ಜನರ ದನಿ : ಬಂಜಗೆರೆ ಜಯಪ್ರಕಾಶ್

ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ , ‘ಚಳವಳಿಗಳ ಸಂಗಾತಿ’ ಯೆಂದು, ಒಡನಾಡಿಗಳ ನಡುವೆ ಪ್ರೀತಿಯಿಂದ ‘ಜೆಪಿ’ ಎಂದೇ ಕರೆಯಲ್ಪಡುವ ಕವಿ ಡಾ.ಬಂಜಗೆರೆ ಜಯಪ್ರಕಾಶ್ ಅವರು ಭೌತವಾದಿ ಮೂಲದ ಸಂಸ್ಕೃತಿ ಚಿಂತಕರು. ಬರವಣಿಗೆಯನ್ನೇ ಬದಲಾವಣೆಯ ಹತಾರ ಎಂದು ಬಲವಾಗಿ ನಂಬಿ ಬರೆಯುತ್ತಿರುವ ಸಾಹಿತ್ಯ ಕೃಷಿಕ. ಇವರ ಕುರಿತು ಡಾ.ಗುರುಪ್ರಸಾದ ರಾವ್ ಹವಲ್ದಾರ್ ಅವರು ತಮ್ಮ ಅಭಿಪ್ರಾಯನ್ನು ತಪ್ಪದೆ ಮುಂದೆ ಓದಿ…

ಹಲವು ದಶಕಗಳಿಂದ ನಮ್ಮ ರಾಜ್ಯವನ್ನು ಕಾಡುತ್ತಿದ್ದ ನಕ್ಸಲಿಸಮ್ ನ್ನು , ಆ ಹಾದಿ ತುಳಿದಂತಹ ಯುವ ಸಮೂಹವನ್ನು ಮುಖ್ಯ ವಾಹಿನಿಗೆ ತರುವಲ್ಲಿ ತೆರೆಹಿಂದೆ ನಿಂತು  ಕಾರ್ಯ ನಿರ್ವಹಿಸಿದವರು.

ಕೇವಲ ಸಾಹಿತಿಯಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗದೆ ಜನಪರ ಹೋರಾಟದಲ್ಲಿ ಹಲವಾರು ದಶಕಗಳ ಕಾಲ ತೊಡಗಿ ತಮ್ಮ ಜನಪರ ನಿಲುವುಗಳಿಗೆ ಸದಾ ಬದ್ಧರಾದವರು.
ಅಲ್ಲದೇ ಕರ್ನಾಟಕ, ಕನ್ನಡದ ಅತ್ಮಗೌರವದ ಪರಂಪರೆಯ ಚಿರಗೊಳಿಸಲು ನಾಡಿನ ಯುವ ಸಮೂಹದೊಂದಿಗೆ ಹೊಸ ಸಂವಾದಗಳನ್ನು ಮುಂದುವರೆಸುತ್ತಿರುವ ನಾಡಿನ ಮುಖ್ಯ ಸಾಕ್ಷಿಪ್ರಜ್ಞೆ. ಪ್ರಖರ ಸಾಮಾಜಿಕ ಬದ್ಧತೆಯೊಂದಿಗೆ ಸೂಕ್ಷ್ಮ ಸಾಂಸ್ಕೃತಿಕ ಎಚ್ಚರವನ್ನು ಮೈಗೂಡಿಸಿಕೊಂಡು, ಜಾಡು ಮರೆತ ಚರಿತ್ರೆಯ ಅಜ್ಞಾತ ಪುಟಗಳನ್ನು ಹೆಕ್ಕಿ ವರ್ತಮಾನದೊಂದಿಗೆ ಅರ್ಥವತ್ತಾಗಿ ಅನುಸಂಧಾನಿಸುತ್ತಿರುವ ಸತ್ಯಗ್ರಾಹಿ . ಕನ್ನಡದ ಓದಿಗೆ ಮತ್ತು ಅಗತ್ಯ ಅರಿವಿಗೆ ಅಮೂಲ್ಯ ಅನುವಾದಗಳನ್ನು ನೀಡುತ್ತಿರುವ ಅಕ್ಷರ ಸಂತ. ನೀರೇ ಹತ್ತಿ ಉರಿವ ಬಡಬಾನಲದಂತೆ ಕಾಡುವ ಮುಖ್ಯ ಕವಿ.

1965ರ ಜೂನ್ 17ರಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಬಂಜಗೆರೆಯಲ್ಲಿ ಬುಡಕಟ್ಟು ಗೊಲ್ಲ ಸಮುದಾಯದ ರೈತಾಪಿ ಕುಟುಂಬದಲ್ಲಿ  ಜನಿಸಿದ ಜಯಪ್ರಕಾಶ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಎಂ ಎಸ್ ಡಬ್ಲ್ಯು ಹಾಗೂ ಪತ್ರಿಕೋದ್ಯಮ ಪದವಿ ಪಡೆದರು. ಕನ್ನಡ ವಿಶ್ವವಿದ್ಯಾಲಯದಿಂದ ‘ಕನ್ನಡ ರಾಷ್ಟ್ರೀಯತೆ’ ಕುರಿತ ಸಂಪ್ರಬಂಧಕ್ಕೆ ಡಾಕ್ಟರ್ ಆಫ್ ಲಿಟರೇಚರ್  ಪಡೆದವರು.

 

ಪ್ರಜಾಪ್ರಭುತ್ವದ ಲೋಪಗಳಿಂದ ಭ್ರಮನಿರಸನ ಹೊಂದಿ ಹಿಂಸೆಯಿಂದ ಸಮಾಜವನ್ನು ತಿದ್ದಬಹುದೆಂಬ ಸಿದ್ಧಾಂತವನ್ನು ನಂಬಿ ಕಳೆದ 30ವರ್ಷಗಳಿಂದ  ನಕ್ಸಲ್‌ ಚಳವಳಿಗೆ ನುಗ್ಗಿದ್ದ ಕೆಳಸ್ತರದ ಯುವಕ, ಯುವತಿಯರು ಈಗ ಮತ್ತೆ ಪ್ರಜಾಪ್ರಭುತ್ವವನ್ನೇ ನೆಚ್ಚಿಕೊಂಡು ಮುಖ್ಯವಾಹಿನಿಗೆ ಮರಳುವಂತೆ ಮಾಡುವಲ್ಲಿ  ಬಂಜಗೆರೆಯವರ ಪಾತ್ರ ಬಹುದೊಡ್ಡದು.
ನಿಮ್ಮ ಹೋರಾಟದ ಹಾದಿಯನ್ನು ಬದಲಾಯಿಸಿ ಮುಖ್ಯವಾಹಿನಿಗೆ ಬರುವುದು ಸೂಕ್ತ.

ಹಿಂಸಾಚಾರವನ್ನು ಒಂದು ಮಾರ್ಗವನ್ನಾಗಿ ಮಾಡಿಕೊಂಡು ಹಿಂದೆ ಹೋರಾಟಗಳು ನಡೆದಿವೆ. ಇನ್ನೂ ಕೆಲವು ಕಡೆ ನಡೆಯುತ್ತಿದೆ. ಒಟ್ಟಾರೆ ಅವುಗಳ ಫಲಿತಾಂಶ ಏನು ಎಂದು ನೋಡಿದರೆ, ಅಸಂಖ್ಯಾತ ಯುವಕರು, ಅದರಲ್ಲೂ ಆದಿವಾಸಿಗಳು, ದಲಿತರು, ಹಿಂದುಳಿದ ಜಾತಿಯವರು ಅತ್ಯಂತ ಪ್ರತಿಭಾಶಾಲಿಗಳು    ಪ್ರಾಣತ್ಯಾಗಕ್ಕೆ ಕಾರಣವಾಗಿದೆ.
ನಕ್ಸಲರು ಮುಖ್ಯವಾಹಿನಿಗೆ ಬರುವ ಹಾದಿಯನ್ನು ಸುಗಮಗೊಳಿಸಲು ಜೆಪಿ ಮತ್ತು ಸಂಗಡಿಗರಿರುವ ಸಮಿತಿಯನ್ನು ಸರ್ಕಾರ ರಚಿಸಿತು.

ಸಮಾಜದ ಮುಖ್ಯವಾಹಿನಿಯಲ್ಲಿ ಸರಿಯಾದ ಕಾರಣಗಳಿಗೆ, ಸುಗಮ ಹೋರಾಟ ಮುಂದುವರೆಸಲು ಯಾವುದೇ ಅಡ್ಡಿ ಇರುವುದಿಲ್ಲ. ಇದರಿಂದ ಅವರು ನಂಬಿರುವ ಹಿಂಸಾ ಮಾರ್ಗ ಬಿಟ್ಟು ಪ್ರಜಾತಾಂತ್ರಿಕ ವಿಧಾನದಲ್ಲಿ ಹೋರಾಟ ಮಾಡಬಹುದು ಅಂತ  ನಕ್ಸಲ್ ರಿಗೆ ಮನದಟ್ಟು ಮಾಡಿಸುವಲ್ಲಿ ಯಶಸ್ವಿಯಾದರು. ಕೆಲವು ಪ್ರಗತಿಪರು, ಹೋರಾಟಗಾರರು
ನಕ್ಸಲಿಸಮ್ ತೊರೆದು ಶರಣಾಗುವ ಸಮಯದಲ್ಲಿ ಮಾಧ್ಯಮಗಳೊಂದಿಗೆ  ಪ್ರಚಾರಪ್ರಿಯತೆಗಾಗಿ ಹಾತೊರೆಯುತ್ತಾ ಇದನ್ನೆಲ್ಲಾ ನಾವೇ ಮಾಡಿದ್ದು  ಎಂದು ಪಬ್ಲಿಸಿಟಿ ಪಡೆಯುತ್ತಿದ್ದರೆ, ದೂರದಲ್ಲಿ ನಿಂತು ತಮ್ಮ ಪಾಡಿಗೆ ತಾವು ಉನ್ನತ ಅಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ಈ ವಿಚಾರದಲ್ಲಿ ಕೆಲವು ಪ್ರಗತಿಪರ ಬುದ್ಧಿಜೀವಿಗಳ ಅತಿರೇಕದ ಪ್ರಚಾರಪ್ರಿಯತೆಯನ್ನು ವಿರೋಧಿಸಿ ಮೌನವಾಗಿ ಪ್ರತಿಭಟಿಸಿದರು.

ಪ್ರಸ್ತುತ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ನೆಲೆಸಿರುವ ಬಂಜಗೆರೆಯವರು ಜನಪರ ಹೋರಾಟದಲ್ಲಿ ನಿರಂತರವಾಗಿ ತೊಡಗಿದರೂ ಸಾಹಿತ್ಯ ಅನುವಾದಿತ ಕೃತಿಗಳ ರಚನೆಯನ್ನು ಬಿಡಲಿಲ್ಲ.

ನಾಲ್ಕು ಕವನ ಸಂಕಲನಗಳು, ನಾಲ್ಕು ಲೇಖನ ಸಂಗ್ರಹಗಳು, ಮೂರು ಸಂಶೋಧನಾ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ವಸಂತ ಮೇಘ ಘರ್ಜನೆ, ಖಲೀಲ್ ಗಿಬ್ರಾನನ ಪ್ರವಾದಿ, ಅಲೆಕ್ಸ್ ಹೆಲಿಯ ‘ತಲೆಮಾರು’, ಮೊಕಾಶಿಯವರ ಆಂಗ್ಲ ಕೃತಿಯ ಅನುವಾದ ‘ಮಧ್ಯಯುಗೀನ ಭಾರತ-ಅಂತ್ಯಜರ ತತ್ವ ಚಿಂತನೆ’, ಗೇಲ್ ಓಮ್ವೆಟ್ಟರ ‘ಬೇಗಂಪುರ’, ವೆಂಡಿ ಡೊನಿಗರ್ ಅವರ ‘ಹಿಂದೂಗಳು- ಬೇರೊಂದು ಚರಿತ್ರೆ’ಯಂತಹ ಅನುವಾದಗಳು ಬಂಜಗೆರೆ ನಮ್ಮ ಸಂದರ್ಭದ ಸಮರ್ಥ ಅನುವಾದಕರೆಂಬ ಹೆಮ್ಮೆಗೆ ಕಾರಣವಾಗಿದೆ.ಈವರೆಗೆ ಬಂಜಗೆರೆಯವರು ೩೦ ಕೃತಿಗಳನ್ನು ಪ್ರಕಟಿಸಿದ್ದಾರೆ.

ಅನುವಾದಿತ ಕೃತಿ ‘ಪಾಪ ನಿವೇದನೆ’ಗೆ ಸಾಹಿತ್ಯ ಅಕಾಡೆಮಿಯ ೨೦೦೮ ರ ಪುಸ್ತಕ ಬಹುಮಾನವನ್ನು ಪಡೆದ ಜೇಪಿ, ಅಕಾಡೆಮಿ ಸದಸ್ಯರಾಗಿದ್ದರಲ್ಲದೆ, ಕನ್ನಡ ವಿಶ್ವವಿದ್ಯಾಲಯದ ದೇಸಿ ಸಂಸ್ಕೃತಿ ಅಧ್ಯಯನ ಮಂಡಲಿಯ ಸದಸ್ಯರೂ ಆಗಿದ್ದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆದಿಮ ಬುಡಕಟ್ಟು ಸಮುದಾಯಗಳ ಅಧ್ಯಯನ ಯೋಜನೆಯ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದವರು. ವಿಮರ್ಶಕ ಹಾಗೂ ಅಂಕಣಕಾರರಾಗಿಯೂ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿರುವ ಬಂಜಗೆರೆ ಅವರ ‘ಆನುದೇವ ಹೊರಗಣವನು’ ಎಂಬ ಕೃತಿ ಜಾತಿನಿಷ್ಟ ಸಮಾಜದಲ್ಲಿ ವಿವಾದದ ಬಿರುಗಾಳಿಯೆಬ್ಬಿಸಿ ಸರ್ಕಾರದಿಂದ ಮುಟ್ಟುಗೋಲು ಕ್ರಮಕ್ಕೆ ಒಳಗಾಯಿತು.

ಸಾಹಿತ್ಯ ವಿಮರ್ಶೆಗಾಗಿ ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ವಿಶ್ವಸ್ಥ ಮಂಡಲಿ ಪ್ರಶಸ್ತಿ, ಸಂಸ್ಕೃತಿ ಚಿಂತನೆಗಾಗಿ ಕೀರಂ ಪ್ರಶಸ್ತಿ ಪುರಸ್ಕೃತರಾಗಿರುವ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ೨೦೨೨ ರ ಸಾಲಿನ ‘ಸಾಹಿತ್ಯ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ೨೦೧೪ ರಿಂದ ೨೦೧೭ ಕಾರ್ಯನಿರ್ವಹಿಸಿ ವಿದ್ಯಾರ್ಥಿ ಯುವ ಜನರನ್ನು  ಸಾಹಿತ್ಯ ಚಟುವಟಿಕೆಗಳಲ್ಲಿ ವ್ಯಾಪಕವಾಗಿ ಒಳಗೊಳಿಸಿದರು. ಆ ಮೂಲಕ ಪುಸ್ತಕ ಪ್ರಾಧಿಕಾರದ  ಕಾರ್ಯಕ್ಷೇತ್ರಕ್ಕೆ ಹೊಸ ಆಯಾಮವನ್ನು ಮೂಡಿಸಿದರು.

ಸಾಮಾಜಿಕ ನ್ಯಾಯ ಹಾಗೂ ಸಾಂಸ್ಕೃತಿಕ ಬಹುಳತೆಗಳ ಹೋರಾಟಗಳ ಹಿಂದಿನ ನೈತಿಕ ಶಕ್ತಿ ಯಾಗಿರುವ ಇವರು ‘ಸಮುದಾಯ’ ಸಾಂಸ್ಕೃತಿಕ ಚಳವಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಡ ಚಿಂತನೆಗಳ ತಾತ್ವಿಕ ಶಿಬಿರಗಳಲ್ಲಿ ತಮ್ಮ ಬದುಕಿನ ವಸಂತಕಾಲವನ್ನಿಡೀ  ನೀಸಿದರೂ ಗುಣಕ್ಕನುಗುಣವಾದ ಮೌನಿ. ಒಂದು ಹಂತದ ನಂತರ ಎಲ್ಲಾ ಹೋರಾಟಗಾರರಂತೆ ‘ಮುಂದೇನು’ ಎಂಬ ವಿಹ್ವಲತೆಯ ಶೂನ್ಯದೊಂದಿಗೆ ಶೂನ್ಯರಾಗಿಯೇ ಮುಖಾಮುಖಿಯಾದವರು. ಸ್ಥಾವರ ಧ್ಯಾನದ ವ್ಯವಸ್ಥೆ ಮತ್ತು ಚಲನಶೀಲಾತ್ಮಕ ಮಾನವೀಯ ಮೌಲ್ಯಗಳ ಆಯ್ಕೆಯ ಆಹ್ವಾನದಲ್ಲಿ ಮೌಲ್ಯಗಳೊಂದಿಗೇ ಬದುಕಿ ಬಿಡುವ ಹಠತೊಟ್ಟು ಪುಟವಿಟ್ಟಂತೆ ಎದ್ದು ಬಂದವರು. ಶೂನ್ಯದಲ್ಲೇ ಅರ್ಥಪೂರ್ಣ ಬದುಕನ್ನು ಕಡೆದುಕೊಂಡವರು, ಅವರ ಎಡ ಚಿಂತನೆಗಳ ಚಿಂತನೆಗಳ ಹಿನ್ನೆಲೆ ಅರಿತವರು ಸೋಜಿಗಪಡುವಂತೆ ಸಮಚಿತ್ತದ ಮೃದು ಮಾತುಗಾರ . ಇಂದಿಗೂ ಬಸ್ತರ್ ಕಾಡಿನ ‘ಮಹೂವಾ’ ಹೂವಿನಂತೆ ಸಾಂಸ್ಕೃತಿಕ ಎಚ್ಚರದ ಮಥನದಲ್ಲಿ  ತಾತ್ವಿಕ ಲೋಕವೊಂದನ್ನು ಸೃಷ್ಟಿಸಿ ಆ ಮೂಲಕವೇ ಕನ್ನಡ ಮನಸ್ಸುಗಳ ಸಂವಾದದ ತಾಕತ್ತನ್ನು ವಿಸ್ತರಿಸುತ್ತಿರುವವರು.  ವಿವಾದಗಳಿಗೆ ಸಮತೂಕದ ವಿವರಣೆ ನೀಡಿ ಸದ್ದಿಲ್ಲದಂತೆ ಜನಾನುರಾಗಿಯಾಗಿರುವ ನಿಶಿತಮತಿ, ಆ ಕಾರಣದಿಂದಲೇ ‘ಚಳವಳಿಗಳ ಸಂಗಾತಿ’ ಎಂಬ ಸಹಜ ಅಭಿದಾನದಿಂದ ನಾಡಿನ ಸಾಂಸ್ಕೃತಿಕ ಹಾಗೂ ಜನಪರ ಹೋರಾಟಗಳ ವಲಯದಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿರುವವರು.

ಸದಾ ಹರಿಯುವ ನೀರಿನ ತೊರೆಯಂತೆ ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ, ಸಾರ್ಥಕ  ಸಾಹಿತ್ಯಿಕ ಸಾಮಾಜಿಕ ಜೀವನ ನಡೆಸುತ್ತಾ ಇರುವ ಬಂಜಗೆರೆ ಯವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೊಡುಗೆ ಯ ಕುರಿತು   ಪದ ಬೆಂಗಳೂರು ಸಂಸ್ಥೆಯವರು,  ಫೆಬ್ರವರಿ ೧೧, ೨೦೨೫ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಇಡೀ ದಿನದ ವಿಚಾರ ಸಂಕಿರಣ ಏರ್ಪಡಿಸಿ ಗೌರವಿಸುತ್ತಿದ್ದಾರೆ.

ಜೀವನೋತ್ಸಾಹದೊಂದಿಗೆ ಅನುಕ್ಷಣ ಹೋರಾಟದ ಹಾದಿಗೆ ಹೆಜ್ಜೆ ಹರಿಸುತ್ತಿರುವ ಪ್ರೀತಿಯ ಮೇಷ್ಟ್ರು ಜೆಪಿ  ಯವರಿಗೆ ನಲ್ಮೆಯ ಅಭಿನಂದನೆಗಳು.


  • ಡಾ.ಗುರುಪ್ರಸಾದ ರಾವ್ ಹವಲ್ದಾರ್ – ಲೇಖಕರು ಮತ್ತು ಉಪನ್ಯಾಸಕರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW