‘ಮನೆಯಂಗಳಕೆ ರಂಗನ್ನೆರೆಯೋಣ!’ ಕವನ

ಮಳೆಯಿಲ್ಲದೇ ಬಿರಿದ ಭೂಮಿ… ಉರಿದೆದ್ದ ಧಗೆ…ಹಸಿರು ಕಾಣದೇ ಬಿಸಿಯನುಸುರುವ ಪ್ರಕೃತಿ…ಮಂಜುಳಾ (ಹರಿ ನೇತ್ರಾ) ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಅಂದು-
ಹಸಿರು ಮರಗಳ ಸಾಲಿನಲ್ಲಿ
ತೋಪು ಚೆಲ್ಲಿದ ನೆರಳಿನಲ್ಲಿ
ದಾರಿಯುದ್ದಕ್ಕೂ ನೀರಿನರವಟ್ಟಿಗೆಗಳು,
ಪೊದೆ ಹುಲ್ಲಿನ ಮಧ್ಯದ ಸೀಳುದಾರಿ
ಊರಿಂದೂರಿಗೆ ಕಾಲ್ನಡಿಗೆ
ಧಗೆಯಿಲ್ಲ ಆಯಾಸವಿಲ್ಲ;
ಯಾಂತ್ರಿಕತೆಗೆ ವಿಮುಖರೆಲ್ಲರೂ ಆಗ
ಎಲ್ಲರದ್ದೂ ಒಂದೇ ರಾಗ
ಮನುಕುಲದ ಏಳ್ಗೆಗೆ ನಿಸರ್ಗವೇ ಸಿಂಧು!
ಇಂದಾದರೋ…
ಚಿಗುರು ಎಲೆ ಕಳಚಿದ
ಬೋಳು ಮರಗಳ ಗೋಳು,
ಮಳೆಯಿಲ್ಲದೇ ಬಿರಿದ ಭೂಮಿ
ಉರಿದೆದ್ದ ಧಗೆ
ಹಸಿರು ಕಾಣದೇ ಬಿಸಿಯನುಸುರುವ ಪ್ರಕೃತಿ;
ಹುಡಿ ಹಾಯ್ದ ದಾರಿ
ಮರಳುಗಾಡಿನ ಒಂಟೆಯ ನಡಿಗೆ!
ಮರವ ಕಡಿದು ಮನೆಯ ಕಟ್ಟಿದೆವು
ಹಸಿರ ಕಿತ್ತು “ಬರಡ” ಬಿತ್ತಿದೆವು
ಭೂಮಿ ಬಗಿದು ನೀರ ಸೇದಿದೆವು
ನೆರಳ ಅಗೆದು ಧಗೆಯ ಹುಟ್ಟಿಸಿದೆವು-
ಆ….
ಫಲವನಿಂದು ಉಣ್ಣುತಿಹೆವು
ಬೊಗಸೆ ನೀರಿಗಾಗಿ ಹಣ ಚೆಲ್ಲುತಿಹೆವು
ಹಿಡಿ ನೆರಳಿಗಾಗಿ ನುಗ್ಗಾಡುತಿಹೆವು…!
ಬಂಧುಗಳೇ…
ನಾವೆಲ್ಲಾ ಬದುಕಬೇಕಾದರೆ,
ನಮ್ಮನ್ನೇ ನಾವು ತೊಡಗಿಸಿಕೊಳ್ಳೋಣ
ಬಿರಿದ ಭೂಮಿಯಲಿ ನೀರ ಹರಿಸೋಣ
ಹಿಡಿ ನೆಲದಲ್ಲಿ ಮುಡಿ ಬೆಳೆಯೋಣ
ಮನೆಯಂಗಳಕೆ ರಂಗನ್ನೆರೆಯೋಣ
ತಂಪಾದ ಗಾಳಿ ಕಂಪು ಪರಿಮಳಕೆ
ಮೈ ಮನ ತೆರೆಯೋಣ
ಘೋಷಣೆಯ ಕಾರ್ಯಕ್ಕಿಳಿಸೋಣ
ಕಾಡು ಬೆಳೆಸಿ ನಾಡು ಉಳಿಸೋಣ
ಮಳೆಯ ತರಿಸಿ ಕಳೆಯ ತುಂಬೋಣ!!


  • ಮಂಜುಳಾ (ಹರಿ ನೇತ್ರಾ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading