ರವಿಕುಮಾರ್ ನೀಹ ಅವರ ಕಥಾ ಸಂಕಲನವನ್ನು ತಂದಿದ್ದು ಇತ್ತೀಚೆಗೆ ಸದಾ ಓದಿಗೆ ತೆರೆಯುವ ನನ್ನ ಮನಸ್ಸು “ಅವು ಅಂಗೇ” ಕಥಾ ಸಂಕಲನದ ಕತೆಗಳನ್ನು ಓದಲು ತೊಡಗಿತು.ಗ್ರಾಮೀಣ ಬದುಕಿನ ಹಿನ್ನೆಲೆಯ ಮನುಷ್ಯ ಸಂಬಂಧದ ಕತೆಗಳು ಈ ಕೃತಿಯಲ್ಲಿವೆ. ಕತೆಗಾರ ಮಾರುತಿ ಗೋಪಿಕುಂಟೆ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಅವು ಅಂಗೇ
ಲೇಖಕರು : ರವಿಕುಮಾರ್ ನೀಹ
ಬೆಲೆ : 175.00
ಪ್ರಕಾರ: ಕಥಾಸಂಕಲನ
‘ಬರ್ಗಲ್ಲು’ಬಗ್ಗೆ ಕೇಳಿ ತಿಳಿದಿದ್ದ ನಾನು ಅದೊಂದು ಕತೆಯಾಗಿ ಕುತೂಹಲ ಮೂಡಿಸಿತ್ತು. ಲೊಡ್ಡಯ್ಯನ ಊನವೊಂದು ತನ್ನನ್ನು ತಾನು ಒಂಟಿಯಾಗಿಸುತ್ತ ತನ್ನೆಲ್ಲಾ ಆಸೆಗಳಿಗೆ ಕಡಿವಾಣ ಹಾಕಿಕೊಂಡು ವಿರಕ್ತನಾಗಿ ಬದುಕುವ ಗಳಿಗೆಯಲ್ಲಿಯೆ ಸಿಲ್ವಾರ್ದಮ್ಮ ಅಗೋಷಿತವಾದ ಅಸಹ್ಯವೆಂದೆ ಭಾವಿಸುವ ಕೆಲಸವನ್ನು ಸಹ್ಯಗೊಳಿಸುತ್ತಾ ಯುವಕರಿಗೆ ದಾರಿಯಾಗುವ ಕಥಾಹಂದರ ಸಮಾಜದಿಂದ ದೂರವಾಗಿ ಬದುಕುವ ಲೊಡ್ಡಯ್ಯ ಬರ್ಗಲ್ಲು ಉಂಟುಮಾಡುವ ಸಾಮಾಜಿಕ ವಿಚಲನೆಯ ಚಲನಾತ್ಮಕ ಸಂಪ್ರದಾಯಕ್ಕೆ ಎರಡೂ ಜೀವಗಳು ಬದುಕಿನ ಮಳೆಯಾಗುವ ವಿಶಿಷ್ಟ ಕಥನಶೈಲಿಯಲ್ಲಿ’ ಬರ್ಗಲ್ಲು’ ಸಾಂಕೇತಿಕವಾದರೂ ಬದುಕು ಅರಳುವ ನೆಲೆಯಲ್ಲಿ ಒಪ್ಪಿತವಾಗುವ ಇಡಿ ಸಮೂಹದ ಮುಗ್ದತೆ ಗ್ರಾಮೀಣ ಬದುಕು ಅನಾವರಣ ಗೊಂಡಿದೆ.

‘ಸಿಂಗಾರುದ್ಗಂಟು ‘ಇದೆ ಜಾಡಿನಲ್ಲಿ ಸಾಗುವ ಇನ್ನೊಂದು ಕತೆ ‘ಗೀರಿ’ಪಾತ್ರದ ಸುತ್ತ ಸುತ್ತುತ್ತ ನಾಗ, ಜಯಿ, ಗಾಜಿ ತಮ್ಮದೆ ನೆಲೆಯಲ್ಲಿ ಬದುಕಾಗುತ್ತ, ಸವೆದುಹೋಗುವ ಬದುಕಿನ ದಾರಿಯಲ್ಲಿ’ ಸಿಂಗಾರುದ್ಗಂಟು ‘ವ್ಯಾಪಾರದ ಪಡಸಾಲೆಯಲ್ಲಿ ಎಷ್ಟೊಂದು ಬದುಕುಗಳು ಅರಳುತ್ತಿದ್ದವು. ಎನ್ನುವಷ್ಟರಲ್ಲಿ ಆಧುನಿಕತೆಯ ರೋಗವೊಂದು ಹಸಿವಿಗೂ ಸಂಚಕಾರ ತಂದು ಬರಡಾಗುವ ಹೊತ್ತಿನಲ್ಲಿಯೆ ಆಚರಣೆಯ ರೂಪ ಪಡೆದು ಜೀವವೊಂದು ಚಿಗುರೊಡೆದು ಬದುಕಿಗಾಸರೆಯಾಗುವ ನೆಪದಲ್ಲಿ ಸಾಗುವ ಕತೆ ಮನುಷ್ಯ ಲೋಕವೊಂದನ್ನು ತೆರೆದಿಡುವ ರೀತಿ ಅದನ್ನು ಸಾಕಾರಗೊಳಿಸುವ ನಿಂಗಮ್ಮಜ್ಜಿ ಪದೆ ಪದೆ ಕಾಡುತ್ತಾರೆ.
ಚರ್ಗದ ರಯ್ತ ಸಾಮಾಜಿಕ ಬದಲಾವಣೆಗೆ ಕಾರಣವಾಗುವ ಅಬಲೆಯು ಸಬಲೆಯಾಗುತ್ತಲೆ ರಕ್ತ ಕುಡಿಯುವ ಹದ್ದು ರಕ್ಷಣೆಯಾಗಿ ದೇವರಾಗುವ ಪರಿಯಲ್ಲಿ ಗ್ರಾಮೀಣ ಬದುಕು ಅನಾವರಣ ಗೊಂಡಿದೆ.
‘ಕಿರುಬನ್ಕಲ್’ ಕತೆಯಲ್ಲಿ ಬರುವ ಹೀರಿ ಮೂಡ್ಲಿ ಸೀನ ಬದುಕಿನ ಬೇರೆಬೇರೆ ಸ್ಥಿತ್ಯಂತರಗಳನ್ನು ತಿಳಿಸುತ್ತಲೆ ಸಾಹುಕಾರ್ ಚಂದ್ರಣ್ಣ ವಿಮ್ಲಿ ಎಲ್ಲರನ್ನೂ ಜಾತಿ ಕಾರಣಕ್ಕೆ ತಿಂದು ಮುಗಿಸುತ್ತಾ ಸಾಗುವಾಗ ಕಿರುಬನಕಲ್ಲು ಘಟನೆಯೊಂದರ ಕಾರಣಕ್ಕೆ ಜೀವವೊಂದು ಮರೆಯಾಗುವ, ಅದರ ನಡುಮನೆಯಲ್ಲಿ ತಮ್ಮದೆ ಸ್ವಾರ್ಥದ ಅಮಲುಗಳನ್ನು ತೀರಿಸಿಕೊಳ್ಳುವ ಮನುಷ್ಯರ ಮುಖವಾಡಗಳು ತೆರೆದಂತೆ, ಆಧುನಿಕತೆಯ ವಾಂಛೆಗೆ ಕಿರುಬನಕಲ್ಲು ಕಂದಕವಾಗುತ್ತ ಕತೆಯಾಗುತ್ತ ಕತೆಯಾಗುತ್ತ ನೂರಾರು ಕತೆಗಳು ಸತ್ಯವಾಗುವ ಸುಳ್ಳಾಗುವ ಕಥನಲೋಕವೊಂದು ವಿಶಿಷ್ಟವಾಗಿ ನಿರೂಪಿತವಾಗಿದೆ.
ಅವು ಅಂಗೇ.. ಅನ್ನುತ್ತಲೆ ಸಾಗುವ ದಲಿತ ಲೋಕವೊಂದು ತೆರೆದುಕೊಳ್ಳುತ್ತ ಉತ್ತಮ ನೀಚರ ನಡುವೆ ಬದುಕಿನ ದಾರಿಯೊಂದು ತಣ್ಣಗೆ ಪ್ರತಿಭಟಿಸುವ ರೂಪಕವಾಗಿ ನಿಲ್ಲುವ ಈರಮ್ಮಜ್ಜಿ ಕಾಂತ ಬದಲಾಗುತ್ತಲೇ ಘಟಿಸಿದ ಘಟನೆಯೊಂದರ ಬೆಂಕಿಯ ಕಾವಿಗೆ ಉರಿಯುತ್ತ ಉತ್ತಮರನ್ನು ಆವರಿಸಿಕೊಳ್ಳುವ ಬದಲಾವಣೆಯ ಸಂಕೇತವಾಗಿ ಅವು ಹಿಂಗೆ ಎನ್ನುವಂತೆ ಕಾಂತ ಕದ್ರನಾಗಿ ಕರಗಿ ಹೋಗುವ ಕಥನ ಶೈಲಿ ಚಿಂತನೆಯ ಪದರುಗಳನ್ನು ಉಳಿಸಿ ಬಿಡುತ್ತದೆ.
‘ಪಿಲ್ಟಾರಿಯ ಬಲ್ಬುರುಡೆ ‘ಆಧುನಿಕತೆಯ ಸಮ್ಮೋಹದಲ್ಲಿ ಸೀನ ಜಮೀರಣ್ಣ ಬದುಕನ್ನು ಕಂಡುಕೊಳ್ಳುವಷ್ಟರಲ್ಲಿ ದೊಡ್ಡಂಜಿನಿಯ ದೊಡ್ಡನಾಗುವ ವ್ಯಕ್ತಿತ್ವದ ಮೂಸೆಯಲ್ಲಿ ಆಧುನಿಕತೆಯ ಸೋಂಕಿದ್ದರೂ ವಂಚಿತವಾದ ಸಮಾಜವೊಂದು ನೀಲಣ್ಣನ ಪ್ರಯೋಗದಲ್ಲಿ ಸಿಲುಕಿ ಮುಗ್ಧ ಜೀವವೊಂದು ಬಲಿಯಾಗಿ ಬೂದಿಯಾಗುವ ಸಂಧಿಗ್ದತೆಯಲ್ಲಿ ಕಾನೂನಿನ ಕುಣಿಕೆಯಲ್ಲಿ ಬೀಳುವ ಜೀವವೊಂದು ಇಡೀ ಸಮೂಹವನ್ನು ತೊರೆಯುವುದು ಬೆಳಕು ಕಂಡರೂ ಬದುಕು ಕತ್ತಲಾಗುವ ಪರಿ ಸಮಾಜವೊಂದು ತನ್ನನ್ನೆ ಪ್ರಯೋಗಕ್ಕೆ ಒಡ್ಡಿಕೊಳ್ಳುವಾಗ ಏನೆಲ್ಲ ನಡೆಯುತ್ತದೆ ಎಂಬುದಕ್ಕೆ ಸಾಕ್ಷಿಯಾಗುತ್ತದೆ.
‘ಕಣ್ಣ ನಡುವಿನ ಕತ್ತಲು ‘ಹಟ್ಟಿಯ ಕತೆಯನ್ನು ಹಸಿಹಸಿಯಾಗಿಯೇ ತೆರೆದಿಡುತ್ತದೆ. ಬಾಡಿನ ಆಸೆಗೆ ಪರಿತಪಿಸುವ ಈರ್ಲಿಂಗ ಕೂಡಿಕೆಯಲ್ಲಿಯೆ ಬದುಕು ಕಂಡುಕೊಂಡಿದ್ದ ಪುಟ್ಟೀರಿ ಬದುಕು ನೆಲೆಗೊಂಡಿದ್ದರ ಕುರುಹಾಗಿದ್ದ ಕರಿಯ ಎಲ್ಲಾ ಹಟ್ಟಿಯ ಬದುಕನ್ನು ಪ್ರತಿನಿಧಿಸುತ್ತಲೆ ಬಾಡು, ಯಂಡ ಎನ್ನುತ್ತಲೆ, ಹಟ್ಟಿಗೊಂದು ಮಾರಮ್ಮಳನ್ನು ತಂದು ದೇವರ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳುವ ಸೂಲಯ್ಯನ ಯೋಚನೆಗೆ ಬಲಿತ ಲೋಕವೊಂದು ಅವರಲ್ಲೆ ಒಡಕುಂಟುಮಾಡಿ ಇಬ್ಬಾಗ ಮಾಡಿಸುವ ತಂತ್ರಗಾರಿಕೆ, ಶತಮಾನಗಳಿಂದಲೂ ಇಂತಹುದೆ ಹುನ್ನಾರಕ್ಕೆ ತುತ್ತಾಗಿ ಬದುಕು ನಡೆಸುವ ಹಟ್ಟಿಯ ಕಥಾನಕ ಹೀರ್ಲಿಂಗನ ಸಾವಿನೊಂದಿಗೆ ಕಣ್ಮರೆಯಾಗುವ ಕರಿಯನ ಹುಡುಕಾಟದೊಂದಿಗೆ ಕೊನೆಯಾಗುತ್ತದೆ. ಬಯಲು ಬದುಕಾಗುವ ಹೊತ್ತಿಗೆ ಬದುಕೆ ಬಯಲಾಗುವ ಸಂಕೀರ್ಣತೆಯ ಕತೆಯಲ್ಲಿ ಪಾತ್ರಗಳು ಉಸಿರಾಡುತ್ತವೆ. ಕಣ್ಣು ಕಟ್ಟಿದ ಕತ್ತಲು ಇನ್ನಷ್ಟು ಕಪ್ಪಾಗುತ್ತದೆ.

‘ಕೀಳಿಂಗಲ್ಲದೆ ‘ಕತೆಯಲ್ಲಿ ಕೀಳಾದವರು ಯಾರು ಜೋಪ್ಡಯ್ಯನೊ ಸುಂದ್ರಿ ರತ್ನ, ಚೆನ್ನಿಗಯ್ಯ, ಉಲ್ಟಿನಿಂಗನೋ, ಜೀವಕಣದ ಆ ಹುಡುಗನೋ, ಪ್ರಶ್ನೆ ಓದುಗನಿಗೆ ಪ್ರಶ್ನೆಯಾಗಿಯೆ ಉಳಿಯುತ್ತದೆ. ಪ್ರಶ್ನೆಗೆ ಉತ್ತರ ಹುಡುಕುತ್ತ ಹೊರಟ ರತ್ನಿ ಪ್ರಶ್ನೆಯಾಗಿಯೆ ಉಳಿದ ಜೋಪ್ಡಯ್ಯ ಉತ್ತರವಾಗಿ ನಿಂತ ಆ ಹುಡುಗ ಪ್ರಶ್ನೆಗಳಲ್ಲಿ ಮುಳುಗುವ ಊರು ತಮ್ಮ ತಮ್ಮ ಉತ್ತರಗಳಲ್ಲೆ ಸಮಧಾನಿಸಿಕೊಳ್ಳುವಾಗ ಅಮಾವಾಸ್ಯೆಯ ಕತ್ತಲಲ್ಲಿ ನಿಂತ ಅರಳಿ ಮರ ಮೂಕವಾಗಿಯೆ ನಿಂತಿತ್ತು. ಉತ್ತರಗಳೇನೊ ಇದ್ದವು. ಕತ್ತಲಲ್ಲಿ ಕರಗಿ ಹುಚ್ಚಾಗಿ ಹೋದವು. ಬೀಸಿದ ಗಾಳಿಗೆ ಎಲೆಗಳಷ್ಟೆ ಸದ್ದು ಮಾಡುತ್ತಿದ್ದವು. ಆಗಲೂ ಈಗಲೂ ಸಹ. ಬದುಕಾಗಬಹುದಾಗಿದ್ದ ಆಕಸ್ಮಿಕವೊಂದುವ್ಯಥೆಯಾಗಿ ಕಾಡುತ್ತದೆ.
‘ನ್ಯೂ ಪ್ಯೂರ್ ವೆಜ್ ಹೋಟೆಲ್ ‘ನ್ಯೂ ಪೋರ್ಕ್ ಹೋಟೆಲ್ ಆಗುವ ಪರಿಯೆ ಬದಲಾಗುವ ಬದುಕಿನ ಬೇರೆ ಬೇರೆ ಆಯಾಮಗಳನ್ನು ತಿಳಿಸುತ್ತದೆ. ಚೆನ್ನವೀರ ಸೆನ್ವೀರನಾಗುವ ಬದುಕಿನ ಗತ್ಯಂತರಕ್ಕೆ ಅನೇಕ ಜೀವಗಳು ಪಾತ್ರಗಳಾಗಿ ಬದುಕನ್ನು ನಡೆಸುತ್ತವೆ. ನಡೆಯುತ್ತವೆ.
ಇಲ್ಲಿನ ಒಂದೊಂದು ಕತೆಯು ಬದುಕಿನ ಒಂದೊಂದು ಮಗ್ಗಲನ್ನು ಅನಾವರಣ ಗೊಳಿಸುತ್ತಲೆ ಭಾಷೆಯೊಂದಿಗೆ ನಡೆಸುವ ಸಂವಾದ, ದಟ್ಟವಾದ ಅನುಭವಗಳು, ಆಚರಣೆಗಳು, ಕಾಲಕಾಲಕ್ಕೆ ಸಮಾಜವೊಂದು ತಂದೊಡ್ಡುವ ವಿಘಟಿತ ತಿರುವುಗಳು ಘಟಿಸುವ ಘಟನೆಗಳು. ಮನುಷ್ಯನ ಭಾವಲೋಕದ ಸಂಬಂಧಗಳ ಸಂಕೀರ್ಣತೆಯ, ಅನುಸಂಧಾನವನ್ನು ಉಣಬಡಿಸುತ್ತಲೆ ಗ್ರಾಮೀಣ ಲೋಕವೊಂದನ್ನು ತೆರೆದಿಡುವ ಪಟ್ಟಣದ ಅಹವಾಲುಗಳು ಅಲ್ಲಲ್ಲಿ ಇಣುಕಿ ಮರೆಯಾಗುವ, ಮನುಷ್ಯನ ಮುಗ್ದ ಲೋಕವೊಂದು ಬದುಕುತ್ತಲೆ ಸವೆಯುವ ಸವೆಯುತ್ತಲೆ ಬದುಕುವ ದಾರಿಯಲ್ಲಿ ನಿರೂಪಣೆಯ ನಿಟ್ಟುಸಿರೊಂದು ಬಿಡುಗಡೆ ಪಡೆದು ಕತೆಗಳು ಜೀವಂತವಾಗಿವೆ, ಅಲ್ಲಿ ಮನುಷ್ಯರೂ ಇದ್ದಾರೆ. ಓದಿ ನಾವು ಹಗುರವಾಗಬೇಕಷ್ಟೆ.. ಯಾಕೆಂದರೆ ಕತೆಗಳು ಅಂದ್ರೆ ಅವು ಅಂಗೇ…!?.
ರವಿಕುಮಾರ್ ನೀಹ ಸರ್ ಅವರು ಇನ್ನಷ್ಟು ಕತೆಗಳನ್ನು ಬರೆಯಲಿ. ಅವರ ಕಥಾ ಕಣಜ ಇನ್ನಷ್ಟು ಕತೆಗಳನ್ನು ಭಿತ್ತಲಿ, ಅವುಗಳನ್ನುಂಡು ನಾವು ಬೆಳೆಯುತ್ತೇವೆ. ಅವರಿಗೆ ಶುಭವಾಗಲಿ.
- ಮಾರುತಿ ಗೋಪಿಕುಂಟೆ.
