ಹೆಣ್ಣು ಭೋಗದ ವಸ್ತು ಅಲ್ಲ ತಮ್ಮ … ನಿನ್ನ ಹೆತ್ತ ತಾಯಿ ಹೆಣ್ಣು, ನಿನ್ನ ಅಕ್ಕ, ತಂಗಿಯೂ ಹೆಣ್ಣು ಅಲ್ಲವೇ? ಎಲ್ಲಾ ಹೆಣ್ಣು ಮಕ್ಕಳೂ ಒಂದೇ ತರಹ ಎಂಬ ಭಾವ ಬೇಡ ಎಂದಳು ಸುನೀತಾ, ಯಾಕೆ ಸುನೀತಾ ಈ ಮಾತನ್ನು ಹೇಳಿದಳು ಕತೆಗಾರ್ತಿ ಶೋಭಾ ನಾರಾಯಣ ಹೆಗಡೆ ಅವರ ‘ಬದಲಾವಣೆ’ ತಪ್ಪದೆ ಮುಂದೆ ಓದಿ…
ಆಫೀಸ್ ಕೆಲಸ ಮುಗಿಸಿ, ಸುನೀತಾ ಮನೆಗೆ ತೆರಳಲು, ಬಸ್ ಸ್ಟ್ಯಾಂಡಿಗೆ ಬಂದು ನಿಂತು ಬಸ್ಸಿಗಾಗಿ ಕಾಯುತ್ತಿದ್ದಳು. ಇನ್ನೂ ಅವಳ ಬಸ್ ಬಂದಿರಲಿಲ್ಲ. ಛೇ ಈ ಬಸ್ ಕಾಯುವುದು ಅಂದರೆ ಬೇಜಾರು. ಒಂದು ಸ್ಕೂಟಿ ಕೊಡಿಸಿ ಅಂತ ಹೇಳಿದರೂ ನನ್ನ ಪತಿರಾಯ ಕೇಳೋಲ್ಲ. ತನ್ನ ಹೆಂಡತಿ ಸುರಕ್ಷತೆಗೆ ಬಸ್ ಒಳ್ಳೆಯದು ಎಂಬ ಭಾವನೆ ಗಂಡ ಅಮಿತ್ ನದು. ಇದು ತನ್ನ ಮೇಲಿನ ಪ್ರೀತಿಯ ಕಾಳಜಿ ಅಲ್ಲವೇ? ಎಂದು ಮನದಲ್ಲೇ ಅಂದುಕೊಂಡಳು. ತನ್ನ ಹಿಂದೇ ಯಾರೋ ಕರೆದ ಹಾಗಾಯಿತು ಸುನೀತಾಳಿಗೆ. ಹಿಂತಿರುಗಿ ನೋಡಿದರೆ ಒಬ್ಬ ಆಜಾನುಬಾಹು ಯುವಕ. ನೋಡಿದ ಕೂಡಲೇ ಭಯ ಬೀಳುವಂತಿದ್ದ. ಹೇಳಬೇಕು ಅಂದರೆ, ಪಕ್ಕಾ ವಿಲನ್ ತರ ಇದ್ದ. ಅವನು ಎವೆ ಇಕ್ಕದೇ ನೋಡುತ್ತಿರುವ ಬಗೆಗೆ, ಸುನೀತಾಳಿಗೆ ಒಂದು ರೀತಿ ಮುಜುಗರವಾಯಿತು. ಸುತ್ತಲೂ ನೋಡಿದಳು. ಯಾರೂ ಇರಲಿಲ್ಲ. ಸ್ವಲ್ಪ ಭಯ ಆಯಿತು. ಉಟ್ಟುಕೊಂಡ ಸೀರೆಯನ್ನು ಒಮ್ಮೆ ನೋಡಿಕೊಂಡಳು. ಎಲ್ಲ ಸರಿ ಇದೇ. ಎಲ್ಲೂ ಮೈ ಕಾಣಿಸುತ್ತಾ ಇಲ್ಲ ಎಂದು ಧೃಡಪಡಿಸಿಕೊಂಡು, ಗಣೇಶನನ್ನು ನೆನೆದುಕೊಂಡಳು. ದೇವರೇ ಗಣೇಶ ನನ್ನ ಕಾಪಾಡು. ಬೇಗ ಬಸ್ ಬರುವ ಹಾಗೇ ಮಾಡು. ನಾಳೆ ನಿನಗೆ ಗರಿಕೆ ಕೊಯ್ದು ಕೊಡುತ್ತೇನೆ ಅಂತ ಕಣ್ಣು ಮುಚ್ಚಿ ಪ್ರಾರ್ಥಿಸಿದಳು. ಆ ಯುವಕ ಸೀಟಿ ಹೊಡೆಯುತ್ತ, ಏನೇನೋ ಹಾಡು ಗುನುಗುತ್ತಲೆ ಇದ್ದ. ಇವಳು ಮತ್ತೆ ಹಿಂತಿರುಗಿ ಆ ಹುಡುಗನನ್ನು ನೋಡುವ ಸಾಹಸ ಮಾಡಲಿಲ್ಲ. ಅಷ್ಟರಲ್ಲಿ ಸುನೀತಾಳ ಬಸ್ ಬಂತು. ಲಗುಬಗೆಯಿಂದ ಬಸ್ ಹತ್ತಿ ಕೂತಳು .
ಇತ್ತ ಮನೆಗೆ ಬಂದ ಸುನೀತಾ , ಸಿಟ್ಟಿನಿಂದ ಗಂಡನ ಬಳಿ ಬಸ್ ಸ್ಟಾಪ್ ಲ್ಲಿ ನಡೆದ ಘಟನೆ ತಿಳಿಸಿದಳು. ಆಗ ಅಮಿತ್ ನಗುತ್ತಾ ಇಷ್ಟಕ್ಕೆ ನೀನು ಹೆದರಿಕೊಂಡರೆ ಹೇಗೆ ? ಸಮಾಜದ ಸುತ್ತ ಮುತ್ತಲು ಒಳ್ಳೆಯವರೇ ಇರುತ್ತಾರ?, ಜೊತೆಗೆ ಕೆಟ್ಟವರೂ ಇರುತ್ತಾರೆ. ನಾವು ಹೇಗೀರುತ್ತೇವೋ , ಹಾಗೇ ನಮ್ಮ ಎದುರುಗಡೆ ಇರುವವರು ಇರುತ್ತಾರೆ. ಭಯಪಡಬೇಡ ಎಂದು ಸಮಾಧಾನ ಪಡಿಸಿದ.
ಹೀಗೆ ಏಳೆಂಟು ದಿನ ಕಳೆಯಿತು. ದಿನವೂ ಸುನೀತಾ ಬಸ್ ಸ್ಟ್ಯಾಂಡ್ ಗೆ ಬರುವುದಕ್ಕೂ , ಆ ಹುಡುಗ ಅಲ್ಲಿ ಬಂದು ಕಾಯುತ್ತಾ ಕುಳಿತಿರುವುದು ಮಾಮೂಲಿ ಆಯಿತು.ಸುನೀತಾ ಕಿಂಚಿತ್ ತಲೆ ಕೆಡಿಸಿಕೊಳ್ಳದೆ ತಾನಾಯಿತು, ತನ್ನ ಕೆಲಸವಾಯಿತೆಂಬಂತೆ ಅವಳ ಪಾಡಿಗೆ ಅವಳು ಇದ್ದು ಬಿಟ್ಟಳು.
ಒಂದು ದಿನ ಸುನೀತಾ, ಮತ್ತೆ ಅವಳ ಗಂಡ ಅಮಿತ್ ಅವರ ಮನೆ ಹತ್ತಿರವೇ ಇರುವ ಚಿಕ್ಕ ಸಿಟಿಗೆ ಹೋದರು. ಏನೋ ಸಾಮಾನು ತೆಗೆದುಕೊಳ್ಳುವ ಸಲುವಾಗಿ ಪರಿಚಯ ಇರುವ ಅಂಗಡಿ ಹೊಕ್ಕರು. ಅಲ್ಲಿ ಅಂಗಡಿ ಓನರ್ ಜೊತೆ ಒಬ್ಬ ಹೆಂಗಸು ಇದ್ದಳು. ನೋಡಿದರೆ ಅವರು ಗಂಡ ಹೆಂಡತಿ ಅನ್ನುವ ಹಾಗೇ ಇತ್ತು,ಅವರ ನಡೆನುಡಿ ಎಲ್ಲಾ. ಸುನೀತಾ ಮತ್ತೆ ಅವಳ ಗಂಡ ಸಾಮಾನು ಖರೀದಿ ಮಾಡಿ ಹೊರಟಾಗ, ಪರಿಚಯ ಇರುವ ಕಾರಣ ಸುನೀತಾ ಬನ್ನಿ ಅಣ್ಣ ನಮ್ಮ ಮನೆಗೆ, ಅಲ್ಲಿದ್ದ ಹೆಂಗಸನ್ನು ತೋರಿಸುತ್ತ , ನಿಮ್ಮ ಮನೆಯವರನ್ನೂ ಜೊತೇಲಿ ಕರೆದುಕೊಂಡು ಅಂದಳು. ಆಗ ಅಮಿತ್ ಸುನೀತಾಳ ತೋಳು ಗಿಂಡಿ ಬಲು ಬೇಗನೇ ಅಂಗಡಿಯಿಂದ ಆಚೆ ಸರಿ ಸುಮಾರು ಎಳೆದುಕೊಂಡೇ ಬಂದ. ‘ಏನ್ರೀ ಇದು , ಈ ತರನ ಗಿಲ್ಲೋದು ಅಬ್ಬಾ ಎಷ್ಟು ನೋವು ಆಯ್ತು ಗೊತ್ತಾ?’ ಅಂತ ಸುನೀತಾ ಮೂತಿ ಉದ್ದ ಮಾಡಿದಾಗ, ‘ಅಯ್ಯೋ ಸುನೀತಾ, ಆ ಹೆಂಗಸು ಅವರ ಹೆಂಡತಿ ಅಲ್ಲ ಅಂದ ಅಮಿತ್. ಅಯ್ಯೋ ಅವರು ಗಂಡ, ಹೆಂಡತಿ ತರ ಇದ್ದಾರಲ್ರಿ, ಅದಕ್ಕೇ ನಾನು ಹಾಗಂದಿದ್ದು’ ಅಂದಳು ಸುನೀತಾ. ಊಹುಂ, ಅವರು ಇಟ್ಟುಕೊಂಡಿದ್ದು. ಹಾಗಂತ ಆ ಹೆಂಗಸಿಗೇನೂ ಕೊರತೆಯಿಲ್ಲ. ಮನೆ, ಮಕ್ಕಳು, ಗಂಡ ಆಸ್ತಿ ಎಲ್ಲವೂ ಇದೆ. ಹೊಟ್ಟೆ ಪಾಡಿಗೆ ಈ ಜೀವನ ಮಾಡುವ ಪರಿಸ್ಥತಿ ಇಲ್ಲ ಅಂತ ಅಮಿತ್ ನುಡಿದಾಗ, ಸುನೀತಾ ಶಿ.. ವ್ಯಾಕ್.. ಅಂದಳು. ಎಲ್ಲವೂ ಇದ್ದು ಇಂತಹ ಹೀನ ಬದುಕು ಬೇಕಾ?ಆ ಗಂಡಸಿಗಾದರೂ ಬುದ್ಧಿ ಬೇಡವೇ? ಸುನೀತಾ ಅಂದಾಗ, ಇಲ್ಲಿ ಇಬ್ಬರಿಗೂ ಬುದ್ಧಿ ಬೇಕು ಸುನೀತಾ. ಅವರವರ ಸಂಸಾರವನ್ನು ಹಾದಿ ಬೀದಿಗೆ ಬಿಟ್ಟು , ಇನ್ಯಾರದ್ದೋ ಸಂಸಾರ ಕಟ್ಟುವ ಇಂತಹ ಮಂದಿಯಿಂದ , ಉತ್ತಮ ನಡತೆ ಉಳ್ಳ ಗಂಡಸು , ಹೆಂಗಸಿಗೂ ನೆಮ್ಮದಿ ಇರದಂತೆ ಆಗಿದೆ. ಇಷ್ಟೇ ಅಲ್ಲ, ಈ ಸಿಟಿಯಲ್ಲಿ ಯಾರು, ಯಾರಿಗೆ ಹೆಂಡತಿ, ಗಂಡ ಅಂತ ಗೊತ್ತಿಲ್ಲ. ಹಾಗಿದೆ ಇಲ್ಲಿನ ಜೀವನ ಅಂತ ಅಮಿತ್ ನುಡಿದಾಗ, ಓ ಅದಕ್ಕೆ ಇರಬೇಕು. ಸಮಾಜದಲ್ಲಿ ಇಂತಹ ಕಲುಷಿತ ವಾತಾವರಣ ಇರುವುದಕ್ಕೆ ಆ ಯುವಕ ತನ್ನನ್ನು ಆ ತರಹವಾಗಿ ಗಮನಿಸುತ್ತಿರುವುದು ಅಂದುಕೊಂಡಳು ಸುನೀತಾ. ಇಂದಿನ ಸೋಶಿಯಲ್ ಮೀಡಿಯಾಗಳಲ್ಲೂ ಕೆಲ ಆಧುನಿಕ ಹೆಣ್ಣು ಮಕ್ಕಳು ಸಭ್ಯತೆ ಮೀರಿ ವರ್ತಿಸುವ ಕಾರಣ, ಇಂತಹ ಗಂಡುಮಕ್ಕಳು ಅಸಭ್ಯ ವರ್ತನೆ ಮಾಡುತ್ತಾರೆ. ಅವರ ದೃಷ್ಟಿಯಲ್ಲಿ ಎಲ್ಲಾ ಹೆಣ್ಣು ಮಕ್ಕಳೂ ಒಂದೇ ಎಂಬ ಭಾವ. ಈಗರ್ಥ ಆಯಿತು ಸುನೀತಾಳಿಗೆ ಆ ರೋಡ್ ರೋಮಿಯಾನ ಕಾಟ ಪಾತ್ರ ಒಂದೇ ಆದರೂ ನೋಟ ಬೇರೆ ಬೇರೆಯೇ. ನಗು ಬಂದಿತು ಅವಳಿಗೆ.
ಮತ್ತೆ ಆ ಸಂಜೆಯೂ ಹೀಗೆ ಆಯಿತು. ಸುನೀತಾ ಬಸ್ಸಿಗೆ ಕಾಯುತ್ತಾ ಇರುವಾಗಲೇ ಆ ಯುವಕ ಮತ್ತೆ ಬಂದು ಸುನೀತಾಳ ಎದುರಿಗೆ ನಿಂತು ಬಿಟ್ಟ. ಇವಳಿಗೊ ಭಯ. ಕಾಲು ಕೈ ಎಲ್ಲ ನಡುಗಿ ಅವಳಲ್ಲಿದ್ದ ಜಂಘಾಬಲವೇ ಉಡುಗಿದಂತಾಯಿತು. ಸುತ್ತಲೂ ನೋಡಿದಳು. ಅಲ್ಲೊಬ್ಬ ತರಕಾರಿ ಮಾರೋ ಹೆಂಗಸು ಕಂಡಳು. ಇವಳು ಅಕ್ಕ ಬನ್ನಿ ಇಲ್ಲಿ ಅಂತ ಕೂಗಿದಳು. ಸುನೀತಾಳ ಕೂಗಿಗೆ ಆ ತರಕಾರಿ ಮಾರುವ ಹೆಂಗಸು ಸುನೀತಾಳ ಹತ್ತಿರ ಬಂದು, ‘ಏನ್ರಕ್ಕ ಏನ್ ತರಕಾರಿ ಕೊಡಲಿ’ ಹೇಳುತ್ತಾ ಬುಟ್ಟಿ ಕೆಳಗಿಳಿಸಿದಳು. ‘ಏನೂ ಬೇಡ ನಂಗೆ, ಇವನು ಇವನು’ ಅಂತ ಪಸೆ ಆರಿದ ನಾಲಿಗೆಯಿಂದ ಮಾತನಾಡಲಾಗದೇ ತೊದಲಿದಳು. ಸುನೀತಾಳ ಮಾತು ಏನೆಂದು ಒಂದಿನಿತೂ ಅರ್ಥವೇ ಆಗಲಿಲ್ಲ ಆ ಹೆಂಗಸಿಗೆ. ಆದರೆ ಆ ಯುವಕನಿಗೆ ತನ್ನನ್ನು ನೋಡಿ ಸುನೀತಾ ಹೆದರಿದ್ದಾಳೆ ಎಂಬುದು ಅರ್ಥವಾಯಿತು. ಅಕ್ಕ ಹೆದರಬೇಡಿ ಅಂದ ಆ ಯುವಕ.ಅವನ ಬಾಯಲ್ಲಿ ಅಕ್ಕ ಅನ್ನುವ ಶಬ್ಧ ಕೇಳಿ ಮರಳಿ ಜೀವ ಬಂದಂತೆ ಆಯಿತು ಸುನೀತಾಳಿಗೆ. ಆಶ್ಚರ್ಯಚಕಿತಳಾಗಿ ಆ ಯುವಕನ ನೋಡಿದಳು. ಕ್ಷಮಿಸಿ ಅಕ್ಕ. ನಿಮ್ಮ ನಡೆ ನುಡಿ ನನ್ನ ಕಣ್ಣು ತೆರೆಸಿತು. ಎಲ್ಲ ಹೆಣ್ಣುಮಕ್ಕಳು ಒಂದೇ ಎಂಬ ಭಾವ ನನ್ನಲ್ಲಿ ಇತ್ತು. ಅದಕ್ಕೇ ಕಾರಣವೂ ಇದೇ.
ಇಂದಿನ ಸೋಶಿಯಲ್ ಮೀಡಿಯಾದಲ್ಲಿ ಆಗಲೀ, ಸಮಾಜದಲ್ಲಿ ಆಗಲೀ, ನನಗೆ ಮರುಳು ಆದವರು ಎಷ್ಟೋ ಲೆಕ್ಕವಿಲ್ಲ. ಪಸ್ಟ್ ಟೈಮ್ ನೀವು ನನ್ನ ಕಣ್ಣು ತೆರೆಸಿದಿರಿ. ನಿಮ್ಮ ನೋಡುತ್ತ, ನೋಡುತ್ತ ನಿಮ್ಮಲ್ಲಿ ನನಗೆ ಪೂಜ್ಯ ಭಾವ ಹುಟ್ಟಿದೆ. ಮನೆಯಲ್ಲಿ ನಿಮ್ಮ ವಯಸ್ಸಿನ ಅಕ್ಕ ಇದ್ದಾಳೆ ನನಗೆ. ಅವಳಿಗೂ ನನ್ನ ತರಹ ಇನ್ಯಾವನೊ ರೋಡ್ ರೋಮಿಯೋ ಇದೇ ತರಹ ಮಾಡಿದರೆ ಎಂಬ ಯೋಚನೆ ನನ್ನ ಇಷ್ಟು ಬದಲಾಯಿಸಿತು. ನನ್ನ ಕೆಟ್ಟ ನೋಟದಿಂದ ನಿಮ್ಮ ಉಡುಗೆ ಸರಿ ಇದೆಯೋ ಇಲ್ಲವೋ ನೋಡಿಕೊಂಡಿರಿ. ಹೆಣ್ಣನ್ನು ನೋಡಿದರೆ ಪೂಜ್ಯ ಭಾವ ಹುಟ್ಟಬೇಕು, ಆ ಪೂಜ್ಯ ಭಾವನೆ ನಿಮ್ಮ ನೋಡಿ ನನ್ನಲ್ಲಿ ಹುಟ್ಟಿತು. ಇಂದಿನಿಂದ ಇನ್ಯಾವ ಹೆಣ್ಣನ್ನೂ ಕಣ್ಣೆತ್ತಿ ನೋಡಲಾರೆ ಅಕ್ಕ. ದಯವಿಟ್ಟು ನನ್ನ ಕ್ಷಮಿಸಿಬಿಡಿ ಎಂದು ಅಳುತ್ತಾ ಸುನೀತಾಳ ಕಾಲಿಗೆ ಬಿದ್ದ ಆ ಯುವಕ. ಅವ್ವಾರ ಕ್ಷಮಿಸಿ ಬಿಡ್ರಿ ಆ ಹುಡುಗನ. ಏನೋ ತಿಳಿದೇ ತಪ್ಪು ಮಾಡಿದ್ದ. ಈಗ ಗೊತ್ತಾಯ್ತಲ್ಲ ಅವ್ನ ತಪ್ಪು ಏನ್ ಅಂತ ಆ ತರಕಾರಿ ಹೆಂಗಸು ಹೇಳಿದಾಗ, ಸುನೀತಾಗೂ ಅದು ಸರಿ ಎನಿಸಿತು .
‘ಎದ್ದೇಳು ತಮ್ಮ. ಒಳ್ಳೆಯದಾಗಲಿ. ಹೆಣ್ಣು ಭೋಗದ ವಸ್ತು ಅಲ್ಲ ತಮ್ಮ … ನಿನ್ನ ಹೆತ್ತ ತಾಯಿ ಹೆಣ್ಣು, ನಿನ್ನ ಅಕ್ಕ, ತಂಗಿಯೂ ಹೆಣ್ಣು ಅಲ್ಲವೇ? ಎಲ್ಲಾ ಹೆಣ್ಣು ಮಕ್ಕಳೂ ಒಂದೇ ತರಹ ಎಂಬ ಭಾವ ಬೇಡ. ಸುಸಂಸ್ಕೃತ ಕೌಟುಂಬಿಕ ವಾತಾವರಣದಲ್ಲಿ ಬೆಳೆದ ಹೆಣ್ಣು ಮಕ್ಕಳು ಒಂದು ಚೌಕಟ್ಟಿನ ಪರಮಾವಧಿಯಲ್ಲೇ ಬದುಕುತ್ತಾರೆ..ಅಂತಹ ಹೆಣ್ಣು ಜೀವಗಳಿಗೆ ಇಂತಹ ಘಟನೆ ಅವರ ಬಾಳಿನಲ್ಲಿ ಕಪ್ಪು ಚುಕ್ಕೆ ಆಗಬಾರದು ಅಲ್ಲವೇ?.ಪಶ್ಚಾತ್ತಾಪದ ಮುಂದೆ ಇನ್ಯಾವ ದೊಡ್ಡ ಶಿಕ್ಷೆಯೂ ಇರದು ಎದ್ದೇಳು’ ಅಂತ ನುಡಿದಳು ಸುನೀತಾ. ಹಾಗೇ ಅಂದು ಗಂಡ ಅಮಿತ್ ನುಡಿದ ಮಾತು ನೆನಪಾಯಿತು ಸುನೀತಾಳಿಗೆ. ನಾವು ಹೇಗೆ ಇರುತ್ತೇವೋ , ಹಾಗೇ ನಮ್ಮ ಎದುರು ಇರುವವರು ಇರುತ್ತಾರೆ. ಅಪವಾದವಾಗಿ ಇಲ್ಲದೆಯೂ ಇರಬಹುದು. ಆದರೆ ನಮ್ಮ ನಡೆ ನುಡಿ, ಮಾನ, ಉಡುಗೆ, ತೊಡುಗೆಯ ಮೇಲೆ ನಮ್ಮ ಗುಣ ನಿಂತಿರುತ್ತದೆ ಎನ್ನುವುದು ಇಂದು ಸಾಭೀತಾಯಿತು ಎಂದು ಮನದಲ್ಲೇ ಅಂದುಕೊಳ್ಳುತ್ತಾ ಬಸ್ ಬರುವ ದಾರಿ ನೋಡುತ್ತಿರುವಾಗ, ಗಂಡ ಅಮಿತ್ ಸ್ಕೂಟಿ ತಗೊಂಡು ಬಂದ. ಸುನೀ ಇವತ್ತು ಮಹಿಳಾ ದಿನಾಚರಣೆ ಅಲ್ಲವೇನೇ?, ಅದಕ್ಕೇ ಹೆಂಡತಿ ಕಷ್ಟ ಪಡುವುದು ಬೇಡ ಅಂತ ಗಾಡಿ ತಗೊಂಡು ಬಂದೆ. ಬಾ ಹತ್ತು ಅಂದ. ಗಂಡನನ್ನು ನೋಡಿ, ಓ ಇವತ್ತು ಮಾತ್ರವೇ? ಅಂತ ರಾಗ ಎಳೆದಾಗ, ಮತ್ತೆ ಇನ್ನು ದಿನಾಲೂ ಬಂದರೆ ಇಂತಹ ಎಷ್ಟೋ ರೋಡ್ ರೋಮಿಯೋಗಳು ನಿನ್ನ ಅಣ್ಣ, ತಮ್ಮರು ಆಗುವುದು ಬೇಡವೇ!… ಎಂದು ಅಮಿತ್ ನಕ್ಕು ಗಾಡಿ ಸ್ಟಾರ್ಟ್ ಮಾಡಿದಾಗ, ರೀ ಹೋಗ್ರೀ ನೀವೊಬ್ಬರು… ಅಂತ ನಗುತ್ತಾ ಗಂಡನ ಬುಜಕ್ಕೇ ಒರಗಿ ಕೂತಳು ಸುನೀತಾ.
- ಶೋಭಾ ನಾರಾಯಣ ಹೆಗಡೆ
