ಬೇಂದ್ರೆ ಸಾಹಿತ್ಯವನ್ನು ಅವರ ಜೀವನವನ್ನು ಕಿಂಚಿತ್ತು ತಿಳಿಯಲು ಪ್ರಯತ್ನಿಸಿದರೂ ಸಾಕು ಜೀವನಕ್ಕೆ ಹೊಸ ನೆಲೆ ಬೆಲೆ ಸಿಗುತ್ತದೆ. ಅವರ ಜೀವನಾನುಭವ ಅದರ ಸತ್ವ ಅವರ ಕಾವ್ಯದ ಮೇಲೆ ಗಾಢ ಪ್ರಭಾವ ಬೀರಿದೆ. ಕವಿಯತ್ರಿ ಸುಜಾತಾ ರವೀಶ್ ಅವರು ಬೇಂದ್ರೆಯವರ ಕಾವ್ಯದ ಕುರಿತು ಚಿಂತನಾ ಲೇಖನವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬೇಂದ್ರೆ ಬದುಕು ಬರಹ
ಕಾವ್ಯ ಚರಿತವೇ ಸಾಕು
ಬೇರೆ ಚಾರಿತ್ರ್ಯ ಬೇಕೇ
- ಅಂಬಿಕಾತನಯದತ್ತ
ನಿಜ ಹಿಂದಿನವರು ಬರೆದಿಟ್ಟು ಹೋದವುಗಳನ್ನು ಓದಿ ಮನನ ಮಾಡಿ ಪಾಲಿಸಿದರೆ ಅದೇ ಚಾರಿತ್ರ್ಯ ನಿರ್ಮಾಣ. ಅದಕ್ಕಿಂತ ಬೇರೆ ಬೇಕೆ? ಬೇಂದ್ರೆ ಸಾಹಿತ್ಯವನ್ನು ಅವರ ಜೀವನವನ್ನು ಕಿಂಚಿತ್ತು ತಿಳಿಯಲು ಪ್ರಯತ್ನಿಸಿದರೂ ಸಾಕು ಜೀವನಕ್ಕೆ ಹೊಸ ನೆಲೆ ಬೆಲೆ ಸಿಗುತ್ತದೆ ಈ ದಿಶೆಯಲ್ಲಿ ಜನಪ್ರಿಯವಾದ ಬೇಂದ್ರೆ ಅವರ ಒಂದೊಂದು ಭಾವಗೀತೆಯ ಮಹಾನ್ ಕಾವ್ಯವೇ ದಿನನಿತ್ಯದ ಸೂರ್ಯೋದಯವನ್ನು ಬೆರಗಿನಿಂದ ವೀಕ್ಷಿಸುವ ಕವಿ ಉದ್ಗರಿಸುತ್ತಾರೆ “ಇದು ಬರಿ ಬೆಳಗಲ್ಲೋ ಅಣ್ಣಾ.”

ತಮ್ಮ ಮೇಲೆ ಟಾಗೋರರು ಬೀರಿದ ಪ್ರಭಾವ ಅಧಿಕ.” ನನ್ನ ಕಾವ್ಯ ದೃಷ್ಟಿಯ ಸಮ್ಮಿಲನವೂ ಟ್ಯಾಗೋರರ ರಸಿಕೋಕ್ತಿಗಳಿಂದಲೇ ಆಗಿತ್ತು” ಎನ್ನುವ ಬೇಂದ್ರೆಯವರು ದೃಷ್ಟಿ ಸಮಷ್ಟಿ ಸಂಬಂಧದ ನಿಜವಾದ ತಿಳಿವು ತಮಗೆ ಟ್ಯಾಗೋರರಿಂದ ಬಂದಿತ್ತು ಎನ್ನುತ್ತಾರೆ . ಬೇಂದ್ರೆಯವರ ಕವನಗಳೇ ಹಾಗೆ… ಮೇಲ್ನೋಟಕ್ಕೆ ತುಂಬಾ ಸರಳವಾಗಿ ಕಂಡರೂ ಅಂತರ್ಗತವಾಗಿ ಗುಪ್ತಗಾಮಿನಿಯೊಂದು ಅಲ್ಲಿ ಹರಿಯುತ್ತಿರುತ್ತದೆ. ಅರಿಯುವ ದೃಷ್ಟಿಗೆ ಬೃಹತ್ತಾಗಿ ಪ್ರತ್ಯೇಕವಾಗಿ ಬೇರೆಯದೇ ಅನುಭಾವ ಕೊಡುವ ಸಾಮರ್ಥ್ಯ ಹೊಂದಿದೆ .ಬಹುತೇಕ ಟಾಗೋರರ ಕವನಗಳು ಅಂತೆಯೇ .
‘ನಾನು’ ಕವನದಲ್ಲಿ ಬೇಂದ್ರೆಯವರು ಹೀಗೆ ಹೇಳುತ್ತಾರೆ :
ವಿಶ್ವಮಾತೆಯ ಗರ್ಭ ಸಂಜಾತ ಪರಾಗ
ಪರಮಾಣು ಕೀರ್ತಿ ನಾನು
ಭೂಮಿತಾಯಿಯ ಮೈಯ ಹಿಡಿಮಣ್ಣುಗುಡಿಕಟ್ಟಿ
ನಿಂತಂತ ಮೂರ್ತಿ ನಾನು
ಕನ್ನಡದ ತಾಯಿ ತಾವರೆಯ ಪರಿಮಳವುಂಡು
ಬೀರುತಿಹ ಗಾಳಿ ನಾನು
ನನ್ನ ತಾಯಿಯ ಹಾಲು ನೆತ್ತರ ಕುಡಿದಂತೆ
ಜೀವಂತ ಪ್ರತಿಮೆ ನಾನು
ಈ ಐದು ಐದೆಯರೆ ಪಂಚಪ್ರಾಣಗಳಾಗಿ
ಈ ಜೀವ ದೇಹನಿಹನು
ಹೃದಯಾರವಿಂದದಲಿ ನಾರಾಯಣನೇ
ತಾನಾಗಿ ದತ್ತ ನರನು
ವಿಶ್ವ ಹೊಳೆ ನುಡಿಯಾಗಿ ಕನ್ನಡಿಸುತಿಹನಿಲ್ಲಿ ಅಂಬಿಕಾತನಯ ದತ್ತನಿವನು
ಇಲ್ಲಿ ವಿಶ್ವಮಾತೆ ಭಾರತ ತಾಯಿ ಕನ್ನಡಾಂಬೆ ಹಾಗೂ ತಮ್ಮ ಸ್ವಂತ ತಾಯಿ ಇವರೆಲ್ಲರ ಮಮತೆಯ ಕೂಸು ನಾನು ಎಂದು ಹೇಳಿಕೊಳ್ಳುತ್ತಾರೆ. ಧಾರವಾಡದ ಬಗ್ಗೆಗಿನ ಅವರ ಪ್ರೇಮವಂತೂ ಅನನ್ಯ. ಧಾರವಾಡವನ್ನು ಬಿಟ್ಟು ಹೋಗಬೇಕಾಗಿ ಬಂದಾಗ ಬರೆದ “ನಾವು ಬರುತೇವಿನ್ನ ತಾಯಿ” ಎಂಬ ಕವನ ಎಷ್ಟು ಹೃದಯ ಸ್ಪರ್ಶಿಯಾಗಿದೆ ಎಂಬುದನ್ನು ಓದಿಯೇ ತಿಳಿಯಬೇಕು .
ಬೇಂದ್ರೆಯವರ ಕಾವ್ಯದ ಮೇಲೆ ಸಂಸ್ಕೃತ, ಇಂಗ್ಲಿಷ್, ಮರಾಠಿ ಹಾಗೂ ಬಂಗಾಳಿ ಮೂಲದ ಸಾಹಿತ್ಯಗಳು ಪ್ರಭಾವ ಬೀರಿದೆ. ಅದರ ಹೊರತಾಗಿಯೂ ಕನ್ನಡದ ಮೂಲ ಸತ್ವದ ಸೊಗಡು ಹೊರಹೊಮ್ಮಿದೆ. ಬೇಂದ್ರೆಯವರು ಪ್ರಾಪಂಚಿಕ ಕಷ್ಟದ ಮೂಸೆಯಲ್ಲಿ ನೊಂದು ಬೆಂದು ಹೊರಬಂದು ಬೇಂದ್ರೆಯವರಾದವರು. ಹಾಗಾಗಿ ಅವರ ಜೀವನಾನುಭವ ಅದರ ಸತ್ವ ಅವರ ಕಾವ್ಯದ ಮೇಲೆ ಗಾಢ ಪ್ರಭಾವ ಬೀರಿದೆ ಆದರೂ ತಮ್ಮ ಕಷ್ಟಗಳ ಕಾಷ್ಟದ ತಾಪದಲ್ಲಿ ಬೆಂದದ್ದನ್ನು ಕಾವ್ಯವಾಗಿಸಿದ್ದರು , ಕಾವ್ಯ ರಸಿಕರ ಹೃದಯ ಹಚ್ಚಾಗಾಗಿಸಿದರೂ ಬೆಚ್ಚಗಾಗಿಸಿದರು. ಈ ಕವನದ ಮೂಲಕ ಅವರ ಆಂತರ್ಯ ಎಷ್ಟು ಚೆನ್ನಾಗಿ ಹೊರಹೊಮ್ಮಿದೆ ನೋಡಿ
ನನ್ನ ಪಾಡೆನಗಿರಲಿ ಅದರ ಹಾಡನಷ್ಟೇ
ನೀಡುವೆನು ರಸಿಕ! ನಿನಗೆ
ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ
ನಾನು ಬಡವಿ ಆತ ಬಡವ ಎಂದು ಹೇಳಿ ಒಲವನ್ನೇ ಬದುಕನ್ನಾಗಿಸಿಕೊಂಡ ದಾಂಪತ್ಯ ಅನುಬಂಧ ಅನುಸಂಧಾನವನ್ನು ಬರೆದ ಕವಿ ಕುರುಡು ಕಾಂಚಾಣದ ಹುಚ್ಚು ಕುಣಿತವನ್ನೂ ವರ್ಣಿಸುತ್ತಾರೆ. ಹಾಗೆಯೇ ನೀ ಹೀಗೆ ನೋಡಬೇಡ ನನ್ನ ಕವನದಲ್ಲಿ ಪುತ್ರಶೋಕದ ವಿಷಾದವೂ ಮಡುಗಟ್ಟಿ ಹೊರಬೀಳುತ್ತದೆ. ಬೇಂದ್ರೆಯವರ ಕಾವ್ಯ ಸಾಮಾನ್ಯ ಓದುಗನಿಗೂ ಓದಿನ ಅಭ್ಯಾಸಿಗಳಿಗೂ ಇಬ್ಬರಿಗೂ ಮೆದುಳಿಗೆ ಮೇವು ನೀಡುವಂತಹ ಗ್ರಾಸ . ಅವರು ಕೇವಲ ವ್ಯಕ್ತಿಯಲ್ಲ ವ್ಯಕ್ತಿತ್ವ ಮತ್ತು ಋಷಿಗಳು.

ಶ್ರಾವಣ ಪ್ರತಿಭೆ ಯುಗದ ಕವಿ ನಾದಲೋಲ ಜಾನಪದ ಕವಿ ಎಂಬೆಲ್ಲ ಹೊಗಳಿಕೆ ಈ ಕಾವ್ಯ ಗಾರುಡಿಗನಿಗೆ ಕನ್ನಡ ಕಾವ್ಯ ಪರಂಪರೆಗೆ ಹೊಸದನ್ನು ಕೊಟ್ಟ ಹಿರಿಮೆ. ಮಾತನಾಡುವ ಆಡು ಭಾಷೆಯನ್ನು ಅವರು ಬಳಸಿ ಕೊಂಡ ರೀತಿ ಅನನ್ಯ.
ನಾಡು ನುಡಿಯ ಬಗ್ಗೆ ಚಿಂತನೆ ದೇಶ ಜಗತ್ತಿನ ಏಳಿಗೆ ಉತ್ತಮ ಸಾಹಿತ್ಯದ ಅನುವಾದ ಅದೂ ಅತ್ಯಂತ ಉತ್ಕೃಷ್ಟ ರೀತಿಯಲ್ಲಿ. ಹೀಗೆ ಇವರ ಕೊಡುಗೆ ಅಮೂಲ್ಯ. ಇವರ ಆಸಕ್ತಿಯ ವಿಷಯ ಸಂಖ್ಯೆ. ಪ್ರಕೃತಿ ಮತ್ತು ಸಂಸ್ಕೃತಿ ಇವುಗಳ ಬಗ್ಗೆ ಹೆಚ್ಚಿನ ಕೇಂದ್ರೀಕೃತ ಧ್ಯಾನ .
ಒಟ್ಟು ಜೀವಿತದ ಅವಧಿಯಲ್ಲಿ ಇಷ್ಟೆಲ್ಲ ಸಾಧಿಸಬಹುದೇ ಎಂಬ ವಿಸ್ಮಯ ಹುಟ್ಟಿಸುವ ಅಪ್ರತಿಮ ವ್ಯಕ್ತಿ ಮಾನವತಾವಾದಿ, ವಿಚಾರವಾದಿ, ಚಿಂತಕರಾಗಿ ಬೇಂದ್ರೆ ಅನೇಕ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾರೆ . ನಮ್ಮೆಲ್ಲರಿಗೂ ಮಾದರಿಯಾಗಿ ಉಳಿಯುತ್ತಾರೆ ಕನ್ನಡ ಸಾಹಿತ್ಯದ ಮೇರು ಶಿಖರವಾಗಿ ಅಚಲವಾಗಿ ನಿಂತಿರುತ್ತಾರೆ.
- ಸುಜಾತಾ ರವೀಶ್ – ಮೈಸೂರು
