‘ಹತ್ತು ತಲೆ ಮೇಲೆತ್ತಿ ಬಿತ್ತರಿಸುತಿಹ ಭೀತಿ ಕತ್ತರಿಸಿ’… ಗಜಾನನ ಶರ್ಮಾ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಲೋಕ ಕಾತರಿಸುತಿದೆ,
ಕಾಲ ಕನವರಿಸುತಿದೆ
ತಪಿಸುತಿವೆ ಗ್ರಹತಾರೆ
ನಕ್ಷತ್ರ, ಬಾ ರಾಮ
ನೀರು ನೆಲ ಗಾಳಿ ನಭ
ಜೀವ- ನಿರ್ಜೀವ ಜಗ
ಜಪಿಸುತಿವೆ ಅನವರತ
ನಿನಗಾಗಿ ರಾಮ
ಸಂತ, ಋಷಿ, ಸಾತ್ವಿಕರು
ಸದ್ಭಕ್ತ ಸಾಧಕರು,
ನೀನಿಳೆಗೆ ಬರಲೆಂದು
ಹಾರೈಸುತಿಹರು
ಸರ್ವಜನಹಿತ ಬದ್ಧ
ಶುದ್ಧಾಂತಃಕರಣದಲಿ
ಭಗವಂತ ಬಾರೆಂದು
ಕರೆಯುತಿಹರು
ನರಳುವವರೆದೆಯಲ್ಲಿ
ನಗೆಯ ಅರಳಿಸು ಬಾರ
ಅಳಿಸಿ ಅಳು, ನಲಿವುಳಿಸಿ
ಸಲಹು ಬಾರ
ಕ್ರೌರ್ಯ ಮತ್ಸರ ದ್ವೇಷ
ಸ್ವಾರ್ಥ ವಂಚನೆ ಹಿಂಸೆ
ನಾಶವಾಗಿಸಿ
ಹರುಷ ಹುಟ್ಟಿಸಲು ಬಾರ
ಹತ್ತು ತಲೆ ಮೇಲೆತ್ತಿ
ಬಿತ್ತರಿಸುತಿಹ ಭೀತಿ ಕತ್ತರಿಸಿ,
ಪ್ರೀತಿಯನು
ಬಿತ್ತು ಬಾ ರಾಮ
ಸತ್ಯ ಪರಿಪಾಲನೆಯ
ಸತ್ವ ಸಂಪಾದನೆಯ
ತತ್ವಪೂರ್ಣದ ಬದುಕು
ತೋರು ಬಾ ರಾಮ
- ಗಜಾನನ ಶರ್ಮಾ
