ಪೂರ್ಣಿಮಾ ಭಟ್ ಸಣ್ಣಕೇರಿ ಅವರ ‘ಕಥೆ ಜಾರಿಯಲ್ಲಿರಲಿ’ ಈ ಕಥಾ ಸಂಕಲನವು ೨೦೨೫ರ ‘ಈ ಹೊತ್ತಿಗೆ’ ಕಥಾಪ್ರಶಸ್ತಿ ಪಡೆಡಿದ್ದು, ಗ್ರಾಮ ಜೀವನದ ಚೆಲುವು ಕಟ್ಟಿಕೊಡುವ ಕೃತಿಯಾಗಿದೆ. ಈ ಕೃತಿಯ ಕುರಿತು ದತ್ತಾತ್ರೇಯ ಹೆಗಡೆ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಕಥೆ ಜಾರಿಯಲ್ಲಿರಲಿ
ಲೇಖಕರು : ಪೂರ್ಣಿಮಾ ಭಟ್ ಸಣ್ಣಕೇರಿ
ಪ್ರಕಾರ : ಕಥಾ ಸಂಕಲನ
ಇದರ ಲೇಖಕಿ ಶಿರಸಿಯ ಪೂರ್ಣಿಮಾ ಭಟ್ ಸಣ್ಣಕೇರಿ. ಇಲ್ಲಿನ ಕಥೆಗಳ ರಚನೆ ಗಟ್ಟಿತನದಿಂದ ಕೂಡಿದ್ದು, ಹಳ್ಳಿ ಜೀವನದ ಸೊಗಡು ಹೆಚ್ಚಾಗಿ ಕಾಣಿಸುತ್ತಿದೆ. ಇಲ್ಲಿರುವ ಎಂಟು ಕಥೆಗಳಲ್ಲಿ ಹೊಸತನವಿದೆ, ವಿಶಿಷ್ಟತೆಯಿದೆ. ಕಥಾ ವಸ್ತುವು ನಿರ್ವಹಣೆ ಮತ್ತು ಭಾಷೆಯ ಪ್ರಯೋಗಶೀಲತೆಯನ್ನು ಒಳಗೊಂಡಿವೆ.
ಕೃತಿಯನ್ನು ಓದಿದ ಬಳಿಕೆ ಅಲ್ಲಿನ ಕಥೆಗಳೇ ನಮ್ಮನ್ನು ಆವರಿಸಿಬಿಡುತ್ತವೆ. ವಿಶೇಷವಾಗಿ ಉತ್ತರ ಕನ್ನಡದ ಅದರಲ್ಲೂ ಶಿರಸಿ ತಾಲೂಕಿನ ಸುತ್ತಮುತ್ತದ ಗ್ರಾಮಗಳ ಹೆಸರು ಇದರಲ್ಲಿದೆ. ಇಲ್ಲಿನ ಕಥೆಗಳೆಲ್ಲ ಲೇಖಕಿಯ ಸುತ್ತಮುತ್ತಲ ಬದುಕುಗಳನ್ನು ತೆರೆದಿಡುತ್ತವೆ. ಸರಳ ವಿಷಯಗಳಾದರೂ ಅಲ್ಲಿನ ಸಂಪ್ರದಾಯ, ಅವುಗಳ ವಿರುದ್ಧ್ದ ಮಾತನಾಡುವುದು, ಅದನ್ನು ಕಥಾನಾಯಕಿ ಸಮರ್ಥಿಸಿಕೊಳ್ಳುವುದನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಕಥನ ರೂಪುಗೊಳ್ಳುವ ಮಾಂತ್ರಿಕ ಪ್ರಕ್ರಿಯೆಯನ್ನು ಲೇಖಕಿ ತೋರಿಸಿದ್ದಾರೆ. ಬರವಣಿಗೆ ಹಾಗೂ ಬದುಕಿನ ಸೌಂದರ್ಯ ಇಲ್ಲಿದೆ. ಕಥೆ ಕಟ್ಟುವಲ್ಲಿನ ಎಚ್ಚರ ಗಮನ ಸೆಳೆಯುತ್ತದೆ.

ಮೊದಲನೆಯ ಕಥೆ ‘ಕತೆ ಜಾರಿಯಲ್ಲಿರಲಿ’. ಇದರಲ್ಲಿ ಅಜ್ಜಪ್ಪನ ಮಗಳು ಶಾಂತಾಳ ಸಾವಿನ ಕಥೆಯನ್ನು ಅವನ ಬಳಿಗೆ ಕೇಳಲು ನಿರೂಪಕಿ ಹಲವು ಬಾರಿ ಪ್ರಯತ್ನಿಸುತ್ತಾಳೆ. ಆ ಅಮಾಯಕಳ ಸಾವಿನ ಸುದ್ದಿಯನ್ನು ಕೇಳುತ್ತಾ ಇದ್ದಕ್ಕಿದ್ದಂತೆ ದುಃಖವನ್ನು ತಬ್ಬಿಕೊಳ್ಳುತ್ತಾರೆ. ಸೂರ್ಯನಿಗೆ ಬೆಂಕಿ ಹೊತ್ತಿಕೊಂಡಂತಹ ಬೇಗೆ ಎಂದು ನಮ್ಮನ್ನು ಕಥೆಯ ಕಾಡ್ಗಿಚ್ಚಿನ ಕಡೆಗೆ ಕರೆದೊಯ್ಯುತ್ತಾರೆ. ಕಥೆ ಕೇಳುತ್ತಾ ‘ಎಡದ ಎದೆಯಿಂದಲೂ ಹಾಲು ಒಸರಿ ಒದ್ದೆಯಾದ ಅನುಭವವಾಯ್ತು’ ಎನ್ನುತ್ತಾರೆ. ತನ್ನ ಕಥೆ ಹೇಳುವ ಅನುಕೂಲಸ್ಥ ಕಲೆ ಮತ್ತು ಕಥೆಯಾದವರ ತಲತಲಾಂತರದ ವ್ಯಥೆ ಎರಡೂ ಅನುವಂಶೀಯವೇ ಎಂದೂ ಗೊಂದಲಕ್ಕೆ ಬೀಳುತ್ತಾರೆ. ಬದುಕನ್ನು ‘ಸಾಲು ತಪ್ಪಿಸಿಕೊಂಡ ಇರುವೆ ದಿಕ್ಕಾಪಾಲಾದ ಕಥೆ’ ಎಂದು ಹೇಳುತ್ತಾರೆ. ಅಜ್ಜಪ್ಪ ಮನೆಯಲ್ಲೇ ಸಣ್ಣ ಹೆಂಡದಂಗಡಿ ನಡೆಸುವವ. ಇದಕ್ಕಾಗಿ ಪರದೆ ಇಳಿಬಿಟ್ಟುಕೊಂಡಿದ್ದನು. ಮನೆಗೆ ಬಂದಾಗ ನೇತುಬಿಟ್ಟ ಸೀರೆಯ ಪರದೆಗಳು ಕಥೆಯನ್ನು ಹೇಳುತ್ತವೆ ಎನ್ನುತ್ತಾರೆ ಲೇಖಕಿ. ಬದುಕಿನ ಸೌಂದರ್ಯ ಇರುವುದೇ ಅದು ಪಡೆದುಕೊಳ್ಳಬಹುದಾದ ಸೃಜನಶೀಲತೆಯಲ್ಲಿ ಎನ್ನುವ ನಂಬಿಕೆ ಹುಟ್ಟಿಸುವ ಕಥೆ ಇದು.
‘ಪಟಾಕಿ ಕೈ ಚೀಲ’ದಲ್ಲಿ ಮದುವೆಯಾದ ೨-೩ ವರ್ಷದಲ್ಲೇ ಮಂದಾರ ಮೊದಲ ಗಂಡನನ್ನು ಕಳೆದುಕೊಂಡ ಕಾರಣ ಎರಡನೇ ಸಂಬಂಧವನ್ನು ಕಾಣಬೇಕಾಗುತ್ತದೆ. ಅವಳ ಮದುವೆ ಸಂದರ್ಭದಲ್ಲಿ ಅಡೆತಡೆಯಾಗದ ಸಂಪ್ರದಾಯ ಮದುವೆಯ ನಂತರದ ಅಂದರೆ ಎರಡನೆಯ ಗಂಡ (ಪ್ರಸಾದ)ನ ಸೋದರ ಸೊಸೆಯ ಮದುವೆ ಸಂದರ್ಭದಲ್ಲಿ ತೊಡಕಾಗಿ ಪರಿಣಮಿಸುತ್ತದೆ. ಮದುವೆಯ ವೇಳೆ ಸೋದರಮಾವನ ಹೆಂಡತಿಗೆ ಅಂದರೆ ಮಂದಾರಳಿಗೆ ಕೊಡಬೇಕಾದ ಬಾಗಿನ ಕೊಡಲು ಸಾಧ್ಯವಿಲ್ಲ ಎಂದು ಜೋಯಿಸರು ಹೇಳುತ್ತಾರೆ. ಸಂಸ್ಕಾರ ದಾರಿದ್ರ್ಯ ಮಂದಾರಳನ್ನು ಮುತ್ತೈದೆ ಎಂದು ಹೇಳಲು ಆಗದೆನ್ನು ಮಾತನ್ನು ಅವರಾಡುತ್ತಾರೆ. ಈ ತೊಡಕನ್ನು ಘನತೆಯಿಂದ ನಿಭಾಯಿಸುವುದನ್ನು ಸುಂದರವಾಗಿ ಕಟ್ಟಿಕೊಡಲಾಗಿದೆ. ಮುತ್ತೈದೆ ಬಾಗಿನದಿಂದ ತನ್ನನ್ನು ಪಾರು ಮಾಡು ಎಂದು ಬೇಡಿಕೊಳ್ಳುವ ಮಂದಾರಳಿಗೆ ಮದುವೆಯ ಸಂಭ್ರಮ ಹೆಚ್ಚಿಸಲು ತಂದ ಪಟಾಕಿಯ ಕೈ ಚೀಲವನ್ನು (ಬಾಲ್ಯದಲ್ಲಿ ಚೌತಿ, ತುಳಸಿ ಕಾರ್ತೀಕದಲ್ಲಿ ಪಟಾಕಿ ಸುಡುವುದು ಇಷ್ಟವಾಗಿತ್ತು) ಮಾವ ರಾಘು ಹೆಗಡೆ ವರ್ಗಾಯಿಸಿ ಮಗುವಿನೊಂದಿಗೆ ಪಟಾಕಿ ಸುಡುವ ಕೆಲಸಕ್ಕೆ ಕಳುಹಿಸುವ ಮೂಲಕ ನಾಯಕಿ ನಿರಾಳತೆ ಅನುಭವಿಸುತ್ತಾಳೆ. ಹೆಣ್ಣಿನ ಮನದ ತುಮುಲ, ಗಂಡಿನ ಅಸಹಾಯಕತೆ ಮತ್ತು ಸಂಪ್ರದಾಯವಾದಿಗಳ ಅಬ್ಬರ, ಅದಕ್ಕೆ ಪ್ರತಿಯಾಗಿ ಮಾನವೀಯ ಪ್ರತಿಭಟನೆಯನ್ನು ಈ ಕಥೆ ಮನನೀಯವಾಗಿ ಮನಗಾಣಿಸಿದೆ.
‘ಬದುಕು ಕದನದ ತೆರನೆ’ ಎಂಬ ಕಥೆಯಲ್ಲಿ ಮದುವೆಯಾಗಿ ೮ ವರ್ಷವಾದರೂ ಮಕ್ಕಳಾಗದ ಮಹಾದೇವ -ಪಾರು ದಂಪತಿಗೆ ಊರಿನ ತಗ್ಗಿನಹಳ್ಳದಲ್ಲಿ ಸಿಕ್ಕ ಗಂಡುಮಗುವೊಂದನ್ನು ಸಾಕುತ್ತಾರೆ. ಮಗು ಗಣ್ಯಾ ಬೆಳೆಯುತ್ತಿದ್ದಂತೆಯೇ ಮನೆಯಲ್ಲಿನ ಜಮೀನೆಲ್ಲ ಕೈಬಿಟ್ಟು ಹೋದ ಮೇಲೆ ಮಹದೇವ- ಗಣ್ಯಾ ಬೆಂಗಳೂರಿನತ್ತ್ತ ಕೆಲಸ ಹುಡುಕಿಕೊಂಡು ಸಾಗುವುದು, ಅಂಗಡಿಯೊಂದರಲ್ಲಿ ಕೆಲಸ ಹಿಡಿಯುವುದು, ನಂತರ ಸೂಪರ್ ಮಾರ್ಕೆಟಿನಲ್ಲಿ ಕೆಲಸ, ಅಲ್ಲಿಂದ ಹೌಸ್ ಕೀಪಿಂಗ್, ಪ್ಲಂಬಿಂಗ್, ಎಸ್‌ಟಿಪಿ ಟ್ಯಾಂಕ್ ಕ್ಲೀನ್ ಮಾಡುವುದರಲ್ಲೇ ಕಾಲಕಳೆಯುತ್ತಿದ್ದ. ಈ ವೇಳೆ ಏಕಾಏಕಿ ಊರಿಗೆ ಹೊರಡಲು ಮ್ಯಾನೇಜರ್ ಸೂಚಿಸುತ್ತಾನೆ. ಕಾರಣ ಎಸ್‌ಟಿಪಿ ಟ್ಯಾಂಕ್ ಕೆಲಸ ಮ್ಯಾನ್ಯುವಲ್ ಆಗಿ ಮಾಡುತ್ತಿದ್ದರು. ಈ ಬಗ್ಗೆ ಯಾರೋ ದೂರು ಕೊಟಟಿದ್ದು, ಇದು ಕೆಲಸಗಾರರ ಶೋಷಣೆ ಆಗಿತ್ತು. ಮಾನವ ಹಕ್ಕು ಉಲ್ಲಂಘನೆಯಾಗುವ ಕೇಸು ದಾಖಲಾಗುವ ಭಯ. ಹಳ್ಳಿಗೆ ಹಿಂದುರುಗಿದ ಗಣ್ಯಾನನ್ನು ಒಂದು ದಿನ ತಾಯಿ ಹುಡುಕುತ್ತಾ ಬಂದಾಗ ತಾನು ಮಗುವಾಗಿ ಸಿಕ್ಕಿದ್ದ ತಗ್ಗಿನಹಳ್ಳದಿಂದ ಮೇಲೆದ್ದು ಬರುತ್ತಿದ್ದ. ಈ ಕಥೆ ಮಗುವಿನ ಹಳ್ಳಿ ಪಟ್ಟಣಗಳ ಭೌತಿಕ ಯಾತ್ರೆ ಕಥೆಯಲ್ಲಿ ಒಂದು ರೂಪಕವಾಗಿ ಬಂದು ಇಡೀ ವ್ಯವಸ್ಥೆಯ ಅಮಾಯಕ ಕ್ರೌರ್ಯವನ್ನು ತೆರೆದಿಡುತ್ತದೆ.
‘ಕಿವಿ ತಿರಪೇಕಾಯಿ’ ಎನ್ನುವ ಕಥೆ ಅತ್ಯಂತ ಇಷ್ಟವಾಗುತ್ತದೆ. ಇಂಗ್ಲೆಂಡಿನಲ್ಲಿ ತಳ ಊರಿದ್ದ ಭಾರತೀಯ ತಾಯಿ -ಮಗಳ ಸಾಂಸ್ಕೃತಿಕ ತಾಕಲಾಟಗಳ ಆಧುನಿಕ ಕಥೆ ಇದು. ೧೩ರ ಹರಯದ ಮಗಳ ನಿರ್ಭೀತ ಮಾತು, ಆಕೆಯ ನಡವಳಿಕೆಯಿಂದ ತಾಯಿಗೆ ಆತಂಕ ಎದುರಾಗುತ್ತದೆ. ತನ್ನ ಎದೆಯೊಳಗಿನ ಗುಟ್ಟನ್ನು ಹೇಳಿದಾಗ ತಾಯಿಗೆ ಕೋಪ ಬರುತ್ತದೆ. ಆಧುನಿಕತೆಯ ಸುಳಿಯಲ್ಲಿ ಸಿಲುಕಿದ ಮಗಳು ಸಂಬಂಧಗಳಿಗೆ ಬೆಲೆ ಕೊಡಲಾರಳೆಂಬ ಭೀತಿ ಎದುರಾಗುತ್ತದೆ. ನಂತರ ಈ ಎಲ್ಲ ಊಹೆಗಳನ್ನು ಬುಡಮೇಲು ಮಾಡಿ ಮಗಳು ತಾಯಿಯನ್ನು ನಿರಾಳವಾಗಿಸುತ್ತಾಳೆ. ಈ ಕಥೆಯಲ್ಲಿ ತಾಯಿ ಮತ್ತು ಮಗಳ ಅಂತಃಕರಣ ಮತ್ತು ಸಂಘರ್ಷ ವಸ್ತುವಾಗಿದೆ. ಕಥೆಗಾರ್ತಿ, ತಾಯಿಯೂ ಆಗಿ ಮಗಳು ಆಗಿ ನಡೆಸುವ ತಂತಿಯ ಮೇಲಿನ ನಡಿಗೆ ಇಷ್ಟವಾಗುತ್ತದೆ. ನಿರೂಪಣೆಯಿಂದ ಮತ್ತು ಜೀವಂತಿಕೆಯಿಂದ ಈ ಕಥೆ ಗಮನ ಸೆಳೆಯುತ್ತದೆ
‘ಸೀಕ್ರೆಟ್ ಸ್ಯಾಂಟಾ’ದಲ್ಲಿ ಕ್ಯಾನ್ಸರ್‌ನಿಂದ ಕಳೆದುಕೊಂಡ ಸ್ಥನವನ್ನು ಸರ್ಜರಿಯ ಮೂಲಕ ರೂಪಿಸಿಕೊಳ್ಳುವ ಪತ್ನಿ (ಸನ್ಮುಕ್ತಾ) ಯ ಹಂಬಲ ಗಂಡ ಅಮಿತ್‌ಗೆ ಅನಗತ್ಯ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುವ ಪ್ರಯತ್ನವಾಗಿ ಕಾಣಿಸುತ್ತದೆ. ಹೆಂಡತಿಯ ಎದೆ ವಿರೂಪಗೊಳ್ಳುವುದು ಗಂಡನಿಗೆ ಸಮಸ್ಯೆಯಾಗಿ ಕಾಣಿಸದೇ ಹೋದರೂ ದೇಹದ ಭಾಗ ಒಂದನ್ನು ಕಳೆದುಕೊಳ್ಳುವ ಮೂಲಕ ತನ್ನ ಹೆಣ್ತನ ಘಾಸಿಗೊಂಡ ಭಾವವನ್ನು ಕಥಾನಾಯಕಿ ಅನುಭವಿಸುತ್ತಾಳೆ. ಆ ತಳಮಳದಿಂದ ಹೊರಬಂದು ದಾರಿಯನ್ನು ಆಯ್ದುಕೊಳ್ಳುವ ಪ್ರಬುದ್ಧತೆ ಮೆಚ್ಚುಗೆಯಾಗುತ್ತದೆ. ತನ್ನ ದೇಹದ ಕುರಿತು ನಿರ್ಣಯವನ್ನು ತೆಗೆದುಕೊಳ್ಳುವಲ್ಲಿ ಸ್ವಂತಿಕೆಯನ್ನು ಪ್ರದರ್ಶಿಸುವುದು, ಅದರಲ್ಲಿ ಗಂಡನ ಪಾತ್ರವೇನೂ ಇಲ್ಲ ಎನ್ನುವುದನ್ನು ಆತನಿಗೆ ಮನದಟ್ಟು ಮಾಡಿಸುವ ಪ್ರೌಢತೆ ಈ ಕತೆಯಲ್ಲಿದೆ. ಈ ವಿಷಯದಲ್ಲಿ ಹೆಂಡತಿಯ ಮನಗೆಲ್ಲಲಾಗದ ಗಂಡ ಸಮಸ್ಯೆಗಳಿಂದ ಪಲಾಯನ ಮಾಡುವಂತೆ ಹಳ್ಳಿಗೆ ಬಂದು ತನಗೆ ಲಂಡನ್‌ನಲ್ಲಿ ಕ್ರಿಸ್‌ಮಸ್ ವೇಳೆ ಉಡುಗೊರೆಯಾಗಿ ಸಿಕ್ಕ ಸೀಕ್ರೆಟ್ ಸ್ಯಾಂಟಾದ (ಆರ್ಟಿಫಿಶಿಯಲ್ ಬ್ರೆಸ್ಟ್)ನ್ನು ಹೂತು ಹಾಕುತ್ತಾನೆ. ಅಂತಿಮವಾಗಿ ಅವನ ಮನೋಭಾವದಲ್ಲಿ ಆಗುವ ಬದಲಾವಣೆ ಅರ್ಥಪೂರ್ಣವಾದುದು ಎನ್ನುವುದನ್ನು ಬಿಂಬಿಸಿದ್ದಾರೆ
‘ನಿನ್ನ ಕೊಂದು ನಾನೇನ ಪಡೆಯಲಿ’ ಈ ಕಥೆಯಲ್ಲಿ ಒಂದು ದೃಢವಾದ ಸಂದೇಶವಿದೆ. ಗಣಪತಿ ವಿಸರ್ಜನೆಯ ದಿನ ನೂರಾರು ಜನ ಊಟಕ್ಕೆ ಕುಳಿತಾಗ ಪರಮಯ್ಯ ಎನ್ನುವವರಿಂದ ಮೃದು ಸ್ವಭಾವದ ಸೊಸೆ (ನರ್ಮದಾ) ತನ್ನ ತವರಿನಲ್ಲಿ ಮದ್ದು ಹಾಕುವ ಆರೋಪಕ್ಕೊಳಗಾಗುತ್ತಾಳೆ. ಅಲ್ಲಿಯವರೆಗೆ ತಣ್ಣಗೆ ಹರಿಯುತ್ತಿದ್ದ್ದ ನೀರು ಆಗ ಉಕ್ಕೇರಿದಂತಾಗಿ ಆಕೆ ರಣಚಂಡಿಯಾಗುತ್ತಾಳೆ. ಇಡೀ ಕಥೆಯ ಸತ್ವ ಕಥೆಯ ಕೊನೆಯ ಸನ್ನಿವೇಶದಲ್ಲಿ ಅಡಗಿದೆ. ಮೂಲಕ ಇಲ್ಲಿನ ನಾಯಕಿ ಅತ್ಯಂತ ಸಶಕ್ತ ಹೆಣ್ಣುಮಗಳಾಗಿ ನಿಲ್ಲುತ್ತಾಳೆ. ಕುಟುಂಬದ ಎಲ್ಲರಿಗೂ ಮೌನವಾಗಿದ್ದುಕೊಂಡು ತಮ್ಮ ಪ್ರೀತಿಯಲ್ಲಿ ಇದ್ದುಕೊಂಡು ಬೆಂಬಲ ಸೂಚಿಸಿ ನಾಯಕಿಯನ್ನು ಗೆಲ್ಲಿಸಿದ್ದು ಕಥೆಯ ಒಂದು ಧನಾತ್ಮಕ ಅಂಶ ಕೌಟುಂಬಿಕ ಸೌಹಾರ್ದತೆ ಹಾಗೂ ಸ್ತ್ರೀ ಸಬಲೀಕರಣದ ಮೌಲ್ಯಗಳು ಅತ್ಯಂತ ಸಹಜವಾಗಿ ಬಿತ್ತಿದೆ.

‘ಸಿನ್ನರ್ಸ್ ಮತ್ತು ಸೋಬರ್ಸ್’ ಕತೆಯಲ್ಲಿ ಮ್ಯಾಥ್ಯೂ ಎಂಬ ಸಿಟ್ಟಿನ ಮನುಷ್ಯ ತನ್ನ ಫ್ಲ್ಯಾಟ್‌ನ ಮತ್ತೊಂದು ಮನೆಯಲ್ಲಿ ಕೆಲಸಗಾರರು ಗಲಾಟೆ ಮಾಡಿದ್ದರಿಂದ ಅವರಿಗೆ ಬಯ್ಯುತ್ತಾನೆ. ಮಾಲಕಿ ಬಂದು ವಿಚಾರಿಸಿದಾಗ ಆಕೆಗೆ ಬಾಸ್ಕೆಟ್‌ನಿಂದ ಹಲ್ಲೆ ಮಾಡುತ್ತಾನೆ. ಅವನೆಸಗುವ ತಪ್ಪುಗಳ ಬಗೆ ಯಾರಿಗೂ ಕನಿಕರ ಇರುವುದಿಲ್ಲ. ತಮ್ಮವರೇ ತಮಗೆ ಇಷ್ಟವಾಗದ ಕ್ರೌರ್ಯ ಎಸಗಿ ಸಿಕ್ಕಿಬಿದ್ದಾಗ ಎದುರಾಗುವ ತೊಳಲಾಟವನ್ನು ಈ ಕಥೆ ಆಧುನಿಕ ಬದುಕಿನ ದೈನಂದಿನ ಸಣ್ಣ ಸಣ್ಣ ವಿವರದ ಮೂಲಕ ಚೆನ್ನಾಗಿ ಕಟ್ಟಿಕೊಟ್ಟಿದೆ.
‘ಹತ್ತಾವತಾರವನು ಹೊತ್ತವಳು ನೀನು’ ಕಥೆಯಲ್ಲಿ ವಿಶಾಲಜ್ಜಿಯ ವಿಚಾರಗಳು ಹಳತಾಗದೆ ಲೋಕಾನುಭವ ಮತ್ತು ಆಂತರ್ಯದ ಅನುಸಂಧಾನದಲ್ಲಿ ಹೊಸ ಸಾಹಸಗಳಿಗೆ ಅನುವು ಮಾಡಿಕೊಡುತ್ತದೆ. ಮೊಮ್ಮಗಳು ಜಾಹ್ನವಿ ಕುಡಿದು ಬಂದಿದ್ದು ಗೊತ್ತ್ತಾದರೂ ಅಜ್ಜಿ ಹಾಯಾಗಿರುವುದು, ಮೊಮ್ಮಗಳಿಗೆ ಅಜ್ಜಿಗೆ ಮುಖ ತೋರಿಸಲು ಕಷ್ಟವಾಗುವುದು, ಕೊನೆಗೆ ಮೊಮ್ಮಗಳು ಲಂಡನ್‌ಗೆ ಮರಳುವಾಗ ಅಜ್ಜಿಯು ‘ಮುಂದಿನ ಸಲ ಬರುವಾಗ ಫಾರಿನ್ನಿಂದ ಒಂದೇ ಬಾಟಲಿ ತಗಂಡು ಬಾ. ನಾವಿಬ್ಬರೇ ಕೂತು ಮುಗಿಸುವಾ’ ಎನ್ನುವಾಗ ಜಾಹ್ನವಿಗೆ ಅಜ್ಜಿಯ ಬಗ್ಗೆ ಇದ್ದ ಅಪನಂಬಿಕೆ ಹೋಗಿ ವಿಶ್ವಾಸ ಮೂಡುತ್ತದೆ. ತನ್ನನ್ನು ಪೊರೆಯುವ ವಾತ್ಸಲ್ಯದ ಮಾಯೆ ಅಜ್ಜಿ ಎಂದು ತಿಳಿಯುತ್ತಾಳೆ.
ಒಟ್ಟಿನಲ್ಲಿ, ಹೊಸ ತಲೆಮಾರಿನ ಓದುಗರಿಗೆ ಆಪ್ತ ಎನಿಸುವ ಭಾಷೆಯು ಪ್ರಾದೇಶಿಕ ಕಥೆಯನ್ನು ಪಕ್ವಗೊಳಿಸಿದೆ. ಅಲ್ಲಲ್ಲಿ ಸ್ಥಳೀಯ ಭಾಷೆ ಬಳಸಿರುವುದು ವಿಶೇಷವಾದುದು. ಜೊತೆಗೆ ಲೇಖಕಿಯು ಸಾಂದರ್ಭಿಕವಾಗಿ ಮಾಡಿರುವ ಹೋಲಿಕೆ ಮನಸೆಳೆಯುತ್ತದೆ. (ಉದಾ: ಕವಿ ತರ ವಿವರಣೆ ಕೊಡೋದು ನನಗಾಗೊಲ್ಲ, ಸಿಟ್ಟು ನವರಂಧ್ರಗಳಲ್ಲೂ ಹೊಗೆಯಾಡಿ ಬಂತು, ಮುದುಕರ ಬಾಯಲ್ಲಿ ಹಲ್ಲಿರುವಂತೆ ದೂರದೂರಕ್ಕೊಂದು ಮನೆಯಿರುವ ಹಳ್ಳಿ ಅದು.) ಹೀಗೆ ಕಥಾ ಸಂಕಲನವು ಜೀವಂತಿಕೆಯಿಂದ, ನವಿರಾದ ನಿರೂಪಣೆಯಿಂದ ಓದುಗರ ಮನಸ್ಸಿನಲ್ಲಿ ಮಂದಹಾಸ ಮೂಡಿಸುತ್ತದೆ. ಗ್ರಾಮ ಜೀವನದ ತವಕ-ತಲ್ಲಣಗಳ ಅರಿವು ಮತ್ತು ಚೆಲುವು ಈ ಸಂಕಲನದಲ್ಲಿದೆ.
- ದತ್ತಾತ್ರೇಯ ಹೆಗಡೆ
