ಲೇಖಕಿ ಫಾತಿಮಾ ರಲಿಯಾ ಅವರ ʻಕಡಲು ನೋಡಲು ಹೋದವಳು’ ಲಲಿತ ಪ್ರಬಂಧದ ಪುಸ್ತಕದ ಕುರಿತು ಮಾಕೋನಹಳ್ಳಿ ವಿನಯ್ ಮಾಧವ್ ಅವರು ಬರೆದ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಎಷ್ಟೋ ಸಲ ಅನ್ನಿಸಿದೆ. ಜೀವನದಲ್ಲಿ ಕೊನೆಯಲ್ಲಿ ಉಳಿಯುವುದು, ನಾವು ನಿಂತು ನೋಡಿದ ಸಮಯ ಮಾತ್ರ. ಉಳಿದಂತೆ, ಈ ವೇಗದ ಪ್ರಪಂಚದಲ್ಲಿ, ನಮ್ಮ ಗುರಿಗಳ ಹಿಂದೆ ಓಡುತ್ತಾ, ಹಿಂದುರುಗಿ ನೋಡಲೂ ಸಮಯವಿಲ್ಲದೆ, ಏನಾಯಿತು ಎಂದು ಯೋಚಿಸುವುದರೊಳಗೆ ಜೀವನ ಮುಗಿದಿರುತ್ತದೆ.

ನಮ್ಮ ಜೀವನದಲ್ಲಿ ಅತೀ ಹೆಚ್ಚು ನಿಂತು ನೋಡಿರುವುದು ಬಾಲ್ಯದಲ್ಲಿ ಮಾತ್ರ ಎಂದು ನನಗನ್ನಿಸುತ್ತದೆ. ಕೈಯಲ್ಲಿ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಗಳನ್ನು ಹಿಡಿದುಕೊಂಡೇ ಹುಟ್ಟುವ ಮಕ್ಕಳಿಗೆ ಆ ಭಾಗ್ಯ ಇದೆಯೋ, ಇಲ್ಲವೋ ಹೇಳಲಾಗುವುದಿಲ್ಲ. ಆದರೆ, ಆ ಭಾಗ್ಯ ಇಲ್ಲದ ಮಕ್ಕಳಿಗೆ, ಈಗಲೂ ಜೀವನವನ್ನು ನಿಂತು ನೋಡುವ ಭಾಗ್ಯ ಇದ್ದೇ ಇರುತ್ತದೆ ಎನ್ನುವುದು ನನ್ನ ಅನಿಸಿಕೆ.
ಆದರೆ ಪ್ರಶ್ನೆ ಇರುವುದು ನಾವು ನಿಂತು ನೋಡಿದ ಸಮಯವನ್ನು ನಮ್ಮದಾಗಿಸಿಕೊಳ್ಳಲು ಮತ್ತೆ ಸಮಯ ಸಿಗುವುದೇ ಎನ್ನುವುದು. ಸಮಯ ಎಂದಿಗೂ, ಯಾರಿಗೂ ಸಿಗುವುದಿಲ್ಲ. ನಮ್ಮ ಜೀವನದಲ್ಲಿ, ನಮಗೆ ನಾವೇ ಸಮಯ ಮಾಡಿಕೊಳ್ಳಬೇಕಷ್ಟೆ. ಆಗ ಮಾತ್ರ ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳಲು ಸಾಧ್ಯ. ಈ ವಿಷಯ ಮನಸ್ಸಿಗೆ ಬಂದಾಗಲೆಲ್ಲ ಡಿವಿಜಿ ಅವರ ಈ ಕಗ್ಗ ನೆನಪಾಗುತ್ತದೆ:
ನಭದ ಬೆಲೆಯೊಳನಂತ: ಮನದ ಗುಹೆಯೊಳನಂತ!
ವುಭಯದಾನಡುವೆ ಸಾದ್ಯಂತ ಜೀವಕಥೆ!!
ವಿಭುವೊಬ್ಬ ನೀ ಗಾಳಿಬುಡ್ಡೆಯನೂದುವವನು!
ಹಬೆಗುಳ್ಳೆಯೇ ಸೃಷ್ಠಿ – ಮಂಕುತಿಮ್ಮ.
ಇದೆಲ್ಲ ನೆನಪಾಗಿದ್ದು, ಒಂದು ಸಣ್ಣ ಲಲಿತ ಪ್ರಬಂಧಗಳ ಸಂಕಲನವನ್ನು ಓದಿದಾಗ. ಅದನ್ನು ಓದಲೇ ಬೇಕಾದ ಅನಿವಾರ್ಯತೆ ಬಂದಿದ್ದು, ಈ ವಾರ, ಎರಡು ಬಾರಿ ಆ ಹುಡುಗಿಯ ಚಿತ್ರ ಕಣ್ಣಿಗೆ ಬಿದ್ದಿದ್ದರಿಂದ.
ಮೊದಲನೇ ಬಾರಿ, ವಸುದೇಂದ್ರ ಅವರ ಫೇಸ್ಬುಕ್ ಪೋಸ್ಟಿನಲ್ಲಿ. ಎರಡನೇ ಬಾರಿ, ವಿಜಯ ಕರ್ನಾಟಕ ದೀಪಾವಳಿ ಕಥಾ ಸ್ಪರ್ಧೆಯ ವಿಜೇತರ ಪಟ್ಟಿಯಲ್ಲಿ. ವಸುದೇಂದ್ರ ಅವರ ಛಂದ ಪುಸ್ತಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದ್ದರೆ, ವಿಜಯ ಕರ್ನಾಟಕದ ಸ್ಪರ್ಧೆಯಲ್ಲಿ ವಿಜೇತರ ಪಟ್ಟಿಯಲ್ಲಿತ್ತು, ಆ ಹುಡುಗಿ ಹೆಸರು.
ತಲೆಗೆ ಬಟ್ಟೆ ಹಾಕಿಕೊಂಡಿದ್ದ ಫಾತಿಮಾ ರಲಿಯಾ ಎಂಬ ಹುಡುಗಿ ಏಕೋ ಗಮನ ಸೆಳೆದಳು. ವಸುದೇಂದ್ರ ಅವರ ಆಯ್ಕೆಯಲ್ಲಿ ಮೊದಲು ಬರುವುದು ಅಷ್ಟು ಸುಲಭದ ಮಾತಲ್ಲ. ಅವರು ಸೃಷ್ಠಿಸಿದ ʻಹುಲಿಗೆವ್ವʼಪಾತ್ರ ಇಷ್ಟು ವರ್ಷಗಳ ನಂತರವೂ ನನ್ನನ್ನು ಕಾಡುತ್ತಾಳೆ. ಅವರ ಮೆಚ್ಚುಗೆ ಪಡೆದ ಈ ಕರಾವಳಿಯ ಹುಡುಗಿಯಲ್ಲೇನೋ ವಿಶೇಷತೆ ಇದೆ ಎನ್ನಿಸಿತು.
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಕೃಷಿ ಸಾಕಷ್ಟು ನಡೆಯುತ್ತಿರುವುದರಿಂದ, ಎಲ್ಲರ ಬರಹಗಳನ್ನು ಓದಲು ಸಾಧ್ಯವಾಗದ ಪರಿಸ್ಥಿತಿ ಇರುವುದು ನಿಜ. ರಲಿಯಾ ಬಗ್ಗೆ ಸ್ವಲ್ಪ ಕಣ್ಣಾಡಿಸಿದಾಗ ನನ್ನ ಕೈಗೆ ಬಂದ ಪುಸ್ತಕವೇ ʻಕಡಲು ನೋಡಲು ಹೋದವಳು.ʼ ಓದುತ್ತಾ ಹೋದಂತೆ, ನನ್ನ ಎಣಿಕೆ ತಪ್ಪಾಗಲಿಲ್ಲ ಎನಿಸಿತು.

ಫಾತಿಮಾ ರಲಿಯಾ
ರಾಜಕೀಯ, ಕೋಮು ಗಲಭೆಯ ನಾಡಾಗಿ ಪರಿವರ್ತನೆಯಾಗಿರುವ ಮಲೆನಾಡು-ಕರಾವಳಿ ಸೀಮೆಯಲ್ಲಿ ಆಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಯಾವ ಅಭಿಪ್ರಾಯವನ್ನು ಸೃಷ್ಠಿಸಬಹುದು ಎನ್ನುವುದು ನೆನಪಾಗಿ ನಗು ಬಂತು. ಆದರೆ, ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಮೂಲಕ ಮಲೆನಾಡು-ಕರಾವಳಿಯ ಜೀವನದ ಬಗ್ಗೆ ಯಾವುದೇ ಅಭಿಪ್ರಾಯ ಬೆಳೆಸಿಕೊಂಡಿರುವವರಿಗೆ ಗೊತ್ತಿಲ್ಲದ ವಿಷಯ ಒಂದಿದೆ. ಅಲ್ಲಿ, ರಾಜಕೀಯ, ಕೋಮು, ವರ್ಗ ಸಂಘರ್ಷಗಳನ್ನು ಮೀರಿದ ಮಾನವೀಯ ಸಂಬಂಧಗಳು ಬಲವಾಗಿಯೇ ಇದೆ.
ಇತ್ತೀಚೆಗೆ ರಿಶಭ್ ಶೆಟ್ಟಿಯವರ ಕಾಂತಾರ ಸಿನೆಮಾದ ಬಗ್ಗೆ ದಕ್ಷಿಣ ಕನ್ನಡದ ಭಟ್ಟರ ಹುಡುಗಿಯೊಬ್ಬಳು ʻಭೂತಾರಾಧನೆ ಉಪಯೋಗಿಸಿ ರಿಶಭ್ ಶೆಟ್ಟಿ ಹೆಸರು ಮಾಡಲು ಹೊರಟಿದ್ದಾರೆ,ʼ ಎಂದು ಬಾಯಿಗೆ ಬಂದಂತೆ ದಬಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಜಾಡಿಸಿದ್ದರೆ, ಸುರಯ್ಯಾ ಅಂಜುಮ್ ಎನ್ನುವ ಹುಡುಗಿ ತುಳುನಾಡ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಕ್ಕಾಗಿ ಹೆಮ್ಮೆ ವ್ಯಕ್ತ ಪಡಿಸಿದ್ದಾಳೆ. ಭಟ್ಟರ ಹುಡುಗಿ ಒಂದು ಪಕ್ಷದ ನಾಯಕಿ ಮತ್ತು ರಿಶಭ್ ಶೆಟ್ಟಿಯವರನ್ನು ಬಲ ಪಂಥೀಯವಾಗಿ ನೋಡಿದ್ದಾಳೆ ಅಷ್ಟೆ. ಈ ಎಡ, ಬಲ ಪಂಥೀಯರನ್ನು ಹೊರತು ಪಡಿಸಿ, ಇನ್ನುಳಿದವರು ಆರಾಮವಾಗಿದ್ದಾರೆ.
ಈ ಪುಸ್ತಕವನ್ನು ತಿರುಗಿಸಿ ನೋಡಿದ ತಕ್ಷಣ ಬೋಳುವಾರು ಮೊಹಮದ್ ಕುಂಙಯವರ ಹಿನ್ನುಡಿ ನೋಡಿದೆ. ʻಜಗಿದಷ್ಟೋ ಸಿಹಿ ಎನ್ನಿಸುವ ಕಬ್ಬಿನ ಜಲ್ಲೆ.ʼ ಪುಸ್ತಕ ಓದುವಾಗ ಅದು ಸತ್ಯ ಎನ್ನಿಸಿತು.
ರಲಿಯಾ ಜೀವನವನ್ನು ಬಹಳಷ್ಟು ಸಂಯಮದಿಂದ ನಿಂತು ನೋಡಿದ್ದಾರೆ. ನಿಂತು ನೋಡಿದ್ದನ್ನು ಆಸ್ವಾದಿಸಲು ಸಮಯವನ್ನೂ ಮಾಡಿಕೊಂಡಿದ್ದಾರೆ. ಹಾಗಂತ, ತನ್ನ ಸುತ್ತ ನಡೆಯುತ್ತಿದ್ದ ಬದಲಾವಣೆಗಳನ್ನು ಗಮನಿಸದಿರುವಂತಹ ಅಥವಾ ಅದಕ್ಕೆ ಜಾಣ ಕುರುಡು ತೋರಿಸಿ, ತೇಪೆ ಹಚ್ಚುವ ಕೆಲಸವನ್ನೂ ಮಾಡಿಲ್ಲ. ನೊಂದು ಕೊಂಡಿದ್ದಾರೆ, ಆದರೆ ತಮ್ಮ ನಿಲುವಿನ ಬಗ್ಗೆ ಅವರಿಗೆ ಸ್ಪಷ್ಟತೆ ಇದೆ. ಅದು ಆವರ ಮೊದಲ ಪ್ರಬಂಧ ʻಉನ್ಮತ್ತ ಕುರುಕ್ಷೇತ್ರವೂ, ಬೃಂದಾವನದ ಕೊಳಲೂʼ.

ಹದಿನೇಳು ಲಲಿತ ಪ್ರಬಂಧಗಳಲ್ಲಿ, ರಲಿಯಾ ತಮ್ಮ ವ್ಯಕ್ತಿತ್ವ ರೂಪಿಸಿದ ಎಷ್ಟೋ ಭಾವನಾತ್ಮಕ ಸಂಬಂಧಗಳು, ವ್ಯಕ್ತಿಗಳು ಮತ್ತು ಕರಾವಳಿ ಪ್ರಾಂತ್ಯದ ಹಳ್ಳಿ ಬದುಕನ್ನು, ನವಿರಾದ ಹಾಸ್ಯ ಮತ್ತು ಹರಟೆಯ ಮೂಲಕ ಚಿರಾಯುವಾಗಿಸಿದ್ದಾರೆ. ಓದಲು ಸರಳವಾಗಿದೆ ಎನಿಸಿದರೂ, ಕೆಲವೊಮ್ಮೆ ಮುಗ್ದ ಮಗುವಿನಂತೆ ಮುದಗೊಳಿಸಿದರೆ, ಮತ್ತೊಮ್ಮೆ ದಾರ್ಶನಿಕಳಂತೆ ಚಿಂತನೆಗೆ ಈಡು ಮಾಡುತ್ತಾರೆ.
ಈ ಪುಸ್ತಕದಲ್ಲಿ ಬರುವ ಕೆಲವು ಪಾತ್ರಗಳಾದ ಫಕೀರಮ್ಮ, ಜೀನ್ಸ್ ಪ್ಯಾಂಟ್ ಅಕ್ಕ, ಕಡಲ ತೀರದಲ್ಲಿ ಸಿಕ್ಕಿದ ಅಜ್ಜಿ, ಅವ್ವಯ್ಯಜ್ಜಿ, ಸುಂದರಿ, ಗೀತಕ್ಕ, ಅಫೀಫಾ ಮತ್ತು ಚಾಂದಜ್ಜಿ ಬಹಳ ಕಾಲ ನೆನಪಿನಲ್ಲುಳಿಯುತ್ತಾರೆ. ಪುಸ್ತಕ ಓದಿದ ಮೇಲೆ ಅನ್ನಿಸಿತು… ಬೋಳುವಾರು ಅವರು ಹೇಳಿದಂತೆ, ಇವರು ಮುಂದೊಂದು ದಿನ ಪ್ರಮುಖ ಲೇಖಕರಲ್ಲಿ ಒಬ್ಬಳಾಗುವ ಎಲ್ಲಾ ಲಕ್ಷಣಗಳಿವೆ ಎಂದು.
- ಮಾಕೋನಹಳ್ಳಿ ವಿನಯ್ ಮಾಧವ್ (ಪತ್ರಕರ್ತರು,ಲೇಖಕರು, ವಿಮರ್ಶಕರು) ಬೆಂಗಳೂರು.
