕ್ಕ ಕಾಸಿ ಸೋಸಿ ಇಟ್ಟರ ಸಂಜೀ ತನಕ ಅದನ್ನ ಮಾರತಾರ. ನಮಗ ಬೇಕಾದರ ಆಗ ಸೋಸಿ ಕೇಟಿ ಮಾಡತಾರ ತಗೋರಿ ಹ್ಹಹ್ಹಹ್ಹ… ನೀವ ನೋಡೀರಂತ’’ ಎಂದು ಹೇಳಿ ಮತ್ತೆ ನಕ್ಕರು.
ಅಷ್ಟರಲ್ಲಿ ತಮ್ಮ ಕೆಲಸ ಮುಗಿಸಿ ನಮ್ಮತ್ತ ಬಂದ ಶ್ರೀಧರ ನನ್ನ ಕೈ ಕುಲುಕಿದರು. ಇಬ್ಬರ ಪರಿಚಯವಾಯಿತು. ಅವರದು ಯಾವಾಗಲೂ ನಗುಮೊಗ. ನನ್ನಷ್ಟೇ ವಯಸ್ಸು. ಮನೆ ಮಾತು ಕಾರವಾರೀ ಕೊಂಕಣಿಯಾದದ್ದರಿಂದ ಕನ್ನಡವನ್ನೂ ಅದೇ ಶೈಲಿಯಲ್ಲೇ ಮಾತಾಡುತ್ತಿದ್ದರು.
ಫೋಟೋ ಕೃಪೆ : Pintrest
ಮನೆ ಬಾಡಿಗೆ ತಿಂಗಳಿಗೆ ಐದೂವರೆ ರೂಪಾಯಿ
‘’ನೀವೇನು ಇಲ್ಲೇ ಡ್ಯಾಮ ಸೈಟಿನಲ್ಲೇ ಬಿಡಾರ ಮಾಡ್ತೀರೋ? ಇಲ್ಲಾ ಸೂಪಾದಲ್ಲಿ ಬಾಡಿಗೆ ಮನೆ ನೋಡ್ತೀರೋ?’’ ಎಂದು ಶ್ರೀಧರ್ ನನ್ನನ್ನು ಕೇಳಿದರು. ಅಷ್ಟು ಕೇಳಿದ್ದೇ ತಡ. ತಕ್ಷಣ ಚಾಂದಗುಡೆಯವರು ಅಡ್ಡ ಬಾಯಿ ತಗೆದರು.
‘’ನಹೀ… ನಹೀ. ತ್ಯಾತ ಜವಾಬ್ದಾರಿ ಮಾಝ ಅಸಾ. ಮೀ ಅಸಾತೋ. ಹಮಚ್ಯಾ ಚಾಳ ಅಸಾಕೀ… ಅಲ್ಲೇ ಒಂದು ಸಿಂಗಲ್ ಮನೀ ಐತಿ. ಹ್ಹಹ್ಹಹ್ಹ… ನಾನು ಮಾಲಕರೊಂದಿಗೆ ಮಾತಾಡೇನಿ. ತಿಂಗಳಿಗೆ ಆರು ರೂಪಾಯಿ ಬಾಡಿಗೀನೂ ಹೇಳ್ಯಾರು. ಹೂಂ… ನಮಗ ಬೇಕಾದ್ರ ಎಂಟಾಣೆನೂ ಕಡಿಮಿ ಮಾಡತಾರು. ಮೈಹಿನಾಚ ಸಾಡೇ ಪಾಚ ರೂಪಾಯಿ ಭಾಡಾ… ಹೂಂ. ಹ್ಹಹ್ಹಹ್ಹ…’’
ಎಂದು ಚಾಂದಗುಡೆಯವರು ಮರಾಠೀ ಮಿಶ್ರಿತವಾಗಿ ಮಾತಾಡಿದಾಗ ನಾನು ವಿಚಲಿತನಾಗಿ ಕೆಳಗೆ ಹರಿಯುತ್ತಿರುವ ನದಿಯತ್ತ ನೋಡಿದೆ. ಅಸಲು ನಾನು ಮನೆ ಹುಡುಕಲು ಅವರಿಗೆ ಹೇಳಿರಲೇ ಇಲ್ಲ. ಎಲ್ಲ ಕಾಳಜಿ ಅವರದೇ. ನಾನು ಹೇಳದಿದ್ದರೂ, ನೋಡದಿದ್ದರೂ ನನಗೆ ಹಿರಿಯರಾಗಿ ಅವರೇ ನನಗಾಗಿ ಮನೆ ಹುಡುಕಿ ಇಟ್ಟಿದ್ದರು. ಋಣ ಇದ್ದರೆ ಎಲ್ಲವೂ ತಾನಾಗಿಯೇ ಒದಗಿ ಬರುತ್ತದೆ ಅನ್ನುವುದು ಸುಳ್ಳಲ್ಲ. ದಿಕ್ಕಿಲ್ಲದವರಿಗೆ ದೇವರೇ ಗತಿ ಅಲ್ಲವೆ.
ಬಂದ್ರು… ಚಾಮೀ…ಬಂದ್ರು…
ನಾವು ಇನ್ನೂ ಮಾತಾಡುತ್ತಿರುವಾಗ ಅವಸರದಿಂದ ದಿಬ್ಬಹತ್ತಿ ಫೀಲ್ಡ ಆಫೀಸ ಕಡೆಯಿಂದ ಬಂದ ಕಾಶಿನಾದನ್ ವಸವಸ ತೇಕುತ್ತ ಹೇಳಿದ.
ಫೋಟೋ ಕೃಪೆ : Flickr
’ಜಲ್ದೀ ವಣ್ಣಾ… ಹೈದ್ರಾಬಾದು ಟೀಮು ಸಧ್ಯೇಕನೇ ಬರ್ತಿದಂತೆ. ನಾಯಕ್ ಸಾಹೇಬ್ರೂ ಅವರೊಟ್ಟಿಗೇ ಉಂಟಂತೆ. ಜಲ್ದೀ ಫೀಲ್ಡ ಆಫೀಸಿನಲ್ಲಿ ಟೀ ವ್ಯವಸ್ಥೆ ಆಗಬೇಕಂತೆ. ಈಗ್ ರಾಮಚಂದ್ರರಾವ್ ಸಾಹೇಬರ ಕಡೆಯವರು ಬಂದು ಹೇಳಿ ಹೋದ್ರು’’ ಅಂದಾಗ ಮೂರೂ ಜನ ಎಚ್ಚೆತ್ತುಕೊಂಡೆವು. ಚಾಂದಗುಡೆಯವರಂತೂ ಗಾಬರಿಬಿದ್ದರು.
‘’ ಬಂದ್ರಾ? ಬರ್ರಿ ಶೇಖರ್ ಬರ್ರಿ. ಶ್ರೀಧರ್ ನಡೀರಿ. ಲಗೂ ಫೀಲ್ಡ ಆಫೀಸ ಕಡೇ ಹೋಗೂನು’’ ಎಂದು ನಮ್ಮನ್ನು ಬಿಟ್ಟೇ ದುಡು ದುಡು ದಿಬ್ಬ ಇಳಿಯತೊಡಗಿದರು. ಅವರ ಹಿಂದೆಯೇ ನಾನೂ, ಶ್ರೀಧರೂ ನಡೆದೆವು. ಹೈದರಾಬಾದ ಟೀಮಿನ ಜೊತೆಗೆ ಕೆಲಸ ಮಾಡಲೆಂದೇ ಇಲ್ಲಿಗೆ ವರ್ಗವಾಗಿ ಬಂದಿದ್ದ ನನಗೆ ಇನ್ನೂ ಹೆಚ್ಚಿನ ದುಗುಡವಿತ್ತು. ಆ ಕ್ಷಣ ಎಲ್ಲವನ್ನೂ ಮರೆತೆ. ನಾನು ಫೀಲ್ಡ ಆಫೀಸು ಇನ್ನೂ ನೋಡಿರಲಿಲ್ಲ. ಈಗ ಮೊದಲ ಬಾರಿ ಅಲ್ಲಿ ಒಳಗೆ ಕಾಲಿಟ್ಟೆ.
ಫೋಟೋ ಕೃಪೆ : Flickr
ಫೀಲ್ಡು ಆಫೀಸೀನಲ್ಲಿ ಹಾರೆ, ಪಿಕಾಸಿ, ಗುದ್ದಲಿಗಳು ಆಫೀಸು ಅಂದ ಕೂಡಲೇ ಕಟ್ಟಿಗೆಯ ಖುರ್ಚಿಗಳು, ದೊಡ್ಡ ಮೇಜು, ಫೈಲುಗಳು, ಒಂದಷ್ಟು ನೀಲಿ ನಕಾಶಗಳು ಇರುತ್ತವೆ ಎಂದು ಭಾವಿಸಿದ್ದವನಿಗೆ ಅಚ್ಚರಿಯಾಯಿತು. ಅಲ್ಲಿ ನನಗೆ ಕಂಡವರು ಒಂದಿಬ್ಬರು ಹರಕು ಅಂಗಿಯ ಕೂಲಿಗಳು. ಧೂಳು ಹಿಡಿದ ಕಚ್ಚೆ ಧೋತರ. ತಲೆಗೆ ಕಮಟಿಕ್ಕಿದ ರುಮಾಲು. ಅವರೂ ಕೂಲಿ ಹುಡುಕುತ್ತ ಬಯಲು ನಾಡಿನಿಂದ ಬಂದವರೇ.
ಅವರೆಲ್ಲ ಇಲ್ಲಿಯೇ ಡ್ಯಾಮ ಸೈಟಿನಲ್ಲಿ ಗುಡಿಸಲು ಹಾಕಿಕೊಂಡು ಇದ್ದಾರೆಂದು ಚಾಂದಗುಡೆ ಹೇಳಿದ್ದರಲ್ಲ. ಮುರಿದ ಕಾಲಿನ ಒಂದು ಚಿಕ್ಕ ಕಟ್ಟಿಗೆಯ ಮೇಜು. ಅದರ ಸುತ್ತ ಒಂದಷ್ಟು ಮಾಸಿದ ಖುರ್ಚಿಗಳು. ಅಲ್ಲಿಯೇ ತುಸು ದೂರದಲ್ಲಿ ಹಲಗೆಯ ಬೆಂಚು. ಅದರ ಮೇಲೆ ಒಂದಷ್ಟು ಕಬ್ಬಿಣದ ಕೊಯ್ತಗಳು, ಕುಡುಗೋಲುಗಳು. ಅಲ್ಲಲ್ಲಿ ಬಿದ್ದಿದ್ದ ಹಾರೆ-ಪಿಕಾಸಿ-ಮಂಕರಿಗಳನ್ನು ಒಂದು ಕಡೆ ಎತ್ತಿಟ್ಟು ಕಸವನ್ನೂ ಗುಡಿಸಿದ್ದರು. ಗೋಡೆಯಂತೆ ಹೊಂದಿಸಿ ಮೊಳೆ ಬಡಿದಿದ್ದ ತಗಡಿನ ಒಂದು ತೂತಿಗೆ ಕಾಳೀಕಾ ದೇವಿಯ ಬಣ್ಣದ ಕ್ಯಾಲೆಂಡರನ್ನು ಎಲ್ಲಿಂದಲೋ ತಂದು ಸಿಕ್ಕಿಸಿದ್ದರು.
ಅದರ ಕೆಳಗೆ ಅರ್ಧ ಹಚ್ಚಿ ಆರಿಸಿದ್ದ ಊದುಬತ್ತಿ , ಹಾಳೆಯ ಚೀಟಿಯಲ್ಲಿ ಮಡಿಚಿಟ್ಟಿದ್ದ ಕುಂಕುಮ, ಅರಿಶಿಣವೂ ಅಲ್ಲಿತ್ತು. ಚಾಂದಗುಡೆಯವರು ಶಿವಾಜಿ ಮಹಾರಾಜರ ಕುಲ ದೇವತೆ ಅಂಬಾ ಭವಾನಿಯ ಭಕ್ತರು. ಅವರೇ ಕಾಳಿಕಾ ದೇವಿಯ ಫೋಟೋ ತಂದದ್ದು ಎಂದು ಅವರೇ ಮಾತಿನ ಮಧ್ಯ ಹೇಳಿದರು. ಒಂದು ಪ್ಲಾಸ್ಟಿಕ್ ತಟ್ಟೆಯಲ್ಲಿ ಒಣಗಿದ ಲಿಂಬೆ ಹಣ್ಣನ್ನೂ ಅಲ್ಲಿ ಇಟ್ಟಿದ್ದರು.
ಅರವತ್ತು ವರ್ಷದ ನನ್ನ ತಪಸ್ಸು ಒಣಗಿದ ಲಿಂಬೆ ಹಣ್ಣಿನಲ್ಲಿ ಕಾಳಿಕಾ ದೇವಿಯನ್ನು ಕಂಡೆ
ನಾನು ಮೊದಲ ಬಾರಿ ಆಫೀಸು ಪ್ರವೇಶಿಸಿದ್ದರಿಂದ ಮನದಲ್ಲಿಯೇ ಕಾಳಿಕಾ ದೇವಿಗೆ ವಂದಿಸಿದೆ. ಕಾಳೀ ನದಿಯೆಂದರೆ ಸಾಕ್ಷಾತ್ ಕಾಳಿಕಾ ದೇವಿಯೇ. ನಾನು ವಿದ್ಯಾರ್ಥಿ ದೆಸೆಯಲ್ಲಿಯೇ ಅದು ಹೇಗೋ ಬಾದಾಮಿಯ ಬನಶಂಕರಿಯ ಭಕ್ತನಾಗಿದ್ದೆ. ಪ್ರತಿ ವರ್ಷ ದಸರಾದಲ್ಲಿ ಶ್ರೀ ದೇವೀ ಪುರಾಣವನ್ನು ಎಲ್ಲಿಯೇ ಇರಲಿ. ಇದ್ದಲ್ಲಿಯೇ ಒಂಭತ್ತು ದಿನ ಭಕ್ತಿಯಿಂದ ಓದುತ್ತಿದ್ದೆ. ಇದು ಕಳೆದ ಅರವತ್ತು ವರ್ಷಗಳಿಂದ ನಾನು ನಡೆಸಿಕೊಂಡು ಬಂದ ಪದ್ಧತಿ.
ಚಾಂದಗುಡೆಯವರು ಒಳಗೆ ಬಂದವರೇ ಸೊಂಟದಲ್ಲಿದ್ದ ಬೀರುವಿನ ಚಾವಿಯನ್ನು ಹೊರಗೆ ತಗೆದು ಒಳಗಿಟ್ಟಿದ್ದ ಕ್ರೀಮು ಬಿಸ್ಕೀಟು, ಮಾರೀ ಬಿಸ್ಕೀಟುಗಳ ಎರಡೆರೆಡು ಪಾಕೆಟ್ಟುಗಳನ್ನು ತಗೆದು ಅಲ್ಲೇ ಇದ್ದ ಚೀನೀ ಪ್ಲೇಟುಗಳಿಗೆ ಓರಣವಾಗಿ ಹೊಂದಿಸಿಟ್ಟರು. ಮತ್ತು ಫ್ಲಾಸ್ಕನ್ನು ಈಚೆ ತಗೆದು ದಾಮೋದರನ್ ಚಹದಂಗಡಿಯಿಂದ ಆರು ಕೇಟಿ ಮಾಡಿಸಿಕೊಂಡು ತರಲು ಇನ್ಯಾರನ್ನೋ ಕಳಿಸಿದರು. ಅರೇ…ಇಂಥ ಕಾಡಿನಲ್ಲೂ ಹೊಟೆಲ್ಲು ಇದೇಯಾ? ಎಂದು ನಾನು ಪ್ರಶ್ನಿಸಿದೆ.
Photo Credit – Geographical Survey of India (YouTube)
ಇಲ್ಲೂ ಒಂದು ಮಲಯಾಳೀ ಹೊಟೆಲ್ಲು. ಆದರೆ ಅದು ಕಾಕಾ ಹೊಟೆಲ್ ಅಲ್ಲ.
‘’ಹ್ಹಹ್ಹಹ್ಹ… ನಾನು ಮೊದ್ಲೇ ನಿಮ್ಮನ್ನು ದಾಮೋದರ ಹೊಟೆಲ್ಲಿಗೆ ಕರಕೊಂಡು ಹೋಗೂನು ಅನಕೊಂಡಿದ್ನಿ. ಇವತ್ತು ಇವರೆಲ್ಲಾ ಬರೂದಿತ್ತು ನೋಡ್ರಿ. ಅದಕ್ಕ ಸುಮ್ನಾದ್ನಿ. ಇವರೆಲ್ಲಾ ಬಂದು ಹೋಗ್ಲಿ ತಡೀರಿ. ಆಮ್ಯಾಲ ಹೋಗೂನು ಹಂಗ಼ಽಽ ಇವತ್ತ ಮಧ್ಯಾನಕ ಊಟಾನೂ ಆಲ್ಲೇ ಮಾಡೂನು. ಎಲ್ಲಾರೂ ಬಂದಿರತಾರು ಆ ಹೊತ್ತಿಗೆ. ಅದೇನು ಕಾಕಾ ಹೊಟೆಲ್ ಅಲ್ಲ. ಶುದ್ಧ ಶಾಖಾಹಾರಿ ಮಲಯಾಳೀ ನಂಬೂದರಿ ಹೊಟೆಲ್ಲು ’’ ಅಂದಾಗ ನನಗೆ ಸಮಾಧಾನವೂ ಆಯಿತು. ಇಲ್ಲಿ ಶಾಖಾಹಾರಿ ಊಟವೂ ಸಿಗುತ್ತದೆ ಅಂದರೆ ಅದು ನನ್ನ ಪುಣ್ಯ ಅಂದುಕೊಂಡೆ.
ಆದರೂ ನನ್ನ ತಲೆಯ ಮೂಲೆಯಲ್ಲಿ ಇನ್ನೂ ಶೂರ್ಪನಖಿ ಕೂತಿದ್ದಳು. ಅವಳು ವಾಸ ಮಾಡಿದ್ದ ಗುಹೆಯನ್ನೂ ಮತ್ತು ಆಕೆ ಜಳಕ ಮಾಡಿ ನೀರಿನಲ್ಲಿ ಪುಟಿದು ಬೀಳುತ್ತಿದ್ದ ಮೀನುಗಳನ್ನು ಹಾಗೇ ತಿನ್ನುತ್ತಿದ್ದ ಜಾಗ ಆ ನೀರಿನ ಹೊಂಡವನ್ನೂ ನೋಡಬೇಕೆಂದುಕೊಂಡೆ. ಅದು ಇವತ್ತು ಸಾಧ್ಯವಾಗುತ್ತೋ ಇಲ್ಲವೋ ಅನಿಸಿ ನನ್ನ ಉತ್ಸಾಹಕ್ಕೆ ಬ್ರೇಕು ಬಿತ್ತು.
‘’ಲೇ..! ತಮ್ಯಾ… ಲಚಮಣಾ… ದಾಮೋದರನ ಚಾದಂಗಡಿಗೆ ಹೋಗಿ ಇವತ್ತೊಂದು ಊಟ ಎಕ್ಸಟ್ರಾ ಬೇಕಂತ ಹೇಳು’’ ಎಂದು ಚಾಂದಗುಡೆ ಗಟ್ಟಿ ದನಿಯಲ್ಲಿ ಹೇಳಿದರು. ಆತ ‘’ಹೂಂರೀ’’ ಅನ್ನುತ್ತ ದಿಬ್ಬದ ಕಡೆಗೆ ಕಾಲು ಕಿತ್ತ. ಫೀಲ್ಡ ಆಫೀಸಿನ ಕಿಡಕಿಯ ಹಿಂದೆಯೇ ಕಾಳೀ ನದಿ ಹರಿಯುತ್ತಿತ್ತು. ಅದರ ಜುಳುಜುಳು ಸದ್ದು ಕಿವಿ ತುಂಬುತ್ತಿತ್ತು.
Photo Credit – Geographical Survey of India (YouTube)
‘’ಮುಂಗಡ ಸೂಚನಾ ಕೊಡದಿದ್ದರ ಅಂವಾ ಹೆಚ್ಚಿನ ಊಟಾ ತಯಾರ ಮಾಡಿರೂದಿಲ್ಲ. ಅದಕ್ಕ ಹೇಳಿದ್ನಿ. ಕುಚಲಕ್ಕೀ ರೈಸು. ಉಣತೀರೋ ಇಲ್ಲೋ’’ ಅಂತ ನನ್ನತ್ತ ನೋಡುತ್ತ ಕೇಳಿದರು. ನಾನು ತಲೆಯಾಡಿಸಿದೆ. ನನ್ನ ದೃಷ್ಟಿ ಇನ್ನೂ ಹೊರಗೆ ಕಾಣುವ ನದಿ ಮತ್ತು ಅದರಾಚೆಯ ಬೆಟ್ಟದ ಬುಡದಲ್ಲಿ ಕಾಣುತ್ತಿದ್ದ ಶೂರ್ಪನಖಿಯ ಗವಿಯತ್ತಲೇ ನಟ್ಟಿತ್ತು.
ಚಾರೂ… ಚಾಯೇಬ್ರು ಬಂತು… ಚಾಯೇಬ್ರು ಬಂತೂ…
ಇದ್ದಕ್ಕಿದ್ದಂತೆ ಹೊರ ಬಾಗಿಲಲ್ಲೇ ನಿಂತಿದ್ದ ಕಾಶೀನಾದನ್ ಈಗ ಒಂದೇ ಸಲಕ್ಕೆ ತನ್ನ ಮಲಯಾಳೀ ದನಿಯಲ್ಲಿ ಕೂಗಿದ.
‘’ಚಾಂದಗುಡೀ ಚಾರೂ…. ಚಾಯೇಬ್ರ ಗಾಡೀ ಬಂತು. ಚಾಯೇಬ್ರು ಬಂತು’’
ಈಗ ಎಲ್ಲ ಗಡಿಬಿಡಿಯಾದರು. ಚಾಂದಗುಡೆಯವರು ಹೊರಗೆ ಬಾಗಿಲ ಕಡೆಗೆ ಹಣಿಕಿಕ್ಕಿ, ನದಿಯ ಎಡಭಾಗದ ಗುಡ್ಡದ ಇಳಿಜಾರಿನ ವಾರೆಯಲ್ಲಿ ಮುಚ್ಚಿಕೊಂಡಿದ್ದ ಹಸಿರು ಕುಮರಿಯತ್ತ ನೋಡಿದರು. ಅದು ಸೂಪಾದಿಂದ ಬರುವ ಕಾಡು ರಸ್ತೆ. ಹಿಂದೆ ಯಾವಾಗಲೋ ಫಾರೆಸ್ಟಿನವರು ಮಾಡಿದ್ದು. ಅಲ್ಲಿ ಬಿಳಿಯ ಅಂಬಾಸಿಡರ್ ಕಾರೊಂದು ಮೆಲ್ಲಗೆ ತೆವಳುತ್ತ, ಗುಡ್ಡ ಇಳಿದು ಡ್ಯಾಮ ಸೈಟಿನತ್ತ ಬರುವುದು ಕಂಡಿತು.
‘’ಬಂದ್ರಾಪಾ… ಬಂದ್ರು. ಈ ಕೇಟೀ ಮನಿಶಾ ಇನ್ನೂ ಬರಲಿಲ್ಲ ನೋಡ್’’
ಎಂದು ಪೇಚಾಡಿದರು. ಅಷ್ಟರಲ್ಲಿ ಹರಕು ಬನಿಯನ್ನು ತೊಟ್ಟಿದ್ದ ಮತ್ತು ಕಂದಿದ ಕಚ್ಚೆ ಧೋತರ ಉಟ್ಟಿದ್ದ ಕೂಲಿಯವನೊಬ್ಬ, ಕೈಯಲ್ಲಿ ಫ್ಲಾಸ್ಕ ಹಿಡಿದು ಓಡುತ್ತ ಬಂದ. ಕೂಡಲೇ ಅದುವರೆಗೆ ಅಲ್ಲಿಯೇ ಇದ್ದು ಕೆಲಸ ಮಾಡುತ್ತಿದ್ದ ಕೂಲಿಯವರಿಗೆಲ್ಲ – ‘ನೀವು ಹೋಗ್ರಿನ್ನ. ಸಾಹೇಬ ಮಂದಿ ಬಂದ್ರು’ ಎಂದು ಚಾಂದಗುಡೆ ಎಲ್ಲರನ್ನೂ ದೂರ ಅಟ್ಟಿದರು. ಅವರೆಲ್ಲ ಮೇಜಿನ ಮೇಲಿಟ್ಟಿದ್ದ ಬಿಸ್ಕೀಟು ಪಾಕೀಟುಗಳನ್ನು ಆಸೆಯಿಂದ ನೋಡುತ್ತ ನದಿಯ ಕಡೆ ಇಳಿದು ಹೋದರು.
ಫೋಟೋ ಕೃಪೆ : AAPG
ಹಾಫ್ ಪ್ಯಾಂಟ್ ಹಾಕಿದ್ದ ದೊಡ್ಡ ಹುದ್ದೆಯ ಸಾಹೇಬರು ಗುರ್ ಅನ್ನುತ್ತಿದ್ದ ಕಾರು ಮೆಲ್ಲಗೆ ಬಂದು ಫೀಲ್ಡ ಆಫೀಸಿನ ಮುಂದೆ ನಿಂತಿತು. ಅದರಿಂದ ಮೊದಲು ಇಳಿದವರು ನಮ್ಮ ಸೆಕ್ಶನ್ ಆಫೀಸರ ಶ್ರೀ ವಿ.ವಾಯ್.ನಾಯಕ ಅವರು. ಆ ನಂತರ ಮೂರು ಜನ ಇಳಿದರು. ಅದರಲ್ಲಿ ಒಬ್ಬರು ಚಾಂದಗುಡೆಯವರನ್ನು ನೋಡಿ ಗುರುತಿಸಿ – ಏನ್ರೀ… ಚಾಂದಗುಡೆ. ಹೆಂಗದೀರೀ? ಎಂದು ಮಾತಾಡಿಸಿದಾಗ ಅವರು ಉಬ್ಬಿ ಬಲೂನಾದರು.
‘’ಇವ್ರು ವಿ.ಎಸ್ ಉಪಾಧ್ಯಾಯ ಸಾಹೇಬ್ರು. ನಮ್ಮ ಡಿಪಾರ್ಟಮೆಂಟಿನ ಜಿಯೋಲಾಜಿ ಸಾಹೇಬ್ರು. ಕಲ್ಲು ಮಣ್ಣು ನೋಡಿದರ ಸಾಕು. ಅದರ ಇತಿಹಾಸನ ಹೇಳಿಬಿಡ್ತಾರು ಹ್ಹಿಹ್ಹಿ…’’. ಎಂದು ಚಾಂದಗುಡೆ ನನ್ನ ಕಿವಿಯಲ್ಲಿ ಉಸುರಿದರು. ನಾನು ಅವರತ್ತ ನೋಡಿ ‘ನಮಸ್ಕಾರ ಸರ್’ ಎಂದು ಕೈಮುಗಿದೆ. ಅವರು ಓರೆಗಣ್ಣಲ್ಲಿ ನೋಡಿ ಮಾತಾಡದೆ ಅತ್ತ ಹೋದರು. ನಂತರ ಇನ್ನಿಬ್ಬರು ಇಳಿದರು. ಮೊದಲು ಇಳಿದವರು ಕನ್ನಡದವರಲ್ಲ ಎಂದು ಅವರನ್ನು ನೋಡುತ್ತಲೇ ಅಂದುಕೊಂಡೆ. ಚಾಂದಗುಡೆ ಅವರಿಗೂ ನಡುಬಾಗಿಸಿ ನಮಸ್ಕಾರ ಹೇಳಿದರು. ನಾನೂ ಹೇಳಿದೆ. ಆನಂತರ ಇಳಿದವರು ಸಣಕಲು ವ್ಯಕ್ತಿ. ಅವರು ಹಾಕಿದ ಡ್ರೆಸ್ಸು ನನ್ನ ಗಮನ ಸೆಳೆಯಿತು. ಹಾಫ್ ಪ್ಯಾಂಟ್ ಹಾಕಿ ಸೊಂಟಕ್ಕೆ ಅಗಲದ ಬೆಲ್ಟ ಕಟ್ಟಿಕೊಂಡಿದ್ದರು. ಆ ಬೆಲ್ಟಿಗೆ ಒಂದು ಸಣ್ಣ ಸುತ್ತಿಗೆ, ದಿಕ್ಸೂಚಿ ಪೆಟ್ಟಿಗೆಯನ್ನು ತಗುಲು ಹಾಕಿಕೊಂಡಿದ್ದರು. ತಲೆಗೆ ಹ್ಯಾಟ್ ಬೇರೆ. ತೆಳುವಾದ ಕನ್ನಡಕ. ಮೂಗಿನ ಮೇಲಿತ್ತು. ಅವರೆಲ್ಲ ಕೆಳಗಿಳಿಯುತ್ತಿದ್ದಂತೆ ನಮ್ಮ ಬಾಸ್ ನಾಯಕ ಸಾಹೇಬರು ನನ್ನನ್ನು ಹತ್ತಿರ ಕರೆದು ಅವರಿಗೆ ತೋರಿಸುತ್ತ [ಕೆಳಗಿನ ಸಿಬ್ಬಂದಿಯನ್ನು ಸಾಹೇಬರುಗಳು ಬೇರೆಯವರಿಗೆ ಪರಿಚಯ ಮಾಡಿಕೊಡುವ ಸಂಪ್ರದಾಯ ನಮ್ಮಲ್ಲಿ ಇರುವುದಿಲ್ಲ]
‘’ಇವ್ರು ಶೇಖರ್ ಅಂತ. ನಿಮಗೆ ಅಸಿಸ್ಟಂಟ್ ಆಗಿ ಕೊಡ್ತಾ ಇದೀವಿ. ಇವತ್ತಿನಿಂದ ಇವ್ರು ನಿಮ್ಮ ಜೊತೆ ಇರ್ತಾರೆ’’ ಅಂದರು. ಅವರಲ್ಲಿ ಒಬ್ಬರು ದೂರದಿಂದಲೇ ನನ್ನನ್ನು ನೋಡಿ ಸುಮ್ಮನಾದರು. ಆದರೆ ಹ್ಯಾಟು ಹಾಕಿದವರು ಮಾತ್ರ ಮುಂದೆ ಬಂದು ನನ್ನ ಕೈ ಕುಲುಕಿ ‘ಹಾಯ್ ಶೇಖರ್’ ಅಂದರು. ನನಗೆ ಅಷ್ಟೇ ಖುಶಿಯಾಯಿತು. ಉಪಾಧ್ಯಾಯ ಸಾಹೇಬರು ಕಂಪನಿ ನಾಟಕದ ವಿಲನ್ ನಂತೆ ನನ್ನತ್ತ ನೋಡಿದರು.
ಫೋಟೋ ಕೃಪೆ : IndiaMART
ನೀವೆಲ್ಲಿಂದ ಬಂದ್ರಿ? ಈ ನೀರಿನ ಕ್ಯಾನು ಹಿಡ್ಕೊಳ್ಳಿ. ಆದ್ರೆ ಕುಡೀಬೇಡಿ
‘’ಏನ್ರೀ.. ಡ್ಯಾಮ ಸೈಟಿನಲ್ಲಿ ನಿಮ್ಮನ್ನ ಇವತ್ತು ನೋಡ್ತಾ ಇದೀನಿ. ನೀವೆಲ್ಲಿಂದ ಬಂದ್ರೀ?’’
ಎಂದು ಉಪಾಧ್ಯಾಯ ಸಾಹೇಬರು ನೇರವಾಗಿ ಕೇಳಿದರು. ಅವರ ಮಾತಿನಲ್ಲಿ ವ್ಯಂಗ್ಯವೂ ಇತ್ತು. ನಾನು ಮಾತಾಡುವ ಮುಂಚೆಯೇ ನಾಯಕ ಸಾಹೇಬರೇ ಹೇಳಿದರು.
‘’ನಮ್ಮ ಸಬ್ ಡಿವಿಜನ್ನಿನಲ್ಲಿದಾರೆ. Daily wages ಮೇಲೆ. F.R.L ಸರ್ವೇಗೆ ಕಳಿಸಿದ್ವಿ. ಈಗ ಇಲ್ಲಿಗೆ ಕರೆಸಿಕೊಂಡಿದೀವಿ’’
ಅಷ್ಟು ಹೇಳಿದ್ದೇ ತಡ. ದಿನಗೂಲಿ ಅಂದದ್ದೇ ತಡ. ಉಪಾಧ್ಯಾಯ ಸಾಹೇಬರು ತಮ್ಮ ಹೆಗಲಿನಲ್ಲಿದ್ದ ನೀರಿನ ಕ್ಯಾನನ್ನು ತಗೆದು ನನ್ನ ಕೈಗೆ ಕೊಡುತ್ತ ‘’ಇದನ್ನ ಹಿಡ್ಕೊಂಡಿರಿ. ಕುಡಿಯೋ ನೀರು. ನೀವು ಕುಡಿದೀರಿ ಮತ್ತೆ’’ ಅಂದಾಗ ನನಗೆ ತುಸು ಮುಜುಗುರವಾಯಿತು ‘’ಅವ್ರು ಹಂಗಽಽ ತಗೋರಿ. ಸಾಹೇಬಕಿ ತೋರಿಸ್ತಾರ’’ ಎಂದು ಚಾಂದಗುಡೆ ಮೆಲ್ಲಗೆ ಕಿವಿಯಲ್ಲಿ ಹೇಳಿದರು. ನಾನು ಅವರು ಕೊಟ್ಟ ಕ್ಯಾನನ್ನು ಹೆಗಲಿಗೇರಿಸಿಕೊಂಡು ನಿಂತೆ. ಅಲ್ಲೇ ಪಕ್ಕದಲ್ಲಿದ್ದ ಶ್ರೀಧರ್ ನನ್ನನ್ನು ಈಚೆ ಕರೆದು ಮೆಲ್ಲಗೆ ಹೇಳಿದರು.
‘’ಈ ಉಪಾಧ್ಯಾಯ ಸಾಹೇಬ ವಿಚಿತ್ರ ಆಸಾಮಿ. ಒಮ್ಮೆ ನೋಡಿ ನಗ್ತಾರೆ. ಇನ್ನೊಮ್ಮೆ ಗುರ್ ಅಂತಾರೆ. ಹೋಗ್ಲಿ ಬಿಡಿ. ಒಂದು ತಿಂಗ್ಳು ಅಷ್ಟೇ ಹೈದರಾಬಾದ್ ಟಿಮು ಇಲ್ಲಿರೂದು. ಅಲ್ಲೀ ತನಕ ಸುಮ್ಕೆ ಇದ್ದು ಬಿಡಿ’’ ಅಂದರು. ಶ್ರೀಧರ್ ಹೇಳಿದ ಮಾತಿನಲ್ಲಿ ನಾನು ಒಂದಷ್ಟು ತಿಳಿದುಕೊಳ್ಳುವುದೂ ಇತ್ತು.
ನಾನು ಭೂಗರ್ಭ ಶಾತ್ರಜ್ಞ. ಹೈದರಾಬಾದಿನಿಂದ ಬಂದಿದ್ದೇನೆ ‘’ಆಯ್ ಯಾಮ್ ಶೇಷಗಿರಿ. ಫೀಲ್ಡ ಮ್ಯಾನೇಜರ್ ಇನ್ ಜಿಯಾಲಾಜಿ ಡಿಪಾರ್ಟಮೆಂಟ್. ಅಂಡ್ ಧಿಸ್ ಈಸ್ ಮಂಗಾರಾಮ್. ಮಾಯ್ ಕೊಲೀಗ್. ಸೀನಿಯರ್ ಜಿಯಾಲಾಜಿಸ್ಟ ಇನ್ ಮಾಯ್ ಆಫೀಸ್. ಬೋತ್ ಆರ್ ವರ್ಕಿಂಗ್ ಇನ್ ಸರ್ವೇ ಆಫ್ ಇಂಡಿಯಾ ಅಟ್ ಹೈದ್ರಾಬಾದ್’’ ಹ್ಯಾಟ್ ಹಾಕಿದ್ದ ವ್ಯಕ್ತಿ ಸ್ವತಃ ತಮ್ಮ ಪರಿಚಯ ಮಾಡಿಕೊಂಡು ಬಿಟ್ಟರು. ಅಚ್ಚರಿಪಟ್ಟೆ. ಅಲ್ಲಿದ್ದ ನಾವು ಯಾರೂ ತಾಂತ್ರಿಕ ವ್ಯಕ್ತಿಗಳೂ ಅಲ್ಲ ಪರಿಣಿತರೂ ಅಲ್ಲ. ನಮ್ಮ ಮುಂದೆ ಅವರು ಪರಿಚಯ ಮಾಡಿಕೊಳ್ಳುವ ಅಗತ್ಯವಿರಲಿಲ್ಲ. ಅದು ನಮ್ಮ ನಾಯಕ ಸಾಹೇಬರಿಗೆ ಮತ್ತು ಉಪಾಧ್ಯಾಯ ಸಾಹೇಬರಿಗೆ ಮುಜುಗುರವನ್ನಂತೂ ತಂದಿತ್ತು. ಆದರೆ ದೊಡ್ಡ ಹುದ್ದೆಯಲ್ಲಿದ್ದರೂ ಶೇಷಗಿರಿಯವರ ಸರಳ ಮತ್ತು ಮರ್ಯಾದೆ ತರುವ ಮಾತುಗಳು ನನಗೆ, ಶ್ರೀಧರಿಗೆ, ಕಾಶಿನಾದನ್ಗೆ ಮತ್ತು ಚಾಂದಗುಡೆಯವರಿಗೆ ಹಿಡಿಸಿದವು. ನಾವು ನಾಲ್ವರೂ ಅವರಿಗೆ ಕೈ ಮುಗಿದೆವು. ಈಗ ಮಂಗಾರಾಮರೂ ತುಸು ನಕ್ಕರು.
ಸೂಪಾ ಬೆಟ್ಟಗಳ ಭೂ ಶಾಸ್ತ್ರದ ಅಗಾಧತೆ
ಅವರು ಹೆಚ್ಚು ಕಾಯದೆ ನದಿಯ ಎರಡೂ ಬದಿಯಲ್ಲಿದ್ದ ಎರಡೂ ಬೆಟ್ಟಗಳ ಭೂ ರಚನಾ ನಕಾಶೆಯನ್ನು ಕೈಗೆ ತಗೆದುಕೊಂಡು ಚರ್ಚಿಸತೊಡಗಿದರು. ಬೆಟ್ಟಗಳ ಭೂ ರಚನೆಯಲ್ಲಿ ಎಲ್ಲೆಲ್ಲಿ ಕಲ್ಲಿನ ಪದರುಗಳಿವೆ. ಆ ಕಲ್ಲು ಎಂಥದು? ಅದರ ಸಾಮರ್ಥ್ಯ ಹೇಗಿದೆ? ಎಲ್ಲೆಲ್ಲಿ ಮಣ್ಣಿನ ಪದರುಗಳಿವೆ. ಯಾವ ಥರದ ಮಣ್ಣು. ಎಲ್ಲಿ ಬೆಟ್ಟ ತೀರ ಮೃದುವಾಗಿದೆ. ಎಲ್ಲ ಗಟ್ಟಿಯಾಗಿದೆ. ಎಂದೆಲ್ಲ ಆ ನಕಾಶೆಯಲ್ಲಿ ಮೊದಲೇ ಗುರುತು ಮಾಡಿ ಇಟ್ಟಿದ್ದರು. ಶೇಷಗಿರಿಯವರು, ಮಂಗಾರಾಮ್ ಅವರು ಮತ್ತು ಉಪಾಧ್ಯಾಯ ಅವರು ಏನೇನೋ ಚರ್ಚಿಸಿದರು. ನಡುವೆ ಒಂದೆರಡು ಸಲ ಉಪಾಧ್ಯಾಯರು ನನ್ನ ಹೆಗಲಿನಲ್ಲಿದ್ದ ನೀರಿನ ಕ್ಯಾನು ತಗೆದುಕೊಂಡು ಕುಡಿದು ಮತ್ತೆ ನನ್ನ ಹೆಗಲಿಗೇ ನೇತು ಹಾಕಿದರು. ಅವರ ಮಾತಿನ ಪ್ರಕಾರ ಎರಡೂ ಬೆಟ್ಟಗಳಲ್ಲಿ ಕಲ್ಲಿನ (hard rock) ಪ್ರಮಾಣ ಕಡಿಮೆ. Saft rock ಹೆಚ್ಚಾಗಿದೆ. ಮತ್ತು ಭೂ ರಚನೆಯಲ್ಲಿ ಮಣ್ಣೂ ಇದೆ ಎಂಬ ಮಾತುಗಳು ಕೇಳಿ ಬಂದವು.
ಈಗ ಭವಿಷ್ಯದ ಇಡೀ ಆಣೆಕಟ್ಟು ನಿಲ್ಲಬಹುದಾದ ಜಾಗವನ್ನು ಇನ್ನೊಮ್ಮೆ ಪರಿಶೀಲಿಸಿ ಬೆಟ್ಟಗಳ ಕಡೆಗೆ ನೋಡಿದರು. ನಾಳೆಯಿಂದ ಅವರು ನದಿಯ ಎರಡೂ ದಂಡೆಗಳ ಬೆಟ್ಟಗಳ ಮೇಲೆ ಅಲೆದಾಡಿ ಅಲ್ಲಿರುವ ಕಲ್ಲು ಮಣ್ಣುಗಳನ್ನು ಪರೀಶೀಲಿಸಿ ನೋಡಬೇಕಾಗಿತ್ತು. ಮತ್ತು ನರಸಿಂಹಯ್ಯನವರ ಕಚೇರಿಯವರು ಸಂಗ್ರಹಿಸಿದ್ದ ಕಲ್ಲುಗಳ ಕೋರ್ಗಳನ್ನೂ ಗಮನಿಸಬೇಕಾಗಿತ್ತು. ನಂತರ ವರದಿಯನ್ನು ತಮ್ಮ ಕಚೇರಿ ಮೂಲಕ ಕೇಂದ್ರ ಸರಕಾರದ ಸಂಬಂಧಿತ ಇಲಾಖೆಗೆ ಕಳುಹಿಸಬೇಕಾಗಿತ್ತು. ಚಾಂದಗುಡೆಯವರು ಸ್ವತಃ ಎಲ್ಲರಿಗೂ ಬಿಸ್ಕೀಟು ಚಹ ಸರಬರಾಜು ಮಾಡಿದರು. ಬೆಂಗಳೂರಿನ ವಿನ್ಯಾಸ ಕಚೇರಿಯವರು ಸಿದ್ಧ ಮಾಡಿ ಕಳಿಸಿದ್ದ ಬೆಟ್ಟಗಳ ಭೂ ರಚನೆಯ ನೀಲಿ ನಕ್ಷೆಗಳನ್ನು ಅವರ ಮುಂದೆ ಹಿಡಿದು ನಾನು ನಿಂತೆ.
[ಮುಂದುವರೆಯುತ್ತದೆ – ಓದಿರಿ ಪ್ರತಿ ಶನಿವಾರ. ‘ಬೆಳಕು ತಂದವರ ಕತ್ತಲ ಕತೆ’ಯನ್ನು]
- ಹೂಲಿಶೇಖರ್
(ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)