ದೀಪಾವಳಿ ಬಂದಾಗ ನೆನಪಾಗುವ ಅಂಗಡಿ ಶೆಟ್ಟರು..

ಈಗ ಶೆಟ್ಟರೂ ಇಲ್ಲ, ಅಂಗಡಿಯೂ ಇಲ್ಲ, ಜಗುಲಿಯೂ ಇಲ್ಲ. ಆ ನಂದಿ ಬಾರ್ ಸೋಪುಗಳು, ತುಕ್ಕು ಹಿಡಿದ ಮುಚ್ಚಳದ ಭರಣಿಯ ಬಿಸ್ಕತ್ತುಗಳು, ಮುರಿದ ಬುಟ್ಟಿಯ ತರಕಾರಿಗಳು,ಹಳೆಯ “ಗೃಹಶೋಭಾ”ದ ಅರೆನಗ್ನ ಫೋಟೋಗಳನ್ನು ನೋಡಿ ಕಾಲು ಅಲ್ಲಾಡಿಸುತ್ತಾ ಸಣ್ಣಗೆ ಪದ್ಯ ಹೇಳುವ ಊರ ಮುದುಕರು, ಕಟ್ಟು ಒಡೆದ ಅಗರಬತ್ತಿಗಳು, ಏನೆಂದರೆ ಏನೂ ಈಗ ಇಲ್ಲ.ಬರೀ ನೆನಪು ಮಾತ್ರ ಪ್ರತೀ ವರ್ಷ ಪಟಾಕಿಯ ಶಬ್ದ ಕೇಳಿದಾಗ ಎದೆಯಾಳದಿಂದ ಒತ್ತರಿಸಿ ಬರುತ್ತದೆ.- ಮುಷ್ತಾಕ್ ಹೆನ್ನಾಬೈಲ್ , ತಪ್ಪದೆ ಮುಂದೆ ಓದಿ…

ಹಬ್ಬಗಳಲ್ಲಿ ದೀಪಾವಳಿ ನನ್ನ ಇಷ್ಟದ ಹಬ್ಬ. ಬಾಲ್ಯದಲ್ಲಿ ದೀಪಾವಳಿ ಆರಂಭವಾಗುವ ಒಂದು ವಾರ ಮುಂಚೆಯೇ ನನ್ನೂರಿನ ಶೇಕು ಶೆಟ್ಟರ (ಶೇಖರ ಶೆಟ್ಟಿ) ಅಂಗಡಿಯಿಂದ ಪಿಟಿಕ್ ಎನ್ನುವ ಸಣ್ಣ ಪಟಾಕಿಯಾಗಲಿ, ಢಂ ಎನ್ನುವ ಸ್ವಲ್ಪ ದೊಡ್ಡ ಪಟಾಕಿಯದ್ದಾಗಲಿ ಶಬ್ದ ಬಂತು ಅಂತಾದರೆ ಅಲ್ಲಿಂದ ನನಗೆ ಮತ್ತು ಊರಿಗೆ ದೀಪಾವಳಿ ಆರಂಭವಾಗುತಿತ್ತು. ಪಟಾಕಿಯ ಶಬ್ದ ಕೇಳುತ್ತಿದ್ದಂತೆ ಶೆಟ್ಟರ ಅಂಗಡಿಯನ್ನು ನಾವು ಎಲ್ಲ ದಿಕ್ಕಿನಿಂದಲೂ ಬಂದು ಸುತ್ತುವರಿಯುತ್ತಿದ್ದೇವು. ಪಿಸ್ತೂಲ್ , ನೆಲಚಕ್ರ, ಸುರುಸುರ್ ಬತ್ತಿ, ಲಕ್ಷ್ಮಿ ಸರ, ರಾಕೆಟುಗಳು ನಮ್ಮ ಆ ಕಾಲದ ದೀಪಾವಳಿಯನ್ನು ಇನ್ನಿಲ್ಲದ ಸಂಭ್ರಮದಲ್ಲಿ ತೇಲಿಸುತ್ತಿದ್ದವು.

ಅಂಗಡಿ ಶೆಟ್ಟರು ಬಹಳ ಪಾಪದ ವ್ಯಕ್ತಿ. ” ಏ ಮರಯಾ ಕಣ್ ಜಾಗೃತಿ, ದೂರ ಆಯ್ಕಂಡ್ ಹಚ್ಚಿಯಾ” ಅಂತ ಆಗಾಗ ಪಟಾಕಿ ಖರೀದಿಸಿ ಕುಣಿಯುವ ನಮ್ಮತ್ತ ನೋಡಿ ಕೂಗುತ್ತಿದ್ದರು. ಪಟಾಕಿಯ ಶಬ್ದದೊಂದಿಗೆ ಹೆಚ್ಚಾಗುವ ನಮ್ಮ ಸಂಭ್ರಮದಲ್ಲೂ ಶೆಟ್ಟರು ಭಾಗಿಯಾಗಿ ದೂರ ನಿಂತು ಕೈತಟ್ಟಿ ನಗುತ್ತಿದ್ದರು. ಶೆಟ್ಟರಿಗೆ ನನ್ನನ್ನು ಕಂಡರೆ ಸ್ವಲ ವಿಶೇಷ ಪ್ರೀತಿ ಮತ್ತು ವಿಶ್ವಾಸವಿತ್ತು. ಇವರ ಮಕ್ಕಳು ಆ ಕಾಲಕ್ಕೆ ದೂರದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಶೆಟ್ಟರಿಗೆ ಓದು ಬರೆಹ ಗೊತ್ತಿರಲಿಲ್ಲ.

ನಾನು 4ನೇ ತರಗತಿಯಲ್ಲಿ ಓದುತ್ತಿರುವ ಕಾಲದಿಂದ ಪದವಿಗೆ ಹೋಗುವ ಕಾಲದವರೆಗೂ ಮುಂಬೈಯಲ್ಲಿರುವ ಮಕ್ಕಳಿಗೆ ಶೆಟ್ಟರು ನನ್ನಿಂದ ಪತ್ರ ಬರೆಯಿಸುತ್ತಿದ್ದರು. ಪತ್ರದಲ್ಲಿ ಬಹಳಷ್ಟು ವೈಯುಕ್ತಿಕ, ಸಾಂಸಾರಿಕ, ಆಸ್ತಿ ಮತ್ತು ಆರ್ಥಿಕ ತೊಂದರೆಗಳ ವಿಷಯಗಳಿರುತ್ತಿದ್ದರಿಂದ, ಶೆಟ್ಟರು ನಾನು ಯಾರಿಗೂ ಹೇಳುವುದಿಲ್ಲ ಎಂಬ ವಿಶ್ವಾಸದಲ್ಲಿ ಪತ್ರ ನನ್ನಿಂದ ಬರೆಸುತ್ತಿದ್ದರು. ನಾನೂ ಕೂಡ ಪತ್ರ ಬರೆಯುತ್ತಿದ್ದ ವಿಷಯ ಮನೆಯಲ್ಲಿ ಸ್ವತಃ ತಂದೆ ತಾಯಿಗೂ ಹೇಳುತ್ತಿರಲಿಲ್ಲ. ಈ ವಿಚಾರದಲ್ಲಿ ಶೆಟ್ಟರು ನನ್ನ ಮೇಲೆ ಬಹಳ ವಿಶ್ವಾಸವಿಟ್ಟಿದ್ದರು. ಪತ್ರ ಬರೆಯುತ್ತಿದ್ದ ಆರಂಭದ ವರ್ಷಗಳಲ್ಲಿ ನಾನು ತೀರ ಸಣ್ಣ ಪ್ರಾಯದವನಾದರೂ ಹಿರಿ ವಯಸ್ಸಿನ ಶೆಟ್ಟರು ಬರೆದು ಮುಗಿಸಿದ ಮೇಲೆ ತಮ್ಮ ಮನಸ್ಸಿನ ನೋವನ್ನು ನನ್ನಲ್ಲಿ ಮೆಲ್ಲಗೆ ಹೇಳಿ” ನಿಮಗೆಲ್ಲ ಈ ಕಷ್ಟಗಳು ಬರಬಾರದು, ತಂದೆ ತಾಯಿ ಹೇಳಿದಂತೆ ಕೇಳಿ ದೊಡ್ಡ ವ್ಯಕ್ತಿಯಾಗು. ನನ್ನಂತೆ ಅನಕ್ಷರಸ್ಥನಾಗಬೇಡ” ಎಂದು ದೀರ್ಘ ನಿಟ್ಟುಸಿರು ಬಿಟ್ಟು ಬೆನ್ನು ತಟ್ಟುತ್ತಿದ್ದರು.

ನನಗೆ ಶೆಟ್ಟರ ಅಂಗಡಿಯ ಸಣ್ಣ ಬಿಸ್ಕತ್ತುಗಳು ಬಹಳ ಇಷ್ಟವಾಗುತ್ತಿದ್ದವು. 50 ಪೈಸೆಯೋ 1 ರೂಪಾಯಿಯೋ ಕೊಟ್ಟು ಬಿಸ್ಕತ್ ಖರೀದಿ ಮಾಡುವಾಗ ಶೆಟ್ಟರು ಬೇರೆಯವರಿಗೆ ಕೊಡುವುದಕ್ಕಿಂತ ಅದೆಷ್ಟೋ ಹೆಚ್ಚೇ ಕೊಡುತ್ತಿದ್ದರು. ಬರೀ ಬಿಸ್ಕತ್ ಮಾತ್ರವಲ್ಲ ಪ್ಯಾಕೇಟುಗಳು ಮತ್ತು ಬಾಟಲಿಗಳೊಳಗೆ ರೇಟುಗಳ ನಿಗದಿಯೊಳಗೆ ಮುಚ್ಚಿದ ಮತ್ತು ಮುಚ್ಚಳ ಇರುವ ವಸ್ತುಗಳು ಬಿಟ್ಟರೆ ಉಳಿದ ಎಲ್ಲ ತಿನಿಸುಗಳನ್ನು ಕೊಡುವಾಗ ನನ್ನ ವಿಚಾರದಲ್ಲಿ ಶೆಟ್ಟರು ವಿಪರೀತ ಪಕ್ಷಾಪಾತಿ.

ದೀಪಾವಳಿ ಸಂದರ್ಭದ ಅಂಗಡಿ ಪೂಜೆಗೆ ಶೆಟ್ಟರು ಊರಿನ ಎಲ್ಲರನ್ನು ಆಹ್ವಾನಿಸುತ್ತಿದ್ದರು. ಪೂಜೆ ಮುಗಿದ ನಂತರ ಕಲಸಿದ ಅವಲಕ್ಕಿಯನ್ನು ಬಂದವರಿಗೆ ಹಂಚುವಾಗಲೂ ಗುಂಪಿನ ಎದುರು ಕತ್ತು ಎತ್ತರಿಸಿ ನನ್ನನ್ನು ಹುಡುಕಿ ಮೊದಲು ಓಡಿ ಬಂದು” ಇಲ್ಲಿಂದೇ ಸುರು ಮಾಡ್ವಾ” ಅಂತ ಹೇಳಿ ನಾನಿದ್ದ ಮೂಲೆಯಿಂದಲೇ ಹಂಚಲು ಆರಂಭಿಸುತ್ತಿದ್ದರು. ತಿನಿಸುಗಳನ್ನು ಸರದಿಯಲ್ಲಿ ನಿಂತು ಮತ್ತು ಕೇಳಿ ತಿನ್ನುವ ವಿಚಾರದಲ್ಲಿ ವಿಪರೀತ ಸಂಕೋಚ ಸ್ವಭಾವ ನನ್ನದು. ನನಗಿರುವ ನಾಚಿಕೆ ಮತ್ತು ಸಂಕೋಚ ಸ್ವಭಾವದ ಬಗ್ಗೆ ಶೆಟ್ಟರಿಗೆ ಸ್ಪಷ್ಟ ಅರಿವಿತ್ತು. ಹಾಗಾಗಿಯೇ ವರ್ಷಂಪ್ರತಿ ಅಂಗಡಿ ಪೂಜೆಯ ಸಂದರ್ಭದಲ್ಲಿ ಮೊದಲು ನಾನು ನಿಂತ ಜಾಗದಿಂದಲೇ ಹಂಚುವುದನ್ನು ಆರಂಭಿಸುತ್ತಿದ್ದರು.” ಅಂವ ಬರೀ ಪಾಪದವ, ಕೊಟ್ಟರೆ ಮಾತ್ರ ತಿನ್ನುತ್ತಾನೆ, ಕೇಳಿ ತೆಗೆದುಕೊಳ್ಳುವುದಿಲ್ಲ” ಎಂದು ಅಕ್ಕಪಕ್ಕ ಇದ್ದವರಿಗೆ ತಾವು ಮೊದಲು ಹಂಚಿದ್ದಕ್ಕೆ ಸಬೂಬು ಹೇಳುತ್ತಿದ್ದರು.

ಅದೊಂದು ದಿನ ನನ್ನ ತಂದೆ ಶೆಟ್ಟರ ಅಂಗಡಿಗೆ ಬಂದಾಗ” ಹಮೀದ್ ಸಾಯಿಬ್ರೆ.. ನಿಮ್ಮ ಮಗ ಒಳ್ಳೆ ಬರೀತಾ. ನನ್ನ ಮಕ್ಕಳಿಗೆ ಕಾಗದ ಬರುದ್ ಅವ್ನೇ” ಅಂದರು. ಆಗಲೇ ತಂದೆಗೆ ನಾನು ಕಾಗದ ಬರೆಯುವ ವಿಚಾರ ಗೊತ್ತಾಗಿದ್ದು. ಆಗ ತಂದೆ” ಹೌದಾ? ಅಂವ ಎಂತ ಬರಿತಾ ಮರ್ರೆ?” ಅಂತ ಆಶ್ಚರ್ಯ ವ್ಯಕ್ತಪಡಿಸಿದರು. ಅದಕ್ಕೆ ಶೆಟ್ಟರು” ಬರವಣಿಗೆ ಮಟ್ಟಿಗೆ ಸುಮಾರಿಕ್ ಅವ್ನ ಮುಂದ್ ಯಾರಿಲ್ಲ” ಅಂದರು.

ಇಂದು ನಾನು ಕೆಲವು ಪುಸ್ತಕಗಳು ಮತ್ತು ಹತ್ತುಹಲವು ಲೇಖನಗಳ ಮೂಲಕ ಬಹಳಷ್ಟು ಜನರ ಪ್ರೀತಿ ಮೆಚ್ಚುಗೆಯನ್ನು ಪಡೆದಿದ್ದೇನೆ. ಆದರೆ ಬದುಕಿನಲ್ಲಿ ಮೊದಲು ನನಗೆ ಬರೆವಣಿಗೆಯ ವಿಚಾರದಲ್ಲಿ” ಒಳ್ಳೆ ಬರೀತಾ” ಎಂದು ಮೆಚ್ಚುಗೆ ಸೂಚಿಸಿದ್ದು ಈ ಓದು ಬರೆಹ ಬಾರದ ಶೆಟ್ಟರೇ. ಇವರಿಂದ ಇನ್ ಲ್ಯಾಂಡ್ ಲೆಟರಿನಲ್ಲಿ ಬರೆಸಲ್ಪಡುತ್ತಿದ್ದ ಬದುಕು, ಬವಣೆ, ಬಾಂಧವ್ಯಗಳ ಕುರಿತಾದ ಅಕ್ಷರದ ಸಾಲುಗಳೇ ನನ್ನ ಬದುಕಿನ ಆದಿ ಬರೆಹಗಳು. ಪತ್ರ ಬರೆದು ಮುಗಿಸಿದ ಮೇಲೆ ಒಮ್ಮೆ ಓದಲು ಹೇಳುತ್ತಿದ್ದ ಶೆಟ್ಟರು ” ಬಹಳ ಲಾಯ್ಕ್ ಆಯ್ತಾ” ಅನ್ನುತ್ತಿದ್ದರು.

ಕೆಲವೊಮ್ಮೆ ಪತ್ರ ಬರೆಯುವಾಗ ಮಕ್ಕಳ ನೆನಪು ಬಂದು ಮತ್ತು ಬದುಕಿನ ಕಷ್ಟದ ಬಗ್ಗೆ ಹೇಳಿಕೊಂಡು ಸಣ್ಣಗೆ ಕಣ್ಣೀರು ಹಾಕುತ್ತಿದ್ದರು. ಸಣ್ಣವನಾದ್ದರಿಂದ ನನಗೂ ಮನಸ್ಸಿನೊಳಗೆ ಸಣ್ಣ ದು:ಖ ಮೂಡುತಿತ್ತು. ನಾನು ಬದುಕಿನ ಬಹಳಷ್ಟು ಸೂಕ್ಷ್ಮಗಳನ್ನು ಕಲಿತದ್ದು ಮತ್ತು ಸಂವೇದನೆಗಳನ್ನು ಅರಿತದ್ದು ಈ ಶೆಟ್ಟರ ಪತ್ರ ಬರೆಯುವಾಗಲೇ ಆಗಿತ್ತು. ಅವರ ಮನಸ್ಸಿನ ನೋವು- ವಿಷಾದಗಳಿಗೆ ನಾನು ಮೂಕ ಮತ್ತು ಮೌನ ಸಾಕ್ಷಿಯಾಗಿದ್ದೆ. ಬದುಕು ನನ್ನ ಕಣ್ಣಿಗೆ ಕಾಣುವಷ್ಟು ಸುಲಭವಲ್ಲ, ಇಲ್ಲಿ ಪ್ರತೀ ನಗುವಿನ ಹಿಂದೆ ನೋವಿದೆ, ಅದೆಷ್ಟೋ ಪರಿಶ್ರಮದ ಪ್ರತಿಫಲವೇ ಈ ಜೀವನ ಎಂಬ ವಾಸ್ತವದ ಪಾಠವನ್ನು ಶೆಟ್ಟರ ಬದುಕಿನ ಮಾತುಗಳು ಆ ಪತ್ರಗಳಲ್ಲಿ ನನ್ನ ಮೂಲಕ ಅಕ್ಷರವಾದಾಗ ನನ್ನ ಅರಿವಿಗೆ ಬರುತಿತ್ತು. ಕೆಲವೊಮ್ಮೆ ಶೆಟ್ಟರ ಬದುಕಿನ ನೋವನ್ನು ನೆನೆದು ಏಕಾಂತದಲ್ಲಿ ಮೌನವಾಗುತ್ತಿದೆ.

ಇಂತಹ ಬದುಕಿನ ನೋವುಗಳ ನಡುವೆಯೂ ಶೆಟ್ಟರು ಆಗಾಗ ತಮಾಷೆ ಮಾಡಿ ರಂಜಿಸುತ್ತಿದ್ದರು ಮಾತ್ರವಲ್ಲ, ನಮ್ಮ ತಮಾಷೆಗೂ ವಸ್ತುವಾಗುತ್ತಿದ್ದರು. ಅದೊಂದು ದಿನ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಶೆಟ್ಟರು ನಿದ್ದೆಯ ಮಂಪರಿನಲ್ಲಿದ್ದಾಗ ಅಂಗಡಿಗೆ ಬುಲೆಟ್ ಬೈಕ್ ಇಳಿದ ಒಬ್ಬ ” ಶೆಟ್ಟರೆ.. ಥರ್ಟಿ ನಂಬರ್ ಬೀಡಿ ಉಂಟ‍ಾ” ಅಂತ ಕೇಳಿದ. ಮಧ್ಯಾಹ್ನದ ನಿದ್ದೆಯಲ್ಲಿದ್ದಾಗ ಶೆಟ್ಟರಿಗೆ ಯಾರಾದರೂ ಎಬ್ಬಿಸಿದರೆ ತುಸು ಕೋಪ ಬರುತಿತ್ತು. ಕೋಪದಲ್ಲೇ ಶೆಟ್ಟರು” ಥರ್ಟಿ ಪರ್ಟಿ ಇಲ್ಲ, ಮೂವತ್ತುಂಟು, ಗಣೇಶ್ ಉಂಟು, ಅಮರ್ ಉಂಟು” ಅಂದರು. ನಾನು ಮತ್ತು ನನ್ನ ಗೆಳೆಯ ಅಲ್ಲೇ ಕೂತಿದ್ದರೂ ನಮಗೂ ಅಷ್ಟು ಹೊಳೆಯಲಿಲ್ಲ. ಬೈಕಲ್ಲಿ ಬಂದವನಿಗೆ ಮಾತ್ರ ವಿಷಯ ಗೊತ್ತಾಗಿ ಸಣ್ಣಗೆ ನಕ್ಕು ನಮ್ಮ ಮುಖ ನೋಡುತ್ತಲೇ ಬೇಕಿದ್ದ ಬೀಡಿ ತೆಗೊಂಡು ಹೋದ. ಥರ್ಟಿ ಅಂದರೆ ಮೂವತ್ತೆಂದು ಅರಿಯದ ಮುಗ್ಧ ಶೆಟ್ಟರು ಹಾಗೆ ಹೇಳಿದ್ದರು. ನಂತರ ವಿಷಯ ಗೊತ್ತಾಗಿ ನಾವು ಬಿದ್ದು ಬಿದ್ದು ನಕ್ಕೆವು. ಶೆಟ್ಟರೂ ಗೋಡೆ ಹಿಡಿದುಕೊಂಡು ನಕ್ಕು ನಕ್ಕು” ಯಾರಿಗೂ ಹೇಳ್ಬೇಡಿ ಮರಯಾ” ಅಂದರು. ಪತ್ರ ಬರೆಯುವ ವಿಚಾರದಲ್ಲಿ ನಾನು ಗುಟ್ಟು ಬಿಡಲಿಲ್ಲ ಹೊರತು, ಈ ಗುಟ್ಟು ಮಾತ್ರ ಬೇಗ ರಟ್ಟಾಗಿ” ಥರ್ಟಿ ಪರ್ಟಿ ಇಲ್ಲ, ಮೂವತ್ತುಂಟು, ಅಮರ್ ಉಂಟು, ಗಣೇಶ್ ಉಂಟು” ಎಂಬ ಶೆಟ್ಟರ ಮಾತು ಊರಿಡೀ ಸುದ್ದಿಯಾಗಿ ಊರಿಗೇ ಊರೇ ಹೊರಳಾಡಿ ನಕ್ಕಿತು.

ಹೀಗೆ ಶೆಟ್ಟರು ನನ್ನ ಬಾಲ್ಯದ ನೆನಪುಗಳ ಅತಿದೊಡ್ಡ ಭಾಗವಾಗಿದ್ದಾರೆ. ದೀಪಾವಳಿ ಬಂದಾಗ ಶೆಟ್ಟರಿಲ್ಲದ ದೀಪಾವಳಿ ನನ್ನ ಪಾಲಿಗೆ ನೀರಸ. ಇಂದಿಗೂ ದೀಪಾವಳಿ ಪಟಾಕಿಯ ಶಬ್ದ ಮೊದಲು ಕೇಳಿದಾಗ ಅದೆಂದೋ ಈ ಲೋಕಯಾತ್ರೆ ಮುಗಿಸಿದ ಶೆಟ್ಟರ ನೆನಪೇ ಮನಸ್ಸಿನಲ್ಲಿ ಮೂಡಿ ಮೌನವಾಗುತ್ತೇನೆ. ನೆನಪುಗಳು ಮೆತ್ತಗೆ ಬಂದು ಅಪ್ಪಿಕೊಳ್ಳುತ್ತವೆ. ಪಿಸ್ತೂಲುಗಳಿಗೆ ರೀಲ್ ಸುತ್ತಿ, ಹಾಕುವ ಹೊಡೆಯುವ ವಿಧಾನ ಹೇಳಿ ಕೊಟ್ಟು, ಕಣ್ಣಿಂದ ದೂರ ಹೊಡಿ ಎಂದು ಮೊದಲು ಒಂದು ಹೊಡೆದು ತೋರಿಸಿ, ಕಾಳಜಿ ಪ್ರೀತಿ ತೋರುತ್ತಿದ್ದ ಶೆಟ್ಟರಿರುತ್ತಿದ್ದ ಆ ಅಂಗಡಿಯೂ ಈಗ ಮರೆಯಾಗಿದೆ. ಶೆಟ್ಟರ ಅಂಗಡಿಯ ಜಗುಲಿಯ ಮೇಲೆ ಕೂರುವ ಸುಖ ಫೈವ್ ಸ್ಟಾರ್ ಹೋಟೆಲಿನ ಬಾಲ್ಕನಿಯಲ್ಲಿ ಕೂತರೂ ಸಿಗದು..

ಈಗ ಶೆಟ್ಟರೂ ಇಲ್ಲ, ಅಂಗಡಿಯೂ ಇಲ್ಲ, ಜಗುಲಿಯೂ ಇಲ್ಲ. ಆ ನಂದಿ ಬಾರ್ ಸೋಪುಗಳು, ತುಕ್ಕು ಹಿಡಿದ ಮುಚ್ಚಳದ ಭರಣಿಯ ಬಿಸ್ಕತ್ತುಗಳು, ಮುರಿದ ಬುಟ್ಟಿಯ ತರಕಾರಿಗಳು, ತೂತಾದ ಅವಲಕ್ಕಿ ತುಂಬಿದ ಮತ್ತು ನೀರುಳ್ಳಿ ಚೀಲಗಳು, ಕಟ್ಟು ಒಡೆದ ಚಿಲ್ಲರೆ ಮೂವತ್ತು ನಂಬರ್ ಬೀಡಿಗಳು, ಕಾಲಿಲ್ಲದೆ ಒಂದು ಭಾಗ ಪಕ್ಕದ ಕಂಬಕ್ಕೆ ಕಟ್ಟಿದ ಬೆಂಚು, ಬಾಜಲ್ ಬಾಟಲಿಯ ಮುಚ್ಚಳ ತೆರೆಯುವ ಶಬ್ದ, ಬೆಲ್ಲದ ಮೇಲಿನ ಇರುವೆಗಳು, ತಿಂಡಿ ಕಟ್ಟುವ ಹಳೆಯ ಪೇಪರ್, ಹಳೆಯ “ಗೃಹಶೋಭಾ”ದ ಅರೆನಗ್ನ ಫೋಟೋಗಳನ್ನು ನೋಡಿ ಕಾಲು ಅಲ್ಲಾಡಿಸುತ್ತಾ ಸಣ್ಣಗೆ ಪದ್ಯ ಹೇಳುವ ಊರ ಮುದುಕರು, ಕಟ್ಟು ಒಡೆದ ಅಗರಬತ್ತಿಗಳು, ಏನೆಂದರೆ ಏನೂ ಈಗ ಇಲ್ಲ.

ಬರೀ ನೆನಪು ಮಾತ್ರ ಪ್ರತೀ ವರ್ಷ ಪಟಾಕಿಯ ಶಬ್ದ ಕೇಳಿದಾಗ ಎದೆಯಾಳದಿಂದ ಒತ್ತರಿಸಿ ಬರುತ್ತದೆ. ಬದುಕು ಅದೆಷ್ಟು ದೂರ ಕ್ರಮಿಸಿತಲ್ಲ ಎನಿಸುತಿದೆ.

ದೀಪಾವಳಿಯ ಶುಭಾಶಯಗಳು


  • ಮುಷ್ತಾಕ್ ಹೆನ್ನಾಬೈಲ್

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW