ಕಾದಂಬರಿಗಾರ್ತಿ ಸುಮ ಉಮೇಶ್ ರವರ “ಬಾಂಧವ್ಯ” ಮೊದಲ ಕಾದಂಬರಿಯಾಗಿದ್ದು, 62 ಅಧ್ಯಾಯಗಳನ್ನೊಳಗೊಂಡಿದೆ. ಈ ಕಾದಂಬರಿಯು ವಿಶೇಷ ಶೈಲಿಯ ಪದಗಳ ಒಕ್ಕಣೆ ಹಾಗೂ ಆಡುಭಾಷೆಯ ನಿರೂಪಣೆಯಿಂದಾಗಿ ತುಂಬಾ ಸಲೀಸಾಗಿ ಓದಿಸಿಕೊಳ್ಳುತ್ತದೆ. ಈ ಕೃತಿಯ ಕುರಿತು ರವಿನಾಗ್ ತಾಳ್ಯ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಲೇಖಕಿ: ಸುಮ ಉಮೇಶ್
ಕಾದಂಬರಿ : ಬಾಂಧವ್ಯ
ಪ್ರಕಾಶಕರು: ಚಿನ್ಮಯ ಪ್ರಕಾಶನ, ಬಳೆಪೇಟೆ ಮುಖ್ಯರಸ್ತೆ, ಬೆಂಗಳೂರು
ಅಧಿಕೃತ ಮಾರಾಟಗಾರರು: ಶ್ರೀನಿಧಿ ಪಬ್ಲಿಕೇಷನ್ಸ್, ಬಳೆಪೇಟೆ ಮುಖ್ಯರಸ್ತೆ, ಬೆಂಗಳೂರು
ಪುಸ್ತಕದ ಬೆಲೆ: ರೂ 200-00
ಸಂಪರ್ಕ ಸಂಖ್ಯೆ: 9972778646
ಓದುಗನನ್ನು ಪುಸ್ತಕದೊಳಗೆ ಬಚ್ಚಿಡುವ ಬಾಂಧವ್ಯ ಕಾದಂಬರಿ
ಕಥೆ ಮತ್ತು ಕವನ ಸ್ನೇಹಿ ಸಾಹಿತ್ಯ ಬಳಗದ ಸ್ಪರ್ಧೆಯೊಂದರಲ್ಲಿ ನನಗೆ ಶ್ರೀಮತಿ ಸುಮ ಉಮೇಶ್ ರವರ “ಬಾಂಧವ್ಯ” ಕಾದಂಬರಿ ಪುಸ್ತಕ ಬಹುಮಾನವಾಗಿ ದೊರೆತಿತ್ತು. ಈ ಪುಸ್ತಕ ಬಹುಮಾನ ನನ್ನ ಕೈಸೇರಿ ಹಲವು ತಿಂಗಳುಗಳು ಕಳೆದರೂ ಸಹ ಕಾದಂಬರಿಯನ್ನು ಪೂರ್ಣ ಪ್ರಮಾಣದಲ್ಲಿ ಓದಿ ಮುಗಿಸಲು ವಿಳಂಬವಾಯಿತು. ವಿಳಂಬಕ್ಕೆ ನನ್ನದೇ ಆದ ತುರ್ತು ಕೆಲಸಗಳು, ವೈಯಕ್ತಿಕ ಸಮಸ್ಯೆಗಳು ಒಂದು ಕಾರಣವಾದರೆ, ಮತ್ತೊಂದು ಪ್ರಮುಖ ಕಾರಣ ಕಾದಂಬರಿಯ 2-3 ಅಧ್ಯಾಯಗಳನ್ನು ನಾನು ಓದಿ ಮುಗಿಸುವ ಮೊದಲೇ ಈ ಕೃತಿಯು ನನ್ನಿಂದ ದೂರಾಗಿ ನನ್ನ ಚಿಕ್ಕಮ್ಮನವರ ಸಮಾನರಾದ ವಿಜಯಕ್ಕನವರ ಕೈ ಸೇರಿತ್ತು. ವಿಜಯಕ್ಕನವರಿಗೆ ಕಾದಂಬರಿಗಳನ್ನು ಓದುವ ಗೀಳು ಬಹಳವೇ ಇದೆ. ಬಾಂಧವ್ಯ ಕಾದಂಬರಿ ನಮ್ಮ ಮನೆಯಲ್ಲಿ ಕಂಡ ತಕ್ಷಣ ಅವರು ನನ್ನ ಅಮ್ಮನವರಿಗೆ ತಿಳಿಸಿ ಕಾದಂಬರಿಯನ್ನು ಓದಲು ತೆಗೆದುಕೊಂಡು ಹೋಗಿದ್ದರು. ಹಲವು ದಿನಗಳ ಬಳಿಕ ಕಾದಂಬರಿಯನ್ನು ಹಿಂದಿರುಗಿಸಲು ಬಂದಾಗ ವಿಜಯಕ್ಕನವರ ಮುಖದಲ್ಲಿ ಮಂದಹಾಸವಿತ್ತು. “ಕಾದಂಬರಿ, ತುಂಬಾ ಚೆನ್ನಾಗಿದೆ ರವೀ… ಕೊನೆಯವರೆಗೂ ಕಥೆ ಏನಾಗುತ್ತೋ ಎಂಬ ಕುತೂಹಲ ಬಹಳವೇ ಇತ್ತು, ನಂಗಂತೂ ಈ ಕಾದಂಬರಿ ತುಂಬಾ ಇಷ್ಟ ಆಯ್ತು, ತುಂಬಾ ಥ್ಯಾಂಕ್ಸ್” ಅಂದರು. “ಅಯ್ಯೋ, ಥ್ಯಾಂಕ್ಸ್ ನನಗೆ ಹೇಳುವ ಅಗತ್ಯವಿಲ್ಲ ವಿಜಯಕ್ಕ, ನಿಮ್ಮ ಥ್ಯಾಂಕ್ಸ್ ಏನಿದ್ದರೂ ಈ ಕಾದಂಬರಿ ಬರೆದವರಿಗೆ ಸಲ್ಲಬೇಕು” ಎಂದು ನಾನು ವಿಜಯಕ್ಕನವರಿಗೆ ಕಾದಂಬರಿಯನ್ನು ಬರೆದಿರುವ ಶ್ರೀಮತಿ ಸುಮ ಉಮೇಶ್ ರವರ ಬಗ್ಗೆ ಒಂದು ಕಿರು ಪರಿಚಯ ಮಾಡಿಕೊಟ್ಟೆ. ಒಂದೊಳ್ಳೆ ಪುಸ್ತಕ ಓದಿದ ಸಂತೋಷವನ್ನು ಅವರು ವ್ಯಕ್ತಪಡಿಸಿದರು. ಅಲ್ಲಿಗೆ ಈ ಕಾದಂಬರಿ ಗೆದ್ದಿರುವುದು ನನಗೆ ಸಂಪೂರ್ಣ ಖಾತ್ರಿಯಾಯಿತು. ಏಕೆಂದರೆ, ಯಾವುದೇ ಕೃತಿಯ ಗೆಲುವಿಗೆ ಒಬ್ಬ ಸಾಮಾನ್ಯ ಓದುಗನ ಅಭಿಪ್ರಾಯವೇ ನಿರ್ಣಾಯಕವಾಗಿರುತ್ತದೆ.

ಇನ್ನು ವಿಜಯಕ್ಕ ಕಾದಂಬರಿ ಓದಿ ಪುಸ್ತಕ ಹಿಂದಿರುಗಿಸಿದ ಬಳಿಕ ನಾನು ಈ ಕಾದಂಬರಿ ಓದುವಿಕೆಯನ್ನು ಮುಂದುವರೆಸಿದೆ. ಬಾಂಧವ್ಯ ಕಾದಂಬರಿ ಓದುತ್ತಾ ಓದುತ್ತಾ ನನಗೆ ಅಪರೂಪಕ್ಕೆ ಹಬ್ಬದೂಟ ಉಂಡ ಅನುಭವ ಆಗತೊಡಗಿತು. ಈ ಕಾದಂಬರಿಯು ಸುಮಾ ಉಮೇಶ್ ರವರ ಮೊದಲ ಕೃತಿ ಎಂದು ಮುನ್ನುಡಿಯಲ್ಲಿ ತಿಳಿಸಲಾಗಿದೆ. ಮುನ್ನಡಿಯಲ್ಲಿ ತಿಳಿಸಿರುವಂತೆ ಕಾದಂಬರಿ ಓದುವಾಗ ಬಾಂಧವ್ಯ ಕಾದಂಬರಿಯು ಕಾದಂಬರಿಗಾರ್ತಿಯವರ ಚೊಚ್ಚಲ ಕೃತಿ ಎಂದು ಎಲ್ಲಿಯೂ ಭಾಸವಾಗುವುದಿಲ್ಲ. ಕೃತಿಕಾರರ ಅಷ್ಟೊಂದು ಗಟ್ಟಿತನದ ಪ್ರಬುದ್ಧ ಬರವಣಿಗೆಯ ಶೈಲಿಯನ್ನು ಈ ಕಾದಂಬರಿಯಲ್ಲಿ ಕಾಣಬಹುದು. ಈ ಕಾದಂಬರಿಯು ನನ್ನ ಬಾಹ್ಯ ಪ್ರಪಂಚವನ್ನು ಮರೆಸಿ ಕಾದಂಬರಿಯ ಸನ್ನಿವೇಶಗಳ ಒಳಗೆ ನನ್ನನ್ನು ಸಂಪೂರ್ಣವಾಗಿ ತಲ್ಲೀನನಾಗುವಂತೆ ಮಾಡಿ ಓದಿಸಿತು. ಮೊದಲ ಅಧ್ಯಾಯದಿಂದ ಹಿಡಿದು ಕೊನೆಯ ಅಧ್ಯಾಯದವರೆಗೂ ಕಾದಂಬರಿಯು ಎಲ್ಲಿಯೂ ಬೇಸರ ಮೂಡಿಸುವುದಿಲ್ಲ. ಕಥೆಯು ನಮ್ಮ ಕಣ್ಣೆದುರಿಗೆ ಜರುಗುತ್ತಿರುವ ಹಾಗೆ ಭಾಸವಾಗುವಂತೆ ಸಮ್ಮೋಹನಗೊಳಿಸುವ ಶಕ್ತಿ, ಒಂದು ಸನ್ನಿವೇಶದಿಂದ ಮತ್ತೊಂದು ಸನ್ನಿವೇಶಕ್ಕೆ ಓದುಗನನ್ನು ಕದ್ದೊಯ್ಯುವ ಕಲೆ, ಓದುಗನನ್ನು ಪುಸ್ತಕದೊಳಗೆ ಕಟ್ಟಿಹಾಕುವ ನೈಪುಣ್ಯತೆ ಕೃತಿಕಾರರಿಗೆ ಸಿದ್ಧಿಸಿದೆ ಎಂತಲೇ ಹೇಳಬಹುದು. 62 ಅಧ್ಯಾಯಗಳನ್ನೊಳಗೊಂಡ ಈ ಬಾಂಧವ್ಯ ಕಾದಂಬರಿಯು ವಿಶೇಷ ಶೈಲಿಯ ಪದಗಳ ಒಕ್ಕಣೆ ಹಾಗೂ ಆಡುಭಾಷೆಯ ನಿರೂಪಣೆಯಿಂದಾಗಿ ತುಂಬಾ ಸಲೀಸಾಗಿ ಓದಿಸಿಕೊಳ್ಳುತ್ತದೆ.
ಇಪ್ಪತ್ತನೆಯ ಶತಮಾನದಲ್ಲಿ ಅಂಚೆಯೇ ದೂರ ಸಂವಹನಕ್ಕೆ ಪ್ರಮುಖ ಮಾಧ್ಯಮವಾಗಿದ್ದ ಕಾಲದಲ್ಲಿ ಒಂದು ಗ್ರಾಮೀಣ ಪ್ರದೇಶದಲ್ಲಿ ಈ ಬಾಂಧವ್ಯ ಕಾದಂಬರಿಯು ಪ್ರಾರಂಭಗೊಳ್ಳುತ್ತದೆ. ಮೈಮುರಿದು ದುಡಿಯುವ ಕೆಲಸಗಾರನ ಕುಟುಂಬ ಮತ್ತು ಕೆಲಸಗಾರರನ್ನು ಮನೆಯ ಮಕ್ಕಳಂತೆ ನೋಡಿಕೊಳ್ಳುವ ಮಾಲಿಕನ ಕುಟುಂಬದವರ ನಡುವಿನ ಬದುಕಿನ ಸನ್ನಿವೇಶಗಳನ್ನು ಒಳಗೊಂಡ, ಬದುಕಿನಲ್ಲಿ ಬಂದೆರಗುವ ಹಠಾತ್ ತಿರುವುಗಳನ್ನು ಈ ಕುಟುಂಬಗಳು ಎದುರಿಸಿ ನಿಲ್ಲುವ ರೋಚಕ ಕಥಾನಕ ಈ ಕಾದಂಬರಿ. ಈ ಕಾದಂಬರಿಯ ಪಾತ್ರಗಳನ್ನಂತೂ ತುಂಬಾ ನೈಜವಾಗಿ ಪ್ರಸ್ತುತಪಡಿಸಲಾಗಿದೆ. ಕುತೂಹಲ, ನಗುವಿನ ಕಚಗುಳಿ, ಕಂಬನಿ, ಭಯ, ನಿಟ್ಟುಸಿರು, ಆಗಿನ ಕಾಲದ ಗ್ರಾಮೀಣ ಜೀವನ ಶೈಲಿ ಎಲ್ಲವೂ ಈ ಕಾದಂಬರಿಯಲ್ಲಿ ಅಡಗಿವೆ. ಇವೆಲ್ಲವೂ ಅಗತ್ಯಕ್ಕೆ ತಕ್ಕಂತೆ ಅತ್ಯುತ್ತಮವಾಗಿ ಬಳಕೆಯಾಗಿವೆ. ಪಾತ್ರಗಳ ಹೆಸರುಗಳೂ ಸಹ ಪಾತ್ರಗಳಿಗೆ ಜೀವ ತರುವಲ್ಲಿ ಯಶಸ್ವಿಯಾಗಿವೆ.
ಕಾದಂಬರಿಯ ಬಗ್ಗೆ ನಾನೇ ಹೇಳುತ್ತಾ ಹೋಗುವುದಕ್ಕಿಂತ ಖುದ್ದಾಗಿ ನೀವೊಮ್ಮೆ ಈ ಕಾದಂಬರಿಯನ್ನು ಓದಲೇಬೇಕು. ಪ್ರತಿಯೊಬ್ಬ ಕಾದಂಬರಿ ಓದುಗರ ಮನೆಯ ಮೇಜಿನಲ್ಲಿ ಇರಲೇಬೇಕಾದ, ಅತ್ಯಂತ ಸ್ವಾರಸ್ಯಮಯ ಕಾದಂಬರಿ ಈ ಬಾಂಧವ್ಯ. ಇಂದೇ ಒಂದು ಪ್ರತಿಯನ್ನು ನಿಮ್ಮದಾಗಿಸಿಕೊಂಡು ತಪ್ಪದೇ ಓದಿರಿ.

2022 ರಲ್ಲಿ ಚಿನ್ಮಯ ಪ್ರಕಾಶನ, ಬಳೆಪೇಟೆ ಮುಖ್ಯರಸ್ತೆ, ಬೆಂಗಳೂರು ಇವರಿಂದ ಪ್ರಕಟಗೊಂಡಿರುವ ಈ ಬಾಂಧವ್ಯ ಕಾದಂಬರಿಗೆ ಕಥಾ ಅರಮನೆ ಫೇಸ್ಬುಕ್ ಸಾಹಿತ್ಯ ವೇದಿಕೆಯ ಸಂಸ್ಥಾಪಕರಾದ ಶ್ರೀಯುತ ಗುಡ್ಡಾಭಟ್ಟ ಜೋಷಿ ಹೊಳಲ ಇವರು ಬರೆದಿರುವ ಅಚ್ಚುಕಟ್ಟಾದ ಮುನ್ನುಡಿಯು ಕಾದಂಬರಿಯ ಗಟ್ಟಿತನವನ್ನು ಮತ್ತು ಕಾದಂಬರಿಗಾರ್ತಿಯವರ ಬರಹ ನೈಪುಣ್ಯತೆಯನ್ನು ಸಾಕ್ಷೀಕರಿಸಿದೆ. ಪ್ರಕಾಶಕರಾದ ಶ್ರೀಯುತ ನವೀನ್ ಪುರುಷೋತ್ತಮ್ ರವರು ಬೆನ್ನುಡಿಯಲ್ಲಿ ಅಡಕಗೊಳಿಸಿರುವ ಕಾದಂಬರಿಯ ಕಿರುನೋಟವು ಓದುಗನನ್ನು ಪುಸ್ತಕದೆಡೆಗೆ ಸೆಳೆಯುತ್ತದೆ. ಶ್ರೀನಿಧಿ ಪಬ್ಲಿಕೇಷನ್ಸ್, ಬೆಂಗಳೂರು ಇವರು ಬಾಂಧವ್ಯ ಕಾದಂಬರಿಯ ಅಧಿಕೃತ ಮಾರಾಟಗಾರರಾಗಿದ್ದು ಕಾದಂಬರಿಯ ಬೆಲೆ ರೂ. 200-00 ಆಗಿರುತ್ತದೆ.
ಇಂತಹ ಉತ್ತಮ ಕಥಾಹಂದರದ ಸುಂದರ ಕಾದಂಬರಿಯನ್ನು ನನಗೆ ಪುಸ್ತಕ ಬಹುಮಾನವಾಗಿ ನೀಡಿದ ಬಾಂಧವ್ಯ ಕಾದಂಬರಿಯ ಕರ್ತೃ ಶ್ರೀಮತಿ ಸುಮ ಉಮೇಶ್ ರವರಿಗೆ ಈ ಮೂಲಕ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ.
- ರವಿನಾಗ್ ತಾಳ್ಯ
