ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳ ಬರವಣಿಗೆಯ ಮೂಲಕ ಜನ ಮನ್ನಣೆಯನ್ನು ಗಳಿಸಿದ ಹಿರಿಯ ಲೇಖಕಿ ಉಷಾ ಪಿ. ರೈ ಅವರು, ‘ಬದುಕೆಂಬ ಚದುರಂಗದಾಟದ ದಾಳಗಳು’ ಕೃತಿ ಪರಿಚಯವನ್ನು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ‘ಬದುಕೆಂಬ ಚದುರಂಗದಾಟದ ದಾಳಗಳು’
ಲೇಖಕರು : ಉಷಾ ಪಿ. ರೈ
ಹೆಣ್ಣೊಂದು ಮಹಾಶಕ್ತಿ ಎನ್ನುವುದಕ್ಕೆ ಒಂದು ಉತ್ತಮ ನಿದರ್ಶನ ಶ್ರೀಮತಿ ಉಷಾ ಪಿ. ರೈ. ಇವರು ಜೀವನದಲ್ಲಿ ಮಗಳು, ಸೋದರಿ, ಪತ್ನಿ, ಸೊಸೆ, ತಾಯಿ, ಅತ್ತೆ, ಅಜ್ಜಿ ಹೀಗೆ ಎಲ್ಲಾ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿರುವುದರ ಜೊತೆಗೆ, ತಮ್ಮ ವೃತ್ತಿ ಮತ್ತು ಸಾಹಿತ್ಯ ಪ್ರವೃತ್ತಿಯ ಮೂಲಕ ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡಿ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳ ಬರವಣಿಗೆಯ ಮೂಲಕ ಜನ ಮನ್ನಣೆಯನ್ನು ಗಳಿಸಿದ ಹಿರಿಯ ಲೇಖಕಿ . ಬಹುಮುಖ ಪ್ರತಿಭೆಯ ಸಾಧಕಿ.
ಇದುವರೆಗೂ ಏಳು ಕಾದಂಬರಿಗಳು, ಎರಡು ಕಥಾ ಸಂಕಲನಗಳು, ನಾಲ್ಕು ಕವನ ಸಂಕಲನಗಳು, ಎರಡು ಪ್ರಬಂಧ ಸಂಕಲನಗಳು, ಒಂದು ಪ್ರವಾಸ ಕಥನ, ಆತ್ಮಕಥೆ ಎರಡು ಭಾಗಗಳು ಹಾಗೂ ಎರಡು ವ್ಯಕ್ತಿ ಪರಿಚಯಗಳು, ಸಂಪಾದಿತ ಕೃತಿಗಳು ಇತ್ಯಾದಿಗಳನ್ನು ಇವರು ರಚಿಸಿದ್ದಾರೆ. ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ದೊರಕಿವೆ.
ಬ್ಯಾಂಕ್ ವೃತ್ತಿಯಲ್ಲಿ ತೊಡಗಿದ್ದೂ ಸಾಹಿತ್ಯ ಕೃಷಿಯನ್ನು ಪೋಷಿಸಿ ಕೊಂಡು, ತಮ್ಮ ಅರವತ್ತನೆಯ ವಯಸ್ಸಿನಲ್ಲಿ ಚಿತ್ರಕಲೆಯಲ್ಲಿ ಸಾಧನೆ ಮಾಡಿದ ಅದ್ಭುತ ಪ್ರತಿಭಾವಂತರು ಇವರು. ಲೇಖಕಿ ಉಷಾ ಪಿ.ರೈ. ಅವರ ಆತ್ಮಕಥೆಯಾದ ‘ಯಾವ ನಾಳೆಯೂ ನಮ್ಮದಲ್ಲ ‘ ಎನ್ನುವ ಪುಸ್ತಕವನ್ನು ನಾನು ಕಳೆದ ತಿಂಗಳು ಇದೇ ವೇದಿಕೆಯಲ್ಲಿ ಪರಿಚಯಿಸಿದ್ದೆ.

ಕಥಾ ಸಂಕಲನದಲ್ಲಿನ ‘ಕೈ ಹಿಡಿದು ನಡೆಸುವೆ ನಿನ್ನನು’ ಎನ್ನುವ ಶೀರ್ಷಿಕೆಯ ಕಥೆ. ನನ್ನನ್ನು ಬಹಳ ಹೊತ್ತು ಕಾಡಿದ ಈ ಕಥೆಯ ಸಾರಾಂಶ. ಮಧ್ಯಮ ವಯಸ್ಸಿನ ವತ್ಸಲಾ ಈಗ ಬ್ಯಾಂಕ್ ವೃತ್ತಿಯಿಂದ ನಿವೃತ್ತಳಾಗಿ ಗಂಡನೊಡನೆ ಬೊಂಬಾಯಿಯಲ್ಲಿ ನೆಲೆಸಿದ್ದಾಳೆ. ಅವರ ಒಬ್ಬನೇ ಮಗ ವಿಶ್ವ ದೊಡ್ಡ ಉದ್ಯೋಗದಲ್ಲಿದ್ದು ದೂರವಿದ್ದಾನೆ. ರಜದಲ್ಲಿ ಮನೆಗೆ ಬಂದಾಗಲೆಲ್ಲಾ ಅವನ ಮದುವೆಯ ಬಗ್ಗೆ ಯೋಚನೆ.ಆದರೆ ಅವನ ಮನಸ್ಸಿಗೆ ಒಪ್ಪುವ ಸೂಕ್ತ ಹುಡುಗಿ ಇನ್ನೂ ಸಿಕ್ಕುತ್ತಿಲ್ಲ.
ಹಿಂದೆ ಅವರು ಮೈಸೂರಲ್ಲಿದ್ದಾಗ ಹೊಸದಾಗಿ ಮದುವೆಯಾದ ಜೋಡಿ ನೀನಾ ಮತ್ತು ರಮೇಶ ಪಕ್ಕದ ಮನೆಯಲ್ಲಿ ಇದ್ದು ಇವರನ್ನು ತುಂಬಾ ಹಚ್ಚಿ ಕೊಂಡಿದ್ದರು. ಅವರಿಬ್ಬರೂ ಕೂಡ ಬ್ಯಾಂಕ್ ಉದ್ಯೋಗಿಗಳು. ತುಂಬಾ ಅನ್ಯೋನ್ಯವಾಗಿದ್ದ ಆ ದಂಪತಿಗಳ ಜೀವನ ಪ್ರೀತಿಯ ಉತ್ಸಾಹ ನೋಡಿ ವತ್ಸಲಾ ಕೂಡಾ ಸಂತೋಷ ಪಡುತ್ತಿದ್ದರು. ಆಕರ್ಷಕ ರೂಪು,ವ್ಯಕ್ತಿತ್ವದ ನೀನಾಳನ್ನು ಅವರು ಮೆಚ್ಚಿದ್ದರು. ದಿನ ಕಳೆದಂತೆ ಆಕೆ ಗರ್ಭಿಣಿಯಾದಾಗಲಂತೂ ತಾಯಿ ಮಗಳಷ್ಟು ಗಾಢವಾಗಿ ಅವರ ಸಂಬಂಧ ಬೆಸೆದಿತ್ತು. ಈ ಪಾಶ ಯಾಕಾಗಿ?….
ಮನೆ ಮುಂದೆ ಕುಂಡದಲ್ಲಿ ಹೂಬಿಡದ ಹಸಿರು ಗಿಡಗಳನ್ನು ಬೆಳೆಸಿ ನೀರುಣಿಸುವ ವತ್ಸಲಾರಿಗೆ…ನೀನಾ ‘ಏಕೆ ಈ ಬಂಜೆ ಗಿಡ ಬೆಳೆಸುತ್ತೀರಿ? ‘ಎಂದು ಪ್ರಶ್ನಿಸಿ ನಗುತ್ತಿದ್ದಳು. ಆಗ ಇವರು ‘ಒಂದೇ ದಿನಕ್ಕೆ ಬಾಡಿ ಕಮರಿ ಹೋಗುವ ಹೂವುಗಳನ್ನು ತಮಗೆ ನೋಡಲಾಗುವುದಿಲ್ಲ. ಸಂಕಟವಾಗುತ್ತದೆ.ಅದಕ್ಕೇ ಸದಾ ಹಸಿರಾಗಿರುವ ಗಿಡ ಬೆಳೆಸುತ್ತೇನೆ’ ಎನ್ನುತ್ತಿದ್ದರು. ಈ ಹೋಲಿಕೆಯಂತೂ ತುಂಬಾ ಮೆಚ್ಚುಗೆಯಾಯಿತು.
ಮುಂದೆ ವತ್ಸಲಾರು ಬೊಂಬಾಯಿಗೆ ಬಂದ ಮೇಲೆ ಕೂಡಾ ಪತ್ರದ ಮೂಲಕ ಎಲ್ಲಾ ವಿಚಾರವನ್ನೂ ಹಂಚಿ ಕೊಳ್ಳುತ್ತಲೇ ಅವರ ಸ್ನೇಹ ಮುಂದುವರೆದಿತ್ತು. ಆದರೆ ಕಳೆದ ಒಂದು ವರ್ಷದಿಂದ ನೀನಾಳಿಂದ ಏನೂ ಸಮಾಚಾರವೇ ಇರಲಿಲ್ಲ!! .ಇವರ ಪತ್ರಕ್ಕೂ ಉತ್ತರವೇ ಇಲ್ಲದಿದ್ದಾಗ ಅವರು ಚಿಂತಿತರಾಗಿದ್ದರು. ಈ ಬಾರಿ ಮೈಸೂರಿಗೆ ಬಂದಾಗ ಅವಳನ್ನು ನೋಡಿಯೇ ಬರಬೇಕೆಂದು ಅವರು ನೀನಾಳ ಬ್ಯಾಂಕ್ ಶಾಖೆಗೆ ಫೋನ್ ಮಾಡಿದಾಗ ನೀನಾ ಸಿಗದೇ ಆಕೆಗಾದ ನಿರಾಶೆ. ಕೊನೆಗೂ ಅವಳ ವಿಳಾಸವನ್ನು ಪತ್ತೆ ಹಚ್ಚಲು ವತ್ಸಲಾ ಪಟ್ಟ ಶ್ರಮ ಇವೆಲ್ಲವೂ ಅತ್ಯಂತ ಹೃದಯ ಸ್ಪರ್ಶಿಯಾಗಿದೆ.
ಕೊನೆಗೂ ನೀನಾ ಅವರಿಗೆ ಸಿಕ್ಕಿ ಬಿಕ್ಕಿ ಬಿಕ್ಕಿ ಅತ್ತಿದ್ದಳು!. ಹಾಗಾದರೆ ಅಂತಹ ಚಿನಕುರುಳಿ ಹುಡುಗಿ ಮಾತಿನ ಮಲ್ಲಿ ನೀನಾ ಹೀಗೆ ಒಮ್ಮೆಲೇ ಮೌನವಾಗಲು ಕಾರಣವೇನು?… ಅವಳ ಪ್ರೀತಿಯ ಪತಿಯ ಆಕಸ್ಮಿಕ ಮರಣ, ಪುಟ್ಟ ಮಗಳ ಜವಾಬ್ದಾರಿಯಲ್ಲಿ ಆ ಮೊದಲಿನ ನೀನಾ ಕಳೆದು ಹೋಗಿದ್ದಳು. ಇಷ್ಟು ನೋವಿನ ಅನುಭವ ವತ್ಸಲಾರಿಗೆ ಯಾವತ್ತೂ ಆಗಿರಲಿಲ್ಲ. ‘ಹುಟ್ಟನ್ನು ತಡೆಯಲು ಸಾಧ್ಯ ವಾಗುವ ನಮಗೆ ಸಾವನ್ನು ತಡೆಯಲಾಗದ್ದು ಯಾತಕ್ಕೆ?’ ಈ ಆಘಾತದಿಂದ ಹುಡುಗಿಯನ್ನು ಹೊರ ತರುವುದು ಹೇಗೆ?… ಜೀವನ ಎಷ್ಟೊಂದು ಅಸ್ಥಿರ! ಇದನ್ನು ಕನಸಲ್ಲಿಯೂ ನಿರೀಕ್ಷಿಸಿರದ ವತ್ಸಲಾ ತನ್ನ ನೀನಾಳಲ್ಲಿ ಮತ್ತೆ ಜೀವ ತುಂಬ ಬೇಕೆನ್ನಿಸಿ ತೆಗೆದು ಕೊಂಡ ನಿರ್ಧಾರವೇನು?.

ನಾನು ನಿನ್ನ ತಾಯಿಯಂತೆ..ನೀನು ನನ್ನ ಮಗಳಂತಾ ಸೊಸೆಯಾಗಿ ನಮ್ಮನೆಗೆ ಬರಲು ಸಾಧ್ಯವೇ? ನನ್ನ ಮಗನಿಗೆ ಹುಡುಗಿ ನೋಡುತ್ತಿದ್ದೇನೆ. ‘ ನಿನ್ನ ರಮೇಶ ಇನ್ನು ಕನಸು. ವಿಶ್ವ ಇಂದಿನ ಸತ್ಯ’ ಎಂದು ನೀನಾಳಿಗೆ ಮನದಟ್ಟು ಮಾಡಿಸಿದ ವತ್ಸಲಾರ ಹೃದಯವೆನೋ ಆಗ ಹಗುರಾಗಿತ್ತು. ಇದಕ್ಕೆ ವಿಶ್ವ ಮತ್ತವನ ತಂದೆಯ ಒಪ್ಪಿಗೆ ದೊರಕೀತೆ?. ಎಷ್ಟು ಉದಾರ ಮನಸ್ಸಿನ ತಾಯಿ ವತ್ಸಲಾ ಎನಿಸಿತು. ಒಮ್ಮೊಮ್ಮೆ ಕಥೆಯಲ್ಲಿ ಭಾವುಕತೆ ಕೆಣಕಿದರೂ, ವಾಸ್ತವದ ಸತ್ಯವೂ ಧ್ವನಿತಗೊಂಡಿದೆ. ಅವರ ವೃತ್ತಿಯ ಅನುಭವ ಕೂಡ ಕೆಲವು ಕಡೆಯಲ್ಲಿ ಅಭಿವ್ಯಕ್ತವಾಗಿದೆ. ಈ ಚೆಂದದ ಕಥೆ ನನಗಂತೂ ತುಂಬಾ ಇಷ್ಟವಾಯಿತು.
ಜೀವನದಲ್ಲಾದ ಒಂದು ಭೀಕರ ಅಪಘಾತದಿಂದ ಚೇತರಿಸಿ ಕೊಂಡು ಉಷಾ ಮೇಡಂ ಅವರದು ಒಂದು ಹೋರಾಟದ ಬದುಕು. ‘ಸಾವು ಹೊಸಲಿನಾಚೆ ಬಂದು ನಿಂತಿರ ಬಹುದು ಆದರೆ ಅದು ಹೊಸಲು ದಾಟಿ ಒಳ ಬರಲು ಇನ್ನೂ ಕೆಲವು ಕ್ಷಣಗಳಿರುತ್ತವೆ. ಅದನ್ನು ನಮ್ಮದೇ ಕ್ಷಣಗಳು ಎನ್ನುವಂತೆ ಖುಶಿಯಿಂದ ಅನುಭವಿಸ ಬಹುದಾದರೆ ಮಾತ್ರ ನಾವು ಎಲ್ಲಾ ಒತ್ತಡ ಗಳಿಂದ ಮುಕ್ತವಾಗಿ ಇದ್ದಷ್ಟು ದಿನ ಸುಖವಾಗಿ ಬದುಕ ಬಹುದು ಎನ್ನುವ ಅವರ ಮಾತು ಎಷ್ಟು ಸತ್ಯವಾದುದು!…
ನೋವುಗಳು ನಮ್ಮ ಸಂಗಾತಿಗಳೆಂದು ಭಾವಿಸಿ ನಗುತ್ತಾ ನಗಿಸುತ್ತಾ ಬದುಕಲು ಕಲಿಯ ಬೇಕು. ಆಗಲೇ ಮಾನಸಿಕವಾಗಿ ಸ್ವಸ್ಥರಾಗಿರಲು ಸಾಧ್ಯ ಎನ್ನುವ ಅವರು ಸದಾ ಹಸನ್ಮುಖರು. ಅವರು ಸಾಗಿ ಬಂದ ಹಾದಿಯ ಬಗ್ಗೆ ಓದಿದಾಗ ನಾವೂ ಕೂಡ ಏನೇ ಬಂದರೂ ನೋವು ನುಂಗಿ ನಗಲು ಕಲಿಯ ಬೇಕು ಎನಿಸುತ್ತದೆ.
ಅವರ ಬರವಣಿಗೆಯ ಶೈಲಿಗೆ ಮಾರು ಹೋದ ನನಗೆ ಇವರ ಇನ್ನಷ್ಟು ಕೃತಿಗಳನ್ನು ಓದುವ ಅಭಿಲಾಷೆ ಉಂಟಾಗಿದೆ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ನೂಪುರಗಾನ’ ಕೃತಿ ಪರಿಚಯ
- ಪಾರ್ಲರ್ ಹುಡುಗಿಯೂ, ಮರಳು ಗಾಡಿನ ಮಹಲು ಕೃತಿ ಪರಿಚಯ …
- ತಮ್ಮಣ್ಣ ಬೀಗಾರ ಅವರ ಕೃತಿ ಪರಿಚಯ
- ‘ಮೂಡು ಮಜಲು’ ಕೃತಿ ಪರಿಚಯ
- ‘ಮೂರನೇ ಹೆಂಡತಿ’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
