ಇಳಿಸಂಜೆ (ಭಾಗ-೩)

ವಯಸ್ಸಾದ ಮೇಲೆ ಮಕ್ಕಳು ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಾರೆಂಬ ಭಾವನೆ ಅವರನ್ನು ಬಹುವಾಗಿ ಕಾಡುತ್ತದೆ. ನಾನು ಮಕ್ಕಳಿಗೆ ಹೊರೆಯಾದೆನೇನೋ ಎಂಬ ಅಳುಕು. ಪತ್ರಕರ್ತರಾದ ಬಿ.ವಿ.ಅನುರಾಧ ಅವರ ಹೊಸ ಅಂಕಣ ‘ಇಳಿಸಂಜೆ’ ಅಂಕಣದಲ್ಲಿ ‘ಹಿರಿಯರನ್ನು ಗಮನಿಸಿಕೊಳ್ಳುವುದು ಹೇಗೆ?’ ವನ್ನು ತಪ್ಪದೆ ಮುಂದೆ ಓದಿ…

ಕೆಲಸ ಮುಗಿಸಿ ಅರ್ಧ ರಾತ್ರಿಯಲ್ಲಿ ಬಂದು ಮಲಗುವ ನನಗೆ ಬೆಳಿಗ್ಗೆ ಏಳುವುದು ತುಸು ಕಷ್ಟವೇ. ಆದರೆ, ತಲೆಯಲ್ಲಿ ಅತ್ತೆಗೆ ತಿಂಡಿ ಕೊಡಬೇಕೆಂಬ ಅಲಾರಂ ಸದ್ದು ಮಾಡುತ್ತಲೇ ಇರುತ್ತೆ. ಮಗಳು ನನ್ನತ್ತೆಯ ಊಟ, ತಿಂಡಿ, ನಾನು ಬಿಪಿ, ಶುಗರ್ ಮಾತ್ರೆಗಳು ತಿನ್ನಬೇಕಾದ ಸಮಯಗಳಿಗೆ ಅಲಾರಂ ಇಟ್ಟು ಹೋಗಿದ್ದಾಳೆ. ಅಲ್ಲದೆ ಆಯಾ ಸಮಯಕ್ಕೆ ಕಾಲ್ ಮಾಡಿಯೂ ನೆನಪು ಮಾಡ್ತಿರ್ತಾಳೆ. ಆದರೂ ತಡವಾಗಿ ಏಳುವ ನನಗೆ ಮೈಮನವೆಲ್ಲಾ ಒಂತರಾ ಜೋಮು ಜೋಮು.

ಮನೆಯಲ್ಲೊಂದು 90+ ಮಗು (ನನ್ನತ್ತೆ) ವೊಂದನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಹೆಗಲಲ್ಲಿ. ಹಾಗೆಂದು ಅದು ಹೊರೆಯಲ್ಲ. ನನ್ನ ಕರ್ತವ್ಯ. ಹಣ್ಣುಹಣ್ಣು ಹಿರಿಯರ ಬಗ್ಗೆ ಹೇಳಿಕೇಳಿ ಕಂಡಷ್ಟೇ ಗೊತ್ತಿದ್ದ ನಾನೀಗ ಸ್ವತಃ ಅವರನ್ನು ನಿಭಾಯಿಸುತ್ತಿರುವೆ. ವಯಸ್ಸಾಗ್ತಾ ಆಗ್ತಾ ಅವರು ಮತ್ತೆ ಬಾಲ್ಯಕ್ಕೋಗಿ ಬಿಡ್ತಾರೆನ್ನುವುದು ಅಕ್ಷರಶಃ ಸತ್ಯ. ಅವರ ವರ್ತನೆ ಥೇಟ್ ಮಕ್ಕಳ ಹಾಗೆ ಅಂದರೆ ನಂಬಿ.

ನಾನರಿತ ಒಂದು ಮಹತ್ವದ ವಿಚಾರವೆಂದರೆ ವಯಸ್ಸಾದ ಮೇಲೆ ಮಕ್ಕಳು ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಾರೆಂಬ ಭಾವನೆ ಅವರನ್ನು ಬಹುವಾಗಿ ಕಾಡುತ್ತದೆ. ನಾನು ಮಕ್ಕಳಿಗೆ ಹೊರೆಯಾದೆನೇನೋ ಎಂಬ ಅಳುಕು. ಪ್ರತಿಯೊಂದಕ್ಕೂ ಹೆದರಿಕೊಳ್ಳುವ ಸ್ವಭಾವ. ಆರೋಗ್ಯದ ಮೇಲೆ ಅತಿಯಾದ ಕಾಳಜಿ. ಮಕ್ಕಳ ಮೇಲಿನ ವ್ಯಾಮೋಹ. ಮಕ್ಕಳು ಬಿಟ್ಟೆನೆಂದರೂ ಇವರು ಮಾತ್ರ ಬಿಡಲೊಲ್ಲರು. ಎಲ್ಲಕ್ಕಿಂತ ಮುಖ್ಯವಾಗಿ ಒಂಟಿತನ ಅವರನ್ನು ತುಂಬಾ ತುಂಬಾ ಕಾಡುತ್ತೆ. ಅಂದರೆ ಕೆಲವರಿಗೆ ಈ ಒಂಟಿತನ ನಿಭಾಯಿಸುವ ಪರಿ ಗೊತ್ತಿಲ್ಲದೆಯೂ ಪರಿತಪಿಸುವುದುಂಟು.

ಈ ಒಂಟಿತನ ಇದೆಯಲ್ಲಾ ಇದು ಬಾರಿ ಅಪಾಯಕಾರಿ. ಒಮ್ಮೊಮ್ಮೆ ಅನಾಹುತಗಳಿಗೂ ಎಡೆಮಾಡಿಕೊಡುತ್ತದೆ. ಬಗೆಬಗೆಯ ಒಂಟಿತನಗಳಿವೆ. ಒಬ್ಬೊಬ್ಬರದ್ದು ಒಂದೊಂದು ರೀತಿ. ಇದರಲ್ಲಿ 80+ ನನ್ನ ಅಪ್ಪ 70+ ಅಮ್ಮ ಇವರಿಬ್ಬರದ್ದು 50+ ವರ್ಷಗಳಷ್ಟು ಸುದೀರ್ಘ ಅನ್ಯೋನ್ಯ ದಾಂಪತ್ಯ. ಎಂದೂ ಐದಾರು ದಿನಗಳಷ್ಟೂ ಸಣ್ಣ ಗ್ಯಾಪು ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಇದ್ದಿದ್ದಿಲ್ಲ. ಹಾಗಾಗಿ ಅಪ್ಪ ಹಠಾತ್ತನೆ ಇಲ್ಲದಾದಾಗ ಅಮ್ಮನಿಗೆ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ತುಂಬಾ ಖಿನ್ನತೆಗೆ ಒಳಗಾಗ್ತಿದ್ದರು. ಅದನ್ನು ಅರ್ಥ ಮಾಡಿಕೊಂಡ ನಾನು, ತಂಗಿ ಅವರನ್ನು ಒಂಟಿಯಾಗಿರಲಿಕ್ಕೆ ಬಿಡದೆ, ಅವರೊಂದಿಗೆ ಏನಾದರೂ ವಿಷಯಗಳನ್ನು ಹಂಚಿಕೊಳ್ಳಲು ಪ್ರಯತ್ನಿಸಿದೆವು. ನಾವೇನು, ಯಾರೇನೇ ಮಾತನಾಡ್ತಿದ್ದರೂ, ಅಮ್ಮ ಮಾತ್ರ ನಿಮ್ಮಪ್ಪ ಇದ್ದಾಗ ಅಂತಲೇ ಅಪ್ಪನ ನೆನಪುಗಳೊಂದಿಗೆ ನುಸುಳಿಕೊಂಡು ಶುರುವಿಟ್ಟುಕೋತಾರೆ. ಈಗಲೂ ಒಮ್ಮೊಮ್ಮೆ ರಾತ್ರಿ ಎದ್ದು ಕುಳಿತು ಅಪ್ಪನ ಕುರಿತು ಯೋಚಿಸುವುದುಂಟು. ಆಗಾಗ ನಾನು ಅವರನ್ನು‌ ಅಪ್ಪನ ಆಲೋಚನೆಗಳಿಂದ ಹೊರತರಲು, ನಮ್ಮನ್ನೆಲ್ಲಾ ಬಿಟ್ಟು ಹೋದವರ ಬಗ್ಗೆ ನಿನಗೇನು ಯೋಚನೆ. ನಿನ್ನ ಇಷ್ಟು ಪ್ರೀತಿಯಿಂದ ನೋಡೋ ನಮ್ಮ ಬಗ್ಗೆ ಯೋಚನೆ ಮಾಡು. ನನ್ನ ಮಕ್ಳು ನನ್ನನ್ನು ಎಷ್ಟು ಚೆಂದ ನೋಡ್ಕೋತಾರಂತ ಖುಷಿ ಪಡು ಎಂದೆಲ್ಲಾ ರೇಗುವುದುಂಟು. ಆಗೊಮ್ಮೆ ಅಮ್ಮ ನನ್ನ ಧೀನಳಾಗಿ ನೋಡಿ ಕಣ್ತುಂಬಿಕೊಂಡು, ನಿನಗೇನು ಗೊತ್ತು ನಿಮ್ಮಪ್ಪನಿಗೆ ನೀವೆಂದರೆ ಎಷ್ಟು ಇಷ್ಟ. ಅವರಿಗೆ ಬದುಕಬೇಕಂತ ಎಷ್ಟು ಆಸೆಯಿತ್ತು. ಈ ನಿಮ್ಮ ಮಕ್ಕಳ ಏಳಿಗೆಯೆಲ್ಲಾ ಕಂಡು ಎಷ್ಟು ಖುಷಿ ಪಡುವರು ಅಂತ ಮತ್ತೆ ಅಪ್ಪನ ಸುತ್ತಲೆ ಅವರ ಭಾವನೆಗಳು ಹೆಣೆದುಕೊಳ್ಳುತ್ತವೆ. ಅಷ್ಟರಲ್ಲಿ ತಂಗಿ ಕಾಫಿ ತಂದು ಅವರ ಕೈಗಿಟ್ಟು ವಿಷಯ ಡೈವರಟ್ ಮಾಡಿ, ತೋಟದಲ್ಲಿ ಸೊಪ್ಪುಬಿಡಿಸಿಕೊಡು ಅಂತ ಕರೆದೊಯ್ತಾಳೆ.

ಅಮ್ಮನ ಮನಸನ್ನು ಅರಿತು ನುರಿತ ತಂಗಿ ವಯಸ್ಸಾದವರ ಬಗ್ಗೆ ಒಂದಿಷ್ಟು ಮಾಹಿತಿ ನನಗೂ ಬೋಧಿಸ್ತಾಳೆ. ಅಮ್ಮನೊಂದಿಗೆ ನನ್ನ ಮನೆಗೆ ಬಂದಾಗಲೂ ನನ್ನತ್ತೆಯ ಆರೈಕೆ ಮಾಡುವ ಜೊತೆಗೆ ನನಗೂ ಹೇಳಿಕೊಡ್ತಾಳೆ. ರಾತ್ರಿ ಏನೆ ಸಣ್ಣ ಸದ್ದಾದರೂ ಕೂಡಲೇ ಅಮ್ಮನ ರೂಮಿಗೆ ಓಡುವ ಅವಳು, ಅಮ್ಮನ ಕಾಲು ನೋಡಿ ತೈಲ ಉಜ್ಜಿ ನಿದ್ದೆ ಮಾಡಿದ ಮೇಲೆ ಅವಳ ನಿದ್ದೆ. ರಾತ್ರಿ ಯೆಲ್ಲಾ ದೊಡ್ಡ ದೀಪ ಉರಿದರೆ ವಯಸ್ಸಾದವರಿಗೆ ನಿದ್ದೆ ಹತ್ತದೆಂದು ನನ್ನವರಿಗೆ ಪದೇಪದೇ ಹೇಳಿ ಸಣ್ಣ ದೀಪ ಹಾಕೋವರಿಗೂ ಬೇತಾಳನ ಹಾಗೆ ಬೆನ್ನಿಗೆ ಬಿದ್ದು ಮಾಡಿಸ್ತಾಳೆ. ಅತ್ತೆಗೆ ಇಲ್ಲಿಗೆ ಬಂದಾಗ ಕಣ್ಣೋಟ ಅಸ್ಪಷ್ಟ ಇತ್ತು. ಈಗ ಸಂಪೂರ್ಣ ಕಾಣಲ್ಲ. ಸ್ನಾನ ಮಾಡಿಸೋದರಿಂದ ಹಿಡಿದು, ಕೋಲು ಹಿಡಿದುಕೊಟ್ಟು ಹೇಗೆ ಓಡಾಡಬೇಕು. ಏನೇನು ಎಲ್ಲೆಲ್ಲಿದೆ ಅಂತ ಹೇಗೆ ಅಂದಾಜಿಟ್ಟುಕೊಂಡು ಓಡಾಡಬೇಕೆಂದು ಮಕ್ಕಳಿಗೆ ಶಾಲೆಯಲ್ಲಿ ಪಾಠ ಮಾಡಿದಂತೆ ಅತ್ತೆಗೆ ಹೇಳಿಕೊಡ್ತಾಳೆ. ನನಗೂ ಸಲಹೆ ಮಾಡ್ತಾಳೆ. ಅವಳು ನೋಡುವ, ಮಾಡುವ ಪರಿ ಕಂಡು ನನ್ನತ್ತೆಯ ಆರೈಕೆ ಮಾಡೋದು ನನಗೆ ಸುಲಭ ಆಗಿದೆ.

ಇಲ್ಲದಿದ್ದರೆ ಯಾವಾಗ ನೋಡಿದರೂ ಬುಕ್, ಪೆನ್ನು, ಪೇಪರು, ಆ ಸುದ್ದಿ, ಈ ಲೇಖನ ಎಂದು ಅಕ್ಷರ ಲೋಕದಲ್ಲೇ ಬದುಕುವ, ನಿದ್ದೆಯಲ್ಲೂ ಕನವರಿಸುವ ನಾನು ಹೇಗಾದರೂ ವಯಸ್ಸಾದ ಅತ್ತೆಯನ್ನು ನಿಭಾಯಿಸಲು ಸಾಧ್ಯ. ನನ್ನ ತಂಗಿಯ ಮಾರ್ಗದರ್ಶನ, ಅಮ್ಮ ಅಪ್ಪ ಹೇಳಿಕೊಟ್ಟ ಸಂಸ್ಕಾರ ನನ್ನತ್ತೆಯನ್ನ ಅಮ್ಮನಂತೆ ಶ್ರದ್ಧೆ ಯಿಂದ, ಅಕ್ಕರೆಯಿಂದ ಆರೈಕೆ ಮಾಡಲು ಸಹಕರಿಸಿವೆ.

ಅತ್ತೆಯ ಸ್ನಾನ ಮಾಡಿಸುವಾಗ, ಉಗುರು ಕತ್ತರಿಸುವಾಗ, ಕೈ ಹಿಡಿದು ರೂಮಿಂದ ವರಾಂಡದಲ್ಲಿ ಕುಳ್ಳಿರಿಸಿ ಬಿಸಿಲಿಗೆ ಮೈಯೊಡ್ಡಿ ತಲೆ ವರಿಸಿ ಕೊಡುವಾಗ, ಊಟದ ತಟ್ಟೆ, ನೀರಿನ ಬಾಟಲಿ ಅವರ ಕೈಗಿಡುವಾಗ ಅವರ ಕಣ್ಣಾಲಿಗಳು ಒದ್ದೆಗೊಂಡು ಭಾವುಕರಾಗುವುದುಂಟು.

ಇಂದಿನ ಹಿರಿಯರೆಲ್ಲಾ ಅಂದಿನ ಕಿರಿಯರೆ
ಅಂದಿನ ಕಿರಿಯರೆಲ್ಲಾ ಇಂದಿನ ಹಿರಿಯರೆ
ಮರೆಯದಿರಿ ನಾವೂ ನಾಳಿನ ವೃದ್ಧರೆ
ಎಂಬ ಕಾಲಚಕ್ರದ ಸತ್ಯವ ಅರಿತರೆ
ಅವರ ಮುಂದೆ ನಾವು, ನಮ್ಮಿಂದೆ ನಮ್ಮಕ್ಕಳು
ನಮ್ಮ ಹಿರಿಮೆ ಗರಿಮೆಗಳೇನೇ ಇದ್ದರೂ ಅವು
ಅವರ ಪೊರೆಯಲ್ಲಿ ನಾವು ಕಟ್ಟಿಕೊಂಡಿರುವ ಮಹಲುಗಳಷ್ಟೇ ಎಂಬ ಕೃತಜ್ಞತೆ ಅವರ ಮೇಲಿರಲಿ
ಅವರ ಕೃಪೆಯ ಕವಚವಿಲ್ಲದಿದ್ದರೆ ಕುಸಿದೀತು
ನಮ್ಮ ಕನಸಿನ ಗೋಪುರಗಳು, ಅರಮನೆಗಳು
ಎಚ್ಚರವಿರಲಿ ಮಕ್ಕಳೇ
ಹಿರಿಯರ ನಿರ್ಲಕ್ಷಿಸದಿರಿ
ಅವರನೆಂದೂ ಅಸಡ್ಡೆ ಮಾಡದಿರಿ.

ಹಳ್ಳಿಗಳಲ್ಲಿ ಹುಟ್ಟಿ ಬೆಳೆದ ನಮಗೆ ಇದೀಗ ನಗರಪಟ್ಟಣಗಳ ಬದುಕು ಬೇಸರಾಗಿದೆ. ಮತ್ತೆ ಹಳ್ಳಿಗಳತ್ತ ನಮ್ಮ ಚಿತ್ತ ಇಣುಕಿದರೂ ಸಾಂಸಾರಿಕ ಜವಾಬ್ದಾರಿಗಳು, ಮತ್ತೇನೋ ಕಮಿಟ್ಮೆಂಟ್ ಗಳಿಂದ ಭಾರವಾದ ಮನಸು ಹೊತ್ತು ಬದುಕಿನ ಜಟಕಾಬಂಡಿ ಸಾಗಿಸ್ತಿದೇವೆ. ಹಾಗಿರುವಾಗ ಹಳ್ಳಿಯೇ ಜೀವಾಳವೆಂದು ಉಸಿರಾಡಿದ ಹಿರಿ ಜೀವಿಗಳಿಗೆ ಪೇಟೆ ಬದುಕು ದುಸ್ತರ ಅನ್ನುವುದು ಎಲ್ಲರಿಗೂ ತಿಳಿದಿರುವ ದಿಟ. ಆದರೇನು ಮಾಡಲಾಗದ ಅನಿವಾರ್ಯ ಪರಿಸ್ಥಿತಿಗಳು ಎದುರಾದಾಗ ನಮ್ಮೊಟ್ಟಿಗೆ ಅವರನ್ನು ಸರಿದೂಗಿಸಲೆಬೇಕು. ಈ ವಿಷಯದಲ್ಲಿ ಹೆಣ್ಣುಮಕ್ಕಳಿಗೆ ಅಂದರೆ ನಮಗೆ ತಾಳ್ಮೆ, ಸಹನೆ, ಎಲ್ಲಕ್ಕಿಂತ ಮಿಗಿಲಾಗಿ ಹಿರಿಯರನ್ನು ಅರ್ಥ ಮಾಡಿಕೊಳ್ಳಬೇಕಾದ ಹೃದಯ ವೈಶಾಲ್ಯತೆ ತುಂಬಾ ತುಂಬಾ ಮುಖ್ಯ.

ನಮ್ಮ ಸಂಸಾರ, ನಮ್ಮ ಮಕ್ಕಳು, ನಮ್ಮ ಕೆಲಸ, ನಮ್ಮ ಶೆಡ್ಯೂಲ್, ನಮ್ಮ ಕೌಟುಂಬಿಕ ಜೀವನ ಶೈಲಿ ವಗೈರೆ.. ವಗೈರೆ. . ಇವೆಲ್ಲವೂ ಅವರಿಗೆ ಹೊಸ ಪ್ರಪಂಚ. ಆದರೆ ನಮಗೆ ಹಳ್ಳಿ, ದಿಲ್ಲಿ ಎರಡೂ ಸಂಸ್ಕೃತಿಗಳ ಅರಿವಿದೆ. ಪರಿವಿದೆ. ಹಾಗಾಗಿ ಅವರೊಂದಿಗೆ ನಮ್ಮನ್ನು ನಾವು ಒಗ್ಗಿಸಿಕೊಂಡು, ಕೆಲಕಾಲವಾದರೂ ಅವರನ್ನು ಮಗ, ಸೊಸೆ, ಮೊಮ್ಮಕ್ಕಳೊಂದಿಗೆ ನೆಮ್ಮದಿಯಾಗಿ ಕಳೆಯುವ ಅವಕಾಶ ಕಲ್ಪಿಸಿಕೊಡಬೇಕು.

ನನ್ನ ಅತ್ತೆಯನ್ನು ಹಳ್ಳಿಯಿಂದ ಬೆಂಗಳೂರಿಗೆ ಕರೆತರಲು ನಾನೆ ನಿರ್ಧಾರ ಮಾಡಿದೆ. ಮೊದಲಿಗೆ ನನಗೂ ಅವರನ್ನು ನಾನಿಲ್ಲಿ ನೆಮ್ಮದಿಯಾಗಿಡುವುದು ಹೇಗೆಂಬ ಆಲೋಚನೆಯೂ ಇತ್ತು. ಅವರು ಹೆತ್ತ ಮಕ್ಕಳು, ಬೆಳೆಸಿದ ಮೊಮ್ಮಕ್ಕಳು, ಇಲ್ಲೆ ಇರುವುದು ಅವರಿಗೊಂದು ಪ್ಲಸ್ ಪಾಯಿಂಟ್ ಅನ್ನಿಸಿತು. ಅಂದರೆ ನೋಡಿಕೊಳ್ತಾರೆಂದಲ್ಲ. ಅವರ ಮನಸಿಗೊಂದು ಸಮಾಧಾನವೆಂದು. ಬಂದ ಮೊದಲಲ್ಲಿ ಅವರಿಗೂ, ಇವರಿಗೂ ಎಲ್ಲರಿಗೂ ಅಪರೂಪ, ಆಪ್ಯಾಯಮಾನ, ಪ್ರೀತಿ ಎಲ್ಲವೂ ಉಕ್ಕಿ ಹರಿಯಿತು. ಅಪರೂಪ ನಿಧಾನಕ್ಕೆ ಕಡಿಮೆಯಾದಾಗ ಅವರು ಆಲೋಚನೆಗೆ ಬಿದ್ದರು. ಆಗ ನಾನು ಎಚ್ಚರಗೊಂಡು ಅವರ ಮನಸ್ಥಿತಿ ಅರ್ಥ ಮಾಡಿಕೊಂಡು ನನ್ನತ್ತ ಅವರ ಗಮನ ಸೆಳೆಯಲು ಶುರು ಮಾಡಿದೆ. ಅವರೊಂದಿಗೆ ನನ್ನ ಕೈಲಾದಷ್ಟು ಸಮಯ ಕಳೆಯಲು ಸಾಧ್ಯವಾದಷ್ಟು ಟ್ರೈ ಮಾಡಿದೆ.

ನಾವು ಗಂಡ ಹೆಂಡತಿ ಜೊತೆಗೆ ಮಗ, ಮಗಳು ಸಮಯವನ್ನು ಷೇರ್ ಮಾಡಿಕೊಂಡು ನಮ್ಮ ಡೈಲಿ ಶೆಡ್ಯೂಲ್ ಗಳ ಜೊತೆಗೆ ಅವರು ಹೊಂದಿಕೊಳ್ಳುವಂತೆ, ಅವರ ಕೆಲವು ಶೈಲಿಗಳೊಂದಿಗೆ ನಾವು ಹೊಂದಿಕೊಂಡು ಬಿಟ್ಟಿದ್ದೇವೆ. ಬೆಳಿಗ್ಗೆ 9ರವರೆಗೂ ಅವರ ಮಗ, ಆನಂತರ ಅವರು ಇಷ್ಟು ಪಡುವ ಮುದ್ದೆ ಊಟ ಬೆಳಗ್ಗೆ ಮತ್ತು ಮಧ್ಯಾಹ್ನ ಊಟ ನಾನು ಕೊಟ್ಟು 2 ಗಂಟೆಗೆ ನಾನು ಹೊರಟರೆ ಸಂಜೆ 6ರವರೆಗೆ ನನ್ನ ಮಗ, ಆನಂತರ ರಾತ್ರಿ ಊಟ ಅವರ ಮಗನೊಂದಿಗೆ ಮಾಡಿ, ಆಗೊಮ್ಮೆ, ಈಗೊಮ್ಮೆ ಹೊರಲಾಡಿ ನಿದ್ದೆ ಮಾಡಿದರೂ ರಾತ್ರಿ 1 ಗಂಟೆಗೆ ನಾನು ಬಂದಿಳಿದು ಕಾರಿನ ಡೋರ್ ಹಾಕಿದ ಕೂಡಲೆ ಎಚ್ಚರಗೊಂಡು ರಾಧೆ ಬಂದಳು ಗೇಟು ತೆಗೆಯಲು ಅವರ ಮಗನಿಗೆ, ನಿಮ್ಮಮ್ಮ ಬಂದಳೆಂದು ನನ್ನ ಮಗನಿಗೇಳಿ ಮಲಗುವುದು ರೂಢಿಸಿಕೊಂಡಿದ್ದಾರೆ. ನೋಡಿ ಪರಿಸ್ಥಿತಿಗಳು ಹೇಗೆ ನಮಗೆ ಪಾಠ ಕಲಿಸುತ್ತವೆ. ನಾವು ಯಾವುದನ್ನು ಹೊರೆಯಲ್ಲವೆಂದು ಭಾವಿಸಿದರೆ ನಮಗ್ಯಾ ವುದು ಸಮಸ್ಯೆ ಅಲ್ಲವೇ ಅಲ್ಲ.

ಅವರಿಗಿನ್ನೂ ವಯಸಾದರೆ ಏನು ಮಾಡುವೆ ಅಂತ ಗೆಳತಿಯರು, ನೆಂಟರು ಕೇಳುವುದುಂಟು. ನಾವೊಂದು ಒಳ್ಳೆ ಕೆಲಸ ಮಾಡುವಾಗ ಬಾಬಾ ಎಂದೂ ನನ್ನ ಕೈ ಬಿಡಲ್ಲಾ ಯಾವುದೊ ಒಂದು ಒಳ್ಳೆ ದಾರಿ ತೋರಿಸ್ತಾರೆ. ಆಗ ನನ್ನ ಆಫೀಸಿನಲ್ಲಿ ವಾಸ್ತವ ಸ್ಥಿತಿ ಅರ್ಥ ಮಾಡಿಸ್ತೇನೆ. ಅವರ ಸೇವೆಯೊಂದಿಗೆ ಆಫೀಸ್ ಕೆಲಸವೂ ಮಾಡಲು ನನಗೆ ಸ್ವಲ್ಪ ದಿನಗಳ ಮಟ್ಟಿಗೆ ವರ್ಕ್ ಫ್ರಮ್ ಹೋಮ್ ಗೆ ಅವಕಾಶ ಕಲ್ಪಿಸಿ ಅಂತ ಕೇಳುತ್ತೇನೆ. ಯಾರು ಬೇಡ ಅನ್ನಲ್ಲವೆಂಬ ಬಲವಾದ ನಂಬಿಕೆ ಇದೆ ಅಂದಾಗ, ಅದಕ್ಕೆ ಕಣೆ ನೀನು ಅನುರಾಧೆ ಅಂತ ನನ್ನತ್ತ ಒಂದು ಮುಗುಳ್ನಗೆ ಬೀರಿ ಕೈಬೀಸಿ ಹೊರಡುವರು.

ಹಿಂದಿನ ಸಂಚಿಕೆಗಳು :


  • ಬಿ.ವಿ.ಅನುರಾಧ – ಪತ್ರಕರ್ತರು, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW