ಫೋರ್ಡ್ ಕಾರ್ ತಯಾರಿಕಾ ಕಂಪನಿಯ ಹೆಸರನ್ನು ಯಾರು ಕೇಳಿಲ್ಲ… ರೈತನ ಮಗನಾದ ಹೆನ್ರಿ ಫೋರ್ಡ್ ತನ್ನ ಮಹತ್ವಕಾಂಕ್ಷೆಯ ಕಾರನ್ನು ತಯಾರಿಸಿ ಅದನ್ನು ಫೋರ್ಡ್ ಎಂಬ ಹೆಸರಿನಲ್ಲಿ ಮಾರಾಟ ಮಾಡುವ ಮೂಲಕ ಜಗತ್ತಿನ ಅತಿ ದೊಡ್ಡ ಕಾರು ತಯಾರಿಕಾ ಕಂಪನಿಯ ಒಡೆಯನಾಗಿ ಹತ್ತು ಹಲವು ಉದ್ಯಮಗಳಲ್ಲಿ ತನ್ನ ಛಾಪನ್ನು ಬಿಟ್ಟು ಹೋದವರು. ಅವರ ಸರಳ ಬದುಕು ಇನ್ನೊಬ್ಬರಿಗೆ ಮಾದರಿಯಾಗಿದೆ, ಲೇಖಕಿ ವೀಣಾ ಹೇಮಂತ್ ಗೌಡ ಪಾಟೀಲ ಅವರ ಈ ಲೇಖನವನ್ನು ಪೂರ್ತಿಯಾಗಿ ಓದಿ…
ಹಲವಾರು ಕೋಟಿಗಳ ಒಡೆಯರು ಜಗತ್ತಿನ ಅತ್ಯಂತ ಹೆಮ್ಮೆಯ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ಅವರು ತಮ್ಮ ದೃಢತೆ ಆತ್ಮ ವಿಶ್ವಾಸ ನಂಬಿಕೆಗೆ ಹೆಸರಾದವರು. ಆಲ್ಬರ್ಟ್ ಐನ್ಸ್ಟೀನ್ ರಂತಹ ವಿಜ್ಞಾನಿಗಳೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದವರು. ಪರಸ್ಪರರ ಕಷ್ಟ ಸುಖಗಳಿಗೆ ಹೆಗಲು ಕೊಟ್ಟವರು…. ಎಲ್ಲಕ್ಕೂ ಮಿಗಿಲಾಗಿ ಬದುಕಿನ ಸತ್ಯವನ್ನು ಅರಿತವರು.

ಫೋಟೋ ಕೃಪೆ : ಅಂತರ್ಜಾಲ
ಒಂದು ಬಾರಿ ತಮ್ಮ ಕಾರ್ಯ ನಿಮಿತ್ತ ಅವರು ಇಂಗ್ಲೆಂಡಿಗೆ ಆಗಮಿಸುತ್ತಿದ್ದರು. ಅವರನ್ನು ಸ್ವಾಗತಿಸಿದ ಇಂಗ್ಲೆಂಡಿನ ಅವರ ಸ್ನೇಹಿತರು ಅವರಿಗಾಗಿ ವಸತಿ ವ್ಯವಸ್ಥೆಯನ್ನು ಎಲ್ಲಿ ಮಾಡಬೇಕು ಎಂಬ ಗೋಜಲಿನಲ್ಲಿ ಇದ್ದಾಗ ಹೆನ್ರಿ ಫೋರ್ಡ್ ಲಂಡನ್ನಿನ ಅತ್ಯಂತ ಚಿಕ್ಕ ವಸತಿಗೃಹವೊಂದಕ್ಕೆ ಕರೆದೊಯ್ಯಲು ಹೇಳಿದರು. ಇದನ್ನು ಕೇಳಿ ಅಲ್ಲಿ ನೆರೆದಿದ್ದ ಜನ ಗಾಬರಿಯಾದರು. ಅದಾಗ ತಾನೇ ಇಂಗ್ಲೆಂಡಿಗೆ ಬಂದು ಲಂಡನ್ ನ ವಿಮಾನ ನಿಲ್ದಾಣದಲ್ಲಿ ಇಳಿದಿದ್ದ ಓರ್ವ ಬಿಲಿಯನೇರ್, ಉದ್ಯಮ ಸಾಮ್ರಾಜ್ಯವನ್ನು ಅಕ್ಷರಶಃ ಆಳುವ ವ್ಯಕ್ತಿಯಾಗಿದ್ದ ಆತ ಖುದ್ದು ತಾನೇ ನಡೆದುಕೊಂಡು ಇನ್ಫಾರ್ಮೇಶನ್ ಡೆಸ್ಕ್ ನ ಬಳಿ ಹೋಗಿ ಅತ್ಯಂತ ಕಡಿಮೆ ದರದಲ್ಲಿ ದೊರೆಯುವ ವಸತಿಗೃಹದ ಕುರಿತು ಕೇಳಿದ್ದು ಎಲ್ಲರಿಗೂ ಅಚ್ಚರಿಯ ವಿಷಯವಾಗಿತ್ತು. ಹಾಗೆ ತನ್ನನ್ನು ಕೇಳಲು ಬಂದ ವ್ಯಕ್ತಿಯ ಫೋಟೋಗಳನ್ನು ಪತ್ರಿಕೆಗಳಲ್ಲಿ ನೋಡಿ ಅರಿತಿದ್ದ ಅಲ್ಲಿ ಕುಳಿತಿದ್ದ ಏರ್ಪೋರ್ಟ್ ಸಿಬ್ಬಂದಿ ಅತ್ಯಂತ ಹಳೆಯದಾದ ಕೋಟ್, ಪುಟ್ಟ ಬ್ಯಾಗ್ ಹೊಂದಿದ್ದ ಮಧ್ಯಮ ವರ್ಗದ ವ್ಯಕ್ತಿಯಂತೆ ತೋರುವ ಫೋರ್ಡ ರನ್ನು ನೋಡಿ ಚಿಕಿತನಾಗಿದ್ದ.
ತಾವು ಹೆನ್ರಿ ಫೋರ್ಡ್ ಅಲ್ಲವೇ ? ಎಂದು ಕೇಳಿದಾಗ ಹೌದು, ನಾನೇ ಹೆನ್ರಿ ಫೋರ್ಡ್ ಎಂದು ಅವರು ತಣ್ಣನೆಯ ದನಿಯಲ್ಲಿ ಉತ್ತರಿಸಿದರು.
ಇನ್ನೂ ಗಲಿಬಿಲಿಯಿಂದ ಹೊರಬರದ ಆ ಕ್ಲರ್ಕ್ ಸರ್ ನಾನು ತಮ್ಮ ಮಗನನ್ನು ಚೆನ್ನಾಗಿ ಬಲ್ಲೆ. ಅವರು ಲಂಡನ್ ಗೆ ಹಲವಾರು ಬಾರಿ ಬಂದಿದ್ದಾರೆ. ಹಾಗೆ ಬಂದಾಗಲೆಲ್ಲ ಅವರು ಒಳ್ಳೆಯ ಲಾಡ್ಜ್ ಗಳಲ್ಲಿ ಉಳಿದುಕೊಳ್ಳುತ್ತಾರೆ, ಅತ್ಯುತ್ತಮ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ ತಾವು ಅತ್ಯಂತ ಕಡಿಮೆ ದರದ ಕೋಣೆಯನ್ನು ಕೇಳುತ್ತಿದ್ದೀರಿ ಮತ್ತು ನಿಮಗಿಂತ ತುಸು ಹೆಚ್ಚೇ ವಯಸ್ಸಾದ ಕೋಟನ್ನು ಧರಿಸಿದ್ದೀರಿ. ಏಕೆ ಎಂದು ಕೇಳಬಹುದೇ ? ಎಂದು ತುಸು ಸಂಕೋಚದಿಂದಲೇ ಕೇಳಿದ.
ತುಸುವೆ ಬಾಯಿಯನ್ನು ಅಗಲಿಸಿ ನಕ್ಕ ಫೋರ್ಡ್ ಅವರ ನಗುವಿನಲ್ಲಿ ಬಹಳಷ್ಟು ವಿಷಯಗಳು ಹುದುಗಿದ್ದವು. ಅವರ ಉತ್ತರ ಹೀಗಿತ್ತು. “ಕಾರಣ ಬಹಳ ಬಹಳ ಸರಳವಾಗಿದೆ, ನನಗೆ ಮಲಗಲು ಬಿಟ್ಟರೆ ಬೇರೆ ಯಾವುದೇ ಕೆಲಸಕ್ಕೂ ಕೋಣೆಯ ಅವಶ್ಯಕತೆ ಇಲ್ಲ. ನಾನು ಎಲ್ಲೇ ಮಲಗಿದರೂ ನಾನು ನಾನಾಗಿಯೇ ಇರುವೆ. ಇನ್ನು ನೀನು ಕೇಳಿದ ಕೋಟಿನ ವಿಷಯ … ನಾನು ಧರಿಸಿರುವ ಕೋಟ್ ನನ್ನ ತಂದೆಯದು. ನನ್ನ ತಂದೆಯ ಪ್ರೀತಿಯ ಈ ಕೋಟ್ ನನಗೂ ಅಚ್ಚು ಮೆಚ್ಚು. ಇದು ನನ್ನನ್ನು ಬೆಚ್ಚಗಿಡುತ್ತದೆ ಅಷ್ಟು ಸಾಕಲ್ಲವೇ ನನಗೆ! ಎಂದು ಮಾರ್ಮಿಕವಾಗಿ ಹೇಳಿದರು.
ಮತ್ತೆ ಒಂದೆರಡು ಕ್ಷಣಗಳ ನಂತರ “ಇನ್ನು ನನ್ನ ಮಗ… ಆತ ಇನ್ನೂ ಕಲಿಯುತ್ತಿದ್ದಾನೆ. ಆತನಿಗೆ ಇನ್ನೂ ನಾಲ್ಕು ಜನ ಏನೆಂದುಕೊಳ್ಳುತ್ತಾರೆ ಎಂಬ ಆತಂಕ ಇದೆ. ಆದರೆ ನಾನು ಬೇರೆಯವರು ಏನೆಂದುಕೊಳ್ಳುತ್ತಾರೆ ಎಂಬುದರ ಕುರಿತು ಚಿಂತಿಸುವುದನ್ನು ಬಿಟ್ಟು ಬಿಟ್ಟಿದ್ದೇನೆ. ನಾನು ಖರ್ಚು ಮಾಡುವ ಮೂಲಕ ಶ್ರೀಮಂತನಾಗಿಲ್ಲ. ನನಗೆ ಸರಿ ಮತ್ತು ತಪ್ಪುಗಳನ್ನು ಕುರಿತು ಒಳ್ಳೆಯ ಅವಗಾಹನೆ ಇದೆ. ಅವಶ್ಯಕತೆ ಮತ್ತು ಅನವಶ್ಯಕ ಖರ್ಚುಗಳ ಬಗ್ಗೆ ತಿಳುವಳಿಕೆ ಇದೆ ಎಂದು ನಿಧಾನವಾಗಿ ಹೇಳಿದ.
ಅತಿ ದೊಡ್ಡ ವಿನಮ್ರತೆಯ ಪಾಠವನ್ನು ನಾವು ಈ ಘಟನೆಯಿಂದ ಅರಿಯಬಹುದು. ನಿಜವಾದ ಸಂಪತ್ತು ನಾವು ತೋರಿಸುವುದರಲ್ಲಿ ಇರುವುದಿಲ್ಲ ಬದಲಾಗಿ ನಾವು ಅರಿತಿರುವುದರಲ್ಲಿ ಇರುತ್ತದೆ. ನಿಜ ಅಲ್ಲವೇ ಸ್ನೇಹಿತರೆ? ನಾವು ಧರಿಸಿರುವ ಬಟ್ಟೆ ಬರೆ, ಒಡವೆ ನಾವು ಓಡಾಡುವ ಕಾರು ನಾವು ಬಳಸುವ ದುಬಾರಿ ವಸ್ತುಗಳು ನಮ್ಮ ಉನ್ನತಿಕೆಯ ಮಟ್ಟವನ್ನು ಹೇಳುವುದಿಲ್ಲ ಬದಲಾಗಿ ಖುದ್ದು ನಮ್ಮ ಬದುಕಿನ ರೀತಿ ನೀತಿಗಳು, ನಾವು ಬದುಕಿನಲ್ಲಿ ಅಳವಡಿಸಿಕೊಂಡಿರುವ ಮೌಲ್ಯಗಳು ನಮ್ಮ ಉನ್ನತಿಕೆಯನ್ನು ತೋರುತ್ತವೆ.
ಬಹುತೇಕ ಜನ ತಮ್ಮ ಅವಶ್ಯಕತೆಗಳನ್ನು ಮೀರಿ ಖರೀದಿಸುವ, ದುಂದು ವೆಚ್ಚ ಮಾಡುವರು. ಮನೆ ಕಟ್ಟುವರು ಮದುವೆ ಮಾಡುವರು… ಸಾಲ ಮಾಡಿಯಾದರೂ ಮನೆ ಕಟ್ಟುವ ಮದುವೆ ಮಾಡುವವರು ಮುಂದೆ ಎಂದಾದರೊಂದು ದಿನ ಪಶ್ಚಾತಾಪ ಪಡುವುದು ಖಂಡಿತ.
ಇತ್ತೀಚೆಗೆ ನಾನು ಒಂದೆರಡು ಮದುವೆಗಳಲ್ಲಿ ಭಾಗಿಯಾಗಿದ್ದೆ. ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುವ ರೀತಿಯಲ್ಲಿ ಆ ವಿವಾಹಗಳು ಆಯೋಜಿಸಲ್ಪಟ್ಟಿದ್ದವು. ರಂಗುರಂಗಿನ ಅಲಂಕಾರಗಳು ಕಿವಿಗಡಚಿಕ್ಕುವ ಆರ್ಕೆಸ್ಟ್ರಾ, ಮೇಕಪ್ ಕಲಾವಿದರು ನೃತ್ಯ ಹಾಡು ಕುಣಿತ ಎಲ್ಲವೂ ಅದ್ಭುತವಾಗಿ ಸಂಯೋಜಿಸಲ್ಪಟ್ಟ ವಿವಾಹದಲ್ಲಿ ಊಟವೇ ಮದುವೆಯ ಮುಖ್ಯ ಆಕರ್ಷಣೆಯಾಗಿತ್ತು.

ಫೋಟೋ ಕೃಪೆ : ಅಂತರ್ಜಾಲ
ಮುಂಜಾನೆಯ ಉಪಹಾರಕ್ಕೆ 70 ಕ್ಕೂ ಹೆಚ್ಚು ಸಿಹಿ ಮತ್ತು ಖಾರದ ತಿಂಡಿಗಳನ್ನು ಜೋಡಿಸಲ್ಪಟ್ಟಿದ್ದು ಮಧ್ಯಾಹ್ನ ಮತ್ತು ರಾತ್ರಿ ಅದರ ದುಪ್ಪಟ್ಟು ಅಡುಗೆಗಳನ್ನು ಮಾಡಿಸಲಾಗಿತ್ತು. ದೇಶದ ವಿವಿಧ ಭಾಗಗಳಿಂದ ಸಿಹಿ ಮತ್ತು ಖಾರದ ತಿನಿಸುಗಳನ್ನು ತರಿಸಲಾಗಿತ್ತು. ವೈವಿಧ್ಯಮಯ ಊಟ ಹೊತ್ತು ಹೊತ್ತಿಗೆ ಚಹ ಪಾನೀಯಗಳ ಸರಬರಾಜು ಎಲ್ಲವೂ ಸರಿಯೇ ! ಕೇವಲ ಎರಡು ದಿನಗಳ ಆ ಮದುವೆಯ ಖರ್ಚು ಕೋಟಿಗಳನ್ನು ಮಿಕ್ಕಿದ್ದು.
ಕೆಲ ವಸ್ತುಗಳು ಕೊನೆಯವರೆಗೂ ಉಳಿಯುವಂತಹವಾದರೆ ಮತ್ತೆ ಕೆಲವು ವಸ್ತುಗಳು ಕೆಲವೇ ಗಂಟೆಗಳವರೆಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವ ಇಲ್ಲದೆ ಹೋದರೆ ಕೆಟ್ಟು ಹೋಗುವ ಆಹಾರ ಪದಾರ್ಥಗಳು. ಇಷ್ಟೊಂದು ಖರ್ಚು ಮಾಡುವ ಅಗತ್ಯ ಇದೆಯೇ? ಎಂದು ಕೇಳಿದರೆ ಬಂದ ಉತ್ತರ ‘ನಮ್ಮ ಜನರಲ್ಲಿ ಈ ರೀತಿ ಮದುವೆ ಮಾಡಿಕೊಡದಿದ್ದರೆ ನಡೆಯುವುದಿಲ್ಲ ಎಂದು. ಇದಿಷ್ಟು ಮಾಡಿರುವುದು ಸಾಲದು ಎಂದು ಇನ್ನೂ ಅನೇಕ ವಿಷಯಗಳಿಗೆ ಮುನಿಸಿಕೊಳ್ಳುತ್ತಾರೆ’ ಎಂದು ಕೂಡ ಹೇಳಿದರು.
“‘ಇರಬಹುದು ಆದರೆ ಯಾರಾದರೂ ಈ ರೀತಿಯ ದುಂದು ವೆಚ್ಚಕ್ಕೆ ಕಡಿವಾಣವನ್ನು ಹಾಕಬಹುದಲ್ಲವೇ ?” ಎಂದು ಕೇಳಿದಾಗ ಇಲ್ಲ! ಸಾಧ್ಯವಾಗುವುದಿಲ್ಲ ಎಂದು ಉತ್ತರಿಸಿದರು.
“ಹಾಗಾದರೆ ನಿಮಗೆ ಈ ರೀತಿ ವ್ಯವಸ್ಥೆ ಸರಿ ಎನಿಸುತ್ತದೆಯೇ? ಎಂದು ಮರು ಪ್ರಶ್ನಿಸಿದಾಗ “ಖಂಡಿತವಾಗಿಯೂ ಇಲ್ಲ ಆದರೆ ಅನಿವಾರ್ಯತೆ ನಮ್ಮನ್ನು ಆವರಿಸಿಕೊಂಡಿದೆ. ಇಂದಿನ ಯುವ ಜನಾಂಗವು ಇದನ್ನು ಅನುಮೋದಿಸುತ್ತಿದ್ದು ಅದ್ದೂರಿ ವಿವಾಹವನ್ನು ಮಾಡಿಕೊಡುವ ಮತ್ತು ದೊಡ್ಡ ದೊಡ್ಡ ಶಹರಗಳಲ್ಲಿ ಜೀವನ ನಡೆಸಲು ಅವರು ಇಚ್ಚಿಸುತ್ತಾರೆಯೇ ಹೊರತು
ಸಣ್ಣ ಪುಟ್ಟ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಅಲ್ಲ”. ಮತ್ತೆ ಮುಂದುವರೆದು ಚಿಕ್ಕ ಪುಟ್ಟ ಊರುಗಳಲ್ಲಿ ವಾಸಿಸಲು ಖುದ್ದು ಹೆಣ್ಣು ಮಕ್ಕಳು ಇಚ್ಚಿಸುತ್ತಿಲ್ಲ … ಹೆಣ್ಣು ಮಕ್ಕಳ ಪಾಲಕರು ತಮ್ಮ ಮಕ್ಕಳ ಇಚ್ಛೆಗೆ ಸೈ ಎನ್ನುತ್ತಿದ್ದಾರೆ… ನಮ್ಮ ಮಕ್ಕಳ ಅದರಲ್ಲೂ ಗಂಡು ಮಕ್ಕಳ ಮದುವೆಯಾಗಬೇಕು ಎಂದರೆ ನಾವು ಹಲವಾರು ವರ್ಷಗಳಿಂದ ಬೇರು ಬಿಟ್ಟಿರುವ ಊರುಗಳಿಂದ ನೆಲೆ ಕಿತ್ತಿ ದೊಡ್ಡ ದೊಡ್ಡ ಶಹರಗಳಲ್ಲಿ ಮನೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಮ್ಮದಾಗಿದೆ” ಎಂದು ವಿಷಾದವನ್ನು ವ್ಯಕ್ತಪಡಿಸಿದರು.
ಒಂದು ಇಡೀ ಜೀವಮಾನದ ದುಡಿಮೆಯನ್ನು ಕೆಲವೇ ದಿನಗಳ ಸಂತಸಕ್ಕಾಗಿ ಖರ್ಚು ಮಾಡುವುದು ಯಾರಿಗೂ ಸಮ್ಮತವಲ್ಲ. ಇದ್ದವರು ಹೇಗೋ ಮಾಡಿಬಿಡಬಲ್ಲರು ಇಲ್ಲದವರು ಸಾಲ ಮಾಡಿ ಮದುವೆ ಮಾಡುವ ಪರಿಸ್ಥಿತಿ. ಮುಂದೆ ಹೀಗೆ ಮಾಡಿದ ಸಾಲವನ್ನು ತೀರಿಸುವಷ್ಟರಲ್ಲಿ ಮತ್ತೊಂದು ಮದುವೆ ಹೀಗೆ ಸಾಲದ ಸುಳಿಯಲ್ಲಿ ಬದುಕನ್ನು ಸಾಗಿಸಬೇಕಾಗಬಹುದು….. ಯಾರಾದರೂ ಈ ಸರಮಾಲೆಯನ್ನು ತಪ್ಪಿಸಲು ಸಾಧ್ಯವೇ ? ಎಂದು ಯೋಚಿಸಿದಾಗ ಹೊಳೆದದ್ದು ಮತ್ತೆ ಯುವ ಜನಾಂಗವೇ.
ವಿವಾಹ ಹೇಗೆಯೇ ಆಗಲಿ… ಬದುಕು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಇರಬೇಕು. ಅದು ಮುಖ್ಯ. ಒಂದು ಹಂತದವರೆಗಿನ ಅದ್ದೂರಿತನ ತಪ್ಪೇನಲ್ಲ ಆದರೆ ಅತಿಯಾದರೆ ಅಮೃತವು ವಿಷ ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಂಡು ಹಿತಮಿತವಾದ ಆಹಾರ ಸೇವನೆ, ಮಿತವಾದ ಖರ್ಚು, ಒಳ್ಳೆಯ ಆರೋಗ್ಯ, ಉತ್ತಮ ಸಾಮಾಜಿಕ ವ್ಯವಹಾರಗಳನ್ನು ನಮ್ಮದಾಗಿಸಿಕೊಂಡು ಬದುಕಿದರೆ ಸಾಕಲ್ಲವೇ?
- ವೀಣಾ ಹೇಮಂತ್ ಗೌಡ ಪಾಟೀಲ – ಮುಂಡರಗಿ, ಗದಗ
