ಈ ಬೆಳಕೇ ವಿಸ್ಮಯ – ಡಾ. ರಾಜಶೇಖರ ನಾಗೂರ

ಬೆಳಕಿನ ಬಗ್ಗೆ ವೈಜ್ಞಾನಿಕ ಸತ್ಯವನ್ನು ತಿಳಿಯುತ್ತಾ ದೀಪ ಹಚ್ಚುವ ಮುನ್ನ ಬೆಳಕಿನ ಗುಣವನ್ನು ಅಳವಡಿಸಿಕೊಂಡು ಇತರರಿಗೂ, ಸಮಾಜಕ್ಕೂ ಬೆಳಕಾಗೋಣ. ಬೇರೆಯವರಿಗೆ ಬೆಳಕಾಗದಿದ್ದರೂ ಸರಿ, ಕನಿಷ್ಠ ನಮ್ಮ ಬದುಕನ್ನು ಬೆಳಗಿಕೊಳ್ಳುವ ಸ್ವಯಂ ಪ್ರಕಾಶಿಸುವ ಮಿಂಚು ಹುಳು ನಾವಾಗೋಣವೇ ಹೊರತು ಇನ್ನೊಬ್ಬರ ಬದುಕಿನ ಕತ್ತಲಾಗುವುದು ಮಾತ್ರ ಬೇಡ. – ಡಾ. ರಾಜಶೇಖರ ನಾಗೂರ, ತಪ್ಪದೆ ಮುಂದೆ ಓದಿ…

  • ಮನುಷ್ಯನ ಪ್ರಾಚೀನವಾದ ಯಾವುದೇ ನಾಗರಿಕತೆಯ ಇತಿಹಾಸವನ್ನು ಗಮನಿಸಿ ಅಲ್ಲಿ ಸೂರ್ಯನಿಗೆ ಮಹತ್ವದ ಸ್ಥಾನವಿದೆ. ಇದರ ಅರ್ಥ ಇಷ್ಟೇ “ಬೆಳಕು” ಕತ್ತಲೆಗಿಂತ ಹೆಚ್ಚು ಪೂಜಿಸಲ್ಪಟ್ಟಿದೆ. ಇದು ವೇದ ಉಪನಿಷತ್ ಪುರಾಣಗಳಲ್ಲಷ್ಟೇ ಉಲ್ಲೇಖವಾಗಿಲ್ಲ. ವೈಜ್ಞಾನಿಕ ಸತ್ಯವೂ ಹೌದು.
  • ಬಗೆ ಬಗೆ ಬಣ್ಣದ ಹೂವಿನ ತೋಟವನ್ನು ಅಮಾವಾಸ್ಯೆ ಕತ್ತಲ ರಾತ್ರಿಯಲ್ಲಿ ಭೇಟಿ ಕೊಡಿ. ಯಾವ ಬಣ್ಣಗಳು ನಿಮಗೆ ಕಾಣಲಾರವು. ಅದೇ ಸೂರ್ಯೋದಯವಾಗಿ ಬೆಳಕು ಚೆಲ್ಲುತ್ತಿರೆ ಸಾಕು ವರ್ಣಮಯವಾದ ಹೂಗಳ ವಿಸ್ಮಯ ನಮ್ಮ ಗಮನಕ್ಕೆ ಬರುತ್ತದೆ. ಈ ಬಣ್ಣದ ಲೋಕವನ್ನು ನಾವು ಕಣ್ಣಾರೆ ಕಂಡು ಆಸ್ವಾದಿಸಲು ಬೆಳಕು ಬೇಕೇ ಬೇಕು. ಇನ್ನೊಬ್ಬರ ಬದುಕಿನ ಕತ್ತಲೆ ಹೋಗಿಸಿ ವಿವಿಧ ಬಣ್ಣದ ಮಜಲುಗಳನ್ನು ತೋರಿಸುವ ಬೆಳಕು ನಾವೇಕೆ ಆಗಬಾರದು!
  • ಬೆಳಕು ಎಂದ ತಕ್ಷಣ ಬಿಳಿ ಬಣ್ಣದ್ದು ಎಂದುಕೊಳ್ಳುವ ನಾವುಗಳು ಆ ಬೆಳಕನ್ನು ಒಂದು ಪಟ್ಟಕದ (prism) ಮೂಲಕ ಹಾದು ಹೋಗುವಂತೆ ಮಾಡಿದಾಗ, ಸಪ್ತವರ್ಣದ ಕಾಮನ ಬಿಲ್ಲು ಅನಾವರಣಗೊಳ್ಳುತ್ತದೆ. ಆ ಬಿಳಿ ಬಣ್ಣದಲ್ಲಿ ಅಡಗಿದ ಆ ಏಳು ಬಣ್ಣಗಳು ಹೊರ ಬರುತ್ತವೆ. ಇದೇ ಪ್ರಕ್ರಿಯೆ ಬಿಸಿಲಿರುವಾಗ ಮಳೆ ಬರುತ್ತಿದ್ದರೆ ಪ್ರತಿ ಹನಿಗಳು ಪಟ್ಟಕದಂತೆ ವರ್ತಿಸಿ ಸೂರ್ಯನ ಬೆಳಕನ್ನು ಕಾಮನ ಬಿಲ್ಲಾಗಿಸುತ್ತವೆ. ಮನುಷ್ಯ ಸಂಬಂಧಗಳಲ್ಲಿ ಇನ್ನೊಬ್ಬರ ಬದುಕಿನ ಕಾಮನಬಿಲ್ಲಾಗಲು ನಾವು ಪಟ್ಟಕವೇಕಾಗಬಾರದು!!
  • ಬೆಳಕು ಪ್ರತಿ ಸೆಕೆಂಡ್ ಗೆ 3 ಲಕ್ಷ ಕಿ.ಮೀ ದೂರ ಚಲಿಸಬಲ್ಲುದು. ಈ ವೇಗ ಯಾರು ಸರಿಗಟ್ಟಬಲ್ಲರು? ಅದೇ ಶಬ್ಧವು ಪ್ರತಿ ಸೆಕೆಂಡ್ ಗೆ ಕೇವಲ 343 ಮೀಟರ್ ಮಾತ್ರ ಚಲಿಸಬಲ್ಲದು. ಹೀಗಾಗಿಯೇ ಗುಡುಗು ಮಿಂಚು ಆಗುವಾಗ ಮೊದಲು ಬೆಳಕು ಕಾಣಿಸಿಕೊಂಡ ಸ್ವಲ್ಪ ಸಮಯದ ನಂತರ ಕರ್ಕಶ ಸಿಡಿಲಿನ ಶಬ್ಧ ಕೇಳಿ ಬರುವುದು. ಬೆಳಕಿನ ವೇಗ ಶಬ್ಧಕ್ಕಿಂತ ಊಹಾತೀತವಾಗಿದೆ. ನಾವೂ ಕೂಡ ನಿಧಾನವಾಗಿ ಇನ್ನೊಬ್ಬರ ಕಿವಿ ಚುಚ್ಚಿ ಒಬ್ಬರ ಬದುಕನ್ನು ಹಾಳುಗೆಡವುವ ಗಾಳಿ ಮಾತಾಗುವುದಕ್ಕಿಂತ ಒಬ್ಬರ ಬದುಕನ್ನು ಪ್ರಕಾಶಿಸುವ ಬೆಳಕು ಏಕಾಗಬಾರದು!!!
  • ಸಂವಹನದ ಕ್ರಾಂತಿಯ ಮೊದಲು ( communication revolution) ಟೆಲಿಫೋನ್, ಇಂಟರ್ನೆಟ್ ಸಿಗ್ನಲ್ ಗಳ ರವಾನೆಯಲ್ಲಿ ( signal transmission) ಈ ಮೊದಲು ಲೋಹದ ತಂತಿಗಳನ್ನು ವೈರ್ ಗಳಲ್ಲಿ ಉಪಯೋಗಿಸುತ್ತಿದ್ದರು. ಆದರೆ ಈಗ ಆ ಸೌಂಡ್ ಸಿಗ್ನಲ್ ಗಳನ್ನು ಬೆಳಕಿನ ಸಿಗ್ನಲ್ಲ ಗಳಾಗಿ ಪರಿವರ್ತಿಸಿ “ಆಪ್ಟಿಕಲ್ ಫೈಬರ್” ಗಳ ಮೂಲಕ ಅತ್ಯಂತ ವೇಗವಾಗಿ ರವಾನಿಸಲಾಗುತ್ತದೆ. ಈ ಕಾರಣದಿಂದಲೇ ಬೆಳಕಿಗೆ ಮಾಹಿತಿಯನ್ನು ಹೊತ್ತ್ಯೊಯ್ಯುವ ಸಾಮರ್ಥ್ಯವಿದೆ ಎಂದಾಯ್ತು. ಹಾಗಿದ್ದರೆ ನನಗೆ ಕೆಲವೊಮ್ಮೆ ಕುತೂಹಲಕ್ಕೆ ಅನಿಸಿದ್ದು ಈ ಸೂರ್ಯನ ಬೆಳಕಿನ ಕಿರಣಗಳು ನಮ್ಮ ಮೇಲೆ ಬಿದ್ದು ನಾವು ಯೋಚಿಸುವ ಅಥವಾ ಮಾಡುವ ಪಾಪ ಪುಣ್ಯಗಳ ಮಾಹಿತಿಯನ್ನು ಇನ್ನೆಲ್ಲೋ ರವಾನಿಸುತ್ತಿರಬಹುದೇ ಎಂದು. ಹೀಗಾಗಿ ಎಚ್ಚರಿಕೆಯಿಂದ ಯಾಕೆ ಮಾನವಸತ್ವ ಯೋಚನೆಗಳನ್ನು, ಕಾರ್ಯಗಳನ್ನು ನಾವು ಮಾಡಲು ಅಣಿಯಾಗಬಾರದು !!!!
  • ಕಣ್ಣಿಗೆ ಕಾಣದ, ಕೈಗೆ ಸಿಗದ ಈ ಬೆಳಕಿನ ಕಿರಣಗಳು ಕೆಳಗಿರುವ ನದಿ ಸಾಗರಗಳ ನೀರನ್ನು ಮುಟ್ಟದೆಯೇ ಮೇಲೆತ್ತಿ ಮೋಡವಾಗಿಸಿ ಇನ್ನೆಲ್ಲೋ ಮಳೆಗರೆಯ ಬಲ್ಲವು. ಅದೇ ಕಿರಣಗಳು ಮಲಗಿದ ಮೊಗ್ಗನ್ನು ಚುಂಬಿಸಿ ಅರಳಿಸಿ ಹೂವಾಗಿಸಬಲ್ಲವು. ಸಸ್ಯ ಗಿಡ ಮರಗಳ ಎಲೆಗಳಲಿ ಇರುವ ಆಹಾರ ತಯಾರಿಕಾ ಘಟಕವನ್ನೇ ಈ ಬೆಳಕು ನಿಯಂತ್ರಿಸಬಲ್ಲುದು. ಮನುಷ್ಯ, ಪ್ರಾಣಿಗಳ ದೇಹದ ಮೂಳೆಗಳ ಗಟ್ಟಿತನಕ್ಕೆ ಬೇಕಾದ ಕ್ಯಾಲ್ಸಿಯಂ ಮತ್ತು ಪಾಸ್ಫರಸ್ ಗಳ ನಿಯಂತ್ರಣಕ್ಕೆ ಬೇಕಾದ ವಿಟಾಮಿನ್-ಡಿ (vit-D) ಯನ್ನು ತಯಾರಿಸುವಲ್ಲಿ ಈ ಸೂರ್ಯನ ಕಿರಣಗಳು ಪ್ರಮುಖ ಪಾತ್ರವಹಿಸುತ್ತವೆ. ನಾವು ಈ ಬೆಳಕಿನಂತೆ ಇನ್ನೊಬ್ಬರನ್ನು ಮುಟ್ಟದೆ ದೂರದಿಂದಲೇ ಪ್ರೋತ್ಸಾಹಿಸಿ ಹುರಿದುಂಬಿಸಿ ಸಹಾಯ ಮಾಡುತ್ತಾ ಏಕೆ ಬದುಕಬಾರದು !!!!
  • ಬೆಳಕು ಎಂದತಕ್ಷಣ ಕಣ್ಣಿಗೆ ಕಾಣುವುದಷ್ಟೇ ಎಂದುಕೊಂಡರೆ ಮೂರ್ಖತನ. ಇಡೀ ಬೆಳಕಿನ ಬೇರೆ ಬೇರೆ ವರ್ಗಗಳನ್ನು ತೆಗೆದುಕೊಂಡರೆ (electro magnetic spectrum) ಕಣ್ಣಿಗೆ ಕಾಣುವ ಬೆಳಕು (visible light) ತುಂಬಾ ಚಿಕ್ಕದು. ಕಣ್ಣಿಗೆ ಗೋಚರಿಸದ ಬೆಳಕು (x ray, infra red , gamma rays, radio waves, ultra violet rays) ತುಂಬಾ ಇದೆ. ಗಮನಿಸಿ ಇಡೀ ಬೆಳಕಿನ ಒಟ್ಟು ವಿವಿಧ ವರ್ಗಗಳನ್ನು ಅಂದಾಜು 4000km ಎಂದು ಊಹಿಸಿದರೆ ‘ಕಣ್ಣಿಗೆ ಕಾಣುವ ಬೆಳಕು’ ಕೇವಲ ಒಂದು ಇಂಚಿನಷ್ಟು ಮಾತ್ರ ಎಂಬುದು ವಿಸ್ಮಯ. ನಾವೂ ಕೂಡ ಗೋಚರಿಸುವಿಕೆಯಲ್ಲಿ ಚಿಕ್ಕದಾದರೂ ಹೃದಯ ವೈಶಾಲ್ಯತೆಯಲ್ಲಿ ವಿಶಾಲವಾಗಿ ಏಕಿರಬಾರದು !!!!!!

ಪಟಾಕ್ಷಿ ಹೊತ್ತಿಸುವಾಗ ಎಚ್ಚರವಿರಲಿ….

ಪ್ರತಿಯೊಬ್ಬರಿಗೂ ಬೆಳಕಿನ ಹಬ್ಬ ಬೆಳಕನ್ನೇ ನೀಡಲಿ.


  • ಡಾ. ರಾಜಶೇಖರ ನಾಗೂರ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW