“ಮರಳಿ ಬಾರಯ್ಯ ಬಲೀಂದ್ರ “

ಬಲಿಚಕ್ರವರ್ತಿ ಈ ದೇಶದ ಮೊದಲ ಕೃಷಿಕ ಚಕ್ರವರ್ತಿ. ಬಲಿ ಚಕ್ರವರ್ತಿ ಹುಟ್ಟಿನಿಂದ ರಾಕ್ಷಸನಾದರೂ, ವರ್ತನೆಯಿಂದ ಬಹಳ ಸಾತ್ವಿಕ ಹಾಗೂ ದೈವಭಕ್ತನಾಗಿದ್ದ. ಇನ್ನಷ್ಟು ರೋಚಕ ವಿಷಯವನ್ನು ಸೌಮ್ಯ ಸನತ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ರಾಮಾಯಣ, ಮಹಾಭಾರತ, ಭಾಗವತ ಹಾಗೂ ಪುರಾಣ ಗ್ರಂಥಗಳಲ್ಲಿ ಕಾಣುವ ಘಟನೆಗಳು ನಡೆದು ಸಾವಿರಾರು ವರುಷಗಳೇ ಕಳೆದಿವೆ. ಆದರೂ, ಅಂದಿನ ಪ್ರಮುಖ ಸಂಗತಿಗಳು ನಾವಿಂದು ವರ್ಷಂಪ್ರತಿ ಆಚರಿಸುವ ಹಬ್ಬಗಳಲ್ಲಿ ಕಣ್ಣಮುಂದೆ ಬಂದು ನಿಲ್ಲುತ್ತವೆ. ಸಾಲುದೀಪಗಳನ್ನು ಬೆಳಗಿ, ಬಾಣ – ಬಿರುಸುಗಳೊಂದಿಗೆ ಸಂಭ್ರಮದಿಂದ ಆಚರಿಸುವ ದೀಪಾವಳಿಯಲ್ಲಿ ವಿವಿಧ ಕಾಲಘಟ್ಟಗಳಲ್ಲಿ ನಡೆದಿರುವ ಹಲವು ಸಂಗತಿಗಳು ಸೇರಿರುವುದು ಕಂಡುಬರುತ್ತವೆ. ಇದರಲ್ಲಿ, ಶ್ರೀ ಕೃಷ್ಣನಿಂದ ದುಷ್ಟ ನರಕಾಸುರನ ಸಂಹಾರವಾದ ದಿನ ಅಂದರೆ, ಅವನಿಂದ ತುಂಬಿದ್ದ ತಮಸ್ಸು ಹೋಗಿ, ಬೆಳಕು ಹರಡಿದ ದಿನದ ಸಂಭ್ರಮವಿದೆ. ಅದರ ಜೊತೆಗೆ ಪ್ರತಿವರುಷವೂ ಈ ದೀಪಾವಳಿಯ ಸಮಯದಲ್ಲಿ ತಾನು ಬಿಟ್ಟುಹೋದ ರಾಜ್ಯವನ್ನು ನೋಡಲು ಭೂಮಿಗೆ ಬರುವ ನಮ್ಮ ಲೋಕದ ಹಿಂದಣ ಚಕ್ರವರ್ತಿ, ಬಲಿರಾಜನನ್ನು ನಾವು ಸಾಲು ದೀಪಗಳನ್ನು ಬೆಳಗಿಸಿ ಸ್ವಾಗತಿಸುವ ಸಂಭ್ರಮವೂ ಇದೆ.

ಮೂರು ದಿನಗಳ ದೀಪಾವಳಿಯ ಸಂಭ್ರಮದಲ್ಲಿ ಮೂರನೆಯ ದಿನ ಆಚರಿಸುವ ಹಬ್ಬ ಬಲಿ ಪಾಡ್ಯಮಿ. ಬಲಿ ಪಾಡ್ಯಮಿಯೊಂದಿಗೆ ಮೂರು ದಿನಗಳ ಹಬ್ಬ ಮುಕ್ತಾಯವಾಗುತ್ತದೆ. ಅಮಾವಾಸ್ಯೆಯ ನಂತರದ ಪಾಡ್ಯದಂದು ದಾನವ ಅರಸನಾದ “ಬಲೀಂದ್ರನ” ಪೂಜೆಯನ್ನು ನಡೆಸುವುದರಿಂದ ಈ ದಿನವನ್ನು “ಬಲಿಪಾಡ್ಯಮಿ” ಎಂದೇ ಹೇಳಲಾಗುತ್ತದೆ.

ಯಾರೀ ಬಲಿ?

“ಬಲಿ ಚಕ್ರವರ್ತಿ” ಇಡೀ ದಕ್ಷಿಣ ಏಷ್ಯಾದಲ್ಲಿಯೇ ಜನಜನಿತವಾದ ಹೆಸರು ಮತ್ತು ಒಂದು ಸಾಂಸ್ಕೃತಿಕ ಅಸ್ಮಿತೆಯಾಗಿ ಇವತ್ತಿನ ಆಧುನಿಕ ಕಾಲದಲ್ಲೂ ಜನಮಾನಸದಲ್ಲಿ ಉಳಿದಿರುವ ಹೆಸರು. ಅವನ ಬಗೆಗಿನ ಜನರ ಸ್ಮರಣೆಗಳು ಜಾನಪದ, ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳು ನಡೆದು ಸಮಾಜದಲ್ಲಿ ಇಂದಿಗೂ ವಿಸ್ತರಣೆಗಳನ್ನು ಪಡೆದುಕೊಂಡಿವೆ. ಆ ಮಟ್ಟಿಗೆ ಬಲಿ ನಮ್ಮೆಲ್ಲರ ಸ್ಮರಣೆಯಲ್ಲಿ ಆಳವಾಗಿ ನೆಲೆಗೊಂಡಿದ್ದಾನೆ.

ಹಿರಣ್ಯ ಕಶ್ಯಪನ ವಂಶಸ್ಥನಾದ ಈತ ದಾನವನಾದರೂ, ಬಲಿಪಾಡ್ಯಮಿಯ ದಿನ ಜನರೆಲ್ಲರೂ ಬಲಿ ಮಹಾರಾಜನನ್ನು ಭಕ್ತಿ, ಶ್ರದ್ಧೆಗಳಿಂದ ಆರಾಧಿಸುತ್ತಾರೆ. ಈತ ಹಿರಣ್ಯ ಕಶ್ಯಪುವಿನ ಮಗ ಮಹಾವಿಷ್ಣು ಭಕ್ತನಾದ ಪ್ರಹ್ಲಾದನ ಮೊಮ್ಮಗ ಹಾಗೂ ತನ್ನ ತಾತನಂತೆ ಈತನು ಕೂಡಾ ಮಹಾನ್ ವಿಷ್ಣು ಭಕ್ತನೇ.

“ರತ್ನಗಿರಿ” ಎಂಬ ಆಡಳಿತ ಪ್ರದೇಶದಲ್ಲಿ ಅತ್ಯಂತ ದಕ್ಷ ಸಮರ್ಥ ಆಡಳಿತಗಾರನೆನೆಸಿದ್ದ ಚಕ್ರವರ್ತಿ ಮಹಾಬಲಿಯ ಸಾಮ್ರಾಜ್ಯ ಅತ್ಯಂತ ವಿಶಾಲವಾದ ಮತ್ತು ಸಮೃದ್ಧಿಯಿಂದ ಕೂಡಿದ ಮಹಾ ಸಾಮ್ರಾಜ್ಯವಾಗಿತ್ತು. ಬಲಿ ಮಹಾರಾಜನ ಸಾಮ್ರಾಜ್ಯದ ವಿಸ್ತರಣೆ ಕೇಳಿದರೆ ವಿಸ್ಮಯವೆನಿಸುತ್ತದೆ. ಇಂದಿನ ಶ್ರೀಲಂಕಾದಲ್ಲಿ ಕೆಲವು ದ್ವೀಪಗಳು ಸಹ ಅವನ ಆಳ್ವಿಕೆಯಲ್ಲಿ ಸೇರಿದ್ದವು. ಮಲೇಶಿಯಾದಲ್ಲಿ ಸಹ ಇವನ ಆಳ್ವಿಕೆಗೆ ಒಳಪಟ್ಟ ಒಂದು ದ್ವೀಪ ಇತ್ತು ಇಂದಿಗೂ ಅದನ್ನು “ಬಾಲಿ” ದ್ವೀಪ ಎಂದು ಕರೆಯುವರು. ಕರಾವಳಿ ಪ್ರದೇಶದಿಂದ ಹಿಡಿದು ದೂರದ ಪಶ್ಚಿಮ ಕೊಲ್ಲಾಪುರದವರೆಗೆ ಹರಡಿದ ಪ್ರದೇಶವೂ ಬಲಿರಾಜನ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿತ್ತು .

ಅಪ್ಪಟ ಸಂಗೀತ ಪ್ರೇಮಿಯಾಗಿದ್ದ ಬಲಿ ಚಕ್ರವರ್ತಿ ತಾನೇ ಸ್ವತಃ “ಮಲ್ಹಾರ ” ಎಂಬ ಹೊಸರಾಗ ಒಂದನ್ನು ಸಂಯೋಜಿಸಿದನು. ಮುಂದೆ ಮಿಯಾನ್ ಎಂಬ ಮತ್ತೊಬ್ಬ ಮಹಾನ್ ಸಂಗೀತಕಾರ ಈ “ಮಲ್ಹಾರ್” ರಾಗವನ್ನು ಲಯಬದ್ಧವಾಗಿ ಸಂಯೋಜಿಸಿ ಅದಕ್ಕೆ “ಮಿಯಾನ್ ಮಲ್ಹಾರ್ ” ಎಂಬ ಹೆಸರಿಟ್ಟು ಅದು ಪ್ರಸಿದ್ಧಿಗೆ ಬರಲು ಕಾರಣವಾದನು. ಕಾಶಿಯಲ್ಲಿ ತನ್ನ ವಿಶ್ರಾಂತಿ ಸಮಯವನ್ನು ಕಳೆಯುತ್ತಿದ್ದ ಸಮಯದಲ್ಲಿ ಬಲಿ ಮತ್ತೊಂದು ಅದ್ಭುತವಾದ ರಾಗವನ್ನು ಸಂಯೋಜಿಸಿದ್ದ ಅದು ಮುಂದೆ ಭೈರವ ರಾಗವೆಂದು ಪ್ರಸಿದ್ಧಿಗೆ ಬಂತು. ತಾನ್ ಸೇನ್ ನಂತಹ ಸಂಗೀತ ದಿಗ್ಗಜನ ಮನಸೂರೆಗೊಂಡ “ಭೈರವ ರಾಗದ ” ಜನಕನೇ ಈ ಬಲಿ ಚಕ್ರವರ್ತಿ.

ಬಲಿಚಕ್ರವರ್ತಿ ಈ ದೇಶದ ಮೊದಲ ಕೃಷಿಕ ಚಕ್ರವರ್ತಿ. ರೈತರು ಬಗ್ಗೆ ಅಪಾರ ಕಾಳಜಿ ಇದ್ದ ರಾಜ. ರೈತರ ಕಷ್ಟ ಸುಖ ದುಃಖಗಳನ್ನು ಆಲಿಸಲೆಂದೇ ಅಧಿಕಾರಿಗಳನ್ನು ನೇಮಿಸಿದ್ದನಂತೆ. ರೈತಾಪಿ ವರ್ಗಕ್ಕೆ ಅನುಕೂಲವಾಗುವಂತೆ ರೈತರ ಬೆಳೆದ ಎಲ್ಲಾ ಬೆಳೆಗೆ ನೀಡಬಹುದಾದ ಎಲ್ಲಾ ಸೌಲಭ್ಯಗಳನ್ನು ಸಿಗುವಂತೆ ಮಾಡುತ್ತಿದ್ದನಂತೆ ಆದ್ದರಿಂದಲೇ ಇಂದಿಗೂ ರೈತರು ಯಾವುದೇ ಕೃಷಿ ಚಟುವಟಿಕೆ ಇರಲಿ ಅದನ್ನು ಆರಂಭಿಸುವಾಗ, ಸಸಿ ನೆಡುವಾಗ, ಹೊಲದ ಬದು ನೆಡುವಾಗ ಬಲಿಯನ್ನು ನೆನೆಸಿ ಪೂಜೆ ಮಾಡುವ ಪದ್ಧತಿಯಿದೆ. ಈತ ದಯಾಳು ಹಾಗೂ ಕರುಣಾಮಯಿಯಾಗಿದ್ದನಂತೆ. ಆತನ ಆಳ್ವಿಕೆಯ ಸಮಯದಲ್ಲಿ ಜನರು ಕಷ್ಟದಿಂದ ಬಳಲಿದ್ದೇ ಇಲ್ಲವಂತೆ. ಪ್ರತಿಯೊಬ್ಬ ಪ್ರಜೆ ಬಲಿ ಚಕ್ರವರ್ತಿ ಆಡಳಿತದಿಂದ ಖುಷಿಯಾಗಿದ್ದು ರಾಜ್ಯದಲ್ಲಿ ಶಾಂತಿ ಸಮಾಧಾನ ನೆಲೆಸಿತ್ತಂತೆ.

ಬಲಿ ಚಕ್ರವರ್ತಿ ಹುಟ್ಟಿನಿಂದ ರಾಕ್ಷಸನಾದರೂ, ವರ್ತನೆಯಿಂದ ಬಹಳ ಸಾತ್ವಿಕ ಹಾಗೂ ದೈವಭಕ್ತನಾಗಿದ್ದ. ಇನ್ನು ಈತನ ವಿಶೇಷ ಗುಣವೆಂದರೆ ಯಾರಾದರೂ ದಾನ ಕೇಳಿದರೆ ಅವರನ್ನು ಬರಿಗೈಲಿ ಹಿಂದಿರುಗಿಸುತ್ತಿರಲಿಲ್ಲ‌. ದಾನವ ಗುರುಗಳಾದ ಶುಕ್ರಾಚಾರ್ಯರು ಹಲವು ಸಲ ಈ ಗುಣ ಒಳ್ಳೆಯದಲ್ಲ ಎಂದು ಬಲಿ ಚಕ್ರವರ್ತಿಗೆ ಸಲಹೆ ನೀಡಿದ್ದರೂ, ಬಲಿ ಮಾತ್ರ ದಾನ ಮಾಡುವ ತನ್ನ ಗುಣವನ್ನು ಬಿಟ್ಟಿರಲಿಲ್ಲ.

ದೇವಲೋಕವನ್ನು ಗೆದ್ದಿದ್ದ ಬಲಿ ಚಕ್ರವರ್ತಿ ಇಂದ ತಮಗೆ ರಕ್ಷಣೆ ನೀಡಬೇಕೆಂದು ದೇವತೆಗಳು ಬೇಡಿಕೊಂಡಾಗ ಮಹಾವಿಷ್ಣುವು ವಾಮನ ರೂಪವನ್ನು ತಾಳಿ ಬಲಿ ಚಕ್ರವರ್ತಿಯ ಬಳಿ ಹೋದನು. ಬಲಿ ಚಕ್ರವರ್ತಿ ಅಶ್ವಮೇಧ ಯಾಗವನ್ನು ಮಾಡುತ್ತಾ, ಬಂದವರಿಗೆ ದಾನ ನೀಡುತ್ತಿದ್ದನು. ಆಗ ವಾಮನ ರೂಪದಲ್ಲಿ ಅಲ್ಲಿಗೆ ಬಂದ ಮಹಾವಿಷ್ಣುವನ್ನು ಬಲೀಂದ್ರನು ಏನು ಬೇಕೆನ್ನಲು ವಾಮನನು ನನಗೆ ಮೂರು ಹೆಜ್ಜೆಗಳ ಜಾಗ ಬೇಕೆಂದನು. ಆಗ ಬಂದಿರುವುದು ಮಹಾವಿಷ್ಣು ಎಂದು ತಿಳಿದ ಶುಕ್ರಾಚಾರ್ಯರು, ದಾನವನ್ನು ಜಲಸಾಕ್ಷಿಯಾಗಿ ನೀಡುವುದರಿಂದ ಬಲೀಂದ್ರನ ಕಮಂಡಲದೊಳಗೆ ಕಪ್ಪೆಯ ರೂಪದಲ್ಲಿ ಸೇರಿ ನೀರು ಕಮಂಡಲದಿಂದ ಹೊರಗೆ ಬರದಂತೆ ಅಡ್ಡವಾದರು.

ಆಗ ವಾಮನ ದರ್ಭೆಯಿಂದ ಕಮಂಡಲದಿಂದ ನೀರು ಬರುವ ಕಡೆ ತಿವಿದಾಗ, ಶುಕ್ರಾಚಾರ್ಯರ ಕಣ್ಣಿಗೆ ಅದು ಚುಚ್ಚಿ ಅವರು ಒಂದು ಕಣ್ಣನ್ನು ಕಳೆದುಕೊಂಡರು. ಬಲಿ ಚಕ್ರವರ್ತಿಯು ವಾಮನನಿಗೆ ಮೂರು ಹೆಜ್ಜೆಗಳ ವರವನ್ನು ನೀಡಿದ. ಆಗ ವಾಮನನು ಆಕಾಶದೆತ್ತರಕ್ಕೆ ಬೆಳೆದು ಒಂದು ಹೆಜ್ಜೆಯನ್ನು ಆಕಾಶದ ಕಡೆಗೆ, ಇನ್ನೊಂದು ಹೆಜ್ಜೆಯನ್ನು ಭೂಮಿಯ ಮೇಲಿಟ್ಟು, ಮೂರನೇ ಹೆಜ್ಜೆಯನ್ನು ಎಲ್ಲಿಡಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿಯು ತನ್ನ ಶಿರದ ಮೇಲೆ ಇಡುವಂತೆ ವಾಮನನಿಗೆ ಹೇಳುತ್ತಾನೆ.

ಆಗ ಅವನ ಶಿರದ ಮೇಲೆ ಕಾಲಿಟ್ಟ ವಾಮನ ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ. ಅದಾದ ನಂತರ ವಿಷ್ಣುಭಕ್ತನಾದ ಅವನಿಗೆ ಮಹಾವಿಷ್ಣು ಆಶ್ವಯುಜ ಮಾಸದಲ್ಲಿ ಭೂಮಿಗೆ ಬಂದು ಪೂಜೆ ಸ್ವೀಕರಿಸುವ ವರವನ್ನು ನೀಡಿದ. ಆದ್ದರಿಂದಲೇ ಮೂರು ದಿನಗಳ ದೀಪಾವಳಿ ಆಚರಣೆಯಲ್ಲಿ ಮೂರನೆಯ ದಿನ ಬಲಿ ಚಕ್ರವರ್ತಿಯ ಪೂಜೆ ನಡೆಸಲಾಗುತ್ತದೆ… ಇಂತಹ ದಾನವ ಮಹಾವೀರನ ಆದರ್ಶಗಳನ್ನು ನೆನೆಯುತ್ತಾ, ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಾ ಸಂಭ್ರಮದಿ ಬಲಿಯನ್ನು ಸ್ವಾಗತಿಸುತ್ತಾ ಈ ದೀಪಾವಳಿಯನ್ನು ಸಂಭ್ರಮಿಸೋಣ.


  • ಸೌಮ್ಯ ಸನತ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW