ಶಿಕಾಗೋ ನಗರದ ವಿಸ್ಮಯ!

ಶಿಕಾಗೋದಲ್ಲಿ ನೋಡಲು ಬಹಳ ಸ್ಥಳಗಳಿದ್ದು, ಅಲ್ಲಿ ಒಂದು ಕಡೆ, ಅಲ್ಲಿನ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ ಇಬ್ಬರು ಕುದುರೆಯ ಮೇಲೆ ಕುಳಿತಂತಹ ಬೃಹತ್ ಪ್ರತಿಮೆಗಳಿವೆ. ಇವೆಲ್ಲಾ ಪ್ರದೇಶ ಕೇವಲ ೪೦೦ ವರ್ಷಗಳ ಹಿಂದೆ ಅವರಿಗೆ ಸೇರಿತ್ತು. ಯುರೋಪಿನಿಂದ ಬಂದ ಜನರು, ಅವರನ್ನು ಬೇರೆಡೆ ಸ್ಥಳಾಂತರಗೊಳಿಸಿದರು. ಅವರು, ಶಿಕಾಗೋದಲ್ಲಿ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡಿಲ್ಲ, ಅವರ ಪ್ರತಿಮೆಗಳು ಮಾತ್ರ ಅಲ್ಲಿವೆ. ಖ್ಯಾತ ಕಾದಂಬರಿಕಾರರಾದ ಶಶಿಧರ ಹಾಲಾಡಿ ಅವರು ಕಂಡ ಶಿಕಾಗೋ ನಗರದ ವಿಸ್ಮಯದ ಕುರಿತು ತಪ್ಪದೆ ಮುಂದೆ ಓದಿ…

ಶಿಕಾಗೋದಲ್ಲಿ, ಅಲ್ಲಿನ ವಿಶಾಲ ಸರೋವರದ ತುಸು ಹತ್ತಿರದಲ್ಲೇ ಒಂದು ಕಾರಂಜಿ ಇದೆ. ಅದನ್ನು ಕಂಡ ಕೂಡಲೇ ನನಗನ್ನಿಸಿದ್ದು, ಇಂತಹದೊಂದು ಕಾರಂಜಿಯು ಬೆಂಗಳೂರಿನಲ್ಲಿ ಏಕೆ ಇರಬಾರದು? ಎಂದು. ವಿವಿಧ ಎತ್ತರದ ಕಾರಂಜಿಗಳ ಒಂದು ವಿಶಾಲ ವೃತ್ತ. ಅದರ ಸುತ್ತಲೂ, ನೆಲಕ್ಕೆ ಇಂಟರ್‌ಲಾಕ್ ಟೈಲ್ಸ್ ಹಾಸಿದ್ದ ವಿಶಾಲವಾದ ಜಾಗ. ಸಾವಿರಾರು ಜನರು ಬಂದರೂ, ಅಲ್ಲಿ ಸುತ್ತಲೂ ನಿಂತು, ಕಾರಂಜಿಯ ಸೊಬಗನ್ನು ನೋಡಬಹುದು! ಆ ಸುತ್ತಲೂ ವಿಶಾಲವಾದ ಉದ್ಯಾನವನವೂ ಇದೆ; ಅಲ್ಲಲ್ಲಿ ಕುಳಿತುಕೊಳ್ಳಲು ಬೆಂಚುಗಳು, ಕಟ್ಟಗಳಿವೆ. ಎಷ್ಟು ಹೊತ್ತು ಕುಳಿತರೂ ಬೇಸರವಾಗಂತಹ ನೋಟ ಒದಗಿಸುವ ಆ ಕಾರಂಜಿಯು, ಅದೆಷ್ಟು ಮನ ಸೆಳೆಯಿತೆಂದರೆ, ಬೆಂಗಳೂರಿನಲ್ಲೂ ನಮ್ಮ ಪ್ರವಾಸೋದ್ಯಮ ಇಲಾಖೆಯವರೋ, ಕರ್ನಾಟಕ ಸರಕಾರವೋ, ಅಂತಹದ್ದೊಂದು ಕಾರಂಜಿಯನ್ನು ಏಕೆ ನಿರ್ಮಿಸಬಾರದು ಎಂದು.

ನಮ್ಮ ಶಿಕಾಗೋ ಪ್ರವಾಸ ತುಸು ವಿಶಿಷ್ಟ ಎನ್ನಬಹುದು; ಕಾರನ್ನು ಒಂದೆಡೆ ಪಾರ್ಕ್ ಮಾಡಿ, ಅದಕ್ಕೆ ತಕ್ಕ ಶುಲ್ಕ ತೆತ್ತು, ಶಿಕಾಗೋ ನಗರವನ್ನು ನೋಡಲು ಹೊರಟೆವು. ಅಲ್ಲೆಲ್ಲಾ ಉದ್ದಕ್ಕೂ ಹರಡಿದ್ದ ಗಗನಚುಂಬಿ ಕಟ್ಟಡಗಳನ್ನು ನೋಡುತ್ತಾ, ಈ ಕಾರಂಜಿಯ ಬಳಿ ಬಂದೆವು; ದೇಶ ವಿದೇಶದಿಂದ ಬಂದಿದ್ದ ಹಲವು ಪ್ರವಾಸಿಗರು ಅಲ್ಲಿ ನೆರೆದಿದ್ದರು; ನಾವೂ ಅದರ ಎದುರು ಕುಳಿತೆವು, ಸೆಲ್ಫಿ ತೆಗೆದೆವು. ಅಲ್ಲಿನ ವಾತಾವರಣ ಚೆನ್ನಾಗಿತ್ತು. ಬೆಂಗಳೂರಿನಲ್ಲಿ ಇಂತಹದೊಂದು ಸುಂದರ ಕಾರಂಜಿ ಕಾರಂಜಿ ಆಗಿದ್ದರೆ, ಕರ್ನಾಟಕದ ವಿವಿಧ ಭಾಗಗಳಿಂದ ಬಂದ, ಬೇರೆ ರಾಜ್ಯಗಳಿಂದ ಬಂದ ಪ್ರವಾಸಿಗರು ಅದರ ಮುಂದೆ ಕುಳಿತು ಸೆಲ್ಫಿ ತೆಗೆದುಕೊಳ್ಳಬಹುದಿತ್ತು; ಜತೆಗೆ, ಅದರಿಂದ ಪ್ರವಾಸೋದ್ಯಮಕ್ಕೂ ಉಪಯೋಗವುಂಟು. ಆದರೆ, ಇಂತಹ ಯೋಚನೆ ನನ್ನ ತಲೆಯಲ್ಲಿ ಬಂದರೇನು ಪ್ರಯೋಜನ, ನಮ್ಮ ರಾಜ್ಯದ ಪ್ರವಾಸೋದ್ಯಮ ಸಚಿವರಿಗೋ, ಇಲಾಖೆಗೋ ಆ ಯೋಚನೆ ಬರಬೇಕಲ್ಲವೆ!

ಶಿಕಾಗೋದಲ್ಲಿ ನೋಡಲು ಬಹಳ ಸ್ಥಳಗಳಿವೆ. ಮಿಶಿಗನ್ ಮಹಾಸರೋವರಕ್ಕೆ ಅಂಟಿಕೊಂಡಂತೆ ಇರುವ ಒಂದು ಎತ್ತರವಾದ ಕಟ್ಟಡದ ತುದಿಗೆ ಹೋದೆವು; ಅದಕ್ಕೂ ಶುಲ್ಕ; ಅಲ್ಲಿ ನೂರಾರು ಪ್ರವಾಸಿಗರು! ಏಕೆಂದರೆ, ಅಲ್ಲಿಂದ ಕಾಣುವ ನೋಟ ಸುಂದರ. ಒಂದೆಡೆ, ನಗರ, ಇನ್ನೊಂದೆಡೆ ಸರೋವರದ ವಿಶಾಲ ಹರಹು. ಈ ಸರೋವರ ಅದೆಷ್ಟು ದೊಡ್ಡದೆಂದರೆ, ಬೃಹತ್ ಗಾತ್ರದ ಹಡಗುಗಳೂ ಅಲ್ಲಿ ಸಂಚರಿಸಬಲ್ಲವು. ಶಿಕಾಗೋ ನಗರದಲ್ಲಿ ಒಂದು ಕಡೆ, ಅಲ್ಲಿನ ಮೂಲನಿವಾಸಿಗಳಾದ ರೆಡ್ ಇಂಡಿಯನ್ ಇಬ್ಬರು ಕುದುರೆಯ ಮೇಲೆ ಕುಳಿತಂತಹ ಬೃಹತ್ ಪ್ರತಿಮೆಗಳಿವೆ. ಇವೆಲ್ಲಾ ಪ್ರದೇಶ ಕೇವಲ ೪೦೦ ವರ್ಷಗಳ ಹಿಂದೆ ಅವರಿಗೆ ಸೇರಿತ್ತು. ಯುರೋಪಿನಿಂದ ಬಂದ ಜನರು, ಅವರನ್ನು ಬೇರೆಡೆ ಸ್ಥಳಾಂತರಗೊಳಿಸಿದರು. ಈಗ ಅವರು, ಶಿಕಾಗೋದಲ್ಲಿ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡಿಲ್ಲ, ಅವರ ಪ್ರತಿಮೆಗಳು ಮಾತ್ರ ಅಲ್ಲಿವೆ.

ಶಿಕಾಗೋ ನದಿ

ಶಿಕಾಗೋ ನಗರದ ಮಧ್ಯೆ ಶಿಕಾಗೋ ನದಿ ಹರಿಯುತ್ತದೆ. ಆ ನದಿಯನ್ನು ವಾಹನಗಳು ದಾಟಲು ೩೭ ಸೇತುವೆಗಳನ್ನು ನಿರ್ಮಿಸಲಾಗಿದೆ! ನಮ್ಮ ದೇಶದಲ್ಲಿ ನಗರವೊಂದರ ಮಧ್ಯೆ ನದಿ ಹರಿದರೆ, ಆ ನಗರವು ಎರಡು ಭಾಗವಾಗಿ, ನದಿಯಿಂದಾಚೆ ಇರುವ ಭಾಗಗಳೆಲ್ಲಾ ಹಿಂದುಳಿದ ಪ್ರದೇಶಗಳಾಗುತ್ತವೆ. ಆದರೆ, ಶಿಕಾಗೋ ನಗರವು ಶಿಕಾಗೋ ನದಿಯನ್ನು ತನ್ನ ಅಭಿವೃದ್ಧಿಗೆ ಉಪಯೋಗಿಸಿಕೊಂಡಿದೆ. ಅಲ್ಲಿನ ಹಲವು ಸೇತುವೆಗಳು ನಗರದ ಜೀವನಾಡಿ; ೧೮೩೪ರಲ್ಲೇ ಅಂತಹ ಮೊದಲ ಸೇತುವೆ ನಿರ್ಮಾಣವಾಗಿತ್ತು; ಅಲ್ಲಿ ಒಟ್ಟು ೫೨ ಸೇತುವೆಗಳಿದ್ದವು; ಈಗ ೩೭ ಮಾತ್ರ ಇವೆ. ಆ ಸೇತುವೆಯ ವಿಶೇಷವೆಂದರೆ, ನದಿಯಲ್ಲಿ ಹಡಗು ಬಂದಾಗ, ಆ ಸೇತುವೆಯನ್ನು ಎರಡು ಭಾಗವಾಗಿಸಿ, ಹಡಗಿಗೆ ದಾರಿ ಮಾಡಿಕೊಡಬಹುದು! ಐತಿಹಾಸಿಕ ಸ್ವರೂಪ ಹೊಂದಿರುವ ಅಂತಹ ಕೆಲವು ಸೇತುವೆಗಳು ಈಗಲೂ ಕಾರ್ಯನಿರ್ವಹಿಸಬಲ್ಲವು! ಶಿಕಾಗೋ ನಗರವು ಸಮುದ್ರದಿಂದ ಬಹುದೂರವಿದ್ದರೂ, ಇಲ್ಲಿಂದ ಹಡಗುಗಳು ಸಮುದ್ರಕ್ಕೆ ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು; ಇದರಿಂದ ವ್ಯಾಪಾರ ಅಭಿವೃದ್ಧಿಯಾಯಿತು. ಮಾತ್ರವಲ್ಲ, ಎರಡನೆಯ ಮಹಾಯುದ್ಧದ ಸಮಯದಲ್ಲಿ ಇಲ್ಲಿ ತಯಾರಾದ ಜಲಾಂತರ್ಗಾಮಿಗಳನ್ನು ಇದೇ ನದಿಯ ಮೂಲಕ ಸಾಗಿಸಿ, ದೂರದ ಸಮುದ್ರಕ್ಕೆ ಕಳುಹಿಸಲಾಗಿತ್ತು.

ಇಂಗ್ಲೆಂಡ್ ಮಹಿಳೆಯೇ ನಮಗೆ ಗೈಡ್!

ಶಿಕಾಗೋ ನದಿಯಲ್ಲಿ ಪ್ರತಿ ದಿನ ಕ್ರೂಸ್ ಪ್ರವಾಸ ನಡೆಯುತ್ತದೆ; ಅಲ್ಲಿನ ಕ್ರೂಸ್ ಪ್ರವಾಸದ ಅನುಭವ ಪ್ರಸಿದ್ಧ, ವಿಶಿಷ್ಟ. ಇದರಲ್ಲಿ ಪಾಲ್ಗೊಂಡ ಅನುಭವ ನಮ್ಮದಾಯಿತು. ಅದರ ಶುಲ್ಕ ತುಸು ದುಬಾರಿ ಎನ್ನಬಹುದು; ಆದರೆ, ಇಡೀ ನಗರದ ಇತಿಹಾಸ, ನದಿಯುದ್ದಕ್ಕೂ ಮೇಲೆದ್ದಿರುವ ಕಟ್ಟಡಗಳ ವಾಸ್ತು ಇತಿಹಾಸ ಎಲ್ಲವೂ ಆ ಕ್ರೂಸ್ ಪ್ರವಾಸದ ಸಮಯದಲ್ಲಿ ತಿಳಿಯಿತು. ಸಂಜೆಯ ಇಳಿಬಿಸಿಲಿನಲ್ಲಿ ನಡೆದ ನಮ್ಮ ಆ ಪ್ರವಾಸವು ಉತ್ತಮ ಅನುಭವ ಎನಿಸಿತು. ನಮ್ಮ ಕ್ರೂಸ್‌ನಲ್ಲಿ ಗೈಡ್ ರೂಪದಲ್ಲಿ ಇಂಗ್ಲೆಡ್‌ನ ೭೦ ವರ್ಷದ ಮಹಿಳೆಯೊಬ್ಬರು ಇದ್ದರು! ವಯಸ್ಸಾದರೂ, ಅವರಿಗೆ ದಣಿವಾದಂತೆ ಅನಿಸಲಿಲ್ಲ. ನಿವೃತ್ತಿ ವಯಸ್ಸು ಮೀರಿದರೂ, ಕೆಲಸವನ್ನು ಮುಂದುವರಿಸುವ ಸಂಸ್ಕೃತಿ ಅಮೆರಿಕದಲ್ಲಿದೆ. ಆ ಇಂಗ್ಲೆಂಡ್ ಮಹಿಳೆಯು ತಮಗೆ ಗೊತ್ತಿದ್ದ ಮಾಹಿತಿಯೆಲ್ಲವನ್ನೂ ನಮ್ಮೊಡನೆ ಹಂಚಿಕೊ೦ಡರು. ಇಲ್ಲಿನ ಕಟ್ಟಡ ವಾಸ್ತುವಿನ ಕುರಿತಾಗಿ ತನಗಿರುವ ಅತೀವ ಆಸಕ್ತಿಯಿಂದಾಗಿ, ಇಂಗ್ಲೆ೦ಡಿನಿಂದ ಇಲ್ಲಿಗೆ ಬಂದು, ಶಿಕಾಗೋ ನಗರದ ಇತಿಹಾಸ ಮತ್ತು ವಾಸ್ತು ಶೈಲಿಯ ಇತಿಹಾಸವನ್ನು ಅಧ್ಯಯನ ಮಾಡಿ, ಈ ಕ್ರೂಸ್‌ನಲ್ಲಿ ತಾನು ಗೈಡ್ ಕೆಲಸ ಮಾಡುತ್ತಿರುವುದಾಗಿ ಆ ವೃದ್ಧ ಮಹಿಳೆ ಹೇಳಿದರು.
ಅಲ್ಲಿನ ಸಾವಿರಾರು ಬಹುಮಹಡಿ ಕಟ್ಟಡಗಳ ನಡುವೆ, ಟ್ರಂಪ್ ಟವರ್ ಸಹ ಇದೆ! ಟ್ರಂಪ್ ಒಡೆತನದ ಆ ಬಹುಮಹಡಿ ಕಟ್ಟದ ಅಗಲಕ್ಕೂ, ದೊಡ್ಡ ಅಕ್ಷರಗಳಲ್ಲಿ ಟ್ರಂಪ್ ಟವರ್ ಎಂದು ಬರೆಸಿದ್ದು, ಅಲ್ಲಿ ಓಡಾಡುವ ಎಲ್ಲರ ಕಣ್ಣಿಗೆ ಬೀಳುವಂತೆ ಮಾಡಿದ್ದಾರೆ! ಶಿಕಾಗೋದ ಬಹುಮಹಡಿ ಕಟ್ಟಡಗಳ ನೋಟ ಅನುಪಮ; ನದಿಯುದ್ದಕ್ಕೂ ನೂರಾರು ಕಟ್ಟಡಗಳು ತಲೆ ಎತ್ತಿ ನಿಂತಿವೆ, ಒಂದೊಂದು ಕಟ್ಟಡದ ಸ್ವರೂಪವೂ ಒಂದೊದು ತೆರ; ಅವುಗಳ ಇತಿಹಾಸವನ್ನು ನಮ್ಮ ಗೈಡ್ ವಿವರವಾಗಿ ತಿಳಿಹೇಳುತ್ತಿದ್ದರು. ಆ ಕಟ್ಟಡಗಳ ಸಾಲಿನಲ್ಲಿ, ನೂರು ವರ್ಷಕ್ಕೂ ಹಳೆಯ ಹಲವು ಬಹುಮಹಡಿ ಕಟ್ಟಡಗಳೂ ಅಲ್ಲಿ ಇನ್ನೂ ತಲೆ ಎತ್ತಿ ನಿಂತಿವೆ!

ಅವುಗಳನ್ನೆಲ್ಲಾ ನೋಡುವಾಗ, ಇಂತಹದ್ದು ನಮ್ಮ ದೇಶದಲ್ಲೇಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆ ಮೂಡಬಹುದು. ಇಂತಹ ಪ್ರಶ್ನೆಗೆ ನನಗೆ ಹೊಳೆದ ಉತ್ತರ : ೧೯೪೭ರ ತನಕ ನಮ್ಮ ದೇಶ ಬೇರೆಯವರ ವಸಾಹತು ಆಗಿತ್ತು. ೧೯೪೭ರ ಹೊತ್ತಿಗೆ ಶಿಕಾಗೋ ಮೊದಲಾದ ನಗರಗಳಲ್ಲಿ ಸಾವಿರಾರು ಬಹುಮಹಡಿ ಕಟ್ಟಡಗಳಿದ್ದವು! ಅಷ್ಟೇ ವ್ಯತ್ಯಾಸ.


  • ಶಶಿಧರ ಹಾಲಾಡಿ – ಖ್ಯಾತ ಕಾದಂಬರಿಕಾರರು, ಕತೆಗಾರರು, ಪತ್ರಕರ್ತರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW