ಆ್ಯಂಟಿ ಸ್ನೇಕ್ ವೀನಮ್ ವಿಷದ ಹಾವಿನ ಕಡಿತಕ್ಕೆ ಪ್ರತಿ ಔಷಧಿ. ಮಲೆನಾಡಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವಿನ ವಿಷಕ್ಕೆ ಪ್ರತಿರೋಧ ಔಷಧಿ ತುರ್ತು ಸಂದರ್ಭದಲ್ಲಿ ನೀಡುವಂತಾಗಲಿ, ನಾಗರಾಜ್ ಬೆಳ್ಳೂರು ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ದಿನಾಂಕ 03/10/2025 ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಅಲಸೆಯಲ್ಲಿ ವೃದ್ಧೆ ಜಾನಕಮ್ಮ (75) ಹಾವು ಕಡಿತದಿಂದ ಮೃತಪಟ್ಟಿದ್ದಾರೆ. ತನ್ನ ಆಹಾರವಾದ ಕಪ್ಪೆಯನ್ನು ಬೆನ್ನಟ್ಟಿ ಬಂದ ನಾಗರಹಾವಿನಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಕಪ್ಪೆಯೊಂದು ಮನೆಯ ಕಡಿಮಾಡಿನಲ್ಲಿ ಕುಳಿತ್ತಿದ್ದ ಜಾನಕಮ್ಮನ ಹತ್ತಿರ ಬಂದು ಅವರ ಪಕ್ಕದ ಗೋಡೆಯಲ್ಲಿ ಅಡಗಿತ್ತು.
ತನ್ನ ಬೇಟೆಯ ಆನ್ವೇಷಣೆಯಲ್ಲಿ ಕಪ್ಪೆಯನ್ನು ಹಿಂಬಾಲಿಸಿದ್ದ ನಾಗರಹಾವು ಜಾನಕಮ್ಮನ ಕಾಲಿಗೆ ಕಡಿದು ಹಿಂತಿರುಗಿ ಹೋಗುವಾಗ ಮೊಮ್ಮಗಳು ನೋಡಿದ್ದಾಳೆ.
ವೃದ್ದೆ ಜಾನಕಮ್ಮನ ಕಣ್ಣುಗಳು ವಯೋಸಹಜವಾಗಿ ಸ್ವಲ್ಪ ಮಂಜಾಗಿದ್ದರಿಂದ ಅಪಾಯದ ಅರಿವಾಗುವ ಮೊದಲೆ ಅನಾಹುತವೊಂದು ನಡೆದು ಹೋಗಿತ್ತು. ಹಾವು ಕಪ್ಪೆಯನ್ನು ಹುಡುಕಿ ಬರುವ ಹೊತ್ತಿಗೆ ಜಾನಕಮ್ಮನ ಕಾಲು ಅಲ್ಲಾಡಿದ್ದರಿಂದ ಕಪ್ಪೆ ಎಂದುಕೊಂಡೋ ಅಥವ ತನ್ನ ರಕ್ಷಣೆಗಾಗಿ ಹಾವು ಜಾನಕಮ್ಮನ ಕಾಲು ಬೆರಳಿಗೆ ಕಡಿದಿತ್ತು. ಬೆರಳಿನಿಂದ ರಕ್ತಸ್ರಾವವಾಗುತ್ತಿತ್ತು, ತಕ್ಷಣ ವೃದ್ಧೆಯನ್ನು ಎತ್ತಿ ಕಾರಿಗೊಳಗೆ ಕೂರಿಸಿಕೊಂಡು ಸಮೀಪದ ಕೋಣಂದೂರು ಆಸ್ಪತ್ರೆಗೆ ಕರೆದೊಯ್ದರು ಆದರೆ ಅಲ್ಲಿ ಆ್ಯಂಟಿ ಸ್ನೇಕ್ ವೆನಮ್ ಚುಚ್ಚು ಮದ್ದು ಇದ್ದರೂ ವೈದ್ಯರಿಲ್ಲ ಎಂಬ ಕಾರಣ ಮತ್ತು ಹಾಲಿ ಇರುವ ಸಿಬ್ಬಂದಿಗೆ ತರಬೇತಿ ಇಲ್ಲ ಎಂಬ ಕಾರಣದಿಂದ ಆ್ಯಂಟಿ ಬಯೋಟಿಕ್ ಮತ್ತು ಟಿಟಿ ಇಂಜೆಕ್ಷನ್ ನೀಡಿ ತಾಲ್ಲೂಕು ಕೇಂದ್ರದ ತೀರ್ಥಹಳ್ಳಿ ಆಸ್ಪತ್ರೆಗೆ ಕಳಿಸಿದ್ದಾರೆ.
ಮಾರ್ಗ ಮಧ್ಯದಲ್ಲಿ ಜಾನಕಮ್ಮ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ದೊರೆಯದೆ ಮೃತ ಪಟ್ಟಿದ್ದಾರೆ. ನಮ್ಮ ಕರ್ನಾಟಕ ಸರ್ಕಾರದ ಆದೇಶ ಬಹಳ ಸ್ಪಷ್ಟವಾಗಿದೆ ಇದರ ಪ್ರಕಾರ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ (PHC) ಹಾಗು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (CHC) ಹಾವಿನ ಕಡಿತಕ್ಕೆ ಕೊಡುವ ASV (Anti snake venom) ಔಷಧಿ ಕಡ್ಡಾಯವಾಗಿ ದಾಸ್ತಾನು ಇಡಬೇಕು ಜೊತೆಗೆ ಕಡಿತಕ್ಕೊಳಗಾದವರು ದಾಖಲಾದ ತಕ್ಷಣ ಔಷಧಿ ಕೊಡಬೇಕು.
ಆದರೆ ಬಹಳಷ್ಟು PHC ಮತ್ತು CHC ಗಳಲ್ಲಿ ಔಷಧವಿದ್ದರೂ ಚಿಕಿತ್ಸೆ ನೀಡಲು ಡಾಕ್ಟರ್ ಇಲ್ಲ ಎನ್ನುವ ಸಬೂಬು ಹೇಳಿ ಚಿಕಿತ್ಸೆ ಕೊಡುತ್ತಿಲ್ಲ. ಆಸ್ಪತ್ರೆಗೆ ಹೋದರೂ ಚಿಕಿತ್ಸೆ ಸಿಗುವುದೇ ಅನುಮಾನ.

ಮೊದಲ್ಲೆಲ್ಲ ಹಳ್ಳಿಗಳಲ್ಲಿ ಹಾವಿನ ಕಡಿತಕ್ಕೆ ಆಸ್ಪತ್ರೆಗೆ ಹೋಗದೆ ನಾಟಿ ಔಷಧ ಮಂತ್ರ ಚಿಕಿತ್ಸೆ ಮೊರೆ ಹೋಗಿ ಬಹಳಷ್ಟು ಜನ ಸಾಯುತ್ತಿದ್ದರು, ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಜಾಗೃತಿ ಮೂಡಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾವಿನ ಕಡಿತವು ಒಂದು ವೈದ್ಯಕೀಯ ತುರ್ತುಸ್ಥಿತಿಯಾಗಿದ್ದು ಹಳ್ಳಿಗಳಿಂದ ದೂರದ ಜಿಲ್ಲಾಸ್ಪತ್ರೆಗೆ ತೆರಳಲು ಸಾಕಷ್ಟು ಸಮಯ ಹಿಡಿಯುವುದರಿಂದ ಹತ್ತಿರದ PHC ಹಾಗು CHC ಗಳಲ್ಲಿ ಚಿಕಿತ್ಸೆ ದೊರೆತರೆ ರೋಗಿ ಬದುಕುಳಿಯುವ ಸಾಧ್ಯತೆ ಅಧಿಕ ಆದರೆ ಬಹಳಷ್ಟು PHC ಹಾಗು CHC ಗಳಲ್ಲಿ ಸರ್ಕಾರದ
ಆದೇಶ ಕೇವಲ ಕಾಗದ ರೂಪದಲ್ಲಿದ್ದು ಕಾರ್ಯರೂಪಕ್ಕೆ ಬಂದಿಲ್ಲ.
Anti snake venom ಔಷಧದ ಬಾಟಲ್ ಗಳು ಆಸ್ಪತ್ರೆಯ ಔಷಧಾಲಯಗಳ ಶೋಕೇಸ್ ಗಳಲ್ಲಿ ಮಾತ್ರ ಇರುತ್ತವೆ. ಹಾವು ಕಡಿತಕ್ಕೆ ಒಳಗಾದವರು ಬಂದರೆ ಆ್ಯಂಟಿ ಬಯೋಟೆಕ್ ಅಥವಾ TT ಚುಚ್ಚು ಮದ್ದು ಚುಚ್ಚಿ ಡಾಕ್ಟರ್ ಇಲ್ಲ ಅಥವಾ ವೆಂಟಿಲೇಷನ್ ಇಲ್ಲ ಎನ್ನುವ ಉತ್ತರ ಹೇಳಿ ದೊಡ್ಡಾಸ್ಪತ್ರೆಗೆ ಸಾಗಹಾಕುತ್ತಾರೆ.
ಮೊನ್ನೆ ಜಾನಕಮ್ಮನ ಕಥೆಯೂ ಹೀಗೆಯೇ ಆಗಿದ್ದು, ಹಾವು ಕಡಿದ ಕೂಡಲೇ ಹತ್ತಿರದ #ಮಳಲಿಮಕ್ಕಿ PHC ಯಲ್ಲಿ ಚಿಕಿತ್ಸೆ ಕೊಡಿಸಬೇಕಿತ್ತುಆದರೆ ಇಲ್ಲಿರುವ PHC ಹೆಚ್ಚಿನ ಸಮಯ ಕ್ಲೋಸ್ ಇರುವುದರಿಂದ ಕೋಣಂದೂರಿನ CHC ಗೆ ತೆರಳಿದ್ದಾರೆ. ಅಲ್ಲಿಯೂ ಚಿಕಿತ್ಸೆ ಕೊಡಲು ಡಾಕ್ಟರ್ ಇಲ್ಲ. ಅಲ್ಲಿನ ಸಿಬ್ಬಂದಿ ನೀವು ತೀರ್ಥಹಳ್ಳಿಗೆ ಹೋಗಿ ಎಂದಿದ್ದಾರೆ.
ಅಲ್ಲಿ ಇಲ್ಲಿ ಅಲೆದು ತೀರ್ಥಹಳ್ಳಿ ತಲುಪುವ ಮೊದಲೆ ಜಾನಕಮ್ಮನ ಜೀವ ಹೋಗಿದೆ.

ಹಾವಿನ ಕಡಿತಕ್ಕೆ Anti snkake venom ಔಷಧವನ್ನು ರೋಗಿಯ ರಕ್ತ ನಾಳಗಳಿಗೆ IV line ಮೂಲಕ ಕೊಡಬೇಕು ಇದನ್ನು ತರಬೇತಿ ಪಡೆದ ಒಬ್ಬ Staff ನರ್ಸ್ ಸಹ ಕೊಡಬಹುದು. ASV ಕೆಲವರಿಗೆ ಔಷಧ ಸಣ್ಣ ಪ್ರಮಾಣದ ಅಡ್ಡ ಪರಿಣಾಮ ಬೀರಬಹುದು ಅದಕ್ಕೂ ಔಷಧಗಳಿವೆ. Anti snake venom ಔಷಧವನ್ನು ಹತ್ತಿರದ PHC ಹಾಗು CHC ಗಳು ರೋಗಿಗೆ ನೀಡಿ ಹೆಚ್ಚಿನ ಚಿಕಿತ್ಸೆಗೆಗಾಗಿ ರೋಗಿಯನ್ನು ದೊಡ್ಡಾಸ್ಪತ್ರೆಗೆ ತೆರಳುವಂತೆ ಸಲಹೆ ನೀಡಿದರೆ ರೋಗಿ ಬದುಕುಳಿಯುವ ಸಾಧ್ಯತೆ ಹೆಚ್ಚು ಇರುತ್ತದೆ.
ಹಾವಿನ ಕಡಿತಕ್ಕೆ ಆಸ್ಪತ್ರೆಗಳಲ್ಲಿ ಸಿಗುವ Anti Snake venom ಔಷಧಿ ಮಾತ್ರ ಪರಿಹಾರ ತಕ್ಷಣ ದಾಖಲಾಗಿ ಚಿಕಿತ್ಸೆ ಪಡೆಯಬೇಕು.
ಬಹಳಷ್ಟು ಹಾವಿನ ಕಡಿತಗಳು ವಿಷವನ್ನು ಬಿಟ್ಟಿರುವುದಿಲ್ಲ ಇದಕ್ಕೆ dry bites ಎನ್ನುತ್ತಾರೆ ಇದನ್ನು ಗುರುತಿಸುವ, ASV ಅಡ್ಡ ಪರಿಣಾಮಗಳು, ವಿಷಕಾರಿ ಹಾವುಗಳನ್ನು ಗುರುತಿಸುವ,ಒಟ್ಟಾರೆ ಪ್ರತಿ ಜಿಲ್ಲೆಯ ಎಲ್ಲಾ ವೈದ್ಯರು ಹಾಗು ಸ್ಟಾಪ್ ನರ್ಸ್ ಗಳಿಗೆ ಹಾವಿನ ಕಡಿತದ ಚಿಕಿತ್ಸೆಯ ಬಗೆಗೆ ತರಬೇತಿ ನೀಡಿದರೆ ಗ್ರಾಮೀಣ ಭಾಗದ ಜನರು ಹಾವುಗಳ ಕಡಿತದಿಂದ ಮೃತಪಡುವುದನ್ನು ಗಣನೀಯವಾಗಿ ತಗ್ಗಿಸಬಹುದು.
ನಮ್ಮ ಶಿವಮೊಗ್ಗ ಜಿಲ್ಲೆಯ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿದರೆ ಅವರು ಹೇಳುವುದು ನಮ್ಮ ಜಿಲ್ಲೆಯ ಎಲ್ಲಾ ವೈದ್ಯರಿಗೆ ತರಬೇತಿ ಆಗಿದೆ ಎನ್ನುತ್ತಾರೆ ಆದರೆ ಶಿವಮೊಗ್ಗ ಜಿಲ್ಲೆಯ ಬಹುತೇಕ PHC ಹಾಗು CHC ಗಳಲ್ಲಿ ಹಾವಿನ ಕಡಿತಕ್ಕೆ ಚಿಕಿತ್ಸೆಯೇ ಸಿಗುವುದಿಲ್ಲ ಎನ್ನುವುದು ವಿಶೇಷ ಮತ್ತು ಅಲ್ಲಿ ಜಿಲ್ಲಾಸ್ಪತ್ರೆಗೆ ತೆರಳಿ ಎನ್ನುವ ಉತ್ತರವೆ ಬರುತ್ತದೆ. ಆರೋಗ್ಯ ಮಂತ್ರಿ ದಿನೇಶ ಗುಂಡೂರಾವ್ ಅವರೆ ಸರ್ಕಾರದಿಂದ ಹಾವಿನ ಕಡಿತಗಳ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಇದ್ದರೂ ಹಾವಿನ ಕಡಿತಕ್ಕೆೊಳಪಟ್ಟ ಗ್ರಾಮೀಣ ಪ್ರದೇಶದ ಜನರು ಸಕಾಲಕ್ಕೆ PHC ಅಥವಾ CHC ತಲುಪಿದರೂ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಗಮನಿಸಿ.
ಇಲ್ಲಿನ ಆಸ್ಪತ್ರೆಯ ಸಿಬ್ಬಂದಿಗಳು ಹಾವು ಕಡಿತಕ್ಕೆ ಒಳಗಾದವರಿಗೆ ತಕ್ಷಣ ಅವರಲ್ಲಿ ದಾಸ್ತಾನು ಇರುವ ಆ್ಯಂಟಿ ಸ್ನೇಕ್ ವೇನಮ್ ನೀಡದೆ ಜಿಲ್ಲಾಸ್ಪತ್ರೆಗೆ ಹೋಗುವಂತೆ ಹೇಳುತ್ತಿರುವುದರಿಂದ ಸಾವುಗಳು ಹೆಚ್ಚುತ್ತಿವೆ.
- ಸಂಗ್ರಹ : ಅರುಣ್ ಪ್ರಸಾದ್

- ಲೇಖನ : ನಾಗರಾಜ್ ಬೆಳ್ಳೂರು
