ಸಾಲು ಹಣತೆಗಳಲೇ ರಂಗವಲ್ಲಿ ಮೂಡಿದೆ….ಆಗಸದಿ ಆಕಾಶಬುಟ್ಟಿಗಳದೆ ಸಂತೆ…ರಶ್ಮಿಪ್ರಸಾದ್(ರಾಶಿ) ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ದೀಪ ದೀಪಗಳೇ ಮಾತನಾಡುತಿವೆಯಿಲ್ಲಿ
ಅಚ್ಚರಿಯನೊಮ್ಮೆ ನೋಡು ಬಾ ಗೆಳತಿ
ನವಕಾಂತಿಯೇ ಬೆಳಕಾಗಿ ತುಳುಕುತಿರಲು
ಸ್ವರ್ಗದಂತೆ ಕಂಗೊಳಿಸಿದೆ ಭುವಿಯಕಾಂತಿ.!
ಬೆಳಕಿನುಂಡೆಗಳೆ ತೋರಣಗಳಾಗುತಿವೆಯಿಲ್ಲಿ
ಬೆರಗನೊಮ್ಮೆ ನೋಡು ಬಾ ಗೆಳತಿ
ಮನೆಯ ಒಳಹೊರಗೂ ಬೆಳಗುತಿರಲು
ರಂಗುರಂಗಲಿ ಬೀಗತೊಡಗಿದೆ ಮನದ ದೀಪ್ತಿ.!
ಸಾಲು ಹಣತೆಗಳಲೇ ರಂಗವಲ್ಲಿ ಮೂಡಿದೆ
ಸೊಬಗನೊಮ್ಮೆ ನೋಡು ಬಾ ಗೆಳತಿ
ಚಿತ್ತಾರದ ಚೈತನ್ಯದಿ ಬೆಳಕು ಹರಡಿರಲು
ಅಂಗಳದಲ್ಲೆಲ್ಲಾ ಚೆಲ್ಲಾಡಿದಂತಿದೆ ಜ್ಯೋತಿ.!
ಆಗಸದಿ ಆಕಾಶಬುಟ್ಟಿಗಳದೆ ಸಂತೆ
ಆ ಕ್ಷಣಗಳನೊಮ್ಮೆ ಕಣ್ತುಂಬಿಕೊ ಬಾ ಗೆಳತಿ
ತಾರೆಗಳಂತೆ ಮಿನುಮಿನುಗಿ ಹೊಳೆಯುತಿರಲು
ಗಗನದ ತುಂಬೆಲ್ಲ ದೀಪಗಳದೇ ಹಾವಳಿ.!
ನೋಡಿದಷ್ಟು ಕಣ್ಣು ಕೋರೈಸಿ ಝಗಮಗಿಸಿದೆ
ಮನೆಮನಗಳ ತುಂಬಿ ಜ್ಯೋತಿ ಜ್ವಲಿಸುತಿದೆ
ಸಂತಸದಲಿ ಮಿಯೋಣವೋಮ್ಮೆ ಬಾ ಗೆಳತಿ
ಸಂಭ್ರಮಿಸೋಣ ದೀಪದಿಂದ ದೀಪವಾ ಹಚ್ಚಿ.!
- ರಶ್ಮಿಪ್ರಸಾದ್(ರಾಶಿ)