‘ಈಗೀಗಂತೂ ನನಗೆ ಈ ಸಿಕ್ಸಪ್ಯಾಕ್ ಸಿನಿಮಾ ಹೀರೋಗಳು ಯಾವ್ಯಾವುದೋ ಬ್ರಾಂಡಿನ ಬನಿಯನ್ನುಗಳ ಜಾಹಿರಾತಿಗೆ ಬಂದು ಬೊಗಳೆ ಬಿಡುವುದನ್ನು ನೋಡಿದಾಗೆಲ್ಲ ಮೈಯುರಿದು ಹೋಗುತ್ತೆ.. ಆಗೆಲ್ಲ ಈ ಬೊಗಳೆ ಬನಿಯನ್ನುಗಳನ್ನು ನಿವಾಳಿಸಿ ಎಸೆಯುವಂತಹ ನಮ್ಮ ದೇಸೀ ಬನಿಯನ್ನುಗಳನ್ನು ಅವರಿಗೆ ಕಳಿಸಿ ಇದರ ತಾಕತ್ತು ಏನು ಅನ್ನುವುದನ್ನು ಮನದಟ್ಟು ಮಾಡಿಸಬೇಕು ಎಂದನ್ನಿಸುತ್ತದೆ’… – ನಾಗೇಂದ್ರ ಸಾಗರ್ ತಪ್ಪದೆ ಮುಂದೆ ಓದಿ…
ಒಂದು ಕಾಲಕ್ಕೆ ನಾನೂ ಕೂಡ ಈ ಕಂಪನಿ ಬನಿಯನ್ನುಗಳನ್ನು ಧರಿಸುತ್ತಿದ್ದವನೇ. ಧರಿಸುವ ಮೊದ ಮೊದಲು ಶಿಸ್ತಾಗಿ ಇರುವ ಬನಿಯನ್ನುಗಳು ಬಲುಬೇಗ ತಮ್ಮ ಶೇಪನ್ನು ಕಳೆದುಕೊಳ್ಳುತ್ತಿದ್ದವು.. ಕೆಲವು ಕಂಪನಿಯವು ಶ್ರಿಂಕಾಗಿ ಅತ್ತ ಪ್ಯಾಂಟಿನೊಳಗೂ ಇಳಿಯದೇ ಇತ್ತ ಶಿಸ್ತಾಗಿಯೂ ಉಳಿಯದೇ ಮಾನ ಮರ್ಯಾದೆಯನ್ನು ಹರಾಜು ಹಾಕುತ್ತಿದ್ದವು..
ಅರೆ ತೋಳಿನ ಬನಿಯನ್ನಿನ ಕತೆ ಹೀಗಾದರೆ ಉದ್ದ ತೋಳಿನದು ಇನ್ನೊಂದು. ಅವುಗಳ ತೋಳು ಶೇಪು ಕಳೆದುಕೊಂಡು ಅರ್ಧ ತೋಳಿನ ಅಂಗಿಯ ಹರಗಿಣಕಿ ತನ್ನ ಲೀಲಾ ವಿನೋದಗಳನ್ನು ತೋರಿಸಿ ಮಾನ ಮುಕ್ಕಾಸು ಮಾಡುತ್ತಿದ್ದದ್ದು ಉಂಟು.. ಈ ಫುಲ್ ಕೈ ಬನಿಯನ್ನು ನನಗೆ ಕಂಫರ್ಟೆಬಲ್ ಅನ್ನಿಸದೆ ಅರೆ ತೋಳಿನದ್ದೇ ನನ್ನ ಪ್ರಥಮ ಆಯ್ಕೆ ಆಗಿತ್ತು. ಆದರೆ ಮನೆಯಲ್ಲಿ ಕೆಲಸ ಮಾಡುವಾಗ ಅದರ ಮೇಲೆ ಹಳೆ ಅಂಗಿಯೋ ಟೀ ಶರ್ಟೋ ಬೇಕಾಗುತ್ತಿತ್ತು..
ಕೆಲವು ಸ್ಟಾಂಡರ್ಡ ಕಂಪನಿಗಳ ಮಾಲು ಇವಕ್ಕೆಲ್ಲ ಅಪವಾದವಾಗಿ ಇರುತ್ತಿತ್ತು ಬಿಡಿ..
ಆದರೆ ಈಗ್ಗೆ ಹಲವು ವರ್ಷಗಳಿಂದ ನಾನು ಖಾದಿ ಬನಿಯನ್ನನ್ನು ಬಳಸಲಾರಂಭಿಸಿದ್ದೇನೆ.. ಇದು ನನಗೆ ಕಂಫರ್ಟೇಬಲ್ ಅನ್ನಿಸಿದೆ.. ಅಲ್ಲದೇ ನನಗೆ ಒಂದು ಘನತೆಯನ್ನೂ ಗೌರವವನ್ನೂ ತಂದು ಕೊಟ್ಟಿದೆ.
ಶುದ್ಧವಾದ ಅರಿವೆಯಿಂದ ಹೊಲೆದಿರುವ ಕಾರಣ ನನಗೆ ಮಳೆ ಚಳಿ ಬೇಸಿಗೆಗಳಲ್ಲಿ ಅಗದೀ ಅರಾಮು ಅನ್ನಿಸುತ್ತದೆ.. ಚಳಿ ಅನ್ನಿಸದು, ಬೇಸಿಗೆಯಲ್ಲಿ ಬಹಳ ಕೂಲು.. ಬೆವರನ್ನು ಹೀರಿ ಕೊಳ್ಳುವುದರಿಂದ ಕಿರಿಕಿರಿ ಇಲ್ಲವೇ ಇಲ್ಲ. ಬಟ್ಟೆ ತೊಳೆಯಲೂ ಈಜಿ.. ಕೊಳೆ ಹೋಗದು ಅಂತ ಅನುಮಾನವಿದ್ದರೆ ಎರಡು ಅಂಟುವಾಳ ಕಾಯಿ ಹಾಕಿ ನೆನಸಿಟ್ಟರೆ ಆಯಿತು.
ಈ ಬನಿಯನ್ನುಗಳ ದೊಡ್ಡ ಅಡ್ವಾಂಟೇಜ್ ಅಂದರೆ ಇದಕ್ಕೊಂದು ಕಿಸೆ ಇರುತ್ತದೆ. ಎಲೆ ಅಡಿಕೆ ಮೆಲ್ಲುವವರಿಗೆ ಕವಳದ ಸಂಚಿ ಇರಿಸಿ ಕೊಳ್ಳುವುದಕ್ಕೆ, ಬೀಡಿ ಸಿಗರೇಟು ಇರಿಸಿ ಕೊಳ್ಳಲು ಒಂದು ಜಾಗ.. ಅದಕ್ಕಿಂತ ಮೊಬೈಲ್ ಫೋನು ಇರಿಸಿ ಕೊಳ್ಳಲಂತೂ ಸೇಫೆಸ್ಟು ಜಾಗ.
ಈ ಬನಿಯನ್ನನ್ನು ಮೊದಲು ನಾನು ದೇಸೀ ಪ್ರಸನ್ನರ ಚರಕದಲ್ಲಿ ಖರೀದಿಸುತ್ತಿದ್ದೆ. ಜೇಬು ಹೊಟ್ಟೆಯ ಮೇಲೆ ಇಡುವುದಕ್ಕಿಂತ ಬಗಲಿನಲ್ಲಿ ಇಡಿ ಎನ್ನುವುದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಹಾಗಾಗಿ ಹೆಗ್ಗೋಡಿನಲ್ಲೇ ಇರುವ ಇದೇ ವೃತ್ತಿಯ ಶೈಲಿಯಲ್ಲೋ, ವಸ್ತ್ರ ವಿನ್ಯಾಸದಲ್ಲೋ ಖರೀದಿಸುತ್ತೇನೆ. ಖಾದೀ ಗ್ರಾಮೋದ್ಯೋಗದ ಮಳಿಗೆಗಳಲ್ಲೂ ಸಿಗಬಹುದು..
ಈ ದೇಸೀ ಬನಿಯನ್ನುಗಳನ್ನು ಹಾಕಲಾರಂಭಿಸಿದ ಮೇಲೆ ಈಗ ಮೇಲೊಂದು ಟೀ ಶರ್ಟೋ, ಹಾಫ್ ಅಂಗಿಯೋ ಬೇಡ.. ಮೈ ಮೇಲೆ ಒಂದು ಹೊರೆ ಅಂತನ್ನಿಸುವುದೂ ಇಲ್ಲ..
ಎಲ್ಲಕಿಂತ ಹೆಚ್ಚಿನದಾಗಿ ಬೊಗಳೇ ಕಂಪನಿಗಳ ದುಬಾರಿ ಸವಾಲುಗಳಿಗೆ ನಮ್ಮ ಈ ಗ್ರಾಮೀಣ ಅಥವಾ ದೇಸೀ ಉತ್ಪನ್ನಗಳ ಪರ್ಫೆಕ್ಟ ಜವಾಬು ಎಂದು ನನಗನ್ನಿಸುತ್ತದೆ.. ಹಾಗೆ ನೋಡಿದರೆ ನಾನು ಬನಿಯನ್ನು ಮಾತ್ರವಲ್ಲ ಮೇಲೆ ಧರಿಸುವ ಅಂಗಿಯೂ ಖಾದಿಯನ್ನೇ ಬಯಸುತ್ತೇನೆ..
ಒಮ್ಮೆ ಇದನ್ನು ಹಾಕಲಾರಂಭಿಸಿದರೆ ದೇಹಕ್ಕೂ ಮನಕ್ಕೂ ಇದೇ ಹಿತಕರ ಅನ್ನಿಸುತ್ತದೆ. ಆದರೆ ಡ್ರೆಸ್ ಕೋಡು, ಸ್ಟೇಟಸ್ಸು ಎಲ್ಲಕಿಂತ ಪ್ರಸ್ಟೀಜಿನ ಕಾರಣಕ್ಕೆ ಬಹುಪಾಲು ಜನ ಖಾದಿಯಿಂದ ದೂರವಿದ್ದಾರೆ.. ಅಂಥವರು ಇಂತಹ ಬನಿಯನ್ನು ಧರಿಸಲು ತೊಂದರೆ ಇಲ್ಲ. ಒಳಗೇನಿದು ಎಂದು ಯಾರೇನು ಹಣಕುವುದಿಲ್ಲ.. ನಮ್ಮ ದೇಹಾರೋಗ್ಯಕ್ಕೂ ಒಳ್ಳೆಯದು, ಖಾದಿಗೂ ಉತ್ತೇಜನ ನೀಡಿದ ಹಾಗಾಯಿತು.
ಇಂದಿನ ಈ ಕೊರೊನಾ ಗಲಾಟೆಯಲ್ಲಿ ಖಾದಿ ಹೊಲೆಯುವ ನೂರಾರು ಕೈಗಳು ಕೆಲಸವಿಲ್ಲದೇ ಕೂತಿವೆ.. ಈ ಹೊತ್ತಿನಲ್ಲಿ ನಾವು ತೆಗೆದು ಕೊಳ್ಳುವ ಸಣ್ಣದೊಂದು ಒಳ್ಳೆಯ ನಿರ್ಧಾರ ಇಂತಹವರಿಗೆ ನೆರವಾಗುತ್ತದೆ..
ಈ ಖಾದೀ ಬನಿಯನ್ನಿನ ಬಗ್ಗೆ ಇನ್ನೊಂದು ಮಾತು.. ಹಳತಾದ ಬನಿಯನ್ನು ಇನ್ನೂ ಅನೇಕ ಉಪಯೋಗಕ್ಕೆ ಬರುತ್ತದೆ.. ಹರಿದು ಛಪ್ಪನ್ನಾರು ಚೂರಾದ ಮೇಲೂ ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ..
ಏ ಆರಾಮ್ ಕಾ ಮಾಮಲಾ ಹೈ ಅನ್ನುವ ಒಬ್ಬರು, ಒಳಗಿಂದಲೂ ಹೊರಗಿಂದಲೂ ಕಂಫರ್ಟೆಬಲ್ ಅನ್ನುವ ಸಿನಿಮಾ ತಾರೆಯರ ಡೈಲಾಗುಗಳಿಗೆ ಮರಳಾಗದೇ ಹಲವು ಉತ್ತಮೋತ್ತಮ ಕಾರಣಗಳಿಗೆ ಖಾದಿ ಬನಿಯನ್ನನ್ನು ಧರಿಸುವುದು ಉತ್ತಮ.
- ನಾಗೇಂದ್ರ ಸಾಗರ್