ಪಿಒಕೆ: ಭಾರತಕ್ಕೆ ಸೇರವ ಕಾಲ ಸನ್ನಿಹಿತವೇ…..

ಕಾಶ್ಮೀರದ ಕೆಲವೊಂದು ಪ್ರದೇಶಗಳು ಪಾಕಿಸ್ತಾನದ ವಶಕ್ಕೆ ಹೋದವು. ಅದನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದೇ ಕರೆಯಲಾಗುತ್ತದೆ. ಈ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಆಡಳಿತಾತ್ಮಕ ದೃಷ್ಟಿಯಿಂದ ಪಾಕಿಸ್ತಾನ ಆಜಾದ್ ಕಾಶ್ಮೀರ, ಗಿಲ್ಗಿಟ್-ಬಾಲ್ಟಿಸ್ತಾನ ಎಂದು ವಿಭಜಿಸಿದೆ. ಡಾ.ಗುರುಪ್ರಸಾದ ರಾವ್ ಹವಲ್ದಾರ್ ಅವರ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…

(ಭಾರತದಲ್ಲಿ ಕೇಂದ್ರ ಚುನಾವಣೆ ನಡೆಯುತ್ತಿದೆ, ಪಾಕ್ ಆಕ್ರಮಿತ ಕಾಶ್ಮೀರ ಮತ್ತೆ ಪಡೆದೇ ತೀರುತ್ತೇವೆ ಎಂಬ ಉದ್ಘೋಷಗಳು ಮೊಳಗುತ್ತಿವೆ ಅತ್ತ ಪಿಒಕೆಯಲ್ಲಿ ಜನರು ಪಾಕ್ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ ಈ ವಿಷಯದ ಕುರಿತ ಚರ್ಚೆ ಈ ಲೇಖನದಲ್ಲಿ)

ಭಾರತದಲ್ಲಿ ಪ್ರಜಾಪ್ರಭುತ್ವದ ಹಬ್ಬ ನಡೆಯುತ್ತಿದ್ದರೆ ,ಇತ್ತ ಮೊಗ್ಗಲಮುಳ್ಳುಯಾಗಿ ಕಾಡುತ್ತಿರುವ, ಕಳೆದೆರಡು ವರ್ಷಗಳಿಂದ ಪಾಕಿಸ್ಥಾನ ಆರ್ಥಿಕವಾಗಿ ಸಂಪೂರ್ಣವಾಗಿ ಜರ್ಝರಿತವಾಗಿ ಜಗತ್ತಿನಾದ್ಯಂತ ಭಿಕ್ಷಾ ಪಾತ್ರೆಯನ್ನು ಹಿಡಿದು ಅಂಗಲಾಚುತ್ತಿರುವ ಹೊತ್ತಿನಲ್ಲಿ ಮತ್ತೊಂದು ಕಂಟಕ ಎದುರಾಗಿದೆ, ಭಾರತದ ಮುಕುಟವಾದ ಕಾಶ್ಮೀರ ಕಣಿವೆಯ ಅರ್ಧಭಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡು ಅಲ್ಲಿನ ಜನರ ಬದುಕನ್ನೇ ನರಕವನ್ನಾಗಿ ವಿಜೃಂಭಿಸುತ್ತಿದ್ದ ಪಾಕಿಸ್ತಾನಕ್ಕೆ ಜನರೇ ಭಾರತದ ಭಾಗವಾಗಲು ಇಲ್ಲವೇ ಸ್ವತಂತ್ರ ದೇಶವಾಗಲು
ಉಗ್ರ ಹೋರಾಟಕ್ಕೆ ಇಳಿದಿದ್ದಾರೆ ಜೊತೆಗೆ ಈ ಬಂಧನದಿಂದ ಮುಕ್ತ ವಾಗಲು ಭಾರತ ಸರ್ಕಾರದ ಸಹಾಯಕ್ಕಾಗಿ ಆಸೆಗಣ್ಣಿನಿಂದ ನೋಡುತ್ತಿದ್ದಾರೆ.

ಪಾಕಿಸ್ತಾನದಲ್ಲಿ ತಿಂಗಳುಗಳ ಹಿಂದೆ ನಡೆದ ಚುನಾವಣೆಯಲ್ಲೂ ಅತಂತ್ರ ಸ್ಥಿತಿ ನಿಮಾಣವಾಗಿತ್ತಾದರೂ ಪಿಎಂಎಲ್-ಎನ್ ಮತ್ತು ಪಿಪಿಪಿ ಮೈತ್ರಿಕೂಟ ಸರಕಾರ ರಚಿಸಿತ್ತು. ಆದರೆ ಸ್ಥಿರ ವಿಲ್ಲದ ಮೈತ್ರಿ ಸರಕಾರ ಎಂಬಂತಾಗಿದ್ದು, ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಂದ ಜನತೆಯನ್ನು ಪಾರು ಮಾಡಲು ಹರಸಾಹಸ ಪಡುತ್ತಿದೆ. ದೇಶದ ಮುಖ್ಯ ಆಹಾರ ಧಾನ್ಯವಾದ ಗೋಧಿಯ ಅಭಾವ ತೀವ್ರವಾಗಿದ್ದು ಜನರು ಒಂದು ಹೊತ್ತಿನ ಊಟಕ್ಕೂ ಪ್ರಯಾಸ ಪಡುವಂತಾಗಿದೆ.ಜನರು ಬೆಲೆ ಏರಿಕೆಯಿಂದ ಹೈರಾಣಾಗಿದ್ದಾರೆ. ಅದರೆ ಪಿಒಕೆ( ಪಾಕ್ ಆಕ್ರಮಿತ ಕಾಶ್ಮೀರ)ಯಲ್ಲಿ – ಪಾಕಿಸ್ತಾನ ಸರ್ಕಾರ ಅನುಸರಿಸುತ್ತಿರುವ ತಾರತಮ್ಯ ನೀತಿ ಕೊನೆಯಾಗಬೇಕು. ಕೆಲವೇ ವರ್ಗದವರಿಗೆ ಮೀಸಲಾಗಿರುವ ವಿಶೇಷ ಸವಲತ್ತುಗಳನ್ನು ರದ್ದು ಪಡಿಸಬೇಕು ಎಂದು ಪಿಒಕೆ ಜನ ಬೇಡಿಕೆಯಿಟ್ಟಿದ್ದಾರೆ. ಅಲ್ಲದೆ, ಇಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ತಲುಪಿದ್ದು ಹಣದುಬ್ಬರ ನಿಯಂತ್ರಿಸಲು ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಜನ ತಿರುಗಿಬಿದ್ದಿದ್ದಾರೆ. ಈ ದುರವಸ್ಥೆಗೆ ಪಾಕಿಸ್ತಾನದ ಸೇನೆ, ಸರ್ಕಾರವೇ ಕಾರಣ ಎಂದು ದೂರುತ್ತಿರುವ ಜನರು ಭಾರತಕ್ಕೆ ಸೇರ್ಪಡೆ ಮಾಡುವಂತೆ ರಸ್ತೆ ರಸ್ತೆಗಳಲ್ಲಿ ಘೋಷಣೆ ಕೂಗುತ್ತಿದ್ದಾರೆ.

ಪಿಒಕೆಯ ಮೂಲೆಮೂಲೆಯಲ್ಲಿ ಪಾಕಿಸ್ತಾನಿ ವಿರೋಧಿ ಹೋರಾಟ ತಾರಕಕ್ಕೇರುತ್ತಿದೆ. ಇದರಿಂದ ಅಂತಾರಾಷ್ಟ್ರೀಯ ಮುಜುಗರಕ್ಕೀಡಾಗುತ್ತಿರುವ ಪಾಕಿಸ್ತಾನ ಪ್ರತಿಭಟನಾಕಾರರನ್ನು ಬಂಧಿಸಿ ಜೈಲಿಗಟ್ಟುತ್ತಿದೆ. ಬೀದಿಗಿಳಿದ ಜನರನ್ನು ಹಿಂದಿರುಗಿಸಲು ಪೊಲೀಸರು ಎಕೆ 47 ಬಳಸಿ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಪಿಒಕೆಯ ಬಹುತೇಕ ಪ್ರದೇಶದಲ್ಲಿ ಮೊಬೈಲ್ ಹಾಗೂ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಜೊತೆಯಲ್ಲಿ ಸರ್ಕಾರಿ ಕಚೇರಿಗಳು, ಮಾರುಕಟ್ಟೆಗಳು, ಅಂಗಡಿ – ಮುಂಗಟ್ಟುಗಳು ಹಾಗೂ ಶಿಕ್ಷಣ ಸಂಸ್ಥೆಗಳು ಬಂದ್ ಆಗಿವೆ. ಜನ ದಂಗೆಯೆದ್ದಿದ್ದು ಪಾಕಿಸ್ತಾನಕ್ಕೆ ಪರಿಸ್ಥಿತಿ ನಿಭಾಯಿಸಲು ಹರಸಾಹಸ ಪಡುತ್ತಿದೆ.

ಪಿಒಕೆ ಅಂದರೇನು?

ಇಂದಿನ ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಸ್ವಾತಂತ್ರ್ಯ ಪೂರ್ವದಲ್ಲಿ ಜಮ್ಮು-ಕಾಶ್ಮೀರ ರಾಜರ ಆಳ್ವಿಕೆಯಲ್ಲಿತ್ತು. 1947ರಲ್ಲಿ ಭಾರತ ಸ್ವತಂತ್ರಗೊಂಡ ಬಳಿಕ ಪಾಕಿಸ್ತಾನ-ಭಾರತ ವಿಭಜನೆಯಾದಾಗ, ಜಮ್ಮು-ಕಾಶ್ಮೀರದ ಮಹಾರಾಜ ಹರಿಸಿಂಗ್ ಅವರು ಭಾರತದ ಒಕ್ಕೂಟ ಸೇರುವ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ಈ ಪ್ರಕಾರ, ಸ್ವಾಭಾವಿಕ ಪಾಕಿಸ್ತಾನದ ಆಕ್ರಮಿತ ಕಾಶ್ಮೀರ ಸ್ವಾಭಾವಿಕವಾಗಿ ಭಾರತದ ಭಾಗವಾಗಬೇಕಿತ್ತು. ಆದರೆ, ಕಾಶ್ಮೀರದ ಕೆಲವೊಂದು ಪ್ರದೇಶಗಳು ಪಾಕಿಸ್ತಾನದ ವಶಕ್ಕೆ ಹೋದವು. ಅದನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದೇ ಕರೆಯಲಾಗುತ್ತದೆ. ಈ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಆಡಳಿತಾತ್ಮಕ ದೃಷ್ಟಿಯಿಂದ ಪಾಕಿಸ್ತಾನ ಆಜಾದ್ ಕಾಶ್ಮೀರ, ಗಿಲ್ಗಿಟ್-ಬಾಲ್ಟಿಸ್ತಾನ ಎಂದು ವಿಭಜಿಸಿದೆ.

1974ರಲ್ಲಿ ರೂಪುಗೊಂಡ ಆಜಾದ್ ಕಾಶೀರ ಮಧ್ಯಂತರ ಸಂವಿಧಾನ ಕಾಯ್ದೆಯಡಿಯೇ ಆಜಾದ್ ಕಾಶ್ಮೀರದಲ್ಲಿ ಆಳ್ವಿಕೆ ನಡೆಯುತ್ತಿದೆ. ಅಲ್ಲದೆ, ಪ್ರಧಾನಿ, ಅಧ್ಯಕ್ಷ, ಸಚಿವರಿದ್ದರೂ ಆಡಳಿತ ಮಾತ್ರ ಇವರ ಕೈಯಲಿಲ್ಲ. ಆಜಾದ್ ಕಾಶ್ಮೀರದ ಆಡಳಿತವನ್ನು ಪಾಕಿಸ್ತಾನವೇ ನಿರ್ವಹಿಸುತ್ತದೆ. ಇನ್ನು ಕರಾಚಿ ಒಪ್ಪಂದದ ಪ್ರಕಾರ ಗಿಲ್ಗಿಟ್-ಬಾಲ್ಟಿಸ್ತಾನದ ಆಡಳಿತ ನಡೆಯುತ್ತಿದೆ,
ಮೀರ್ಪರ್, ಬಿಂಬರ್, ಕೋಟ್ಲಿ, ಮುಜಫರಾ ಬಾದ್, ಬಾಗ್, ನೀಲಂ, ರಾವಲಕೋಟ್, ಸುಧಾನೋತಿ ಆಜಾದ್ ಕಾಶ್ಮೀರದ ಜಿಲ್ಲೆಗಳು.

ಚೀನಾಗೆ ಹಸ್ತಾಂತರ: ಪಾಕ್ ಆಕ್ರಮಿತ ಕಾಶ್ಮೀರದ ಹುಂಜಾ- ಗಿಲ್ಗಿಟ್, ಶಕ್ಸಗಾಮ್ ರಕ್ಸಾಮ್ ಬಾಲ್ಟಿಸ್ತಾನ ಪ್ರದೇಶವನ್ನು ಬೀಜಿಂಗ್ ಮತ್ತು ಇಸ್ಲಾಮಾಬಾದ್ ನಡುವಿನ 1963 ರ ಗಡಿ ಒಪ್ಪಂದವನ್ನು ಅಲ್ಲಿ ಪಾಕಿಸ್ತಾನವು ಸುಮಾರು 5,000 ಕಿಮೀ ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿತು.

ಅಲ್ಲದೇ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ಈ ಯೋಜನೆಯ ಕಾಮಗಾರಿಗೆ ಸ್ಥಳೀಯರು ವಿರೋಧಿಸುತ್ತಿದ್ದಾರೆ, ನಮಗೆ ಯಾವುದೇ ಉದ್ಯೋಗಾವಕಾಶಗಳು ಸಿಗುತ್ತಿಲ್ಲವೆಂದು, ಮತ್ತು ಈ ಯೋಜನೆಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಪಿಒಕೆ ತನಗೆ ಸೇರಿದ್ದರಿಂಧ ತನ್ನ ಸಾರ್ವಭೌಮತೆಗೆ ಧಕ್ಕೆ ಬರಲಿದೆ. ಅಲ್ಲದೇ ಈ ಯೋಜನೆ ರೂಪಿಸುವ ವೇಳೆ ಚೀನಾ ತನ್ನ ಅನುಮತಿ ಪಡೆದಿಲ್ಲ ಎಂಬುದು ಭಾರತದ ತಕರಾರಾಗಿದೆ. ಇದರ ಜೊತೆಗೆ ಈಗ ಪಿಒಕೆ ಜಿಲ್ಲೆಗಳಿಗಿಂತ ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ ಭಾರತ ಪರ ನಿಲುವು ದಿನೇ ದಿನೆ ಹೆಚ್ಚಾಗುತ್ತಿದೆ.

ಜನ ಪಾಕಿಸ್ತಾನ ವಿರುದ್ಧ ತಿರುಗಿ ಬೀಳಲು ಕಾರಣ : ಪಿಒಕೆ ಜಿಲ್ಲೆಗಳಲ್ಲಿ ಮೂಲಸೌಕರ್ಯ ಇಲ್ಲ. ಕುಡಿಯುವ ನೀರು, ರಸ್ತೆ ಸೌಲಭ್ಯ ಇಲ್ಲ ,ಬಡತನದಿಂದ ಜನರು ಬೇಸತ್ತಿದ್ದಾರೆ.ಇತ್ತೀಚೆಗೆ ಹಣದುಬ್ಬರ ಹೆಚ್ಚಾಗುತ್ತಿದೆ. ಒಂದು ಹೊತ್ತಿನ ಊಟಕ್ಕೂ ಕಷ್ಟ ಜೊತೆಗೆ ಬೆಲೆ ಏರಿಕೆ ಬಿಸಿ

1 ಗ್ಯಾಸ್ ಸಿಲಿಂಡರ್ 12,500 ರೂ.
1 ಕೆಜಿ ಗೋಧಿ ಹಿಟ್ಟು 800 ರೂ.
ಲೀಟರ್ ಹಾಲಿನ ದರ 210 ರೂ.
1 ಜಿಬಿ ಇಂಟರ್ನೆಟ್ 1500 ರೂ.
1 ಕೆಜಿ ಚಿಕನ್ ಕೆಜಿಗೆ 1000 ರೂ.
1 ಕೆಜಿ ಬಾಳೆಹಣ್ಣು 200 ರೂ.

ಇವೆಲ್ಲದರಿಂದ ಬೇಸತ್ತಿರುವ ಪಿಒಕೆಯ ಜನರು ಬೀದಿಗಿಳಿದಿದ್ದಾರೆ.

ಅವಾಮಿ ಕ್ರಿಯಾ ಸಮಿತಿಯು ಪಿಒಕೆಯ ಮುಜಫರಾಬಾದ್ಗೆ ಶಾಂತಿಯುತ ಮೆರವಣಿಗೆಗಳನ್ನು ನಡೆಸಿತು, ವಿದ್ಯುತ್ ಬಿಲ್ಗಳ ಮೇಲೆ ವಿಧಿಸಲಾದ “ಅನ್ಯಾಯ” ತೆರಿಗೆಗಳ ವಿರುದ್ಧ ಪ್ರತಿಭಟಿಸಿತು. ಇದು ಹಣದುಬ್ಬರ ಗಗನಕ್ಕೇರಲು ಕಾರಣವಾಯಿತು. ಇಸ್ಲಾಂ ಗಢ್ ಬಳಿ ಪ್ರತಿಭಟನಾಕಾರರು ಮತ್ತು ಪೊಲೀಸರು ಘರ್ಷಣೆ ಮಾಡಿದಾಗ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದವು.

ಎಎಸಿ ಮುಜಫರಾಬಾದ್ನಲ್ಲಿ ಪ್ರತಿಭಟನೆಗೆ ಕರೆ ನೀಡಿತು. ಇದು ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತು. ಮೆರವಣಿಗೆಯನ್ನು ತಡೆಯಲು ಪೊಲೀಸರು ನಗರಕ್ಕೆ ಹೋಗುವ ರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೇಡ್ಗಳನ್ನು ಹಾಕಿದರು. ಇದು ಘರ್ಷಣೆಗೆ ಕಾರಣವಾಯಿತು.

ಪಿಒಕೆ ಜನತೆ ಭಾರತದೊಂದಿಗೆ ವಿಲೀನಗೊಳಿಸುವಂತೆ ಬೇಡಿಕೆ ಮತ್ತು ಪರಿಸ್ಥಿತಿ ಕೈಮೀರುತ್ತಿದ್ದರಿಂದ ಇಸ್ಲಾಮಾಬಾದ್ನಲ್ಲಿ ದಿಢೀರ್ ಸಭೆ ನಡೆಸಿದ ಪಾಕ್ ಪ್ರಧಾನಿ ಷರೀಫ್ 23 ಬಿಲಿಯನ್ ಡಾಲರ್ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಈ ಸಭೆಯಲ್ಲಿ ಪಿಒಕೆಯ ಪ್ರಧಾನಿ ಚೌಧರಿ ಅನ್ವರುಲ್ ಹಕ್ ಕೂಡ ಭಾಗವಹಿಸಿದ್ದರು. ಸಭೆ ಬಳಿಕ ಪಿಒಕೆ ಪ್ರಧಾನಿ ಹಕ್ ಆಹಾರ ಉತ್ಪನ್ನಗಳ ಹಾಗೂ ವಿದ್ಯುತ್ನ ಬೆಲೆ ಇಳಿಕೆ ಮಾಡಿರುವ ಬಗ್ಗೆ ಪ್ರಕಟಿಸಿದರು.

ಆದರೆ ಸರಕಾರದ ಈ ಭರವಸೆಗೆ ಸೊಪ್ಪು ಹಾಕದ ಪಿಒಕೆ ಜನರು ಮಂಗಳವಾರ ತಮ್ಮ ಪ್ರತಿಭಟನೆಯನ್ನು ತೀವ್ರ ಗೊಳಿಸಿದ್ದಾರೆ. ಪಾಕಿಸ್ಥಾನ ಸರಕಾರದ ಬಲ ಪ್ರಯೋಗಕ್ಕೂ ಜಗ್ಗದ ಜನರು, ಯೋಧರ ಬಂದೂಕಿಗೆ ಎದೆಯೊಡ್ಡಿ ತಮ್ಮ ಹೋರಾಟವನ್ನು ತೀವ್ರಗೊಳಿಸಿತ್ತು. ಅವಾಮಿ ಕ್ರಿಯಾ ಸಮಿತಿಯು ಪಿಒಕೆಯ ಮುಜಫರಾಬಾದ್ಗೆ ಶಾಂತಿಯುತ ಮೆರವಣಿಗೆಗಳನ್ನು ಶುಕ್ರವಾರ ನಡೆಸಿತು, ವಿದ್ಯುತ್ ಬಿಲ್ಗಳ ಮೇಲೆ ವಿಧಿಸಲಾದ “ಅನ್ಯಾಯ” ತೆರಿಗೆಗಳ ವಿರುದ್ಧ ಪ್ರತಿಭಟಿಸಿತು. ಇದು ಹಣದುಬ್ಬರ ಗಗನಕ್ಕೇರಲು ಕಾರಣವಾಯಿತು. ಇಸ್ಲಾಂ ಗಢ್ ಬಳಿ ಪ್ರತಿಭಟನಾಕಾರರು ಮತ್ತು ಪೊಲೀಸರು ಘರ್ಷಣೆ ಮಾಡಿದಾಗ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದವು.

ಪ್ರತಿಭಟನೆಗೆ ಕರೆ ನೀಡಿರುವ ಅವಾಮಿ ಕ್ರಿಯಾ ಸಮಿತಿಯು, ಮಂಗ್ಲಾ ಅಣೆಕಟ್ಟೆಯಿಂದ ತೆರಿಗೆ ರಹಿಯ ವಿದ್ಯುತ್ ಪೂರೈಕೆ, ಗೋದಿ ಹಿಟ್ಟಿನ ಮೇಲೆ ಸಬ್ಸಿಡಿಗೆ ಪಟ್ಟು ಹಿಡಿದಿದೆ.
ದಾದ್ಯಾಲ್, ಮೀರ್ಪುರ, ಸಮಾಹ್ನಿ, ಸೆಹನ್ಸಾ, ರಾವಲ್ಕೋಟ್, ಖುಯಿರಟ್ಟಾ, ತಟ್ಟಪಾನಿ ಮತ್ತು ಹತ್ತೈನ್ ಬಾಲಾ ಸೇರಿದಂತೆ ಪಾಕ್ ಆಕ್ರಮಿತ ಕಾಶ್ಮೀರದ ಅನೇಕ ಭಾಗಗಳಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆಗಳು ನಡೆದಿವೆ. ಮುಜಫ್ಫರಾಬಾದ್ನಲ್ಲಿ ಕರೆ ನೀಡಿದ್ದ ಮುಷ್ಕರಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಅಂಗಡಿ ಬಾಗಿಲುಗಳನ್ನು ಮುಚ್ಚಿದ ವ್ಯಾಪಾರಿಗಳು, ರಸ್ತೆಗಳ ನಡುವೆ ವಾಹನಗಳನ್ನು ನಿಲ್ಲಿಸಿ ವೀಲ್ ಜಾಮ್ ಸ್ಟ್ರೈಕ್ ನಡೆಸಿದರು. ಇಲ್ಲಿ ಪ್ರತಿಭಟನಾಕಾರರನ್ನು ಚೆದುರಿಸಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಸಿಡಿಸಿದರು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿ ಮೂರು ನಾಗರಿಕರ ಸಾವಿಗೆ ಕಾರಣವಾಗಿದೆ.

ಫೋಟೋ ಕೃಪೆ : google

ಭಾರತ ಸರ್ಕಾರದ ಸಹಾಯ ಹಸ್ತ ಚಾಚುತ್ತಿರುವ ಪಿಒಕೆ ಜನರು-

ಪಾಕಿಸ್ತಾನಿ ಪಡೆಗಳು ನಿರಾಯುಧ ನಾಗರಿಕರ ಮೇಲೆ ಗುಂಡು ಹಾರಿಸಿದ್ದು ಘರ್ಷಣೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ . ಪಿಒಕೆ ಅವಾಮಿ ಕ್ರಿಯಾ ಸಮಿತಿ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಅವರು ಭಾರತ ಸರ್ಕಾರದ ಮಧ್ಯಪ್ರವೇಶಕ್ಕೆ ಕರೆ ನೀಡಿದ್ದು, ಪರಿಸ್ಥಿತಿ ಕೈ ಮೀರುತ್ತಿದೆ. ಕೇಂದ್ರವು ದೂರ ಉಳಿಯಲು ಸಾಧ್ಯವಿಲ್ಲ,. ಭಾರತವು ಈಗ ತನ್ನೆಲ್ಲ ಗಮನವನ್ನು ಪಾಕಿಸ್ತಾನಿ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಮೇಲೆ ಕೇಂದ್ರೀಕರಿಸಬೇಕು ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಸೇರಿದಂತೆ ಈ ಆಕ್ರಮಿತ ಪ್ರದೇಶದ ಸ್ವಾತಂತ್ರ್ಯಕ್ಕೆ ಸಹಾಯ ಮಾಡಬೇಕು .ಇದೇ ಸಮಿತಿಯು 2023ರ ಆಗಸ್ಟ್ನಲ್ಲಿ ಕೂಡ ಇದೇ ರೀತಿಯ ಪ್ರತಿಭಟನೆ ಆಯೋಜಿಸಿತ್ತು

ಮುಜಫ್ಫರಬಾದ್ನಲ್ಲಿ ಪಾಕಿಸ್ತಾನ ರೇಂಜರ್ಸ್ ಮತ್ತು ಫ್ರಂಟೀಯರ್ ಕಾರ್ಪ್ಸ್ನ ಹೆಚ್ಚುವರಿ ಪಡೆಗಳನ್ನು ನಿಯೋಜಿಸುವ ಹಾಗೂ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಉದ್ದೇಶಿತ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿತ್ತು. ಆದರೆ ಅದು ಕೈಗೂಡಿಲ್ಲ. ಪಿಒಕೆ ಯಾವಾಗಲೂ ಭಾರತದ ಭಾಗವಾಗಿದೆ ಎಂದು ಒತ್ತಿಹೇಳುತ್ತಾ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು, ಸ್ವಾತಂತ್ರ್ಯದ ನಂತರ ಪಾಕಿಸ್ತಾನವು ಈ ಪ್ರದೇಶವನ್ನು ಖಾಲಿ ಮಾಡುವುದನ್ನು ಹಿಂದಿನ ಸರ್ಕಾರಗಳು ಖಚಿತಪಡಿಸಿಕೊಳ್ಳದ ಕಾರಣ ವ್ಯವಹಾರಗಳ ಅತ್ಯಂತ ವಿಷಾದಕರ ಸ್ಥಿತಿ ಮುಂದುವರೆದಿದೆ ಎಂದು ಹೇಳಿದ್ದರು.

ಪಿಒಕೆಯಲ್ಲಿ ಪ್ರತಿಭಟನೆ ಆರಂಭವಾದ ಸಂದರ್ಭದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಲು ಭಾರತವು ಸೇನಾ ಬಲ ಪ್ರಯೋಗಿಸುವ ಅಗತ್ಯವಿಲ್ಲ. ಅಲ್ಲಿನ ಜನರೇ ಭಾರತದ ಜತೆ ಸೇರಬೇಕು ಎಂದು ಒತ್ತಾಯಿಸಲಿದ್ದಾರೆ ಎಂಬುದಾಗಿ ಇತ್ತೀಚೆಗಷ್ಟೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿಕೆ ನೀಡಿದ್ದರು.

ಪರಮಾಣು ಬಾಂಬ್ ಹೊಂದಿರುವ ಪಾಕಿಸ್ತಾನವನ್ನು ಗೌರವಿಸುವಂತೆ ಮಣಿಶಂಕರ್ ಅಯ್ಯರ್ ನಮಗೆ ಹೇಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ಪಾಕಿಸ್ತಾನದ ಬಳಿ ಪರಮಾಣು ಬಾಂಬ್ ಇರುವುದರಿಂದ ಪಿಒಕೆ ಬಗ್ಗೆ ಮಾತನಾಡಬೇಡಿ ಎಂದು ಎನ್ಡಿಎ ನಾಯಕ ಫಾರೂಕ್ ಅಬ್ದುಲ್ಲಾ ಹೇಳಿದ್ದರು. ಪಿಒಕೆ ಭಾರತಕ್ಕೆ ಸೇರಿದ್ದು ಅದರ ಪ್ರತಿ ಇಂಚು ಭಾರತಕ್ಕೆ ಸೇರಿದೆ ಮತ್ತು ಯಾವುದೇ ಶಕ್ತಿ ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅಮಿತ್ ಷಾ, ಪ್ರತಿಪಾದಿಸಿದ್ದು, ಮತ್ತು ಭಾರತದ ಕೆಲವು ರಾಜಕೀಯ ಪಕ್ಷಗಳ ನಾಯಕರುಗಳು ಇದೇ ವಿಷಯದ ಬಗ್ಗೆ ಪರಸ್ಪರ ಕೆಸರಾಟದಲ್ಲಿ ಚುನಾವಣಾ ವಿಷಯವನ್ನಾಗಿ ಮಾಡಿ ಕೊಂಡು ಮತದಾರರ ಒಲೈಕೆ ನಿಂತರು.

ಪ್ರಪಂಚದಾದ್ಯಂತ ಪಿಒಕೆ ಜನರು, ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯನ್ನು ದೊಣ್ಣೆಯಿಂದ ಥಳಿಸಿ, ಅವರನ್ನು ಬೆನ್ನಟ್ಟಿ ಓಡಿಸುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಕಾಣಿಸಿದ್ದು ಅಲ್ಲಿಯ ಜನರ ಆಕ್ರೋಶ ಎಂತಹದ್ದು ಎಂಬುದು ಗಮನ ಸೆಳೆಯುಂತೆ ಮಾಡಿದರು. ಒಟ್ಟಿನಲ್ಲಿ ಅದಷ್ಟು ಬೇಗ ಭಾರತದೊಂದಿಗೆ ಪಿಒಕೆ ಸೇರಲಿ ಎಂಬುದು ಪ್ರತಿಯೊಬ್ಬ ಭಾರತೀಯರ ಕನಸು ಆಗಿದೆ.


  • ಡಾ.ಗುರುಪ್ರಸಾದ ರಾವ್ ಹವಲ್ದಾರ್ – ಪತ್ರಕರ್ತರು, ವಿಜಯನಗರ ಜಿಲ್ಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW