ದಾಂಡೇಲಿ ಸುತ್ತಮುತ್ತಲು ದನಗರಗೌಳಿಗರು, ಸಿದ್ಧಿಜನ ಕಾಣಸಿಗುತ್ತಾರೆ. ಅವರ ಹಬ್ಬ,ಹರಿದಿನಗಳ ಆಚರಣೆ ವಿಭಿನ್ನವಾಗಿದೆ. ದನಗರಗೌಳಿಗರ ವಿಜಯದಶಮಿ ಹಬ್ಬದ ವಿಶೇಷ ಆಚರಣೆಯನ್ನು ಓದುಗರ ಮುಂದೆ ಹಂಚಿಕೊಂಡಿದ್ದೇನೆ. ತಪ್ಪದೆ ಮುಂದೆ ಓದಿ….
ಕಾಡುನ್ನು ಕಡೆದು ರೆಸಾರ್ಟ್ ಗಳನ್ನು ಮಾಡುತ್ತಿರುವ ಮನುಷ್ಯ ಒಂದು ಕಡೆಯಾದರೆ, ಕಾಡಿನ ಮಧ್ಯೆ ಇದ್ದು ಹಸು- ಕರುಗಳನ್ನು ಪಾಲನೆ ಮಾಡುತ್ತಾ ಪ್ರಕೃತಿಯನ್ನು ಪ್ರೀತಿಸುವ ಮನುಷ್ಯರು ಇನ್ನೊಂದು ಕಡೆ.
ಪ್ರಕೃತಿಯನ್ನು ಪ್ರೀತಿಸುತ್ತಾ, ಪ್ರಕೃತಿ ಮಧ್ಯೆ ಇದ್ದು, ಪ್ರಕೃತಿಯಲ್ಲಿಯೇ ದೇವರನ್ನು ಕಾಣುವ ವಿಶೇಷ ಜನಾಂಗವೊಂದು ಇದ್ದರೇ ಅದುವೇ ‘ದನಗರಗೌಳಿ’ ಜನ. ಇವರು ಮೂಲತಃ ಮಹಾರಾಷ್ಟ್ರದ ಕಡೆಯಿಂದ ಬಂದವರಾಗಿದ್ದು, ಅವರು ಪಾಂಡುರಂಗನ ಅಪ್ಪಟ ಭಕ್ತರಾಗಿದ್ದಾರೆ. ಅವರ ಮೂಲ ಕಸುಬು ದನ ಕರುಗಳ ಪಾಲನೆ ಮಾಡುವುದು ಮತ್ತು ಅವರ ಮಾತೃ ಭಾಷೆ ಮರಾಠಿಯಾಗಿದೆ.
ಈ ಜನಾಂಗ ದನಗಳಿಗೆ ಮೇವನ್ನು ಹುಡುಕುತ್ತಾ ಕಾಡುಗಳ ಮಧ್ಯೆ ಬಂದು ನೆಲೆಸಿದರು. ಮೊದಲು ದನಗಳ ಹಾಲಿನ ಉತ್ಪನ್ನಗಳು, ಹಣ್ಣು ಹಂಪಲಗಳು ಅವರ ಮೂಲ ಆಹಾರಗಳಾಗಿದ್ದವು. ಅನಂತರದ ದಿನಗಳಲ್ಲಿ ಹಾಲಿನಿಂದ ಬೆಣ್ಣೆ, ಮೊಸರು ಮಾಡಿ ಅದನ್ನು ಮನೆ ಮನೆಗೆ ಮಾರಾಟ ಮಾಡವ ವ್ಯಾಪಾರ ಶುರು ಮಾಡಿಕೊಂಡರು. ನಿಧಾನವಾಗಿ ಬೆಣ್ಣೆ, ಮೊಸರಿನ ಜೊತೆಗೆ ಸುತ್ತಲಿನ ಊರುಗಳಿಗೆ ಇವರೇ ಹಾಲನ್ನು ಪೂರೈಕೆ ಮಾಡಲು ಆರಂಭಿಸಿದರು. ಹಾಲುನ್ನು ನೀಡುವ ಕಾರಣಕ್ಕೆ ಊರಿನವರೆಲ್ಲ ಅವರನ್ನು”ಗೌಳಿಗಳು” ಎಂದು ಕರೆಯ ತೊಡಗಿದರು. ಆದರೆ ಅವರು, ನಾವು ಗೌಳಿಗಳಲ್ಲ… ಹಸುಗಳೇ ನಮ್ಮ ಅನ್ನದಾತರು. ಅವುಗಳಿಂದಲೇ ನಾವು ಗುರುತಿಸಿಕೊಂಡವರು. ಹಾಗಾಗಿ ನಮಗೆ ಗೋಪಾಲಕರು ಅಥವಾ ದನಗರಗೌಳಿ ಜನ ಎಂದೇ ಕರಿಯಿರಿ… ಎಂದು ಆ ಜನಾಂಗದವರು ಹೇಳುತ್ತಾರೆ.
ಈ ದನಗರ ಜನಾಂಗದವರು ದಂಡಕಾರಣ್ಯ ದಾಂಡೇಲಿಯ ಸುತ್ತ ಮುತ್ತಲಿನ ಕಾಡುಗಳ ಮಧ್ಯೆದಲ್ಲಿ ಹೆಚ್ಚಾಗಿ ಕಾಣ ಸಿಗುತ್ತಾರೆ. ಬಾಲ್ಯದಿಂದಲೂ ದನಗರ ಜನರ ಮೇಲೆ ನನಗೊಂದು ಕುತೂಹಲ ಕಾಡುತ್ತಿತ್ತು. ಮಂಡ ಚಡ್ಡಿ, ವಿಭಿನ್ನ ಶರ್ಟ್, ತಲೆಗೆ ರೂಮಾಲ್ ಬಟ್ಟೆಯಲ್ಲಿ ಗಂಡುಮಕ್ಕಳನ್ನು ನೋಡಿದ್ದರೆ, ಹಸಿರು- ಹಳದಿ ಬಣ್ಣದ ಸೀರೆಯ ಕಚ್ಛೆ, ರವಿಕೆ, ತಲೆಯಮೇಲೆ ಸೆರಗು, ಕೈತುಂಬಾ ಗಾಜಿನ ಬಳೆ, ಹಣೆಯ ಮೇಲೆ ದೊಡ್ಡದಾದ ಕುಂಕುಮದಲ್ಲಿ ಹೆಣ್ಣುಮಕ್ಕಳನ್ನು ನೋಡಿದ್ದೆ. ಇವರೆಲ್ಲ ಯಾರು?… ಅವರು ಕಾಡಿನ ಮಧ್ಯೆ ಯಾಕೆ ಇರುತ್ತಾರೆ?… ಅವರನ್ನು ಗೌಳಿ ಜನ ಅಂತ ಯಾಕೆ ಕರೆಯುತ್ತಾರೆ?… ಎನ್ನುವ ಸಣ್ಣ ಪುಟ್ಟ ಪ್ರಶ್ನೆಗಳು ನನ್ನಲ್ಲಿ ಯಾವಾಗಲು ಕಾಡುತ್ತಿದ್ದವು. ಆದರೆ ನನ್ನ ಎಲ್ಲ ಪ್ರಶ್ನೆಗಳಿಗೆ ೩೦ ವರ್ಷಗಳ ನಂತರ ವಿಜಯದಶಮಿ ಹಬ್ಬದ ದಿನದಂದು ಉತ್ತರ ಸಿಕ್ಕಿತು.
ಬೆಂಗಳೂರಿನಿಂದ ಅಂಬಿಕಾನಗರಕ್ಕೆ ಅವರ ಆಚಾರ- ವಿಚಾರ, ಸಂಪ್ರದಾಯ ತಿಳಿಯಲು ವಿಜಯದಶಮಿ ಹಬ್ಬದ ದಿನವೇ ಹೋಗಿದ್ದೆ. ಅಂಬಿಕಾನಗರದ ಜಮಗಾದಲ್ಲಿ ದನಗರಗೌಳಿ ಜನಾಂಗದ ವಾಡಾ ಇದೆ. ಅದನ್ನು ‘ಗೌಳಿವಾಡಾ’ ಎಂದು ಕರೆಯುತ್ತಾರೆ. ಅಲ್ಲಿ ಅವರದೇ ಜನಾಂಗದ ಸುಮಾರು ಕುಟುಂಬಗಳು ನೆಲೆಸಿದ್ದು, ಅವರದೇ ಆದ ಪುಟ್ಟ ಪ್ರಪಂಚವನ್ನೇ ಅಲ್ಲಿ ನೋಡಬಹುದು. ಅದನ್ನು ನೋಡುವ ಅವಕಾಶವನ್ನು ಕಲ್ಪಿಸಿಕೊಟ್ಟದ್ದು ನನ್ನ ಸ್ನೇಹಿತ ಅರುಣ್ ಭೋಸಲೆ ಅವರು. ನನ್ನಲ್ಲಿದ್ದ ಕುತೂಹಲ ಪ್ರಶ್ನೆಗಳನ್ನು ಗೌಳಿಗರ ಜನರೊಂದಿಗೆ ಕೂತು ಮಾತಾಡಿದೆ, ಅವರ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವುದಷ್ಟೇ ಅಲ್ಲ, ಕಣ್ಣಾರೆ ನೋಡಿ ಸಂಭ್ರಮಿಸಿದೆ ಮತ್ತು ಅವರ ಪ್ರೀತಿಯನ್ನು ಅಪ್ಪಿಕೊಂಡೆ.
ಮಾತನಾಡುವಾಗ ಅಚ್ಚರಿ ಅನ್ನಿಸಿದ್ದು ಅವರ ಮದುವೆ ವಿಚಾರ. ಅವರ ಜನಾಂಗದಲ್ಲಿಯೇ ಹೆಣ್ಣು, ಗಂಡು ತಗೆದುಕೊಳ್ಳುವ ಕಟ್ಟು ನಿಟ್ಟಾದ ಸಂಪ್ರದಾಯವಿದೆ. ಒಂದು ವೇಳೆ ಹುಡುಗ ಅಥವಾ ಹುಡುಗಿ ಅಂತರ್ಜಾತಿ ವಿವಾಹವಾದರೆ ಅವರನ್ನು ತಮ್ಮ ಹಬ್ಬ- ಹರಿದಿನಗಳಲ್ಲಿ ಸೇರಿಸುವುದಿಲ್ಲ. ಅಂತರ್ಜಾತಿ ವಿವಾಹ ಅವರ ದೃಷ್ಟಿಯಲ್ಲಿ ತಪ್ಪು ಅನ್ನುವುದಕ್ಕಿಂತ ಅವರ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸಿ ಮತ್ತು ಬೆಳಿಸುವ ಪರಿ ಇದು ಎನ್ನುತ್ತಾರೆ.
ನಾನು ಅಂಬಿಕಾನಗರದಲ್ಲಿಯೇ ಹುಟ್ಟಿ, ಬೆಳೆದು ಎಷ್ಟೋ ವರ್ಷ ಕಳೆದಿದ್ದರೂ ಗೌಳಿವಾಡ ಎನ್ನುವುದು ಇಲ್ಲೊಂದು ಇದೆ ಮತ್ತು ಅವರ ಶ್ರೀಮಂತ ಸಂಸ್ಕೃತಿ ಹೀಗೊಂದು ಇದೆ ಎಂದು ನಾನು ಒಮ್ಮೆಯೂ ತಿಳಿದಿರಲಿಲ್ಲ. ಇನ್ನೂ ಅವರ ದಸರಾ ಹಬ್ಬದ ಆಚರಣೆಯನ್ನು ನೋಡುವುದು ದೂರದ ಮಾತಾಗಿತ್ತು. ಅವರೆಲ್ಲ ಬೆಳಗ್ಗೆ ಮನೆ ಮನೆಗೆ ಹಾಲು ನೀಡಿ ಕಾಡಿನೊಳಗೆ ಸೇರಿಕೊಂಡರೆ ಊರಿನ ಜನರ ಕಣ್ಣಿಗೆ ಮತ್ತೆ ಕಾಣುತ್ತಿರಲಿಲ್ಲ. ಅವರಿಗೆ ಮನುಷ್ಯರಿಗಿಂತ ಕಾಡುಗಳ ಒಡನಾಟ ಹೆಚ್ಚಿತ್ತು. ಹಾಗಾಗಿ ಕಾಡುಗಳ ಉಳಿವಿಗೆ ಅವರ ಪಾತ್ರ ದೊಡ್ಡದಿದೆ ಎಂದರೆ ತಪ್ಪಲಾಗರದು.
ದಸರಾ ಆಚರಣೆ :
ದಸರಾ ಹಬ್ಬವನ್ನು ಹತ್ತು ದಿನ ವಿವಿಧ ಆಚರೆಣೆಯೊಂದಿಗೆ ಅತಿ ಶಿಸ್ತಿನಿಂದ ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ. ವಿಜಯದಶಮಿ ಹಬ್ಬದ ದಿನದಂದು ಗಂಡು ಮಕ್ಕಳೆಲ್ಲಾ ಶುಭ್ರ ಬಿಳಿ ಬಣ್ಣದ ನಿಲುವಂಗಿಯನ್ನು ತೊಟ್ಟಿದ್ದರು ಅದನ್ನು ಅವರ ಭಾಷೆಯಲ್ಲಿ ‘ಗಜಾ’ ಎಂದು ಕರೆದರೆ, ತಲೆಗೆ ಹಳದಿ ಬಣ್ಣದ ಪಾಗೋಟ (ಪೇಟ) ಧರಿಸಿಕೊಂಡು ಕೊಳಲು ನುಡಿಸುತ್ತಾ, ನೃತ್ಯ ಮಾಡುತ್ತಿದ್ದರು. ಆ ನೃತ್ಯ ನೋಡುವಾಗ “ಜೋದಾ ಅಕ್ಬರ್” ಸಿನಿಮಾದ ದೃಶ್ಯ ನೆನಪಿಗೆ ಬಂತು. ಆ ಧಿರಿಸಿನಲ್ಲಿ ಎಲ್ಲರೂ ಸೂಫಿ ಸಂತರಂತೆ ಕಾಣುತ್ತಿದ್ದರು. ಅವರು ಹಾಕುತ್ತಿದ್ದ ಹೆಜ್ಜೆ ವಿನೂತನವಾಗಿತ್ತು. ಆ ನೃತ್ಯಕ್ಕೆ ‘ಗಜಾನೃತ್ಯ’ ಎಂದು ಕರೆಯುತ್ತಾರೆ. ಯಾಕೆ ಅಂತ ನಾನು ಕೇಳಿದಾಗ ಅವರ ನೃತ್ಯದಲ್ಲಿನ ಹೆಜ್ಜೆಗಳು ಗಜನ ಹೆಜ್ಜೆಯನ್ನು ಹೋಲುವುದರಿಂದ ಹಾಗೆ ಕರೆಯಲಾಗುತ್ತದೆ ಎಂದು ಅಲ್ಲಿಯ ಹಿರಿಯರು ಹೇಳಿದರು. ಇನ್ನೂ ಅಲ್ಲಿನ ಹೆಣ್ಣುಮಕ್ಕಳು ಕೆಂಪು, ಹಸಿರು ಬಣ್ಣದ ರೇಷ್ಮೆ ಜರಿಯ ಸೀರೆಯನ್ನುಟ್ಟು ಒಬ್ಬರಿಗಿಂತ ಒಬ್ಬರು ಶೃಂಗಾರಗೊಂಡು ಹಬ್ಬಕ್ಕೆ ಇನ್ನಷ್ಟು ಕಳೆ ತಂದಿದ್ದರು.
ಒಂದು ಬದಿಯಲ್ಲಿ ಚೌಕಾಕಾರದ ಕಂಬಳಿ ಮೇಲೆ ಘಟ ಸ್ಥಾಪನೆ ಮಾಡಿ ಅದರ ಮುಂದೆ ಒಂದೊಂದು ಮನೆಯಿಂದ ಒಬ್ಬೊಬ್ಬ ಹಿರಿಯರು ನಿಂತಿದ್ದರು. ಅದರ ವಿಶೇಷತೆ ಏನು ಎಂದು ಕೇಳಿದಾಗ ದಸರಾ ಆರಂಭವಾದ ದಿನದಿಂದ ಪ್ರತಿ ಮನೆಯಲ್ಲಿ ಒಬ್ಬರು ಘಟ ಸ್ಥಾಪನೆ ಮಾಡಿ ೯ ದಿನ ಉಪವಾಸ ಮಾಡುತ್ತಾರೆ. ಅವರು ಯಾವುದೇ ಮಾಂಸಾಹಾರ ಸೇವನೆ ಮಾಡದೆ, ಸಂಪೂರ್ಣ ಹಾಲಿನ ಉತ್ಪನ್ನಗಳ ಸೇವಿಸುತ್ತಾರೆ. ಉಪವಾಸ ಕೈಗೊಳ್ಳುವ ಈ ಗೌಳಿಗರನ್ನು ‘ನವರಟ್ಕರಿ’ ಎಂದು ಕರೆಯುತ್ತಾರೆ. ಈ ಘಟಸ್ಥಾಪನೆಯಾದ ಎಂಟು ದಿನ ಜಾಗರಣೆ ಮಾಡುತ್ತಾರೆ. ರಾತ್ರಿಯಿಂದ ಬೆಳಗಿನ ಜಾವದವರೆಗೂ ಹಾಡು, ಕೊಳಲುವಾದನ, ಡೊಳ್ಳು , ಗಜಾ ಕುಣಿತವಿರುತ್ತದೆ. ೯ ನೆಯ ದಿನ ಒಬ್ಬರಿಗೊಬ್ಬರು ಮಜ್ಜಿಗೆ ಸ್ನಾನ ಮಾಡಿಸಿ, ತಮ್ಮ ತಮ್ಮ ಮನೆದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ತಮ್ಮ ಪೂರ್ವಜರನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಊರಿನ ಆಚೆ ಒಂದು ಜಾಗದಲ್ಲಿ ಎಲ್ಲರ ಪೂರ್ವಜರ ನೇಮಿಸಿ ಅವರಿಗೆ ಹೊಸ ಬಟ್ಟೆ, ಅವರಿಗೆ ಇಷ್ಟವಾದ ವಸ್ತುಗಳು, ತಿನಿಸನ್ನು ಇಟ್ಟು ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ.
ವಿಜಯದಶಮಿ ಹಬ್ಬದ ದಿನದಂದು ವಿವಿಧ ಧಾರ್ಮಿಕ ಆಚರಣೆ ನಡೆಯುತ್ತದೆ. ವಿಶೇಷವಾದ ಕಂಬಳಿ ಮೇಲೆ ಘಟ ಸ್ಥಾಪನೆ ಮಾಡಿ ಅದರ ಮುಂದೆ ಮನೆಯ ‘ನವರಟ್ಕರಿ’ ನಿಂತಿರುತ್ತಾರೆ. ಒಂದು ಕಡೆ ಗಜಾ ನೃತ್ಯ ನಡೆಯುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಘಟ ಸ್ಥಾಪನೆಯ ಸಾಲನ್ನು ನೋಡುವಾಗ ವಿಶೇಷವೆನಿಸುತ್ತದೆ. ಗಜಾ ಕುಣಿತದ ಮಧ್ಯೆ ಇದ್ದಕ್ಕಿದ್ದಂತೆ ಮೈಮೇಲೆ ದೇವರ ಆಹ್ವಾನವಾದವರನ್ನು ನೋಡುವಾಗ ಮೈಜುಮ್ಮ ಎನ್ನಿಸುತ್ತದೆ. ಅವರ ಮುಂದೆ ಮನೆಯವರೆಲ್ಲ ತಮ್ಮ ಸಮಸ್ಯೆಗಳಿಗೆ ಪರಿಹಾರ ಕೇಳುತ್ತಾರೆ. ಕೊನೆಯಲ್ಲಿ ಅನ್ನ, ಹಾಲು, ತುಪ್ಪ, ಬೆಲ್ಲವನ್ನು ಪ್ರಸಾದವನ್ನಾಗಿ ಮಾಡಿ ಎಲ್ಲ ಗಜಾ ನೃತ್ಯದಾರರು ಒಟ್ಟಿಗೆ ಒಂದೇ ತಟ್ಟೆಯಲ್ಲಿ ಪ್ರಸಾದವನ್ನು ಸ್ವೀಕರಿಸುತ್ತಾರೆ. ಅದರಲ್ಲಿನ ಒಂದು ಅಗಳು ಸಿಕ್ಕರೂ ಅದು ದೇವರ ಆಶೀರ್ವಾದ ಸಿಕ್ಕಿತೆಂದು ಸಂತೋಷ ಪಡುತ್ತಾರೆ. ಹೆಣ್ಣುಮಕ್ಕಳು ಗಿರಿಗಿಟ್ಟಲೆ ಆಟ, ಪುಗಡಿ ನೃತ್ಯ ಮಾಡುತ್ತಾ ಹಬ್ಬವನ್ನು ಸಂಭ್ರಮಿಸುತ್ತಾರೆ. ಆಮೇಲೆ ಮನೆಯಿಂದ ತಂದಿದ್ದ ಮೇಜಿಗೆ ಕಳಸವನ್ನು ಒಬ್ಬೊಬ್ಬರಾಗಿ ತಲೆಯ ಮೇಲೆ ಹೊತ್ತುಕೊಂಡು ಊರಿನ ಧಾರ್ಮಿಕ ಗುರುವಿನ ಮನೆಗೆ ಹೋಗುತ್ತಾರೆ. ಅಲ್ಲಿಯೂ ಗಜಾ ನೃತ್ಯ, ಕೊಳಲು ವಾದನಗಳನ್ನೂ ಮಾಡುತ್ತಾ ಹಬ್ಬಕ್ಕೆ ರಂಗುತರುತ್ತಾರೆ.
ವಿಜಯ ದಶಮಿ ಹಬ್ಬದ ಮಾರಾನೇ ದಿನ ಅಂದರೆ ಹನ್ನೊಂದನೆಯ ದಿನ “ಶಿಲ್ಲಂಗಾನ” ಹೆಸರಿನಲ್ಲಿ ವಿಶೇಷವಾಗಿ ಹಬ್ಬವನ್ನು ಆಚರಿಸುತ್ತಾರೆ. ಈ “ಶಿಲ್ಲಂಗಾನ” ಆಚರಣೆಯ ಮುಖಾಂತರ ಊರಿಗೆ, ಜಾನುವಾರುಗಳಿಗೆ, ಪ್ರಕೃತಿಗೆ ಒಳ್ಳೆದಾಗಲಿ ಎಂದು ದೇವರಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬೆಳಗಿನ ಸಮಯ ಬನ್ನಿ ಮರದ ಬಳಿ ಹೋಗಿ ಖಡ್ಗದಿಂದ ಬನ್ನಿ ಎಲೆಯನ್ನು ತಗೆದು ಅನಂತರ ಬನ್ನಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಈ ಶಿಲ್ಲಂಗಾನ ಆಚಾರಣೆಗೆ ಅಕ್ಕಪಕ್ಕದ ದನಗರ ಗೌಳಿ ಜನರನ್ನು ವಿಲ್ಯೆದೆಲೆ ಕೊಟ್ಟು ಆಮಂತ್ರಣ ನೀಡುತ್ತಾರೆ. ನಿಗದಿತ ಸ್ಥಳದಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರೂ ಒಟ್ಟಾಗಿ ಸೇರಿ ಸಾಂಪ್ರದಾಯಿಕ ಹಬ್ಬವನ್ನು ಆಚರಿಸಿ, ಎಲ್ಲರೂ ಅನ್ನ, ಹಾಲು, ತುಪ್ಪ, ಹರಿಶಿಣ, ಬೆಲ್ಲ ಹಾಕಿದ ಊಟವನ್ನು ಸಾಲಾಗಿ ಕೂತು ಊಟ ಮಾಡುತ್ತಾರೆ ಅಲ್ಲಿಗೆ ಹಬ್ಬಕ್ಕೆ ತೆರೆ ಬೀಳುತ್ತದೆ.
ಈಗ ದನಗರ ಗೌಳಿ ಜನಾಂಗದವರ ಮಕ್ಕಳು ವಿದ್ಯಾವಂತರಾಗಿದ್ದು , ಬೇರೆ ಬೇರೆ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ವಿಜಯದಶಮಿ ಹಬ್ಬ ಬಂತೆಂದರೆ ಅವರು ಯಾವುದೇ ದೂರದ ಊರುಗಳಲ್ಲಿ ಇರಲಿ, ವಿಜಯದಶಮಿ ಹಬ್ಬಕ್ಕೆ ತಪ್ಪದೇ ಒಂದೆಡೆ ಬಂದು ಸೇರುತ್ತಾರೆ. ತಲತಲಾoತರದಿಂದ ನಡೆದು ಬಂದ ಅವರ ಸಂಸ್ಕೃತಿಯನ್ನು ಇಂದಿಗೂ ಅವರ ಯುವ ಪೀಳಿಗೆಯವರು ನಡೆಸಿಕೊಂಡು ಹೋಗುತ್ತಿರುವುದು ಒಂದು ವಿಶೇಷ. ಅವರು ತಮ್ಮ ಸಂಸ್ಕೃತಿ ಮೇಲಿನ ಪ್ರೇಮವನ್ನು ವಿಜಯ ದಶಮಿ ಹಬ್ಬದ ದಿನ ಕಾಣಬಹುದು. ಅದಕ್ಕೆ ನಾನು ಕೂಡಾ ಸಾಕ್ಷಿಯಾಗಿದ್ದೆ ಎಂದು ಹೇಳಲು ಸಂತೋಷ ಪಡುತ್ತೇನೆ.
ದನಗರಗೌಳಿಗರ ಒಂದೊಂದು ಹಬ್ಬ ಒಂದೊಂದು ರೀತಿಯಲ್ಲಿ ವಿಶೇಷತೆಯನ್ನು ಹೊಂದಿದೆ. ವಿಜಯದಶಮಿ ಹಬ್ಬದ ವಿಶೇಷತೆಯ ಕುರಿತು ಈ ಲೇಖನವಾದರೆ, ಅವರ ಕೃಷ್ಣಾಷ್ಠಮಿ ಹಬ್ಬದ ಆಚರಣೆ ವಿಭಿನ್ನ ರೀತಿ. ಅದನ್ನು ಮುಂದಿನ ಬಾರಿ ತಿಳಿಸುತ್ತೇನೆ. ಮತ್ತು ಮಾಹಿತಿಗೆ ಸಹಕಾರ ನೀಡಿದ ಅರುಣ ಭೋಸಲೆ ಮತ್ತು ಜಾನು ಅವರಿಗೆ ವಿಶೇಷವಾಗಿ ಧನ್ಯವಾದಗಳು.
- ಶಾಲಿನಿ ಹೂಲಿ ಪ್ರದೀಪ್