18 ನವೆಂಬರ್ 1962 ಬೆಳಗಿನ ಜಾವ…- ವಿಂಗ್ ಕಮಾಂಡರ್ ಸುದರ್ಶನ



1962 ಚೀನಾದ ಆ ಆಕ್ರಮಣದಲ್ಲಿ 124 ಭಾರತೀಯ ಸೈನಿಕರು ಸುಮಾರು ಸಾವಿರದಷ್ಟು ಚೀನಾದ ಸೈನಿಕರನ್ನು ಹೊಡೆದು ಸಾಯಿಸಿದರು ಎನ್ನುವ ರಾಮಚಂದ್ರ ಯಾದವ್ ಅವರ ಹೇಳಿಕೆಯನ್ನು ಸೈನ್ಯದವರೇ ನಂಬಲಿಲ್ಲ. ಇತಿಹಾಸದ ಪುಟಗಳಲ್ಲಿ ಹುದುಗಿರುವ ಸಾಹಸಗಾಥೆಯೊಂದನ್ನು ವಿಂಗ್ ಕಮಾಂಡರ್ ಸುದರ್ಶನ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ಮುಂದೆ ಓದಿ…

ಕೊನೆಯ ಸೈನಿಕನ ಕೊನೆಯ ಗುಂಡಿರುವವರೆಗೂ…

ಉತ್ತರಾಖಾಂಡದ ಹಿಮಾಲಯದ ತಪ್ಪಲಿನಲ್ಲಿ ರಾಣಿಖೇತ್ ಎನ್ನುವ ಪ್ರದೇಶದಲ್ಲಿ ಭೂಸೈನ್ಯದ ಕುಮಾವೋ ರೆಜಿಮೆಂಟಿನ ಮುಖ್ಯಾಲಯವಿದೆ. ವಿಷ್ಣುವಿನ ಕೂರ್ಮಾವತಾರ ಇಲ್ಲೇ ನಡೆದದ್ದು ಎನ್ನುವ ಪ್ರತೀತಿ ಇದೆ. ಹಾಗಾಗಿ ಐತಿಹಾಸಿಕವಾಗಿ ಈ ರಾಜ್ಯವನ್ನು ಕೂರ್ಮಾಂಚಲ ರಾಜ್ಯ ಎಂದು ಕರೆಯಲಾಗುತ್ತಿತ್ತು, ಕ್ರಮೇಣ ಇದು ಕುಮಾವೋ ಎಂದು ಮಾರ್ಪಾಡಾಯಿತು. ಶೂರತ್ವಕ್ಕೆ ಹೆಸರುವಾಸಿಯಾದ ಈ ಕುಮಾವಿಗಳು ದಾಳಿಕೋರ ಮುಸ್ಲೀಮರು ನುಸುಳದಂತೆ ಹೋರಾಡಿ ಪರಿಶುದ್ಧತೆಯನ್ನು ಉಳಿಸಿಕೊಂಡ ಕೆಲವೇ ರಾಜ್ಯಗಳಲ್ಲಿ ಇದು ಒಂದು. ಈ ಕುಮಾವಿಗಳನ್ನು ಹೆದರಿಸಲಾಗದ ಬ್ರಿಟಿಷರು ಇವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.

ಫೋಟೋ ಕೃಪೆ : Facebook

1917ರಲ್ಲಿ ಒಂದು ರೆಜಿಮೆಂಟಿನಿಂದ ಪ್ರಾರಂಭವಾದ ಈ ಕುಮಾವೋ ಈಗ ಹತ್ತೊಂಭತ್ತು ರೆಜಿಮೆಂಟುಗಳಾಗಿವೆ. ಎರಡು ಪರಮ ವೀರ ಚಕ್ರ ಪದವಿಗಳು ಸೇರಿದಂತೆ ಭಾರತೀಯ ಭೂಸೇನೆಯಲ್ಲೇ ಅತಿ ಹೆಚ್ಚು ಶೌರ್ಯ ಪ್ರಶಸ್ತಿಗಳಿಸಿದ ಹೆಗ್ಗಳಿಕೆ ಈ ಕುಮಾವೋ ರೆಜಿಮೆಂಟುಗಳದ್ದು. ಈ ರೆಜಿಮೆಂಟಿನಲ್ಲಿ ಕುಮಾವಿಗಳಲ್ಲದೆ ಆಸುಪಾಸು ರಾಜ್ಯಗಳ ಯಾದವರು ಮತ್ತು ಹರಿಯಾಣದ ಅಹೀರ್ ಎನ್ನುವ ಗೌಳಿಗ ಜನಾಂಗದವರೂ ಇದ್ದಾರೆ.

1962 ರ ಅಕ್ಟೋಬರಿನಲ್ಲಿ ಕಾಶ್ಮೀರದ ಬಾರಾಮುಲ್ಲದಲ್ಲಿದ್ದ 13 ನೇ ಕುಮಾವೋ ರೆಜಿಮೆಂಟಿಗೆ ಲಡಾಕಿನ ಚುಶೂಲ್ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಆದೇಶ ಕೊಡಲಾಗುತ್ತದೆ. ರಾಜಾಸ್ಥಾನದಿಂದ ಹೊಸದಾಗಿ ಬಂದ ಕಮಾಂಡಿಂಗ್ ಆಫೀಸರ್ ಮೇಜರ್ ಶೈತಾನ್ ಸಿಂಗ್ ಅವರು ಅಹೀರ್ ಜನಾಂಗದ ಈ ರೆಜಿಮೆಂಟಿನ ‘C’ ಕಂಪನಿಯ 124 ಸೈನಿಕರ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಶೈತಾನ್ ಸಿಂಗ್ ಎಂಬ ಈ ವಿಚಿತ್ರ ಹೆಸರಿನ ಈ ಅಧಿಕಾರಿ ಅಸಲಿಗೆ ಜೀವಕ್ಕೆ ಜೀವ ಕೊಡುವ ಧೀರ, ದೈವಾಂಶ ಸಂಭೂತ ಎಂಬುದು ಕೆಲವೇ ದಿನಗಳಲ್ಲಿ ಆ ಸೈನಿಕರಿಗೆ ಮನವರಿಕೆಯಾಗುತ್ತದೆ. ಸೈನ್ಯದಲ್ಲಿ ಅತಿ ವಿರಳವಾಗಿ ಸಿಗುವ “ಪರಮ ವೀರ ಚಕ್ರ” ವಿಜೇತ ಮೇಜರ್ ಶೈತಾನ್ ಸಿಂಗ್ ಮತ್ತು 13 ಕುಮಾವೋ ರೆಜಿಮೆಂಟಿನ Charlie ಕಂಪನಿಯ ವೀರ ಸೈನಿಕರ ಯೋಧಗಾಥೆ ಇದು.

ಫೋಟೋ ಕೃಪೆ : aljazeera

ಆಗಾಗಲೇ ಲಡಾಖ್ ಪ್ರಾಂತ್ಯದಲ್ಲಿ ಚೀನೀಯರ ಆಕ್ರಮಣದ ಕಾರ್ಮೋಡ ದಟ್ಟವಾಗಿ ಕವಿದಿದ್ದರೂ ಅದನ್ನು ಕಂಡೂ ಕಾಣದಂತೆ…ಹಿಂದೀ ಚೀನೀ ಭಾಯಿ ಭಾಯಿ..ಎಂದು ತಿಪ್ಪೆ ಸಾರಿಸುತ್ತಿದ್ದರು ಅಂದಿನ ಪ್ರಧಾನಿ ನೆಹರೂ ಮತ್ತು ರಕ್ಷಣಾ ಮಂತ್ರಿ ಕೃಷ್ಣಾ ಮೆನನ್. 13 ನೇ ಕುಮಾವೋ ರೆಜಿಮೆಂಟಿನ ‘ Charlie’ ಕಂಪನಿಗೆ 16000 ಅಡಿ ಎತ್ತರದ ರೆಜಾ಼ಂಗ್ ಲಾ ಎನ್ನುವ ಪರ್ವತ ಶಿಖರದ ರಕ್ಷಣೆಯನ್ನು ವಹಿಸಲಾಗಿತ್ತು. ಚೀನೀಯರಿಗೆ ಇದೊಂದು ಬಹಳ ಮಹತ್ವದ ಪ್ರವೇಶ ದ್ವಾರ, ಇದನ್ನು ದಾಟಿಕೊಂಡು ಬಂದರೆ ಲೇಹ್ ಮತ್ತು ಕಾರ್ಗಿಲ್ ವಶಪಡಿಸಿಕೊಳ್ಳುವುದು ಸುಲಭದ ಹಾದಿ. ಶೈತಾನ್ ಸಿಂಗ್ ತಮ್ಮ ಕಂಪನಿಯನ್ನು ಮೂರು ಶಿಖರಗಳ ಮೇಲೆ ಮೂರು ಪ್ಲಾಟೂನುಗಳನ್ನಾಗಿ ವಿಂಗಡಿಸಿ ಚೀನಾದ ದಿಕ್ಕಿನಲ್ಲಿ ಹದ್ದಿನ ಕಣ್ಣಿಟ್ಟಿದ್ದರು. ಈ ಕೊರೆಯುವ ಚಳಿಯಲ್ಲಿ ವಿರಳ ಆಮ್ಲಜನಕದ ಪರಿಸರಕ್ಕೆ ಅವರ ಶ್ವಾಸಕೋಶಗಳು ಹೊಂದಿಕೊಳ್ಳುವಷ್ಟರಲ್ಲೇ ಚೀನಾದ ದಾಳಿ ಪ್ರಾರಂಭವಾಗೇ ಬಿಟ್ಟಿತು.

ಈ ಸೈನಿಕರಲ್ಲಿ ಇದ್ದಿದ್ದು ಒಂದು ಹಳೆಯ ಒಂದೊಂದೇ ಗುಂಡು ಹಾರಿಸುವ 303 ಬಂದೂಕು ಮತ್ತು ತಲಾ ಒಬ್ಬಬ್ಬರಿಗೆ 600 ಗುಂಡುಗಳು. ಕೆಲವು ಲಘು ಮಷೀನ್ ಗನ್ನುಗಳು. ದುರದೃಷ್ಟಕರ ಏನೆಂದರೆ ಇವರಿಗೆ ಹಿಂದಿನಿಂದ ಆರ್ಟಿಲರಿ ಗನ್ನುಗಳ ಸಹಾಯ ಕೊಡಲು ನಡುವೆ ಇನ್ನೊಂದು ಪರ್ವತ ಶಿಖರ ಅಡ್ಡಲಾಗಿತ್ತು.

ಕಮಾಂಡಿಂಗ್ ಆಫೀಸರ್ ಮೇಜರ್ ಶೈತಾನ್ ಸಿಂಗ್

ಯುದ್ಧ ಸಾಮಗ್ರಿಗಳ ಕೊರತೆ, ಸೈನಿಕರ ದೈಹಿಕ ರಕ್ಷಣೆಯ ವ್ಯವಸ್ಥೆ ಇಲ್ಲದೆ ವ್ಯವಸ್ಥಿತವಾಗಿ ಹೊಂಚು ಹಾಕಿ ಕುಳಿತಿದ್ದ ಚೀನೀಯರನ್ನು ಎದಿರುಸುವುದು ಅಸಾಧ್ಯ ಎಂದು ಮನವರಿತ ರೆಜಿಮೆಂಟಿನ ಮುಖ್ಯಾಲಯ ಮೇಜರ್ ಶೈತಾನ್ ಸಿಂಗ್ ಅವರ ಕಂಪನಿಗೆ ಹಿಂದಕ್ಕೆ ಸರಿದು ಬಿಡಿ ಎನ್ನುವ ಆದೇಶ ನೀಡಿತು. ಇಂತಹ ಒಂದು ಆದೇಶದಿಂದ ಅವಾಕ್ಕಾದ ಸಿಂಗ್ ರವರು ತಮ್ಮ ಸೈನಿಕರೊಂದಿಗೆ ಸಮಾಲೋಚನೆ ನಡೆಸುತ್ತಾರೆ.

‘ನಾನಂತೂ ಹಿಂತಿರುಗುವುದಿಲ್ಲಾ, ನಿಮಗೆ ಸ್ವಲ್ಪ ಸಮಯ ಕೊಡುತ್ತೇನೆ ಯೋಚಿಸಿ, ಹೋಗುವವರು ಹೋಗಿ’ ಶೌರ್ಯ ಸಾಹಸಕ್ಕೆ ಹೆಸರಾದ ಈ ಸೈನಿಕರು ಯೋಚಿಸುವುದೇ ಇಲ್ಲ..ಕೊನೆಯ ಸೈನಿಕನ ಕೊನೆಯ ಗುಂಡು ಇರುವವರೆಗೂ ಹೋರಾಡುತ್ತೇವೆ ಎಂದು ತೀರ್ಮಾನಿಸುತ್ತದೆ ಕುಮಾವೋ ಕಂಪನಿ. ಇದನ್ನು ಮಿಲಿಟರಿ ವಾಗ್ವಹಾರದಲ್ಲಿ “Last Stand” ಎನ್ನುತ್ತಾರೆ. ಇನ್ನು ಬೇರೆ ಎಲ್ಲಿಂದಲೂ ಸಹಾಯ ಬರುತ್ತಿಲ್ಲ ಎಂದು ಗೊತ್ತಿದ್ದೂ, ಸಾವು ನಿಶ್ಚಿತ ಎನ್ನುವ ಖಚಿತಥೆ ಇದ್ದರೂ ಅಸಂಖ್ಯಾತ ವೈರಿಗಳನ್ನು ಎದುರಿಸಿ ಅವರನ್ನು ಮುನ್ನಡೆಯದಂತೆ ತಡೆಹಿಡಿಯುವ ಇಂತಹ ನಿರ್ಧಾರ ತೆಗೆದುಕೊಳ್ಳಲು ಗಂಡೆದೆ ಇರಬೇಕು. ಅಂತಹ ಒಂದು ನಿರ್ಧಾರವನ್ನು 13 ನೇ ಕುಮಾವ್ ರೆಜಿಮೆಂಟಿನ Charlie ಕಂಪನಿ ಒಕ್ಕೊರಲಿನಿಂದ ತೆಗೆದುಕೊಂಡು ಬಿಟ್ಟಿತು.



18 ನವೆಂಬರ್ 1962 ಬೆಳಗಿನ ಜಾವ ಮೂರುವರೆ ಸಮಯದ ಮಂದ ಬೆಳಕಿಲ್ಲಿ ಪೂರ್ವದ ಕಡೆಯಿಂದ ಚೀನಾದ ಸೈನಿಕರು ಪರ್ವತ ಹತ್ತುತ್ತಿರುವುದು ಕಾಣುತ್ತಲೇ ರೇಡಿಯೋ ಮುಖಾಂತರ ಎಲ್ಲರಿಗೂ ಎಚ್ಚರಿಕೆಯಿಂದ ಇರಲು ಶೈತಾನ್ ಸಿಂಗ್ ಆದೇಶ ನೀಡಿದರು… ‘ಅವಸರ ಪಡಬೇಡಿ, ಬಂದೂಕಿನ ಒಳವ್ಯಾಪ್ತಿಗೆ ಸಿಗುವ ತನಕ ಗುಂಡು ಚಲಾಯಿಸಬೇಡಿ, ಶಬ್ದ ಮಾಡಬೇಡಿ, ನಾನು “ಫೈರ್”ಎಂದು ಆದೇಶ ಕೊಡುವವರೆಗೆ ಕಾಯಿರಿ’ ಚೀನೀಯರು ಇನ್ನೇನು ಹತ್ತಿರ ಬಂದ ಕೂಡಲೇ ‘ಫೈರ್’ ಎಂದು ಗರ್ಜಿಸಿದರು. ಪರ್ವತದ ಪ್ರಶಾಂತತೆಯನ್ನು ಸೀಳಿಕೊಂಡು.. ಡಡ್ಡ್..ಡಡ್ಡ್ ಡಡ್ಡ್ ಶಬ್ದ ಗುಂಜಾಯಿಸಿತು. ಚೀನೀ ಸೈನಿಕರ ಹೆಣಗಳು ಹಿಮದಲ್ಲಿ ಹುದುಗಿ ಹೋದವು. ಬದುಕಿ ಮುನ್ನುಗ್ಗಿದವರನ್ನು ಬಂದೂಕಿನ ಬಯೋನೆಟ್ಟಿನಿಂದ ಎದೆಗೆ ಚುಚ್ಚಿ ಸಾಯಿಸಿದರು, ಉಳಿದವರು ಓಡಿ ಹೋದರು. ಗಾಯಗೊಂಡ ಭಾರತೀಯ ಸೈನಿಕರ ಮನೋಸ್ಥೈರ್ಯ ತುಂಬಿ ಮೇಜರ್ ಶೈತಾನ್ ಸಿಂಗ್ ಇನ್ನೊಂದು ಶಿಖರದ ಪ್ಲಾಟೂನಿನ ಕಡೆ ದೌಡಾಯಿಸಿದರು. ಅವರಿಗೆ ಗೊತ್ತಿತ್ತು ಚೀನೀಯರು ಇನ್ನೊಂದು ದಿಕ್ಕಿನಿಂದ ಬರುತ್ತಾರೆ ಎಂದು, ಅವರ ಊಹೆ ನಿಜವಾಯಿತು. ಈ ಸಲ ಸಾವಿರಾರು ಚೀನೀಯರು ರೇಜಾ಼ಂಗ್ ಲಾ ಪರ್ವತ ಶಿಖರವನ್ನು ಏರತೊಡಗಿದರು. ಪುನಃ ಅದೇ ರಣತಂತ್ರ ದಿಂದ ಚೀನಾದ ಸೈನಿಕರನ್ನು ಮುಗಿಸಲಾಯಿತು. ಹತ್ತಿರ ಬಂದವರನ್ನು ಕೈಯಿಂದಲೇ ಕೊಂದು ಸಾಯಿಸಿದರು. ಅಷ್ಟೊತ್ತಿಗೆ ಸೂರ್ಯೋದಯವಾಯಿತು. ಮೇಜರ್ ಸಿಂಗ್ ರವರು ಇನ್ನೆಷ್ಟು ಗುಂಡುಗಳು ಉಳಿದಿವೆ, ಎಷ್ಟು ಸೈನಿಕರು ಜೀವಂತವಾಗಿದ್ದಾರೆ ಎನ್ನುವ ಲೆಕ್ಕಾಚಾರ ಮಾಡಿಕೊಂಡು ಇನ್ನೊಂದು ದಾಳಿಯನ್ನು ಹೆದರಿಸಬಹುದು ಅಷ್ಟೇ ಎನ್ನುವ ನಿರ್ಧಾರಕ್ಕೆ ಬಂದರು.

ಸಮಯ ಆಗಲೇ ಎಂಟು ಗಂಟೆಯಾಗಿತ್ತು ಪೂರ್ವಕ್ಕೇ ಕಣ್ಣಿಟ್ಟು ಕಾಯುತ್ತಿದ್ದ ಸೈನಿಕರಿಗೆ ಹಿಂದಿನಿಂದ ಬಂದ ಸೈನಿಕರು ತಮ್ಮ ರೆಜಿಮೆಂಟಿನ ಇನ್ನೊಂದು ಕಂಪನಿ ಸಹಾಯಕ್ಕೆ ಬರುತ್ತಿದೆಯೇನೋ ಎಂದು ಭಾವಿಸಿದ್ದರು. ಆದರೆ ದೂರ್ಬೀನಿನ ಒಳ ವ್ಯಾಪ್ತಿಗೆ ಬಂದಾಗ ಕಾಣಿಸಿದ್ದು ಚೀನಾದ ಸೈನಿಕರು. ಕೂಡಲೇ ಫೈರಿಂಗಿಗೆ ಆದೇಶ ನೀಡಿದರು ಮೇಜರ್ ಸಿಂಗ್. ಚೀನೀಯರು ಎಸೆದ ಒಂದು ಗ್ರೆನೇಡ್ ಅವರ ಹೊಟ್ಟೆಯನ್ನು ಬಗಿದು ಹಾಕಿತು. ಅವರ ರೇಡಿಯೋ ಮ್ಯಾನ್ ರಾಮಚಂದ್ರ ಯಾದವ್ ಅವರನ್ನು ಎತ್ತಿಕೊಂಡು ಬಂಕರಿನ ಒಳಗೆ ಹೋದ. ವಿಪರೀತ ರಕ್ತಸ್ರಾವದಿಂದ ಆಗಾಗ ಮೂರ್ಛೆ ಹೋಗುತ್ತಿದ್ದ ಮೇಜರ್ ಒಮ್ಮೆ ಸಾವರಿಸಿಕೊಂಡು ರಾಮಚಂದ್ರ ಯಾದವರಿಗೆ….


ಫೋಟೋ ಕೃಪೆ : scoopwhoop

“ನೀನು ಇಲ್ಲಿಂದ ಹೊರಟು ಕೆಳಗಿನ ರೆಜಿಮೆಂಟಿನ ಮುಖ್ಯಾಲಯಕ್ಕೆ ಹೋಗಿ ನಡೆದದ್ದನ್ನೆಲ್ಲಾ ಹೇಳಿಬಿಡು, ಹೇಳು ನಮ್ಮ ಕಂಪನಿ ಸಾವಿರಾರು ಚೀನೀಯರನ್ನು ಕೊಂದು ಹಾಕಿದೆ…ಎಂದು”
ಸ್ವಾಮಿ ಭಕ್ತ ಯಾದವ್ ಇದಕ್ಕೆ ಒಪ್ಪಲೇ ಇಲ್ಲ.

ಅಷ್ಟೊತ್ತಿಗೆ ಭಾರತೀಯ ಸೈನಿಕರ ಗುಂಡುಗಳೆಲ್ಲಾ ಖಾಲಿಯಾಗಿದ್ದವು. ಸಿಕ್ಕ ಸಿಕ್ಕ ಚೀನೀಯರ ತಲೆಗಳನ್ನು ಡಿಕ್ಕಿ ಹೊಡೆಸಿ ಸಾಯಿಸುತ್ತಲೇ ಪ್ರಾಣ ಬಿಟ್ಟರು. ಇನ್ನೇನು ನಮ್ಮ ಕಮಾಂಡರನ್ನು ಹುಡುಕಿಕೊಂಡು ಬರುತ್ತಾರೆ ಎಂದು ಮನವರಿತ ಯಾದವ್ ಬಂದೂಕಿನ ಬೆಲ್ಟಿನಿಂದ ಮೇಜರ್ ಸಿಂಗರವರನ್ನು ತನ್ನ ದೇಹಕ್ಕೆ ಕಟ್ಟಿಕೊಂಡು ಶಿಖರದಿಂದ ಕೆಳಕ್ಕೆ ಉರುಳಲು ಪ್ರಾರಂಭಿಸಿದ.
ಸುಮಾರು ನಾನೂರು ಅಡಿ ಕೆಳಗೆ ಹೋದ ಮೇಲೆ ಮೇಜರ್ ಸಾಹೀಬರನ್ನು ಬಂಡೆಗಳ ಮರೆಯಲ್ಲಿ ಮಲಗಿಸಿ ಸಹಾಯ ಕೋರಲು ರೆಜಿಮೆಂಟಿನ ಮುಖ್ಯಾಲಯದ ಕಡೆಗೆ ದೌಡಾಯಿಸಿದ. ವಿಷಯ ತಿಳಿದ ಅಧಿಕಾರಿಗಳು ಕೂಡಲೇ ವೈದ್ಯಕೀಯ ಸಹಾಯದೊಂದಿಗೆ ಸ್ಥಳಕ್ಕೆ ದೌಡಾಯಿಸಿದರು.

ನಾಡಿಬಡಿತದ ಸಹಾಯದಿಂದ ನಡೆಯುತ್ತಿದ್ದ ಮೇಜರ್ ಶೈತಾನ್ ಸಿಂಗರ ಕೈಗಡಿಯಾರ 8.15 ಕ್ಕೆ ನಿಂತು ಬಿಟ್ಟಿತ್ತು.

ಫೋಟೋ ಕೃಪೆ : scoopwhoop

ಕೇವಲ 124 ಭಾರತೀಯ ಸೈನಿಕರು ಸುಮಾರು ಸಾವಿರದಷ್ಟು ಚೀನಾದ ಸೈನಿಕರನ್ನು ಹೊಡೆದು ಸಾಯಿಸಿದರು ಎನ್ನುವ ರಾಮಚಂದ್ರ ಯಾದವ್ ಅವರ ಹೇಳಿಕೆಯನ್ನು ಸೈನ್ಯದವರೇ ನಂಬಲಿಲ್ಲ. ಅಲ್ಲಿ ಬದುಕಿದ ಕೆಲವರನ್ನು ಚೀನೀಯರು ಯುದ್ಧ ಕೈದಿಗಳನ್ನಾಗಿ ಸೆರೆಹಿಡಿದು ಕೊಂಡೊಯ್ದರು. ಅದರಲ್ಲಿ ನಿಹಾಲ್ ಸಿಂಗ್ ಎನ್ನುವ ಸೈನಿಕ ಚೀನೀಯರ ಕಣ್ತಪ್ಪಿಸಿ ಓಡಿಬಂದ. ಸಾವಿರಾರಕ್ಕೂ ಹೆಚ್ಚು ಚೀನಾದ ಸೈನಿಕರ ದೇಹಗಳನ್ನು ಹಲವಾರು ಟ್ರಕ್ಕುಗಳಲ್ಲಿ ತಾನೇ ಕಣ್ಣಾರೆ ಕಂಡಿದ್ದೇನೆ ಎಂದ ಮೇಲೆ ಅಧಿಕಾರಿಗಳು ಈ ವೃತ್ತಾಂತದ ಗಾಢತೆಯನ್ನು ಅರ್ಥ ಮಾಡಿಕೊಂಡು ಹೌಹಾರಿಹೋದರು.

ಫೆಬ್ರವರಿ 1963 ಕುರಿಗಾಹಿಯೊಬ್ಬ ಲಡಾಕಿನ ಚುಶೂಲ್ ಪ್ರಾಂತದ ಬಳಿ ಪರ್ವತದ ಮೇಲೆ ಹತ್ತಿದ್ದ ಮೇಕೆಗಳನ್ನು ತರುಬಲು ಹೋದಾಗ ಭಯಾನಕ ದೃಷ್ಯವೊಂದು ಕಂಡು ಹೆದರಿ ಓಡಿಬಂದು ಹತ್ತಿರದ ಸೈನ್ಯದ ಕಛೇರಿಗೆ ತಾನು ಕಂಡ ವಿಷಯವನ್ನು ತಿಳಿಸಿದ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಸ್ತು ಸಂಗ್ರಹಾಲಯದಲ್ಲಿಟ್ಟಿದ್ದ ಮೂರ್ತಿಗಳಂತೆ ಕಾಣುತ್ತಿದ್ದ ಸೈನಿಕರ ಪಾರ್ಥಿವ ಶರೀರಗಳನ್ನು
ಸ್ವಲ್ಪ ಹೊತ್ತು ಎವೆಯಿಕ್ಕದೆ ನೋಡಿದರು. ರಕ್ಷಣಾ ಕವಚಗಳಿಲ್ಲದೆ ಕೊರೆಯುವ ಛಳಿಯಲ್ಲಿ ಹೋರಾಡುತ್ತಲೇ ಪ್ರಾಣ ಬಿಟ್ಟಿದ್ದಾರೆ. ಛಳಿಗೆ ಅವರ ಮೃತದೇಹಗಳು ಹಾಗೇ ಸೆಟೆದುಕೊಂಡು ಬಿಟ್ಟಿದ್ದಾವೆ. ಬಂದೂಕಿನ ಮೇಲೆ ಇಟ್ಟಿದ್ದ ಕೈ ಹಾಗೇ ಇದೆ. ಗಾಯಾಳುಗಳಿಗೆ ಬ್ಯಾಂಡೇಜ್ ಕಟ್ಟುತ್ತಲೇ ಪ್ರಾಣಬಿಟ್ಟ ವೈದ್ಯಕೀಯ ಸಹಾಯಕ..ಗುಂಡುಗಳಿಲ್ಲದ ಬಂದೂಕಿನ ಬಯೋನಟ್ಟನ್ನು ಹಿಡಿದುಕೊಂಡು ಮುನ್ನುಗ್ಗುತ್ತಲೇ ಸತ್ತಿರುವ ಸೈನಿಕ.

ಫೋಟೋ ಕೃಪೆ : bharat rakshak

ಎಲ್ಲಾ ಗುಂಡುಗಳು ಎದೆಯ ಮೇಲೆ ಹೊಕ್ಕಿದ್ದವೇ ಹೊರತು ಬೆನ್ನಿನ ಮೇಲೆ ಬಿದ್ದಿಲ್ಲಾ…

1962 ಚೀನಾದ ಆ ಆಕ್ರಮಣದ ವಿಷಯ ಬಂದಾಗ ಅವಮಾನ, ಹತಾಶೆಗಳ ಬಗ್ಗೆಯೇ ಆಲೋಚಿಸಿ ಕುಗ್ಗಿ ಹೋಗುತ್ತೇವೆ, ಆದರೆ ಇತಿಹಾಸದ ಪುಟಗಳಲ್ಲಿ ಹುದುಗಿರುವ ಇಂಥಹದೊಂದು ಸಾಹಸಗಾಥೆಯನ್ನು ಮರೆಯಬಾರದು.


  • ವಿಂಗ್ ಕಮಾಂಡರ್ ಸುದರ್ಶನ (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW