‘ತೆರೆದ ಬಾಗಿಲು’ ಕವನ – ಬೆಂಶ್ರೀ ರವೀಂದ್ರ

ಕೋಲನು ತನ್ನಿ ಕೋಲನು ತನ್ನಿ… ತಂಟೆಮಾರಿಯ ಹಿಡಿದುಬಿಡಿ…ಕವಿ ಬೆಂಶ್ರೀ ರವೀಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ತೆರೆದ ಬಾಗಿಲು ; ಇಣುಕಿದ
ಯಾರೂ ಕಾಣಲಿಲ್ಲ ; ನುಸುಳಿದ
ಸದ್ದಿಲ್ಲದಂತೆ ಸರಸರನೆ ಓಡಾಡಿದ
ಅವನದೇ ಏದುಸಿರು ಅವನದೇ ಹೆಜ್ಜೆಯ ಸದ್ದು
ಮತ್ತೇನು ಕೇಳಲಿಲ್ಲ
ಅವನದೇ ಸಾಮ್ರಾಜ್ಯ ಅವನದೇ ಕರಾಮತ್ತು !!

ತೆರೆದಿತ್ತು ಬೀರು ನುಗ್ಗಿದ
ಕಿರಕಿರ ಸದ್ದಿಗೆ ಅಂಜುತ ಅಲ್ಲೆ‌ ಮರೆಯಾದ
ಸದ್ಯ ಯಾರೂ ಬರಲಿಲ್ಲ
ಇದ್ದರು ಮೀಸೆಹೊತ್ತ ಆರಕ್ಷಕರು
ಹೊಡೆಯುತ ಗಡದ್ದು ನಿದ್ದೆ !

ಹಸಿದಿತ್ತು ಹೊಟ್ಟೆ
ಸೆಳೆದಿತ್ತು ಅಡಿಗೆ ಮನೆಯ ಗಮಗಮ
ಚಿಂತಿಸಲಿಲ್ಲ ನುಗ್ಗಿಯೇ ಬಿಟ್ಟ
ಟಣ್ ಟಣ್ ಠಣಾರ್.. ಠಣಾರ್..
“ಯಾರದೂ, ಅಡಿಗೆ‌ ಮನೆಯಲಿ”
ಇರಬೇಕು ಯಾಜಮಾನಿಯ ದನಿಯು !
ಬಾಗಿಲ ಸರಿಸಿ ಬಂದವಳು
ಅತ್ತಿತ್ತ ನೋಡುತ “ಏನೂ ಇಲ್ಲ’
ಎನ್ನುತ ಹೊರಗೆ ನಡೆದಿಹಳು !!

ತಿನ್ನಲು ಏನೂ ಸಿಗಲಿಲ್ಲ
ಹಸಿವಿನ ಭಾರದಿ ಮೂಲೆಲಿ ನಿದ್ದೆ
ಹಸಿವಲಿ ಪವಡಿಸುವುದೆಂತ ಪವಾಡವೋ ದೇವ !!

ಅಡಿಗೆ ಕೋಣೆಗೆ ಹೊರಮಗ್ಗಿಲ ಚಿಲಕ
ಹೋಗುತ ಬರುತ ಹಾಕುವರೆಲ್ಲ
ಹಗಲಾಗದರೆ ಬೀಳುವೆನೆಲ್ಲರ ಕಣ್ಣಿಗೆ
ಅವಿತುಕೋ ಪಗಡಿಯ ಹಿಂದೆ
ರಾತ್ರಿಯಲಿ ಜಡಿವರು‌ ಬೀಗ
ಹೋಗುವುದೆಲ್ಲಿಗೆ ದೇವರೆ ಬಲ್ಲ!

ಅಂದೇ ಅಂದಳು ಯಜಮಾನತಿಯು
ಯಾರೋ ಹೊಕ್ಕಿಹರು ಅಡಿಗೆ ಮನೆಗೆ
ಬಲೆ ಬೀಸುವ ಪೋಲೀಸರ ಎಬ್ಬಿಸುವ
ಇಡಿರಿ ಹಣ್ಣು ತರಕಾರಿ‌ ಫ್ರಿಜ್ಜಿನ ಒಳಗೆ
ಅಡಿಗೆಗೂ ಉಂಟು ಭದ್ರಕಪಾಟು

ಗುಕ್ಕನು ಹುಡುಕುತ ಅವಿತಿಹನು
ಓಡಾಡುತ ಸದ್ದನು‌ ಮಾಡುವನು
ಹಿಡಿಯಿರಿ ಹಿಡಿಯಿರಿ ಹಿಡಿಯಿರಿ
ಬೋನಕೆ ಮುನ್ನವೇ ಬೋನಿನ ಕಣ್ಣು
ಎರಚುವ ಮಣ್ಣು

ಕೋಲನು ತನ್ನಿ ಕೋಲನು ತನ್ನಿ
ತಂಟೆಮಾರಿಯ ಹಿಡಿದುಬಿಡಿ
ವಿಷವನು ತನ್ನಿ ಕಾಲಂಟಿನ ಭಂಟನ ತನ್ನಿ
ಅವರೂ ಬಂದರು ಇವರೂ ಬಂದರು
ಸಿಕ್ಕನು ಕಳ್ಳನು ಎಸೆದಿಹ ಬಲೆಗೆ
ಹರಡಿಹ ನೇಣಿಗೆ

ಮಾಡುವುದೇನು ತಾಳ್ಮೆಯೇ ಮದ್ದು
ಬೋನಿನ ಹೊಟ್ಟೆಲಿ ತರತರ ತಿನಿಸು
ರುಚಿಯನು ಬಿಟ್ಟಿಹ ವಿರಾಗಿ ಇವನು
ಹಾಕುವ ಹೆಜ್ಜೆಯ ನವಿರಾಗಿ

ಒಂದು.. ಎರಡು …. ಉರುಳಿತು ದಿನವು
ಕಳದೇ ಕಳೆಯಿತು ಹದಿನೈದು ದಿನವು
ಕಳ್ಳರಾಯಗೆ ಅಡಿಗೆ ಮನೆಯ ಬಂಧನವು
ಗಮಗಮ ತಿಂಡಿಯು ಸಿಗುವಂತಿಲ್ಲ
ಪೋಲಿಸರ ಕಾಟವು ತಪ್ಪುವಂತಿಲ್ಲ

ಹೀಗಾಯಿತು ಕೊನೆಗೊಂದು ದಿನ
ಕೇಳಿಸಿತು ಧೊಪ್ಪನೆ ಸದ್ದು
ಓಡಿಬಂದರೆಲ್ಲರು ಅಡಿಗೆಮನೆಗೆ
ಬಿದ್ದಿತ್ತು
ಒಣಕಲ ಇಲಿಯು ಬೋನಿನ ಒಳಗೆ.


  • ಬೆಂಶ್ರೀ ರವೀಂದ್ರ – (ಹಿರಿಯ ಸಾಹಿತಿಗಳು, ಕವಿ, ಲೇಖಕರು, ಚಿಂತಕರು), ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading