ಸುಂದರ ಮುಖದಲ್ಲಿ ಬಂಗು ಎನ್ನುವ ಕಪ್ಪು ಕಲೆಗಳು ಆರಂಭವಾದಾಗ ಚಾರು ಚಿಂತಿತಳಾದಳು. ಇದರಿಂದ ಮುಕ್ತಿ ಪಡೆಯಲು ಮನೆ ಮದ್ದನ್ನೇಲ್ಲಾ ಮಾಡಿದಳು. ಯಾವುದು ಉಪಯೋಗಕ್ಕೆ ಬರಲಿಲ್ಲ. ಶೈಲಜಾ ಹಾಸನ್ ಅವರ ‘ಭಂಗ ತಂದ ಬಂಗು’ ಕತೆಯನ್ನು ಪೂರ್ತಿಯಾಗಿ ಓದಿ…
ಚಾರು ಬ್ಯಾಂಕಿಗೆ ಹೋಗಿದ್ದಳು. ಚೆಕ್ ಪಾಸ್ ಮಾಡಿಸಬೇಕಿತ್ತು. ಬ್ಯಾಂಕಿನವರಿಗೆ ಚೆಕ್ಕು ಕೊಟ್ಟ ಮೇಲೆ ” ಕೂತ್ಕೊಂಡಿರಿ, ಕರೆಯುತ್ತೇವೆ” ಅಂದಾಗ ವಿಧಿ ಇಲ್ಲದೆ ಕೌಂಟರ್ ಮುಂದಿನಿಂದ ಪಕ್ಕಕ್ಕೆ ಬರುತ್ತಾ ಅಲ್ಲೇ ಇದ್ದ ಸೋಫಾದ ಮೇಲೆ ಕುಳಿತ್ತಿದ್ದಳು. ಟೈಂಪಾಸ್ ಮಾಡಲು ಮೊಬೈಲ್ ನೋಡ್ತಾ ಇರುವಾಗಲೆ ಅಕ್ಕಾ ಅಂತ ಕರೆದಂತಾಗಿ ಕತ್ತೆತ್ತಿ ನೋಡಿದಳು. ಮಾವನ ಮಗ ಗಿರಿ ಎದುರಿಗೆ ನಿಂತಿದ್ದಾನೆ “ಅಕ್ಕ ಚೆನ್ನಾಗಿದ್ದೀಯಾ, ಬ್ಯಾಂಕಿಗೆ ಬಂದಿದ್ಯಾ” ಅಂತ ಕೇಳಿದನು. “ಹ್ಹೂ… ಗಿರಿ, ಚೆಕ್ ಹಾಕಬೇಕಿತ್ತು. ಅದಕ್ಕೆ ಬಂದಿದ್ದೆ” ಅಂತ ಹೇಳಿದವಳ ಮುಖವನ್ನೇ ಕ್ಷಣ ದಿಟ್ಟಿಸಿ “ಅಯ್ಯೋ ಅಕ್ಕ ಏನಾಗೋಯಿತಕ್ಕ. ಅಯ್ಯೋ ದೇವರೇ, ಹೀಗ್ಯಾಕೆ ಆಯ್ತಕ್ಕ” ಅಂತ ಅವಳ ಕೆನ್ನೆಗಳ ಮೇಲೆ ಕೈಯಾಡಿಸುತ್ತಾ ಕೇಳಿ ಬಿಟ್ಟನು. ಗಿರಿಯ ಈ ಅನಿರೀಕ್ಷಿತ ವರ್ತನೆಯಿಂದ ತಬ್ಬಿಬ್ಬಾಗಿ ಬಿಟ್ಟಳು ಚಾರು. ಅಕ್ಕಪಕ್ಕದವರು ಅವಳ ಮುಖವನ್ನೇ ಕುತೂಹಲದಿಂದ ನೋಡುತ್ತಿರುವುದು ಗಮನಿಸಿದಾಗ ಆ ಕ್ಷಣಕ್ಕೆ ಭೂಮಿ ಬಾಯಿ ಬಿಡಬಾರದೆ ಅಂತ ಚಾರುಗೆ ಅನ್ಸಿದ್ದು ನಿಜಾ. ಸುತ್ತ ಮುತ್ತ ಜನ ಇದ್ದಾರೆ. ಅವರ ಮುಂದೆ ಗಿರಿ ತನಗೇನೂ ಆಗಬಾರದ್ದು ಆಗಿ ಬಿಟ್ಟಿದೆ ಅನ್ನೋ ಹಾಗೆ ಮಾತನಾಡಿದಾಗ ಮುಜುಗರದ ಜೊತೆಗೆ ಕೋಪವೇ ಬಂದ್ಬಿಟ್ಟಿತ್ತು ಚಾರೂಗೆ. ಆದರೂ ಅದನ್ನು ತೋರಿಸಿ ಕೊಳ್ಳದೆ ಹ್ಹಿ ಹ್ಹಿ ಹ್ಹಿ ಅಂತ ಪೆಚ್ಚು ಪೆಚ್ಚಾಗಿ ನಗುತ್ತಾ “ಬ್ಯಾಂಕಿನವರು ಕರಿತಾ ಇದ್ದಾರೆ ಕಣೋಗಿರಿ, ಬರ್ತಿನಿ ” ಅಂತ ಎದ್ದು ಓಡುವ ನಡಿಗೆಯಲ್ಲಿ ಕೌಂಟರ್ ಹತ್ತಿರ ನಡೆದಳು.
ಇದೇನು ಮೊದಲ ಅನುಭವವೇನೂ ಆಗಿರಲಿಲ್ಲ ಚಾರೂಗೆ. ಆದರೆ ಇಂತಹ ಅನುಭವಗಳು ಇತ್ತೀಚೆಗೆ ಜಾಸ್ತಿ ಅದಾಗ ಅವಳಿಗೆ ಜೀವನವೆ ಸಾಕಾಗಿ ಬಿಟ್ಟಿತು. ಎಲ್ಲಾದರೂ ಓಡಿ ಹೋಗಿ ಬಚ್ಚಿಟ್ಟುಕೊಳ್ಬೇಕು ಅಂತ ಅನಿಸೋಕೆ ಶುರುವಾಯಿತು. ಯಾರಿಗೂ ಮುಖ ತೋರಿಸಬಾರದು, ಯಾರೂ ತನ್ನನ್ನು ನೋಡಬಾರದು, ಹೀಗಂತ ಅನ್ನಿಸೋಕೆ ಶುರುವಾಗಿದ್ದು ಅಥವಾ ಜನ ಹಾಗೆ ಮಾಡಿದ್ದು ಒಂದೆರಡು ವರ್ಷಗಳಿಂದ ಈಚೆಗೆ. ಮೊದ್ಲೆಲ್ಲ ಹೀಗಿರಲಿಲ್ಲ ನೀವು ಎಷ್ಟು ಚೆನ್ನಾಗಿದ್ದೀರಾ? ನಿಮ್ ಫೇಸ್ ಎಷ್ಟು ಚೆನ್ನಾಗಿದೆ. ಫೇಸ್ಗೆ ಏನು ಹಚ್ತೀರಾ. ಅದೆಷ್ಟು ಕ್ಲಿಯರ್ ಆಗಿದೆ, ಪಳ ಪಳ ಅಂತ ಹೊಳಿತಾ ಇದೆ. ಅದೆಷ್ಟು ಚೆನ್ನಾಗಿ ಡ್ರೆಸ್ ಮಾಡಿಕೊಳ್ಳುತ್ತೀರಾ. ನಿಮ್ಮ ಸೀರೆ ಎಷ್ಟು ಚೆನ್ನಾಗಿದೆ. ನಿಮ್ಮ ಸೆಲೆಕ್ಷನ್ ತುಂಬಾ ಚೆನ್ನಾಗಿರುತ್ತೆ ಹೀಗೆಲ್ಲಾ ಹೇಳ್ತಾ ಅವಳನ್ನು ಉಬ್ಬಿಸಿ ಸದಾ ಒಂದು ಅಡಿ ಮೇಲೆ ನಡೆಯುವಂತೆ ಮಾಡ್ತಾ ಇದ್ದ ಸ್ನೇಹಿತರು, ಬಂಧುಗಳು, ಅಕ್ಕಪಕ್ಕದವರು ಇತ್ತೀಚಿಗೆ ಚಾರುನ್ನ ಕಂಡ ಕೂಡಲೇ “ಅಯ್ಯೋ ಇದೇನು ಆಗೋಯ್ತು , ಎಷ್ಟು ಚೆನ್ನಾಗಿತ್ತು ನಿಮ್ಮ ಮುಖ, ಈವಾಗ ಯಾಕೆ ಹೀಗೆ ಆಗೋಯ್ತಲ್ಲ” ಅಂತ ಅವಳ ಮುಖಕ್ಕೆ ಯಾರೊ ಆಸಿಡ್ ಹಾಕಿ ಅವಳ ಇಡೀ ಮುಖವೆಲ್ಲ ಸುಟ್ಟು ಹೋಗಿ ಅವಳು ಕುರೂಪಿಯಾಗಿ ಕಾಣ್ತಾ ಇದ್ದಾಳೇನೋ ಅನ್ನೋ ರೇಂಜಿಗೆ ಅವರು ಮಾತಾಡ್ತಿದ್ದಾಗ ಅವಳಿಗೆ ಹೇಗೆ ಅನ್ನಿಸಬೇಡ. ಎಲ್ಲಾದ್ರೂ ಓಡಿ ಹೋಗಿ ಮುಖ ಮರೆಮಾಚಬೇಕು ಅನ್ಸೋದು ಸಹಜ ಅಲ್ವೇ.
ವಯಸ್ಸಿಗೆ ಅನುಗುಣವಾಗಿಯೋ, ಹಾರ್ಮೋನ್ ವ್ಯತ್ಯಾಸದಿಂದಲೊ, ಬಿಸಿಲಿನಲ್ಲಿ ಪ್ರತಿದಿನ ಓಡಾಡ್ತಾ ಇರೋದ್ರಿಂದಲೋ ಚಾರೂ ಮುಖದ ಮೇಲೆ ಕೂಡ ಅಲ್ಲಲ್ಲಿ ಕಪ್ಪಗಾಗಿ ಬಂಗು ಶುರುವಾಗಿ ಬಿಟ್ಟಿತ್ತು. ಮೊದಮೊದಲು ಅವಳೇನು ಅದರ ಬಗ್ಗೆ ಅಷ್ಟೇನೂ ಲಕ್ಷ್ಯ ವಹಿಸಿರಲಿಲ್ಲ. ಆದರೆ ಅವಳಿಗೆ ಆಗದೆ ಇರೋ ಸಂಕಟ ಅವಳ ಮುಖ ನೋಡುವವರಿಗೆ ಆಗೋಕೆ ಶುರು ಆಯ್ತು ನೋಡಿ, ಆಗ ಆ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಳು. ಏನೋ ಆಗಬಾರದು ಆಗಿ ಹೋಗಿದೆ. ಬರಬಾರದು ಬಂದು ಬಿಟ್ಟಿದೆ. ಇನ್ನೇನು ಮುಗ್ದೋಯ್ತು ಅನ್ನೋ ಹಾಗೆ ಅವಳನ್ನು ನೋಡಿದಂತಹ ಕೆಲವರು ಆಡುತ್ತಾ ಇದ್ರು .ಹಾಗೆ ಅದಕ್ಕೆ ನೂರೆಂಟು ಪರಿಹಾರಗಳನ್ನು ಕೂಡ ಅವರೇ ಹೇಳ್ತಾ ಇದ್ರು.

ಫೋಟೋ ಕೃಪೆ : google
ಮೊದಲಿಂದಲೂ ಚಾರುವಿಗೆ ಸೌಂದರ್ಯ ಪ್ರಜ್ಞೆ ಸ್ವಲ್ಪ ಜಾಸ್ತಿನೇ ಇತ್ತು. ಹಾಗಂತ ಬ್ಯೂಟಿ ಪಾರ್ಲರ್ಗೆ ಅವಳೇನು ಹೋಗ್ತಾ ಇರ್ಲಿಲ್ಲ. ಸೌಂದರ್ಯ ಪೂರಕವಾದ ಅದರಲ್ಲೂ ಮನೆಯಲ್ಲಿರುವ ವಸ್ತುಗಳನ್ನೆ ಉಪಯೋಗಿಸಿಕೊಂಡು ಮುಖದಾರವಿಂದವನ್ನು ಸುಂದರವಾಗಿ ಇಟ್ಕೊಳ್ಳೋದು ಹೇಗೆ ಅಂತ ಕರತಲಾಮಲಕ ಮಾಡಿಕೊಂಡಿದ್ದಳು ಚಾರು. ಹಾಗಾಗಿ ಅವಳ ಮುಖದ ಮೇಲೆ ಒಂದೆ ಒಂದು ಕಲೆ ಇಲ್ಲದೆ ವಿಶೇಷ ಹೊಳಪಿನಿಂದ ಅವಳ ವಯಸ್ಸಿಗಿಂತ ಒಂದಷ್ಟು ವರ್ಷ ಚಿಕ್ಕವಳ ತರಾನೇ ಕಾಣ್ತಾ ಇದ್ದಳು. ನಿಮ್ಮ ಮುಖ ಎಷ್ಟು ಕಳೆಕಳೆಯಾಗಿದೆ. ತುಂಬಾ ಚೆನ್ನಾಗಿ ಕಾಣ್ತೀರ ಅಂತ ಹೇಳೋರೆ ಜಾಸ್ತಿ ಇದ್ರು. ಅದು ಅವಳಿಗೂ ಖುಷಿ ಕೊಡ್ತಾ ಇತ್ತು . ಚೆನ್ನಾಗಿ ಕಾಣೋ ಹಾಗೆ ಅಲಂಕರಿಸಿಕೊಳ್ಳುವ ಕಲೆಗಾರಿಕೆ ಕೂಡ ಅವಳಿಗೆ ಒಲಿದು ಬಂದಿತ್ತು .ಹಾಗಾಗಿ ಅವಳ ಬಗ್ಗೆ ಅವಳಿಗೇ ಕೊಂಚ ಹೆಮ್ಮೆ ಜೊತೆಗೊಂದಿಷ್ಟು ಗರ್ವ ಕೂಡ ಇತ್ತು . ಲಕ್ಷಣವಾಗಿ ಕಾಣೋ ರೂಪ ನಿನ್ನದು ಅಂತ ಅವಳು ತಿಳ್ಕೊಳೋ ಹಾಗೆ ಎಲ್ಲರೂ ಚಾರೂ ಹತ್ತಿರ ಹೇಳ್ತಾ ಇದ್ರು .
ಆದ್ರೆ ಈ ಮಧ್ಯದಲ್ಲಿ ಏನಾಯ್ತೋ, ಚಂದ್ರನ ಮೇಲೆ ರಾಹು ಬಡಿದಂತೆ ಅವಳ ಮುಖದ ಮೇಲೆ ಈ ಹಾಳಾದ ಬಂಗು ಅನ್ನೊ ಅನಿಷ್ಟ ಬಂದು ಬಿಡಬೇಕೇ. ಯಾವುದೇ ಕಲೆ ಇಲ್ಲದ ಮುಖ , ಲಕ್ಷಣವಾದ ಮುಖ ಅಂತ ಅನ್ನಿಸಿಕೊಳ್ಳುತ್ತಿದ್ದ ಚಾರು ಮುಖದ ಮೇಲೆ ಅವಳು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲದಂತ ತನಗೆ ಮಾತ್ರ ಏನೂ ಆಗುವುದಿಲ್ಲ. ಯಾವ ಬಂಗು ಕೂಡ ನನ್ನ ಮುಖದ ಮೇಲೆ ಬರುವುದಿಲ್ಲ ಅಂತ ಬಲವಾಗಿ ನಂಬಿದ್ದ ಚಾರುಳಂತ ಚಾರುಳ ಮುಖದ ಮೇಲೆ ಈ ಕಲೆ ಬಂದೆ ಬಿಡಬೇಕೇ.
ನೈಸರ್ಗಿಕ ವಸ್ತುಗಳನ್ನು ಉಪಯೋಗಿಸಿಕೊಂಡು ಮುಖವನ್ನು ಚೆನ್ನಾಗಿ ಇಟ್ಟುಕೊಂಡಿದ್ದೇನೆ. ನನಗಂತೂ ಈ ಬಂಗೆಲ್ಲ ಬರುವುದೆ ಇಲ್ಲ ಅಂತ ಚಾರು ಬಲವಾಗಿ ನಂಬಿ ಕೊಂಡು ಬಿಟ್ಟಿದ್ದಳು. ಆದರೆ ಆಂತಹ ನಂಬಿಕೆ ಸುಳ್ಳಾಗಿ ಹೋಗಿ, ಅದು ಬಂದೇ ಬಿಡ್ತು. ಮನೆ ವೈದ್ಯನೆಲ್ಲ ಮಾಡಿ ಸೋತಳು. ಯಾರು ಏನು ಹೇಳುತ್ತಾಳೊ ಅದನ್ನೆಲ್ಲ ಮಾಡಿದಳು. ಒಬ್ರು ಬಾಳೆ ಹಣ್ಣು ಹಚ್ಚು ಅಂದ್ರು ಹಚ್ಚಿದಳು. ಮಗದೊಬ್ಬರು ಆಲೂಗಡ್ಡೆ ರಸ ಹಚ್ಚಿ ಅಂದ್ರು ಹಚ್ಚಿದಳು,ಅಲವೇರ ಹಚ್ಚಿ ಅಂದ್ರು ಹಚ್ಚಿದಳು. ಜಾಯಿಕಾಯಿ ತೇದು ಹಚ್ಚಿ ಅಂದ್ರು ಅದನ್ನೂ ಮಾಡಿದಳು. ಕಡಿಮೆ ಆಗುವುದಿರಲಿ, ಮುಖದ ಮೇಲಿರುವ ಕಪ್ಪು ಕಲೆ ಹೆಚ್ಚಾಗುತ್ತಲೆ ಹೋಗುತ್ತಿದೆ. ಗೆಳತಿಯ ವೈದ್ಯೆ ಮಗಳು ಈ ಕಲೆಗಳೆಲ್ಲ ಹೋಗಿಯೆ ಹೋಗುತ್ತದೆ ಆಂಟಿ ಅಂತ ಕ್ರೀಂ ತಂದು ಕೊಟ್ಟಳು. ಅದನ್ನೂ ಹಚ್ಚಿದಾಯಿತು. ಊಹೂಂ ಕಡಿಮೆ ಆಗಲೆ ಇಲ್ಲ.ಕೊನೆಗೆ ಪ್ರಖ್ಯಾತ ಚರ್ಮದ ವೈದ್ಯರಿಗೂ ತೋರಿಸಿದ್ದಾಯಿತು.ಅವರಂತೂ ಇದಕ್ಕೆ ಯಾವ ಔಷಧಿಯೂ ಇಲ್ಲ, ತಾನಾಗಿಯೇ ಹೋಗಬೇಕು ಅಷ್ಟೇ ಅಂದಾಗ ಚಾರುಗೆ ಬದುಕೆ ಬೇಡವನಿಸಿತ್ತು. ಅದು ಇದೆ ಅನ್ನೋದೆ ಮರೆತು ಹೋಗಿರುವಾಗ ಹೋದಲ್ಲಿ ಬಂದಲ್ಲಿ ತನ್ನ ಮುಖದ ಮೇಲಿರುವ ಕಲೆ ರಾಷ್ಟ್ರ ಸಮಸ್ಯೆಯೇನೊ ಅನ್ನುವಂತೆ ಬಿಂಬಿಸುವರಿಂದ ಪಾರಾಗುವುದು ಹೇಗೆಂದು ಚಿಂತನೆ ನಡೆಸಿದ್ದಾಳೆ. ಈ ಬಂಗು ಸರಳವಾಗಿ ಹೇಳಬೇಕೆಂದರೆ ಬಂಗು ಸಾಧಾರಣ ಮಧ್ಯವಯಸ್ಕರ ಹಣೆ, ಗಲ್ಲದ ಮೇಲೆ ಬೀಳುವ ಕಪ್ಪು ಕಲೆ. ಚರ್ಮದ ಮೇಲಿನ ಕಲೆ ಅಲ್ಲ, ಒಳಗಿನ ಕಲೆ. ಬಂಗು ಬರಲು ಕಾರಣ ಒಂದಲ್ಲ. ಸೂರ್ಯನ ಪ್ರಖರ ಬಿಸಿಲಿಗೆ ಚರ್ಮವನ್ನು ನಿರಂತರವಾಗಿ ಒಡ್ಡಿದರೆ, ದೇಹದಲ್ಲಿ ಹಾರ್ಮೋನುಗಳ ಬದಲಾವಣೆ/ಏರುಪೇರು ಮತ್ತು ಕೆಲವೊಮ್ಮೆ ಅನುವಂಶೀಯತೆಯಿಂದಲೂ ಬರಬಹುದು. ನಮ್ಮ ಚರ್ಮದ ಕೋಶಗಳಲ್ಲಿ ಮೆಲನಿನ್ ಎಂಬ ವರ್ಣಕಾರಕ ಇದೆ. ಇದರಿಂದ ಚರ್ಮಕ್ಕೆ ಬಣ್ಣ ಬರುತ್ತದೆ. ಮೆಲನಿನ್ ಅಧಿಕವಾಗಿ ಉತ್ಪಾದನೆ ಆಗುವುದರಿಂದ ಅತಿವರ್ಣಕಾರಕತೆ (ಹೈಪರ್ ಪಿಗ್ಮೆಂಟೇಶನ್) ಉಂಟಾಗುತ್ತದೆ. ಇದಕ್ಕೆ ನಾವು ಬಂಗು ಎಂದು ಕರೆಯುತ್ತೇವೆ. ಬಂಗಿನಿಂದ ಚರ್ಮ ಕಪ್ಪು ಬಣ್ಣಕ್ಕೆ ತಿರುತ್ತದೆ. ಬಂಗು ಮುಖದ ಮೇಲೆ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಮುಖದ ಚೆಲುವಿಗೆ ಕುಂದುಂಟಾಗುತ್ತದೆ. ಜೊತೆಗೆ ಕಿರಿಕಿರಿಯೂ ಆಗುವುದು ಸಹಜವೇ ಆಗಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಇದು ಕರೆಯದೇ ಬರುವ ಅತಿಥಿಯಿದ್ದಂತೆ. ಕ್ರಮೇಣ ಮೆಲನಿನ್ ಬಂಗಿನ ಕಲೆಗಳು ಕೆನ್ನೆ, ಹಣೆ, ಮೂಗಿನ ಮೇಲೆ ಮೂಡಲಾರಂಭಿಸುತ್ತವೆ. ಯಾವುದೇ ಔಷಧಿ ಇದಕ್ಕೆ ಇಲ್ಲ ಅಂತ ಓದಿ ತಿಳಿದು ಕೊಂಡ ಚಾರು ಎಲ್ಲರಿಂದ ದೂರ ಹೋಗಿ ಹಿಮಾಲಯ ಪರ್ವತದ ಮೇಲೋ, ವಿಂದ್ಯಾ ಪರ್ವತದ ಮೇಲೊ, ಘೊಂಡಾರಣ್ಯದೊಳಗೊ ಅಡಗಿಕೊಂಡು ತಪಸ್ಸು ಮಾಡಿ ಈ ಭಂಗ ತಂದ ಬಂಗಿಗೆ ಒಂದು ಔಷಧಿ ಕೊಡಪ್ಪ,ಅದೂ ನನಗಾಗಿ ಅಲ್ಲ ಆ ಔಷಧಿ ,ನನ್ನ ಬಂಗು ತುಂಬಿದ ಮುಖ ನೋಡಲಾರದ ನನ್ನ ಹಿತಚಿಂತಕರಿಗಾಗಿ ಅಂತ ಬೇಡಿಕೊಳ್ಳಲು ದೃಢ ನಿರ್ಧಾರ ಮಾಡಿಬಿಟ್ಟಿದ್ದಾಳೆ ಚಾರು.
- ಶೈಲಜಾ ಹಾಸನ್
