ಹಬ್ಬವೆಂದರೆ ಮೊದಲು ನೆನಪಿಗೆ ಬರುವುದೇ ವಿವಿಧ ರೀತಿಯ ಅಡಿಗೆಗಳು.ಈಗಿನ ತಲೆಮಾರಿನ ಮಂದಿಗೆ ತಯಾರಿ ಮಾಡಲು ಪರಿಕರಗಳ ಲಭ್ಯವಿದ್ದರೂ ಮಾಡಲು ಸಮಯ ಹಾಗೂ ಮನಸ್ಸಿನ ಅಭಾವವಿತ್ತು ಆದರೆ ಇಂದು ದೀಪಾವಳಿ ಹಬ್ಬ ಬೇರೆಯೇ ಆಗಿದೆ, ಆತ್ಮ.ಜಿ.ಎಸ್ ಅವರು ಬರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…
ದೀಪಾವಳಿ ಹಬ್ಬವೆಂದರೆ ಪ್ರತಿ ಮನೆಮನಗಳಿಗೂ ಸಂಭ್ರಮ, ಸಡಗರ. ಹಣತೆ ಹಚ್ಚಿ ಬೆಳಕನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ, ಪಟಾಕಿಯ ಸದ್ದು ಕಿವಿಗೊಡುವ ಖುಷಿ.ಹಬ್ಬದ ಸಂತಸ ಇಮ್ಮಡಿಯಾಗಬೇಕೆಂದರೆ ಹೊಸತನವನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ.
ಹಬ್ಬ ಗಳೆಂದರೆ ಹಲವಾರು ಚಟುವಟಿಕೆಗಳ ಗುಚ್ಚ.ಅದರಲ್ಲಿಯೂ ದೀಪಾವಳಿ ಎಂದರೆ ಕೇಳಲೇ ಬೇಡಿ.ಕೆಲವರಿಗೆ ಶಾಪಿಂಗ್ ಮಾಡುವ ಸಡಗರವಾದರೆ, ಇನ್ನೂ ಕೆಲವರಿಗೆ ತಮ್ಮ ಜೊತೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹೊಸ ಬಟ್ಟೆ,ಬೋನಸ್ ಕೊಡುವುದರ ಮೂಲಕ ಸಂತಸ, ತೃಪ್ತಿ ನೀಡಲು ದೊರೆಯುವ ಸಣ್ಣ ಅವಕಾಶ.ಹತ್ತು ಹಲವಾರು ಆಯಾಮಗಳಿರುವ ದೀಪಾವಳಿ ಎಂದರೆ ಉತ್ಸಾಹದಿಂದ ಪಟಾಕಿಕೊಳ್ಳುವ ಮಕ್ಕಳ ಕಣ್ಣುಗಳೇ ನಕ್ಷತ್ರದಂತೆ ಮಿನುಗುತ್ತವೆ.
ಫೋಟೋ ಕೃಪೆ : google
ಇವೆಲ್ಲದರ ನಡುವೆ ಕತ್ತಲೆಯಿಂದ ಬೆಳಕಿನೆಡೆ ಸಾಗುವ ದೀಪಾವಳಿ ಎಂದರೆ ಪರಿಸರವಾದಿಗಳಿಗೆ ಸಣ್ಣ ಅಸಮಾಧಾನ. ಹಬ್ಬದ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ಪಟಾಕಿ ಸಿಡಿಸುವುದರ ಮೂಲಕ ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಇನ್ನಿಲ್ಲದಂತೆ ಹೆಚ್ಚುವ ಸೋಡಿಯಂ,ಕಾಪರ್, ಜಿಂಕ್ ಮುಂತಾದ ರಾಸಾಯನಿಕ ವಸ್ತುಗಳ ಬಿಡುಗಡೆಯಿಂದ ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮವುಂಟಾಗುತ್ತದೆ. ಆದ್ದರಿಂದಲೇ ಕಾಳಜಿ ಉಳ್ಳ ಪರಿಸರವಾದಿಗಳು ಆದಷ್ಟು ಹಿಂದಿನ ಸಂಪ್ರದಾಯಗಳಿಗೆ ಒತ್ತು ನೀಡಿ ಹಬ್ಬವನ್ನು ಸರಳವಾಗಿ ಆಚರಿಸಿ ಎಂದೇ ಮತ್ತೆ ಮತ್ತೆ ಹೇಳುವುದು ಕೇಳಿ ಬರುತ್ತದೆ.
ಪ್ರತಿಯೊಂದು ಬದಲಾವಣೆಯನ್ನು ಸರಕಾರವಾಗಲಿ ಸಂಘ ಸಂಸ್ಥೆಗಳಾಗಲಿ ಮಾಡಲಿ ಎಂದು ಕಾಯುವ ಬದಲು ನಮ್ಮ ಮಟ್ಟಿಗೆ ನಾವು ಕೊಂಚ ಬದಲಾದರೆ ಅಷ್ಟರ ಮಟ್ಟಿಗೆ ಸಕಾರಾತ್ಮಕ ಪರಿಣಾಮ ಕಂಡಂತೆ . ಹೀಗೊಂದು ಆಲೋಚನೆ ಎಲ್ಲರೂ ಮಾಡಿದರೆ ಪರಿಸರದಲ್ಲಿ ಸಣ್ಣ ಮಟ್ಟಿಗಿನ ಬದಲಾವಣೆ ತರಲು ಸಾಧ್ಯವಾಗಬಹುದು. ಹಬ್ಬದ ಹೊಸ್ತಿಲಲ್ಲಿ ನಿಂತಿರುವ ನಾವು ಹೊಸತನಕ್ಕೆ ನಾಂದಿ ಹಾಡುವಲ್ಲಿ ಈ ಕ್ರಮಗಳನ್ನು ಅನುಸರಿಸಲು ಇಡಬಹುದಾದ ಹೆಜ್ಜೆಗಳು.

* ಹಬ್ಬ ಬಂತೆಂದರೆ ಮೊದಲು ಮನದಲ್ಲಿ ಮೂಡುವುದು ಸ್ವಚ್ಛತೆ .ಮನೆಯನ್ನು ಸ್ವಚ್ಛಗೊಳಿಸುವ ಮೂಲಕ ಹಬ್ಬದ ಇತರ ಕಾರ್ಯಗಳಿಗೆ ಅಡಿ ಇಟ್ಟಂತೆ.ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಸ್ವಚ್ಛಗೊಳಿಸುವ ರಾಸಾಯನಿಕ ಕ್ಲೀನರ್ ಗಳನ್ನು ಬಳಸುವ ಬದಲು ಹಿರಿಯರು ಬಳಸುತ್ತಿದ್ದ ವಸ್ತುಗಳನ್ನು ಬಳಸಬಹುದು.
ಅಂಟುವಾಳ ಕಾಯಿ, ಜಿಡ್ಡು ತೆಗೆಯಲು ಬಿಸಿ ನೀರು,ಲಿಂಬೆ ಹಣ್ಣಿನ ಉಪಯೋಗ :
* ಸ್ವಚ್ಛ ಮಾಡುವಾಗ ಬೇಡದ ವಸ್ತುಗಳನ್ನು ಬಿಸಾಡುವುದರ ಜೊತೆಯಲ್ಲಿಯೇ, ಅನಿವಾರ್ಯವಲ್ಲದ ಹೊರತು ಹೊಸ ವಸ್ತುಗಳನ್ನು ಕೊಳ್ಳುವುದಿಲ್ಲ ಎಂದು ಸಂಕಲ್ಪ ಮಾಡಿದಲ್ಲಿ ಅನಗತ್ಯವಾಗಿ ಏರುವ ತ್ಯಾಜ್ಯ ವಸ್ತುಗಳಿಗೆ ಕಡಿವಾಣ ಹಾಕಲು ಸಾಧ್ಯ.
* ಇಂದು ಬದಲಾಗುವ ಟ್ರೆಂಡ್ ಗೆ ಅನುಗುಣವಾಗಿ ಮಾರುಕಟ್ಟೆಯ ತಂತ್ರವೂ ಬದಲಾಗಿದೆ. ಕೊಳ್ಳುವವರನ್ನು ಕುಳಿತಲ್ಲಿಯೇ ಆಕರ್ಷಿಸುವ ಆನ್ಲೈನ್ ಮಾರುಕಟ್ಟೆಗೆ ಮರುಳಾಗುವ ಬದಲು ಮನೆಯ ಹತ್ತಿರದಲ್ಲಿ ದೊರೆಯುವ ಅಂಗಡಿಗಳಲ್ಲಿ ಖರೀದಿಸುವುದು ಉತ್ತಮ.ಆನ್ಲೈನ್ನಲ್ಲಿ ಕೊಂಡ ವಸ್ತುಗಳನ್ನ ಗ್ರಾಹಕರಿಗೆ ತಲುಪಿಸಲು ಬಳಸುವ ಪ್ಲಾಸ್ಟಿಕ್ ಪರಿಸರವನ್ನು ಹಾಳು ಮಾಡುತ್ತದೆ.
* ಆತ್ಮ ನಿರ್ಭರ, ದೇಸಿ ವಸ್ತುಗಳ ಬಳಕೆ ಹೀಗೇ ಹಲವಾರು ರೀತಿಯಲ್ಲಿ ನಮ್ಮ ಸುತ್ತಮುತ್ತಲೂ ನಮಗೆ ಇಷ್ಟವಾಗುವ ವಸ್ತುಗಳನ್ನು ತಯಾರಿಸುವ ಮಂದಿ ಇದ್ದಾರೆ.ಆಸಕ್ತಿ ತೋರಿ ಹುಡುಕಿದಲ್ಲಿ ನಿಮ್ಮ ಬಡ್ಜೆಟ್ ಗೆ ಅನುಗುಣವಾದ ಹೊಸ ಮಾದರಿಯ ವಸ್ತುಗಳನ್ನು ಖರೀದಿ ಮಾಡಿ ಇಷ್ಟ ಮಿತ್ರರಿಗೆ ಕೊಡಬಹುದು.
* ಹಬ್ಬವೆಂದರೆ ಮೊದಲು ನೆನಪಿಗೆ ಬರುವುದೇ ವಿವಿಧ ರೀತಿಯ ಅಡಿಗೆಗಳು.ಈಗಿನ ತಲೆಮಾರಿನ ಮಂದಿಗೆ ತಯಾರಿ ಮಾಡಲು ಪರಿಕರಗಳ ಲಭ್ಯವಿದ್ದರೂ ಮಾಡಲು ಸಮಯ ಹಾಗೂ ಮನಸ್ಸಿನ ಅಭಾವ. ಹಿರಿಯರೆಲ್ಲರೂ ಹಬ್ಬಕ್ಕೆ ಸೇರುವುದರಿಂದ ಮನೆಯಲ್ಲಿಯೇ ಹೊಸತು ಮತ್ತು ಹಳೆಯ ಸಾಂಪ್ರದಾಯಿಕ ಅಡಿಗೆ ಮಾಡುವುದು ಒಳಿತು. ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು ಸಾಂಪ್ರದಾಯಿಕ ಅಡಿಗೆಗಳನ್ನು ಕಲಿತಂತೆ ಆಗುವುದಲ್ಲದೆ, ಒಂದೆಡೆ ಕಲೆತು ಬೆರೆತು ಮಾಡುವ ಅಡಿಗೆಯ ರುಚಿ ಬಣ್ಣಿಸಲಸದಳ.
* ದೀಪಾವಳಿ ಬರುವ ಮುನ್ನವೇ ಪಟಾಕಿ ಕೊಳ್ಳುವ ಬಗ್ಗೆ ಆಲೋಚಿಸುವ ಮಕ್ಕಳಿಗೆ ಹಬ್ಬದ ಸಂಭ್ರಮ ಹೆಚ್ಚಿಸಲು ಪಟಾಕಿ ಕೊಡಿಸಬೇಕೇ ವಿನಃ ಪಟಾಕಿ ಹೊಡೆಯುವುದು ಪ್ರತಿಷ್ಟೆ ಎಂಬ ಭಾವ ಬಾರದ ರೀತಿಯಲ್ಲಿ ಪೋಷಕರು ಜಾಗೃತೆ ವಹಿಸಬೇಕು.ಮಕ್ಕಳಿಗೆ ಈ ಬಗ್ಗೆ ಮೊದಲಿನಿಂದ ತಿಳಿ ಹೇಳಿ ಮನವೊಲಿಸಿದಲ್ಲಿ ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದಂತಾಗುತ್ತದೆ. ಪಟಾಕಿಗಳ ಮಿತವಾದ ಬಳಕೆ ಅನಿರೀಕ್ಷಿತವಾಗಿ ಜರುಗುವ ಅವಘಡಗಳಿಂದ ತಪ್ಪಿಸಲು ಸಾಧ್ಯವಾಗುತ್ತದೆ.
* ಹಿಂದೆಲ್ಲ ಮನೆಯ ಸುತ್ತಮುತ್ತ ಹಣತೆಯ ದೀಪ ಬೆಳಗಿಸುವ ಪರಿಪಾಠ ಇತ್ತು. ಮನೆಯ ಮುಂಬಾಗಿಲು. ದೊಡ್ಡ ಅಂಗಳವಾದರೆ ತುಳಸಿ ಕಟ್ಟೆ ಎದುರು,ಕೊಟ್ಟಿಗೆ ಬಳಿ ಹೀಗೆ ಎಲ್ಲಾ ಕಡೆಯೂ ಹಣತೆಯೆ ಕತ್ತಲೆ ಹೋಗಲಾಡಿಸುವ ಮಾದ್ಯಮ.ಇಂದು ಇದರ ಸ್ಥಾನವನ್ನು ಝಗಮಗಿಸುವ ಬಣ್ಣ ಬಣ್ಣದ ಡಿಸ್ಕೋ ಬಲ್ಬ್ ಗಳು ಆಕ್ರಮಿಸಿವೆ.ಮೊದಲೇ ಮಳೆ ಇಲ್ಲದೇ ವಿದ್ಯುತ್ ಉತ್ಪಾದನೆಗೆ ಕಳವಳ ಪಡುವ ಈ ಸಮಯಕ್ಕೆ ಜನ ಎಚ್ಚೆತ್ತು ಕೊಳ್ಳುವುದು ಒಳ್ಳೆಯದು.ತೀರಾ ಅನಿವಾರ್ಯ ಎಂದಾದಲ್ಲಿ ಎಲ್ ಇ ಡಿ ಬಲ್ಬ್ ಬಳಸುವುದು ಉತ್ತಮ.
* ಹಬ್ಬದ ಸಂಭ್ರಮ ಕೇವಲ ಮೊದಲ ದಿನದ ತಯಾರಿಗೆ ಸೀಮಿತವಾಗದೆ ಹಬ್ಬದ ನಂತರದ ಸ್ವಚ್ಛತೆಯವರೆಗೂ ಇರಲಿ.ಮನೆಯ ಮುಂದೆ ಪಟಾಕಿ ಹೊಡೆವ ಸಂಭ್ರಮ ಮಾರನೇ ದಿನದ ಬೆಳಗಿನ ಸ್ವಚ್ಛತೆಗೆ ಇಲ್ಲದೆ ಹೋದಲ್ಲಿ ನಮ್ಮದೇ ಸುತ್ತಮುತ್ತಲ ಪರಿಸರಕ್ಕೆ ದಕ್ಕೆ ಮಾಡುತ್ತದೆ.ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡುವ ವಿಧಾನವನ್ನು ಅನುಸರಿಸುವಂತೆ ಪ್ರೇರೇಪಿಸುವುದು.
ಓಡುವ ಬದುಕಿಗೆ ಚೈತನ್ಯ ನೀಡಿ,ಮತ್ತೆ ನಮ್ಮಲ್ಲಿ ಉತ್ಸಾಹ ಮೂಡುವಂತೆ ಮಾಡುವಲ್ಲಿ ಹಬ್ಬಹರಿದಿನಗಳು ಪಾತ್ರವಹಿಸಿದರೂ ಈಗೀಗ ಆಚರಿಸಲು ದೊರೆಯುವ ದಿನಗಳು ಹಲವಾರು. ಹಾಗಾಗಿಯೇ ಮೊದಲಿನಷ್ಟು ಸಂಭ್ರಮವಿಲ್ಲ ಎಂಬ ಭಾವ ಬಂದಲ್ಲಿ ಒಂದಷ್ಟು ಹೊಸತನಗಳನ್ನು ಆದಷ್ಟು ಅಳವಡಿಸಿಕೊಳ್ಳಲು ಪ್ರಯತ್ನಿಸ ಬಹುದು. ಪ್ರಯತ್ನಪೂರ್ವಕವಾಗಿ ಸಣ್ಣ ಬದಲಾವಣೆಗಳನ್ನ ಅನುಸರಿಸುವ ಮೂಲಕ ನಮ್ಮದೇ ಬದುಕಿಗೆ ಮತ್ತು ಪರಿಸರಕ್ಕೆ ಹೊಸತನವನ್ನು ನೀಡಲು ನಾಂದಿ ಹಾಡಲಿ..
- ಆತ್ಮ.ಜಿ.ಎಸ್