ಮಳೆರಾಯನಿಗೊಂದು ಮೊರೆ – ಕೆ. ರಾಜಕುಮಾರ್

ಮಳೆರಾಯನಿಗೊಂದು ಮೊರೆ. ಕರಕು ಬಿರುಕಿನ ನೆಲಕೆ ನಾಲ್ಕು ಹನಿ ಸುರಿದಿರಲಿಲ್ಲ. ಐದೇ ನಿಮಿಷ ಸುರಿದರೂ ಮೊಗದಿ ಮಂದಹಾಸ, ಅಧರದಿ ಸುಹಾಸ. ಅಭೀ ನಾ ಜಾವೋ ಛೋಡಕರ್ ಕೆ ದಿಲ್ ಅಭೀ ಭರಾ ನಹ್ಞೀ. ಕೆ. ರಾಜಕುಮಾರ್ ಅವರ ಲೇಖನಿಯಲ್ಲಿ ಮಳೆರಾಯ, ತಪ್ಪದೆ ಮುಂದೆ ಓದಿ… 

ಇದು ನಿಸಾರ್ ಅಹಮದ್ ಅವರ ‘ಸಂಜೆ ಐದರ ಮಳೆ’ಯಲ್ಲ. ಐದೇ ನಿಮಿಷದ ಮಳೆ. ಸಂಜೆ ಏಳರ ಮಳೆ. ಬಾನು ಗುಡುಗುಡುಗಿ ಭೋರ್ಗರೆಯಿತು. ಮಿಂಚು, ಸಿಡಿಲು ಇರಲಿಲ್ಲ. ಇದು ವಸುಂಧರೆಗೆ ಮುಂಗಾರಿನ ಅಭಿಷೇಕವಲ್ಲ. ಪೂರ್ವ ಮುಂಗಾರಿನ ಮೊದಲ ಸಿಂಚನ. ಸುಡುಬಯಲ ಗಾಳಿ ಬೀಸಿತ್ತು. ಆದರೆ ಪರಿಮಳದ ಸುಳಿವಿರಲಿಲ್ಲ. ಕರಕು ಬಿರುಕಿನ ನೆಲಕೆ ನಾಲ್ಕು ಹನಿ ಸುರಿದಿರಲಿಲ್ಲ. ಎಲ್ಲ ಭರವಸೆಗಳೂ ಕಮರಿ ಹೋಗಿದ್ದವು. ನಿಟ್ಟುಸಿರ ಬೇಗೆಯಲಿ ಅನುದಿನವೂ ಬೇಯುವಂತಾಗಿತ್ತು. ಬೆಂಗದಿರ ತಾಪದಲ್ಲಿ ಅವನಿ ಬಾಡಿಹೋಗಿತ್ತು. ನಿಂತ ನಂಬಿಕೆ ನೆಲವೇ ಮೆಲ್ಲನೆ ಕುಸಿದಂತಾಗಿತ್ತು. ಹನಿಹನಿ ನೀರಿಗೂ ಹಾಹಾಕಾರವೆದ್ದಿತ್ತು. ಐದೇ ನಿಮಿಷ ಸುರಿದರೂ ಮೊಗದಿ ಮಂದಹಾಸ, ಅಧರದಿ ಸುಹಾಸ. ಕಣ್ಣಲ್ಲಿ ಏನೋ ಮಿಂಚೊಂದು ಮೂಡಿತು. ಮತ್ತೆ ಸುರಿದೀತು ಎಂಬ ನಂಬಿಕೆ ಕುದುರಿಸಿತು.

ಫೋಟೋ ಕೃಪೆ : google

ಟಿವಿ, ಫ್ರಿಡ್ಜ್ ಆರಿಸಿ ಸಂಪರ್ಕ ಮುಕ್ತವಾಗಿಸಿದೆ. ನವೆಂಬರ್ 23 ರಿಂದ ನಮ್ಮ ಮನೆಯಂಗಳ ಮಳೆ ಹನಿಯನ್ನೇ ಕಂಡಿರಲಿಲ್ಲ. ಹಾಕುತ್ತಿದ್ದ ರಂಗೋಲಿಯನ್ನು ಅಳಿಸುವವರೇ ಇರಲಿಲ್ಲ. ಇಂದು ಅಂಗಳದ ರಂಗವಲ್ಲಿ ಕರಗಿ ನೀರಾಗಿ ಹರಿಯಿತು. ಆದರೆ ಬಹು ದಿನಗಳ ಅನಂತರ ಹೃದಯ ರಂಗೋಲಿ ಮಾಸದೆ ಮಿರ ಮಿರ ಮಿನುಗಿತು.

ಪ್ರೀತಿ ಇಲ್ಲದ ಮೇಲೆ ಮೋಡ ಕಟ್ಟೀತು ಹೇಗೆ, ಮಳೆ ಸುರಿದೀತು ಹೇಗೆ; ಅಲ್ಲವೆ? ನಮ್ಮ ನೆಲ, ಪರಿಸರ ಇವೆಲ್ಲದರ ಘಮ ಕಳೆದು ಗಬ್ಬೆಬ್ಬಿಸಿದ್ದೀವಿ. ಧರಣಿಗೆ ಗಿರಿ ಭಾರವಲ್ಲ. ಗಿರಿಗೆ ಮರವು ಭಾರವಲ್ಲ. ಬಳ್ಳಿಗೆ ಕಾಯಿ ಭಾರವಲ್ಲ. ಆದರೆ ಮನುಜ ಧರಣಿಗೆ ಭಾರ. ಅವನು ಸ್ವತಃ ಮನುಕುಲದ ವೈರಿಯಾಗಿದ್ದಾನೆ. ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ ಏನನ್ನೂ ಜಗದಲ್ಲಿ ಬಾಳಿಸುತ್ತಿಲ್ಲ. ಯಾತಕ್ಕೆ ಮಳೆ ಹೋದವೋ ಶಿವ ಶಿವ ಲೋಕ ತಲ್ಲಣಿಸುತಾವೋ ಎಂದು ದಿನ ದಿನ, ಕ್ಷಣ ಕ್ಷಣ ನಿಡುಸುಯ್ಯಬೇಕಿದೆ.

ಮಳೆ ನಿಂತೇಹೋಯಿತು. ಝಳ ಹೆಚ್ಚಾಯಿತು. ಮಳೆ ಕುಂಭದ್ರೋಣವಾಗಿದ್ದರೆ, ಮುಸಲಧಾರೆಯಾಗಿದ್ದರೆ, ‘ಹನಿ ಹನಿ ಪ್ರೇಮ್ ಕಹಾನಿ’ಯಾಗಿದ್ದರೆ ಎನ್ನಾಳ್ಳಕೊಚ್ಚಿಂದಿ ವಾನ, ವಾನ ಎನ್ನಬಹುದಿತ್ತು. ಮುತ್ಯಾಲ ಜಲ್ಲು ಕುರಿಸೇ ಎಂದು ಸಂಭ್ರಮದ ಮಡುವಾಗಬಹುದಿತ್ತು. ಅಂದಿ ಮಳೆ ಪುಳಕಿರತು ಎಂದು ಆ ಮಳೆಯ ಹನಿಹನಿಯಲ್ಲೂ ಇಂದ್ರಚಾಪವನ್ನು ಕಾಣಬಹುದಿತ್ತು. ದಿಲ್ ಹೂನ್ ಹೂನ್ ಕರೆ ಘಬರಾಯೆ ಎಂದು ಭೂಪೆನ್ ಹಜಾರಿಕ ಅವರನ್ನು ಸ್ಮರಿಸಬಹುದಿತ್ತು. ರೈನ್ ರೈನ್ ಗೋ ಅವೇ ಎಂದು ಯಾರು ಮೊರೆಯಿಟ್ಟರೋ ಬಂದದ್ದು ಬಂದ ಹಾಗೆ ಮಾಯವಾಯಿತೇ ಹೊರತು ಮಾಯಾದಂತ ಮಳೆ ಆಗಲಿಲ್ಲ. ಗಂಗಮ್ಮ ತಾಯಿ ಗುಡುಗಿ ಗೂಡಾಗಿ ಚೆಲ್ಲಲಿಲ್ಲ. ಆದರೂ ಈ ಕಿರುಮಳೆ ಒಂದು ನಿರೀಕ್ಷೆ ಮೂಡಿಸಿದೆ.
ಅವನಿ ಬಾಡಿಹೋಗಿತ್ತು. ಅದು ಕನಲಿದ ಕೆಂಡವಾಗಿತ್ತು. ನಿಂತ ನಂಬಿಕೆ ನೆಲವೇ ಮೆಲ್ಲನೆ ಕುಸಿದಂತಾಗಿತ್ತು. ಹನಿಹನಿ ನೀರಿಗೂ ಹಾಹಾಕಾರವೆದ್ದಿತ್ತು. ಐದೇ ನಿಮಿಷ ಸುರಿದರೂ ಮೊಗದಿ ಮಂದಹಾಸ, ಅಧರದಿ ಸುಹಾಸ. ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತ್ತು. ಮತ್ತೆ ಸುರಿದೀತು ಎಂಬ ನಂಬಿಕೆ ಕುದುರಿಸಿದೆ. 162 ದಿನಗಳ ಅನಂತರ ಇಂದು ನನ್ನಾತ್ಮನಿಧಿ ಮತ್ತೆ ಮೊಗದೋರಿದೆ. ಇಳೆಯೊಡನೆ ಪಿಸುನುಡಿದು ಶ್ರುತಿಯೊಡನೆ ಸ್ವರತಾನ ಲೀನವಾಗಿಸಿ ತೆರಳಿದೆ.

ಫೋಟೋ ಕೃಪೆ : google

ಇದು ಮುಂಗಾರು ಪೂರ್ವದ ಚೊಚ್ಚಲ ಧಾರೆ. ಮುಗಿಲು ಕರಗಿ ಸುರಿಸಿದ ಹನಿಹನಿಗೂ ಭೂತಾಯಿ ಲೆಕ್ಕ ಬರೆದಿಡುವಂತಹ ಸ್ಥಿತಿ ಉಂಟಾಗಿತ್ತು. ಗಗನ ಬಿರಿದಂತೆಯೂ ಆಗಲಿಲ್ಲ. ಸಾಗರವೂ ಕೆರಳಲಿಲ್ಲ. ಸಂತಸ ಮತ್ತು ನಿರಾಶೆ ಒಟ್ಟೊಟ್ಟಿಗೆ. ಆದರೂ ಇದು ನೀಡಿದ ಹಿತಾನುಭವ ಸರಿಸಾಟಿ ಇಲ್ಲದ್ದು. ಇದು ಮಳೆಹಾಡಿನ ಪಲ್ಲವಿ. ಇದರ ಅನುಪಲ್ಲವಿಗಾಗಿ, ಚರಣಕ್ಕಾಗಿ ಕಾಯೋಣ.

ಇಷ್ಟಕ್ಕೂ ಈ ಮಳೆಗೆ ಅಂತಹ ಅವಸರ ಏನಿತ್ತು? ಬಾರದೇ, ಬಾರದೇ ಬಂದದ್ದು ಪಟಪಟನೆ, ಸರಸರನೆ ನಾಲ್ಕು ಹನಿಯನು ಚೆಲ್ಲಿ, ನೆಲ ತೋಯುವ ಮುನ್ನವೇ ಮುಂದಕ್ಕೆ ತೆರಳಿಬಿಟ್ಟಿತು. ಕರಗ ಬಂತು ಓಡ್ರಿ ಎಂಬಂತಹ ಸ್ಥಿತಿ. ಸಾವಧಾನವಾಗಿ ಸುರಿದು ಮೈಮನಗಳನ್ನು ಪುಳಕಗೊಳಿಸಬೇಕಿತ್ತಲ್ಲವೇ? ಊರುಕೇರಿಯ ಧೂಳುತುಂಬಿದ ಗಿಡಮರಬಳ್ಳಿಗಳು ಒಂದು ಚೆಂದದ ಮಜ್ಜನಕ್ಕೆ ಅಣಿಯಾಗಿದ್ದವು. ಆ ಹಂಬಲ ಅರೆಬರೆಯಾಗಿ ಉಳಿಯಿತು. ಮೊದಲೆಲ್ಲ ತಿಥಿ, ವಾರ, ನಕ್ಷತ್ರಕ್ಕೆ ಅನುಗುಣವಾಗಿ ಮಳೆ ಹುಯ್ಯುತ್ತಿತ್ತು. ಚಿತ್ತಿ ಮಳಿ ತತ್ತಿ ಹಾಕತ್ತಿತ್ತು ಸ್ವಾತಿ ಮುತ್ತಿನೊಳಗ ಎಂದು ಕವಿ ಬೇಂದ್ರೆ ಕರಾರುವಾಕ್ಕಾಗಿ ಬರೆಯುವಂತೆ ಇತ್ತು. ಇದನ್ನೇ ಹಂಸಲೇಖ ಎಂಬ ಗಾರುಡಿಗ ಸ್ವಾತಿಮುತ್ತಿನ ಮಳೆಹನಿಯೇ ಮೆಲ್ಲಮೆಲ್ಲನೆ ಧರೆಗಿಳಿಯೇ ನನ್ನಾ ರಾಜನ ಹೃದಯದ ಚಿಪ್ಪಿಗೆ ಬಾರೆ ಸರಸರನೆ ಎಂದು ಬಣ್ಣಿಸಿದರಲ್ಲ. ಮಳೆ ಎಂಬುದು ಒಂದು ಋತುಗಾನ. ಅದು ಫಲಿಸಿದ ಪ್ರಕೃತಿಯ ಶುಭಸಂಧಾನ. ಆದರೆ ಇದೀಗ ಅದರ ಓಟಕ್ಕೆ, ಓಘಕ್ಕೆ, ಆವರ್ತನೆಗೆ ಧಕ್ಕೆ ಬಂದಿದೆ. ಅದು ಮುನ್ನ ಇಂತಿರಲಿಲ್ಲ. ನಾವು ಅಂಗಲಾಚಿ ಬೇಡುವ ಅಗತ್ಯವಿರಲಿಲ್ಲ. ಅದು ಅಮೃತವಾಹಿನಿಯಂತೆ ಹರಿಹರಿದು, ಭೋರ್ಗರೆದು ಮಹಾಪೂರವಾಗುತ್ತಿತ್ತು.

ಎಲ್ನಿನೋ, ಕತ್ರಿನಾದಂತಹ ದುಃಸ್ವಪ್ನಗಳು ನಮ್ಮ ನಿರೀಕ್ಷೆಯನ್ನು ಹರಣ ಮಾಡದಿರಲಿ. ಮಲಯ ಮಾರುತಗಳು ಸುಳಿಯಲಿ. ಬಿರುಗಾಳಿಯ ಬೀಸಿಗೆ ಬಸವಳಿದು ಸುಂಕ ಕಟ್ಟಿ, ಕಟ್ಟಿ ಸಾಕಾಗಿದೆ. ಬಾಳಲ್ಲಿ ಚಂದಮಾರುತಗಳು ಹಾಯುತಲಿರಲಿ.

ಇದರಲ್ಲಿ ಕವನಗಳ, ಕೃತಿಗಳ ಹೆಸರು, ಪದ್ಯಗಳ ಸಾಲು, ವಿವಿಧ ಭಾಷಾ ಚಿತ್ರಗೀತೆಗಳ ಸುಮಾರು 30 ತುಣುಕುಗಳಿವೆ. ಇದು ರಾಗಮಾಲಿಕೆ. ಇದರ ಪರಿಕಲ್ಪನೆ ಮಾತ್ರ ನನ್ನದು. ಅಲ್ಲೊಂದು, ಇಲ್ಲೊಂದು ಲಹರಿಯಷ್ಟೇ ನನ್ನದು.

ಅಭೀ ನಾ ಜಾವೋ ಛೋಡಕರ್ ಕೆ ದಿಲ್ ಅಭೀ ಭರಾ ನಹ್ಞೀ ಎಂಬ ಯಮನ್ ರಾಗದ ಗೀತೆಯನ್ನು ಗುನುಗುವಂತೆ ಮಾಡಿದೆ.


  • ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading