ಎಮ್ಮೆಗೆ ಚಿಕಿತ್ಸೆ ಕೊಡಲು ಹೋದಾಗ ಗುಣವಾಗಿದ್ದು ಕೇವಲ ಎಮ್ಮೆಯಷ್ಟೇ ಅಲ್ಲ, ಅದರ ಮಾಲೀಕನು ಕೂಡಾ ಆದ, ಅದು ಹೇಗೆ ಎನ್ನುವುದನ್ನು ಡಾ. ಯುವರಾಜ್ ಹೆಗಡೆ ಅವರು ಕತೆಯಾಗಿಸಿ ಓದುಗರ ಮುಂದಿಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…
ಐದಾರು ವರ್ಷಗಳ ಹಿಂದೆ ತೀರ್ಥಹಳ್ಳಿ ಕೊಪ್ಪದ ಗಡಿ ಭಾಗದ ಗ್ರಾಮ “ಗಡಿಕಲ್ಲು” ಬಳಿ ಚಿಕಿತ್ಸೆಯ ಸಲುವಾಗಿ ಫೋನ್ ಕರೆಯೊಂದು ಬಂದಿತ್ತು. ‘ಎಮ್ಮೆಗೆ ಉಸಿರಾಟದ ತೊಂದರೆ, ವಾರ ಆಗೋಯ್ತು ಸಾರ್’ ನೀವು ಬರದಿದ್ದರೆ ಉಳಿಯಲ್ಲ ಎನ್ನುವ ಮಧ್ಯೆ ಮಾಲೀಕ ಹಲವಾರು ಭಾರಿ ಕೆಮ್ಮುವುದು ಅತ್ತ ಬದಿಯಿಂದ ಕೇಳುತ್ತಿತ್ತು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಚಿಕ್ಕಮಗಳೂರಿನ ಕೊಪ್ಪ ತಾಲೂಕುಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಅಡ್ಡವಾಗಿ ಛೇದಿಸಿಕೊಂಡು, ಬಸವಾನಿಯಿಂದ ಸಾಲ್ಗಡಿಗೆ ಬರುವ ಮತ್ತೊಂದು ರಸ್ತೆಯು ತನ್ನ ಎರಡೂ ಬದಿಯಲ್ಲಿ ಕುವೆಂಪು ಜೈವಿಕಾರಣ್ಯದ ನಡುವಿನ ಹಲವಾರು ಕುಗ್ರಾಮಗಳಿಗೆ ಕವಲೊಡೆಯುತ್ತದೆ. ಊರು ಕೇರಿ ಅಷ್ಟಾಗಿ ಪರಿಚಯವಿಲ್ಲದವರು ಮಲೆನಾಡಿನಲ್ಲಿ ವಿಳಾಸ ಹುಡುಕುವುದು ಕಷ್ಟ. ಹಾಗಾಗಿ ಮಾಲೀಕನನ್ನು ಬಸ್ ನಿಲ್ದಾಣದ ಬಳಿ ಸರಿ ಸುಮಾರು ಮೂರು ಗಂಟೆಗೆ ಇರಲು ಹೇಳಿದ್ದೆ.

ದೇವಂಗಿ-ಕುಪ್ಪಳ್ಳಿ ಮಾರ್ಗವಾಗಿ ಬೈಕ್ ಓಡಿಸುತ್ತ ಸಾಗುವಾಗ, ನಾನು ದೇವಂಗಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ದಿನಗಳನ್ನು ಮೆಲುಕು ಹಾಕುತ್ತಾ ಗಡಿಕಲ್ಲು ತಲುಪಿದವನಿಗೆ ಬೀಡಿ ಎಳೆಯುತ್ತಾ ಕುಳಿತಿದ್ದ ಮಾಲಿಕ ಸ್ವಾಗತಿಸಿದ. ‘ತುಂಬಾ ಸಮಯ ಆಯ್ತು ಸಾರ್ ಇಲ್ಲೇ ಕುಳಿತಿದ್ದೆ’ ಎನ್ನುವಾಗ ಅವನ ಮೂಗು-ಬಾಯಿಯಿಂದ ಹೊಗೆ ಉಗಿಬಂಡಿಯಂತೆ ಹೊರಬರುತ್ತಿತ್ತು. ಆತ ಕುಕ್ಕರುಗಾಲಿನಲ್ಲಿ ಕುಳಿತ ಜಾಗವನ್ನು ನೋಡಿದೆ, ಕೆಳಗೆ ಏಳೆಂಟು ಬೀಡಿಯ ಮುಂಡುಗಳು ದೂಮಪಾನಕ್ಕೆ ಅವನೆಷ್ಟು ದಾಸನಾಗಿದ್ದಾನೆ ಎಂಬುದನ್ನು ಸಾರಿ ಹೇಳುತ್ತಿದ್ದವು.
ಸರಿ ಹೊರಡೋಣ , ಮನೆ ಯಾವಕಡೆ , ನೀವೇನಾದ್ರೂ ಬೈಕ್ ತಂದಿದ್ದೀರೆ ಅಥವಾ ನನ್ನ ಜೊತೆಯೇ ಬರುವವರೆ? ಕೇಳಿದೆ.
ಜಮಾನದ ‘ಸುವೇಗ’ದ ಕಡೆ ಕೈ ತೋರುತ್ತಾ, ನಾನು ಮುಂದೆ ನಡೀತೀನಿ ನೀವು ಹಿಂಬಾಲಿಸಿ ಎಂದವನು ಬಾಯಿಗೆ ಒಂದು ಬೀಡಿ ಮುಂಡು ಸೇರಿಸಿ ಟರ್ರರ್ರೋ ಎಂದು ಶಬ್ದ ಮಾಡುತ್ತಾ ಸುವೇಗ ರೋಡಿಗಿಳಿಸಿದ. ಸರ್ವಿಸ್ ಕಾಣದೆ ದಶಕಗಳೇ ಕಳೆದು, ರಸ್ತೆ ಬದಿಯ ಗೂಡಾ ಅಂಗಡಿಯಲ್ಲಿ ಹಾಕುವ ಸೀಮೆ ಎಣ್ಣೆ ಮಿಶ್ರಿತ ಪೆಟ್ರೋಲ್ ನುಂಗಿ ಕಡುಗಪ್ಪು ಹೊಗೆ ಉಗುಳುತ್ತ ಹೋಗುತ್ತಿದ್ದ ಸುವೇಗ ಹಾಗೂ ಅದರ ಮಾಲೀಕ ಬಿಡುತ್ತಿದ್ದ ಧೂಮಪಾನದ ಹೊಗೆ ಎರಡನ್ನೂ “ಆಸ್ವಾದಿಸಿ” , ಗಂಟೆಗೆ 10 ಕಿ.ಮೀ ವೇಗದಲ್ಲಿ ಹಿಂಬಾಲಿಸಬೇಕಾದ ಅನಿವಾರ್ಯತೆ ಮತ್ತು ಸೌಭಾಗ್ಯ ನನ್ನದಾಗಿತ್ತು. ಅರಣ್ಯದ ನಡುವೆ ನನಗರಿಯದ ಹತ್ತಾರು ಕವಲು ದಾರಿಗಳಲ್ಲಿ ಚಲಿಸಿದ ನಂತರ ಒಂಟಿ ಗುಡಿಸಲೊಂದರ ಬಳಿ ಸುವೇಗ ನಿಂತಾಗ ‘ಸಾಕು ಮಾರಾಯ’ ಎಂದು ನಿಟ್ಟುಸಿರು ಬಿಟ್ಟೆ.
ಬೈಕ್ ಇಳಿದು ಕೊಟ್ಟಿಗೆಯ ಕಡೆ ಹೊರಟವನಿಗೆ ನಾಲ್ಕು ಕಜ್ಜಿ ನಾಯಿಗಳು ಅಡ್ಡಗಟ್ಟಿದವಾದರೂ ಹೊಟ್ಟೆಗಿಲ್ಲದೆ ತೇಲಾಡುತ್ತಿದ್ದ ಅವುಗಳನ್ನು ಕಂಡು ನನಗೆ ಮರುಕಹುಟ್ಟಿತೇ ಹೊರತು ಹೆದರಿ ನಿಲ್ಲುವಷ್ಟು ಭಯವೇನು ಆವರಿಸಲಿಲ್ಲ. ಮಾಮೂಲಿನಂತೆ ಪಶುವೈದ್ಯರು ಮನೆ ಬಳಿ ಬಂದರೆಂದರೆ ಮನೆ ಮಕ್ಕಳು, ನಾವು ಉಪಯೋಗಿಸುವ ದೊಡ್ಡ ಗಾತ್ರದ ಸೂಜಿ, ಸಿರಂಜ್ ಗಳನ್ನು ನೆನೆದು ಚಿಕ್ಕವು ಅಳುತ್ತಲೋ ,ಇನ್ನೂ ಕೆಲವೊಂದರ ಚಡ್ಡಿ ಒದ್ದೆಯಾಗಿ ದಿಕ್ಕಾ ದೇಶಾಂತರ ಹೋಗುವುದೂ ನೋಡಿದ್ದೇವೆ. ಇವರ ಮನೆಯಲ್ಲಿ ಐದರ ಪೋರ ಒಂದು ಕೈಯಲ್ಲಿ ಸಿಂಬಳ ಒರೆಸಿಕೊಳ್ಳುತ್ತಾ, ಮತ್ತೊಂದು ಕೈಯಲ್ಲಿ ಉದುರುತ್ತಿದ್ದ ಚಡ್ಡಿ ಎತ್ತಿಕೊಳ್ಳುತ್ತಾ ಉಣಗೋಲು ದಾಟಿ ಮನೆಯ ಸುತ್ತಲಿನ ಕಾನಿನಲ್ಲಿ ಕಾಣದಾದನು. ಸ್ವಲ್ಪ ದೊಡ್ಡ ವಯಸ್ಸಿನ ಮಗಳು ಮನೆಯೊಳಗೆ ಕಿಟಕಿಯ ಬಳಿ ನಿಂತು ಪಿಳಪಿಳನೆ ಕಣ್ಣು ಬಿಡುತ್ತ ದನೀನ್ ಡಾಕ್ಟರಿನ ವಿಶಿಷ್ಟ ಹಾವ ಭಾವವನ್ನು ಕಾತುರದಿಂದ ದಿಟ್ಟಿಸತೊಡಗಿದ್ದಳು.
ಕೊಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆಯ ಬಳಿ ನಿಂತು ಸಮಾಧಾನದಿಂದ ಗಮನಿಸಿದೆ. ಅದಕ್ಕೆ ಉಸಿರಾಟದ ಸಮಸ್ಯೆ ಇರುವಂತೆ ಕಾಣುತ್ತಿತ್ತು. ಮಾಲಿಕನನ್ನು ಕರೆದು ಎಷ್ಟು ದಿನದಿಂದ ಈ ಸಮಸ್ಯೆ ಎಂದು ಪ್ರಶ್ನಿಸಿದೆ. ಆತನು ಗೀಳಿಗೆ ಬಿದ್ದು ಬೀಡಿ ಮುಂಡನ್ನು ಬಾಯಿಯಲ್ಲಿ ಇಟ್ಟು ಎಳೆಯುತ್ತಾ ಹೊಗೆ ಬಿಡುವುದರಲ್ಲಿಯೇ ತಲ್ಲೀನನಾದವನನ್ನು ದುರಗುಟ್ಟಿ ನೋಡಿದ ನಂತರ ಕೊಟ್ಟಿಗೆಗೆ ಆತನ ಪ್ರವೇಶವಾಯಿತು.

ಫೋಟೋ ಕೃಪೆ : dreamstime
ಸಾ…’ವಾರ ಆಗೋಯ್ತು ‘…ಕೆಮ್ಮುತ್ತಲೇ ಹೊಗೆ ಎಳೆದುಕೊಂಡು ಎಮ್ಮೆಯ ಮುಖಕ್ಕೆ ಬಿಡತೊಡಗಿದ. ಮೊದಲೇ ಶ್ವಾಸಕೋಶದ ಸೋಂಕಿಗೆ ತುತ್ತಾಗಿದ್ದ ಎಮ್ಮೆಗೆ ಈತನ ಧೂಮಪಾನದ ಹೊಗೆ ಮತ್ತಷ್ಟು ಸಮಸ್ಯೆಗೆ ಸಿಲುಕಿಸಿತು. ನನಗೂ ಇನ್ನು ತಡೆಯಲಾಗದೆ ಎರಡು ಮೀಟರ್ ದೂರ ಹೋಗಿ “ಮಾರಾಯ ಎಮ್ಮೆನ ಈಗಲೇ ಸಾಯ್ ಬಡೀತೀಯ, ಅದನ್ನ ಬಾಯಿಂದ ತೆಗೀತಿಯೋ ಇಲ್ವೋ” ಎಂದಾಗಲೂ ನನ್ನ ಮಾತನ್ನು ನಿರ್ಲಕ್ಷಿಸಿ ಆತ ಮಾತು ಮುಂದುವರೆಸಿದ…ಮೂರು ಜನ ಡಾಕ್ಟ್ರು “ಇಂಗೀಷನ್” ಕೊಟ್ರು ಹುಷಾರಾಗಿಲ್ಲ, ಅದು ಮಲಗದೆ ಮೂರು ದಿನವಾಯ್ತು ಸಾರ್ ಎನ್ನುವಷ್ಟರಲ್ಲಿ ಮೂರು ಭಾರಿ ಹೊಗೆ ಎಳೆದು ಬಿಟ್ಟು ಮುಂಡು ಖಾಲಿಯಾಯಿತೋ ಇಲ್ಲವೋ ಎಂದು ಎರಡೆರಡು ಭಾರಿ ತಿರುಗಿಸಿ ನೋಡಿದಾಗ, “ಇದೇನು ನನ್ನ ತಾಳ್ಮೆ ಪರೀಕ್ಷೆಯೆ” ಎಂಬ ಅನುಮಾನ ನನ್ನ ಕಾಡತೊಡಗಿತು.
ಕೋಡಿಗೆ ಹಗ್ಗ ಹಾಕಪ್ಪ, ಪರೀಕ್ಷೆ ಮಾಡಿ ಇಂಜೆಕ್ಷನ್ ಮಾಡಬೇಕು ಎಂದೆ. ಹಗ್ಗ ಹುಡುಕುವ ನೆಪದಲ್ಲಿ ಮತ್ತೊಂದು ಬೀಡಿ ತುಂಡು ಬಾಯಿಗಿಟ್ಟುಕೊಂಡಿದ್ದೇ ತಡ ನನ್ನ ತಾಳ್ಮೆ ಮುರಿದು ಬಿತ್ತು. ನಾನು ಎರಡು ಹೆಜ್ಜೆ ಮುಂದೆ ಇಟ್ಟವನೇ, “ಅವನ ಬಾಯಲ್ಲಿದ್ದ ಬೀಡಿಯನ್ನು ಕಿತ್ತೊಗೆದು” , ಹಗ್ಗವನ್ನು ಕಸಿದು ಎಮ್ಮೆಯ ಕೋಡಿಗೆ ಹಾಕಿ ನಿಯಂತ್ರಿಸತೊಡಗಿದೆ.ಅಷ್ಟರಲ್ಲಿ ತಲೆಯ ಮೇಲೆ ಹಸಿಹುಲ್ಲು ಹೊತ್ತ ಮನೆಯಾಕೆ ಬಿಸಿಲಿನಲ್ಲಿ ಬೆವರುತ್ತಾ ಬಂದವಳಿಗೆ , ಕೊಟ್ಟಿಗೆಯಲ್ಲಿ ಆವರಿಸಿದ್ದ ಹೊಗೆಯಿಂದ ಬೇಸತ್ತಳು. ಉರಿ ಬಿಸಿಲಿನಲ್ಲಿ ಹಸಿದು ಬಂದವಳಿಗೆ ಪಿತ್ತ ನೆತ್ತಿಗೇರಿತ್ತು. ‘ಎಮ್ಮೆ ಹಿಡಿಯಕ್ಕಾಗಲ್ವಾ’ ಎಂದವಳೇ ಗಂಡನ ತೋಳು ಹಿಡಿದು ಎಮ್ಮೆಯ ಮುಂದೆ ತಳ್ಳಿದಳು . ವರ್ತಮಾನಕ್ಕೆ ಮರಳಿದ ಆತ ಚಳಿ ಹಿಡಿದವನಂತೆ ನಡುಗಲಾರಂಬಿಸಿದ. ಕಿಟಕಿಯಿಂದ ಎಲ್ಲವನ್ನೂ ವೀಕ್ಷಿಸುತ್ತಿದ್ದ ಮಗಳು ಕೂಡಲೆ ಬಂದು “ಗೊತ್ತಾಯ್ತ ಅಪ್ಪ ನಿನ್ನ ದುರಭ್ಯಾಸ ಎಲ್ಲರಿಗೂ ಎಷ್ಟು ಹಿಂಸೆಯಾಗುತ್ತಿದೆ” ಎಂದು ಬೇಸರಿಸಿ ತಾನೇ ಎಮ್ಮೆಯನ್ನು ನಿಯಂತ್ರಿಸಿ ಚಿಕಿತ್ಸೆಗೆ ಅನುವು ಮಾಡಿಕೊಟ್ಟಳು. ನಂತರದ ನಾಲ್ಕು ದಿನಗಳ ಚಿಕಿತ್ಸೆಯ ಬಳಿಕ ಎಮ್ಮೆ ಬದುಕುಳಿಯಿತಾದರೂ ಅವರ ಮನೆಗೆ ಹೋದಾಗ ಬೀಡಿ ಪ್ರಿಯ ಯಜಮಾನ ಹೊರಬಂದಿರಲಿಲ್ಲ.
ಇದಾಗಿ ತಿಂಗಳ ನಂತರ ಸಿಕ್ಕ ಆತನ ಮಗಳು ಹಸನ್ಮುಖಿಯಾಗಿ “ಡಾಕ್ಟ್ರೆ, ನಮ್ಮ ಎಮ್ಮೆಯನ್ನು ಗುಣ ಮಾಡಿದ್ದು ಅಷ್ಟೆ ಅಲ್ಲ ನಮ್ಮಪ್ಪ ಬೀಡಿ ಹಚ್ಚಿದ್ದು ಅವತ್ತೇ ಲಾಸ್ಟ್. ನೀವು ನಮ್ಮಪ್ಪನ ಬಾಯಲ್ಲಿದ್ದ ಬೀಡಿ ಎಸೆದು ಚಟವನ್ನು ಬಿಡಿಸಿಬಿಟ್ರಿ” ಎಂದಳು. ತಮಾಷೆಗೆ ಹೌದ, ಮತ್ತೆಲ್ಲಿ ಸ್ವೀಟು ಅಂದವನಿಗೆ ಅಂಗಡಿಯಿಂದ ಚಾಕಲೇಟ್ ಒಂದನ್ನು ಕೈಗಿಟ್ಟು ” ಬೀಡಿ ಬಿಡಿಸಿದವನ ಬಾಯಿಗೆ ಮಿಠಾಯಿ ” ಎಂದು ನಗೆ ಬೀರಿ ಹಾದಿ ಹಿಡಿದಳು.
- ಡಾ. ಯುವರಾಜ್ ಹೆಗಡೆ – ಪಶುವೈದ್ಯರು,ವೈದಕೀಯ ಬರಹಗಾರರು, ತೀರ್ಥಹಳ್ಳಿ.
