ಬದುಕಿಗೊಂದು ಸೆಲೆ (ಭಾಗ- ೫೩)

ಮಂಗಳ ಕಪೂರ್ ಎಂಬ ಆ ಬಾಲಕಿ ದೇಹಕ್ಕಾದ ದುರಂತ ತನ್ನ ಬದುಕನ್ನು ವಿಭಿನ್ನವಾಗಿ ಅರ್ಥೈಸಲು ಬಿಡಲಿಲ್ಲ.ಸರಿಸುಮಾರು 6 ವರ್ಷಗಳ ಕಾಲ ಆಕೆಯ ಆಸ್ಪತ್ರೆವಾಸದಲ್ಲಿ ತಾಯಿ ಆಕೆಗೆ ಜೊತೆಯಾದರೆ ತಂದೆ ಆಕೆಯ ಮುಂದಿನ ಶಿಕ್ಷಣದ ವ್ಯವಸ್ಥೆ ಮಾಡಿದರು. ಕಾಶಿಯ ಲತಾ ಮಂಗಳ ಕಪೂರ್ ಗೆ ಪದ್ಮಶ್ರೀ ಪುರಸ್ಕಾರ ವೀಣಾ ಹೇಮಂತಗೌಡ ಪಾಟೀಲ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಆಕೆಯ ಮುಖಕ್ಕೆ ಆಸಿಡ್ ಎರಚಿ ಆಕೆಯ ಬದುಕನ್ನೇ ನಾಶ ಮಾಡಿದಾಗ ಆಕೆಗೆ ಕೇವಲ 12 ವರ್ಷ ವಯಸ್ಸು. ಆಟವಾಡಿಕೊಂಡು ಇರಬೇಕಾದ ಹುಡುಗಿ, ರಂಗು ರಂಗಿನ ಕನಸುಗಳನ್ನು ಕಾಣುತ್ತಾ ಭವಿಷ್ಯದ ಹೊಂಗನಸುಗಳಿಗೆ ಲಗ್ಗೆ ಹಾಕಬೇಕಾದ ವಯಸ್ಸಿನಲ್ಲಿ, ಅಪಾರವಾದ ನೋವು ಮತ್ತು ಭಯದಿಂದ ಹತ್ತು ಹಲವಾರು ಆಸ್ಪತ್ರೆಗಳ ಮೆಟ್ಟಿಲುಗಳನ್ನು ಹತ್ತಿ ಇಳಿಯಬೇಕಾಯಿತು. ಹೆಚ್ಚು ಕಡಿಮೆ 37 ಶಸ್ತ್ರ ಚಿಕಿತ್ಸೆಗಳನ್ನು ಆಕೆಯ ದೇಹ ಪಡೆದುಕೊಂಡಿತು.

ದೈಹಿಕವಾಗಿ ಆದ ನೋವುಗಳನ್ನು ಆಕೆ ಹೇಗೋ ತಡೆದುಕೊಂಡಳು. ಆದರೆ ಸಾಮಾಜಿಕವಾಗಿ ವಿಪರೀತ ನೋವನ್ನು ಅನುಭವಿಸಿದಳು. ಆಕೆಯನ್ನು ನೋಡಿದೊಡನೆ ಮುಖ ತಿರುಗಿಸುವ, ಹೆದರಿ ಓಡಿ ಹೋಗುವ ಜನರು ತಮ್ಮ ಮಕ್ಕಳನ್ನು ಹೆದರಿಸಲು ಗುಮ್ಮನನ್ನು ಕರೆಯುವಂತೆ ಆಕೆಯನ್ನು ಕರೆಸುತ್ತೇನೆ ನೋಡು ಎಂದು ಹೆದರಿಸುತ್ತಿದ್ದರು ಎಷ್ಟೋ ಜನ ಆಕೆಯ ತಾಯಿಗೆ ಮಗುವಿಗೆ ವಿಷ ಕೊಟ್ಟು ಕೊಲ್ಲಲು ಸಲಹೆ ನೀಡಿದ್ದರು.

ಆದರೆ ಮಂಗಳ ಕಪೂರ್ ಎಂಬ ಆ ಬಾಲಕಿ ದೇಹಕ್ಕಾದ ದುರಂತ ತನ್ನ ಬದುಕನ್ನು ವಿಭಿನ್ನವಾಗಿ ಅರ್ಥೈಸಲು ಬಿಡಲಿಲ್ಲ. ಇದರಿಂದ ಆಕೆ ಕೊಂಚವೂ ವಿಚಲಿತವಾಗದಿರಲು ಕಾರಣವಾದದ್ದು ಬಟ್ಟೆ ವ್ಯಾಪಾರಿಯಾದ ಆಕೆಯ ತಂದೆ. ತನ್ನ ಮಗಳು ಇರುವಂತೆಯೇ ಆಕೆಯನ್ನು ಒಪ್ಪಿಕೊಂಡ ತಂದೆ ಸರಿಸುಮಾರು 6 ವರ್ಷಗಳ ಕಾಲ ಆಕೆಯ ಆಸ್ಪತ್ರೆವಾಸದಲ್ಲಿ ತಾಯಿ ಆಕೆಗೆ ಜೊತೆಯಾದರೆ ತಂದೆ ಆಕೆಯ ಮುಂದಿನ ಶಿಕ್ಷಣದ ವ್ಯವಸ್ಥೆ ಮಾಡಿದ.

ನೋವು ಹಾಗೂ ಗಾಢ ಅಂಧಕಾರದಲ್ಲಿ ತನ್ನ ಬದುಕು ಮುಳುಗಿದ ಸಮಯದಲ್ಲಿಯೂ ಕೂಡ ಆಕೆ ಸಂಗೀತವನ್ನು ತನ್ನ ಜೀವನದ ಬೆಳ್ಳಿರೇಖೆಯನ್ನಾಗಿಸಿದಳು. ಆಕೆಯ ಧ್ವನಿಯೇ ಆಕೆಯ ಬದುಕಿನ ದುರಂತದ ಪರಿಣಾಮವಾಗಿ ಉಂಟಾದ ಹತಾಶೆಗೆ ದಂಗೆಯೇಳಲು ಪ್ರೇರೇಪಿಸಿತು.

ಇಡೀ ಜಗತ್ತು ಆಕೆಯನ್ನು ಸಂಶಯದ ದೃಷ್ಟಿಯಿಂದ ನೋಡಿದಾಗ ತಲೆಕೆಡಿಸಿಕೊಳ್ಳದ ಆಕೆ ತನ್ನನ್ನು ತಾನು ಓದಿನಲ್ಲಿ ತೊಡಗಿಸಿಕೊಂಡು ಪದವಿಯನ್ನು ಪೂರ್ಣಗೊಳಿಸಿದಳು. ನಂತರ ಸ್ನಾತಕೋತ್ತರ ಪದವಿಯನ್ನು ಪಡೆದ ಆಕೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಂಗೀತದಲ್ಲಿ ಪಿ ಎಚ್‌ ಡಿ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪಡೆದರು.

1989 ರಲ್ಲಿ ಆಕೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಲು ಆರಂಭಿಸಿ ಸತತ ಮೂರು ದಶಕಗಳ ಕಾಲ ವಿದ್ಯಾರ್ಥಿಗಳ ಹೃದಯ ಮತ್ತು ಮನಸ್ಸನ್ನು ಆಳುವ ಸಂಗೀತವನ್ನು ಕಲಿಸಿದರು. ಸಂಗೀತವೆಂಬ ಸಾಧನದ ಮೂಲಕ ಸಾಮಾಜಿಕ ಬದಲಾವಣೆಯನ್ನು ತರಲು ಸಾಧ್ಯ ಎಂದು ಜನರಿಗೆ ತೋರಿಸಿ ಕೊಟ್ಟರು. 2019ರಲ್ಲಿ ನಿವೃತ್ತರಾದ ಆಕೆ ಇಂದಿಗೂ ಕೂಡ ಮಕ್ಕಳಿಗೆ ಉಚಿತವಾಗಿ ಸಂಗೀತ ಪಾಠವನ್ನು ಹೇಳಿಕೊಡುತ್ತಿದ್ದಾರೆ.

ಸಂಗೀತದಲ್ಲಿ ಅತ್ಯಂತ ಹಳೆಯ ಫರಾನೆಯಾದ ಗ್ವಾಲಿಯರ್ ಘರಾನ ಸಂಗೀತಗಾರ್ತಿಯಾದ ಆಕೆಯನ್ನು ಕಾಶಿಯ ಲತಾ ಎಂದು ಕರೆಯುತ್ತಾರೆ. ವಿಶೇಷವಾದ ಹಳೆಯ ರಾಗಗಳನ್ನು ಗುರುತಿಸಿ ಅವುಗಳನ್ನು ದಾಖಲಿಸುವ ಕಾರ್ಯವನ್ನು ಮಂಗಳ ಅವರು ಮಾಡಿದ್ದಾರೆ.

ಅತ್ಯಂತ ಹಳೆಯ ಗ್ವಾಲಿಯರ್ ಪರಂಪರೆಯ ಹಾಡುಗಾರ್ತಿಯಾಗಿರುವ ಆಕೆ ಬದುಕು ತನ್ನ ಮುಖವನ್ನು ಕಸಿದುಕೊಂಡಿದೆಯೇ ಹೊರತು ನನ್ನ ಧ್ವನಿಯನ್ನಲ್ಲ ಎಂದು ಅಭಿಮಾನದಿಂದ ಹೇಳುವ ಆಕೆ ತನ್ನ ವಿದ್ಯಾರ್ಥಿಗಳಿಗೆ ಅಂಗವಿಕಲತೆ ಎಂಬುದು ನಮ್ಮ ದೇಹದಲ್ಲಿರುವುದಿಲ್ಲ ಬದಲಾಗಿ ಅದು ನಮ್ಮ ಮನಸ್ಸಿನಲ್ಲಿ ಇರುತ್ತದೆ. ಅದನ್ನು ನಾವು ಗೆಲ್ಲಬೇಕು ಎಂದು ಆಕೆ ಹೇಳುತ್ತಾರೆ.

ಎಸಿಡ್ ದಾಳಿಗೆ ಒಳಗಾದ ಮೊದಲ ವ್ಯಕ್ತಿ ಎಂದು ಆಕೆಯನ್ನು ಸಮಾಜ ಗುರುತಿಸಿತ್ತು. ಇದೀಗ ಆಕೆ ಅದೇ ಸಾಮಾಜಿಕ ನಿಯಮಾವಳಿಗಳನ್ನು ತನ್ನ ಅದ್ಭುತವಾದ ಹಾಡುಗಾರಿಕೆಯಿಂದ ಮುರಿದಿದ್ದು ಇದೀಗ 2026 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರವು ಅವರಿಗೆ ದೊರೆತಿದೆ.

ಉಳಿಯುವಿಕೆಯ ಹೋರಾಟದಿಂದ ಆರಂಭವಾದ ಆಕೆಯ ಬದುಕಿನ ಪಯಣ ಮಹೋನ್ನತ ಪದವಿಯವರಿಗೆ ಸಾಗಿತು. ದುರಂತದಿಂದ ಜಯಭೇರಿಯತ್ತ ಸಾಗಿತು. ಆಕೆಯ ಸಾಮರ್ಥ್ಯವನ್ನು ಒರೆಗೆ ಹಚ್ಚುವ, ಸ್ಥಿರತೆಯನ್ನು, ಧೈರ್ಯ ಹಾಗೂ ಮಾನವೀಯ ಬದುಕಿನ ಉತ್ಸಾಹಗಳನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಬದುಕು ಎಲ್ಲ ರೀತಿಯ ಸವಾಲುಗಳನ್ನು ಒಡ್ಡಿತ್ತು. ಆ ಎಲ್ಲ ಸವಾಲುಗಳಿಗೆ ತಮ್ಮ ಸಂಗೀತದ ಮೂಲಕವೇ ಮಂಗಳ ಉತ್ತರ ನೀಡಿದರು.

ಇದೀಗ ಇಡೀ ದೇಶವು ಆಕೆಯ ಅಸಾಧಾರಣ ಬದುಕಿನ ಕಥೆ ಹಾಗೂ ಅಚಲ ಆತ್ಮವಿಶ್ವಾಸ, ಶ್ರದ್ಧಾಪೂರ್ವಕ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಆಕೆಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

ತನ್ನದೆ ಸುಟ್ಟ ಬೂದಿಯಿಂದ ಮತ್ತೆ ಹುಟ್ಟನ್ನು ಪಡೆಯುವ ಫೀನಿಕ್ಸ್ ಹಕ್ಕಿಯಂತೆ ಬದುಕು ನೀಡಿದ ಹತ್ತು ಹಲವಾರು ಹೊಡೆತಗಳನ್ನು ಎದುರಿಸಿ ಮತ್ತೆ ಬದುಕನ್ನು ಎದುರಿಸಲು ಹೊರಡುವ ಛಾತಿ ಮಂಗಳ ಅವರದು. ಸಂಗೀತದ ಕುರಿತದ ನಾಲ್ಕು ಹೆಚ್ಚು ಕೃತಿಗಳು ಹಾಗೂ ಒಂದು ಆತ್ಮಕಥೆಯನ್ನು ಆಕೆ ಬರೆದಿದ್ದಾರೆ.

ತಮಗಾದ ನೋವನ್ನೇ ಬದುಕಿನ ಒಂದು ಗುರಿ ಸಾಧನೆಗೆ ಉದ್ದೇಶವನ್ನಾಗಿಸಿಕೊಂಡು ಕೇವಲ ತಮ್ಮ ಬದುಕನ್ನು ಮಾತ್ರವಲ್ಲದೆ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ ಡಾಕ್ಟರ್ ಮಂಗಳ ಕಪೂರ್ ಅವರು ಖಂಡಿತವಾಗಿಯೂ ಅಭಿನಂದನೆಗೆ ಅರ್ಹರು. ಅವರಿಗೆ ಈ ಪ್ರಶಸ್ತಿಯನ್ನು ನೀಡುವ ಮೂಲಕ ಸರ್ಕಾರ ಅಂತಹ ಎಲ್ಲಾ ಆಸಿಡ್ ದಾಳಿಗೊಳಗಾದ ಮಹಿಳೆಯರ ಸಮ್ಮಾನವನ್ನು ರಕ್ಷಿಸುವ ನಿಟ್ಟಿನಲ್ಲಿ ಅಭಿನಂದನಾರ್ಹ ಕಾರ್ಯನಿರ್ವಹಿಸಿದೆ.


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW