ಅಂದಿನ ದಿನಗಳಲ್ಲಿ ನಾ ಕಂಡ ಮಟ್ಟಿಗೆ ಹಿರಿಯರು, ಕಿರಿಯರಿಲ್ಲದ ಮನೆಗಳೇ ಇರಲಿಲ್ಲ. ಈಗ ಹಳ್ಳಿಗಾಡಲ್ಲಿ ನೆಲೆಸಿರುವುದು ಮುದಿಜೀವಗಳು ಮಾತ್ರ. ಪತ್ರಕರ್ತರಾದ ಬಿ.ವಿ.ಅನುರಾಧ ಅವರ ಹೊಸ ಅಂಕಣ ‘ಇಳಿಸಂಜೆ’ ಅಂಕಣದಲ್ಲಿ ‘ಇಳಿಸಂಜೇಲೊಂದು ಮುಂಜಾವು’ ವನ್ನು ತಪ್ಪದೆ ಮುಂದೆ ಓದಿ…
ಇಂದಿನ ದಿನಗಳಲ್ಲಿ ಬಹುತೇಕರ ಬಾಯಲ್ಲಿ ಕೇಳಿಬರುವ ಸಾಮಾನ್ಯ ಮಾತು ‘ನೆಮ್ಮದಿ’ಯೇ ಇಲ್ಲವಾಗಿದೆ. ಆದರೆ ನಮ್ಮ ಚಿಕ್ಕಂದಿನಲ್ಲಿ ಈ ಮಾತನ್ನು ನಾವು ಕೇಳಿದ್ದೇ ಅಪರೂಪವಲ್ಲ, ಕೇಳಿದ್ದೇ ಇಲ್ಲ. ಆಗ ಆ ನೆಮ್ಮದಿ ಮೊಗೆದಷ್ಟೂ ಮನದಲ್ಲಿ ಸಿಗುತ್ತಿತ್ತು.
ಈ ನೆಮ್ಮದಿಯನ್ನು ಅರಸುತ್ತಾ ಅಲೆಯುವ ಇಂದಿನ ದಿನಮಾನಸದಲ್ಲಿ ನಾವೆತ್ತ ಸಾಗುತ್ತಿದ್ದೇವೆಂಬ ಪರಿವೆ ಇಲ್ಲದೆ ಈ ಜೀವನಚಕ್ರಗಳು ಸರಿಯುತ್ತಿವೆ. ನಗರಪಟ್ಟಣಗಳ ಬಹುತೇಕ ಮನೆಗಳಲ್ಲಿ ಇಂದು ಹಿರಿಜೀವಗಳೇ ಕಾಣುತ್ತಿಲ್ಲ. ಅಂದರೆ ನಮ್ಮದೀಗ ವಿಭಕ್ತ ಕುಟುಂಬ ವ್ಯವಸ್ಥೆ. ಗಂಡ-ಹೆಂಡತಿ, ಮಗ-ಮಗಳು. ಇತ್ತೀಚೆಗೆ ಒಂದೇ ಮಗುವಿನ ಟ್ರೆಂಡ್ ಬೇರೆ. ಅಮ್ಮ-ಅಪ್ಪ ಅಲ್ಲಲ್ಲಾಲ್ಲಾ. ಮಮ್ಮಿ-ಡ್ಯಾಡಿ ಸನ್/ಡಾಟರ್(ಸಿಂಗಲ್). ಇಂತ ಕಾಲದಲ್ಲಿ ಪಾಪ ಹಿರಿಯರು ಹಳ್ಳಿ ಮನೆಗಳಲ್ಲಿ ಕೊರಗುತ್ತಾ ಕುಳಿತಿರುವುದು, ಮಲಗಿರುವುದು ಕಂಡು ಮರುಕವಾಗುತ್ತೆ. ಅವರ ಕಣ್ಣೀರ ಕತೆಗಳು ಆಲಿಸುವವರೇ ಇಲ್ಲದೆ, ನರಳುತ್ತಿವೆ. ಅವುಗಳತ್ತ ಒಮ್ಮೆ ನಮ್ಮ ಚಿತ್ತ ಹರಿಸೋಣವೆಂಬುದು ನನ್ನ ಅಂಬೋಣ.

ಅದೊಂದು ಕಾಲವಿತ್ತು. ಅಂದ ಮಾತ್ರಕ್ಕೆ ಯಾವುದೋ ದ್ವಾಪರವೋ, ತ್ರೇತ್ರಾಯುವೋ ಅಲ್ಲ. ನನ್ನ ಬಾಲ್ಯದಲ್ಲೇ ನಾ ಕಂಡ ಮನೆ ಮನೆ ಕಥೆಗಳು ಹೇಗಿದ್ದವು, ಹೇಗಾದವೆಂಬ ಚಿಂತೆ ನನ್ನನ್ನು ಬಹುವಾಗಿಯೇ ಕಾಡುವುದುಂಟು.
ಮನೆಯಲ್ಲಿರುವ ಯುವಜನತೆ, ಮಧ್ಯವಯಸ್ಕರು ಕೃಷಿ ಕಾರ್ಯಗಳಲ್ಲಿ ತೊಡಗಿಕೊಂಡರೆ ಹಿರಿಯರು ಮನೆಯಲ್ಲಿ ಮಕ್ಕಳ ನಿರ್ವಹಣೆ, ದನಕರು, ಕುರಿ, ಕೋಳಿ ಅಂತ ಮನೆ ಉಸ್ತುವಾರಿ ನೋಡಿಕೊಂಡು, ಅಡುಗೆ ಮಾಡಿಕೊಂಡು ಮನೆ ಬೆಳಗುತ್ತಿದ್ದರು. ಆಗೆಲ್ಲಾ ಜೀವನ ಬದುಕಲಷ್ಟೇ ಸಾಕಿತ್ತು. ತಿನ್ನಲು, ಉಣ್ಣಲು, ಮನೆಗೆ ಬಂದವರಿಗೆ ಒಂದಿಷ್ಟು ಊಟ ಕೊಟ್ಟರೆ ಅದೇ ಸಮಾಧಾನವಿತ್ತು. ಮನೆಯಲ್ಲಿರುವವರೆಲ್ಲಾ ನೆಮ್ಮದಿಯಾಗಿ, ವಿಶಾಲ ಮನಸ್ಸಿನಿಂದ, ಸಂತೋಷವಾಗಿ ಬಾಳುವುದೇ ಮುಖ್ಯವಾಗಿತ್ತು. ಅದಷ್ಟೇ ಅವರಿಗೆ ತಿಳಿದಿತ್ತು ಕೂಡ. ಕಾಲಕಾಲಕ್ಕೆ ಮಳೆ-ಬೆಳೆ ಬಂದರೆ ಅದುವೇ ಅದ್ಭುತ ಅದೃಷ್ಟ, ಸಿರಿತನ. ಈಗಿನಂತೆ ಐಷಾರಾಮಿ ಬಂಗಲೆ-ಕಾರು-ರಾಜಟೀವಿಯ ಸೋಗಲಾಡಿ ವೇಷಗಳೆಲ್ಲಾ ಅವರಿಗೆ ಗೊತ್ತಿರಲಿಲ್ಲವೋ, ಅವರು ಅಳವಡಿಸಿಕೊಂಡಿಲ್ಲವೋ. ಆದರೆ, ಮೊಗೆದಷ್ಟು ಬದುಕಿನಲ್ಲಿ ಶಾಂತಿ, ನೆಮ್ಮದಿ, ನೆರವಿನ ಹಸ್ತ ಚಾಚುವ ಸಂಪನ್ನಗುಣ ಮಾತ್ರ ತುಂಬಿ ತುಳುಕುತ್ತಿತ್ತು. ಈಗ ಅವೆಲ್ಲಾ ಶೂನ್ಯಶೂನ್ಯ ಎನ್ನುತ್ತಿವೆ ಆ ಹಿರಿಬಡಜೀವಗಳು.
ಅಂದಿನ ದಿನಗಳಲ್ಲಿ ನಾ ಕಂಡ ಮಟ್ಟಿಗೆ ಹಿರಿಯರು, ಕಿರಿಯರಿಲ್ಲದ ಮನೆಗಳೇ ಇರಲಿಲ್ಲ. ಮನೆಯ ಒಂದು ಮೂಲೇಲೋ, ನಡುಮನೆಯಲ್ಲೋ, ಇಲ್ಲವೇ ವರಾಂಡದಲ್ಲೋ ತೊಟ್ಟಿಲಲ್ಲೊಂದು ಮಗು ತೂಗುತ್ತಿತ್ತು. ಅಜ್ಜಿಯ ಕಂಕುಲಲ್ಲೊಂದು ಮಗು, ಪಾತ್ರೆ ತೊಳೆಯುವ ಅಜ್ಜಿಯ ಬಾಲಂಗೋಚಿಯಂತೆ ಗೊನ್ನೆ ಸೋರುವ ಮೂಗನ್ನು ಭುಜಕ್ಕೊರೆಸಿಕೊಳ್ಳುತ್ತ ತಿನ್ನಕ್ಕೇನಾರು ಕೊಡು… ಎಂದು ಅಜ್ಜಿ ಸೆರಗೆಳೆಯುತ್ತಿತ್ತು. ಇದೊಂದು ಮುದ್ದೆ ಮಡಿಕೆ, ಮಜ್ಜಿಗೆ ಕುಡಿಕೆ ತೊಳೆದು ಬರುವೆ ಮಗನೆ ಅಂತ ಅಜ್ಜಿ ಗೋಗರೆದರೂ ಆ ಮಗು ಮಾತ್ರ ರಚ್ಚೆಯಿಡಿದು ಜೋತು ಬೀಳುತ್ತಿತ್ತು. ಕೊನೆಗೂ ತೊಳೆಯುವ ಮಡಿಕೆಗಳನ್ನು ಅಲ್ಲಿಯೇ ಬಿಟ್ಟು ಆ ಮಗುವಿಗೆ ನಾಲ್ಕು ಕಡಲೇಕಾಯಿ, ಒಂದಿಷ್ಟು ಬೆಲ್ಲ ಕೊಟ್ಟು ಮತ್ತೆ ಬಂದು ಅಂಗಳದಲ್ಲಿ ಕೋಳಿಗಳ ಚುವ್….ಚುವ್…. ಓಡಿಸುತ್ತಾ ಪಾತ್ರೆ ತೊಳೆಕೊಂಡು ಮತ್ತೊಂದು ಕೆಲಸಕ್ಕೆ ಅಣಿಯಾಗುತ್ತಿದ್ದಳು.

ಅಂದು ಅಜ್ಜಿಯರೇ ಮನೆಯ ಅಲಂಕಾರಭೂಷಿತರು. ಅವರಿದ್ದರೇನೆ ಮನೆಗೊಂದು ಕಳೆ. ಮಕ್ಕಳಿಗೆ ಹಬ್ಬ. ನಾವೆಲ್ಲಾ ಅಜ್ಜಿ ಸೆರಗು ಮುಖಕ್ಕೊದ್ದು ಬೂಚಿಕೂಚಿಯಾಟ ಆಡತ್ತಿದ್ದದ್ದು ನೆನಸಿಕೊಂಡರೆ ಮತ್ತೆಂದೂ ಬಾರದ ಆ ಬಾಲ್ಯವೇಕೆ ಕಳೆದುಹೋಯಿತೆಂಬ ಕೊರಗು ಕಾಡದಿರದು. ಅಜ್ಜಿಯ ಸೆರಗೆಲ್ಲಂತಾ ಮಜಬೂತಂತೀರಾ. ಆ ಸವಿಯ ಬಲ್ಲವರೇ ಬಲ್ಲವರು. ಈಗಿನ ಆಧುನಿಕ ಅಜ್ಜಿಯರಿಗೂ ಸಮಯವೆಲ್ಲಿದೆ ಮೊಮ್ಮಕ್ಕಳೊಂದಿಗೆ ಕಳೆಯಲಲ್ಲವೇ, ಉದಾಹರಣೆಗೆ ಓಡುತ್ತಿರುವ ನಾವೆ, ನಮ್ಮ ಬದುಕೆ ಕಣ್ಣೆದುರಿನ ಸಾಕ್ಷಿ.
ಆದರೆ ಏನು ಮಾಡುವುದು ಬದಲಾವಣೆ ಜಗದ ನಿಯಮ ಅಂತೀವಲ್ಲಾ ನಾವೆಲ್ಲಾ. ಅದೆ ವಿದ್ಯಾವಂತರು, ಬುದ್ದಿವಂತರು ಆ ಕೆಲಸ, ಈ ಕೆಲಸ ಅಂತೆಲ್ಲಾ ನಗರಪಟ್ಟಣಗಳಿಗೆ ವಲಸೆ ಬಂದವರು. ಈಗ ಹಳ್ಳಿಗಾಡಲ್ಲಿ ನೆಲೆಸಿರುವುದು ಮುದಿಜೀವಗಳು ಮಾತ್ರ. ಪಾಪ ಇತ್ತ ಬರಲಾರವು, ಅಲ್ಲಿರಲಾರವು ಹಾಗಾಗಿದೆ ಅವರ ನೆಲೆ. ಕೆಲ ಅನಿವಾರ್ಯ ಪರಿಸ್ಥಿತಿಗಳಲ್ಲಿ ಕೆಲವರು ವಿಧಿಯಿಲ್ಲದೆ ನಮ್ಮೊಂದಿಗೆ ಬಂದುಳಿದುಕೊಂಡರೂ ಅವರ ಹಿಂಸೆಯೊಂದಿಗೆ ಸವೆಸುವ ಜೀವಗಳ ನೋವು ಒಂದೆರಡಲ್ಲ. ಅನಾರೋಗ್ಯ, ಒಂಟಿತನ, ಆಧುನಿಕ ಕಿರಿಕಿರಿಗಳು, ಮನಸ್ಸಿನ ದುಗುಡಗಳು ಅವರ ಮನದೊಳಗೊಮ್ಮೆ ಇಣುಕಿದರೆ ಕಾಣುವುದು ನೂರಾರು ಕಥೆ-ವ್ಯಥೆಗಳು. ಅವುಗಳನ್ನು ತಮ್ಮೊಂದಿಗೆ ಹಂಚಿಕೊಳ್ಳೋಣವೆಂಬ ಸಣ್ಣ ಪ್ರಯತ್ನ ನನ್ನದು.
- ಬಿ.ವಿ.ಅನುರಾಧ – ಪತ್ರಕರ್ತರು, ಬೆಂಗಳೂರು.
