‘ಈಗ ಯಾವ ಪತ್ರ ಬರೆಯಲು ವಿಷಯಗಳು ಉಳಿದಿಲ್ಲ…ಎಲ್ಲವೂ ನನ್ನೆದೆಯ ಮೇಲೆ, ತುಟಿಯ ಮೇಲೆ ಬರೆದದ್ದಾಗಿದೆ’….ಇವು ನಾಯಿ ಗುತ್ತಿ ಅವರ ಕವನದ ಸಾಲುಗಳಿವು ತಪ್ಪದೆ ಮುಂದೆ ಓದಿ…
ನಾವಿಬ್ಬರೂ ಶರಣಾಗಿದ್ದೇವೆ ಒಬ್ಬರಿಗೊಬ್ಬರು.
ಯಾವ ದ್ವೇಷವಿಲ್ಲ, ಮನಸ್ತಾಪಗಳಿಲ್ಲ ಹಾಗೂ ಮಾತುಗಳಿಲ್ಲ.
ಸದಾ ಪ್ರೀತಿಯನು,
ಬಯಸುವ ಒಪ್ಪಂದದ ಮೇರೆಗೆ ಬೇರೆಯಾಗಿದ್ದೇವೆ.
ಈಗ ಯಾವ ಪತ್ರ ಬರೆಯಲು
ವಿಷಯಗಳು ಉಳಿದಿಲ್ಲ
ಎಲ್ಲವನ್ನೂ ಅವಳು ನನ್ನೆದೆಯ ಮೇಲೆ
ನಾನು ಅವಳ ತುಟಿಯ ಮೇಲೆ
ಬರೆದದ್ದಾಗಿದೆ.
ಆದರೆ,
ಮತ್ತೇನಾದರೂ ಸಂದೇಶ ಹೊತ್ತು
ತರಬಹುದೆಂಬ ಸಂಶಯದಿಂದ
ಪಾರಿವಾಳದ ಕೊಕ್ಕೆಗೊಂದು ಬೀಗ ಜಡಿಯಬೇಕಿದೆ
ಇಬ್ಬರನ್ನು ಒಂದುಗೂಡಿಸದ
ಈ ಇಪ್ಪತ್ತೊಂದನೇ ಶತಮಾನದ ಅಭಿವೃದ್ಧಿ, ತಂತ್ರಜ್ಞಾನ,
ಅವಳಲ್ಲಿ ಸಾಸಿವೆಯಷ್ಟು ಪ್ರೀತಿಯನ್ನು ಹುಟ್ಟಿಸದ
ಸಾಹಿತ್ಯ, ಕತೆ, ಕವಿತೆ, ಕಾದಂಬರಿ,
ಯಾವ ಗುಂಗು ಗೊಡವೆ ಬೇಡವೇ ಬೇಡ
ಹೌದು ಈಗ ಪತ್ರ, ಮತ್ತೆ ಕವಿತೆಗಳು ಸಧ್ಯಕ್ಕೆ ಬೇಕಿಲ್ಲ
ಈಗೇನಿದ್ದರೂ
ಪ್ರೀತಿಗೊಂದು ಜೀವಂತ ಗೋರಿ ಕಟ್ಟಿ
ಸದಾ ಅರಳುವ ಪುಷ್ಪಗಳನ್ನು
ನೆಡಬೇಕಿದೆ
ಯಾವ ಬೇಲಿ, ಬೇಧಗಳ ಹಂಗಿಲ್ಲ
ದೇವರಿಗೂ, ಪ್ರೇಮಿಗಳಿಗೂ
ಅವಕಾಶವಿದೆ
ಮತ್ತೇನಾದರೂ ಹೇಳದೆ ಉಳಿದ ಮಾತುಗಳಿದ್ದರೆ
ಖಂಡಿತ ಮೌನದಲಿ ಸಂದಿಸೋಣ
ಯಾಕೆಂದರೆ
ಯಾರಿಗೂ ಕೇಳದಂತೆ ಮಾತನಾಡುವುದು
ಇನ್ನೂ ಬಾಕಿಯಿದೆ
- ನಾಯಿ ಗುತ್ತಿ