ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಹೋದಾಗ ವಿದ್ಯೆ ಪಡೆದು ಅವಿದ್ಯಾವಂತರು ನಡೆದುಕೊಂಡ ರೀತಿ ಕಾಫಿ, ಟೀಯನ್ನು ಪೇಪರ್ ಕಪ್ಪಲ್ಲಿ ಕೊಟ್ಟು ಕಳಿಸಿದ ಘಟನೆಗಳು, ಜನರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಯಾಕೆ? ಏನು? ಮತ್ತಿತರ ಪ್ರಶ್ನೆಯನ್ನು ಕೇಳಿ ಅವಮಾನಿಸಿದ ರೀತಿ ಚ. ನಾ. ಭಾಗ್ಯಲಕ್ಷ್ಮಿ ನಾರಾಯಣ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ತಿರುವಿಗೆ ಇತಿಶ್ರೀ ಹಾಡುವಾಗ ನೂರಾರು ದನಿಗಳು ಕೇಳಿಕೊಂಡದ್ದು. “ಅವ್ವಾ 20,000 ಕ್ಕಿಂತ ಹೆಚ್ಚಿಗೆ ಆದಾಯ ತೋರಿಸಬೇಡ ಕಣವ್ವಾ. ರೇಷನ್ ಕಾರ್ಡ್ ಕಿತ್ತು ಹಾಕಿಬಿಡುವರು”. ಇಂದಿಗೆ ಮುಕ್ತಾಯಗೊಂಡ ಸಮೀಕ್ಷೆಯಲ್ಲಿ ಕಂಡುಂಡ ಕೆಲವು ಅನುಭವಗಳು ನಿಮ್ಮ ಮುಂದೆ. ಒಬ್ಬೊಬ್ಬರ ಅನುಭವಗಳನ್ನು ತೆಗೆದುಕೊಂಡರೆ ದೊಡ್ಡ ಕಾದಂಬರಿಯಾಗುವುದರಲ್ಲಿ ಸುಳ್ಳಿಲ್ಲ.
ಓ ದೇವರೇ… ಈ ರೀತಿಯ ಗಣತಿಯ ಸರ್ವೆ ಮತ್ತೆಂದೂ ಬಾರದಿರಲಿ. ಸಾವಿರ ಮನೆಯ ಸರ್ವೆ ಮಾಡಬಹುದಿತ್ತು. ನಿಖರವಾದ ಮಾಹಿತಿಗಳು, ಸರಿಯಾದ ಪೂರ್ವ ಸಿದ್ಧತೆ ಎಲ್ಲವೂ ಇಲ್ಲದ್ದರಿಂದ ಸರ್ವೆ ಬೇಸರವಾಯಿತು. ಮನೆಗಳ, ಮಕ್ಕಳ, ಜನರ ಹುಡುಕಾಟದಲ್ಲಿ ಶಿಕ್ಷಕರು ಬಸವಳಿದರು. ಎಲ್ಲೋ ಇರುವ ಜನರನ್ನು ದೂರವಾಣಿಯಲ್ಲಿ ಸಂಪರ್ಕಿಸುವಾಗ ಯಾಕೆ, ಏನು ಮತ್ತಿತರ ಪ್ರಶ್ನೆಗಳ ಅವಮಾನ ಅನುಭವಿಸಿದ ಯಾತನೆ.
ಎಷ್ಟೋ ಕಡೆ ನಾವು ಜಾತಿ ಹೇಳಿಕೊಂಡು ಹೊಸಿಲು ದಾಟಿದ ಪರಿಸ್ಥಿತಿ. ಎಷ್ಟೋ ಶಿಕ್ಷಕರನ್ನು ಒಳಗೆ ಕರೆಯದೆ, ಮಾನವೀಯತೆ ತೋರದೆ, ಗಂಟೆಗಟ್ಟಲೆ ಬಾಗಿಲಲ್ಲಿ ನಿಲ್ಲಿಸಿ ಸರ್ವೆ ಮಾಡಿಸಿದ ಮುತ್ತಿನಂಥಾ ಸಾರ್ವಜನಿಕರು. ಇದು ನನ್ನ ಗೆಳತಿಯರಿಗೆ ಮತ್ತು ಸರ್ವೆಯಲ್ಲಿ ಭಾಗವಹಿಸಿದ್ದ ಒಬ್ಬ ವ್ಯಕ್ತಿಗೆ ಆದ ದೃಶ್ಯವನ್ನು ಕಣ್ಣಾರೆಕಂಡದ್ದು.
ಮಡಿ ಮೖಲಿಗೆಯ ಕಂದಾಚಾರದಲ್ಲಿ ಇರುವ ಸಾರ್ವಜನಿಕರು, ಸರ್ವೆ ಮಾಡಲು ಹೋದ ಶಿಕ್ಷಕರು ಕುಳಿತು ಹೋದ ಆಸನಗಳನ್ನು, ಜಗಲಿಕಟ್ಟೆಯನ್ನು ಸ್ವಚ್ಛತೆ ಮಾಡಿಕೊಂಡ ಅವಿದ್ಯಾವಂತರು (ವಿದ್ಯಾವಂತರು ಎನ್ನಲು ಮನಸ್ಸು ಬರುತ್ತಿಲ್ಲ). ವಿಧಿಯಿಲ್ಲದೆ ಕಾಫಿ, ಟೀ ಕೊಡುವಾಗ ಪೇಪರ್ ಕಪ್ಪಲ್ಲಿ ಕೊಟ್ಟು ಕಳಿಸಿದ ಘಟನೆಗಳನ್ನು ನನ್ನ ಸ್ನೇಹಿತರು ಹಂಚಿಕೊಂಡರು.
ಹಣದ ಆಮಿಷವೊಡ್ಡಿ ಕೆಲಸ ಮಾಡುವ ಶಿಕ್ಷಕರನ್ನು ಸವೆಸಿದ ಹಾಗೆ ಮಾಹಿತಿ ನೀಡುವ ಜನರನ್ನು ಯಾವುದೇ ಆಮಿಷಕ್ಕೆ ಒಗ್ಗಿಸುವುದು ಆಗುವುದಿಲ್ಲ ಎಂಬ ಸತ್ಯ ದರ್ಶನ. ಏಕೆಂದರೆ ಅರ್ಧ ಸುಳ್ಳು ಮಾಹಿತಿಗಳೇ ಹೆಚ್ಚು ರವಾನೆಯಾಗಿದೆ.
ದಿನಕ್ಕೊಂದು, ಕ್ಷಣಕ್ಕೊಂದು ಮಾಹಿತಿಗಳನ್ನು ಕೇಳುವುದರಿಂದ ದೂರದ ಸಂಪರ್ಕದಲ್ಲಿ ಇರುವ ಸ್ಥಳೀಯರ ಮಾಹಿತಿಗಳನ್ನು ತಾಳ್ಮೆಯಿಂದ ಆಲಿಸಿ, ಅವರ ಬಳಿಯೂ ಬೖಸಿಕೊಂಡು ಸರ್ವೆ ಮುಗಿಸಲಾಯಿತು. ಒಬ್ಬರೇ ಎರಡೆರಡು ಕಡೆ ಸೇರ್ಪಡೆ ಆಗಿದ್ದಾರೆ ಎಂಬುದು ಕೆಲವರ ಅಂಬೋಣ.
ಕೆಲ ಬಡವರು ಬಡವರಾಗಿಯೇ ಉಳಿದಿರುವುದು ಮುಖ್ಯವಾಗಿ ಕಂಡುಬಂದ ದೃಶ್ಯ. ಅಲ್ಲದೆ ಬಯಲು ಶೌಚಾಲಯ ಪದ್ಧತಿ ಇನ್ನೂ ಮರೆಯಾಗಿಲ್ಲ ಎಂಬ ಸತ್ಯದರ್ಶನ. ಹದಿನೆಂಟು ವಯಸ್ಸಿನ ಒಳಗೇ ಮದುವೆಯಾಗಿದ್ದರೂ ಒಪ್ಪಿಕೊಳ್ಳದ ಯುವತಿಯರು. ಆಧಾರ್ ಕಾರ್ಡ್ ಗಳೇ ಎಲ್ಲವನ್ನು ಬಯಲು ಮಾಡಿದ್ದವು. ಆದರೆ ಅವರ ಇಚ್ಛೆಗೆ ವಿರುದ್ಧವಾಗಿ ಹಾಕುವಂತಿಲ್ಲ.
ಶ್ರೀಮಂತರು ಶ್ರೀಮಂತರಾಗಿಯೇ ಏರುತಿರುವುದರ ನಡುವೆ ಅನುಕೂಲಸ್ಥರೆಲ್ಲರೂ ಸರ್ಕಾರದ ಯೋಜನೆಗಳನ್ನು ಉಪಯೋಗ ಮಾಡಿಕೊಂಡು ಮತ್ತಷ್ಟೂ ಸುಧಾರಿಸಿದ್ದಾರೆ ಎಂಬ ಸಂತಸ. ಒಬ್ಬರೂ ಸರ್ಕಾರದ ಸವಲತ್ತುಗಳನ್ನು ನಿರಾಕರಿಸಲ್ಲ. ಎಷ್ಟೆಲ್ಲಾ ದುಡಿಯುತ್ತಿದ್ದರೂ, ಏನೆಲ್ಲಾ ಸೌಕರ್ಯ ಮಾಡಿಕೊಂಡರೂ ಏನೂ ಇಲ್ಲ ಎಂದೇ ಹೇಳಿಕೆ ನೀಡಿರುವುದು. ಮತ್ತೆ ಕೆಲವರು ಪ್ರಾಮಾಣಿಕವಾಗಿ ಇರುವುದನ್ನು ಹೇಳಿರುವುದು. ಸರ್ಕಾರಿ ನೌಕರರಿಗಿಂತ ಸಾಮಾನ್ಯ ಜನರು ಚೆನ್ನಾಗಿ ಇದ್ದಾರೆ ಎಂಬ ಸತ್ಯ.
ಪ್ರೀತಿಸಿ ಮದುವೆಯಾಗಿ ಬಂದ ಹುಡುಗಿಯರೂ ಸಹಾ ತಮ್ಮ ಜಾತಿ ಹೇಳಲು ಹಿಂಜರಿದರು. ಯಾರೂ ಸಹಾ ಹೊರಗಿನಿಂದ ಬಂದ ಹೆಣ್ಣು ಮಕ್ಕಳು ತಮ್ಮ ಮೂಲ ಜಾತಿಯನ್ನು ಹೇಳಲಿಲ್ಲ. ಗಂಡನ ಜಾತಿಯೇ ಅಂತಿಮವಾಗಿ ಸೇರಿತು.
ಒಂದು ಜೀವಿಯೂ ತಾನು ಸರ್ಕಾರದಿಂದ ಸ್ಕಾಲರ್ಷಿಪ್ ಪಡೆದ ಬಗ್ಗೆ ಹೇಳಲಿಲ್ಲ. ಕಣ್ಣಳತೆಗೇ ಶ್ರೀಮಂತಿಕೆ ಇದ್ದರೂ, ಹಸು, ಕರು, ಕುರಿ ಎಲ್ಲಾ ಇದ್ದರೂ… “ಅವ್ವಾ… ಇಪ್ಪತ್ತು ಸಾವಿರ ಮಾತ್ರ ಆದಾಯ ತೋರಿಸವ್ವಾ. ಹೆಚ್ಚಿಗೆ ಬರೆಯಬೇಡ ಎಂದವರೇ ಹೆಚ್ಚು.
ಒಂದು ಸತ್ಯ ಹೇಳಲೇಬೇಕು ಶೇಕಡಾ ಎಪ್ಪತ್ತರಷ್ಟು ಜನ ರೇಷನ್ ಅಕ್ಕಿಯನ್ನು ಮಾರಿಕೊಳ್ಳುತ್ತಿದ್ದಾರೆ. ಸಣ್ಣಕ್ಕಿ ಊಟ ಉಣುತ್ತಿರುವವರೇ ಜಾಸ್ತಿ. ತಮ್ಮ ಜಮೀನಿನಲ್ಲಿ ಬೆಳೆದ ಅಕ್ಕಿ ಬಳಸುತ್ತಿದ್ದಾರೆ. ಆದರೂ ಬಡತನದ ರೇಖೆಯ ಕೆಳಗೆ ಇದ್ದೀವಿ ಎಂಬ ಹಣೆಪಟ್ಟಿಯು ಜೊತೆಗೆ ನಾವು ದುಡಿದು ಮುಂದೆ ಬಂದಿದ್ದೇವೆ, ಬರುತ್ತಿದ್ದೇವೆ ಎಂಬುದನ್ನು ಎದೆಮುಟ್ಟಿ ಹೇಳುವುದು ಯಾವಾಗ? ಮತ್ತೆ ರೇಷನ್ ಅಕ್ಕಿ ಯಾಕೆ ಇವರಿಗೆ?.
ಒಂದು ಕಡೆ ಅವರು ತೊಡುವ ಆಭರಣಗಳಾಗಲಿ, ಉಡುಗೆಯಾಗಲಿ ಸರ್ಕಾರಿ ನೌಕರರು ಕೂಡಾ ಸಂಪಾದಿಸುವುದು ಕಷ್ಟ. ಇದು ಎಲ್ಲರಿಗೂ ಸಂಬಂಧ ಪಟ್ಟ ಹೇಳಿಕೆಯೂ ಅಲ್ಲ. ಬಡತನದ ಕೆಳಗೆ ಇದ್ದೇವೆ ಎಂದು ಪ್ರತೀ ಸವಲತ್ತು ಪಡೆಯುತ್ತಿರುವ ಜನರಿಗೆ.
ಗೃಹಲಕ್ಷ್ಮಿ ಆಸೆಗೆ ಬಲಿಬಿದ್ದು ಅತ್ತೆ, ಸೊಸೆಯಂದಿರೆಲ್ಲಾ ಬೇರೆ ಬೇರೆ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಕೆಲವರು ಮನೆಗೆ ಅಡ್ಡಲಾಗಿ ಗೋಡೆಕಟ್ಟಿದ್ದಾರೆ. ಮತ್ತೆ ಕೆಲವರು ರೇಷನ್ ಕಾರ್ಡ್ ಮಾಡಿಸಿ ಬೆಂಗಳೂರು ಸೇರಿದ್ದಾರೆ. ಹೊಟ್ಟೆ ಪಾಡು ನಡೆಯಬೇಕಲ್ಲ. ಉಳುವ ಭೂಮಿ ಅನ್ನ ಕೊಡುತ್ತಿಲ್ಲ. ಭೂಮಿಯಲ್ಲಿ ದುಡಿಯಲು ರೈತನ ಮಕ್ಕಳಿಗೆ ಮನಸ್ಸಿಲ್ಲ. ಇಂದು ಉಳುಮೆಯ ಭೂಮಿಯೆಲ್ಲಾ ಸರ್ವೆ, ತೇಗ ಮರನೆಟ್ಟ ಭೂಮಿಯಾಗಿ ಮಾರ್ಪಾಡಾಗಿದೆ. ಕೆಲವು ರೈತರು ತಮ್ಮ ಭೂಮಿಯನ್ನು ನಂಬಿಕೊಂಡು ಹಳ್ಳಿಯಲ್ಲಿ ಇದ್ದಾರೆ.
ಕೊನೆಯದಾಗಿ ಉಚಿತವಾಗಿ ಏನಾದರೂ ದೊರೆಯಬಹುದೆಂಬ ನಿರೀಕ್ಷೆಯೇ ಹೊರತು, ಬೇಡವೆಂಬ ನಿರಾಕರಣೆ ಯಾರಲ್ಲಿಯೂ ಇರಲಿಲ್ಲ. ಓದಿಕೊಂಡ ವಿದ್ಯಾವಂತ ನಿರುದ್ಯೋಗಿಗಳು ಲಕ್ಷಾಂತರ ಇದ್ದಾರೆ. ಅವರಿಗೆ ಈ ಕಾರ್ಯವಹಿಸಿದ್ದರೆ ಅವರಿಗೂ ಸಹಾಯವಾಗುತ್ತಿತ್ತು. ನಮಗೂ ಸ್ವಲ್ಪ ಬಿಡುವು ಸಿಗುತ್ತಿತ್ತು. ಕೊನೆಯ ಬೆಳಕು ನಾವಿದ್ದಲ್ಲಿಗೇ ಅವರು ಬಂದರೆ, ನಮಗೆ ಮರ್ಯಾದೆ ಜಾಸ್ತಿ ಇರುತ್ತಿತ್ತು .
- ಚ. ನಾ. ಭಾಗ್ಯಲಕ್ಷ್ಮಿ ನಾರಾಯಣ – ಮೖಸೂರು.
