ಅಪ್ರತಿಮ ಪತ್ರಕರ್ತರಾದ ವೈಕುಂಠರಾಜು ಅವರ ಅಂತಿಮಕಾಲ ಅಷ್ಟೇನೂ ಸುಖಕರವಾಗಿರಲಿಲ್ಲ. ಅವರು ಕೊನೆಯುಸಿರು ಎಳೆದಾಗ ಅವರ ಅಭಿಮಾನಿಗಳು, ಹಿತೈಷಿಗಳು ಸಮಾಧಾನದ ನಿಟ್ಟುಸಿರು ಬಿಡುವಂತಾಗಿತ್ತು. ಅವರ ಅಂತಿಮ ಇಚ್ಚೆಯಂತೆ ದೇಹವನ್ನು ವೈದ್ಯಕೀಯ ಉದ್ದೇಶಗಳಿಗಾಗಿ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ನೀಡಲಾಯಿತು. ಅವರ ಜೀವನದ ಕರಾಳದಿನಗಳ ಬಗ್ಗೆ ಪತ್ರಕರ್ತರಾದ ವೈ ಜಿ ಅಶೋಕ್ ಕುಮಾರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇಂದು ಜನವರಿ ೩೦, ಇಂದಿಗೆ ಸರಿಯಾಗಿ ಹದಿನೈದು ವರ್ಷಗಳ ಹಿಂದೆ ಕನ್ನಡ ಲೋಕ ಕಂಡ ಅಪ್ರತಿಮ ಪತ್ರಕರ್ತರೊಬ್ಬರು ಅಸ್ತಂಗತರಾದರು. ಬಿ.ವಿ.ವೈಕುಂಠರಾಜು ಒಂದು ವ್ಯಕ್ತಿಯಲ್ಲ, ಶಕ್ತಿ. ಹಲವು ಹತ್ತು ವಿಶೇಷತೆಗಳನ್ನು ಏಕಕಾಲಕ್ಕೆ ಹೊಂದಿದವರು. ಉತ್ತಮ ಬರಹಗಾರ, ಕಥೆಗಾರ, ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ, ಸಿನಿಮಾ ಮತ್ತು ನಾಟಕ ವಿಮರ್ಶಕ, ಸೂಕ್ಷ್ಮ ರಾಜಕೀಯ ಒಳನೋಟಗಳನ್ನು ಹೊಂದಿದ್ದ ಚಿಂತಕ. ನೇರ ಮತ್ತು ಕರಾರುವಕ್ಕಾದ ಮಾತಿಗೆ, ಬರಹಕ್ಕೆ ಹೆಸರಾದವರು, ತಮಗನಿಸಿದ್ದನ್ನು ನಿರ್ಭಿಡೆಯಿಂದ ಬರೆಯುತ್ತಿದ್ದರು.
ಅವರ ಕಾದಂಬರಿಗಳನ್ನು ಆಧರಿಸಿದ ಆಕ್ರಮಣ ಮತ್ತು ಉದ್ಭವ ಆ ಕಾಲಕ್ಕೇ ಸಾಕಷ್ಟು ಹಣ ಮಾಡಿದ ಸದಭಿರುಚಿಯ ಚಿತ್ರಗಳಾಗಿದ್ದವು. ಮೈಸೂರು ವಿವಿಯಲ್ಲಿ ಕನ್ನಡ ಎಮ್.ಎ. ಪಾಸು ಮಾಡಿದ ವೈಕುಂಠರಾಜು ತುಮಕೂರಿನಲ್ಲಿ ಕೆಲಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ತಾವು ಪ್ರೇಮಿಸಿದ ಹುಡುಗಿಯ ಸಲುವಾಗಿ ಬೆಂಗಳೂರಿಗೆ ಬಂದು ೧೯೬೨ ರಲ್ಲಿ ತಾಯಿನಾಡು ಪತ್ರಿಕೆ ಸೇರಿದರು.

ಫೋಟೋ ಕೃಪೆ : google
೧೯೬೪ ರಲ್ಲಿ ಅವರು ಪ್ರಜಾವಾಣಿಯಲ್ಲಿ ಸಹ ಸಂಪಾದಕರಾಗಿ ಸೇರಿದ ವೇಳೆಗಾಗಲೇ ಕನ್ನಡ ರಂಗಭೂಮಿ ಕುರಿತ ಪ್ರಬಂಧಕ್ಕೆ ಮೈಸೂರು ವಿವಿ ಅವರಿಗೆ ಡೀಲಿಟ್ ಪುರಸ್ಕಾರ ನೀಡಿತ್ತು.
ಆ ಕಾಲಕ್ಕೆ ಅವರು highly qualified journalist ಎಂಬ ಹೆಗ್ಗಳಿಕೆ ಪಡೆದಿದ್ದರು. ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಸಂಪಾದಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಅದನ್ನು ಅತ್ಯಂತ ಜನಪ್ರಿಯ ಹಾಗೂ ಗುಣಗ್ರಾಹಿ ಪುರವಣಿಯನ್ನಾಗಿ ರೂಪಿಸಿದರು.
ಕನ್ನಡದಲ್ಲಿ ಹೊಸತಾಗಿ ಬರೆಯಲು ಹೊರಡುವ ಪ್ರತಿಯೊಬ್ಬರಿಗೂ ಆಗ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ತಮ್ಮ ಹೆಸರು ಅಚ್ಚಾಗುವುದನ್ನು ನೋಡುವುದು ಕನಸಾಗಿರುತ್ತಿತ್ತು. ಆಗ ಪತ್ರಿಕೆ ಕಛೇರಿಯಿಂದ ಸ್ವೀಕೃತಿ ಸ್ಲಿಪ್ ಗಳಿಗಿಂತ ರಿಜೆಕ್ಷನ್ ಸ್ಲಿಪ್ ಗಳೇ ಹೆಚ್ಚು ಹೊರಹೋಗುತ್ತಿದ್ದವು.
ಅದರೆ ವೈಕುಂಠರಾಜು ಅವರಿಗೆ ಒಂದು ವಿಶೇಷ ಗುಣವೊಂದಿತ್ತು. ಅದೆಂದರೆ ಯಾವ ಕಾರಣಕ್ಕಾಗಿ ಲೇಖನ/ ಕಥೆ/ ಕವನ/ ಪ್ರಬಂಧ ತಿರಸ್ಕ್ರತಗೊಂಡಿದೆ ಮತ್ತು ಮುಂದಿನ ಬರವಣಿಗೆಯಲ್ಲಿ ಲೇಖಕ ಅನುಸರಿಸಬಹುದಾದ ಕ್ರಮಗಳೇನು ಎಂಬ ಬಗ್ಗೆ ನಾಲ್ಕು ಸಾಲಿನ ಪತ್ರವಿರುತ್ತಿತ್ತು. (ನನಗೆ ನೆನಪಿರುವ ಪ್ರಕಾರ ಉದಯವಾಣಿಯ ಈಶ್ವರಯ್ಯ ಅವರು ಈ ರೀತಿಯಲ್ಲಿ ಉದಯೋನ್ಮುಖ ಬರಹಗಾರರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ೧೯೮೬ ರ ಸುಮಾರಿಗೆ ಪ್ರಜಾವಾಣಿಯಲ್ಲಿ ಅವರ ಸಾಧನೆ ಅಲಕ್ಷಿತವಾದಾಗ ಮನನೊಂದು ವೈಕುಂಠರಾಜು ಪ್ರಜಾವಾಣಿ ತ್ಯಜಿಸಿದರು.
ಆಗಿನ ಮುಖ್ಯಮಂತ್ರಿ ಗೆಳೆಯ ರಾಮಕೃಷ್ಣ ಹೆಗಡೆ ಅವರ ಒತ್ತಾಸೆ ಮೇರೆಗೆ “ವಾರಪತ್ರಿಕೆ” ಆರಂಭಿಸಿದರು. ಚುಚ್ಚುಮದ್ದು, ಆಧುನಿಕ ನೀತಿಕಥೆಗಳು, ಸಂಪಾದಕರ ಡೈರಿಯಂತಹ ವೈಕುಂಠರಾಜು ಅವರ ಬಹುಮುಖ ಬರವಣಿಗೆಗಳ ಮೂಲಕ ಪತ್ರಿಕೆ ಸಾಕಷ್ಟು ಜನಪ್ರಿಯವಾಗಿ ಮನೆಮಾತಾಯಿತು. ಮಾರಾಟದಲ್ಲೂ ಪತ್ರಿಕೆ ಸಾಕಷ್ಟು ದಾಖಲೆ ಮಾಡಿತು.
ದುರದೃಷ್ಠವಶಾತ್ ಉತ್ತಮ ವ್ಯವಹಾರಸ್ಥರಂತೂ ಆಗಿರಲಿಲ್ಲ ವೈಕುಂಠರಾಜು.
ಏಕೆಂದರೆ ಪತ್ರಿಕೆಗೆ ಬೇಕಾದ ನ್ಯೂಸ್ಪ್ರಿಂಟ್( ಆಗ ನ್ಯೂಸ್ಪ್ರಿಂಟ್ ದೊರೆಯುವುದು ಅತ್ಯಂತ ದುಬಾರಿ ದುರ್ಲಭವಾಗಿತ್ತು.ಸಾಕಷ್ಡು ಕಾಳಸಂತೆ ಗೋಲ್ಮಾಲ್ ಗಳಿಗೆ ಒಳಗಾಗಬೇಕಾಗಿತ್ತು) ಮುದ್ರಣ,ಜಾಹಿರಾತು, ವಿತರಣೆ, ಹಣಕಾಸಿನ ವ್ಯವಹಾರ ಇವ್ಯಾವುದನ್ನೂ ಅವರು ಸ್ವಂತ ಮೇಲುಸ್ತುವಾರಿ ಇಟ್ಟುನಡೆಸಲೇ ಇಲ್ಲ. ಯಾರೋ ನ್ಯೂಸ್ಪ್ರಿಂಟ್ ಕೊಡಿಸ್ತೇನೆ ಅಂತ ಕಾಸು ತಗೊಂಡು ನುಂಗಿಹಾಕುತ್ತಿದ್ದರು. ಇನ್ಯಾರೋ ರಾಜಕೀಯ ನಾಯಕರ ಮಾತಿಗೆ ಸಿಲುಕಿ ಹಾಕಿಕೊಂಡು ಜಾಹಿರಾತು ಮುದ್ರಿಸುತ್ತಿದ್ದರು (ಕಾಸೇ ಇಲ್ಲದೆ) ಮತ್ತಾರೋ ಏಜೆಂಟ್ ಸಾವಿರಗಟ್ಟಲೇ ಪತ್ರಿಕೆ ತರಿಸಿ ಮಾರಾಟಮಾಡಿ ಹಣ ಗುಳುಂ ಮಾಡಿರುತ್ತಿದ್ದ.( ಎಜೆಂಟರಿಂದ ಮುಂಗಡ ಠೇವಣಿ ಸಂಗ್ರಹಿಸುವ ಉಸಾಬರಿಗೆ ಹೋಗಿರಲಿಲ್ಲ ) ಒಂದುವೇಳೆ ಎಲ್ಲ ಅಡೆತಡೆಗಳನ್ನು ದಾಟಿ ಹಣ ಕಛೇರಿ ತಲುಪಿದರೆ ನುಂಗಿಹಾಕಲೆಂದೆ ಒಂದು ದಂಡು ಅಲ್ಲಿ ಸಿದ್ದವಿರುತ್ತಿತ್ತು. ವಾರಪತ್ರಿಕೆ ಯಶಸ್ವಿಯಾಗಿ ನಡೆಯುತ್ತಿತ್ತು. ಅದರೆ ಅಷ್ಟಕ್ಕೇ ತೃಪ್ತಿ ಪಡದೆ ಯಾರನ್ನೋ ಮೆಚ್ಚಿಸಲು ರಾಜೂಪತ್ರಿಕೆ(ಕ್ರೀಡಾಪತ್ರಿಕೆ), ಹರಿಣಿ (ಮಹಿಳಾ ಪತ್ರಿಕೆ) ಅರಂಭಿಸಿದರು.

ಫೋಟೋ ಕೃಪೆ :google
ಅಷ್ಟೇ ಸಾಲದೆಂಬಂತೆ ಮಗನ ಒತ್ತಾಯಕ್ಕೆ ಮಣಿದು ಇದ್ದ ಮನೆಯನ್ನು ಬ್ಯಾಂಕ್ ಸಾಲಕ್ಕೆ ಒತ್ತೆ ಇಟ್ಟು ಗೋಧೂಳಿ ಸಂಜೆ ದಿನಪತ್ರಿಕೆ ಆರಂಭಿಸಿದರು. ಯಾವಾಗ ತಮ್ಮ ಪ್ರಯತ್ನ ನಿರೀಕ್ಷಿತ ಫಲಕೊಡಲಿಲ್ಲವೋ ಆಗ ವೈಕುಂಠರಾಜು ಮಾನಸಿಕ ಸ್ಥಿಮಿತತೆ ಕಳಕೊಂಡರು. ದೈಹಿಕ ಆರೋಗ್ಯ ಕಳಕೊಂಡು ಅಸ್ಪತ್ರೆಗೆ ಎಡೆತಾಕಲಾಂಭಿಸಿದರು. ದೀರ್ಘಕಾಲ ಆಸ್ಪತ್ರೆಯಲ್ಲಿಯೇ ಕಳೆಯಬೇಕಾಯಿತು. ಅನಾರೋಗ್ಯದ ದಿನಗಳನ್ನೇ ಆಧರಿಸಿ ವಾರ್ಡ್ ನಂ.೨೨೦ ಎಂಬ ಕಾದಂಬರಿ ಬರೆದರು.
ಅವರ ಅಂತಿಮಕಾಲ ಅಷ್ಟೇನೂ ಸುಖಕರವಾಗಿರಲಿಲ್ಲ. ಕಡೆಗೊಮ್ಮೆ ಅವರು ಕೊನೆಯುಸಿರು ಎಳೆದಾಗ ಅವರ ಅಭಿಮಾನಿಗಳು, ಹಿತೈಷಿಗಳು ಸಮಾಧಾನದ ನಿಟ್ಟುಸಿರು ಬಿಡುವಂತಾಗಿತ್ತು. ಅವರ ಅಂತಿಮ ಇಚ್ಚೆಯಂತೆ ದೇಹವನ್ನು ವೈದ್ಯಕೀಯ ಉದ್ದೇಶಗಳಿಗಾಗಿ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ನೀಡಲಾಯಿತು. ಆ ನಂತರದ ದಿನಗಳು ಇನ್ನೂ ಭೀಕರವಾಗಿತ್ತು ಅವರ ಕುಟುಂಬಕ್ಕೆ. ಇದ್ದ ಮನೆಯು ಸೇರಿದಂತೆ ಅಸ್ತಿಯೆಲ್ಲ ಸಾಲಿಗರ ಕೈಸೇರಿದಂತೆ, ಅವರ ದೊಡ್ಡ ಮಗ ಸನತ್ಕುಮಾರ್( ವೈಕುಂಠರಾಜು ಪ್ರೀತಿಯಿಂದ ಮಕ್ಕಳನ್ನು ದೊಡ್ಡೋನೇ ಚಿಕ್ಕೋನೆ ಎಂದು ಕರೆಯುತ್ತಿದ್ದರು) ಆಕಸ್ಮಿಕದಲ್ಲಿ ಕಾಲು ಕಳೆದುಕೊಂಡು ಹೆಳವನಾಗಿ ಅಸುನೀಗಿದ. ಮತ್ತೊಬ್ಬ ಮಗ ದಾರಿ ತಪ್ಪಿದ್ದ. ಹೆಂಡತಿಯ ಸಾವು ಇನ್ನೂ ನಿಗೂಢವಾಗಿಯೇ ಉಳಿದಿದೆ.
ವೈಕುಂಠರಾಜು ಅವರು ನನಗೆ ಗುರು .ವಾರಪತ್ರಿಕೆ ಆರಂಭದ ಎರಡು ವರ್ಷಗಳನ್ನು ಬಿಟ್ಟರೆ ನನ್ನ ಅವರ ನಡುವೆ ಸತತ ಸಂಪರ್ಕ ಬಾಂಧವ್ಯವಿತ್ತು. ಸದಾ ಕಛೇರಿಯಲ್ಲಿ ಕುಳಿತ ಅವರಿಗೆ ಅವರ ಅಂಕಣಗಳಿಗೆ ಬೇಕಾದ ಸುದ್ದಿ ಅರುಹುವುದು ನಮ್ಮ ಕೆಲಸವಾಗಿತ್ತು. ಅವರ ಅದೆಷ್ಟೋ ಅಂಕಣಗಳಿಗೆ ಮಾಹಿತಿ ಒದಗಿಸುತ್ತಿದ್ದ ಹೆಗ್ಗಳಿಕೆ ನಮ್ಮದಾಗಿತ್ತು.
ಮಾಮೂಲಿ ಸುದ್ದಿಗಳಿಗೆ ಸೀಮಿತಗೊಳ್ಳದೆ ವಿಶೇಷ ವರದಿಗಳನ್ನು ,ತನಿಖಾ ಲೇಖನಗಳನ್ನು ಬರೆಯಲು ಪ್ರೋತ್ಸಾಹಿಸುತ್ತಿದ್ದರು. ವಾರಪತ್ರಿಕೆಯಲ್ಲಿ ಬೆಂಗಳೂರು ರೇಸ್ ಕ್ಲಬ್ ಅವ್ಯವಹಾರಗಳ ಬಗ್ಗೆಬರೆದ ತನಿಖಾ ಲೇಖನಮಾಲೆಗೆ ವ್ಯಾಪಕ ಪ್ರತಿಕ್ರಿಯೆ ಸಿಕ್ಕಿದ್ದು ಅಲ್ಲದೆ ಇತಿಹಾಸದಲ್ಲಿಯೇ ಪ್ರಥಮಬಾರಿಗೆ ಸರ್ಕಾರ ರೇಸಿಂಗ್ ಕಮೀಷನರ್ ಅನ್ನು ನೇಮಿಸಿ ರೇಸ್ಕ್ಲಬ್ ನ ಅವ್ಯವಹಾರಗಳಿಗೆ ತಡೆಹಾಕಲುಯತ್ನಿಸಿತು.
ಬಿ.ವಿ.ವೈಕುಂಠರಾಜು ಅವರ ಕುರಿತಾದ ಹಿಂದಿನ ಲೇಖನಗಳು:
- ಅಶೋಕ್ ಕುಮಾರ್ (ಪತ್ರಕರ್ತರು, ಕವಿಗಳು, ಲೇಖಕರು)
