ಚಾಮುಂಡಿ ಬೆಟ್ಟದಲ್ಲಿನ ಸವಿ ಸವಿ ನೆನಪು – ಲಾವಣ್ಯ ಪ್ರಭಾ

ಬೆಟ್ಟದ ನೆತ್ತಿಯ ಮೇಲೆ ನಿಂತು ಸಂಜೆ ಸೊಬಗನ್ನು ಸವಿಯುತ್ತಾ ಕೆಳಗೆ ಕಾಣುವ ಇಡೀ ಮೈಸೂರು ದೀಪದ ಬೆಳಕಿನಲ್ಲಿ ಮಿನುಮಿನುಗುವ ನೋಟವಂತೂ ರಮಣೀಯ. ಇಪ್ಪತ್ತೇಳು ವರ್ಷದ ಸವಿಸವಿ ನೆನಪು ಈ ಚಾಮುಂಡಿ ಬೆಟ್ಟದಲ್ಲಿದೆ ಎನ್ನುತ್ತಾರೆ ಲೇಖಕಿ ಲಾವಣ್ಯ ಪ್ರಭಾ ಅವರು, ತಪ್ಪದೆ ಮುಂದೆ ಓದಿ….

ನೆನ್ನೆ ಬೆಳಿಗ್ಗೆ ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ಹೋಗಿ ಬಂದೆವು. ಬಿಸಿಲು ಮತ್ತು ಜನರ ಜಾತ್ರೆಯ ನಡುವೆಯೂ ಮನಸ್ಸು ಶಬ್ಧದಿಂದ ನಿಶಬ್ಧಕ್ಕೆ ಜಾರಿ ಕೂಲಾಯಿತು. ಇಪ್ಪತ್ತೇಳು ವರ್ಷಗಳಿಂದ ಅಂದರೆ ಮದುವೆಯಾಗಿ‌ ಮೈಸೂರಿಗೆ ಬಂದಾಗಿನಿಂದ ವರ್ಷಕ್ಕೆರಡು ಬಾರಿ ತುಂಬಾ ಇಷ್ಟ ಪಟ್ಟು ನಾನು ಹೋಗುವ ಸ್ಥಳ ಇದು. ಎರಡು ಬಾರಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲೂ ಹತ್ತಿದ್ದೇನೆ. ಸಮುದ್ರ ಮಟ್ಟಕ್ಕಿಂತ ಸುಮಾರು ಮೂರೂವರೆ ಸಾವಿರ ಅಡಿ ಎತ್ತರದ ತಂಪು ಪ್ರದೇಶದಲ್ಲಿರುವ ಬೆಟ್ಟ ಮೈಸೂರಿನ ಕಲಶದಂತೆ ಕಾಣುವುದೇ ಒಂದು ಸೊಬಗು. ಬೆಟ್ಟದ ನೆತ್ತಿಯ ಮೇಲೆ ನಿಂತು ಸಂಜೆ ಸೊಬಗನ್ನು ಸವಿಯುತ್ತಾ ಕೆಳಗೆ ಕಾಣುವ ಇಡೀ ಮೈಸೂರು ದೀಪದ ಬೆಳಕಿನಲ್ಲಿ ಮಿನುಮಿನುಗುವ ನೋಟವಂತೂ ರಮಣೀಯ.

ಮೈಸೂರಿನವರಾದ ನಮಗೆ ಎಲ್ಲದಕ್ಕೂ ಬೆಟ್ಟ ಬೇಕು. ಸಿನಿಮಾ ಶೂಟಿಂಗ್ ಗೂ ಬೆಟ್ಟ, ಪ್ರಿವೆಡ್ಡಿಂಗ್ ಶೂಟ್ ಗೂ ಬೆಟ್ಟ…. ಒಂದು ತಮಾಷೆಯ ಮಾತಿದೆ. ಯಾರಿಗಾದರೂ ಪ್ರೇಮವಾಯಿತಾ ಬೆಟ್ಟಕ್ಹೋಗು ,ಪ್ರೇಮ ವಿಫಲವಾಯ್ತಾ ಬೆಟ್ಟಕ್ಹೋಗು , ಹೊಸ ಕೆಲಸ ಆರಂಭಿಸ್ತಿದ್ದೀಯಾ ಬೆಟ್ಟಕ್ಹೋಗು, ಮದುವೆ ಸೆಟ್ ಆಯ್ತಾ ಬೆಟ್ಟಕ್ಹೋಗು , ನಾಮಕರಣ , ಬರ್ತ್ ಡೇಗೂ ಬೆಟ್ಟ. ಮೈತೂಕ ಕರಗಿಸಲಿಕ್ಕೂ ಬೆಟ್ಟ ಹತ್ಕೊಂಡು ಹೋಗು , ಮಳೆ ಬರ್ತಿದ್ಯಾ ಬಾ ಮಗಾ ಬೆಟ್ಟಕ್ಹೋಗುವಾ ಅಂತಾರೆ ನಮ್ಮೂರ ಹೈಕಳು. ಒಟ್ಟಿನಲ್ಲಿ ಖುಷಿಗೂ ಬೇಸರಕ್ಕೂ….ಎಲ್ಲಕ್ಕೂ ಬೆಟ್ಟ….

ತರುಣರು ವೃದ್ಧರು , ವಿದ್ಯಾವಂತರು ಅವಿದ್ಯಾವಂತರು , ಉದ್ಯೋಗಿಗಳು ನಿರುದ್ಯೋಗಿಗಳು , ಮೈಸೂರಿನವರು ಪ್ರವಾಸಿಗರು ಎಲ್ಲರೂ ಜಾತಿ ಮತ ಧರ್ಮದ ಹಂಗಿಲ್ಲದೆ ಅವರವರ ಭಕ್ತಿಗೆ ನಂಬಿಕೆಗೆ ಬೆಟ್ಟಕ್ಕೆ ಭೇಟಿಕೊಟ್ಟು ಹೋಗುವ ಅಸಂಖ್ಯಾತ ಜನರಾಶಿ ಪ್ರತಿಸಾರಿ ನೋಡುತ್ತಿರುತ್ತೇನೆ. ಕರೋನಾ ಸಮಯದಲ್ಲಿ ಮೈಸೂರಿನ‌ ಮುಸ್ಲಿಂ ಬಾಂಧವರೊಬ್ಬರು ” ಅಮ್ಮಾ ಇದ್ದಾಳಲ್ಲಾ ನಮ್ಮ ಮೈಸೂರನ್ನು ಕಾಯಲು ಹೆದರುವ ಅವಶ್ಯಕತೆಯೇ ಇಲ್ಲ” ಎಂದು ತಮ್ಮ ಅಂಗಡಿಯಲ್ಲಿ ಗೋಡೆಗೆ ನೇತುಹಾಕಿದ್ದ ಚಾಮುಂಡೇಶ್ವರಿ ಫೋಟೋ ಕಡೆ ಕೈತೋರಿಸಿ ನಮಿಸಿದ್ದು ಸಹಾ ನೆನಪಾಯಿತು.

ಮತ್ತೊಂದು ವಿಷಯ ನೆನಪಾಯ್ತು…ಒಮ್ಮೆ ನಾವು ದರ್ಶನದ ಕ್ಯೂ ನಲ್ಲಿ ನಿಂತಿದ್ವಿ. ನಮ್ಮ ಹಾಗೆಯೇ ನಿಂತಿದ್ದ ಅವರ ಬಗ್ಗೆ ಆನಂತರ ತಿಳಿಯಿತು. ನಮ್ಮ ಸಿದ್ಧರಾಮಯ್ಯನವರ ಪತ್ನಿ ಅಂತ. ಎಂಥಾ ಸರಳ ವ್ಯಕ್ತಿತ್ವ ಆಕೆಯದು! ಜನಸಾಮಾನ್ಯರ ಕ್ಯೂನಲ್ಲಿ ಬಹಳ ಹೊತ್ತು ಬಿಸಿಲಲ್ಲಿ ನಿಂತು ಒಳಹೋಗಿ ಪೂಜೆ ಸಲ್ಲಿಸಿ‌ಹೋಗುವ ಸಂದರ್ಭದಲ್ಲಿ ಜನರು ಪಿಸುಗುಟ್ಟತೊಡಗಿದರು ಅವರು ಸಿದ್ಧರಾಮಯ್ಯನವರ ಪತ್ನಿ ಅಂತ. ಎಲ್ಲಾ ಮಂತ್ರಿ ಮಹೋದಯರೂ ಅವರ ಕುಟುಂಬದವರೂ ಹೀಗಿರಲು ಸಾಧ್ಯವೇ?

ನಿಮಗೆ ಭಕ್ತಿಯಾ ನಂಬಿಕೆಯಾ ಎಂದರೆ….ಅದೆಲ್ಲದಕ್ಕಿಂತ ಅವಳೆಂದರೆ ಪ್ರೀತಿ ಮಮತೆ ಅಕ್ಕರೆ ಥೇಟ್ ಅಮ್ಮನಂತೆ ಎನ್ನುವೆ. ಜನಪದರೂ ಸಹಾ ತಮ್ಮ ತಮ್ಮ ಊರಿನ ದೇವರನ್ನು ತಮ್ಮ ಸ್ನೇಹಿತರಂತೆ ನೆರೆಹೊರೆಯವರಂತೆ ಭಾವಿಸುವುದನ್ನು ಜನಪದ ಕಾವ್ಯಗಳಲ್ಲಿ ಕಾಣಬಹುದು. ನಮ್ಮ ಈ ಚಾಮುಂಡಿ ಕುರಿತ ” ಚಾಮ ಚೆಲುವೆ ” ನಾಟಕ ಮಂಡ್ಯ ರಮೇಶ್ ನಿರ್ದೇಶನದಲ್ಲಿ ಯಶಸ್ವಿ ರಂಗಪ್ರದರ್ಶನವಾಗಿದೆ . ನಾಟಕ ಒಮ್ಮೆ ನೋಡಿದರೂ ಸಾಕು ಖಂಡಿತಾ ‌ಮನ ಸೋಲುವಿರಿ.


  • ಲಾವಣ್ಯ ಪ್ರಭಾ
ಸ್ಪರ್ಶ ಶಿಲೆ ಕವಯತ್ರಿ ಕೆ ಎಸ್ ಲಾವಣ್ಯ ಪ್ರಭಾ
5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW