ಅರ್ಥಮಾಡಿಕೊಳ್ಳುವ‌ ಹೃದಯವೊಂದಿದ್ದರೆ ಸಾಕು..!

ಕೆಲವರಲ್ಲಿ ಬೆರಳೆಣಿಕೆಯಷ್ಟು ಮಾತ್ರವೇ ನಮ್ಮ ಬದುಕಿಗೆ ಬಹಳ ಮುಖ್ಯರೆನಿಸಿಬಿಡುತ್ತಾರೆ. ಎಷ್ಟೆಂದರೆ ನಮಗಿಂತಲೂ ಅವರನ್ನು ಹೆಚ್ಚು ಇಷ್ಟಪಡುತ್ತೇವೆ, ಪ್ರೀತಿಸುತ್ತೇವೆ, ಕಾಳಜಿ ತೋರುತ್ತೇವೆ ಹಾಗೂ ಅಂತಹವರ ಜೊತೆ ಜೊತೆಯಲ್ಲಿಯೇ ಬಾಳಬಂಡಿಯನ್ನು ಕಟ್ಟಿಕೊಂಡು‌ ಮುಂದುವರೆಯಲು ಬಯಸುತ್ತೇವೆ. ಅದು ಗೆಳೆತನ, ಪ್ರೇಮ, ದಾಂಪತ್ಯ, ರಕ್ತ ಸಂಬಂಧ, ಬಂಧು ಬಳಗ , ಒಡನಾಡಿ, ಆತ್ಮೀಯತೆ ಹೀಗೆ ಯಾವ ಸಂಬಂಧವೇ ಆಗಿರಬಹುದು. ಹಿರಿಯೂರು ಪ್ರಕಾಶ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ದೇಹದಲ್ಲಿ ಉಸಿರು ಶುರುವಾದ ಕ್ಷಣದಿಂದ ಅದು ನಿಲ್ಲುವವರೆಗೂ ನಿರಂತರವಾಗಿ ಸಾಗುವ ನಮ್ಮೆಲ್ಲರ ಜೀವನ ಪಯಣದಲ್ಲಿ ಎಷ್ಟೋ ಜನ ಬರುತ್ತಾರೆ, ಹೋಗುತ್ತಾರೆ. ಅದರಲ್ಲಿ ರಕ್ತ ಹಂಚಿಕೊಂಡವರು, ಸಂಬಂಧಿಗಳು, ಬಂಧು- ಬಳಗದವರು, ಸ್ನೇಹ ಸಂಬಂಧಿಗಳು… ಹೀಗೆ ನಾನಾ ತರಹದ ವ್ಯಕ್ತಿಗಳು ಇರುತ್ತಾರಲ್ಲವೇ ! ಹೀಗೆ ನಮ್ಮ‌ ಲೈಫ಼ಿನೊಳಕ್ಕೆ ಎಂಟ್ರಿ ಕೊಡುವವರಲ್ಲಿ ಎಲ್ಲರೂ ನಮ್ಮ‌ ಹೆಜ್ಜೆಗೆ ಹೆಜ್ಜೆ ಇಟ್ಟು, ಹೆಗಲಿಗೆ ಹೆಗಲು ಕೊಟ್ಟು ಭಾವನಾತ್ಮಕತೆಯ ಬಾಂಡೇಜ್ ನಿಂದ ಕೊನೆಯವರೆಗೂ ಉಳಿಯೋದೂ ಇಲ್ಲ , ಉಳಿಯುತ್ತಾರೆಂಬ ನಂಬಿಕೆಯೂ ಇರೋಲ್ಲ. ಆದರೆ ಅಂತಹ ವಾತಾವರಣದಲ್ಲೂ ಕೆಲವರು, ಹಾಗೂ ಆ ಕೆಲವರಲ್ಲಿ ಮತ್ತೇ ಒಂದಷ್ಟು ವಿರಳರು ಮಾತ್ರವೇ ನಮ್ಮ ಹೃದಯಕ್ಕೆ ಕರೆಕ್ಟಾಗಿ ಕನೆಕ್ಟ್ ಆಗಿ ಹತ್ತಿರವಾಗಿರಬಲ್ಲರು.

ಈ ಹೃದಯ ಅಂತ‌ ಇದೆಯಲ್ಲಾ… ಅದು ಅನೇಕ ರೀತಿಯ ಭಾವನೆಗಳನ್ನು ತುಂಬಿಕೊಂಡ ಒಂದು ಪುಟ್ಟ ಎದೆಚಿಪ್ಪು. ತನ್ನ ಮನಸಿನ ಭಾವನೆಗಳ ಅರ್ಥಕೆಡದಂತೆ ಸರಿಯಾಗಿ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಸ್ಪಂದಿಸಬಲ್ಲ ಬೇರೊಂದು ಸಮಾನ ಹೃದಯದ ಭಾವನೆಗಳಿಗೆ ಮಾತ್ರವೇ ಅದು ಅನಾಮತ್ತು ಕನೆಕ್ಟ್ ಆಗುತ್ತದೆ. ಈ ಕಾರಣದಿಂದಲೇ ನಮ್ಮ‌ ಜೀವನದಲ್ಲಿ ಬರುವ ಎಲ್ಲರನ್ನೂ ಅವರು ಹತ್ತಿರವಿರಲೀ, ದೂರವಿರಲೀ , ನಿತ್ಯ ನೋಡುತಲಿರಲೀ, ಭೇಟಿಯಾಗುತ್ತಲಿರಲಿ , ಇಲ್ಲದಿರಲೀ , ನಮ್ಮ ಮನಸಿನ‌ ಭಾವನಾತ್ಮಕ ಬಾಗಿಲು ಅಷ್ಟು ಸುಲಭಕ್ಕೆ ತೆರೆದುಕೊಳ್ಳದು.

ಹೀಗಾಗಿ ಆ ಕೆಲವರಲ್ಲಿ ಬೆರಳೆಣಿಕೆಯಷ್ಟು ಮಾತ್ರವೇ ನಮ್ಮ ಬದುಕಿಗೆ ಬಹಳ ಮುಖ್ಯರೆನಿಸಿಬಿಡುತ್ತಾರೆ. ಎಷ್ಟೆಂದರೆ ನಮಗಿಂತಲೂ ಅವರನ್ನು ಹೆಚ್ಚು ಇಷ್ಟಪಡುತ್ತೇವೆ, ಪ್ರೀತಿಸುತ್ತೇವೆ, ಕಾಳಜಿ ತೋರುತ್ತೇವೆ ಹಾಗೂ ಅಂತಹವರ ಜೊತೆ ಜೊತೆಯಲ್ಲಿಯೇ ಬಾಳಬಂಡಿಯನ್ನು ಕಟ್ಟಿಕೊಂಡು‌ ಮುಂದುವರೆಯಲು ಬಯಸುತ್ತೇವೆ. Of course, ಅದು ಗೆಳೆತನ, ಪ್ರೇಮ, ದಾಂಪತ್ಯ, ರಕ್ತ ಸಂಬಂಧ, ಬಂಧು ಬಳಗ , ಒಡನಾಡಿ, ಆತ್ಮೀಯತೆ ಹೀಗೆ ಯಾವ ಸಂಬಂಧವೇ ಆಗಿರಬಹುದು.

ನೀವು ಇಡುವ ಪ್ರತೀ ಹೆಜ್ಜೆಯಲ್ಲೂ ಅವರ ನೆರಳು, ನೀವು ತೆಗೆದುಕೊಳ್ಳುವ ಪ್ರತೀ ನಿರ್ಧಾರದಲ್ಲೂ ಅವರ ಪ್ರಭಾವ, ನೀವು ಕಾಣುವ ಪ್ರತೀ ಕನಸಿನಲ್ಲೂ ಅವರದೇ ಧ್ಯಾನ…ಈ ಲೆವೆಲ್ಲಿಗೆ ಅವರನ್ನು ಮನಸಾರೆ ಹಚ್ಚಿಕೊಂಡು ಅವರ ಸಾಮೀಪ್ಯಕ್ಕಾಗಿಯೇ ಸದಾ ಮಿಡಿಯುವ ನಿಮ್ಮ ಹೃದಯ, ಅನ್ ಕಂಡೀಷನಲ್ಲಾಗಿ ಒಂದು ಅವಿನಾಭಾವ ಬಾಂಡೇಜಿಗೆ ಮುಲಾಜಿಲ್ಲದೇ ಕನೆಕ್ಟ್ ಆಗಿಬಿಟ್ಟಿರುತ್ತದೆ. ಈ ಭಾವನೆಗಳ ತುಂಬೆಲ್ಲಾ ಹರಡಿರುವುದು ಕೇವಲ ನಿಸ್ವಾರ್ಥ ಪ್ರೀತಿ, ನಿರ್ವ್ಯಾಜ್ಯ ಪ್ರೇಮ, ನಿರ್ಮಲಂತಃಕರಣದ ತ್ಯಾಗ, ನಿರಾಡಂಬರದ ಸ್ನೇಹ, ನಿರ್ಮೋಹದ ಸ್ನೇಹ ನಿನಾದಗಳ ಲಯಬದ್ಧ ನಾದ ಮಾತ್ರವೇ .!

ಇಂತಹಾ ಒಂದು ಅನನ್ಯ ಅನುಭೂತಿ ಕೊಡುವ ಮತ್ತೊಂದು ಜೋಡಿಜೀವ ಯಾವುದೇ ರೂಪದಲ್ಲಿ ನಿಮಗೆ ದಕ್ಕಿದಲ್ಲಿ, ದಕ್ಕಿಸಿಕೊಂಡಲ್ಲಿ ಐ ಸ್ವೇರ್….. ನಿಮ್ಮಂತಹ ಅದೃಷ್ಟಶಾಲಿ ಈ ಜಗದೊಳಗೆ ಮತ್ತೊಬ್ಬರು ಇರಲು ಛಾನ್ಸೇ ಇಲ್ಲ. ಆ ಬಾಂಡೇಜ್ ನ ಖದರ್ ಎಷ್ಟು ಸ್ಟ್ರಾಂಗ್ ಎಂದರೆ ಅಲ್ಲಿ ಬೇರಾವ ಅನುಮಾನ, ಅಪಮಾನ, ಅಪಶೃತಿ- ಅಪಸ್ವರಗಳ ಸುಳಿವಿನ‌ ಎಳೆಯೂ ಸನಿಹಕ್ಕೆ ಬರಲು ಅದು‌ ಬಿಡಲಾರದು. ಅಷ್ಟೇಕೆ…ಯಾವುದೇ ಲೌಕಿಕ ವ್ಯವಹಾರಗಳ ಲೆಕ್ಕಾಚಾರವಾಗಲೀ, ಲಾಭ ನಷ್ಟಗಳ – ಕೊಡು ತೆಗೆದುಕೊಳ್ಳುವ ವಿಚಾರದ ವೈಮನಸ್ಯಗಳಾಗಲೀ ಅದರೆದುರು ಅಡ್ಡ ನಿಲ್ಲದು.ನಿಮ್ಮನ್ನು ನಿಮಗಿಂತಲೂ ಹೆಚ್ಚು ಪ್ರೀತಿಸುವ, ಅರ್ಥ ಮಾಡಿಕೊಂಡಿರುವ ಜೀವವೊಂದರ ಸಾಮೀಪ್ಯಕ್ಕಿಂತ ಬಹುಮೌಲ್ಯಯುತವಾದ ಗಳಿಕೆ ಈ ಜ಼ಿಂದಗಿಯಲ್ಲಿ ಬೇರೇನಿರಲು ಸಾಧ್ಯ ? ಅಂಥಾದ್ದೊಂದು ಜೀವದ ಬೊಗಸೆಯಷ್ಟು ನಿರ್ಮಲ ಪ್ರೀತಿ ನಿಮ್ಮದಾದಲ್ಲಿ ಬದುಕು ಎಂಥಾ ಸೊಗಸಲ್ಲವೇ..?

ಆದರೆ ಇಂತಹಾ ಅದೃಷ್ಟ ಎಷ್ಟು ಮಂದಿಗಿರಲು ಸಾಧ್ಯ ಎಂಬುದೂ ಮಿಲಿಯನ್ ಡಾಲರ್ ಪ್ರಶ್ನೆಯೇ ! ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಅನಿರೀಕ್ಷಿತವಾಗಿ ಅಥವಾ ಲೈಕ್ ಮೈಂಡೆಡ್ ನೆಸ್ಸ್ ನಿಂದ ಒಂದಾಗಿ ಬೆಸೆದುಕೊಂಡ ಪರಸ್ಪರ ಬಂಧ- ಅನುಬಂಧ ಕಾಲಕ್ರಮೇಣ ಸಮಾನ ಮನಸ್ಸಿನ ಸಹವಾಸದಿಂದ ಸವಿ ಸವಿ ನೆನಪುಗಳನ್ನು ಬಿತ್ತುತ್ತಾ ಹೋಗಿ ಕೊನೆಗೆ ಬೇರ್ಪಡಿಸಲಾಗದ ಬಂಧವಾಗಿ ಬಿಗಿಯಾಗಿ ಬಿಡುತ್ತದೆ. ಈ ‍ತರಹದ ಗಟ್ಟಿಯಾದ ಸಂಬಂಧಗಳು ಬೆಸೆದು ಕೊಳ್ಳುವುದಕ್ಕಿಂತಲೂ ಅದನ್ನು ಉಳಿಸಿಕೊಂಡು ಹೋಗುವುದೇ ಬದುಕಿನ ದೊಡ್ಡ ಸವಾಲು ಹಾಗೂ ಹೆಚ್ಚುಗಾರಿಕೆ. ಈ ಭೂಮಿ ಮೇಲಿನ ಯಾವುದೇ ಅಮೂಲ್ಯ ವಸ್ತುವನ್ನಾಗಲೀ, ಮೌಲ್ಯಯುತ ಸಂಬಂಧಗಳನ್ನಾಗಲೀ ಕೇವಲ ನಮ್ಮದಾಗಿಸಿ ಕೊಳ್ಳುವುದಕ್ಕಿಂತಲೂ ಹಾಗೆ ನಮ್ಮದಾಗಿಸಿಕೊಂಡಿದ್ದನ್ನು ನಮ್ಮಲ್ಲೇ ‌ಧೀರ್ಘಕಾಲ ಉಳಿಸಿಕೊಳ್ಳುವುದಿದೆಯಲ್ಲಾ , ಅದು ನಿಜಕ್ಕೂ ಕಷ್ಟಕರವಾದ ಕೆಲಸ .

ವಿಪರ್ಯಾಸವೆಂದರೆ ಭದ್ರವಾದ ‌ಗೋಡೆಗಳು, ಅಣೆಕಟ್ಟುಗಳು, ಬಿಲ್ಡಿಂಗುಗಳು, ಕೋಟೆಗಳು ಕಾಲಾಂತರದಲ್ಲಿ‌ ಬಿರುಕು ಬಿಡುವಂತೆ‌, ಗಟ್ಟಿಯಾಗಿದ್ದ ಸಂಬಂಧಗಳಲ್ಲಿಯೂ ಕೂಡಾ ಕೆಲ ಸಮಸ್ಯೆಗಳು, ಅಪನಂಬಿಕೆಗಳೆಂಬ ಸಣ್ಣ‌ ಬಿರುಕುಗಳು ಮೂಡುತ್ತಾ ಅವೇ‌ ಮುಂದೆ‌ ಅನುಮಾನಗಳೆಂಬ ದೊಡ್ಡ ಕಂದಕಗಳಾಗಿ ಬೆಳೆದು ಒಲಿದ ಮನಸುಗಳನ್ನು, ಬಿಗಿದ ಬಂಧಗಳನ್ನು ನಿರ್ದಯವಾಗಿ ಬೇರ್ಪಡಿಸಿ, ಒಮ್ಮೊಮ್ಮೆ ಕಾರಣವಿಲ್ಲದೆಯೂ ಕವಲುದಾರಿಯಲ್ಲಿ ನಡೆಯುವಂತೆ‌ ಮಾಡಿಬಿಡುತ್ತವೆ.

ಅಂತಹ ಸಂದರ್ಭ ಸನ್ನಿವೇಶಗಳನ್ನು ಬಹುತೇಕ ಎಲ್ಲರೂ ಅನುಭವಿಸಿರುತ್ತೀರಿ ಅಥವಾ ಹತ್ತಿರದಿಂದ ನೋಡಿರುತ್ತೀರಿ. ಅಂತಹಾ ಸಂದರ್ಭದಲ್ಲಿ ಯಾಕೆ ಹೀಗಾಯ್ತು ಅಥವಾ ಏಕೆ ಹೀಗಾಗುತ್ತೆ ಎನ್ನುವುದರ ತರ್ಕಕ್ಕೆ ಏನೇನೋ ಅಡ್ಡ ಬಂದು ವಿವೇಕದ ಕಣ್ಣಿಗೆ ಅಹಮ್ಮಿಕೆಯದೋ ಅಪನಂಬಿಕೆಯದೋ ಅಥವಾ ಅಪಾರ್ಥದ್ದೋ ಪೊರೆ ಕಟ್ಟಿಬಿಡುತ್ತವೆ. ಈ ಬೇಡದ ಪರಿಸ್ಥಿತಿಯನ್ನು ಬೆಳೆಯಲು ಬಿಟ್ಟರೆ ಅದು ನಮ್ಮನ್ನಗಲಿ ಶಾಶ್ವತವಾಗಿ ದೂರ ಸರಿದು ಬಿಡುತ್ತದೆ. ಈ ಅಸಹನೀಯ ಪರಿಸ್ಥಿತಿ ಅಲ್ಲಿಯವರೆಗಿನ ನಿಮ್ಮೆಲ್ಲಾ ಸುಂದರ ಬಾಂಡೇಜುಗಳಿಗೆ ಬ್ಯಾಂಡೇಜು ಹಾಕಿ ಕೊಳೆಯುವಂತೆ ಮಾಡಿಬಿಡುತ್ತದೆ.

ಹೀಗಾಗದಂತೆ ತಡೆಯುವ ಶಕ್ತಿ ಇರುವುದು ಪರಸ್ಪರ ಅರ್ಥಮಾಡಿಕೊಂಡ ಪವಿತ್ರ ಮನಸುಗಳಿಗೆ‌ ಮಾತ್ರ. ಎಲ್ಲಿ ಧೃಢ ನಂಬಿಕೆ , ಗೌರವ , ಪ್ರೀತಿ, ಪಾಸಿಟೀವ್ ಥಿಂಕಿಂಗ್ ಹಾಗೂ ಆರೋಗ್ಯಕರ ಪೊಸ್ಸೆಸ್ಸೀವ್ ನೆಸ್ ಗಳೆಂಬ ತಂಗಾಳಿಯ ತರಂಗಗಳು ಜೀವನಸಾಗರದಲ್ಲಿ ಸದಾ ಬೀಸುವಂತಿರುತ್ತದೆಯೋ, ಅಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಒಬ್ಬರಿಗೊಬ್ಬರು ವಿಮುಖರಾಗುವ ಪ್ರಶ್ನೆಯೇ ಉದ್ಭವವಾಗದು ! ಒಂದೊಮ್ಮೆ ಕೆಟ್ಟ ಪರಿಸ್ಥಿತಿ, ಅಥವಾ ದುಷ್ಟ ಶಕ್ತಿಗಳು ನಿಮ್ಮನ್ನು ಅಂತಹಾ ಸ್ಥಿತಿಗೆ ನೂಕಿದಲ್ಲಿ…ನಿಮ್ಮೆಲ್ಲಾ ” ಇಗೋ ” ಪಕ್ಕಕ್ಕಿಟ್ಟು ಈ ದುನಿಯಾದಲ್ಲಿ ನಿಮ್ಮನ್ನು ನಂಬಿಕೊಂಡವರ ಹೃದಯಕ್ಕೆ ಗಟ್ಟಿಯಾಗಿ ಕೇಳಿಸುವಂತೆ ಪ್ರಾಮಾಣಿಕವಾಗಿ ಹೇಳಿ…”ನೀನಿಲ್ಲದೇ ನನದೇನಿದೇ….ಎಂದು.! ಅದರಿಂದ ಬೆಟ್ಟದಂತಹ ಸಮಸ್ಯೆಯೂ ಮಂಜಿನಂತೆ ಕರಗಿ ಹರಿಯಬಲ್ಲದೆಂಬ ಹುಸಿಭ್ರಮೆಯಲ್ಲದಿದ್ದರೂ, ಕೊನೇಪಕ್ಷ ಗೊಂದಲದ ವಾತಾವರಣ ತಿಳಿಯಾಗುವ ಹಾದಿಯಾದರೂ ಕಂಡೀತು.

** ಮರೆಯುವ ಮುನ್ನ **

ಬದುಕೆಂದರೆ ಸದಾ ಸುಂದರವಾಗಿ ಕಂಗೊಳಿಸುವ ಹೂವಿನ ತೋಟವಲ್ಲ, ಶೃತಿ ಬದ್ದ ಸಂಗೀತವಲ್ಲ, ರಾಗ ತಾಳ ಪಲ್ಲವಿಗಳ ಸುಗಮ ಸಮಾಗಮವೂ ಅಲ್ಲ ಅಥವಾ ನಡೆಯುವುದೆಲ್ಲವೂ ಸುಮನಸಿನ‌ ಸುಮನೋಹರ ಸ್ವಪ್ನ ದೃಶ್ಯಗಳ ಸುಂದರ ಭ್ರಮಾಲೋಕವೂ ಅಲ್ಲ. ಅವೆಲ್ಲದರ ಜೊತೆಗೆ ಕಷ್ಟ ,ನಷ್ಟ, ಸಮಸ್ಯೆ, ಸವಾಲು, ಸಂಘರ್ಷ, ಹೋರಾಟ, ಹಾರಾಟ ಚೀರಾಟಗಳೆಂಬ ಹಾದಿಯಲ್ಲಿನ ಕಲ್ಲು ಮುಳ್ಳುಗಳಂತೆ ಅದು ಕಠಿಣವೂ ಹೌದು, ಸಂಕೀರ್ಣವೂ ಹೌದು. ಬದುಕಿನ ಈ ಅನಿವಾರ್ಯ ಕೊಡುಗೆಗಳಲ್ಲಿ ಕೆಲವರಿಗೆ ಸುಖದ ಪಾಲು ಹೆಚ್ಚಿದ್ದರೆ ಮತ್ತೆ ಹಲವರಿಗೆ ಕಷ್ಟ ಕೋಟಲೆಗಳ ಸುರಿಮಳೆ ಹೆಚ್ಚು.

ಅವು ಕೆಲವರನ್ನು ತಾವೇ ಹುಡುಕಿಕೊಂಡು ಬಂದಿರಬಹುದು ಅಥವಾ ಕೆಲವರು ಅವುಗಳನ್ನು ತಾವಾಗಿಯೇ ಆಹ್ವಾನಿಸಿಕೊಂಡಿರಲೂ ಬಹುದು. ಜತೆಗೆ ಜೀವನದಲ್ಲಿ ಅನಿವಾರ್ಯತೆಯಿಂದಲೋ ಅಥವಾ ಅಸಹಾಯಕತೆಯಿಂದಲೋ ಮತ್ತೊಬ್ಬರ ಮೇಲಿಟ್ಟಿರುವ ಅತಿಯಾದ ನಂಬಿಕೆ, ಅತಿಯಾದ ಪ್ರೀತಿ, ಅತಿಯಾದ ನಿರೀಕ್ಷೆ, ಅತಿಯಾದ ಅವಲಂಬನೆಯೆಂಬುದು ಕೊನೆಗೆ ಅತಿಯಾದ ನೋವನ್ನೂ ಕೊಟ್ಟು ಸಂಕಷ್ಟಕ್ಕೆ ತಳ್ಳಿರಬಲ್ಲದು.

ವಾಸ್ತವದಲ್ಲಿ ನೀವು ಜೀವನದ ಸಮಸ್ಯೆಗಳ ಸುಳಿಯಲ್ಲಿರುವಾಗ ಅಥವಾ ಗೊಂದಲದ ಗೂಡಿನಲ್ಲಿರುವಾಗಲೇ ನಿಮ್ಮ ಹೃದಯ ತನ್ನ ಆಂತರ್ಯದ ಪಿಸುಮಾತಿನ ದನಿಗೆ ಕಿವಿಯಾಗಲು ಮತ್ತೊಂದು ಸಮಾನ ಮನಸ್ಕ ಹೃದಯವನ್ನು ಮನಸಾರೆ ಅರಸುವುದು. ಅದೃಷ್ಟವಶಾತ್ ಅಂಥಾದ್ದೊಂದು ಸ್ಪಂದಿಸುವ ಮನಸು, ಕೈಹಿಡಿದು ಭರವಸೆ ಮೂಡಿಸುವ ಸಾಮೀಪ್ಯ, ಹಾಗೂ ಏನಿಲ್ಲವಾದರೂ ” ನಾನಿದ್ದೇನೆ ” ಎಂದು ನಿಮ್ಮನ್ನು ಅರ್ಥಮಾಡಿಕೊಂಡು ಸಾಂತ್ವನ ಹೇಳುವ ಪರಿಶುದ್ಧ ಹೃದಯವೊಂದು ನಿಮ್ಮ ಜೊತೆಯಿದ್ದಲ್ಲಿ….., ಯಾರ ಶಾಪವೂ ತಾಗದಂತೆ ಅದನ್ನು ಬಿಡದೇ ಭದ್ರವಾಗಿಡಿದಿಟ್ಟು ಕೊಳ್ಳಿ. ಮೋಸ್ಟ್ ಇಂಪಾರ್ಟೆಂಟ್ಲೀ….., ಅದಕ್ಕೆ ಯಾರದ್ದೋ ಕೆಟ್ಟಕಣ್ಣು ಬಿದ್ದು ವಿದಾಯ ಹೇಳುವ ದಯನೀಯ ದುರಂತ, ದೇಹದಲ್ಲಿ
ಉಸಿರಿರುವವರೆಗೂ ಯಾರಿಗೂ ಬಾರದಿರಲಿ..!

ಪ್ರೀತಿಯಿಂದ….


  • ಹಿರಿಯೂರು ಪ್ರಕಾಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW