ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು ಕೆಲವು ಸಲಹೆಗಳನ್ನು ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಪಾಟೀಲ್ ಅವರು ‘ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹೇಗೆ ?’ ಕುರಿತು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕೆಲ ಮಕ್ಕಳ ಆತ್ಮವಿಶ್ವಾಸವನ್ನು ನೋಡಿದಾಗ ಹೆಮ್ಮೆ ಎನಿಸುತ್ತದೆ. ಪ್ರೀತಿ ಉಕ್ಕುತ್ತದೆ. ಆ ಮಕ್ಕಳ ಕುತೂಹಲ, ಆಸಕ್ತಿ, ಶ್ರಮ ನೋಡಿ ಅಬ್ಬ! ಎಷ್ಟು ಚೆನ್ನಾಗಿ ಅವರ ಪಾಲಕರು ಈ ಮಕ್ಕಳನ್ನು ಬೆಳೆಸಿದ್ದಾರೆ ಎಂದು ಅಚ್ಚರಿಯಾಗುತ್ತದೆ. ನಮ್ಮ ಮಕ್ಕಳು ಕೂಡ ಹಾಗೆಯೇ ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಬೆಳೆಯಲಿ ಎಂದು ಪಾಲಕರು ಆಸೆ ಪಡುವುದರಲ್ಲಿ ತಪ್ಪಿಲ್ಲ. ಮಕ್ಕಳ ಮಾತನ್ನು ಆಲಿಸುವುದರಿಂದ, ಅವರ ಚಟುವಟಿಕೆಗಳನ್ನು ಲಕ್ಷ್ಯ ಕೊಟ್ಟು ನೋಡುವುದರಿಂದ ಹಾಗೂ ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಬಹುದು.

ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು ಕೆಲವು ಸಲಹೆಗಳು ಹೀಗಿವೆ :
- ಮಕ್ಕಳು ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹಿಸಿ. ಸಾಧ್ಯವಾದಷ್ಟು ಮಕ್ಕಳು ಸ್ವಾವಲಂಬಿಗಳಾಗಿ ಬೆಳೆಯಲಿ…. ವೈಯುಕ್ತಿಕವಾಗಿ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಳ್ಳುವ ಮಕ್ಕಳು ಪಾಲಕರ ಗೈರು ಹಾಜರಿಯಲ್ಲಿಯೂ ಕೂಡ ನಿರಾಯಾಸವಾಗಿ ತಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಿದಾಗ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.
- ಮಕ್ಕಳು ತಪ್ಪು ಮಾಡದೇ ಇರಲಿ ಎಂಬ ಕಾರಣಕ್ಕೆ ಎಲ್ಲವನ್ನು ಪಾಲಕರೆ ಮಾಡಬಾರದು… ತಮ್ಮ ತಪ್ಪುಗಳ ಮೂಲಕ ಮಕ್ಕಳು ಪಾಠ ಕಲಿಯಲಿ. ನಡೆಯುವವನು ಎಡವುವುದು ಸಹಜವಾಗಿರುವಂತೆಯೇ ಕಲಿಕೆಯಲ್ಲಿ ಕೂಡ ಮಕ್ಕಳು ಎಡವಬಹುದು ಅಂತಹ ಸಮಯದಲ್ಲಿ ಮಕ್ಕಳು ತಮ್ಮ ಸಮತೋಲನ ತಪ್ಪದಂತೆ ತುಸು ಅಂತರದಲ್ಲಿ ನಿಂತು ಮಕ್ಕಳಿಗೆ ನಿರ್ದೇಶಿಸಬಹುದೇ ಹೊರತು ಮಕ್ಕಳ ನಡಿಗೆಯನ್ನು ಪಾಲಕರೇ ಪೂರೈಸಲಾಗದು. ಅವರವರ ಪಾತ್ರಗಳನ್ನು ಅವರವರೇ ನಿರ್ವಹಿಸಬೇಕು ಬಾಲಕರು ಈ ವಿಷಯದಲ್ಲಿ ಅತಿಯಾಗಿ ಮೂಗು ತೂರಿಸದೇ ತಮ್ಮ ಮಕ್ಕಳಿಗೆ ಕೇವಲ ಮಾರ್ಗದರ್ಶಕರಾಗಬೇಕು ಮಾತ್ರ. ಮಕ್ಕಳಿಗೆ ಅವರ ತಪ್ಪುಗಳೇ ಪಾಠಗಳಾಗಿ ಪರಿಣಮಿಸಲು ಅವಕಾಶ ಮಾಡಿಕೊಡಬೇಕು. ತಮ್ಮ ತಪ್ಪುಗಳಿಂದ ಮಕ್ಕಳು ಪಾಠ ಕಲಿಯಲಿ. ಶಿಕ್ಷಕರು ಹೇಳಿ ಕೊಟ್ಟ ಪಾಠವನ್ನು ಮಕ್ಕಳು ಒಂದು ವೇಳೆ ಮರೆತರೂ ಕೂಡ ಬದುಕು ಕಲಿಸಿದ ಪಾಠವನ್ನು ಮರೆಯಲು ಸಾಧ್ಯವಿಲ್ಲ.
- ಮಕ್ಕಳಲ್ಲಿ ಪ್ರಯತ್ನಶೀಲತೆಯನ್ನು ಪ್ರೋತ್ಸಾಹಿಸಿ. ಸತತ ಪ್ರಯತ್ನದಿಂದ ಖಂಡಿತವಾಗಿಯೂ ಯಶಸ್ಸು ದೊರೆಯುತ್ತದೆ ಎಂಬುದನ್ನು ಮಕ್ಕಳಿಗೆ ಮನಗಾಣಿಸಿ. ಆದರೆ ‘ತೇನ ವಿನ ತೃಣಮಪಿ ನ ಚಲತಿ ಎಂಬುದರ ಅರಿವನ್ನು ಮೂಡಿಸಿ. ಮಕ್ಕಳಿಗೆ ಪ್ರಯತ್ನ ಶೀಲತೆಯ ಪರಿಣಾಮಗಳ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳದಿರುವಷ್ಟು ತಿಳುವಳಿಕೆಯನ್ನು ಕೂಡ ಮೂಡಿಸಬೇಕು. ಎಲ್ಲಾ ಸಮಯದಲ್ಲಿಯೂ ಪ್ರಯತ್ನಕ್ಕೆ ತಕ್ಕ ಫಲ ದೊರೆಯುತ್ತದೆ ಎಂಬ ಭರವಸೆ ಬೇಡ ಎಂಬ ಭಾವ ಮಕ್ಕಳಲ್ಲಿರಲಿ ಜೊತೆಗೆ ತಮಗಿಂತ ಹೆಚ್ಚು ಪ್ರಯತ್ನ ಪಡುವವರು ಹೆಚ್ಚಿನ ಫಲವನ್ನು ಪಡೆಯ ಬಹುದು ಎಂಬ ತಿಳಿವಳಿಕೆಯನ್ನು ಮಕ್ಕಳಿಗೆ ಮೂಡಿಸಬೇಕು.
ತಮ್ಮ ಮಕ್ಕಳು ಎಂದ ಮೇಲೆ ತಮಗೆ ಸಹಜವಾಗಿಯೇ ಅವರ ಮೇಲೆ ಪ್ರೀತಿ ಇರುತ್ತದೆ… ಆದರೆ ಕೆಲಬಾರಿ ತುಸು ಹೆಚ್ಚಿನ ಅಹಂ ಭಾವದಿಂದ ಇಲ್ಲವೇ ಮುಜುಗರದಿಂದ ತಾವು ಮಕ್ಕಳನ್ನು ಪ್ರೀತಿಸುವ ಭಾವವನ್ನು ಮುಚ್ಚಿಡುವ ಪಾಲಕರೇ ಹೆಚ್ಚು…. ಆಗಾಗ ನಿಮ್ಮ ಪ್ರೀತಿ, ಕಾಳಜಿಗಳನ್ನು ಮಕ್ಕಳ ಮುಂದೆ ಮಾತುಗಳಲ್ಲಿ,ವರ್ತನೆಯಲ್ಲಿ ವ್ಯಕ್ತಪಡಿಸಬೇಕು. ಅದು ಅವರಲ್ಲಿ ಭದ್ರತಾ ಭಾವವನ್ನು ಮೂಡಿಸುತ್ತದೆ.
- ಮಗುವಿನ ಎಲ್ಲ ಚಟುವಟಿಕೆಗಳ ಕುರಿತು ತಮಗೆ ಸ್ಪಷ್ಟ ಅರಿವಿದೆ ಎಂಬ ಕುರಿತು ಮಗುವಿನಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು. ತನ್ನನ್ನು ಪಾಲಕರು ಗಮನಿಸುತ್ತಿದ್ದಾರೆ ಎಂಬ ಭಾವವೇ ಎಷ್ಟೋ ಬಾರಿ ಮಕ್ಕಳಲ್ಲಿ ಹುಮ್ಮಸ್ಸನ್ನು, ಧೈರ್ಯವನ್ನು ತುಂಬುತ್ತದೆ.
- ಮಗುವಿನ ಪ್ರತಿ ಸಣ್ಣ ಪ್ರಯತ್ನವನ್ನು ಸಂಭ್ರಮಿಸುವ ಮೂಲಕ ಮಗುವಿಗೆ ಪ್ರೋತ್ಸಾಹವನ್ನು ನೀಡಬೇಕು.
- ಮಕ್ಕಳು ತಪ್ಪು ಮಾಡಿದಾಗ ಭಯ ಬೀಳುವಂತಹ ಶಿಕ್ಷೆಗಳು ಬೇಡ. ಶಿಕ್ಷೆಯು ಮಗುವಿಗೆ ತಾನು ಮಾಡಿದ ತಪ್ಪಿನ ಅರಿವು ಮೂಡಿಸಿದರೆ ಸಾಕು. ವಿಪರೀತ ಶಿಕ್ಷೆಗಳು ಮಕ್ಕಳಲ್ಲಿ ಭಯ, ರೇಜಿಗೆಯನ್ನು ಹುಟ್ಟಿಸುತ್ತವೆ. ಕೆಲವೊಮ್ಮೆ ಮಕ್ಕಳು ಮಾನಸಿಕವಾಗಿ ತಿರುಗಿ ಬೀಳಬಹುದು. ಆಯ ವಯಸ್ಸಿಗೆ ಸಹಜವಾಗಿ ಮಕ್ಕಳಿಗೆ ಅವರು ನಿರ್ವಹಿಸಬಹುದಾದ ಕೆಲಸ ಕಾರ್ಯಗಳನ್ನು ಮಾಡಲು ಪ್ರೋತ್ಸಾಹಿಸಿ ಇದು ಮಕ್ಕಳಲ್ಲಿ ಸ್ವಯಂಶಿಸ್ತನ್ನು ಕಾರ್ಯತತ್ಪರತೆಯನ್ನು ಹೊಂದಲು ಅತ್ಯವಶ್ಯಕವಾದ ಕ್ರಿಯೆ ಆಗಿದೆ.
ಚಿಕ್ಕಂದಿನಿಂದಲೇ ತನ್ನ ಪುಸ್ತಕ, ನೋಟಪುಸ್ತಕ, ಪೆನ್ಸಿಲ್ ಮತ್ತಿತರ ಪರಿಕರಗಳನ್ನು ಹೊಂದಿಸಿಕೊಳ್ಳುವುದರಿಂದ ಹಿಡಿದು ಮನೆಯಲ್ಲಿ ಕೂಡ ಪಾಲಕರಿಗೆ ಸಹಾಯ ಮಾಡಲು ಮಕ್ಕಳಿಗೆ ಖಂಡಿತವಾಗಿಯೂ ಕಲಿಸಬೇಕು. ‘ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ ‘ ಎಂಬಂತೆ ಚಿಕ್ಕಂದಿನಲ್ಲಿ ಕಲಿಸಿದ ಶಿಸ್ತಿನ ಪಾಠ ಬದುಕಿನ ಕೊನೆಯವರೆಗೂ ಇರುತ್ತದೆ.
- ಮಕ್ಕಳ ಪ್ರಯತ್ನಶೀಲತೆಯನ್ನು ಹೊಗಳುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಬೇಕು…. ಇದು ಮಕ್ಕಳು ಪ್ರಯತ್ನಶೀಲತೆಯನ್ನು ನಿರಂತರವಾಗಿ ಜಾರಿಯಲ್ಲಿಡಲು ಸಹಾಯಕವಾಗಿ ಪರಿಣಮಿಸುತ್ತದೆ.
- ಮಕ್ಕಳು ತಮ್ಮ ಕೆಲಸಗಳನ್ನು ಮಾಡುವಲ್ಲಿ ಉಂಟಾಗುವ ಅಪಸವ್ಯಗಳನ್ನು ಸಹಿಸಿಕೊಳ್ಳಬೇಕು. ಎಲ್ಲವೂ ಹೀಗೆಯೇ ಆಗಬೇಕು ಎಂಬ ಪರ್ಫೆಕ್ಟಲಿ ಪರ್ಫೆಕ್ಷನಿಸ್ಟ್ ಎಂಬ ಪರಿಪೂರ್ಣತೆಯ ಮನೋಭಾವವನ್ನು ಕೈಬಿಡಬೇಕು. ಯಾವ ರೀತಿ ಒಂದೇ ದಿನದಲ್ಲಿ ಒಂದು ಮನೆಯನ್ನು ಕಟ್ಟಲು ಸಾಧ್ಯವಿಲ್ಲವೋ ಹಾಗೆಯೇ ಮೊದಲ ಪ್ರಯತ್ನದಲ್ಲಿಯೇ ಯಾರೂ ಪರಿಪೂರ್ಣರಾಗಲು ಸಾಧ್ಯವಿಲ್ಲ. ನಿರಂತರ ಪ್ರಯತ್ನಗಳು ಪರಿಪೂರ್ಣತೆಯತ್ತ ಸಾಗುವ ಹಾದಿ.
- ಮಕ್ಕಳು ಗೆದ್ದಾಗ ಪ್ರೋತ್ಸಾಹಿಸುವಷ್ಟೇ ಸಹಜವಾಗಿ ಅವರು ಸೋತು ಕೈ ಚೆಲ್ಲಿದಾಗ ಅವರಿಗೆ ಸಾಂತ್ವನ ಹೇಳುವ, ಮತ್ತೆ ಚೇತರಿಸಿಕೊಳ್ಳುವಂತೆ ಮಾಡಿ ತಮ್ಮ ಗುರಿಯೆಡೆ ಪ್ರಯತ್ನವನ್ನು ಮುಂದುವರಿಸುವ ನಿಟ್ಟಿನಲ್ಲಿ ಮಕ್ಕಳಿಗೆ ದಾರಿ ತೋರಬೇಕು.
ಪ್ರತಿಯೊಬ್ಬ ಯಶಸ್ವಿ ಮಗುವಿನ ಹಿಂದೆ ಅವರ ಪಾಲಕರು ಇದ್ದೇ ಇರುತ್ತಾರೆ. ಮಕ್ಕಳ ಬದುಕಿನ ಪ್ರತಿ ಹಂತದಲ್ಲಿಯೂ ಅವರನ್ನು ಪ್ರೀತಿಸುವ, ಪ್ರೋತ್ಸಾಹಿಸುವ, ಸಾಂತ್ವನಿಸುವ ಪಾಲಕರು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೊಂದಲು ಪ್ರೇರೇಪಣೆ ನೀಡುತ್ತಾರೆ. ನಿಮ್ಮ ಮಗು ಕೂಡ ಆತ್ಮವಿಶ್ವಾಸದಿಂದ ತುಂಬಿ ತುಳುಕುವಂತೆ ಮಾಡಲು ಮೇಲಿನ ಎಲ್ಲಾ ಅಂಶಗಳನ್ನು
ಅಳವಡಿಸಿಕೊಳ್ಳಬೇಕು…. ಏನಂತೀರಾ ಸ್ನೇಹಿತರೆ?
- ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ
