ನಮ್ಮ ಭಾರತದ ಪ್ರಮುಖ ಆಹಾರ ಭತ್ತ. ಅಕ್ಕಿ ಊಟಕ್ಕೆ ಅಷ್ಟೇ ಅಲ್ಲ, ಅದರಲ್ಲಿ ಹಸಿವು ನಿವಾರಿಸುವ ಗುಣದ ಜೊತೆಗೆ ಅನೇಕ ಔಷಧಿ ಗುಣಗಳನ್ನು ಹೊಂದಿದೆ. ಭತ್ತದ ಮಹತ್ವದ ಕುರಿತು ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಬರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…
- ಭತ್ತದ ಹೊಟ್ಟನ್ನು ಸುಟ್ಟು ಬೂದಿ ಮಾಡಿ ಚೆನ್ನಾಗಿ ಗಾಳಿಸಿ ವಸ್ತ್ರಗಾಳಿತ ಚೂರ್ಣಕ್ಕೆ ಸೈಂಧವ ಲವಣ ಸೇರಿಸಿ ಹಲ್ಲುಜ್ಜಲು ಉಪಯೋಗಿಸಿದರೆ ಹಲ್ಲು ನೋವು ಗುಣವಾಗುತ್ತದೆ.
- ಭತ್ತದ ಹೊಟ್ಟಿನ ಬಸ್ಮಕ್ಕೆ ಅಂಟುವಾಳ ಪುಡಿ ಸೇರಿಸಿ ಸ್ನಾನಕ್ಕೆ ಉಪಯೋಗಿಸುವುದರಿಂದ ಕಜ್ಜಿ ತುರಿ ಗುಣವಾಗುತ್ತದೆ.
- ಭತ್ತವನ್ನು ಹುರಿದು ಅರಳು ಮಾಡಿ ಮೇಲಿನ ಕವಚವನ್ನು ಬೇರ್ಪಡಿಸಿ ಆಹಾರವಾಗಿ ಉಪಯೋಗಿಸುವುದರಿಂದ ಅಜೀರ್ಣ ಗ್ಯಾಸ್ಟ್ರಿಕ್ ಗುಣವಾಗುತ್ತದೆ.
- ಭತ್ತದ ಮಿಲ್ಲಿನಲ್ಲಿ ಅಕ್ಕಿ ಮಾಡಿಸಿದಾಗ ಅಕ್ಕಿಯ ಜೊತೆಯಲ್ಲಿ ತೌಡು ಬರುತ್ತದೆ. ಇದು ಅತ್ಯಂತ ಪೌಷ್ಟಿಕವಾದ ಆಹಾರ. ಇದನ್ನು ಹುರಿದು ತುಪ್ಪ ಹಾಕಿ ಬೆಲ್ಲ ಹಾಕಿ ಉಂಡೆ ಮಾಡಿ ಮಕ್ಕಳಿಗೆ ತಿನ್ನಿಸಿದರೆ ತುಂಬಾ ಒಳ್ಳೆಯದು. ಇದು ವಿಟಮಿನ್ ಗಳ ಆಗರ.
- ತೌಡು ಡ್ರೈ ಫ್ರೂಟ್ಸ್ ಎಲ್ಲಾ ಸೇರಿಸಿ ಮಕ್ಕಳಿಗೆ ಮತ್ತು ಗರ್ಭಿಣಿ ಸ್ತ್ರೀಯರಿಗೆ ಕೊಡಬಹುದಾದ ಒಳ್ಳೆಯ ತಿನಿಸನ್ನು ತಯಾರಿಸಬಹುದು.
- ಅಕ್ಕಿಯಿಂದ ಮಾಡುವ ಖಾದ್ಯಗಳು ತಮಗೆಲ್ಲ ಚಿರಪರಿಚಿತ.
- ಅಕ್ಕಿಯನ್ನು ಹುರಿದು ಪುಡಿ ಮಾಡಿ ಬಿಸಿನೀರಿನೊಂದಿಗೆ ಸೇವಿಸಿದರೆ ಗ್ಯಾಸ್ಟ್ರಿಕ್ ಗುಣವಾಗುತ್ತದೆ.
- ಒಂದು ಚಮಚ ಅಕ್ಕಿ ಹಿಟ್ಟಿಗೆ ನೀರು ಹಾಕಿ ದೋಸೆ ಹಿಟ್ಟಿನಂತೆ ಕದಡಿ ಬಿಸಿ ಮಾಡಿ ಪೇಸ್ಟ್ ಮಾಡಿ ಕೊಂಡು ಕುರದ ಮೇಲೆ ಹಚ್ಚಿದರೆ ಕುರು ಒಡೆಯುತ್ತದೆ.
- ಅಕ್ಕಿ ಹಿಟ್ಟನ್ನು ದೋಸೆ ಹಿಟ್ಟಿನಂತೆ ಕದಡಿ ಕಾಯಿಸಿ ಪೇಸ್ಟ್ ಮಾಡಿ ಅರಿಶಿನ ನಿಂಬೆರಸ ಸೇರಿಸಿ ಮುಖಕ್ಕೆ ಪ್ಯಾಕ್ ಹಾಕುವುದರಿಂದ ಮುಖದ ಕಪ್ಪು ಕಲೆ ಬಂಗು ಮತ್ತು ಇತರೆ ಕಲೆಗಳು ಗುಣವಾಗುತ್ತದೆ.
- ದೇಹ ಆಕಸ್ಮಿಕ ಬೆಂಕಿಯಿಂದ ಅಥವಾ ನೀರಿನಿಂದ ಸುಟ್ಟಾಗ ಅಕ್ಕಿ ಹಿಟ್ಟನ್ನು ಗಾಯದ ಮೇಲೆ ಉದುರಿಸಿದರೆ ಬೊಬ್ಬೆ ಏಳುವುದಿಲ್ಲ.
- ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯ
