“ಆತ್ಮಾನುಸಂಧಾನ” ಕವನ ಸಂಕಲನ ಪರಿಚಯ

ಎ ಎನ್ ರಮೇಶ್ ಕೈಗಾ ಅವರ “ಆತ್ಮಾನುಸಂಧಾನ” ಕವನ ಸಂಕಲನದ ಕುರಿತು ಗಣಪತಿ ಹೆಗಡೆ ಅವರು ತಮ್ಮ ಭಾವಪೂರ್ಣ ಲೇಖನಿಯಿಂದ ಅನನ್ಯವಾಗಿ ಅನಾವರಣಗೊಳಿಸಿದ್ದಾರೆ. ತಪ್ಪದೆ ಮುಂದೆ ಓದಿ…

ಮಾರ್ಚ್ 31, 2024 ರಂದು ಧಾರವಾಡದ ರಂಗಾಯಣದಲ್ಲಿ ನಮ್ಮ ಸಾಹಿತ್ಯದ ಬಳಗ “ನೆನಪಿನ ನಾವಿಕ” ದಲ್ಲಿ ಎ ಎನ್ ರಮೇಶ್ ಕೈಗಾ ಅವರ “ಆತ್ಮಾನುಸಂಧಾನ” ಕವನ ಸಂಕಲನ ಬಿಡುಗಡೆಗೊಂಡಿತು.

ಒಟ್ಟೂ 96 ಕವಿತೆಗಳಿರುವ ಈ ಕವನ ಸಂಕಲನ ಅತ್ಯದ್ಭುತವಾದ ಕವಿತೆಗಳನ್ನು ಒಳಗೊಂಡು ಆತ್ಮಕ್ಕೆ ಸ್ಪರ್ಶ ನೀಡುವಷ್ಟು ಶಕ್ತಿಶಾಲಿಯಾಗಿವೆ. ಮನುಷ್ಯ, ಅವನ ಹುಟ್ಟು, ಸಾವು ಎಲ್ಲದರ ನಡುವೆ ನೋವು, ನಲಿವು, ವಿಷಾದ, ವಿಷಣ್ಣತೆಯ ಸಂಗ್ರಾಮ…..ಸಹಜವೇ. ಮಾಡಿದ ಪಾಪಗಳನ್ನು, ಪುಣ್ಯಗಳನ್ನು ಅವಲೋಕಿಸಿ ಸತ್ತ ನಂತರ ಯಮಲೋಕದಲ್ಲಿ ಎಲ್ಲದರ ಫಲಿತಾಂಶ ಹೊರಬರುತ್ತದೆ ಎಂಬ ನಮ್ಮ ಭ್ರಮಾಲೋಕದ ಕೆಲವು ಅಂಶಗಳನ್ನು ಅಲ್ಲಗಳೆಯುವ ಸತ್ಯಗಳು ಈ ಕವಿತೆಗಳ ಎದೆಯಲ್ಲಿ ಅಡಗಿವೆ.

‘ಅಭಿಲಾಷೆ’ ಎಂಬ ಕವಿತೆಯ ಕೆಲವು ಸಾಲುಗಳಲ್ಲಿ ಬದುಕು ಹೇಗಿರಬೇಕು ಎಂಬುದರ ಪರಿಚಯದ ಅನಾವರಣವಿದೆ.

“ಹೃದಯವನೊಮ್ಮೆ ಹೊರತೆಗೆದು
ಅಂಟಿದ್ದ ಕಸ ಕಲ್ಮಶಗಳ ತೊಳೆದು
ಸ್ವಚ್ಛಗೊಳಿಸಿ ಮರಳಿಯಿಡುವಂತಿದ್ದರೆ
ಎಷ್ಟು ಶುಭ್ರವಿರುತ್ತಿತ್ತು ಎದೆಯಂಗಳ!”

ಅದೆಷ್ಟು ಆಶಯದ ಭಾವದ ತೀವ್ರತೆಯಿದೆ ಇಲ್ಲಿ! ಹೃದಯದಲ್ಲಿ ತುಂಬಿರುವ ಮೌಢ್ಯದ ಕನಸುಗಳ ಕತ್ತಲೆಯನ್ನು ಹೊಡೆದೋಡಿಸುವ ಕವಿತಾಶಯ ಹಾಗೂ ಕವಿಯಾಶಯ ಅಗಾಧವಾಗಿದೆ ಎನ್ನಬಹುದು. ಜಂಜಡದ ಜೀವನವಿದು.

ನಾವು ಒಳ್ಳೆಯ ನೋಟ ಬೀರಿದರೆ ಒಳ್ಳೆಯದೇ ಕಾಣಿಸುತ್ತದೆ. ಹೀಗಾಗಿ ಆಡುವ ಮಾತು, ಕೇಳುವ ನುಡಿಗಳು ಶುಭ್ರವಾಗಿರಬೇಕು. ಆಧ್ಯಾತ್ಮಿಕ ಲಯದಲ್ಲಿ ಸಾಗಿ ಬಂದ ಇಲ್ಲಿಯ ಕವಿತೆಗಳು ಕವಿ ಮಾಗಿದಂತೆ, ಕವಿತೆಯೂ ಮಾಗುತ್ತದೆ ಎಂಬುದಕ್ಕೆ ಈ ಪುಸ್ತಕದ ಎಲ್ಲ ಕವಿತೆಗಳೂ ಸಹಜವಾದ ನಿದರ್ಶನವಾಗಿದೆ.

ಕಡೆಯ ಕವಿತೆ “ಆತ್ಮಾನುಸಂಧಾನ” ಓದುವಾಗ ಏಕೋ ಮನಸ್ಸು ಭಾರವಾದಂತೆ ಅನ್ನಿಸಿತು‌.ಬಯಕೆಯ ದೋಣಿಯ ಮೇಲೆ ಕುಳಿತು ಈ ಪ್ರಕೃತಿ ಅಥವಾ ಈ ಚರಾಚರ ವಸ್ತುಗಳು ಪ್ರತಿಕ್ರಿಯಿಸುವುದಿಲ್ಲ. ಅವುಗಳಿಗೆ ಯಾವುದೇ ಹೊಗಳಿಕೆ ತೆಗಳಿಕೆ ಬೇಕಿಲ್ಲ.ಆದರೆ ಮನುಷ್ಯನಿಗೆ ಎಲ್ಲವೂ ಬೇಕೆಂಬ ಹೆಬ್ಬಯಕೆ. ಹೀಗಾಗಿ ಕವಿ ರಮೇಶ್ ಹೇಳುವಂತೆ,

“ಚಪ್ಪಾಳೆಗಳಿಗೆ ಹಂಬಲಿಸಿ ಎಲ್ಲಾದರು
ಕುಸುಮ ಅರಳಿದ್ದುಂಟೆ ಹೇಳು ಗೆಳತಿ?”

ಈ ಎರಡೇ ಸಾಲುಗಳಲ್ಲಿ ಮನುಷ್ಯನ ಹಾಗೂ ಪ್ರಕೃತಿಯ ನಡುವಿನ ಭಿನ್ನತೆ ಎದ್ದು ಕಾಣಿಸುತ್ತದೆ. ನವಿರಾದ ಭಾವನೆಗೆ ನೋವಿನ ಸ್ಪಂದನೆ, ವಿಷಾದದ ಸಮಯಕ್ಕೆ ನಲಿವಿನ ಅಪ್ಪುಗೆ, ಸಂಬಂಧಗಳ ನಡುವೆ ಮೊದಲ ಹಾಗೂ ಕೊನೆಯ ಕ್ಷಣಗಳನ್ನೆಲ್ಲ ತಮ್ಮ ಕವಿತೆಯ ಮೂಲಕ ಹೊರಹಾಕುವಲ್ಲಿ ರಮೇಶ್ ಸತ್ಯವಾಗಿಯೂ ಗಟ್ಟಿತನ ತೋರಿಸಿದ್ದಾರೆ. ಬದುಕು ಎಂಬ ಮೂರಕ್ಷರದ ನಡುವಿನ ಈ ಎಲ್ಲ ಆಯಾಮಗಳ ಅನಾವರಣ ಈ ಕವನ ಸಂಕಲನದ ಹೈ-ಲೆಟ್ ಎಂದರೆ ಅತಿಶಯೋಕ್ತಿಯಾಗಲಾರದು.

ಡಾ. ಸಂಧ್ಯಾ ಹೆಗಡೆ ದೊಡ್ಡಹೊಂಡ ಅವರ ಭದ್ರವಾದ ಮುನ್ನುಡಿ ಪುಸ್ತಕಕ್ಕೆ ಕಳಶಪ್ರಾಯವಾಗಿದೆ.ನೀವೂ ಸಹ ಈ ಕವನ ಸಂಕಲನವನ್ನು ಒಮ್ಮೆ ಓದಿ ಹಾರೈಸಿ. ಮನಸ್ಸಿಗೆ ಹಿತವಾದ ಭಾವವುಳ್ಳ ಸಾಲುಗಳು ಹೃದಯವನ್ನು ಬಡಿದೆಬ್ಬಿಸಿದ್ದು ಪರಮಸತ್ಯ.

ರಮೇಶ್ ಸರ್ ನಿಮ್ಮಿಂದ ಇಂತಹ ಕೃತಿಗಳು ಮತ್ತೆ ಮತ್ತೆ ಮರಳಿ ಬರುತ್ತಲೇ ಇರಲಿ.


  • ಗಣಪತಿ ಹೆಗಡೆ – ದಾಂಡೇಲಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW