ಆಧುನಿಕ ವ್ಯಾಕ್ಸಿಂಗ್ ಕಿಟ್ ಗಳಿರದ ಆ ದಿನಗಳಲ್ಲಿ ಸಕ್ಕರೆಯನ್ನು ಬಳಸಿ ವ್ಯಾಕ್ಸಿಂಗ್ ಮಾಡುವ ಯೋಜನೆಯನ್ನು ಗೆಳತಿಯರು ರೂಪಿಸಿದ್ದರು. ಕಿಚನ್ ನಿಂದ ಸಕ್ಕರೆಯನ್ನು ತಂದು ಬಿಸಿ ಮಾಡಿ ಪಾಕವಾಗಿಸಿ ಶುಗರ್ ಕೋಟೆಡ್ ನುಡಿಗಳೊಂದಿಗೆ ಅದನ್ನು ನನ್ನ ಮೊಳಕೈಗೆ ತೀಡಿದರು. ಮುಂದೇನಾಯಿತು ಸುಮಾ ರಮೇಶ್ ಅವರ ಈ ಅನುಭವ ಕಥನವನ್ನು ತಪ್ಪದೆ ಮುಂದೆ ಓದಿ…
‘ ಮೇಡಂ ವ್ಯಾಕ್ಸಿಂಗ್ ಮಾಡ್ಸಲ್ವಾ….? ‘ ಸಾಮಾನ್ಯವಾಗಿ ನಾನು ಯಾವುದೇ ಬ್ಯೂಟಿ ಪಾರ್ಲರ್ ಗೆ ಹೋದರೂ ಎದುರಾಗುವ ಪ್ರಶ್ನೆಯಿದು. ಮ್ಯಾನ್ಯುಫ್ಯಾಕ್ಚರಿಂಗ್ ಡಿಫೆಕ್ಟ್ ಯಾನೆ ಉತ್ಪಾದನಾ ದೋಷದಿಂದ ಅತೀ ಸೂಕ್ಷ್ಮ ತ್ವಚೆಯನ್ನು ಹೊಂದಿದ ನನಗೆ ತಿಂಗಳಿಗೊಮ್ಮೆ ಐಬ್ರೋ ಥ್ರೆಡ್ಡಿಗೆ ಹಣೆಯನ್ನು ಒಡ್ಡಿಕೊಂಡ ನಂತರ ತುರ್ತಾಗಿ ಕ್ರೀಂ ಸವರಿ ಐಸ್ ಇರಿಸಿದರೂ ಹುಬ್ಬುಗಳು ನೈಸ್ ಆಗಿ ಊದಿ ರೆಡ್ಡಿಶ್ ಆಗಿ ಸಾಮಾನ್ಯ ಸ್ಥಿತಿಗೆ ಬರಲು ಮೂರು ದಿನಗಳಾಗುತ್ತವೆ. ಆ ಸಮಯ ನನ್ನ ಚೈನಾ ಚಹರೆಯನ್ನು ಕಟಕಿಗಳ ಕಣ್ ದೃಷ್ಟಿಯಿಂದ ಕಾಪಾಡಲು ಹರಸಾಹಸ ಪಡಬೇಕು. ಹಾಗಾಗಿ ಕೈಗಳಿಗೆ ಮೇಣ ಮೆತ್ತಿಸಿಕೊಂಡು ರೋಮರಹಿತಳಾಗುವ ಹುಕಿಯಲ್ಲಿ ರೆಡ್ ಹ್ಯಾಂಡಿಯನ್ ಆಗಿ ನರಳುವುದು ಬೇಡವೆಂದು ಕೇವಲ ಹುಬ್ಬುಗಳಿಗಷ್ಟೇ ಅವರ ಸೇವೆಯನ್ನು ಸೀಮಿತಗೊಳಿಸುವೆ.
ಇಂದು ರಸ್ತೆಗೊಂದರಂತೆ ತಲೆಯೆತ್ತಿರುವ ರೂಪಾಲಯಗಳಲ್ಲಿ ರೂಪಾಯಿಗಳನ್ನು ಧಾರಾಳವಾಗಿ ಸುರಿದರೆ ಅಡಿಯಿಂದ ಮುಡಿಯವರೆಗೆ ಎಲ್ಲಾ ಸೇವೆಗಳೂ ದೊರಕುತ್ತವೆ. ಅಡ್ಡಾದಿಡ್ಡಿಯಾಗಿ ಬೆಳೆದ ಹುಬ್ಬುಗಳನ್ನು ಕವಿ ಕಲ್ಪನೆಯ ಕಾಮನಬಿಲ್ಲಾಗಿಸೋಣವೆಂದು ಹೊರಟರೆ ಅಲ್ಲಿ ಹೆವಿ ‘ ಬಿಲ್ ‘ ಮಾಡುವ ಯೋಜನೆಯಿಂದ ರೆಸ್ಟೋರೆಂಟ್ ನಲ್ಲಿ ನೀಡುವಂತೆ ಮೆನು ಕಾರ್ಡ್ ನೀಡುವರು. ಅದರಲ್ಲಿ ಅವರು ಸಲ್ಲಿಸುವ ಸೇ(ಶೇ)ವೆಯೊಂದಿಗೆ ಅದಕ್ಕೆ ತಗಲುವ ವೆಚ್ಚದ ಬಗ್ಗೆಯೂ ಮಾಹಿತಿ ಇರುವುದು. ಹಲವು ಸೇವೆಗಳು ಒಂದಕ್ಕೊಂದು ಹೆಣೆದುಕೊಂಡು ಜಂಟಿಯಾದಾಗ ಆ ಕಾಂಬೋ ಆಫರ್ ನಿಂದ ದೊರಕುವ ಭಾರೀ ಕಡಿತದ (ಡಿಸ್ಕೌಂಟ್) ಬಗ್ಗೆ ಮಾಹಿತಿ ಇರುವುದು. ಆಫರ್ ಆಸೆಗೆ ಬಲಿಯಾಗಿ ಭಾರೀ ಕಡಿತ ಅನುಭವಿಸಿದವರೂ ಇಲ್ಲದಿಲ್ಲ.

ಕಾಲೇಜು ದಿನಗಳಲ್ಲಿ ಒಮ್ಮೆ ಹಾಸ್ಟೆಲ್ ಗೆಳತಿಯರ ಮರ್ಜಿಗೆ ಮಣಿದು ಅವರ ಪ್ರಯೋಗಕ್ಕೆ ನನ್ನ ಚರ್ಮವನ್ನು ಒಡ್ಡಿಕೊಂಡದ್ದು ಒಂದು ದೊಡ್ಡ ಎಪಿಕ್ ! ಕಾಲೇಜ್ ಡೇ ಸಮಾರಂಭಕ್ಕಾಗಿ ಹೇರ್ ಕಲರ್ ಹಾಗೂ ವ್ಯಾಕ್ಸಿಂಗ್ ಮಾಡಿಸಲು ಪಾರ್ಲರ್ ಗೆ ದುಬಾರಿ ಹಣ ತೆರುವ ಬದಲು ನಾವೇ ಪರಸ್ಪರ ಕೌಶಲ ಪ್ರದರ್ಶಿಸುವ ಸಾಹಸಕ್ಕಿಳಿದಿದ್ದೆವು. ಯಾವುದೇ ಪರಿಣತಿ ಇಲ್ಲದ ಸ್ವಯಂ ಭೂ ಗೆಳತಿಯರು ‘ ಡೂ ಆರ್ ಡೈ ‘ ಎನ್ನುತ್ತಾ ಡೈಗಾಗಿ ಡೈಸಿಯನ್ನೂ ವ್ಯಾಕ್ಸಿಂಗ್ ಗಾಗಿ ನನ್ನನ್ನೂ ತಮ್ಮ ಅಖಾಡದ ಮೊದಲ ಬಲಿಪಶುಗಳಾಗಿ ಆಯ್ಕೆ ಮಾಡಿದರು.
ಸಿಂಗಾಪುರದ ಮೇಣದ ಸುಂದರಿಯರ ಪ್ರತಿಕೃತಿಯನ್ನು ಸ್ಮರಿಸುತ್ತಾ ನಾನೂ ಪ್ರತಿನುಡಿಯದೆ ಅವರ ಮುಂದೆ ಕೈಯೊಡ್ಡಿ ಕುಳಿತೆ. ಆಧುನಿಕ ವ್ಯಾಕ್ಸಿಂಗ್ ಕಿಟ್ ಗಳಿರದ ಆ ದಿನಗಳಲ್ಲಿ ಸಕ್ಕರೆಯನ್ನು ಬಳಸಿ ವ್ಯಾಕ್ಸಿಂಗ್ ಮಾಡುವ ಯೋಜನೆ ರೂಪಿಸಲಾಯಿತು. ಅರೆಬರೆ ಜ್ಞಾನ ಹೊಂದಿದ್ದ ಸರ್ವ ಸದಸ್ಯರ ಟೀಮ್ ‘ ಕಲಿತುದೆಲ್ಲವ ಬಿಟ್ಟು ಕಲಿಯದುದರೆಡೆಗೆ ತುಡಿವುದೆ ಜೀವನ ‘ ಎನ್ನುತ್ತಾ ಹಾಸ್ಟೆಲ್ ಕಿಚನ್ ನಿಂದ ಸಕ್ಕರೆಯನ್ನು ತಂದು ಬಿಸಿ ಮಾಡಿ ಪಾಕವಾಗಿಸಿ ಶುಗರ್ ಕೋಟೆಡ್ ನುಡಿಗಳೊಂದಿಗೆ ಅದನ್ನು ನನ್ನ ಮೊಳಕೈಗೆ ತೀಡಿದರು. ಹರಿದು ದಾರಮಯವಾಗಿದ್ದ ಜೀನ್ಸ್ ಬಟ್ಟೆಯ ತುಂಡೊಂದನ್ನು ಅದರ ಮೇಲಿರಿಸಿ ಚರ್ರನೆ ಎಳೆದೊಡನೆ ನಾನು ಚಿಟ್ಟನೆ ಚೀರಿ ಸ್ಪ್ರಿಂಗ್ ನಂತೆ ಮೇಲೆಗರಿದೆ. ನನ್ನ ಕೂಗು ಸೀಲಿಂಗ್ ಲಿಮಿಟ್ ದಾಟಿ ಸೀನಿಯರ್ಸ್ ರೂಮುಗಳ ತಲುಪಿ ರೋಮಾಂಚಿತರಾದವರೆಲ್ಲಾ ನಮ್ಮ ರೂಮಿಗೆ ಧಾವಿಸಿದರು. ‘ ಸ್ಟ್ರಿಂಗ್ ಆಪರೇಷನ್ ‘ ನಿಂದ ರೋಮಗಳೊಂದಿಗೆ ಚರ್ಮದ ತೆಳುಪದರವೂ ಹೊರಬಂದು ಮೊಳಕೈ ನೋವಿನಿಂದ ದ್ರವಿಸತೊಡಗಿತು. ಕಂಗೆಟ್ಟ ಗೆಳತಿಯರು ಘಾಸಿಕೊಂಡ ಜಾಗಕ್ಕೆ ಮೆತ್ತಗಿನ ಹತ್ತಿಯಿರಿಸಿ ಸಾರಿಗಳ ಮಹಾಪೂರದೊಂದಿಗೆ ವಾರ್ಡನ್ ಗೆ ಆ ವಿಷಯ ತಿಳಿಸದಿರೆಂದು ದಮ್ಮಯ್ಯ ಗುಡ್ಡೆ ಹಾಕಿದರು. ಕೊನೆಗೂ ಗೌಪ್ಯತೆ ಕಾಪಾಡಿಕೊಂಡೆವಾದರೂ ಗಾಯ ಮಾಯಲು ಮೂರು ತಿಂಗಳು ಹಿಡಿಯಿತು. ನುಣುಪಾದ ತೋಳುಗಳೊಂದಿಗೆ ಸ್ಲೀವ್ಲೆಸ್ ಧರಿಸುವ ಕನಸು ಕರಗಿ ಕಾಲೇಜ್ ಡೇಗೆ ಫುಲ್ ಆರ್ಮ್ ವಸ್ತ್ರ ಧರಿಸುವಂತಾಯಿತು. ದಶಕಗಳುರುಳಿದರೂ ಇಂದಿಗೂ ಲೈಟ್ ಆಗಿ ಉಳಿದಿರುವ ಆ ಕಲೆ ಪಾರ್ಲರಿಗೆ ಹೋದಾಗ ಸಹ ಗ್ರಾಹಕರ ನುಣುಪಿನ ತ್ವಚೆಗೆ ಮರುಳಾಗದಂತೆ ಎಚ್ಚರಿಕೆ ಗಂಟೆ ಬಾರಿಸುವುದು. ರೆಸ್ಟೋರೆಂಟಿನ ಅಲಂಕಾರಿಕ ವ್ಯಾಕ್ಸ್ ತಿನಿಸುಗಳೆಡೆಗೆ ಆಸೆಗಣ್ಣು ಬೀರುತ್ತಾ ಉಗುಳು ನುಂಗುವ ಕೂಸುಗಳಂತೆಯೇ ನನ್ನ ರೋಮಾವೃತ ಕೈಗಳ ಸವರಿಕೊಳ್ಳುತ್ತಾ ನಿಟ್ಟುಸಿರಾಗುವೆ.
ಇತ್ತೀಚೆಗೆ ಮನೆಯ ಎದುರು ರಸ್ತೆಯಲ್ಲೇ ಒಂದು ಹೈಟೆಕ್ ಪಾರ್ಲರ್ ತಲೆ ಎತ್ತಿರುವುದನ್ನು ಕಂಡಾಗ ಸಂತಸವಾಯಿತು. ಇದುವರೆಗೂ ದೂರದ ಪಾರ್ಲರಿನಲ್ಲಿ ಬುರುಡೆಗೆ ಬಣ್ಣ ಬಳಿಸಿಕೊಂಡು ಅದೇ ಸ್ಥಿತಿಯಲ್ಲೇ ರಸ್ತೆಯಲ್ಲಿ ಸಾಗುವುದು ಅಭ್ಯಾಸವಾದರೂ ಪರಿಚಿತರು ಎದುರಾದಾಗ ಅಭಾಸವಾಗುತ್ತಿತ್ತು. ಈಗ ಅನುಕೂಲವಾಯಿತೆಂದು ಹೊಸ ಹುರುಪಿನಿಂದ ಪಾರ್ಲರ್ ಗೆ ಅಡಿಯಿರಿಸಿದೆ. ಒಳಾಂಗಣದಲ್ಲಿ ಜಗಮಗಿಸುವ ಬೆಳಕಿನ ವೈಭವ, ಎಲ್ಲಾ ಡೈಮೆನ್ಶನ್ ಗಳಿಂದಲೂ ನಮ್ಮ ರೂಪವನ್ನು ಬಿಂಬಿಸುವ ಆಳೆತ್ತರದ ದರ್ಪಣಗಳು, ಅಲ್ಲಲ್ಲಿ ಮಲಗಿ, ಒರಗಿ, ಕೈಕಾಲು ಚಾಚಿ ಕುಳಿತ ರಂಭೆ, ಊರ್ವಶಿ, ಮೇನಕೆಯರ ದಂಡು ಎಲ್ಲವೂ ಇಂದ್ರಪ್ರಸ್ಥದ ಭ್ರಮೆ ಮೂಡಿಸಿದವು. ತಮ್ಮ ಚಹರೆಯನ್ನು ತಿದ್ದಿ, ತೀಡಿಸಿಕೊಂಡ ಚೆಲುವೆಯರು, ಆಗಷ್ಟೇ ಒಳಗಡಿಯಿರಿಸುತ್ತಿದ್ದ would be ಸುಂದರಿಯರ ನಡುವೆ ತಡವರಿಸುತ್ತಿದ್ದ ನನ್ನನ್ನು ನಗೆ ಮೊಗದಿಂದ ಎದುರ್ಗೊಂಡವಳು ಬಾಲ್ಯದ ಗೆಳತಿ ಪದ್ಮಿನಿ ಎಂಬ ಅಚ್ಚರಿಯೊಂದಿಗೆ ಅವಳೇ ಅದರ ಪ್ರೊಪ್ರೈಟರ್ ಎಂದು ತಿಳಿದಾಗ ಮತ್ತಷ್ಟು ಖುಷಿಯಾಯಿತು. ಹಲೋ ಹಾಯ್ ಗಳ ವಿನಿಮಯದ ನಂತರ ನನ್ನನ್ನು ಆರಾಮಾಸನದಲ್ಲಿ ಕುಳ್ಳಿರಿಸಿದಳು. ಕೈಗೆ ಮೆನು ಕಾರ್ಡ್ ನೀಡದೆ ಅಡಿಯಿಂದ ಮುಡಿಯವರೆಗೂ ದಿಟ್ಟಿಸಿ ಯಾವೆಲ್ಲಾ ಸೇ(ಶೇ)ವೆಗಳಿಗೆ ಈ ದೇಹ ಒಡ್ಡಿಕೊಳ್ಳಬೇಕು ಎಂದು ಅವಳೇ ತೀರ್ಮಾನಿಸಿದಳು. ಅದರಲ್ಲಿ ವ್ಯಾಕ್ಸಿಂಗ್ ಕೂಡಾ ಇರುವುದನ್ನು ಕಂಡು ಬೆಚ್ಚಿದೆ. ವ್ಯಾಕ್ಸಿಂಗ್ ನೊಂದಿಗಿನ ನನ್ನ ಅಂದಕೈಯ(ಕಾಲ)ತ್ತಿನ ವಿಲಕ್ಷಣ ಅನುಭವವನ್ನು ಹೇಳಿದಾಗ ಜೋರಾಗಿ ನಕ್ಕಳು. ಈಗ ಕಾಲ ಬದಲಾಗಿ ಬಹಳ ಆಧುನಿಕ ವಿಧಾನಗಳಿದ್ದು ಅದಕ್ಕೆ ಅವಕಾಶವೇ ಇಲ್ಲವೆಂದು ತಿಳಿಸಿ ಆ ಸೇವೆಯನ್ನು ತಮ್ಮ ಸಹಾಯಕರಿಗೆ ವಹಿಸದೆ ತಾನೇ ಖುದ್ದಾಗಿ ಮಾಡಲು ಮುಂದಾದಳು. ಎಲ್ಲರಂತೆ ಕೋಮಲ ಕೈಕಾಲುಗಳನ್ನು ಹೊಂದುವ ಬಯಕೆ ಮತ್ತೊಮ್ಮೆ ಚಿಗುರೊಡೆಯಿತು.
ರೋಸ್ ಫ್ಲೇವರಿನ ಹರ್ಬಲ್ ಕೋಲ್ಡ್ ವ್ಯಾಕ್ಸ್ ಕಿಟ್ ಹೊರತೆಗೆದು ಆ ಉತ್ಪನ್ನದ ಬಗ್ಗೆ ತಾನು ಉತ್ಖನನ ಮಾಡಿದ ಮಾಹಿತಿಯನ್ನು ಅರುಹಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದಳು. ಸೂಕ್ಷ್ಮ ರೋಮಗಳನ್ನು ನಿವಾರಿಸಲು ರೋಸ್ ಅರೋಮದ ಕೋಲ್ಡ್ ವ್ಯಾಕ್ಸ್ ಹೆಚ್ಚು ಸೂಕ್ತವೆಂದಳು. ನಾನು ಬರಿದೇ ಗೋಣಾಡಿಸುತ್ತಾ ಮುಂದಿನ ಪ್ರಯೋಗಕ್ಕೆ ಕೈಯೊಡ್ಡಿ ಕುಳಿತಿದ್ದೆ. ತಣ್ಣಗಿನ ವ್ಯಾಕ್ಸ್ ತ್ವಚೆಯ ಮೇಲೆ ಹರಡಿದಾಗ ಹಿತವೆನಿಸಿತು. ಸುಂದರ ವ್ಯಾಕ್ಸ್ ಸ್ಟ್ರಿಪ್ ಅದರ ಮೇಲಿರಿಸಿದೊಡನೆ ಕಣ್ಮುಚ್ಚಿ ಮನೆದೇವರನ್ನು ಸ್ಮರಿಸಿದೆ. ಸ್ಟ್ರಿಪ್ ಮೇಲೆ ಬೆರಳಿರಿಸಿ ಕೂದಲಿನ ವಿರುದ್ದ ದಿಕ್ಕಿಗೆ ಚರ್ರನೆ ಎಳೆದಳು. ಚರ್ಮ ಚುರುಚುರು ಎಂದು ಪ್ರತಿಭಟಿಸಿದರೂ ರೋಮಗಳು ಸ್ಟ್ರಿಪ್ ಗೆ ಅಂಟಿಕೊಂಡು ಹೊರಬಂದವು. ಕಳೆ ಕಿತ್ತು ಹಸನಾದ ಇಳೆಯಂತಾದ ಚರ್ಮವನ್ನು ಬೆರಳಿನಿಂದ ಸವರಿದ ಪಮ್ಮಿ ‘ ನೋಡು ಸ್ಕಿನ್ ಎಷ್ಟು ಬ್ರೈಟ್ ಅಂಡ್ ಸಾಫ್ಟ್ ಆಗಿ ಕಾಣ್ತಾ ಇದೆ, ಹೀಗೆ ನನ್ನಂತಹ ಪ್ರೊಫೆಷನಲ್ಸ್ ಮಾಡಿದ್ರೆ ಏನೂ ಪ್ರಾಬ್ಲಂ ಆಗಲ್ಲ’ ಎಂಬ ಸ್ವಪ್ರಶಂಸೆಯೊಂದಿಗೆ ಪ್ರಯೋಗ ಮುಂದುವರಿಸಿದಳು. ರೋಮರಹಿತ ತ್ವಚೆಯನ್ನು ಕಂಡು ರೋಮಾಂಚಿತಳಾದೆ. ಮೈ ನವಿರೆದ್ದು ಗೂಸ್ ಬಂಪ್ಸ್ ಮೂಡಿದವು. ಎಡಗೈ ಸೇ(ಶೇ)ವೆ ಮುಗಿಸಿ ‘ ಸಬ್ ಟೀಕ್ ಹೈ ‘ ಎನ್ನುತ್ತಾ ಬಲಗೈಗೆ ಬರುವಷ್ಟರಲ್ಲಿ ಅಲ್ಲಲ್ಲಿ ಸಬ್ಬಕ್ಕಿಯಂಥ ಪುಟ್ಟ ಬೊಕ್ಕೆಗಳು ಮೂಡಿ ತುರಿಸತೊಡಗಿದವು. ಲಹರಿಯಲ್ಲಿ ಸ್ಟ್ರಿಪ್ ಹರಿಯುತ್ತಿದ್ದ ಗೆಳತಿ ಒಮ್ಮೆ ಎಡಕ್ಕೆ ತಿರುಗಿ ಸ್ತಬ್ಧಳಾದಳು. ಆಲೀಕಲ್ಲು ಮಳೆಯಾದಂತೆ ಚರ್ಮದ ಮೇಲೆಲ್ಲಾ ದದ್ದುಗಳೆದ್ದಿದ್ದವು. ಅದರ ಮೇಲೆ ಗಾಬರಿಯಿಂದ ಬೆರಳಾಡಿಸಿ ಮಂಕಾದಳು. ಇಂತಹ ಗೂಸ್ ಪಿಂಪಲ್ಸ್ ಅವಳ ಮಹಾಜ್ಞಾನದ, ಅನುಭವದ ಯಾವ ಪುಟದಲ್ಲೂ ಮೂಡಿರಲಿಲ್ಲ. ‘ ನನ್ನ ಇಪ್ಪತ್ತು ವರ್ಷಗಳ ಸರ್ವೀಸ್ ನಲ್ಲಿ ಇದೇ ಫಸ್ಟ್ ಕೇಸ್ ಹೀಗಾಗಿರೋದು. ನಿನ್ನದು ಹೈಪರ್ ಸೆನ್ಸಿಟಿವ್ ಸ್ಕಿನ್, ಐ ಆಮ್ ರಿಯಲಿ ಸಾರಿ ಡಿಯರ್ ….’ ಎನ್ನುತ್ತಾ ಕೆಲಸ ಸ್ಥಗಿತಗೊಳಿಸಿದಳು. ‘ ಆಪರೇಷನ್ ಸಕ್ಸಸ್ ಪೇಶೆಂಟ್ ಡೈಯ್ಡ್’ ಎಂಬಂತಾಯಿತು. ದದ್ದುಗಳಿಗೆ ಯಾವುದೋ ಲೋಶನ್ ಬಳಿದು ‘ ಇನ್ಮುಂದೆ ಯಾರೇ ಫೋರ್ಸ್ ಮಾಡಿದ್ರೂ ವ್ಯಾಕ್ಸಿಂಗ್ ಮಾಡುಸ್ಕೋಬೇಡ. ಸ್ಕಿನ್ ತುಂಬಾ ಡೆಲಿಕೇಟ್ ಇದೆ ಆದಷ್ಟು ಕವರ್ ಮಾಡ್ಕೊಂಡು ಟ್ಯಾನ್ ಆಗದಂತೆ ಕಾಪಾಡ್ಕೋ ‘ ಎಂದಳು. ಸೇಬಿಗೆ ವ್ಯಾಕ್ಸ್ ಬಳಿದು ಅದರ ಕಾಂತಿಯನ್ನು ಕಾಪಾಡಿದಂತೆಯೇ ನಾನು ಮಾಸ್ಕ್ ಮಾಡಿ ತ್ವಚೆಯನ್ನು ರಕ್ಷಿಸುವಂತಾಯಿತು. ತುರಿಕೆಯ ಕಿರಿಕಿರಿಯಿಂದ ಕಂಗಾಲಾಗಿದ್ದ ನನ್ನನ್ನು ಸಮಾಧಾನಿಸಿದ ಗೆಳತಿ ಅವಳ ಶ್ರಮಾದಾನಕ್ಕೆ ಹಣ ಪಡೆಯಲು ನಿರಾಕರಿಸಿದಳು. ಅದಾಗಲೇ ರೋಸ್ ಫ್ಲೇವರಿನ ವ್ಯಾಕ್ಸ್ ಬೊಕ್ಕೆ(ಕೆ)ಯನ್ನು ಪಡೆದು ಸಪ್ಪಗಾಗಿದ್ದ ಎಡಗೈಗೆ ಸಮಾಧಾನಿಸುತ್ತಾ ‘ ಸೌಂದರ್ಯ ಸಮರ… ಸೋತವನೆ ಅಮರ ‘ಎನ್ನುತ್ತಾ ಗೆಳತಿಯ ಶೇವಾಶ್ರಮದಿಂದ ನಿರ್ಗಮಿಸಿದೆ.
- ಸುಮಾ ರಮೇಶ್, ಹಾಸನ.
