ಚೆಂಜೆರಾಯ್ ಹೂವ್ Chenjerai Hove (1956-2015) : ಜಿ಼ಂಬಾಬ್ವೆಯ ಕವಿ, ಕಾದಂಬರಿಕಾರ, ಸಾಮಾಜಿಕ-ರಾಜಕೀಯ ವಿಶ್ಲೇಷಕ. ರಾಜಕೀಯ ತಲ್ಲಣಗಳಿಂದ ದೇಶಭ್ರಷ್ಟರಾಗಿ ಯುರೋಪ್‌ನಲ್ಲಿ ವಾಸ. ಆಳ್ವಿಕೆ-ಪ್ರಭುತ್ವಗಳು ಜನರ ಮೇಲೆ ನಡೆಸುವ ದೌರ್ಜನ್ಯ, ಕ್ರೌರ್ಯ-ಹಿಂಸೆ-ದಬ್ಬಾಳಿಕೆಗಳು, ಅಸಹನೀಯ ಅನ್ಯಾಯ ಅವರ ಒಟ್ಟಾರೆ ಸಾಹಿತ್ಯದ ವಸ್ತು. ಈ ನಿಲುವಿನಿಂದಾಗಿಯೇ ಚೆಂಜೆರಾಯ್ ದೇಶಾಂತರ ವಾಸಿಯಾಗಬೇಕಾಯಿತು.

ಫೋಟೋ ಕೃಪೆ : nytimes
ತಾಯ್ನಾಡಿಗೆ ಮರಳುವ ಕನಸಿನಲ್ಲಿಯೇ ಅವರು ಕೊನೆಯುಸಿರೆಳೆದಿದ್ದು ನಾರ್ವೆಯಲ್ಲಿ, ಜುಲೈ 12, 2015 ರಲ್ಲಿ.
ನಾವು
ಉಳಿದುಕೊಂಡವರು ನಾವಷ್ಟೇ ಅಲ್ಲ,
ಅತ್ತಿಹಣ್ಣಿನ ಮರ ನಮ್ಮನು ಕಾಯುತಿತ್ತು.
ಆಕಾಶ ನಮ್ಮನು ಬಾಚಿ ತಬ್ಬಲು
ನಿರಾಕರಿಸುವವರೆಗೆ
ಉಳಿದವರು ನಾವಷ್ಟೇ ಆಗಿರಲಿಲ್ಲ,
ಕನಸು, ಒಡನಾಡಿಯೇ ಕನಸು
ನಾವು ಇನ್ನೊಂದು ಹೂವು
ಅರಳಲಿ ಎಂದು ಕಾಯುವವರೆಗೆ.
*
ಸರ್ವಾಧಿಕಾರಿಗೆ
ನಿನ್ನ ಕಾಲದಲಿ
ನಮ್ಮ ಸ್ವಾತಂತ್ರ್ಯದ
ಹೂವುಗಳನು ಕಸಿದೆ.
ನಿನ್ನ ಕಾಲದಲಿ
ದುರ್ಬಲರು
ನಿನ್ನ ಬಲಹೀನತೆಯನು
ಹಾಡಿ ಹೊಗಳಿದರು.
ನಿನ್ನ ಕರಾಳ ಕಾಲದಲಿ
ಬುವಿ ಕಣ್ಣೀರು ಹನಿಸಿತು
ಪೂರ್ಣ ಗ್ರಹಣ ಹಿಡಿದಂತೆ
ಚಂದಿರನೂ ಕಪ್ಪಿಟ್ಟ.
*
ಬಿಡುಗಡೆಯ ಹಾಡು
ಬಂದಿದ್ದು
ನಮ್ಮ ನೆತ್ತರಲೇ ತೊಳೆದು
ಕೂಡಿಟ್ಟ ಚಿನ್ನಲೇಪಿತ ಸಿರಿ.
ಮಾದಕ ಉನ್ಮಾದದಲಿ,
ಬೆರಗಿನಲಿ ನೋವು
ಹಂಚಿಕೊಳ್ಳುವುದನು
ನಾವೆಲ್ಲ ಸುಮ್ಮನೆ ದಿಟ್ಟಿಸಿದೆವು.
ನಮ್ಮ ಕುತ್ತಿಗೆಗಿನ್ನೂ ಕುಣಿಕೆಯಿತ್ತು,
ಜಗ್ಗಾಡುತ್ತ
ಹಗ್ಗದ ಸೆರೆ ಬಿಗಿತವ
ಕತ್ತರಿಸಿ ಹಾಕಿದೆವು.
ಬಿಡುಗಡೆ ದೊರಕಿತು.
ಆದರೂ, ಕುತ್ತಿಗೆಯ ಸುತ್ತ ಕುಣಿಕೆ ಬಿಗಿದೇ ಇತ್ತು.
ಶಿಥಿಲ ಕೋಟೆ-ಕೊತ್ತಲಗಳಲಿ
ಹಿರಿಮೆಯ ವಾಸನೆಯುಂಟು
ನಾವದನು ಹೀರುತ್ತಿರುವೆವು.
ಉದ್ಧಾರದ ಹೆಸರಲಿ
ನೊಗವನು ಹೊತ್ತೊಯ್ಯುತ
ಎಳೆಯಿರಿ, ಜಗ್ಗಿರಿ ಮತ್ತೊಮ್ಮೆ
ಎಂದು ಗೋಗರೆಯುತಿರುವೆವು.
ನಾನು ಅರಿತಿರುವುದಿಷ್ಟೇ-
ನೆಲವಿನ್ನೂ ಇಲ್ಲೇ ಇದೆ
ಜನರ ಗಾಯಗೊಂಡ ಒಜ್ಜೆ ಪಾದಗಳು
ಬಂಜರು ಭೂಮಿಯಲಿ
ಹೆಜ್ಜೆ ಹಾಕಲಿವೆ,
ಸ್ವಾತಂತ್ರ್ಯವ ಪಡೆವವರೆಗೆ.
*
ತಾಯಿನಾಡಿಗೆ
ನಾನು ಒಬ್ಬಂಟಿ
ನೀನೂ ಏಕಾಂಗಿ.
ನದಿ, ಹಕ್ಕಿಗಳು
ನನಗಾಗಿ ಹಾಡುವವು.
ನಿನ್ನ ದನಿಯಲ್ಲೇ ಮಾತಾಡುವವು.
ನಾನು ಮೌನಿಯಾದರೆ
ನೀನೂ ಮೂಕನಾಗುವೆ.
ನಾನು ಮೂಕನಾದರೆ
ನಿನ್ನ ಗಾಯಗಳಿಗೆ
ಮೌನದ ಹೆಸರನು ಕೊಡುವರು.
ನಾನು ನಿನ್ನದೇ ಅಂಗ
ನೀನು ನನ್ನದೇ ಭಾಗ.
ನನ್ನ ನರನಾಡಿಯ ನೆತ್ತರು ನೀನೇ
ನನ್ನ ಧಮನಿಗಳಲಿ ಹರಿವ ರಕ್ತದ
ನಿನಾದವ ಕೇಳಿಸಿಕೋ
ಧುಮ್ಮಿಕ್ಕುತ ಹರಿವ ನೀರು
ಹೊತ್ತು ತರುವ
ಬೆಟ್ಟಗಳ ಮಾರುಧ್ವನಿಯನು ಆಲಿಸಿಕೋ.
ಕಾಲ ಬಂದಾಗ
ನನ್ನ ನೀಲಾಗಾಸದ ಎದೆಯ
ದನಿಗಳು ನಿನಗೆ ಕೇಳಿಯೇ ತೀರುವವು.
ನನ್ನ ಆತ್ಮದ ಕಪ್ಪು ಮೋಡಗಳಲ್ಲಿ
ನೀನು ಮರೆತ, ಎಂದೋ ಅಸು ನೀಗಿದ
ಹಕ್ಕಿಗಳ ಉಲಿಯನು,
ಬಂದೂಕಿನ ಗುಂಡುಗಳಿಂದ
ಊನಗೊಂಡ ಆನೆಗಳ ಚೀತ್ಕಾರವನು,
ಅನಾಥರ ಕಥೆಗಳನು ನೀನು ಆಲಿಸುವೆ.
*
ಮಕ್ಕಳ ಲೋಕ!
ಅವ್ವ ಕುಂತಿದ್ದಳು
ಹಸಿವೆಯನು ಹಿಡಿಯಾಗಿ
ತುಂಬಿಕೊಂಡು.
ಆದರೂ, ಜಿನುಗುತ್ತಿತ್ತು ಕಕ್ಕುಲಾತಿ
ಆಕೆಯ ಕಂಗಳಲಿ.
ಆಗ, ಅವ್ವನ ಕಿವಿಯಲಿ
ಕೊಳಕು ಪದಗಳ
ಗುನುಗಲು ನೊಣಗಳು ಮುತ್ತಿದವು.
ನಾವೆಲ್ಲ ಹಸಿವು-ಹೋರಾಟಗಳ
ಕಥೆಗಳನು ಎಡೆಬಿಡದೆ ಆಲಿಸಿದೆವು.
ಆದರೆ, ಅವ್ವ ಹಾಡುವ ಕಾಲದಲಿ
ಪದಗಳನು ಗುನುಗಲಿಲ್ಲ.
ಆಕೆ ನೊಣಗಳನು ತೋರಿಸಿ
ಅವುಗಳ ರೆಕ್ಕೆ ಬಡಿತದ ನಿನಾದಕೆ
ದನಿ ಸೇರಿಸುವಂತೆ ಕೇಳಿದಳು.
ನಾವು ರೆಕ್ಕೆಗಳ ತಾಳಕೆ
ನಮ್ಮ ದನಿಯನು ಕೂಡಿಸಿದೆವು.
ಅವ್ವ ಮತ್ತು ಬದುಕು
ಎರಡೂ ಮಣ್ಣುಗೂಡಿದವು.
ಎಂದೂ ಕಂಡಿರದ ಅಪ್ಪನೂ
ಅಲ್ಲಿ ಇರಲೇ ಇಲ್ಲ . . .(ಭಾಗಶಃ)
- ಕನ್ನಡಕ್ಕೆ ರೂಪಾಂತರ : ಕೇಶವ ಮಳಗಿ
