ಬದುಕಿಗೊಂದು ಸೆಲೆ (ಭಾಗ – ೫)

ಉದಾರೀಕರಣದ ಇಂದಿನ ದಿನಮಾನದಲ್ಲಿ ಎಲ್ಲರ ಬಳಿಯೂ ಸಾಕಷ್ಟು ಹಣ ಓಡಾಡುತ್ತಿದೆ. ಉತ್ತಮ ಗ್ರಾಹಕ ಸೇವೆ ನೀಡುವ ವ್ಯಾಪಾರಿಗಳು ಉದ್ಯಮದಲ್ಲಿ ಪ್ರಗತಿ ಸಾಧಿಸುತ್ತಾರೆ. ಲೇಖಕಿ ವೀಣಾ ಹೇಮಂತ್ ಗೌಡ ಪಾಟೀಲ್ ಅವರ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ ಕುರಿತು ಇಂದಿನ ಅಂಕಣದಲ್ಲಿ ಓದಿ…

ಆ ದಂಪತಿಗಳು ಅದಾಗ ತಾನೇ ಮಗುವೊಂದಕ್ಕೆ ಪಾಲಕರಾದ ಸಂಭ್ರಮದಲ್ಲಿ ಇದ್ದರು. ತನ್ನ ಪುಟ್ಟ ಹೆಣ್ಣು ಶಿಶುವಿಗೆ ಬಣ್ಣ ಬಣ್ಣದ ಉಡುಪುಗಳನ್ನು, ಸಾಕ್ಸುಗಳನ್ನು, ಸ್ವೆಟರ್ ಗಳನ್ನು, ಆಟಿಕೆ ಸಾಮಾನುಗಳನ್ನು ಖರೀದಿಸುವ ತನಕ. ಅಂತೆಯೇ ತಾವಿರುವ ಮಹಾನಗರದ ಪುಟ್ಟ ಮಕ್ಕಳಿಗಾಗಿಯೇ ಇರುವ ಅತಿ ದೊಡ್ಡ ಮಳಿಗೆಗೆ ಅವರಿಬ್ಬರೂ ಬಂದರು. ಮೊದಮೊದಲು ಅತ್ಯುತ್ಸಾಹದಿಂದ ಪತ್ನಿಯೊಂದಿಗೆ ಎಲ್ಲವನ್ನು ಆಯ್ದು ಬುಟ್ಟಿಗೆ ಹಾಕುತ್ತಿದ್ದ ಪತಿ ನಂತರ ಆಕೆಯ ಆಯ್ಕೆಯ ವೈಖರಿಯನ್ನು ನೋಡಿ ಸಾಕಾಗಿ ಮಳಿಗೆಯ ಒಂದು ಮೂಲೆಯಲ್ಲಿ ಹಾಕಿದ್ದ ಖಾಲಿ ಕುರ್ಚಿಯಲ್ಲಿ ಕುಳಿತನು.

ಅದೇ ಮಳಿಗೆಯಲ್ಲಿ ಕಣ್ಣಿಗೆ ಬಿದ್ದ ತನಗೆ ಇಷ್ಟವಾದ ಕೂಲ್ ಡ್ರಿಂಕನ್ನು ಪಡೆದು ನಿಧಾನವಾಗಿ ಕುಡಿಯುತ್ತಾ ಕುಳಿತನು. ತಣ್ಣಗಿನ ದ್ರವ ಹೊಟ್ಟೆಯನ್ನು ಸೇರುತ್ತಿದ್ದಂತೆ ಸಮಾಧಾನಗೊಂಡ ಆತ ಅದನ್ನು ಕಸದ ಬುಟ್ಟಿಗೆ ಹಾಕಿ ಬಿಲ್ ಪಾವತಿಸಲು ಹೋದಾಗ ಆತನಿಗೆ ಆಶ್ಚರ್ಯವಾದದ್ದು ಆ ಮಳಿಗೆಗೆ ಭೇಟಿ ಕೊಡುವ ಎಲ್ಲ ಗ್ರಾಹಕರಿಗೂ ಕೋಲ್ಡ್ ಡ್ರಿಂಕ್ ನ್ನು ಸಂಪೂರ್ಣ ಉಚಿತವಾಗಿ ಕೊಡುತ್ತಾರೆ ಎಂದು ಗೊತ್ತಾದಾಗ.

ನಗರದ ಅತ್ಯಂತ ಜನನಿಬಿಡ ಪ್ರದೇಶದ ವೃತ್ತ ಒಂದರಲ್ಲಿ ಇದ್ದ ಆ ಮಳಿಗೆಯಲ್ಲಿ ನವಜಾತ ಶಿಶುಗಳನ್ನು, ಚಿಕ್ಕ ಮಕ್ಕಳ ಪಾಲಕರು ತಮ್ಮ ಮಕ್ಕಳಿಗಾಗಿ ವಸ್ತುಗಳನ್ನು ಬಟ್ಟೆಗಳನ್ನು ಖರೀದಿಸಲು ಸಾಕಷ್ಟು ಸಮಯವನ್ನು ವಿನಿಯೋಗಿಸುತ್ತಾರೆ. ಅದು ಎರಡು ಗಂಟೆಯ ಅವಧಿಯ ಮಿನಿಮಮ್ ಶಾಪಿಂಗ್ ಸಮಯದಲ್ಲಿ ಕೇವಲ ಒಂದೆರಡು ಬಟ್ಟೆಗಳ ಜೊತೆಯಲ್ಲಿ ಅವರು ಎಂದೂ ಹೊರ ಬರುವುದಿಲ್ಲ ಎಂಬುದು ಅಂಗಡಿಯವರ ಗ್ರಹಿಕೆಯಾಗಿತ್ತು ಮತ್ತು ಅದು ನಿಜವೂ ಕೂಡ.

ಫೋಟೋ ಕೃಪೆ : ಅಂತರ್ಜಾಲ

ಆ ಮಳಿಗೆಯ ಹಲವೆಡೆ ಅಲ್ಲಲ್ಲಿ ಸುಖಾಸೀನಗಳನ್ನು ಜೋಡಿಸಿದ್ದು ಮಳಿಗೆಗೆ ಬರುವವರಲ್ಲಿ ಯಾರಾದರೂ ತಮ್ಮ ಮಗುವಿಗೆ ಹಾಲೂಡಬೇಕಾದರೆ ಅವರಿಗೆ ಪ್ರತ್ಯೇಕ ಕ್ಯಾಬಿನ್ ಗಳನ್ನು ಒದಗಿಸಲಾಗುತ್ತದೆ. ಗ್ರಾಹಕರ ಸಂತೃಪ್ತಿಯೇ ವ್ಯಾಪಾರದ ಯಶಸ್ಸಿನ ಗುಟ್ಟು ಎಂಬುದನ್ನು ಅರಿತಿರುವ ಬಹುತೇಕ ಅಂಗಡಿಕಾರರು ಅತ್ಯಂತ ಗೌರವಾನ್ವಿತ ರೀತಿಯಲ್ಲಿ ತಮ್ಮ ಗ್ರಾಹಕರೊಂದಿಗೆ ವ್ಯವಹರಿಸುತ್ತಾರೆ.

ಇದನ್ನೇ ಇಂಗ್ಲೀಷಿನಲ್ಲಿ ಸ್ಟ್ರ್ಯಾಟಜಿಕ್ ಜೆನರಾಸಿಟಿ ಎಂದು ಹೇಳುವುದು. ಕನ್ನಡದಲ್ಲಿ ಕಾರ್ಯತಂತ್ರದ ಉದಾರತೆ…. ಉದಾಹರಣೆಗೆ ಹೇಳುವುದಾದರೆ ದೊಡ್ಡ ದೊಡ್ಡ ಮಾಲ್ಗಳಲ್ಲಿನ ಬಟ್ಟೆ ಅಂಗಡಿಗಳಲ್ಲಿ ಇನ್ನೇನು ಎಲ್ಲಾ ಖರೀದಿ ಮುಗಿಸಿ ಬಿಲ್ ಕೌಂಟರ್ ನ ಬಳಿ ಬಂದರೆ ಅಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಅತ್ಯವಶ್ಯಕವಾಗಿರುವ ಸಾಕ್ಷಿಗಳು, ಕರ್ಚಿಫುಗಳು, ನೈಲ್ ಪಾಲಿಶ್, ಲಿಪ್ ಗಾರ್ಡ್, ಬೆಲ್ಟ್ ಗಳು ಮೆದುವಾದ ಮನೆಯಲ್ಲಿ ಧರಿಸುವ ಚಪ್ಪಲಿಗಳು ಹೀಗೆ ಹತ್ತು ಹಲವು ವಸ್ತುಗಳನ್ನು ಆಕರ್ಷಕವಾಗಿ ಜೋಡಿಸಿಡಲಾಗಿರುತ್ತದೆ. ನಾವು ಖರೀದಿಸಿದ ವಸ್ತುಗಳನ್ನು ಅವರು ಪಟ್ಟಿ ಮಾಡಿ ಬಿಲ್ ಹಾಕುವವರೆಗೆ ನಾವು ಅಲ್ಲಿಯೇ ಇರುವ ಮತ್ತೊಂದಷ್ಟು ವಸ್ತುಗಳನ್ನು ಖರೀದಿಸಿ ಅವರ ಮುಂದೆ ಇಡುತ್ತೇವೆ.ಇದು ಕೂಡ ಮಾರುಕಟ್ಟೆಯ ತಂತ್ರವೇ.

ಇನ್ನು ಮನೆಯ ಹತ್ತಿರದ ದಿನಸಿ ಅಂಗಡಿಗಳಲ್ಲಿ, ಪಾನ್ ಶಾಪ್ ಗಳಲ್ಲಿ ಕೆಲ ಅತ್ಯವಶ್ಯಕ ವಸ್ತುಗಳನ್ನು, ಕುರುಕಲು ತಿಂಡಿ ತಿನಿಸುಗಳನ್ನು ಕಣ್ಣಿಗೆ ಕಾಣುವಂತೆ ಅತ್ಯಾಕರ್ಷಕವಾಗಿ ಜೋಡಿಸಿರುತ್ತಾರೆ. ಏನನ್ನಾದರೂ ಖರೀದಿಸಲು ಬಂದಾಗ ಅವಶ್ಯಕ ವಸ್ತುವಿನ ಜೊತೆಗೆ ಮತ್ತೊಂದಿಷ್ಟು ವಸ್ತುಗಳು ಅದಕ್ಕೆ ಸೇರ್ಪಡೆಯಾಗುತ್ತದೆ. ಇದನ್ನು ಮಾರುಕಟ್ಟೆಯ ಭಾಷೆಯಲ್ಲಿ ಸ್ಟ್ರಾಟಜಿಕ್ ಜೆನರಾಸಿಟಿ ಎಂದು ಹೇಳುತ್ತಾರೆ. ಮಾರ್ಕೆಟಿಂಗ್ ಟೆಕ್ನಿಕ್ ಎಂದು ನಮ್ಮ ಜನ ಸಾಮಾನ್ಯರು ಬಳಸುವ ಭಾಷೆಯಲ್ಲಿ ನಾವು ಹೇಳುತ್ತೇವೆ.

ಇನ್ನು ಮೇಲೆ ಹೇಳಿದ ಮೊದಲ ಘಟನೆಯಲ್ಲಿ ಅಂಗಡಿ ಸದಾ ಜನರಿಂದ ತುಂಬಿರಲು ಕಾರಣ ಅಂಗಡಿಯ ಮಾಲೀಕರು ಮತ್ತು ವ್ಯವಸ್ಥಾಪಕರು ತಮ್ಮ ಗ್ರಾಹಕರ ಕುರಿತಾದ ಕಾಳಜಿಯನ್ನು ವ್ಯಕ್ತಪಡಿಸುವ ರೀತಿ. ಯಾವುದೇ ವಸ್ತುವನ್ನು ಖರೀದಿಸಲು ಹೋಗುವ ಜನರು ಸಾಧ್ಯವಾದಷ್ಟು ಅನುಕೂಲಕರ ವಾತಾವರಣವನ್ನು ಬಯಸುತ್ತಾರೆ…. ಚಿನ್ನದ ಅಂಗಡಿಗಳಲ್ಲಿಯೂ ಕೂಡ ಅಲ್ಲಿಗೆ ಬರುವ ಗ್ರಾಹಕರಿಗೆ ಮೊದಲ ಅರ್ಧಗಂಟೆಯಲ್ಲಿ ಕುಡಿಯುವ ನೀರನ್ನು ನಂತರ ಚಹಾ ಇಲ್ಲವೇ ಕಾಫಿಯನ್ನು ಸರಬರಾಜು ಮಾಡಲಾಗುತ್ತದೆ. ಇದು ಕೂಡ ಮಾರುಕಟ್ಟೆಯ ತಂತ್ರವೇ ಸರಿ.

ಫೋಟೋ ಕೃಪೆ : ಅಂತರ್ಜಾಲ

ನನ್ನ ಪರಿಚಯದ ಓರ್ವ ಸಂಬಂಧಿ ತಾನು ಪ್ರತಿ ಬಾರಿ ತನ್ನ ಕಾರನ್ನು ಸರ್ವಿಸ್ ಗೆ ಒಯ್ಯುವಾಗ ಒಂದಷ್ಟು ಚಾಕಲೇಟ್ ಗಳು ಮತ್ತು ಕೂಲ್ ಡ್ರಿಂಕ್ಸ್ ಬಾಟಲಿಗಳನ್ನು ತನ್ನ ಜೊತೆಗೆ ಒಯ್ಯುತ್ತಿದ್ದ. ಸರ್ವಿಸ್ ಮಾಡುವ ಕಂಪನಿಯ ಸಿಬ್ಬಂದಿ ಅವೆಲ್ಲವನ್ನು ಪ್ಯಾಕ್ ಮಾಡಿ ಆತನಿಗೆ ಕೊಡಲು ಬಂದಾಗ ಆ ಮೆಕ್ಯಾನಿಕ್ ವರ್ಗಕ್ಕೆ ಕೂಲ್ ಡ್ರಿಂಕ್ಗಳನ್ನು ಕುಡಿಯಲು ಮತ್ತು ಚಾಕ್ಲೇಟ್ ಗಳನ್ನು ತಿನ್ನಲು ಅವರ ಬೆನ್ನು ತಟ್ಟುತ್ತಿದ್ದ. ಮರಳಿ ಕಾರನ್ನು ಒಯ್ಯಲು ಬಂದಾಗ ಹತ್ತಿರದ ಹೋಟೆಲಿನಿಂದ ಚಹ ತರಿಸಿ ಅವರಿಗೆ ಕೊಡಿಸುತ್ತಿದ್ದ. ಹೀಗೆ ಹಲವಾರು ಬಾರಿ ಮಾಡಿದ ನಂತರ ಮೆಕ್ಯಾನಿಕ್ ಕೆಲಸ ಮಾಡುವ ಸಿಬ್ಬಂದಿಗಳು ಆತನ ಕಿವಿಯಲ್ಲಿ ತಮ್ಮ ವ್ಯವಹಾರದ ಗುಟ್ಟನ್ನು ರಟ್ಟು ಮಾಡುತ್ತಿದ್ದರು. ಅನವಶ್ಯಕವಾದ, ಮಾಡಿಸಬಾರದ ರಿಪೇರಿಗಳ ಕುರಿತು ಪಿಸುಗುಟ್ಟುತ್ತಿದ್ದ ಅವರು ಗಾಡಿಯನ್ನು ಹೇಗೆ ನಿರ್ವಹಿಸಬೇಕು ಎಂಬ ಸೂಕ್ಷ್ಮ ಗುಟ್ಟುಗಳನ್ನು ಆತನಿಗೆ ಹೇಳಿಕೊಡುತ್ತಿದ್ದರು… ಈ ರೀತಿ ಮಾಡುವ ಮೂಲಕ ತಾನು ಸಾಕಷ್ಟು ಹಣ ಮತ್ತು ಸಮಯವನ್ನು ಉಳಿಸಿಕೊಂಡೆ ಎಂದು ಆತ ಹೇಳುತ್ತಾನೆ.

ಕಾರ್ ಶೋರೂಮ್ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಓರ್ವ ಯುವತಿ ಅತ್ಯಾಧುನಿಕವಾದ ಪ್ರೀಮಿಯಂ ಕಾರನ್ನು ಮಾರಿದ ಸಂತಸಕ್ಕೆ ತನ್ನ ಟೀಮ್ನ ಸದಸ್ಯರಿಗೆ ದೊಡ್ಡ ಹೋಟೆಲ್ ಒಂದರಲ್ಲಿ ಊಟ ಮಾಡಿಸಲು ಇಚ್ಚಿಸಿದಳು … ಆದರೆ ಆಕೆಯ ಪತಿ ನಿನ್ನ ಟೀಮ್ನ ಸದಸ್ಯರಿಗೆ ಪಾರ್ಟಿ ಕೊಡುವ ಬದಲು ಅಷ್ಟೇ ಮೊತ್ತದ ಗಿಫ್ಟ್ ವೌಚರನ್ನು ನಿನ್ನಿಂದ ಕಾರನ್ನು ಖರೀದಿಸಿದ ವ್ಯಕ್ತಿಗೆ ಕೊಡು ಎಂದು ಆಕೆಗೆ ಸಲಹೆ ನೀಡಿದ. ಪತಿಯ ಸಲಹೆಯನ್ನು ಒಪ್ಪಿಕೊಂಡ ಆಕೆ ತನ್ನ ಆ ಗ್ರಾಹಕನಿಗೆ ಒಂದು ಪುಟ್ಟ ಧನ್ಯವಾದದ ಕಾರ್ಡಿನ ಜೊತೆ ಗಿಫ್ಟ್ ವೋಚರ್ ಖರೀದಿಸಿ ಕಳುಹಿಸಿದಳು.

ಆಶ್ಚರ್ಯ ಮರು ತಿಂಗಳು ಆಕೆಯಿಂದ ಕಾರನ್ನು ಖರೀದಿಸಿದ ವ್ಯಕ್ತಿ ತನ್ನ ಸ್ನೇಹಿತನಿಗೆ ಅದಕ್ಕಿಂತಲೂ ಹೆಚ್ಚು ದುಬಾರಿಯ ಕಾರನ್ನು ಖರೀದಿಸಲು ಅವರ ಶೋ ರೂಮಿಗೆ ಕರೆ ತಂದ. ಆಕೆ ಆ ಇಬ್ಬರೂ ಗ್ರಾಹಕರಿಗೆ ಕಾರಿನಲ್ಲಿ ಅತ್ಯವಶ್ಯಕವಾಗಿ ಬಳಸುವ ಬೆಲೆ ಬಾಳುವ ದುರ್ಗಂಧ ನಿವಾರಕ ಮತ್ತಿತರ ವಸ್ತುಗಳನ್ನು ಉಚಿತವಾಗಿ ನೀಡಿದಳು. ಮುಂದೆ ಅವರಿಬ್ಬರು ಆ ಕಂಪನಿಯ ಖಾಯಂ ಗ್ರಾಹಕರಾದರು.

ಓರ್ವ ವ್ಯಕ್ತಿ ತನ್ನ ಕಂಪನಿಯ ಕೆಲಸಕ್ಕಾಗಿ ಪದೇ ಪದೇ ಆ ಕಚೇರಿಗೆ ಹೋಗಬೇಕಾಗುತ್ತಿತ್ತು. ಅತ್ಯಂತ ಜನನಿಬಿಡ ಪ್ರದೇಶದಲ್ಲಿದ್ದ ಆ ಕಚೇರಿಯ ಆವರಣದಲ್ಲಿ ವಾಹನ ನಿಲುಗಡೆಯೇ ಅತಿ ದೊಡ್ಡ ಸಮಸ್ಯೆಯಾಗುತ್ತಿತ್ತು. ಇದರ ಮೇಲೆ ಆ ಕಚೇರಿಯಲ್ಲಿ ಕಾರ್ಯನಿರ್ವಹಿಸುವಾಗ ಆತನಿಗೆ ಕರೆ ಮಾಡಿ ವಾಹನವನ್ನು ತೆರವುಗೊಳಿಸಲು ಒತ್ತಾಯಿಸಲಾಗುತ್ತಿತ್ತು. ಇದರಿಂದ ಬೇಸತ್ತ ಆತ ಉಪಾಯವೊಂದನ್ನು ಮಾಡಿ ಅದರಂತೆ ಪ್ರತಿ ಬಾರಿ ತಾನು ಅಲ್ಲಿ ಹೋಗುವಾಗ ಕಾರನ್ನು ಪಾರ್ಕ್ ಮಾಡಿದ ನಂತರ ಅಲ್ಲಿದ್ದ ಸೆಕ್ಯೂರಿಟಿ ಮತ್ತು ಪಾರ್ಕಿಂಗ್ ಕೆಲಸವನ್ನು ನಿರ್ವಹಿಸುತ್ತಿದ್ದವರಿಗೆ ಚಿಲ್ಲರೆ ಹಣವನ್ನು ನೀಡಲಾರಂಭಿಸಿದ. ಆಗಾಗ ಅವರನ್ನು ಪ್ರೀತಿಯಿಂದ ಮಾತನಾಡಿಸಿ ಅವರಿಗೆ ಚಹಾ ಕುಡಿಯಿರಿ ಎಂದು ಒಂದಷ್ಟು ಹಣವನ್ನು ನೀಡಲಾರಂಭಿಸಿದ. ಒಂದೆರಡು ವಾರಗಳು ಹೀಗೆ ಕಳೆಯುವಷ್ಟರಲ್ಲಿ ಯಾವ ಸಮಯದಲ್ಲಿ ಬಂದರೆ ಪಾರ್ಕಿಂಗ್ ಲಾಟನ್ನು ತೆರವು ಮಾಡಿಸಬಹುದು ಯಾವ ಸ್ಥಳಗಳನ್ನು ಅವರಿಗೆ ಬಿಟ್ಟುಕೊಡಬಹುದು ಎಂಬ ಮಾಹಿತಿಗಳನ್ನು ಆ ಸೆಕ್ಯೂರಿಟಿ ಮತ್ತು ಪಾರ್ಕಿಂಗ್ ಸಿಬ್ಬಂದಿ ಆತನಿಗೆ ನೀಡಲಾರಂಭಿಸಿದರು… ಇದು ಕೂಡ ಒಂದು ರೀತಿಯ ವ್ಯವಹಾರ ಕೌಶಲ್ಯವೇ.

ಈ ರೀತಿಯ ವ್ಯವಹಾರ ಕೌಶಲ್ಯದ ಮತ್ತೊಂದು ಭಾಗ ತಮ್ಮಲ್ಲಿ ಬರುವ ಗ್ರಾಹಕರನ್ನು ಧನಾತ್ಮಕವಾಗಿ ಹೊಗಳುವುದು. ತಮ್ಮ ಜೊತೆ ವ್ಯವಹರಿಸುವ ಜನರೊಂದಿಗೆ ಒಳ್ಳೆಯ ಆತ್ಮೀಯತೆ ಉತ್ತಮ ಬಾಂಧವ್ಯ ಮತ್ತು ವ್ಯಾವಹಾರಿಕ ಜಾಣ್ಮೆಯನ್ನು ಹೊಂದಿರುವುದು. ಒಳ್ಳೆಯ ಭಾವನಾತ್ಮಕ ಮಾತುಕತೆಗಳ ಮೂಲಕ ಅವರ ಮನಸ್ಸಿಗೆ ಹತ್ತಿರವಾಗುವುದು. ಗ್ರಾಹಕರನ್ನು ನಮ್ಮ ಆತ್ಮೀಯ ವಲಯದವರು ಎಂಬಂತೆ ಬಿಂಬಿಸುವ ಮೂಲಕ ಅವರಿಗೆ ಹತ್ತಿರವಾಗುವುದು ಕೂಡ ಒಂದು ವ್ಯಾವಹಾರಿಕ ಜಾಣ್ಮೆ.

ಆದರೆ ಎಲ್ಲಾ ಸಮಯದಲ್ಲಿಯೂ ಎಲ್ಲ ಜನರನ್ನು ನಾವು ನಮ್ಮ ವ್ಯವಹಾರ ಕೌಶಲದಿಂದ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಕೆಲವರು ಮತ್ತೆ ನಮ್ಮ ಬಳಿ ಬರದೇ ಹೋಗಬಹುದು ಆದರೆ ಬರುವವರು ಮಾತ್ರ ಬಾರದೆ ಇರುವವರನ್ನು ಕೂಡ ಮತ್ತೆ ಅದೇ ಮಳಿಗೆಗಳಿಗೆ ಮತ್ತೇ ಬರುವಂತೆ ಕರೆ ತರಲು ಶಕ್ತರಾಗಿರುತ್ತಾರೆ.

ಅಂತಿಮವಾಗಿ ಅತ್ಯುತ್ತಮ ಗ್ರಾಹಕ ಸೇವೆಯನ್ನು ಮಾಡುವ ಮೂಲಕ ಕೂಡ ನಾವು ಜನರನ್ನು ಹಿಡಿದಿಟ್ಟು ಕೊಳ್ಳಬಹುದು. ಸೇವೆಯಲ್ಲಿ ಉಂಟಾಗುವ ವ್ಯತ್ಯಯಗಳನ್ನು ಪುನರಾವರ್ತಿಸದಂತೆ ನೋಡಿಕೊಳ್ಳುವ, ಆಗಿ ಹೋಗಿರುವ ತಪ್ಪಿಗೆ ಕ್ಷಮೆ ಯಾಚಿಸುವ, ಮತ್ತೆ ಅತ್ಯುತ್ತಮ ಸೇವೆಯನ್ನು ಖಂಡಿತವಾಗಿ ನೀಡುವ ಭರವಸೆಯನ್ನು ನೀಡಬೇಕಾಗುತ್ತದೆ…. ಮತ್ತು ಅಂತೆಯೇ ನಡೆದು ಕೂಡ ತೋರಿಸಬೇಕಾಗುತ್ತದೆ.

ಮತ್ತೆ ಕೆಲ ವ್ಯಾಪಾರ ಮತ್ತು ಗ್ರಾಹಕರ ನಡುವಿನ ಸಂಬಂಧಗಳು ಸಂಪೂರ್ಣ ವ್ಯಾವಹಾರಿಕವಾಗಿದ್ದು ಅವರು ಕಳುಹಿಸುವ ಆರ್ಡರ್ಗಳನ್ನು ಶೀಘ್ರವಾಗಿ ಮತ್ತು ವ್ಯವಸ್ಥಿತ ರೀತಿಯಲ್ಲಿ ತಲುಪಿಸಿದರೆ ಆಯ್ತು ಗ್ರಾಹಕ ನಿಮ್ಮ ಮೇಲೆ ಭರವಸೆಯನ್ನು ಇಡಲು ಇಷ್ಟು ಮಾತ್ರದ ಸೇವೆ ಸಾಕು!. ಉತ್ತಮ ಗುಣಮಟ್ಟದ ಸೇವೆಯನ್ನು ಯಾವುದೇ ರೀತಿಯ ಆತ್ಮೀಯ ಅಥವಾ ವ್ಯವಹಾರಿಕ ಸಂಬಂಧಗಳ ಪ್ರಮೇಯ ಇಲ್ಲದೆ ಜನರು ಒಪ್ಪಿಕೊಳ್ಳಲು ಕಾರಣ ಸೇವೆಯ ವಿಷಯದಲ್ಲಿ ರಾಜಿಯಾಗದೆ ಕಾರ್ಯನಿರ್ವಹಿಸುವ ಮಾರಾಟಗಾರರು ಯಾವುದೇ ಜಾಹೀರಾತುಗಳಿಲ್ಲದೆ ತಮ್ಮ ಗ್ರಾಹಕರ ಮೂಲಕವೇ ಮತ್ತಷ್ಟು ಹೆಚ್ಚು ಬೇಡಿಕೆಯನ್ನು ಪಡೆಯುತ್ತಾರೆ. ಉತ್ತಮ ಸೇವೆಯನ್ನು ಹೊಗಳುವ ಗ್ರಾಹಕರು ನಿಮಗೆ ಮತ್ತಷ್ಟು ಗ್ರಾಹಕರನ್ನು ತಂದು ಕೊಡುವುದರಲ್ಲಿ ಆಶ್ಚರ್ಯವಿಲ್ಲ. ಖಂಡಿತವಾಗಿಯೂ ನಿಮ್ಮ ಗ್ರಾಹಕರು ನಿಮ್ಮ ಉತ್ಪಾದನೆಗಳಿಗೆ ಒಳ್ಳೆಯ ಜಾಹೀರಾತುದಾರರು.

ಉದಾರೀಕರಣದ ಇಂದಿನ ದಿನಮಾನದಲ್ಲಿ ಎಲ್ಲರ ಬಳಿಯೂ ಸಾಕಷ್ಟು ಹಣ ಓಡಾಡುತ್ತಿದ್ದು ಸಮಯದ ಅಭಾವದಿಂದ ಒದ್ದಾಡುವ, ಸಣ್ಣ ಪುಟ್ಟ ಖರೀದಿಗಳಿಗೆ ಸಮಯವನ್ನು ಮೀಸಲಿಡಲು ಇಚ್ಚಿಸದ ಜನರು ಆನ್ಲೈನ್ ಇರಲಿ ಅಥವಾ ಮಳಿಗೆಗಳಿಗೆ ಭೇಟಿ ನೀಡಿ ಖರೀದಿಸಲಿ… ಬಯಸುವುದು ಉತ್ತಮ ಗ್ರಾಹಕ ಸೇವೆಯನ್ನು ಮಾತ್ರ. ಇದನ್ನು ಬಂಡವಾಳವನ್ನಾಗಿಸಿಕೊಳ್ಳುವ ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಾರೆ….. ಸ್ನೇಹಿತರೆ ನಿಮಗೂ ಈ ರೀತಿಯ ಅನುಭವ ಆಗಿದೆಯೇ?

ಹಿಂದಿನ ಸಂಚಿಕೆಗಳು :


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ ಗದಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW