“ಇದು ನಮ್ಮ-ನಿಮ್ಮದೇ ಬದುಕಿನ ಲೆಕ್ಕಾಚಾರದ ಕವಿತೆ. ಭ್ರಮೆ ಕಳುಚುವ ಬೆಳಕಿನ ಸಂಚಾರದ ಭಾವಗೀತೆ. ಏನೆಲ್ಲಾ ಓದಿದರೂ, ಎಷ್ಟೆಲ್ಲಾ ಅನುಭವಗಳಾದರೂ, ಅದೆಷ್ಟು ಅರಿವು, ಅಧ್ಯಯನಗಳಾದರೂ ನಮ್ಮ ಬದುಕಿನ ಭ್ರಮೆ ಕಳಚುವುದೇ ಇಲ್ಲ. ವಾಸ್ತವದ ಬೆಳಕು ರಾಚುವುದೇ ಇಲ್ಲ. ಅಂದಿಗೂ, ಇಂದಿಗೂ, ಎಂದಿಗೂ ಬದುಕು ಬದಲಾಗುವುದೇ ಇಲ್ಲ. ಸ್ವಾರ್ಥ ಕಳೆದು ಪರಮಾರ್ಥದರಿವು ಮೂಡುವುದೇ ಇಲ್ಲ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ನನ್ನ ಬಳಿ ಇರುವುದು ಇಷ್ಟು
ನನ್ನ ಭಾಗ್ಯಕೆ ಬಂದಿರುವಷ್ಟು
ನಿನ್ನ ಬಳಿ ಇರುವುದು ಅಷ್ಟು
ನಿನ್ನ ಹಣೆಬರಹಕೆ ಬರೆದಷ್ಟು.!
ಮತ್ತೆ ಪರಸ್ಪರ ತುಲನೆಯೇಕೆ?
ಹೆಚ್ಚು ಕಡಿಮೆಗಳ ಸಂಖ್ಯೆಯೇಕೆ?
ತೂಗಿ ಬೀಗಿ ಅಳೆವ ಲೆಕ್ಕವೇಕೆ?
ಮೇಲು ಕೀಳಿನ ಗಣನೆಯೇಕೆ?
ಕೇಳು ಒಂದರ್ಥದಿ ನಾವಿಬ್ಬರು
ಅಕ್ಷರಶಃ ಸರಿ ಸಮಾನರು
ಬರಿಗೈಲಿ ಇಲ್ಲಿಗೆ ಬಂದವರು
ಬರಿಗೈಲೆ ಮರಳಿ ಹೋಗುವವರು.!
ಇಳೆಗೆ ಬಂದ ಮೇಲಷ್ಟೇ ಖುದ್ದು
ನನ್ನ ಪಾಲಿಗೆ ನನಗೆ ದಕ್ಕಿದಷ್ಟು
ನಿನ್ನ ಪಾಲಿಗೆ ನಿನಗೆ ಸಿಕ್ಕಿದಷ್ಟು
ನಮದೆಂದು ನಾವೆ ಅಂದುಕೊಂಡಿದ್ದು.!
ಬುವಿಗೆ ನಾವು ತಂದಿದ್ದು ಕೊಟ್ಟಿದ್ದು
ಏನೊಂದಾದರೂ ಇದೆಯ ಹೇಳು?
ಇಲ್ಲಿನದೆಲ್ಲ ನಮ್ಮದೆನ್ನುವ ಬಾಳು
ಬರೀ ಪಾಲುಮಾಡಿಕೊಳ್ಳುವ ಗೀಳು.!
ಅಬ್ಬಾ ನಾಲ್ಕೇ ನಾಲ್ಕು ದಿನಗಳ
ಬದುಕಲ್ಲಿ ಏನೆಲ್ಲಾ ಲೆಕ್ಕಾಚಾರ?
ನೆಲ ಜಲ ಗಾಳಿ ಸಕಲವನೂ
ಪಾಲು ಮಾಡಿಕೊಳ್ಳುವ ವ್ಯವಹಾರ.!
ಲೆಕ್ಕ ಹಾಕುವ ನಮ್ಮಿಬ್ಬರ ನೋಡಿ
ನಗುತಿಹನು ಮೇಲೆ ಕುಳಿತವನು
ಹೆಸರು ಕೆತ್ತುವ ನನ್ನ-ನಿನ್ನ ಕಾಡಿ
ಉಸಿರ ತೆಗೆಯಲು ಕಾಯುತಿಹನು.!
- ಎ.ಎನ್.ರಮೇಶ್.ಗುಬ್ಬಿ
