‘ಹೊಸಪೇಟೆ ಟು ತುಮಕೂರು’ ಎಂಬ ವಿಚಿತ್ರ ನಾಮಧೇಯದೊಂದಿಗೆ ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣದ ಮುಖಾಂತರ ಹಲವಾರು ಕಾವ್ಯಸಕ್ತ ಅಭಿಮಾನಿಗಳ ಮನಸೂರೆಗೊಂಡಿರುವ ಭಾವುಕ ಸ್ನೇಹಜೀವಿ ಗುರು ರಾ. ಹಿರೇಮಠ ಅವರ ‘ಬೆಳದಿಂಗಳು – ಬದುಕಿನ ದಾರಿಯುದ್ದಕ್ಕೂ’ ಕೃತಿಯ ಕುರಿತು ಕವಿ ಜಬೀವುಲ್ಲಾ ಎಮ್. ಅಸದ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ: ಬೆಳದಿಂಗಳು – ಬದುಕಿನ ದಾರಿಯುದ್ದಕ್ಕೂ…(ಹನಿಗವಿತೆಗಳು-೨೦೧೮)
ಲೇಖಕರು : ಗುರು ರಾ. ಹಿರೇಮಠ
ಪ್ರಕಾಶಕರು: ವಿಶ್ವಖುಷಿ ಪ್ರಕಾಶನ, ಬಾಗಲಕೋಟೆ.
ಪುಟ: ೮೦
ಬೆಲೆ: ೧೨೦/-
“ಕಂಡವರಿಗೆ ಕಾಮನಬಿಲ್ಲು
ಕೇಳುಗರಿಗೆ ಕೊಳಲು
ನನ್ನ ಕಾವ್ಯ”
ಕವಿಯಾದವನು ಎಂದಿಗೂ ತನ್ನ ಕಾವ್ಯದ ಮೂಲಕವೇ ಪ್ರಕಟಗೊಳ್ಳಬೇಕು, ಪರಿಚಿತನಾಗಬೇಕು. ಅದೇ ಸರಿಯಾದ ಕ್ರಮವೂ ಹೌದು. ಹೀಗೆ ತಮ್ಮ ಅನನ್ಯ ಕಾವ್ಯಭಿವ್ಯಕ್ತಿಯ ಮೂಲಕ ಪರಿಚಿತರಾದ ಸಹೃದಯ ಕವಿಮಿತ್ರ ‘ಗುರು ರಾ. ಹಿರೇಮಠ’ ರವರು.

‘ಹೊಸಪೇಟೆ ಟು ತುಮಕೂರು’ ಎಂಬ ವಿಚಿತ್ರ ನಾಮಧೇಯದೊಂದಿಗೆ ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣದ ಮುಖಾಂತರ ಹಲವಾರು ಕಾವ್ಯಸಕ್ತ ಅಭಿಮಾನಿಗಳ ಮನಸೂರೆಗೊಂಡಿರುವ ಭಾವುಕ ಸ್ನೇಹಜೀವಿ ಗುರು ರವರು ಸತ್ವಪೂರ್ಣ ಕಾವ್ಯಕೃಷಿಯಲ್ಲಿ ತೊಡಗಿಸಿಕೊಳ್ಳುವುದರ ಮುಖಾಂತರ ಎಲೆಮರೆಯಕಾಯಿಯಂತೆಯೇ ಉಳಿದವರು. ಬಾಗಲಕೋಟೆಯ “ವಿಶ್ವ ಖುಷಿ ಪ್ರಕಾಶನ”ದ ಮೂಲಕ ೨೦೧೮ ರಲ್ಲಿ ಪ್ರಕಟಗೊಂಡ “ಬೆಳದಿಂಗಳು – ಬದುಕಿನ ದಾರಿಯುದ್ದಕ್ಕೂ…” ಎಂಬ ಚೊಚ್ಚಲ ಹನಿಗವಿತೆಗಳ ಸಂಕಲನಕ್ಕೆ ೨೦೨೧ ರ “ಮೇಘ ಮೈತ್ರಿ ಪ್ರಶಸ್ತಿ” ಗೆ ಆಯ್ಕೆಯಾಗಿರುವುದು ಗುರುರವರ ಒಳಗಿನ ಅಜ್ಞಾತ ಕವಿಗೆ ಸಂದ ಗೌರವವೇ ಸರಿ.
“ಸಾವಿನ ಮನೆಯಲಿ
ನಗುವವರ ನಡುವೆಯೂ
ಅಳುವ ಕಂದನ ದನಿ
ಮತ್ತಷ್ಟು ಅರ್ಥ ಕೊಟ್ಟಿತು”
ಬದುಕಿನ ಸಣ್ಣಸಣ್ಣ ಕ್ಷಣಗಳನ್ನು ಆದಮ್ಯವಾಗಿ ಬದುಕುವ ತುಡಿತವಿರುವ ಕವಿಯಾದ ಗುರು ರವರ ಹನಿಗವಿತೆಗಳು ಅವುಗಳ ಸ್ವರೂಪದಿಂದ ಕೇವಲ ಹೆಸರಿಗೆ ಮಾತ್ರ ಹನಿಗವಿತೆಗಳಾಗಿದ್ದು, ಅವುಗಳ ಒಡಲೊಳಗೆ ಇಡೀ ಕಡಲೇ ಕಾಣಸಿಗುತ್ತದೆ. ಭಾವದಲೆಗಳ ನಿನಾದ ಓದುಗನ ಮನದ ಕಿನಾರೆಗೆ ಆಪ್ತವಾಗಿ ತಾಕುತ್ತ…, ಕಿವಿಯ ಕಮಾನಿನಲ್ಲಿ ರಿಂಗಣಿಸುತ್ತಲೇ ಇರುತ್ತದೆ.
“ನನ್ನೊಳಗಿನ ಬೆಳಕನು
ನಿನಗೆ ಅರ್ಪಿಸಿ
ಮುನ್ನಡೆಯುತ್ತಿದ್ದೇನೆ
ನಿನ್ನ ಮೌನದೊಳಗಿರುವ
ಕಾಲ್ಗೆಜ್ಜೆ ಸದ್ದಿನಲ್ಲಿ
ಸತ್ಯ ಅರಿಯಲು”
ಕವಿಯಾದವನು ತಾನು ಹೇಳಬಯಸಿದ್ದನ್ನು ಹೇಗೆ ಬೇಕಾದರೂ, ಎಷ್ಟು ಸಾಲುಗಳಲ್ಲಾದರೂ ಪ್ರಸ್ತುತಪಡಿಸಬಹುದು. ಅದು ಕವಿಯ ಸ್ವಾತಂತ್ರ್ಯ. ಆದರೆ ಸಮಷ್ಟಿಯನ್ನು ಅಣುವಲ್ಲಿ ಕಾಣಿಸುವುದಿದೆಯಲ್ಲ, ಅದು ಎಲ್ಲರಿಂದಲೂ ಸಾಧ್ಯವಾಗದಂತಹುದು. ಅಂಗೈಯಲ್ಲಿ ಆಗಸವನ್ನು ತೋರುವ, ಬೀಜದಲ್ಲಿ ಮಹಾವೃಕ್ಷವನ್ನು ಸಾಕ್ಷಾತ್ಕರಿಸುವ ಪ್ರಕ್ರಿಯೆ ಅದು.
“ನಿನ್ನ ನಗುವಿನಲಿ
ಅಸಂಖ್ಯಾತ ಕವಿತೆಗಳು
ಅರಳುತ್ತವೆ;
ಬರೆಯಲು ಕುಳಿತಾಗ
ಪದೇ ಪದೇ
ಖಾಲಿಯಾಗುತ್ತೇನೆ.”
ಕವಿ, ಈ ತೆರನಾಗಿ ಕವಿತೆ ಬರೆದು ಮುಗಿಸಿದಾಗ ಖಾಲಿಯಾಗುವುದು, ಬತ್ತುವುದು ತೀರಾ ಅವಶ್ಯಕ. ಅದು ಸೃಜನಶೀಲ ಮನಸ್ಥಿತಿಯ ಸಂಕೇತ! ಹೀಗೆ ಬತ್ತಿ ಬರಿದಾಗದೆ, ಬಯಲಾಗದೆ ಮತ್ತೆ ಹೊಸತೇನನ್ನು ತುಂಬಿಕೊಳ್ಳಲು, ಸೃಷ್ಟಿಸಲು ಬಹುಶಃ ಸಾಧ್ಯವಾಗಲಾರದು.
“ಹೆತ್ತವರನ್ನ ಹೊತ್ತು
ಮೆರೆದವರೆಲ್ಲಾ ಈ ಮಣ್ಣಿನಲ್ಲಿ
ಹೊನ್ನಾಗಿ ಹೂವಾಗಿ ಅರಳುತ್ತಿರುತ್ತಾರೆ
ಜಗದ ನಗುವಿನಲಿ”
ಪ್ರಸ್ತುತ ಸಂಕಲನದಲ್ಲಿ ಬೆಳದಿಂಗಳು ಎಂಬ ಪ್ರೇಮದ ಬೆಳಕಿನ ಜಾಡು ಹಿಡಿದು, ಹೆತ್ತವರ ನೋವಿಗೆ ತುಡಿಯುತ್ತ, ಬದುಕಿನ ಅನರ್ಘ್ಯತೆಯನ್ನು ವರ್ಣಿಸುತ್ತ, ಆಧ್ಯಾತ್ಮಿಕ ಹೊಳಹುಗಳನ್ನು ಪೋಣಿಸುತ್ತ ಜ್ಞಾನದ ಜಪಮಾಲೆಯಾಗಿಸಿ ಅಂತರಂಗದ ಕಾಣ್ಕೆಯಾದ ಕಾವ್ಯವನ್ನು ದಾರ್ಶನಿಕ ಹಾದಿಯಲ್ಲಿ ಬರಿಗೈ ಫಕೀರನ ಹೆಜ್ಜೆಗಳನ್ನಿಡುತ್ತ, ಯಾವುದೋ ಕರೆಗೆ ಓಗೊಟ್ಟು ಅಮೂರ್ತ ಗಮ್ಯದೆಡೆಗೆ ಸದ್ದಿಲ್ಲದೆ ಹೆಜ್ಜೆ ಹಾಕುವ ಸತ್ಸಂಗದ ಪರಿ ಅನುಭವ ಜನ್ಯವಾದುದು. ಲೋಕಾನುಭವವನ್ನು ಏಕಾಂತದಲ್ಲಿ ಅರಹುವ ಪರಿ.
“ಅಂಗೈ ತುಂಬಾ ಚುಚ್ಚಿದ ಮುಳ್ಳುಗಳನ್ನು
ತೆಗೆದು, ಮದರಂಗಿ ಬಿಡಿಸಿ ನಕ್ಕಳು
ಈಗ ಅಂಗೈ ತುಂಬಾ ಗುಲಾಬಿಗಳು”
ಇಲ್ಲಿನ ಬಹುತೇಕ ಕವಿತೆಗಳ ಮೂಲ ದ್ರವ್ಯ ಪ್ರೇಮವಾಗಿದ್ದು, ತಮಸೋಮ ಜೋತಿರ್ಗಮಯ ಎಂಬ ತತ್ವದ ಮಾರ್ಗದಲ್ಲಿ ಸಂಸ್ಕರಿಸಲ್ಪಟ್ಟು, ಭಾವಗಳನ್ನು ಶುದ್ಧೀಕರಿಸಿ, ಪದಗಳ ದುಂದುವೆಚ್ಚ ಮಾಡದೆ, ಹೇಳಬೇಕಾದದ್ದನ್ನು ಸರವಾಗಿ, ಸೌಜನ್ಯಯುತವಾಗಿ, ಅಷ್ಟೇ ಸುಂದರವಾಗಿ, ಯಾವುದೇ ಆಕ್ರೋಶವಿಲ್ಲದೆ, ಉದ್ವೇಗಕ್ಕೆ ಒಳಗಾಗದೆ, ಸಂಯಮ ಕಾಯ್ದುಕೊಂಡು, ನಿರ್ಲಿಪ್ತನಾಗಿ, ನಿಖರವಾಗಿ, ದ್ವಂದ್ವವಿಲ್ಲದೆ, ಕತ್ತಲಲ್ಲಿ ಮಮತೆಯ ಬೆಳಕು ಸೂಸುವ ಪ್ರೇಮದ ಬೆಳದಿಂಗಳ ಅರಿವಿನ ಹಾದಿಯಲ್ಲಿ ವೈರಾಗ್ಯ ಭಾಗ್ಯದ ಗೀತೆ ಗುನುಗುತ್ತ ಸಾಗುವ ದಾರಿಹೋಕ ಸಂತನಂತೆ ಸದ್ದಿಲ್ಲದೆ ಹೆಜ್ಜೆ ಹಾಕುವ ಬಗೆ ಹೆಚ್ಚು ಆಪ್ತವಾಗುತ್ತವೆ.

“ನೀ,
ಬೆಳಕಿನಲಿ ಬೆಳಕನ್ನು
ಬಿತ್ತಿ ನಡೆಯುವಾಗ
ಮಿಥ್ಯವೂ ಬೆಳಕಾಯಿತು
ದೇವ ನನ್ನೆದೆಯಲಿ…!”
ಈ ಪ್ರೇಮವೆಂಬುವುದು ಮಾಗಿದ ನಂತರವೇ ಧ್ಯಾನವಾಗುವಂಥದ್ದು.
“ನಿರಂತರ ಅವಳದೇ ಧ್ಯಾನ
ಅದೇ ನನ್ನೊಳಗಿನ ಪ್ರೇಮ
ನಿರಂತರ ನನ್ನದೇ ಮಾತು
ಅದು ನಿನ್ನೊಳಗಿನ ಮೌನ”
…..ಸಂಕಲ್ಪ ಸಿದ್ಧಿಯಿಂದ, ಕೈವಲ್ಯ ಭಾವದಿಂದ, ನಿಷ್ಕಾಮ ಕರ್ಮದಿಂದ, ಬಯಕೆಗಳನ್ನು ಗೆದ್ದು ತಥಾಗತ ಬುದ್ದನಂತಾದಾಗ ಮಾತ್ರ ಸಾಧ್ಯವಾಗುವಂಥದ್ದು! ಪ್ರೇಮದ ಪರಾಕಾಷ್ಠೆಯ ಉತ್ತುಂಗ ಅದುವೆ. ಅನುರಾಗ ಎಂಬುದು ಆರಾಧನಾ ಭಾವವಾಗಿ ಪರಿವರ್ತನೆಯಾಗುವ ಅವಿನಾಭಾವ ಅನುಭಾವ. ಪದಗಳ ವರ್ಣನೆಗೆ ದಕ್ಕದ, ಅರ್ಥಕ್ಕೆ ನಿಲುಕದ, ಹಂಚಿಕೊಳ್ಳಲಾಗದ ಅನುಭವದ, ಆಸ್ವಾದಿಸಿಯೇ ತೃಪ್ತನಾಗುವಂತಹ ಅಂತರ್ಮುಖಿ ಸಂವಾದ. “ಮೌನದಿ ಅರಳುವ ಮುಗುಳ್ನಗೆ” ಎಂದಷ್ಟೇ ವ್ಯಾಖ್ಯಾನಿಸಬಹುದು.
“ಕಳೆದುಕೊಂಡ ಬದುಕು
ಮತ್ತೆ ಸಿಕ್ಕಿದ್ದು;
ಅವಳು ನಡೆದ
ನಗುವಿನ ದಾರಿಯಲಿ”
“ದಯೆಯೇ ಧರ್ಮದ ಮೂಲವಯ್ಯ” ಎಂಬ ಬಸವಣ್ಣನವರ ವಚನದಂತೆ, ಮನುಷ್ಯನ ಮೂಲ ಧರ್ಮ ಮಾನವೀಯತೆ. ಮಾನವೀಯತೆ ಇಲ್ಲದವನು ಮನುಷ್ಯನೇನಿಸಿಕೊಳ್ಳಲಾರ. ಅಂತಹ ಜೀವಪರವಾದ ಕಾಳಜಿಯುಕ್ತ ಸಂವೇದನೆಯೇ ಮನುಷ್ಯನನ್ನು ಪ್ರಾಣಿಗಳಿಂದ ಭಿನ್ನವಾಗಿಸುವುದು.ಅಂತಹ ಭಿನ್ನತೆಯ ಭವ್ಯತೆಯೂ ದಿವ್ಯಸ್ವರೂಪವಾಗಿ ಗುರು ಹಿರೇಮಠರವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿ, ಕಾವ್ಯದ ಕಣ್ಣಿನ ಮೂಲಕ ಪ್ರತಿಬಿಂಬಿಸಲ್ಪಟ್ಟಿದೆ.
“ನಾನು ಕವಿಯಲ್ಲ
ಆದರೆ ನನ್ನೆದೆಯ ಮೌನವನ್ನ
ಬರೆಯುವೆ ಅವಳ ನೆನಪಿನಲಿ”
ಕವಿಯಾದವನು ದೊಡ್ಡಮಟ್ಟದಲ್ಲಿ ಚಿಂತಿಸಿ, ಗಹನವಾದ ವಿಚಾರಗಳಿಗೆ ಮಹತ್ವ ನೀಡುತ್ತ, ಸಣ್ಣ ಪುಟ್ಟ ಸಂಗತಿಗಳನ್ನು ದಾಖಲಿಸುವುದನ್ನೇ ಮರೆತುಬಿಡುತ್ತಾನೆ. ಆದರೆ….
“ಕವನಗಳೆಂದರೆ
ಹಕ್ಕಿಗಳಂತೆ
ಗಿಡದಿಂದ ಗಿಡಕ್ಕೆ
ಗೂಡುಗಳನ್ನು
ಕಟ್ಟಿ ಹೋಗುವುದು”
ಇಂತಹ ಸರಳ ವಸ್ತುವುಳ್ಳ ವಿಚಾರಗಳು ಕವಿತೆಗಳಾಗಿ ರಚಿಸಲ್ಪಟ್ಟಾಗ ಓದುಗರನ್ನು ಪ್ರಫುಲ್ಲವಾಗಿಸುವುದಲ್ಲದೆ, ಬೆರಗು ಹುಟ್ಟಿಸುತ್ತವೆ.
“ಬರೆದುಕೊಟ್ಟ ಪ್ರೇಮಪತ್ರದಲಿ
ನೀನು ನಾನು ಇರಲಿಲ್ಲ
ಇದ್ದದ್ದು ಪ್ರೀತಿ ಮತ್ತು
ಪರಸ್ಪರ ತುಟಿ ಕಚ್ಚಿಕೊಂಡ
ಲೆಕ್ಕದಲಿ ಮತ್ತೆ ನಾಚಿ ಕೊಟ್ಟ
ಮುತ್ತುಗಳ ಪರಿಶುದ್ಧ ಲೆಕ್ಕ”
ಪ್ರೇಮವೆಂಬುದು ಭೌತಿಕವಲ್ಲ, ಅದು ಪಾರಮಾರ್ಥಿಕ ಸಂಗತಿ. ಇಲ್ಲಿ ನಾನು ಮತ್ತು ನೀನು ಎಂಬುದು ಕೇವಲ ನೆಪ ಮಾತ್ರ. ಅದೊಂದು ಆತ್ಮಾನುಸಂಧಾನ ಎಂಬುದನ್ನು ತುಂಟತನದಿಂದ ಹೇಳುವಾಗ ಮೈ – ಮನಸ್ಸುಗಳೆರಡು ರೋಮಾಂಚನಗೊಳ್ಳುತ್ತವೆ.
“ನನ್ನೊಳಗಿನ
ಅಹಂಕಾರ ಸೋಲಲು
ನಿನ್ನ ಕಣ್ಣೊಳಗಿರುವ
ಒಪ್ಪಿಗೆಯೇ ಕಾರಣ”
ಇಲ್ಲಿ…., ಕೊನೆಕೊನೆಗೆ ಪ್ರೇಮ ವಿರಹವಾಗಿ, ವೈರಾಗ್ಯರೂಪ ತಾಳಿ, ಬಂಧ ಬಂಧನಗಳಿಂದ ಮುಕ್ತನಾಗಲು ಹವಣಿಸುವ ಭಾವ ಚಿಂತನೆಗೆ ಹಚ್ಚುತ್ತದೆ.
“ನನ್ನ ಕವಿತೆ
ಬಹಳ ಸರಳ, ಅಲ್ಲಿ
ಕೇವಲ ಪ್ರೀತಿ ಮಾತ್ರ ಇದೆ
ಅರ್ಥೈಸಿಕೊಂಡರೆ ಪ್ರೀತಿ ಸಿಗುತ್ತದೆ;
ಅರ್ಥೈಸಿಕೊಳ್ಳದೆ ಇದ್ದರೂ ಸಹ
ಪ್ರೀತಿ ಮಾತ್ರ ಸಿಗುತ್ತದೆ”
“ವಿಜಯಾಶ್ರೀ ಹಾಲಾಡಿ” ರವರ ರೇಖಾಚಿತ್ರಗಳು ವಿಶೇಷ ಆಕರ್ಷಣೆಯಾಗಿದ್ದು, ಸಂಕಲನದ ಕವಿತೆಗಳ ಸೌಂದರ್ಯಕ್ಕೆ ಕಿರಿಟಪ್ರಾಯವಾಗಿ ಮೂಡಿಬಂದಿವೆ.
“ಬರೆದಷ್ಟು ನನ್ನೊಳಗೆ ನಾನು
ಮೌನವಾಗುತ್ತೇನೆ
ಆ ಮೌನದೊಳಗೆ
ನಿನ್ನ ಮಾತಿನ ಸದ್ದಿನಲ್ಲಿ ಮತ್ತೆ ಮತ್ತೆ
ನಿನ್ನನ್ನು ಪ್ರೀತಿಸುತ್ತೇನೆ
ಪ್ರೇಮದ ಕಡಲಿನಲ್ಲಿ”
ಹೀಗೆ ಬರೆದಷ್ಟು ಬರೆಸಿಕೊಳ್ಳುವ ಪುಟ್ಟ ಕವಿತೆಗಳ ಮಹದಾಶಯ ಸಂಕಲನದೆಲ್ಲೆಡೆ…. “ಇಳೆಯ ಎದೆಗೆ ಬಿದ್ದ ಮಳೆಗೆ ಸದ್ದಿಲ್ಲದೆ ಸುಮಗಳಾಗಿ ಬಯಲಲ್ಲಿ ಅವತರಿಸಿ ಅರಳಿ ಘo ಎಂದು ಸುಗಂಧ ಬೀರಿ, ಬೀಸುವ ತಂಗಾಳಿಗೆ ಗಂಧ ಅಂಟಿ, ದುಂಬಿಗಳು ಝೇಂಕರಿಸುವಂತೆ ಭಾಸವಾಗುತ್ತದೆ”
“ಕೊನೆಗೂ
ಚಂದ್ರನೂ ಬದಲಾಗಿದ್ದ
ನನ್ನೊಳಗಿನ ನೋವಿನ
ಸಂಕೇತವಾಗಿ;
ತನ್ನೆಲ್ಲಾ ಬೆಳಕ ನುಂಗಿ”
ಉಪಸಂಹಾರ: ಪ್ರೀತಿ ಸ್ಫುರಿಸುವ, ಮೈತ್ರಿ ಬೆಸೆಯುವ, ನಗೆಯ ಸಿಂಚನದ, ಸ್ನಿಗ್ಧ ಮೊಗದ ಸಹೃದಯ ಸಂತಕವಿ, ಗುರು ಹಿರೇಮಠ’ ಮತ್ತಷ್ಟು ಮಾಗಬೇಕಿದೆ. ಸಾಮಾಜಿಕ ಕಳಕಳಿಗೆ ತೆರೆದುಕೊಳ್ಳಬೇಕಿದೆ. ದಾರ್ಶನಿಕ ಪಥದಿ ಮತ್ತಷ್ಟು ದೂರ ಸಾಗಬೇಕಿದೆ… ಎಂಬ ಕಿವಿಮಾತಿನೊಂದಿಗೆ, ಶುಭವಾಗಲಿ ಎಂದು ಹಾರೈಸುತ್ತೇನೆ.
- ಜಬೀವುಲ್ಲಾ ಎಮ್. ಅಸದ್ – ಮೊಳಕಾಲ್ಮುರು
