ಶಿಕ್ಷಕಿ ಡಿ.ಶಬ್ರಿನಾ ಅಲಿಯವರ ‘ಬಿಳಿ ಹಾಳೆಯ ಮೇಲೆ ಕೆಂಪು ಶಾಯಿ’ ಕೃತಿಯ ಕುರಿತು ಡಿ.ವೈ.ಪಿ.ಸಿ ವೆಂಕಟೇಶಪ್ಪ.ಸಿ.ಎಸ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಬಿಳಿ ಹಾಳೆಯ ಮೇಲೆ ಕೆಂಪು ಶಾಯಿ
ಲೇಖಕಿ : ಡಿ. ಶಬ್ರಿನಾ ಅಲಿ
ಪ್ರಕಾಶನ : ಮೇಕ ಪ್ರಕಾಶನ
ಪ್ರಕಾರ : ಕವಿತೆಗಳು
ಶ್ರೀಮತಿ ಡಿ. ಶಬ್ರಿನಾ ಅಲಿಯವರು ವೃತ್ತಿಯಲ್ಲಿ ಶಿಕ್ಷಕಿ ಪ್ರವೃತ್ತಿಯಲ್ಲಿ ಸೃಜನಶೀಲ ಬರಹಗಾರರು. ಇವರನ್ನು ಬರಹಗಾರರಿಗಿಂತ ಅತ್ಯುತ್ತಮ ತರಗತಿ ಶಿಕ್ಷಕಿಯಾಗಿ ನಾನು ತೀರಾ ಹತ್ತಿರದಿಂದ ಬಲ್ಲೆ. ಇವರು ವೃತ್ತಿಗೆ ತೋರಿಸುವ ಬದ್ಧತೆ ಅನನ್ಯ. ಅವರ ವೃತ್ತಿಗೆ ಮತ್ತು ವ್ಯಕ್ತಿತ್ವಕ್ಕೆ ಮೆರಗನ್ನು ನೀಡಲೆಂಬಂತೆ ಇವರೊಳಗಿನ ಸಾಹಿತ್ಯ ಪ್ರತಿಭೆ ‘ಬಿಳಿ ಹಾಳೆಯ ಮೇಲೆ ಕೆಂಪು ಶಾಯಿ’ಯ ನಲವತ್ತು ಕವಿತೆಗಳ ಮೂಲಕ ಮೂಡಿದೆ. ಹಲವು ಲೇಖನಗಳು ಇದಕ್ಕೆ ಇಂಬು ನೀಡಿವೆ. ಇವರ ಕವಿತಾಕೃತಿಯು ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ‘ಯುವ ಬರಹಗಾರರ ಚೊಚ್ಚಲ ಕೃತಿ ಪ್ರೋತ್ಸಾಹ ಧನ’ ಕ್ಕಾಗಿ ಆಯ್ಕೆಯಾಗಿರುವುದು ಅತೀವ ಸಂತಸ ತಂದಿದೆ. ಸಹೋದರಿ ಶಬ್ರಿನಾ ಅವರಿಗೆ ಅಭಿನಂದನೆಗಳು.

ಇವರು ಗ್ರಾಮೀಣ ಬಡ ಕುಟುಂಬವೊಂದರಲ್ಲಿ ಜನಿಸಿ, ಹಳ್ಳಿ ಸೊಗಡಿನಲ್ಲಿ ಹರಳುಕಟ್ಟಿದ ಬಾಲ್ಯ. ಸಾಮಾನ್ಯ ಜನರ ತವಕ ತಲ್ಲಣಗಳ ಸ್ಪರ್ಶದಿಂದ ಮಾಗಿದ ವ್ಯಕ್ತಿತ್ವ ಇವರ ಕವಿತೆಗಳಲ್ಲಿ ಮೂಡಿಬಂದಿದೆ. ಈ ಕಾಲದಲ್ಲಿ ‘ಬದುಕೆಂಬದು ಹಲವು ಸಮಸ್ಯೆಗಳ ಒಂದು ಸಂಕೀರ್ಣ ಜಾಲ’ ಆದರೆ ಇವರ ಕವಿತೆ ‘ಬದುಕೆಂದರೆ ಭಯವಲ್ಲ ಭರವಸೆ’ ಎಂಬ ಜೀವ ಪ್ರೀತಿಯ ಒರತೆಯನ್ನು ಸೃಷ್ಟಿಸಿದೆ. ಲಿಂಗಾನುಪಾತ ಆತಂಕ ಪಡುವಷ್ಟು ಕುಸಿದಿರುವ ಈ ಹೊತ್ತಿನಲ್ಲಿ ‘ನಾ ಕೇಳದ ಹುಟ್ಟಿಗೇಕೆ ಶಿಕ್ಷೆ?’ ಕವಿತೆ ಸಮಾಜದ ಕಣ್ತೆರೆಸುವಂತಿದೆ. ಅಷ್ಟೇ ಅಲ್ಲದೆ ‘ನಿನಗಿರುವ ಭಾಗ್ಯ ಎನಗಿಲ್ಲ ಪುರುಷ’ ಕವಿತೆಯು ನಿರಾಶೆದೆಡೆಗೆ ಜಾರಿದರೂ, ಪುರುಷ ಪ್ರಾಧಾನ್ಯ ವ್ಯವಸ್ಥೆಯನ್ನು ಚಿಂತೆಗೆ ಹಚ್ಚುವಂತೆ ಮಾಡಿದೆ.

ಸಹೋದರಿ ಶಬ್ರಿನಾ ಅವರ ಕವಿತೆಗಳು ಸಮಾಜದ ಒಲವು ನಿಲುವುಗಳ ಮೇಲೆ ಬೆಳಕು ಚೆಲ್ಲಿವೆ. ಸೂಕ್ಷ್ಮಾಗ್ರಹಿ ಆಗಿರುವ ಇವರ ಕವನಗಳು ಚಿಕಿತ್ಸಾತ್ಮಕ ಗುಣವನ್ನು ಹೊಂದಿವೆ. ಒಟ್ಟಿನಲ್ಲಿ ‘ವಿನಾ ದೈನ್ಯೇನ ಜೀವನಂ ಅನಾಯಾಸೇನ ಮರಣಂ’ ಎಂಬುದರ ಆಶಯದಂತೆ ಸಾರ್ಥಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಶಬ್ರಿನಾ ಮಹಮದ್ ಅಲಿಯವರಿಗೆ ಶುಭವಾಗಲಿ ಮತ್ತಷ್ಟು ಇವರ ಸಾಹಿತ್ಯಿಕ ಪ್ರತಿಭೆ ಹಲವಾರು ರೂಪಗಳಲ್ಲಿ ಪ್ರಕಟಗೊಳ್ಳಲಿ ಎಂದು ಆಶಿಸುವೆ.
- ಶ್ರೀ ವೆಂಕಟೇಶಪ್ಪ.ಸಿ.ಎಸ್ – ಡಿ.ವೈ.ಪಿ.ಸಿ (ಎಸ್.ಎಸ್.ಕೆ), ಜಿಲ್ಲಾ ಉಪನಿರ್ದೇಶಕರ ಕಛೇರಿ ಚಿತ್ರದುರ್ಗ.
