ಮಕ್ಕಳಿಗಾಗಿ ಪ್ರತ್ಯೇಕ ಕೋಣೆಗಳನ್ನು ಮಾಡಬೇಡಿ…ಮಕ್ಕಳ ಬಾಲ್ಯಾವಸ್ಥೆಯನ್ನು ಪರಿಪೂರ್ಣ ಅನುಭವಿಸಿ, ಸಂತೋಷಪಡಿ. ಮಕ್ಕಳು ಬೆಳೆದ ಮೇಲೆ ಅವರ ದಾರಿ ಅವರೇ
ಆಯ್ದುಕೊಳ್ಳುತ್ತಾರೆ, ತಪ್ಪದೆ ಮುಂದೆ ಓದಿ…
ಸ್ನೇಹಿತೆಯೊಬ್ಬಳು ಲಂಡನ್ ನಲ್ಲಿ ಹತ್ತು ವರ್ಷ ಇದ್ದು ಭಾರತಕ್ಕೆ ವಾಪಾಸ್ ಬಂದಳು. ಬಂದ್ಮೇಲೆ ದೊಡ್ಡದೊಂದು ಮನೆ ಮಾಡಿದಳು. ಮನೆಗೆ ತಕ್ಕಂತೆ ಸಾಮಾನು ಖರೀದಿಸಿ, ಮನೆ ಜೋಡಿಸುತ್ತಿದ್ದಳು . ಸ್ನೇಹಿತೆ ಎಂದ ಮೇಲೆ ಅವಳ ಮನೆಯೊಳಗೆ ನಾನು ಹೋಗಿ ಇಣುಕಲಿಲ್ಲ ಅಂದ್ರೆ ಹೇಗೆ ಅಲ್ವಾ. ಸುಮ್ನೆ ಹೋದ್ರೆ ಯಾಕೆ ಬಂದ್ಲು ಅನ್ಕೋತ್ತಾಳೆ ಅಂತ ಏನಾದ್ರೂ ಸಹಾಯ ಬೇಕಿತ್ತಾ?… ಎನ್ನುವ ನೆಪ ಮಾಡಿಕೊಂಡು ಮನೆಯೊಳಗೆ ನುಗ್ಗಿದೆ.
ಆದರೆ ಅಷ್ಟೋತ್ತಿಗಾಗಲೇ ಬಹುತೇಕ ಎಲ್ಲ ಸಾಮಾನುಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದಳು. ಸದ್ಯ ಯಾವ ಕೆಲಸವೂ ಮೈಮೇಲೆ ಬೀಳಲಿಲ್ಲ ಮನಸ್ಸಲ್ಲೇ ಅಂದುಕೊಂಡು “ಮೊದಲೇ ಹೇಳಿದ್ರೆ ನಾನು ಹೆಲ್ಪ್ ಮಾಡ್ತಿದ್ದೆ. ಒಬ್ಬಳೇ ಯಾಕೆ ಮಾಡಿದೆ” ಒಂದು ಮಾತು ಇರಲಿ ಅಂತ ಹೇಳಿ ಸುಮ್ನಾದೆ. ಆಕೆಗೂ ಗೊತ್ತಾಗಿತ್ತು, ಇವಳು ಚನ್ನಾಗಿ ಊದ್ತಾ ಇದ್ದಾಳೆ ಅಂತ. ನಗುತ್ತಲೇ “ಪರವಾಗಿಲ್ಲ, ಥ್ಯಾಂಕ್ಸ್… ಕಿಡ್ಸ್ ರೂಮ್ ಒಂದೇ ಬಾಕಿ ಇದೆ. ಮಗನಿಗೆ ಹೊಸದೊಂದು ಮಂಚ ತಗೋಬೇಕು”… ಎಂದಳು.
ಆರು ವರ್ಷದ ಚಿಕ್ಕ ಮಗುಗೆ ಪ್ರತ್ಯೇಕ ರೂಮಾ!… ನಿನ್ನ ಮಗ ಅವನು. ಜೊತೆಗೆ ಮಲಗಸ್ಕೊಳ್ಳೋದಲ್ವಾ”… ಸಹಜವಾಗಿಯೇ ಕೇಳಿದೆ.
ಆಕೆ ವಾಪಾಸ್ ಜೋರಾಗಿ ಬೈಯದೆ ಶಾಲನಲ್ಲಿ ಹೊಡೆಯುವ ತರ “ನಮ್ಮ ದೇಶದ ಪೇರೆಂಟ್ಸ್ ಮಕ್ಕಳನ್ನ ಸರಿಯಾಗಿ ಬೆಳಿಸೋದೇ ಇಲ್ಲಾ. ಮಕ್ಕಳು ಮದುವೆ ವಯಸ್ಸಿಗೆ ಬಂದ್ರೂ ಪಕ್ಕದಲ್ಲಿ ಹಾಕೊಂಡು ಮಲ್ಕೋತ್ತಾರೆ” ಎಂದಾಗ ಯಾಕೋ ಈ ಮಾತು ನಂಗೆ ಕೊಡ್ತಾ ಇರೋ ತರ ಇದೆ ಅನಸ್ತು. ಯಾಕೆಂದರೆ ನನ್ನ ಮಕ್ಕಳು ಹದಿನಾಲ್ಕು ವರ್ಷದವರಾದ್ರೂ ಪಕ್ಕದಲ್ಲೇ ಹಾಕೊಂಡು ಮಲ್ಕೋ ಜೀವ ನನ್ನ ಹಾಗೂ ನನ್ನ ಗಂಡನದು. ಆದ್ರೂ ಒಂದು ಮಾತು ಕೇಳಿದೆ “ಅಷ್ಟು ಚಿಕ್ಕ ಮಗುವನ್ನು ಒಂಟಿಯಾಗಿ ರೂಮ್ ನಲ್ಲಿ ಮಲಸಿದ್ರೆ ನಿನಗೆ ಹೇಗೆ ನಿದ್ದೆ ಬರುತ್ತೆ?…ನನಗಂತೂ ನಿದ್ದೆ ಬರೋಲ್ಲಪ್ಪಾ, ಅದಕ್ಕೆ ಈಗ್ಲೂ ಪಕ್ಕದಲ್ಲೇ ಹಾಕೊಂಡು ಮಲಗ್ತೀವಿ” ಅಂದೆ.
ಆಕೆ ಜಗತ್ತಿನ ಏಳು ಅಚ್ಚರಿಯನ್ನು ನೋಡುವಂತೆ ನನ್ನನ್ನು ಮೇಲಿಂದ ಕೆಳಗೆ ನೋಡಿ “ಅಷ್ಟು ದೊಡ್ಡ ಮಕ್ಕಳನ್ನ ಜೊತೆಗೆ ಮಲಗಸ್ಕೊತಿಯಾ” ಅಂತ ನಕ್ಕಳು.
“ಅದರಲ್ಲಿ ತಪ್ಪೇನಿದೆ”… ಅಂದೆ. ಅಷ್ಟೋತ್ತಿಗೆ ಆಕೆಗೆ ಒಂದು ಕಾಲ್ ಬಂತು. ನಾನು ಆಕೆಯ ಮನೆಯಿಂದ ಹೊರಕ್ಕೆ ಬಂದೆ.
ಆದರೆ ಆಕೆಯ ನಗು ನನಗೆ ತುಂಬಾನೇ ಕಿರಿ ಕಿರಿ ಮಾಡಿತು. ಮನೆಗೆ ಬಂದು ಯೋಚಿಸುತ್ತಾ ಕೂತೆ. ಹುಟ್ಟಿದಾಗಿನಿಂದ ನನ್ನ ಮದುವೆ ಆಗುವವರೆಗೂ ನಾನು ಅಪ್ಪ ಅಮ್ಮನ ಪಕ್ಕದಲ್ಲೇ ಮಲಗಿದವಳು. ಅದಕ್ಕೂ ಕಾರಣವಿತ್ತು. ನಾವಿದ್ದ ಬಾಡಿಗೆ ಮನೆಯಲ್ಲಿ ನನಗೊಂದು , ಅಕ್ಕನಿಗೊಂದು, ಅಣ್ಣನಿಗೊಂದು ಅನ್ನೋಕೆ ಬೇರೆ ಬೇರೆ ರೂಮ್ ಗಳಿರಲಿಲ್ಲ. ದೊಡ್ಡ ಹಾಲ್ ನಲ್ಲಿ ಎಲ್ಲರೂ ಒಟ್ಟಿಗೆ ಮಲಗುತ್ತಿದ್ದೆವು. ಅಷ್ಟೇ ಯಾಕೆ, ಒಂದೇ ಕಪಾಟಿನೊಳಗೆ ಎಲ್ಲರ ಬಟ್ಟೆಗಳು ಇರುತ್ತಿದ್ದವು. ಹೀಗೆ ಬೆಳೆದಂತಹ ನನಗೆ, ನನ್ನ ಮಕ್ಳು ಬೇರೆ ರೂಮ್ ನಲ್ಲಿ ಮಲಗೋದು ಇಷ್ಟವಿರಲಿಲ್ಲ. ಮದುವೆ ಆದ್ಮೇಲೆ ಅವರದೇ ಸಂಸಾರ ಅದು ಇದು ಅಂತ ದೂರ ಮಲಗಿಯೇ ಮಲಗ್ತಾರೆ. ಅಲ್ಲಿವರೆಗೂ ನನ್ನ ಮಕ್ಕಳನ್ನು ತಬ್ಬಿಕೊಂಡು ಮಲಗೋದ್ರಲ್ಲೇ ಪರಮಾನಂದ ಕಂಡವಳು ನಾನು. ನನಗೆ ಅವಳ ಮಾತು ನನ್ನ ಆಲೋಚನೆಗೆ ವಿರುದ್ಧವಾಗಿತ್ತು.
ಇದಕ್ಕೆ ಮನೆ ದೊಡ್ಡದು ಕಾರಣವಾಯಿತಾ?… ಎಲ್ಲರಿಗೂ ಒಂದೊಂದು ರೂಮ್ ಗಳು ಬೇಕಾಯಿತು?… ಒಟ್ಟಿಗೆ ಮಲಗುವ ಕಾಲ ಮುಗಿದೇ ಹೋಯಿತಾ?… ಹೀಗೆ ಪ್ರಶ್ನೆ ಗಳು ಕಾಡ ತೊಡಗಿತ್ತು . ಆದರೆ ಆಮೇಲೆ ಅನಸಿದ್ದು, ಬೇರೆಯವರ ದೃಷ್ಟಿಯಲ್ಲಿ ನಾನು ಔಟ್ ಡೇಟಡ್ ಆದ್ರೂ ಪರವಾಗಿಲ್ಲ, ನಾನು ಮಾತ್ರ ಇದರಲ್ಲಿಯೇ ಸಂತೋಷಪಡ್ತೀನಿ ಅಂತ ನಿರ್ಧಾರ ಮಾಡಿದೆ.
ಮುಂದೊಂದು ದಿನ ಗಂಡನಿಗೊಂದು, ಹೆಂಡತಿಗೊಂದು ರೂಮ್ ಬಂದ್ರೂ ಬರಬಹುದಲ್ವಾ… ಎಂದು ನೆನೆದು ನಗು ಕೂಡಾ ಬಂತು.
“ಅಷ್ಟು ದೊಡ್ಡ ಮಕ್ಳು ಇದ್ರೂ, ಇನ್ನೂ ಪಕ್ಕಕ್ಕೆ ಹಾಕೊಂಡು ಮಲಗ್ತೀರಾ… ಗಂಡ ಹೆಂಡತಿಯ ಮಧ್ಯೆ ರಾತ್ರಿ ಹೊತ್ತು ಖಾಸಗಿ ಬದುಕು ಬೇಡ್ವಾ?”… ಈ ಮಾತು ಗೆಳತಿ ಹೇಳಿದಾಗ ನನಗೆ ಯಾವುದೇ ಇರಸು ಮುರಸಾಗಲಿಲ್ಲ.
ಗಂಡ ಹೆಂಡತಿ ಅಂದ್ರೆ ರಾತ್ರಿ ಹೊತ್ತು ಅಂಟಿಕೊಂಡೆ ಇರಬೇಕು. ಹೀಗೆ ಸಮಯ ಕಳಿಬೇಕು ಅನ್ನೋ ವಿಚಾರ ಅವರವರ ಪ್ರಬುದ್ಧತೆಗೆ ಬಿಟ್ಟದ್ದು . ಜೊತೆಗೆ ಮಲಗುವುದರಿಂದ ಇಬ್ಬರ ನಡುವೆ ಪ್ರತಿ ರಾತ್ರಿಯೂ ಖಾಸಗಿಯಾಗಿರುತ್ತದೆ ಅನ್ನೋದು ಸುಳ್ಳು.
ಮಕ್ಕಳನ್ನು ಪ್ರತ್ಯೇಕ ಕೋಣೆಯಲ್ಲಿ ಮಲಗಿಸಿದರೆ ಗಂಡ – ಹೆಂಡತಿಗೆ ಒಳ್ಳೆ ನಿದ್ದೆ ಬರುತ್ತದೆಯೇ? ಹೀಗೊಂದು ಪ್ರಶ್ನೆ ಹಾಕಿಕೊಂಡರೆ, ಗಂಡ – ಹೆಂಡತಿಯಲ್ಲಿ ಒಬ್ಬರಿಗೆ ಗೊರಕೆ ಹೊಡೆಯುವ ಅಭ್ಯಾಸವಿದ್ದರೇ ಅಥವಾ ಗಂಡ- ಹೆಂಡತಿ ಒಬ್ಬರಲ್ಲಿ ವಿಪರೀತ ಬೆವರುವ ಅಭ್ಯಾಸವಿದ್ದರೇ ಅವರಿಗೆ ಚಳಿಗಾಲದಲ್ಲಿಯೂ ಫ್ಯಾನ್ ಬೇಕಾಗುತ್ತದೆ. ಹೀಗಿದ್ದಾಗ ಇಬ್ಬರ ಸ್ವಭಾವ ವಿರುದ್ಧವಾಗಿದ್ದಾಗ ಒಬ್ಬರಿಗೆ ಜಾಗರಣೆಯಾಗುವುದು ಖಚಿತ. ನಿದ್ದೆ ವಿಷಯದಲ್ಲಿ ವೈದ್ಯರೊಬ್ಬರು ಹೇಳುತ್ತಾರೆ ಒಳ್ಳೆ ಆರೋಗ್ಯಕ್ಕೆ ಒಳ್ಳೆ ನಿದ್ದೆಯೂ ಬೇಕು. ಗಂಡ ಹೆಂಡತಿ ಎಂದ ಮಾತ್ರಕ್ಕೆ ಒಂದೇ ಕೋಣೆಯಲ್ಲಿ ಇದ್ದು ನಿದ್ದೆ ಗೇಡುವ ಅವಶ್ಯಕತೆ ಇಲ್ಲಾ.ಎಲ್ಲೇ ಮಲಗಿದರೂ ಒಳ್ಳೆ ನಿದ್ದೆಯಾಗಬೇಕು. ನಿದ್ದೆಯಾದಾಗ ಅವರು ಮಾಡುವ ಎಲ್ಲ ಕೆಲಸದಲ್ಲಿಯೂ ಉತ್ಸಾಹವಿರುತ್ತದೆ. ಮಾನಸಿಕವಾಗಿ, ದೈಹಿಕವಾಗಿ ಗಟ್ಟಿಯಾಗುತ್ತಾರೆ. ಅವರು ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಹೋದರೆ ಸುಖಮಯ ಸಂಸಾರವಾಗಿರುತ್ತದೆ.
ಮದುವೆಯಾದ ಹೊಸತರಲ್ಲಿ ಗಂಡ ಹೆಂಡತಿಯಲ್ಲಿ ಏನೇ ಸಮಸ್ಯೆಗಳಿದ್ದರೂ ಹೊಂದಿಕೊಂಡು ಮಲಗುತ್ತಾರೆ. ಅದೇ ಹೆಂಡತಿ ಗರ್ಭಿಣಿಯಾದಾಗ ಸ್ವಲ್ಪ ಮಟ್ಟಿಗೆ ಇಬ್ಬರಲ್ಲೂ ದೈಹಿಕ ಅಂತರ ಉಳಿಯುತ್ತದೆ. ಇನ್ನೂ ಮಕ್ಕಳಾದ ಮೇಲೆ ಮಗುವಿನ ಲಾಲನೆ ಪಾಲನೆಯಲ್ಲಿ ಇಬ್ಬರೂ ಹೆಚ್ಚು ಸಮಯ ಕಳೆಯುತ್ತಾರೆ. ನನ್ನ ಹೆಂಡತಿ ನನ್ನ ಪಕ್ಕದಲ್ಲಿ ಮಲಗೋಲ್ಲ ಎಂದು ಗಂಡ ಹೇಳುವುದಾಗಲಿ, ಗಂಡ ನನ್ನ ಪಕ್ಕದಲ್ಲಿ ಮಲಗೋಲ್ಲ ಎಂದು ಹೆಂಡತಿ ಹೇಳುವುದಾಗಲಿ ಯಾವುದೇ ಗೊಳಾಟ ಇಬ್ಬರಲ್ಲಿಯೂ ಇರುವುದಿಲ್ಲ. ಇಬ್ಬರಿಗೂ ರಾತ್ರಿ ಖಾಸಗಿಯಾಗಿರಬೇಕೆಂದು ಬದುಕುವುವವರು ಕಮ್ಮಿ. ಬದಲಾಗಿ ತಮ್ಮ ಮಕ್ಕಳ ಪಕ್ಕದಲ್ಲಿಯೇ ಸುಖ ನಿದ್ರೆ ಮಾಡಲು ಇಷ್ಟಪಡುತ್ತಾರೆ.
ಇನ್ನೂ ಗಂಡ ಹೆಂಡತಿಯ ನಡುವಿನ ಖಾಸಗಿತನದ ವಿಷಯಕ್ಕೆ ಬರುವುದೆಯಾದರೆ 24 ಗಂಟೆಯಲ್ಲಿ ರಾತ್ರಿಯೆ ಖಾಸಗಿಯಾಗಬೇಕಿಲ್ಲ. ಮಕ್ಕಳೊಂದಿಗೆ ರಾತ್ರಿ ಮಲಗುವುದರಿಂದ ಕುಟುಂಬದ ನಡುವೆ ಭಾವನಾತ್ಮಕ ಸಂಬಂಧಗಳು ಗಟ್ಟಿಯಾಗುವುದು. ಇದರಿಂದ ವಂಚಿತರಾಗಬೇಡಿ…
- ಶಾಲಿನಿ ಹೂಲಿ ಪ್ರದೀಪ್
