ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ಹೇಳುವಂತೆ ನಿದ್ದೆಯಲ್ಲಿ ಕಾದಾಡಿದ ಕನಸು ಅಥವಾ ಕೆಲವು ಮನಕರಗುವ ಘಟನೆಗಳು ಕತೆಗಾರನನ್ನು ತಟ್ಟಿ ಎಬ್ಬಿಸಿ ಅವನಿಂದ ಕತೆಗಳನ್ನಾಗಿಸಿದೆ. ಅದಕ್ಕೆ ಸಾಕ್ಷಿಯಂತೆ ‘ಹವೇಲಿ ದೊರೆಸಾನಿ’ ಕಥಾಸಂಕಲನ. ಈ ಕೃತಿಯ ಕುರಿತು ನನ್ನ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ಹವೇಲಿ ದೊರೆಸಾನಿ
ಕತೆಗಾರರು : ಮಲ್ಲಿಕಾರ್ಜುನ ಶೆಲ್ಲಿಕೇರಿ
ಪ್ರಕಾಶನ : ಅಮೂಲ್ಯ ಪ್ರಕಾಶನ
ಬೆಲೆ : ೧೭೫.೦೦
ಖರೀದಿಗಾಗಿ : 9448676770
“ಹವೇಲಿ ದೊರೆಸಾನಿ” ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ಎರಡನೆಯ ಕಥಾ ಸಂಕಲನವಾಗಿದೆ. ಇದರಲ್ಲಿ ಎಂಟು ಕಥೆಗಳಿವೆ. ಒಂದೊಂದು ಕತೆಗಳು ಭಾವನಾತ್ಮಕವಾಗಿ, ಸಮಾಜಮುಖಿಯಾಗಿ ಓದುಗರ ಮನಸ್ಸನ್ನು ಹಿಡಿದಿಡುತ್ತದೆ.
ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ಕತೆಗಳು ಬೇರೆ ಬೇರೆ ನಿಯತಕಾಲಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಮತ್ತು ಓದುಗರ ಮನವೂ ಗೆದ್ದಿದೆ. ಕಥಾಲೋಕದಲ್ಲಿ ಕತೆಗಾರರು ತಮ್ಮನ್ನು ತಾವು ಹೊಸಬರು ಎಂದು ಪರಿಚಿಸಿಕೊಂಡರು ಅವರ ಕತೆಗಳು ಮಾತ್ರ ಮಾಗಿದ ಕೈ ಎಂದು ಸಾಬೀತು ಪಡಿಸುತ್ತದೆ.
ಹವೇಲಿ ದೊರೆಸಾನಿ ಕತೆಯ ಮೊದಲ ಕತೆ “ಅನ್ಪಡ್ ಕಂಟೆವ್ವ”. ತಾನು ಬದುಕಿದರೆ ಸಾಕು ಎನ್ನುವ ಸ್ವಾರ್ಥ ಪ್ರಪಂಚದಲ್ಲಿ ತನಗಿದ್ದ ಒಂದು ಎಕರೆ ಜಮೀನನ್ನು ಸರ್ಕಾರಿ ಶಾಲೆಗೆ ಬರೆದುಕೊಡುವ ಉದಾರ ಮಹಿಳೆ ಕಂಟೆವ್ವ. ಈ ಕತೆಯನ್ನು ಓದುವಾಗ, ಕಿತ್ತು ತಿನ್ನುವ ಬಡತನ ಹಾಗೂ ಅನಕ್ಷರಸ್ಥರಾದರೂ ಕಿತ್ತಳೆ ಹಣ್ಣು ಮಾರಿ ತಮ್ಮ ಊರಿನ ಮಕ್ಕಳಿಗೆ ಒಳಿತನ್ನು ಬಯಸುವ ಹೃದಯ ವೈಶಾಲ್ಯತೆಯ ಇರುವ ಪದ್ಮಶ್ರೀ ಪುರಸ್ಕೃತರಾದ ಹರೆಕಳ ಹಾಜಬ್ಬ ಅವರು ಕಂಟೆವ್ವ ಪಾತ್ರದ ಮೂಲಕ ನೆನಪಿಗೆ ಬರುತ್ತಾರೆ. ಇಂದು ಬಹುತೇಕ ಶಾಲೆಗಳು ರಾಜಕಾರಣಿಗಳ ಸ್ವಂತಗಿದ್ದು, ಈ ಕತೆ ಪ್ರಸ್ತುತ ಜಗತ್ತಿಗೆ ಕೈಗನ್ನಡಿಯಾಗಿದೆ. ಕತೆಗಾರರು ಇದರಲ್ಲಿ ಕತೆಯನ್ನಷ್ಟೇ ಹೆಣೆದಿಲ್ಲ. ಕತೆಯಲ್ಲಿ ಬರುವ ಕಂಟೆವ್ವನ ಹೆಸರಿನ ಹಿಂದೆ ಒಂದಷ್ಟು ಕಾಲ್ಪನಿಕ ಕತೆಯನ್ನು ಕಟ್ಟಿ ಓದುಗರ ಮುಂದೆ ಪ್ರಸ್ತುತ ಪಡಿಸಿದ ರೀತಿ ನನಗೆ ಇಷ್ಟವಾಯಿತು.

ನನಗೆ ವೈಯಕ್ತಿಕವಾಗಿ ಕಾಡಿದ ಹಾಗೂ ಮನಕಲುಕಿದ ಇನ್ನೊಂದು ಕತೆಯೆಂದರೆ “ಆ ಹನ್ನೆರಡು ಗಂಟೆ”… ಸಾವು ಬದುಕಿನ ಮಧ್ಯೆ ನರುಳುತ್ತಿರುವ ಪತ್ನಿಯನ್ನು ಉಳಿಸಲು ವೈದ್ಯರ ಕೈ ಕಾಲು ಹಿಡಿಯುವ ಗಂಡ. ತಂಗಿಯನ್ನು ಉಳಿಸಲು ಹರಸಾಹಸ ಪಡುವ ವೈದ್ಯನಾದ ಅಣ್ಣ.
ಇದು ಕೇವಲ ಕತೆಯಾಗಿದ್ದರೆ ಮನಸ್ಸಿಗೆ ಸಂತ್ವಾನ ಹೇಳಬಹುದಿತ್ತು. ಆದರೆ ಕತೆಗಾರ ಮಲ್ಲಿಕಾರ್ಜುನ ಅವರ ಬದುಕಿನಲ್ಲಿ ಎಂದು ಮರೆಯದ ಆ ಹನ್ನೆರಡು ಗಂಟೆಯನ್ನು ಕತೆಯನ್ನಾಗಿ ಕಟ್ಟಿಕೊಟ್ಟ ರೀತಿ, ಅದನ್ನು ಓದುವಾಗ ಕತೆಗಾರ ಪಟ್ಟ ನೋವು, ಸಂಕಟ ಓದುಗರ ಕಣ್ಣುಗಳು ತೇವವಾಗಿಸುತ್ತವೆ.
ರಕ್ತ ಸಂಬಂಧಗಳು ಸಂಬಂಧಗಳು ಒಮ್ಮೊಮ್ಮೆ ಕಡಿದು ಹೋಗಬಹುದು, ಆದರೆ ಹೆತ್ತ ಕರಳಿನ ಸಂಬಂಧಗಳು ಎಂದೂ ಕೂಡಾ ಬಿಡಿಸಲಾಗದ ನಂಟು ಎಂದು ನಂಬಿದವರು. ಆದರೆ “ತಂತು” ಕತೆಯಲ್ಲಿ ಬರುವ ಅಪ್ಪ ಗಂಗಪ್ಪ, ಮಗ ಮಹೇಶಚಂದ್ರನಿಗೆ ಮಾನಸಿಕ ಹಿಂಸೆ ನೀಡಿ ಹೆಂಡತಿ ಹಾಗೂ ಮಗನಿಂದ ದೂರವಾಗುತ್ತಾನೆ. ಮುಂದೆ ವಿಧಿಯ ಆಟ ಹೇಗೆ ಬದಲಾಗುತ್ತದೆ ಎಂದರೆ ಗಂಗಪ್ಪ ಕೊನೆಗೆ ಮಗನ ಬಳಿ ಅಂಗಲಾಚುವ ಪರಿಸ್ಥಿತಿ ಬರುತ್ತದೆ. ಆಗ ಮಗ ಮಹೇಶಚಂದ್ರ ಮಾನವೀಯತೆಯನ್ನು ಎತ್ತಿ ಹಿಡಿಯುತ್ತಾನೆ. ಹಣದ ಹಿಂದೆ ಓಡುವ ಇಂದಿನ ಜಗತ್ತಿನಲ್ಲಿ ಮಾನವೀಯತೆ ಕಣ್ಮರೆಯಾಗುತ್ತಿದೆ. ನ್ಯಾಯ, ನೀತಿ, ಧರ್ಮ ಇದ್ದಲ್ಲಿ ಆ ಭಗವಂತ ಕಾಪಾಡುತ್ತಾನೆ ಎನ್ನುವುದನ್ನು ತಂತು ಕತೆಯಿಂದ ಅರಿಯಬಹುದು.
ಅದು ಸಾಮಾನ್ಯ ಸರ್ಕಲ್ ಅಲ್ಲ, ಕ್ಯಾ ಪ್ರತಾಪಮೋಹನ್ ರ ತೇಜೋಪೂರ್ಣವಾದ ಪ್ರತಿಮೆ ಇದ್ದಂತಹ ಸರ್ಕಲ್. ಶ್ರೀಮಂತರ ಮನೆಯಲ್ಲಿ ಹುಟ್ಟಿ ಬೆಳೆದ ಕ್ಯಾ.ಪ್ರತಾಪ್ ಅವರಿಗೆ ದೇಶ ಪ್ರೇಮ ಅವರನ್ನು ಮಿಲಿಟರಿ ಸೇರುವಂತೆ ಮಾಡಿತು. ಚೀನಾ – ಪಾಕಿಸ್ತಾನ ಯುದ್ಧದಲ್ಲಿ ಕ್ಯಾ.ಪ್ರತಾಪಮೋಹನ ಅವರು ವೀರ ಮರಣವನ್ನು ಹೊಂದಿದರು. ಅವರ ಸ್ಮರಣೆಗಾಗಿ ಊರಿನ ಜನ ಕ್ಯಾ.ಪ್ರತಾಪಮೋಹನ ಅವರ ಪ್ರತಿಮೆಯನ್ನು ನಿರ್ಮಿಸಿದರು. ಮುಂದೆ ಅದೇ ಪ್ರತಿಮೆಯ ಎದುರು ಅನ್ಯಾಯಗಳು, ಅಹಿತಕರ ಘಟನೆಗಳು ನಡೆಯುತ್ತದೆ. ಅದಕ್ಕೆ ಕ್ಯಾ.ಪ್ರತಾಪಮೋಹನ್ ಅವರ ಪ್ರತಿಮೆ ಮೂಕಸಾಕ್ಷಿಯಾಗಿರುತ್ತದೆ. ದೇಶದ ಜನರ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಬಿಡುವ ಒಬ್ಬ ಸೈನಿಕನ ಕಣ್ಣೆದುರು ಹೆಣ್ಣುಮಗಳ ಮೇಲೆ ಅತ್ಯಾಚಾರ, ಕೊಲೆಗಳಾದಾಗ ಒಂದು ಪ್ರತಿಮೆಯು ಕೂಡಾ ಆ ನೋವನ್ನು ಸಹಿಸಿಕೊಳ್ಳುವುದಿಲ್ಲ ಎನ್ನುವುದು ‘ಕ್ಯಾ.ಪ್ರತಾಪಮೋಹನ್ ಸರ್ಕಲ್’ ಕತೆಯಲ್ಲಿ ಓದಬಹುದು. ಇಂದು ಕೊಲೆ, ಹಿಂಸಾಚಾರ ಹೆಜ್ಜೆ ಹೆಜ್ಜೆಗೂ ನೋಡುತ್ತಿರುವಾಗ ನಮ್ಮ ದೇಶದ ಸೈನಿಕರು, ಹೋರಾಟಗಾರರ ಶ್ರಮ ವ್ಯರ್ಥವಾಯಿತೇ?… ದೇಶದೊಳಗಿರುವ ಜನಗಳ ಮಧ್ಯೆ ಇರುವ ಅಹಿಂಸೆ, ಅಧರ್ಮ, ಕೋಪ ತಾಪವನ್ನು ತಡೆಯುವುದು ಹೇಗೆ?…ಎನ್ನುವ ಪ್ರಶ್ನೆಯನ್ನು ಕತೆಗಾರ ಹುಟ್ಟು ಹಾಕಿರುವುದು ಮೆಚ್ಚುವಂತದ್ದು.
ದೊರೆಸಾನಿ ಪ್ರತೀ ಕತೆಗಳು ಬಾಂಧವ್ಯಕ್ಕೆ, ಮಾನವೀಯತೆಗೆ, ಧರ್ಮ ಅಧರ್ಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿಲಾಗಿದೆ. ಹಾಗಾಗಿ ಓದುವಾಗ ಒಂದು ಕೌಟoಬಿಕ ಆಪ್ತ ವಿಚಾರಗಳು ಮನಸ್ಸನ್ನು ಅವರಿಸುತ್ತದೆ.

‘ಹವೇಲಿ ದೊರೆಸಾನಿ’ ಕೃತಿಯ ಮುಖಪುಟ ಮತ್ತು ಶೀರ್ಷಿಕೆಯು ಹಾರರ್ ಅಥವಾ ಸಸ್ಪೆನ್ಸ್ ಕತೆಯ ಪುಸ್ತಕವೆನಿಬಹುದು. ಆದರೆ ಇದೊಂದು ಪಕ್ಕಾ ಉತ್ತರ ಕರ್ನಾಟಕದ ಸುತ್ತ ಸುತ್ತುವ ಕಥೆಗಳಾಗಿದ್ದು, ಕತೆಯಲ್ಲಿ ಬರುವ ಜವಾರಿ ಭಾಷೆಗಳು, ನುಡಿಗಟ್ಟುಗಳು ಉತ್ತರಕರ್ನಾಟಕದತ್ತ ನಮ್ಮನ್ನು ಕೊಂಡೊಯ್ಯುತ್ತದೆ. ಬಹುದಿನಗಳ ನಂತರ ಉತ್ತರ ಕನ್ನಡ ಭಾಷೆಯ ಗಮ್ಮತ್ತಿನ ಪುಸ್ತಕ ಓದಿದ ಸಂತೋಷ ನೀಡಿದೆ.
ಮಲ್ಲಿಕಾರ್ಜುನ ಅವರು ವೃತ್ತಿಯಲ್ಲಿ ಕೆ ಎಸ್ ಎ ಅಧಿಕಾರಿಯಾಗಿದ್ದು ಅವರ ಸರಳತನವನ್ನು ಅವರ ಕತೆಯಲ್ಲಿ ಕಾಣಬಹುದು. ಕಥೆಗಾರನಲ್ಲಿ ಸಮಾಜಕ್ಕಾಗಿ ಮಿಡಿಯುತ್ತಿರುವ ತಾಯಿ ಹೃದಯವನ್ನು ನೋಡಬಹುದು. ಸಹೋದರಿ ತ್ರಿವೇಣಿ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೆ ಇರಬಹುದು, ಆದರೆ ಅವರ ಆಸೆ, ಕನಸ್ಸಿನ ಕೂಸುಗಳೇ ಮಲ್ಲಿಕಾರ್ಜುನ ಅವರ ಮೊದಲ ಕೃತಿ “ದೀಡೆಕೆರೆ ಜಮೀನು” ಮತ್ತು “ಹವೇಲಿ ದೊರೆಸಾನಿ”ಯಾಗಿದೆ. ಖ್ಯಾತ ಕತೆಗಾರ ಕುo. ವಿ ಅವರು ಹೇಳುವಂತೆ ಸಾಹಿತ್ಯದ ಥಳಕು ಬಳಕು ಮಲ್ಲಿಕಾರ್ಜುನ ಅವರಲ್ಲಿ ಇಲ್ಲಾ. ನೂರೆಂಟು ನೋವನ್ನು ನುಂಗಿ ಸದಾ ಶಾಂತ ಸ್ವರೂಪ ವ್ಯಕ್ತಿಯಾಗಿರುವ ಅವರ ಕತೆಯಲ್ಲಿ ಗಟ್ಟಿತನವಿದೆ, ಜವಾರಿ ಭಾಷೆಯಿದೆ. ಅವರು ಕಾದಂಬರಿ ಬರೆದರೆ ಹೇಗೆ?… ಎಂದಿದ್ದಾರೆ. ಆದಷ್ಟು ಬೇಗ ಮಲ್ಲಿಕಾರ್ಜುನ ಅವರು ಕಾದಂಬರಿಯತ್ತ ಮನಸ್ಸು ಮಾಡಲಿ ಎನ್ನುವುದು ನನ್ನ ಆಶಯವು ಕೂಡಾ, ಅವರಿಗೆ ಶುಭ ಹಾರೈಸುತ್ತೇನೆ.
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ
