ಬಿಗ್ ಬಾಸ್ ನಲ್ಲಿ ‘ನಾನು’ (ಭಾಗ – ೨ ) – ಶಾಲಿನಿ ಹೂಲಿ ಪ್ರದೀಪ್

ಅಸಾಧ್ಯ ಅಂದುಕೊಂಡದ್ದು ಅಪ್ಪಿತಪ್ಪಿ ಹೀಗೆ ಆದ್ರೆ ಜೀವನ ಜಿಂಗ್ ಲಾಲಾ ಅಲ್ವಾ…ತಪ್ಪದೆ ಓದ್ರಿ.. ಬಿಗ್ ಬಾಸ್ ನಲ್ಲಿ ನಾನು ಮತ್ತು ನನ್ನ ಕತೆ…

ಮುಂದೆವರೆದ ಭಾಗ :

ಪದ್ದಣ್ಣನ ಕಾರಲ್ಲಿ ಕೂರಸ್ಕೊಂಡು colours ಕನ್ನಡ ಆಫೀಸ್ ತ್ತ ನಡದೆ. ದಾರಿ ಉದ್ದಕ್ಕೂ

” ನೋಡೇ ದೇವಿ… ಜಗಳ ಮಾಡೋದು ಅಂದ್ರೆ ನನ್ನ ಹತ್ರ ಮಾಡ್ತಿಯಲ್ಲ, ಹಾಗಲ್ಲ… ನೆಕ್ಸ್ಟ್ ಲೆವೆಲ್ ಇರುತ್ತೆ… ಯೋಚ್ನೆ ಮಾಡು… ಸುಮ್ನೆ ಮಂಗಾ ಆಗ್ಬೇಡಾ… ವಿಚಾರ ಮಾಡು”… ಪದ್ದಣ್ಣ ಒಂದೇ ಸಮನೇ ಬುದ್ದಿ ಹೇಳತೊಡಗಿದ. ನಾನು ಬಿಗ್ ಬಾಸ್ ಹೋಗೋದೇ ಅಂತ ಫಿಕ್ಸ್ ಆಗಿ ಕೂತವಳಿಗೆ ಯಾರ್ ಮಾತು ಕೇಳಿಸಿಕೊಳ್ಳೋ ಮನಸ್ಥಿತಿ ಇರಲಿಲ್ಲ.

‘ನಾನು ಬಿಗ್ ಬಾಸ್ ಹೋಗೋಳೇ’… ಒಂದೇ ಸಾಲಲ್ಲಿ ನನ್ನ ಮಾತು ಹೇಳಿ ಮುಗಿಸಿದೆ.

ಕರ್ಮ ಏನೇನು ರಾದ್ದಂತ ಮಾಡ್ಕೊಂಡು ಅಳ್ಕೊಂಡು ಬರತ್ತಾಳೋ ಅಂತ ಪದ್ದಣ್ಣ ಲೋಚ್ ಗುಟ್ಟುತ್ತಿದ್ದ.

colours ಕನ್ನಡ ಆಫೀಸ್ ಬಂತು. ಪದ್ದಣ್ಣನ ಹೃದಯದ ಬಡಿತ ಜೋರಾಗಿಯೇ ಬಡೆದುಕೊಳ್ಳುತ್ತಿತ್ತು.ನನಗೆ ಬಿಗ್ ಬಾಸ್ ಒಳಗೆ ಏನ್ ಆಗುತ್ತೆ ಅನ್ನೋ ಯೋಚ್ನೆನೇ ಇರಲಿಲ್ಲ. ಬದಲಾಗಿ ನಾನು ಬಿಗ್ ಬಾಸ್ ಹೋಗಿ ಬರೋದ್ರೊಳಗೆ ಪದ್ದಣ್ಣ, ಮಕ್ಕಳಿಗೆ ಚೆನ್ನಾಗಿ ಬುದ್ದಿ ಕಲಸಿರತ್ತೀನಿ … ಎಲ್ಲರೂ ತಮ್ಮ ಕೆಲಸ ತಾವು ಮಾಡ್ಕೊತ್ತಾರೆ. ಮನೆ ಕ್ಲೀನಿಂಗ್ ಕಲ್ತಿರತ್ತಾರೆ, ಅಡುಗೆ ಕಲ್ತಿರತ್ತಾರೆ ಅಂತ ಏನೇನೋ ದೂರದ ಆಲೋಚನೆಗಳು.

“ನೋಡು ದೇವಿ… ಆಫೀಸ್ ಒಳಗೆ ಕೂತಿದ್ದೀವಿ.. ಇನ್ನೂ ಟೈಮ್ ಇದೆ. ಎದ್ದು ಓಡಿ ಬಿಡೋಣ ವಿಚಾರ ಮಾಡು.. ಈ ಬಿಗ್ ಬಾಸ್ ನಿನ್ನಂತವರಿಗಲ್ಲ ಸುಮ್ನೆ ಮನೆಗೆ ನಡಿ”… ಅಂತ ಪದ್ದಣ್ಣ ಗೋಗರಿದ. ‘ಹೋಗೋದು ಫಿಕ್ಸ್’… ಅಂತ ನಾನು ಮಾತಾಡಲಿಲ್ಲ.

ಚಾನೆಲ್ ಕಡೆಯವರು ಬಂದು ನಿಯಮಗಳ ಬಗ್ಗೆ ವಿವರಿಸಿದರು.  ಹುಲಿ ಉಗುರಿನ ಕತೆ ತರ ಹಣದ ಬಗ್ಗೆ ಹೇಳಿ ಇನ್ಕಮ್ ಟ್ಯಾಕ್ಸ್ ಅವರು ನನ್ನ ಹಿಡ್ಕೊಂಡು ಹೋದ್ರೆ ಅನ್ನೋ ಕಾರಣಕ್ಕೆ ಚಾನೆಲ್ ನವರು ನಂಗೆ ಎಷ್ಟು ಕೊಟ್ರು ಅಂತ ನಾನು ಯಾರಿಗೂ ಬಾಯಿ ಬಿಡಲಿಲ್ಲ. ಅಗ್ರಿಮೆಂಟ್ ಸಹಿ ಹಾಕ್ತಿದ್ದ ಹಾಗೆ ಬ್ಯಾಗ್ ಗೆ ಅಗ್ರಿಮೆಂಟ್ ಕಾಪಿ ಹಾಕೊಂಡು ಸೀದಾ ಮನೆಗೆ ಬಂದೆ.

ಮನೆಗೆ ಬಂದ್ಮೇಲೆ ಎಲ್ಲರಿಗೂ ಕೂಡಸ್ಕೊಂಡು ಹೇಳಿದೆ. ‘ನಾನು ಬಿಗ್ ಬಾಸ್ ಮನೆ ಹೋಗೋ ಮುಂಚೆಯೇ ಬಿಗ್ ಬಾಸ್ ಮನೆ ನನಗೆ ಅನುಭವ ಆಗ್ಬೇಕು. ಇವತ್ತಿಂದ ಬಿಗ್ ಬಾಸ್ ಮನೆಯೊಳಗೆ ಹೋಗೋವರೆಗೂ ನೀವೆಲ್ಲಾ ನನಗೆ ಪ್ರತಿಸ್ಪರ್ಧೆಗಳು. ಅಡುಗೆ ಮನೆ ನಾನು ತಗೋತೀನಿ, ಬಾತ್ ರೂಮ್ ಪದ್ದಣ್ಣ ಕ್ಲೀನ್ ಮಾಡಬೇಕು, ಸಕ್ಕರೆ ಬಟ್ಟೆ ತೊಳಿಬೇಕು, ಅಕ್ಕರೆ ಮನೆ ಕ್ಲೀನ್ ಮಾಡಬೇಕು. ಈ ವಾರದ ಕ್ಯಾಪ್ಶನ್ ನಾನೇ’… ಅಂದೆ. ಅಪ್ಪ- ಮಕ್ಕಳು ಕಕ್ಕಾಬಿಕ್ಕಿ ಆದ್ರು.

ನಿಮ್ಮ ಅಮ್ಮ… ಬಿಗ್ ಬಾಸ್ ಹೋಗೋ ಮುಂಚೆನೇ ಪ್ರಜ್ಞೆ ಕಳಕೊಂಡ ಹಾಗಿದೆ ಅಲ್ವಾ ಅಂತ ಮಕ್ಕಳ ಮುಂದೆ ಪದ್ದಣ್ಣ ಹೇಳಿಕೊಂಡು ಗಾಬರಿ ಆದ.

” ಮನೆಯಲ್ಲಿ ಎಲ್ರು ರೂಲ್ಸ್ ಫಾಲೋ ಮಾಡಬೇಕು ತಿಳಿತಾ”…ಅಂದೆ.

ನನ್ನ ನಡುವಳಿಕೆ ನೋಡಿ ಮೂರು ಜನ ತಲೆ ಬಿಸಿ ಮಾಡ್ಕೊಂಡ್ರು.

ಸಕ್ಕರೆ ‘ಅಮ್ಮ ಈ ಮೊಬೈಲ್ ಪೌಚ್ ನ್ನ ಕುತ್ತಿಗೆಗೆ ಹಾಕೋ, ಆಗ ಮೈಕ್ ಹಾಕೋದು ಅಭ್ಯಾಸ ಆಗುತ್ತೆ’… ಅಂದ. ಅದು ಸರಿ ಅಂತ ಕುತ್ತಿಗೆಗೆ ಮೊಬೈಲ್ ಪೌಚ್ ಹಾಕಿಕೊಂಡೆ.

ಅಕ್ಕರೆ ಬಂದು ‘ಅಮ್ಮ ತಿನ್ನೋಕೆ ಸ್ನಾಕ್ಸ್ ಸಿಗುತ್ತಾ’… ಅಂತ ಕೇಳಿದ. ಒಮ್ಮೆಲೇ ಗುರ್ ಅಂದೆ.

“ಇರೋ ಐಟಂಲ್ಲಿ ಅಡ್ಜಸ್ಟ್ ಮಾಡ್ಕೊಂಡು ತಿನ್ನಬೇಕು ಈಗ ಸೀದಾ ರಾತ್ರಿಗೆ ಊಟ. ಮಧ್ಯೆದಲ್ಲಿ ತಿನ್ನೋಕೆ ಏನು ಕೇಳೋ ಹಾಗಿಲ್ಲ’… ಅಂತ ಜೋರ್ ಮಾಡಿದೆ. ಪಾಪದ್ದು ಹೆದರಿ ಅವರಪ್ಪನ ಹತ್ರ ಹೋಗಿ ಕೂತ.

“ಅಮ್ಮ ಬಿಗ್ ಬಾಸ್ ಲ್ಲಿ ಒಳ್ಳೆ performance ಕೊಡ್ತಾಳೆ ಅಪ್ಪಾ… ಅಮ್ಮ, ಬಿಗ್ ಬಾಸ್ ಹೋಗ್ತಿದ್ದ ಹಾಗೆ ನಮಗೆ ಒಳ್ಳೆ ಹೋಟೆಲ್ ಬುಕ್ ಮಾಡು.. ನಾಲ್ಕು ದಿನ ಇದ್ದು ಏನೇನು ಬೇಕು ತಿನ್ಕೊಂಡು. ಒಂದು ವಾರ ಅಡ್ಡಾಡಿ ಮನೆಗೆ ಬರೋಣ. ಮೊದಲ ವಾರದಲ್ಲೇ ಅಮ್ಮ ಬಿಗ್ ಬಾಸ್ ಮನೆಯಿಂದ ವಾಪಾಸ್ ಬಂದಿರತ್ತಾಳೆ. ಜೊತೆಗೆ ಅಮ್ಮನ ಹವಾ ಇಳಿದಿರುತ್ತೆ”… ಅಂತ ಸಕ್ಕರೆ ಕಿಸಿ ಕಿಸಿ ನಕ್ಕ…

ರಾತ್ರಿ ಪದ್ದಣ್ಣ ಬಂದು ‘ಯಾಕೆ… ಒಂದೇ ಚಪಾತಿ ಹಾಕಿದ್ದೀಯಾ?…3 ಹಾಕು’…, ಅಂದಿದ್ದಕ್ಕೆ ಸೌಟ್ ಲ್ಲಿ ಹೊಡಿಲಿಲ್ಲ. ಎಲ್ರಿಗೂ ಒಂದೊಂದೆ ಚಪಾತಿ ಇಷ್ಟೇ ಪಲ್ಯ. ಇಷ್ಟೇ ತಿನ್ಬೇಕು ಅಂತ ಮೈಮೇಲೆ ಏಗರಿದೆ.

” ಅಪ್ಪಾ…ಬಿಗ್ ಬಾಸ್ ಮನೆ ಕಿಚನ್ ನಲ್ಲಿ ಹೀಗೆ ಅಲ್ವಾ… ಊಟಕ್ಕೆ ಜಗಳ ಶುರುವಾಗೋದು. ಅಪ್ಪಾ… ಅಮ್ಮ ಎಷ್ಟು ಕೊಡ್ತಾರೋ ಅಷ್ಟನ್ನೇ ಸುಮ್ನೆ ತಿನ್ನು. ಬಿಗ್ ಬಾಸ್ ಹೋಗ್ತಿರೋದು ಅಮ್ಮ ನಾವಲ್ಲ.. ನಾವು ಹೋಟೆಲ್ ನಲ್ಲಿ ಚೆನ್ನಾಗಿ ತಿನ್ನೋಣ”… ಎಂದು ಮಕ್ಕಳು ಅಪ್ಪನಿಗೆ ಐಡಿಯಾ ಕೊಟ್ಟರು.

ಯಪ್ಪಾ… ಸ್ವಲ್ಪ ಮಟ್ಟಿಗೆ ಜಗಳಾಡೋದು ಕಲ್ತೆ ಅಂತ ನಂಗೆ ಸಮಾಧಾನ ಆಯ್ತು. ಎಲ್ಲರೂ ನನ್ನ ಬಿಗ್ ಬಾಸ್ ಮನೆಗೆ ಕಳುಹಿಸಿ ಮಜಾ ಮಾಡೋ ಪ್ಲಾನ್ ನಡೆಸಿದ್ದರು. ನಾನು ಮೂರು ಜನ ದಾರಿಗೆ ಬರತ್ತಾರೆ ಅಂತ ಹುಚ್ಚು ಭ್ರಮೆಯಲ್ಲಿ ಮಲಗಿದೆ.

ಬೆಳಗ್ಗೆ ಎದ್ದು ಜೋರಾಗಿ ರೇಡಿಯೋ ಆನ್ ಮಾಡಿದೆ. ಪದ್ದಣ್ಣ, ಮಕ್ಳು ಏನಿದು ‘ಭಾನುವಾರನೂ ಮಲಗೋಕೆ ಬಿಡೋಲ್ಲ… ರೇಡಿಯೋ ಆಫ್ ಮಾಡು’…. ಅಂತ ಜೋರಾಗಿ ಮೂರು ಜನ ಕೂಗಿದ್ರು. ನಾನು ಕೇಳಲಿಲ್ಲ. ಮೂರು ಜನ ನೀನು ಬಿಗ್ ಬಾಸ್ ಹೋಗೋದ್ರೊಳಗೆ ನಾವೆಲ್ಲ ಹುಚ್ಚಾಗ್ತಿವಿ ಅಂತ ತಮ್ಮ ಸಂಕಟವನ್ನು ಹೊರ ಹಾಕಿದ್ರು.

ಯಾರೇ ಏನೇ ಅಂದ್ರು ನನ್ನ ಬಿಗ್ ಬಾಸ್ ಪೂರ್ವಭಾವಿ ಸಿದ್ಧತೆ ಜೋರಾಗಿ ನಡೆದಿತ್ತು.

ಮಕ್ಕಳು ಅಪ್ಪಾ…ಅಮ್ಮ ಯಾವಾಗ ಹೋಗ್ತಾರಪ್ಪ…ಟಾರ್ಚರ್ ತಡೆಯೋಕೆ ಆಗ್ತಿಲ್ಲ… ಇನ್ನೂ ಎಷ್ಟು ದಿನ ಅಂತ ಕೇಳ್ತಿದ್ರು ಮನೆ ಹೊರಗೆ ಏನೋ ಗಲಾಟೆ ಕೇಳಿಸಿತು. ಪದ್ದಣ್ಣ ಅಮ್ಮನ ಧ್ವನಿ ಅಲ್ವಾ… ಹೊರಗೆ ಏನ್ ಮಾಡ್ತಿದ್ದಾಳೆ ನೋಡೋಣ ಬನ್ನಿ… ಅಂತ ಅಪ್ಪ – ಮಕ್ಕಳು ಹೊರಗೆ ಬಂದರು.

ನಾನು ತರಕಾರಿಯವನ ಹತ್ರ ಜಗಳ ಮಾಡುತ್ತಾ ನಿಂತಿದ್ದೆ. ‘ಹೇಯ್… ದೇವಿ, ಏನಾಯಿತು… ಯಾಕೆ ಜಗಳ?’… ಅಂತ ಪದ್ದಣ್ಣ ಗಾಬರಿಯಿಂದ ಕೇಳಿದ.

‘ನೋಡು ಪದ್ದಣ್ಣ… ತೂಕ ಸರಿ ಹಾಕ್ತಿಲ್ಲ… ಕೇಳಿದ್ರೆ ವಾದ ಮಾಡ್ತಿದ್ದಾನೆ… ನಾನು ತಪ್ಪನ್ನ ವಿರೋಧಿಸುತ್ತಿದ್ದೇನೆ. ಬಿಗ್ ಬಾಸ್ ಹೋದಾಗ ನಾನು, ನನ್ನ ಮಾತಿಗೆ ಸ್ಟ್ಯಾಂಡ್ ತಗೋಬೇಕು ಅಲ್ವಾ’…. ಅಂದೆ. ಪದ್ದಣ್ಣ ಹಣೆ ಹಣೆ ಚಚ್ಚಿಕೊಂಡು ಒಳಗೆ ಸುಮ್ನೆ ನಡಿ ಅಂದ.

‘ಏನೇ ಇದು ಬಿಗ್ ಬಾಸ್ ಹೋಗೋದ್ರೊಳಗೆ ನೀನು ಹುಚ್ಚಿ ಆಗ್ತೀಯಾ… ಇಲ್ಲಾ ನಮ್ಮನ್ನ ಹುಚ್ಚು ಮಾಡ್ತಿಯಾ’… ಅಂತ ಬೇಸರದಲ್ಲಿ ಕೂತ.

****

colours ಕನ್ನಡದಿಂದ ಮತ್ತೆ ಕಾಲ್ ಬಂದಿತ್ತು. ‘ಮೇಡಂ, ನಾಳೆ ನೀವು ಒಳಗೆ ಹೋಗ್ಬೇಕು, ರೆಡಿ ಇದ್ದಿರಲ್ಲ?’… ಅಂತ ಕೇಳಿದ್ರು.

ನಾನು ರೆಡಿ ಆಗಿದ್ದೀನಿ ಅಂತ ಸೂಚನೆ ನೀಡಿ ಫೋನ್ ಇಟ್ಟೆ. ‘ನಾಳೆ ಬಿಗ್ ಬಾಸ್ ಹೋಗ್ತೀನಿ… ನಾನು ಬರೋವಷ್ಟರಲ್ಲಿ ಎಲ್ಲ ಮನೆ ಕೆಲಸ ಕಲ್ತಿರಬೇಕು’ ಅಂದೆ.
ಮೂರು ಜನ ತಲೆ ಆಡಿಸಿದರು.

ಬಿಗ್ ಬಾಸ್ ಹೋಗೋ ಸಂತೋಷನೋ… ಭಯನೋ… ರಾತ್ರಿ ನಿದ್ದೆ ಬರಲಿಲ್ಲ… ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿ ಬಿಗ್ ಬಾಸ್ ಮನೆಯತ್ತ ಎಲ್ಲರೂ ಹೊರಟೆವು.

ಎಲ್ಲರ ಮುಖದಲ್ಲಿ ಆತಂಕವಿತ್ತು. ಅದರಲ್ಲೂ ಬಿಗ್ ಬಾಸ್ ಮನೆಯೊಳಗೆ ನಾನು ಹೆoಗಪ್ಪಾ ಇರೋದು… ಗಂಡ ಮಕ್ಕಳಿಗೆ ಬುದ್ದಿ ಕಲಿಸೋಕೆ ಹೋಗಿ ನಾನೇ ಒದ್ದಾಡ್ತೀನಾ!… ಅಂತ ಒಳವಳೊಗೆ ಭಯ ಶುರುವಾಗಿತ್ತು. ಆದರೆ ವಾಪಾಸ್ ಹೋದ್ರೆ ಪದ್ದಣ್ಣ, ಮಕ್ಕಳ ಮುಂದೆ ಮಾನಹಾನಿ ಆಗುತ್ತೆ ಅಂತ ತೆಪ್ಪಗೆ ಕೂತೆ. ಸುದೀಪ್ ಬಂದ್ರು, ಅವರನ್ನ ನೋಡಿದ್ಮೇಲೆ ಭಯ ಹೆಚ್ಚಾಯಿತು. ಜ್ವರ ಇನ್ನೇನು ನೆತ್ತಿಗೆ ಹತ್ತಬೇಕು ಅಷ್ಟೋತ್ತಿಗೆ ನನ್ನ ಹೆಸರು ವೇದಿಕೆ ಮೇಲೆ ಕೂಗಿದ್ರು. ಬೇರೆ ವಿಧಿ ಇಲ್ಲದೆ ಸುದೀಪ್ ಅವರ ಮುಂದೆ ಹೋಗಿ ನಿಂತೆ.

ಐದು ಅಡಿ ಪರ್ಸನಾಲಿಟಿ ಮುಂದೆ, ಆರು ಅಡಿ ಎತ್ತರದ ಮನುಷ್ಯನನ್ನು ನೋಡಿ ದೇಹವೆಲ್ಲ ನಡುಗಿತ್ತು. ಸುದೀಪ್ ಅವರು ನನ್ನನ್ನು ನೋಡಿ ಹೆದರಬೇಡಿ… ಅಂತ ಧೈರ್ಯ ತುಂಬಿದ್ರು. ಸ್ವಲ್ಪ ಹೊತ್ತು ನನ್ನ ವಿಚಾರಣೆ ಆದ್ಮೇಲೆ ಬಿಗ್ ಬಾಸ್ ಮನೆಯೊಳಗೆ ಬಲಗಾಲು ಇಟ್ಟು ಒಳಗೆ ಹೋಗಿ ನಿಮ್ಮಿಂದ ಮನೆಗೆ ಒಳ್ಳೇದಾಗ್ಲಿ…ಮನೆಯಿಂದ ನಿಮಗೆ ಒಳ್ಳೇದಾಗ್ಲಿ… ಅಂತ ಶುಭ ಹಾರೈಸಿ ಇನ್ನೇನು ಅವರನ್ನು ತಬ್ಬಕೋಬೇಕು… ಅದನ್ನ ಪದ್ದಣ್ಣ ಕ್ಲೋಸ್ ಆಫ್ ಲ್ಲಿ ನೋಡ್ಬೇಕು…

ಅನ್ನೋಷ್ಟರಲ್ಲಿ ಪದ್ದಣ್ಣ “ಎದ್ದೇಳೇ ತಾಯಿ.. ಇವತ್ತು ಏಪ್ರಿಲ್ ಫೂಲ್ ಅಂತ 8 ಗಂಟೆವರೆಗೂ ಮಲಗಿ ಹೆದರಸ್ತಿದ್ದೀಯಾ….ಎದ್ದು ತಿಂಡಿ ಮಾಡು ಹಸಿವೆ ಆಗ್ತಿದೆ’… ಅಂದಾಗಲೇ ಗೊತ್ತಾಗಿದ್ದು ಬಿಗ್ ಬಾಸ್ ಹೋಗಿದ್ದು ರಿಯಲ್ ಅಲ್ಲ, ರೀಲ್ ಅಂತ.

ಪದ್ದಣ್ಣ ಎಬ್ಬಿಸೋದು ಎಬ್ಬಿಸಿದ ಸುದೀಪ್ ಅವರನ್ನ ತಬ್ಬಕೊಂಡ ಮೇಲೆ ಎಬ್ಬಿಸಿದ್ರೆ ಇವನದೇನು ಗಂಟು ಹೋಗ್ತಿತ್ತು ಅಂತ ಪದ್ದಣ್ಣನ ಮೇಲೆ ಇಡೀ ದಿನ ಬಿಪಿ ಏರಿತ್ತು.


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW