ಬೇಂದ್ರೆಯವರ ಗೀತೆಗಳಲ್ಲಿ ಶ್ರಾವಣ

ಭೂಮಿ ಹಾಗೂ ಶ್ರಾವಣ ಎರಡು ಬೇಂದ್ರೆಯವರ ಕಾವ್ಯದ ಮುಖ್ಯ ನೆಲೆಗಳು ಹಾಗಾಗಿಯೇ ಶ್ರಾವಣ ಅವರಿಗೆ ಸೃಜನಶೀಲತೆಯ ಸಂಕೇತ. ಬೇಂದ್ರೆಯವರ ಶ್ರಾವಣ ಗೀತೆಗಳು ಬಗ್ಗೆ ಡಾಕ್ಟರ್ ವಿಜಯದಬ್ಬೆ ಅವರು ಹೇಳಿದ ಈ ನುಡಿಗಳೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ. ಲೇಖಕ ಸುಜಾತಾ ರವೀಶ್ ಅವರ ಕವಿ ಬೇಂದ್ರೆಯವರ ಗೀತೆಗಳಲ್ಲಿ ಶ್ರಾವಣದ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಕಾವ್ಯಾಸಕ್ತಿ ಮಾತ್ರವಲ್ಲದೆ ಅನೇಕ ರಂಗಗಳಲ್ಲಿ ಸೇವೆ ಸಲ್ಲಿಸಿದ ಬೇಂದ್ರೆಯವರದು ಬಹುಮುಖ ಪ್ರತಿಭೆ . ನವೋದಯ ಕಾವ್ಯದ ದೇಶಭಕ್ತಿ, ಸುಧಾರಣಾ ಉತ್ಸಾಹ , ವಿಮರ್ಶಾತ್ಮಕ ವರ್ತನೆ ಎಲ್ಲವನ್ನೂ ಬರವಣಿಗೆಯಲ್ಲಿ ಮಾತ್ರವಲ್ಲದೆ ಕಾರ್ಯಾಚರಣೆಯಲ್ಲೂ ತಂದ ವ್ಯಕ್ತಿ . ಹಾಗಾಗಿಯೇ ಬೇಂದ್ರೆಯವರು ವಿಶೇಷವಾಗುತ್ತಾರೆ, ವಿಶಿಷ್ಟವಾಗುತ್ತಾರೆ, ವ್ಯಕ್ತಿಯಾಗಿ ಮಾತ್ರವಲ್ಲದೆ ಸಂಸ್ಥೆಯಾಗಿ ಜನಮಾನಸದಲ್ಲಿ ಅಚ್ಚಳಿಯದ ಕಾವ್ಯ ವಾಗುತ್ತಾರೆ. ಈ ಯುಗ ಕಂಡ ಪ್ರಮುಖ ಕವಿಯಾಗಿ ಗುರುತಿಸಲ್ಪಡುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು .

ಬೇಂದ್ರೆಯವರ ಕಾವ್ಯ ಎಂದರೆ ಅವರ ನಾದಲೋಲತೆ,ಶಬ್ದ ಗಾರುಡಿಗತೆ, ಜಾನಪದ ಸಾಮೀಪ್ಯದ ಹೃದ್ಯ ಶೈಲಿ, ಪ್ರಕೃತಿಯತ್ತ ಕವಿಯ ನೋಟದ ವೈಭವ, ಸಾಮಾಜಿಕ ಚಿಂತನೆ, ಆಧ್ಯಾತ್ಮಿಕತೆ, ಪ್ರೇಮಗೀತೆಗಳ ಭೋಗ್ಯತೆ, ಇದೆಲ್ಲವನ್ನು ಒಳಗೊಂಡ ಒಂದು ಮಹಾ ದರ್ಶನ. ಬೇಂದ್ರೆಯವರು ಕಾವ್ಯವನ್ನ ಬರೆದದಲ್ಲ ಬೇಂದ್ರೆಯವರ ಬದುಕೇ ಕಾವ್ಯವಾಗಿದ್ದು.

ಬೇಂದ್ರೆಯವರ ಕಾವ್ಯದ ಬಗ್ಗೆ ಹೇಳುವುದಾದರೆ ಪ್ರಸಿದ್ಧ ವಿಮರ್ಶಕ ಅಮೂರರು ಹೇಳಿದಂತೆ “ಬೇಂದ್ರೆ ಕಾವ್ಯ ತಿಳಿಯುವುದಲ್ಲ ಹೊಳೆಯುವುದು” ಅಂದರೆ ಪ್ರತಿ ಓದಿಗೊಮ್ಮೆ ಹೊಸ ಹೊಳಹು ಮೂಡಿಸುವ ಅಗಾಧ ಕಲ್ಪನೆಗೆ ಅನೂಹ್ಯ ಅವಕಾಶಗಳ ಒದಗಿಸುವ ಮಹಾನ್ ಕೋಶ ಅದು. ಅರ್ಥಮಾಡಿಕೊಂಡಿರುವೆ ಎಂದು ಹೇಳುವ ಧಾರ್ಷ್ಟ್ಯ ಖಂಡಿತ ನನಗಿಲ್ಲ. ಆ ಪ್ರಯತ್ನದಲ್ಲಿರುವ ನನ್ನ ಅಲ್ಪಮತಿಗೆ ಗೋಚರವಾದ ಕೆಲವೊಂದು ಅಂಶಗಳನ್ನು ವಿನಯದಿಂದ ನಿಮ್ಮ ಮುಂದೆ ಇಡಲು ಬಯಸುತ್ತೇನೆ ಅಷ್ಟೇ. ನ್ಯೂನ್ಯತೆ ತಪ್ಪುಗಳನ್ನು ದಯವಿಟ್ಟು ಮನ್ನಿಸಬೇಕು.

ಕನ್ನಡದಲ್ಲಿ ಶ್ರಾವಣವನ್ನು ಬೇಂದ್ರೆಯವರಷ್ಟು ಅಪ್ಪಿ ಆದರಿಸಿದ ಕೊಂಡಾಡಿದ ಕವಿ ಇನ್ನೊಬ್ಬರಿಲ್ಲ. ಹಾಗಾಗಿಯೇ ಅಡಿಗರು ಬೇಂದ್ರೆ ಅವರನ್ನು “ಶ್ರಾವಣದ ಕವಿ” ಎಂದು ಕರೆದರು ಎರಡೂ ಅರ್ಥದಲ್ಲಿ. ಹಾಡಾಗಬಲ್ಲ ಬೇಂದ್ರೆ ಗೀತೆಗಳ ಗೇಯತೆಗೂ ಶ್ರಾವಣದ ಬಗ್ಗೆ ಬರೆದ ಬಗ್ಗೆಯೂ. ಬೇಂದ್ರೆಯವರ ಪಾಲಿಗೆ ಶ್ರಾವಣ ಬರೀ ಮಾಸವಲ್ಲ ಅದೊಂದು ಋತುವಿಲಾಸ; ಹುಟ್ಟಿನ ಗುಟ್ಟು ಕಂಡುಕೊಂಡ ಅನುಭವ ವಿಸ್ಮಯ ಸೌಂದರ್ಯ!. ಬೇಂದ್ರೆ ಅವರಿಗೆ ಶ್ರಾವಣ ಮೆಚ್ಚಾದ ಬಗ್ಗೆ ಅವರ ಮಾತುಗಳಲ್ಲೇ ಹೇಳುವುದಾದರೆ “ನನ್ನ ಬಾಳುವೆಯದೊಂದು ಶ್ರಾವಣದ ಹೆಗಲು. ಶ್ರಾವಣ ನನಗೆ ಹೊಸತನವನ್ನು ತರುತ್ತದೆ.” ಹೀಗೆ ಶ್ರಾವಣದ ಹೊಸತನ ಚೈತನ್ಯ ಲಾಲಿತ್ಯ ನಾವೀನ್ಯಗಳು ಬೇಂದ್ರೆಯವರ ಅನೇಕ ಕವಿತೆಗಳಲ್ಲಿ ಒಡಮೂಡಿದೆ . ಬೇಂದ್ರೆ ಅವರು ಶ್ರಾವಣದ ಶುಕ; ಚೈತ್ರದ ಪಿಕ. ಸರಿ ಸುಮಾರು 11 ಕವಿತೆಗಳಲ್ಲಿ ಶ್ರಾವಣವನ್ನು ವರ್ಣಿಸಿದ್ದಾರೆ ನಮ್ಮ ಈ ಶ್ರಾವಣ ಕವಿ. ಪ್ರತಿಯೊಂದು ಕವಿತೆಯೂ ಅಗಾಧ ಅರ್ಥವಿಸ್ತಾರ ಹೊಂದಿದ್ದು ಪ್ರತಿಯೊಂದರ ವರ್ಣನೆಯೇ ಒಂದು ಲೇಖನವಾಗುವಷ್ಟು ಹಿರಿದು. ಹಾಗಾಗಿ ಸ್ಥೂಲವಾಗಿ ಅವುಗಳನ್ನು ಪ್ರಕೃತಿ ವರ್ಣನೆ, ಮನಸಿನ ಭಾವಗಳ ಅನಾವರಣ, ವ್ಯಕ್ತೀಕರಣ,ಜೀವನದೊಂದಿಗೆ ಹೋಲಿಕೆ ಮತ್ತು ಸಾಮಾಜಿಕ ಕಳಕಳಿ ಹೇಗೆ ವರ್ಗೀಕರಣ ಮಾಡಿ ಅವುಗಳ ಪ್ರಸ್ತಾಪ ಮಾಡುತ್ತಾ ಹೋಗುವೆ.

ಪ್ರಕೃತಿ ವರ್ಣನೆ

ಹಾಡು ಪಾಡು ಕವನ ಸಂಕಲನದ “ಶ್ರಾವಣ ಬಂತು ಕಾಡಿಗೆ” ಈ ಕವಿತೆಯನ್ನು ಮುಂಬೈ ಮಾರ್ಗದ ಖಂಡಾಲಾ ಘಟ್ಟದಲ್ಲಿನ ಪ್ರಕೃತಿ ಸೌಂದರ್ಯವನ್ನು ಶ್ರಾವಣ ಮಾಸದ ಸಮಯದಲ್ಲಿ ಕಂಡು ರಚಿಸಿದ ಗೀತೆ. ಒಂದೇ ಗೀತೆಯಲ್ಲಿ ಮೂರು ರೀತಿಯ ಅವಲೋಕನವನ್ನು ಹೊಂದಿರುವ ವಿಶಿಷ್ಟಗೀತೆ .ಇದು ಬಾಲ ಸಹಜ ಕುತೂಹಲ, ಕವಿಯ ಸೌಂದರ್ಯ ಪ್ರಜ್ಞೆ ಹಾಗೂ ಅವಧೂತ ಭಾವವನ್ನು ಅನುಕ್ರಮವಾಗಿ ಹೊರಹೊಮ್ಮಿಸುವ ಈ ಗೀತೆ ಶ್ರಾವಣ ಪಶ್ಚಿಮದ ಕಡಲಿನಿಂದ ಹುಟ್ಟಿ ಘಟ್ಟಗಳನ್ನು ದಾಟಿ ಊರುಕೇರಿಗೆ ಬಂದು ಹಬ್ಬ ಸಂಭ್ರಮವನ್ನು ಆಚರಿಸುವ ಬಗ್ಗೆ ಮಗುಸಹಜ ಕುತೂಹಲದಲ್ಲಿ ಹೇಳುತ್ತದೆ. ಇಲ್ಲಿ ಕವಿಗೆ ಬೆಟ್ಟ ಕುತನಿ ಅಂದರೆ ಹಸಿರು ವೆಲ್ವೆಟ್ನಂಗಿಯನ್ನು ತೊಟ್ಟ ಕೂಸಿನಂತೆ ಕಾಣುತ್ತದೆ, ಬಣ್ಣದ ಹೂಗಳು ಮದುಮಗನ ತಲೆಯ ಬಾಸಿಂಗದಂತೆ, ಹಸಿರುಟ್ಟ ನೆಲ ಹೊಲಗಳು ಬಸುರಿ ಹೆಣ್ಣು ಮಗಳ ಹಾಗೆ ಕಾಣುವ ಕವಿ ಕಲ್ಪನೆ ಇಲ್ಲಿ ಶ್ರಾವಣದ ವೈಭವವನ್ನು ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುತ್ತದೆ. ಮುಂದೆ ಪ್ರತಿಯೊಂದು ಗುಡ್ಡವು ಸ್ಥಾವರ ಲಿಂಗದಂತೆ ತೋರಿ ಮೋಡಗಳು ಅದಕ್ಕೆ ಅಭಿಷೇಕ ಮಾಡುವ ಕುಂಭಗಳ ಹಾಗೆ, ಭೂಮಿಗೆ ಶ್ರಾವಣ ಹಾಲು ಕುಡಿಸುವ ರೀತಿ ಹೇಳುತ್ತಾ ಜಗದ್ಗುರು ಕೃಷ್ಣ ಅರವಿಂದರು ಅವತಾರವೆತ್ತಿ ಸಂತಸ ತಂದ ಮಾಸ ಎನ್ನುವಲ್ಲಿಗೆ ಅವಧೂತ ಪ್ರಜ್ಞೆಯಲ್ಲಿ ಕವನ ಮುಗಿಯುತ್ತದೆ.

ಮುಂದೆ ಎಷ್ಟೋ ವರ್ಷಗಳ ಬಳಿಕ ತಮ್ಮ ಜೀವನದ ಕಡೆಯ ಕಾಲದಲ್ಲಿ ಮುಂಬೈಗೆ ಹೋಗುವಾಗ ಶ್ರಾವಣದ ಸಮಯದಲ್ಲಿ ಇದೇ ರೀತಿ ಖಂಡಾಲದಲ್ಲಿ ವಾಹನ ನಿಲ್ಲಿಸಿ ಮತ್ತೆ ಅದೇ ದೃಶ್ಯ ವೈಭವವನ್ನು ಕಾಣುತ್ತಾ ಈ ಕವಿತೆಯನ್ನು ನೆನೆಸಿಕೊಂಡರು ಎಂದು ಅವರ ನಿಕಟವರ್ತಿಗಳಾದ ಜೀವಿ ಕುಲಕರ್ಣಿ ಅವರು ಸ್ಮರಿಸಿಕೊಂಡಿದ್ದಾರೆ. ಶ್ರಾವಣದ ಮಳೆ ಕಡಲಿನ ಮೇಲೆ ಬೀಳುವುದನ್ನು ರಾವಣ ಕುಣಿದ ಹಾಗೆ, ಹಾಗೂ ಭೈರವ ಎಂದರೆ ಘೋರ ಶಬ್ದದ ಗಾಳಿಯ ಬಣ್ಣನೆಯನ್ನು ಸಾರುವ ಈ ಸಾಲುಗಳು ನೋಡಿ ಕಡಲಿಗೆ ಬಂತು ಶ್ರಾವಣ ಕುಣಿದಾಂಗ ರಾವಣ ಕುಣಿದಾವ ಗಾಳಿ ಬೈರವ ರೂಪ ತಾಳಿ ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ ಶ್ರಾವಣ ಬಂತು.

ಹಾಗೆಯೇ ಮತ್ತೊಂದು ಶ್ರಾವಣ ಗೀತೆ ಸೂರ್ಯಪಾನ ಕವನ ಸಂಕಲನದ “ಪ್ರತಿವರ್ಷದಂತೆ ಬಂತು ಶ್ರಾವಣ” ಇಲ್ಲಿ ಭೂಮಿತಾಯಿಯ ಸೊಬಗನ್ನು ಸೆರೆಹಿಡಿಯುವ ಈ ಸಾಲುಗಳನ್ನು ನೋಡಿ

ಆಹಾ ಭೂಮಿ ತಾಯಿಯ ಉಸಿರು
ಅವಳ ಆ ಬಸಿರು
ಪಚ್ಚೆಯಾ ಹಸಿರು
ಬಂತು ಅರತು
ಬುದ್ಧಿಗೆ ಭಕ್ತಿ ಬೆರತು

ಶ್ರಾವಣ ಎಂದರೆ ಶ್ರವಣ ಎಂದೂ ಅರ್ಥ. ಬೇಂದ್ರೆಯವರ ಕವಿತೆಗಳು ದೃಶ್ಯಗಳನ್ನು ಪದಗಳಾಗಿಸಿ ಶ್ರಾವ್ಯವಾಗಿಸಿ ಕಲ್ಪನೆಯನ್ನು ಕಣ್ಮುಂದೆ ತಂದು ನಿಲ್ಲಿಸುವ ಅದ್ಭುತ ಕಾರ್ಯವೆಸಗುತ್ತವೆ. ಹಾಗಾಗಿ ಶ್ರಾವಣ ಕವಿತೆಗಳ ಶ್ರವಣ ಶ್ರಾವಣದ ಮೊರೆತ ಭೋರ್ಗರೆತದ ಅನುಭವವನ್ನೇ ನಮ್ಮದಾಗುವಂತೆ ಮಾಡುತ್ತದೆ.

ಮನಸಿನ ಭಾವಗಳ ಅನಾವರಣ

ಶ್ರಾವಣ ಮಾಸವೆಂದರೆ ಬೇಂದ್ರೆಯವರಿಗೆ ಸುಖ-ದುಃಖದ ಮಾಲೆಗಳು.ಬೇಂದ್ರೆ ಅವರ ಆರಾಧ್ಯದೈವವಾದ ಕೃಷ್ಣ ಹಾಗೂ ನೆಚ್ಚಿನ ಗುರು ಅರವಿಂದರು ಹುಟ್ಟಿದ್ದು ಈ ಶ್ರಾವಣ ಮಾಸದಲ್ಲಿಯೇ ಮಾತ್ರವಲ್ಲದೆ ದೇಶದ ಸ್ವಾತಂತ್ರ್ಯ ದೊರೆತದ್ದು ಶ್ರಾವಣದಲ್ಲಿಯೇ. ಆದ್ದರಿಂದ ಕವಿಗೆ ಶ್ರಾವಣದ ಬಗ್ಗೆ ಮತ್ತಷ್ಟು ಹೆಚ್ಚು ಪ್ರೀತಿ. ಸಂತಸದಿಂದ ಶ್ರಾವಣದ ವೈಭವವನ್ನು

ಮಣ್ಣು ಹುಡಿಯ ಕಣಕಣವು
ಕಣ್ಣು ಪಡೆದ ಹಾಗಿದೆ
ಬಾನಿನಂಚಿನಲ್ಲಿ ಮೋಡ
ನೋಡಲಿದನೆ ಬಾಗಿದೆ…ಎಂದು ಹರ್ಷಿಸುತ್ತಾರೆ.

ಭೂಮಿ ತಾಯಿಯನ್ನು ಮೈತುಂಬಿ ಕುಣಿಯುವ ಜೋಗತಿಯ ಭಕ್ತೋನ್ಮತ್ತತೆಯ ಕುಣಿತಕ್ಕೆ ಹೋಲಿಸುವ ಸಾಲುಗಳು

ಹೂವ ಹಡಲಿಗೆಯನು ಹೊತ್ತ
ಭೂಮಿ ತಾಯಿ ಜೋಗತಿ
ಮೈತುಂಬಿ ಕುಣಿಯುತಿಹಳ
ನಂತಕಾಲವೀಗತಿ

ಸಖೀಗೀತಾ ಸಂಕಲನದ “ಶ್ರಾವಣದ ವೈಭವ” ಕವನದ ಈ ಸಾಲುಗಳು ಕವಿ ಮನದ ನೈರಾಶ್ಯ ಭಾವವನ್ನು ಎತ್ತಿ ತೋರಿಸುತ್ತವೆ. ಹಾದಿ ಬದಿಯ ಬೇಲಿ ಹೂಗಳನ್ನು ಕುರಿತು ಹೇಳುವ ಈ ಸಾಲುಗಳು ಅಂದವಾಗಿದ್ದೂ ಒಳ್ಳೆಯ ಗುಣವಿರದ ಮನುಷ್ಯ ಸ್ವಭಾವಕ್ಕೂ ಎಷ್ಟು ಸೂಕ್ತವಾಗಿ ಹೊಂದುತ್ತದೆ ಅಲ್ಲವೇ?

ರಂಗು ಇಹುದು ರೂಪವಿಹುದು
ಗಂಧ ಒಳ್ಳಿತಿಲ್ಲವು
ನಯವು ನುಣುಪು ಇದ್ದು ಏನು?
ವ್ಯರ್ಥವಾಯಿತೆಲ್ಲವು

ಶ್ರಾವಣ ಮಾಸವು ಅವರ ಇಬ್ಬರು ಪುತ್ರರ ಅಗಲಿಕೆಯ ಕಾಲವೂ ಆಗಿದ್ದು ಅವರ ಪತ್ನಿಯ ದೇಹಾಂತವಾಗಿದ್ದು ಸಹ ಶ್ರಾವಣದಲ್ಲಿಯೇ . ಈ ಶ್ರಾವಣದ ಮೋಹ ಅವರಿಗೆ ಅದೆಷ್ಟು ಎಂದರೆ ಅವರ ಪತ್ನಿಯ ಸಾವಿನ ಹೃದಯವಿದ್ರಾವಕ ಸನ್ನಿವೇಶದಲ್ಲಿಯೂ ಅವರು ಶ್ರಾವಣವನ್ನು ಮರೆಯಲಾರರು.

ತವರು ಮನೆಗೆ ಹೊಂಡೋ
ಸಡಗರವೇ ಸಡಗರ
ಮಲ್ಲಿಗೆ ಮಾಲಿ ತುರುಬಿಗೆ
ಅರಿಶಿಣಾ ಕುಂಕುಮ ಗಲ್ಲ ಹಣಿ
ಹೊಸ ಸೀರಿ ತುಂಬಿದ ಉಡಿ
ಉರಿಯೋ ಹಸಿ ಮಣಿಗೆ
ಹೊರಟಿತ್ತು ಸವಾರಿ
ಶ್ರಾವಣಕ್ಕೆ ಹೊಸ ಹರೆ

ವ್ಯಕ್ತೀಕರಣ

ಕುವೆಂಪು ಅವರದು ಪ್ರಕೃತಿಯನ್ನು ಆರಾಧಿಸುವ ಭಾವ. ಆದರೆ ಬೇಂದ್ರೆಯವರದು ಪ್ರಕೃತಿಯೊಡನೆ ತಾಧ್ಯಾತ್ಮವನ್ನು ತಲ್ಲೀನತೆಯನ್ನು ಹೊಂದಿದ ಭಾವ . ಹಾಗಾಗಿಯೇ ಅವರು ಪ್ರಕೃತಿಯೊಳಗೆ ಒಂದಾಗಿ ಅದನ್ನು ತಮ್ಮಂತೆ ಒಂದು ಜೀವ ಎನ್ನುವಂತೆ ಕಾಣುತ್ತಾರೆ. ಮೊದಲೇ ಹೇಳಿದಂತೆ ಬೇಂದ್ರೆಯವರಿಗೆ ಶ್ರಾವಣ ಎಂದರೆ ಒಂದು ಮಾಸವಲ್ಲ ವ್ಯಕ್ತಿ. ಅದನ್ನು ಒಂದು ವ್ಯಕ್ತಿ ಎಂದೇ ಪರಿಗಣಿಸಿ ಅದರೊಡನೆ ಸಂವಾದಿಸುತ್ತಾರೆ ಸಂಭಾಷಿಸುತ್ತಾರೆ ಸಂವೇದಿಸುತ್ತಾರೆ . ಅವರ “ಅಗೋ ಅಲ್ಲಿ ದೂರದಲ್ಲಿ” ಕವನ ಹಾಗೂ “ಬಂದಿಕಾರ ಶ್ರಾವಣ” ಕವನಗಳು ಇದಕ್ಕೆ ಸೂಕ್ತ ಉದಾಹರಣೆಗಳು.

“ಅಗೋ ಅಲ್ಲಿ ದೂರದಲ್ಲಿ” ನಾದಲೀಲೆ ಕವನ ಸಂಕಲನದ ಈ ಕವನದಲ್ಲಿ ಶ್ರಾವಣನನ್ನು ಒಂದು ತುಂಟ ಹುಡುಗನಾಗಿ ನೋಡುತ್ತಾ

ಏಕೆ ಬಂದೆ? ಏನು ತಂದೆ
ಹೇಳೋ ಹೇಳು ಶ್ರಾವಣ
ನೀ ಬಂದ ಕಾರಣ

ಎಂದು ಅವನು ಬಂದ ಕಾರಣವನ್ನು ಕೇಳುತ್ತಾರೆ. ಮುಂದೆ ಶ್ರಾವಣನನ್ನ ವರ್ಣನೆ ಮಾಡುತ್ತಾ

ಗುಳ್ಳಗಂಜಿ ತೊಡವ ತೊಟ್ಟು
ಹಾವಸೆಯ ಉಡುಪನುಟ್ಟು
ನಗುವ ತುಟಿಯ ನೆನೆದ ಎದೆಯ
ತರಳ ನೀನು ಶ್ರಾವಣ

ಎಂದು ಅವನ ವೇಷಭೂಷಣವನ್ನು ಬಣ್ಣಿಸುತ್ತಾರೆ. ಮೋಡ ಕಟ್ಟಿದ ಕಣ್ಣಿನ ಮುದಿಯ ತಂದೆ ಮುಗಿಲರಾಯ ಎನ್ನುತ್ತಾರೆ ಹಾಗೂ ಭೂಮಿ ತಾಯಿ ಅವನ ತಾಯಿ ಎಂದು ಹೇಳುತ್ತಾರೆ. ಇವರಿಬ್ಬರ ಮುದ್ದಿನ ಮಗುವಾದ ಶ್ರಾವಣನನ್ನು ಬಾ ಎಂದು ಕರೆಯುತ್ತಾರೆ. ಅವನ ಆಗಮನದ ಸಂಭ್ರಮವನ್ನು ಸಂತಸವನ್ನು ಸಾರುವ ಈ ಸಾಲುಗಳು

ಮರದ ಹನಿಯ ಮಣಿಗಳನ್ನು
ಅತ್ತ ಇತ್ತ ತೂರುತಾ
ಹಸಿರು ಮುರಿವ ತೊಂಗಲನ್ನು
ಕೆಳಗೆ ಮೇಲೆ ತೂಗುತಾ
ಬರುವ ನಿನ್ನ ಅಂದ ಚಂದ
ಸೂಸು ಸೊಗಸು ಆನಂದ

ಆಹಾ! ಮಳೆಯ ಕಲ್ಪನೆಯೇ ಕಣ್ಮುಂದೆ ಕಟ್ಟಿತಲ್ಲವೇ?

ಗಂಗಾವತರಣ ಕವನಸಂಕಲನದ “ಬಂದೀಕಾರ ಶ್ರಾವಣ” ಕವನದಲ್ಲಿ ಬಂಧನದಲ್ಲಿರುವವರನ್ನು ಬಂಧಮುಕ್ತ ಮಾಡುವಂತಹವನು ಎಂದು ಬಂಧನದಲ್ಲಿ ಹುಟ್ಟಿದ ಕೃಷ್ಣನನ್ನು ನಂದಗೋಪನ ಮಡದಿಯ ಬಳಿಗೆ ಕರೆದೊಯ್ದದ್ದು ಇದೇ ಶ್ರಾವಣ ಮಾಸದಲ್ಲಿಯೇ. ಅಂತೆಯೇ ಭವ ಬಂಧನದಿಂದ ಬಿಡಿಸುವಂತಹ ದಾರಿ ತೋರುವ ಜಗದ್ಗುರು ಅರವಿಂದರ ಜನ್ಮವಾದ್ದದ್ದು ಇದೇ ಶ್ರಾವಣದಲ್ಲಿಯೇ. ಹಾಗೆಯೇ ಈ ಶ್ರಾವಣವನ್ನು ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ಬಂಧ ಮುಕ್ತಗೊಳಿಸುವವ ಎಂಬ ಅರ್ಥದಲ್ಲಿ ಹೇಳುವ ಈ ಸಾಲುಗಳು ನೋಡಿ…

ಬಂದಿಯೊಳಗಿದ್ದವರ ಬಂಧನವ ಬಿಡಿಸುವಾ ಬಂದಿಕಾರಾ ಶ್ರಾವಣಾ
ಬಂಧನದಲಿಹರೋ ಜಗವಂದಿತರನಿಂದಿತರು ಬಂದೆ ಬಿಡಿಸೈ ಶ್ರಾವಣಾ

ಮುಂದೆ ಸಿಗಲಿರುವ ಸ್ವಾತಂತ್ರ್ಯದ ಹಿರಿಮೆಯನ್ನು ಸಾರುವ ವಂದಿಮಾಗದ ನೀನು ಎಂದು ಹೇಳುತ್ತಾ ಭರವಸೆಯ ಆಶಾವಾದವನ್ನು ಸೂಚಿಸುತ್ತವೆ ಈ ಸಾಲುಗಳು

‘ಕತ್ತಲೆಯ ತುತ್ತ ತುದಿ ಹತ್ತಿರವೇ ಬೆಳಕು ಬದಿ’

ಎಂದು ಸಾರೋ ಶ್ರಾವಣ
ಮುಂದೆ ಬರುವ ಸ್ವತಂತ್ರ ವಂದಿಮಾಗಧ ನೀನು
ಬಂಧುರಾಂಗಾ ಶ್ರಾವಣಾ

ಹೊಸ ಭವಿಷ್ಯದ ಹರಿಕಾರನಂತೆ ಬಿಡುಗಡೆಯ ಸಂಕೇತದಂತೆ ಶ್ರಾವಣನನ್ನು ಪರಿಭಾವಿಸಿ ಕೋರಿಕೊಳ್ಳುವ ಈ ಸಾಲುಗಳು ಶ್ರಾವಣಕ್ಕೂ ಬೇಂದ್ರೆಯವರಿಗೂ ಇರುವ ಅವಿನಾಭಾವ ಸಂಬಂಧಕ್ಕೆ ಸಾಕ್ಷಿ ಎನ್ನುವಂತೆ ತೋರುತ್ತವೆ.

ಬಂಧು ನೀ ಬೆಳೆಗೆ ಉಕ್ಕಂದ ನೀ ಹೊಳೆಗೆ ಆ ನಂದಸಿಂಧೋ ಶ್ರಾವಣಾ ಒಂದು ಋತುಗೀತೆ ಏಕಕಾಲದಲ್ಲಿ ಚಾರಿತ್ರಿಕ ಪೌರಾಣಿಕ ಹಾಗೂ ಸಮಕಾಲೀನ ನೆಲೆಗಳಿಗೆ ಹೇಗೆ ಸಂವಾದಿಯಾಗಬಹುದು ಎಂಬುದನ್ನು ಇಲ್ಲಿ ಕಾಣಬಹುದು.

ಜೀವನದೊಂದಿಗೆ ಹೋಲಿಕೆ

ಉಯ್ಯಾಲೆ ಕವನ ಸಂಕಲನದ ಶ್ರಾವಣದ ಹಗಲು ಕವನದಲ್ಲಿ ಕವಿಗಳು ಜೀವನಕ್ಕೂ ಶ್ರಾವಣಕ್ಕೂ ಮದ್ಯೆ ಇರುವ ಸಾಮ್ಯತೆಗಳನ್ನು ಹೇಳುತ್ತಾ ಜೀವನವನ್ನು ಶ್ರಾವಣಕ್ಕೆ ಹೋಲಿಸುತ್ತಾರೆ. ಶ್ರಾವಣದಲ್ಲಿ ಆಗಾಗ ಬರುವ ಹೊಂಬಿಸಿಲು ಮತ್ತು ಸೋನೆ ಮಳೆಯಂತೆ ಬದುಕಿನಲ್ಲಿಯೂ ಕಷ್ಟ ಸುಖಗಳು. ಶ್ರಾವಣದಲ್ಲಿ ಗಾಳಿ ಜೋರಾಗಿ ಭೋರಾಡುವಂತೆ ಬದುಕು ಸಹ ಕಷ್ಟ ಸುಖಗಳ ಮಧ್ಯದಲ್ಲಿ ಹೊಯ್ದಾಟವಾಡುತ್ತಾ ತೂಗು ಜೋಕಾಲಿಯಾಗಿದೆ ಎಂದು ಹೇಳುತ್ತಾರೆ.

ನೆಲ ಹಸಿರು,ಹೊಲ ಹಸಿರು,
ಗಿಡ ಗಂಟೆ ಹಸಿರು ಫಲ ಏನು?

ಎಂಬ ನಿರಾಶೆಯ ಸಾಲುಗಳಿಂದ ಆರಂಭವಾಗುವ ಕವಿತೆ ಅವರ ಬದುಕಿನ ಕಹಿ ವೇದನೆಗಳನ್ನು ನೆನಪಿಸುವ ಹಾಗಿದೆ. ಬದುಕಿನ ದ್ವಂದ್ವ ಗೊಂದಲಗಳ ಡೋಲಾಯಮಾನ ಸ್ಥಿತಿಗೆ ಈ ಸಾಲುಗಳು ಉತ್ತಮ ನಿದರ್ಶನವಾಗಿ ನಿಲ್ಲುತ್ತವೆ.

ತೂಗಿ ತಲೆ ತೂಗುವುದು ತಲ್ಲೀನವಾಗಿ
ಬೇಗನೆ ಮತ್ತೆ ಹಾಲ್ಗುಡಿದ ಹಾವಾಗಿ
ನನ್ನ ಬಾಳುವೆಯಹುದು ಶ್ರಾವಣದ ಹಗಲು
ತನ್ನ ಹೊಯ್ದಾಟದಲಿ ಅದಕ್ಕಿಂತ ಮಿಗಿಲು.

ಸಾಮಾಜಿಕ ಕಾಳಜಿ

ಆಧ್ಯಾತ್ಮದಲ್ಲಿ ನೆಲೆ ಕಂಡ ಕವಿಗೆ, ಆರ್ಷದೃಷ್ಟಿಯನ್ನೇ ಆಶ್ರಯಿಸಿದವನಿಗೆ, ಇತಿಹಾಸ ಪುರಾಣಗಳ ನಿತ್ಯ ನೂತನ ಅರ್ಥಗಳನ್ನು ಸದಾ ಅನುಭವದಲ್ಲಿ ಕಾಣುತ್ತಿದ್ದ ಕವಿಗೆ ದೇವರು ಎಲ್ಲೆಲ್ಲೂ ಅವತಾರವಾಗಿ ಕಾಣುತ್ತಿದ್ದು ಆಚ್ಚರಿಯೇನಲ್ಲ. ಕವಿಮನದ ವೈದಿಕ ಉಪನಿಷತ್ ಪೌರಾಣಿಕ ಮತ್ತು ಚಾರಿತ್ರಿಕ ಜ್ಞಾನದ ಅರಿವು ಹರವುಗಳು ನಿಜಕ್ಕೂ ಕವಿಗಳ ಬಗೆಗಿನ ಆದರ ಅಭಿಮಾನಗಳನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ಯುತ್ತದೆ.

ನಾಕುತಂತಿ ಸಂಕಲನದ “ಮತ್ತ ಶ್ರಾವಣ” “ಮತ್ತೆ ಶ್ರಾವಣ ಬಂದ” ಈ ಎರಡು ಕವನಗಳು ಒಂದೇ ದಿನ ರಚಿತವಾಗಿತ್ತು ಎಂದು ಹೇಳುತ್ತಾರೆ . ಮೊದ ಮೊದಲಿನ ಓದುಗಳಲ್ಲಿ ಅರ್ಥವಾಗದೆ ಕಬ್ಬಿಣದ ಕಡಲೆ ಎಂದು ಸುಮ್ಮನಾಗಿದ್ದೆ. ಒಂದು ರೀತಿಯಲ್ಲಿ ಕಷ್ಟಸಾಧ್ಯವಾದ ಕನಕನ ಮುಂಡಿಗೆಗಳಂತೆ ಇವುಗಳನ್ನ ಬೇಂದ್ರೆಯವರ ಮುಂಡಿಗೆಗಳು ಅಂತ ಕರೆದರೂ ತಪ್ಪೇನಿಲ್ಲ. ಔದಂಬರ ಗಾಥೆಯಲ್ಲಿನ ಟಿಪ್ಪಣಿಯ ಸಹಾಯದಿಂದ ಸ್ವಲ್ಪ ಮಟ್ಟಿಗೆ ಅರ್ಥವಾದರೂ ಪೂರ್ಣ ತೃಪ್ತಿ ತಂದಿಲ್ಲ.

ಶ್ರಾವಣದ ಉನ್ಮಾದವು “ಮತ್ತ ಶ್ರಾವಣ” ಎಂಬ ಸಾಮಗೀತವನ್ನು ಬರೆಸಿತಂತೆ. ಹಾಗಾಗಿ ಇದರ ಶೀರ್ಷಿಕೆ ಮತ್ತ ಅಂದರೆ ಇನ್ನೊಮ್ಮೆ ಹಾಗೂ ಮತ್ತ ಅಂದರೆ ಉನ್ಮಾದಿತ ಎಂದೂ. ಶ್ರಾವಣದ ವೈಶಿಷ್ಟ್ಯಗಳನ್ನು ಮತ್ತು ಶ್ರಾವಣದ ಬೋಧನೆಯನ್ನು ತಮಗಾದಂತೆ ಕವಿ ಇಲ್ಲಿ ವರ್ಣಿಸಿದ್ದಾರೆ. ಶ್ರವಣಕ್ಕೂ ಶ್ರವಣೇಂದ್ರಿಯಕ್ಕೂ ಸಂಬಂಧವಿರುವಂತೆ ಕವಿ ಶೃತಿಯತ್ತ ಗಮನಕೊಟ್ಟು ಕೃತಿ ರಚಿಸಿರುವ ಹಾಗಿದೆ. ಶ್ರೇಷ್ಠವಾದ ಶ್ರಾವಣದ ಅಭಿಜಿತ್ ಲಗ್ನದಲ್ಲಿ ಈ ಕೃತಿಯ ರಚನೆ ಮಾಡಿ

ಹಾಡೇ ಹಗಲಾ
ಶ್ರಾವಣದಲಿ ಅಭಿಜಿದ್ಯೋಗ ಕಾವ್ಯೋದ್ಯೋಗ

ಎಂದು ಹೇಳಿದ್ದಾರೆ. ಶ್ರಾವಣ ಮಾಸದಲ್ಲಿ ಅಭಿಜಿತ್ ನಕ್ಷತ್ರ ಇರುವಾಗ ಮಾಡಿದ ಕಾವ್ಯ ರಚನೆ ಬೆಳಕನ್ನು ನೀಡಿ ಜ್ಞಾನ ದಾಯಕವಾಗಿ ಕತ್ತಲೆಯ ಅಜ್ಞಾನವನ್ನು ಪರಿಹರಿಸುತ್ತದೆ ಎಂಬುದು ಕವಿಯ ಆಶಯ.

ಬೆಳಗಿನ ಸಾಮಗಾನ ರಚನೆಯಿಂದ ತೃಪ್ತಿಯಾಗದ ಕಾವ್ಯ ಪ್ರವಾಹವು, ಮಧ್ಯಾಹ್ನಕ್ಕೂ ಸಾಗಿ “ಮತ್ತೆ ಶ್ರಾವಣ ಬಂದ” ಕವನದ ಸೃಷ್ಟಿಯಾಯಿತು. ಶ್ರೀ ಅರವಿಂದರ ಸಾವಿತ್ರಿ ಮಹಾಕಾವ್ಯವು ನವೀನ ಕಾವ್ಯಕ್ಕೆ ಶ್ರೀ ಗಣೇಶಾಯ ನಮಃ ಆಗಿದೆ ಎಂದು ಧ್ವನಿಗೂಡುತ್ತಾ ಈ ಕವನ ಸಾಗುತ್ತದೆ. ಶ್ರೀಮಾತೆ ಹಾಗೂ ಅರವಿಂದರ ಭೇಟಿ ಒಂದು ಅಪೂರ್ವ ಯೋಗ ಎಂದು ಹೇಳುತ್ತಾ ಅರವಿಂದ ಹಾಗೂ ವಿವೇಕಾನಂದರ ಅನಾರ್ಯರನ್ನು ಆರ್ಯರಾಗಿ ಮಾಡುವ ಕ್ರಿಯೆ ಹಾಗೂ ವಿಶ್ವವೇ ಆರ್ಯ ಸಂಸ್ಕೃತಿಯಿಂದ ಅವಿಷ್ಕೃತವಾಗಲಿ ಎಂಬ ಭಾವವನ್ನು ಹೊಂದಿದೆ ಈ ಕವನ. ಇಲ್ಲಿ ಆರ್ಯ ಎಂಬುದು ಜನಾಂಗವನ್ನು ಸೂಚಿಸದೆ ಸಂಸ್ಕೃತಿ ವಾಚಕ ಶಬ್ದ ಎಂಬುದು ಗಮನಾರ್ಹ. ಶ್ರವಣಕ್ಕೆ ಮೀಸಲಾದ ಈ ಪುಣ್ಯ ಶ್ರಾವಣ ಮಾಸದಲ್ಲಿ ಬೇಂದ್ರೆಯವರಲ್ಲಿ ನಡೆದ ಚಿಂತನೆಯ ಒಂದು ಘನ ರೂಪವಾಗಿ ಈ ಕವನ ನಿಲ್ಲುತ್ತದೆ. ಕಾಲ ಪರಿವರ್ತನೆಗಾಗಿ ಆರ್ಯ ಸಂಸ್ಕೃತಿಯ ಪ್ರತಿಷ್ಠಾಪನೆಗಾಗಿ ಕವಿ ಬಯಸಿದ ಕಾಳಜಿ ಇಲ್ಲಿ ವ್ಯಕ್ತವಾಗುತ್ತದೆ.

ಸ್ವಾತಂತ್ರ್ಯದ ಬಗ್ಗೆಗಿನ ಬೇಂದ್ರೆ ಅವರ ಕಲ್ಪನೆಗಳು ಕಾರ್ಯರೂಪಕ್ಕೆ ಬರದಾಗಿನ ನಿರಾಶೆ ಕವಿತೆಯಲ್ಲಿ ವ್ಯಂಗ್ಯವಾಗಿ ದ್ವನಿಸುತ್ತದೆ

ಭಾರತ ಸ್ವಾತಂತ್ರ್ಯದ ವರ್ಧಂತಿ
ಶ್ರಾವಣ ಮಾಸದ ಮಳೆಬಿಸಿಲು
ಜೀವನ ಚಕ್ರವ ತಿರುಗಿಸುತಂತಿದೆ
ಜೀವನ ತತ್ವವ ಬಿಂಬಿಸಲು

ಪ್ರಕೃತಿಗೆ ಸಂಬಂಧಿಸಿದಷ್ಟೇ ಅಲ್ಲದೆ ಆಧ್ಯಾತ್ಮಿಕ ದೈವಿಕ ಸಾಮಾಜಿಕ ಆಯಾಮಗಳ ಹಿನ್ನೆಲೆಯಲ್ಲಿ ಈ ಶ್ರಾವಣ ಗೀತೆಗಳು ಕವಿಕಾವ್ಯಕ್ಕೆ ಪ್ರೇರಕ. ಹಾಗೂ ಕವಿ ಜೀವನದ ಅನೇಕ ಸಿಹಿ ಕಹಿ ಘಟನೆಗಳು ಶ್ರಾವಣದಲ್ಲಿ ಸಂಭವಿಸಿರುವುದರಿಂದ ಮತ್ತಷ್ಟು ಸ್ಪೂರ್ತಿಯೊದಗಿಸಿವೆ. ಶ್ರಾವಣವನ್ನು ಎಷ್ಟು ಬಣ್ಣಿಸಿದರು ತೃಪ್ತಿ ಇಲ್ಲ ಎನ್ನುವ ಕವಿ ಮನಸ್ಸಿಗೆ ಇದು ಸಾಕ್ಷಿ

ಎಷ್ಟು ಹೋಲಿಕೆಯನು ಕೊಟ್ಟು
ಹೊಗಳಿ ಮನವು ತಣಿಯದು
ರೂಪಗಳಿಗೆ ಚಿತ್ರಗಳಿಗೆ
ಉಪಮೆಗಳಿಗೆ ಗಣಿಯದು

ಶ್ರಾವಣವೆಂದರೆ ಮೈ ಮರೆಯುವ ತನ್ನದೇ ಮನಃಸ್ಥಿತಿಯನ್ನು ಕವಿ ಹೀಗೆ ಹೇಳಿಕೊಂಡಿದ್ದಾರೆ

ಶ್ರಾವಣಕ ತಪ್ಪಿತ ಗ್ಯಾನಾ
ಎಲ್ಲಿದೋ ಧ್ಯಾನಾ
ಹುಚ್ಚಾ ಆಗ್ಯಾನಾ
ಮದೋನ್ಮತ್ತಾ
ಅಂಬಿಕಾತನಯದತ್ತಾ

ಭೂಮಿ ಹಾಗೂ ಶ್ರಾವಣ ಎರಡು ಬೇಂದ್ರೆಯವರ ಕಾವ್ಯದ ಮುಖ್ಯ ನೆಲೆಗಳು ಹಾಗಾಗಿಯೇ ಶ್ರಾವಣ ಅವರಿಗೆ ಸೃಜನಶೀಲತೆಯ ಸಂಕೇತ. ಮಳೆಯ ರೂಪಕವು ಈ ಗೀತೆಗಳಲ್ಲಿ ದಾರ್ಶನಿಕ ಹಿನ್ನೆಲೆಯಲ್ಲೂ ಕಾಣಿಸಿಕೊಳ್ಳುತ್ತದೆ, ಮುಗಿಲು ಜ್ಞಾನದ ಸಂಕೇತವಾಗಿ ಆಧ್ಯಾತ್ಮಿಕ ಸತ್ಯವಾಗಿಯೂ ಸಹ ನಿಲ್ಲುತ್ತದೆ. ಬೇಂದ್ರೆ ಅವರಿಗೆ ಶ್ರಾವಣ ನೋವುಶಮನ ಮಾಡುವ ಮುಲಾಮು ಇದ್ದ ಹಾಗೆ.

ಬೇಂದ್ರೆಯವರ ಶ್ರಾವಣ ಗೀತೆಗಳು ಬಗ್ಗೆ ಡಾಕ್ಟರ್ ವಿಜಯದಬ್ಬೆ ಅವರು ಹೇಳಿದ ಈ ನುಡಿಗಳೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಬೇಂದ್ರೆಯವರ ಕಾವ್ಯ ಸೃಷ್ಟಿಯ ಒಂದು ಮುಖ್ಯ ಪ್ರೇರಕ ಶಕ್ತಿಯಾದ ಶ್ರಾವಣ ಅವರ ಕಾವ್ಯದಲ್ಲಿ ಒಂದು ಮೂಲ ಪ್ರತಿಮೆ ಜೀವನೋಲ್ಲಾಸ ಮತ್ತು ಅನುಭವಿಕ ಶ್ರದ್ಧೆಯನ್ನು ಪ್ರತಿನಿಧಿಸುವ ನೆಲೆ .ಕವಿಯ ಪಾಲಿಗೆ ಶ್ರಾವಣ ಕೇವಲ ಒಂದು ಋತುವಲ್ಲ ಅನೇಕ ಭಾವಲಯಗಳ ಮಹಾದ್ವಾರ ಅನುಭವದ ಅನೇಕ ಪದರುಗಳೊಂದಿಗೆ ಬೆರೆತು ಹೋಗಿರುವಂಥದ್ದು. ಜೀವನದ ಅನೇಕ ನಿರೀಕ್ಷ ಕಾತರಗಳನ್ನು ಹುಟ್ಟಿಸುವಂಥದ್ದು .ಜೀವನ ಮಂಥನವನ್ನು ಉದ್ದೀಪಿಸುವಂತದ್ದು. ಇಲ್ಲಿ ಶ್ರಾವಣವು ವ್ಯಕ್ತಿ ರಾಷ್ಟ್ರ ಹಾಗು ವಿಶ್ವ ಜೀವನದ ಚಲನೆಯ ಒಂದು ಮುಖ್ಯ ಬಿಂದು. ಭೂತ ಭವಿಷ್ಯ ವರ್ತಮಾನದ ಅನೇಕ ವೈಯುಕ್ತಿಕ ಸಾಮೂಹಿಕ ಸಂಗತಿಗಳ ಚಿಂತನ ಮಂಥನ ಭಾವಸ್ಪಂದನಕ್ಕೆ ತೊಡಗಿಸುವಂಥ ಒಂದು ಶಕ್ತಿ .ಈ ಅರ್ಥದಲ್ಲಿ ಶ್ರಾವಣ ಕವಿಯ ಹೊರಗಿನ ಆವರಣವಲ್ಲ ಕವಿಯ ಒಳ ಹೊರಗನು ಕ್ರಿಯಾಶೀಲವಾಗಿಸುವ ಸೃಜನಾತ್ಮಕ ಪ್ರೇರಣೆಯನ್ನು ಕೊಡುವಂತ ಒಂದು ವಿಶಿಷ್ಟ ಸತ್ವವಾಗಿದೆ . ಅಂತೆಯೇ ಈ ಅನುಭವದ ಮೇಲೆ ಬೇಂದ್ರೆ ಕಾವ್ಯದ ಉದ್ದೇಶಿತ ನೆಲೆಯಾದ ಅನುಭಾವಕ್ಕೆ ಒಂದು ಮುಖ್ಯ ನಿಚ್ಚಣಿಕೆಯಾಗಿದೆ.


  • ಸುಜಾತಾ ರವೀಶ್ – ಮೈಸೂರು

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW