ಕನ್ನಡ ಸಾಹಿತ್ಯ ಕೃತಿ ಪರಿಚಯ ಸಂಭ್ರಮ – ಎನ್.ವಿ.ರಘುರಾಂ

ವ್ಯಂಗ್ಯ ಚಿತ್ರವನ್ನೇ ಕಲಾಭಿವ್ಯಕ್ತಿ ಮಾಡಿಕೊಂಡ ಕೆ.ಆರ್.ಸ್ವಾಮಿಯವರ ಅವರ ಸ್ವರಚಿತ ‘ಚಿಗುರು ಚಿತ್ತಾರ’ ಪುಸ್ತಕದ ಕುರಿತು ಎನ್.ವಿ.ರಘುರಾಂ ಅವರು ಬರೆದ ಪರಿಚಯ ತಪ್ಪದೆ ಓದಿ…

ಪುಸ್ತಕ – ಚಿಗುರು ಚಿತ್ತಾರ
ನೆನಪಿನ ಕಥನ – ವ್ಯಂಗ್ಯ ಕಂಗಳಿಂದ.
ಲೇಖಕರು – ಕೆ.ಆರ್.ಸ್ವಾಮಿ. ಅಂಕಿತ ಪುಸ್ತಕ.
ಪ್ರಥಮ ಮುದ್ರಣ – 2022.

ದಿನಪತ್ರಿಕೆಗಳನ್ನು ಓದುವವರು ಸಾಮಾನ್ಯವಾಗಿ ಮೊದಲ ಪುಟದಲ್ಲಿ ಹುಡುಕಿ ನೋಡುವುದೇ ಪತ್ರಿಕೆಯ ಒಂದು ಮೂಲೆಯಲ್ಲಿ ದಿನಾ ಕಾಣುವ ವ್ಯಂಗ್ಯ ಚಿತ್ರವೊಂದನ್ನು. ಕೆಲವೇ ಗೆರೆಗಳಿಂದ ಮೂಡಿದ ಈ ಚಿತ್ರಕ್ಕೆ ಕೆಲವೊಮ್ಮೆ ತಲೆ ಬರಹವೂ ಇರುವುದಿಲ್ಲ. ಆದರೂ ಆ ಚಿತ್ರ ಹೇಳುವ ಸಮಾಚಾರ ತಲೆಗೆ ನೇರವಾಗಿ ಇಳಿದು ಕಿರುನಗೆಯನ್ನೋ, ವಿಷಾದವನ್ನೋ ತರಿಸುತ್ತದೆ. ಇದುವರೆಗೆ ಬಹುಶಃ ನಲವತ್ತು ಸಾವಿರ ಅಥವ ಅದಕ್ಕಿಂತ ಹೆಚ್ಚು (ಒಂದು ಅಂದಾಜು) ವ್ಯಂಗ್ಯ ಚಿತ್ರ ಬರೆದು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಶ್ರೀಯುತ ಕೆ.ಆರ್. ಸ್ವಾಮಿಯವರು ಪ್ರಥಮ ಬಾರಿಗೆ ಪುಸ್ತಕವೊಂದನ್ನು ಬರೆದಿದ್ದಾರೆ ಎಂದಾಗ ಕುತೂಹಲ ಜಾಸ್ತಿ ಆಗುತ್ತದೆ. ಹಾಗಾಗಿ ಆ ಪುಸ್ತಕವನ್ನು ಓದಲು ತೆಗೆದುಕೊಂಡೆ.

ಕೆ.ಆರ್. ಸ್ವಾಮಿಯವರು ತೀರ್ಥಹಳ್ಳಿಯ ಕಮಕೋಡು ನರಸಿಂಹ ಶಾಸ್ತ್ರಿಯವರ ಮಗ. ವೃತ್ತಿಯಲ್ಲಿ ವಿದ್ಯುತ್ ಇಂಜನೀಯರ್, ನಾಡಿನಲ್ಲಿ ಪ್ರಸಿದ್ಧ ವ್ಯಂಗ್ಯ ಚಿತ್ರಕಾರರು. ಬಹುಶಃ ಆರು ದಶಕಗಳಿಗಿಂತ ಹೆಚ್ಚು ಕಾಲದಿಂದ ವ್ಯಂಗ್ಯ ಚಿತ್ರಗಳನ್ನು ಬರೆಯುತ್ತಿದ್ದು, ಕ್ರೀಯಾ ಶೀಲರಾಗಿದ್ದವರು ಗೃಹಬಂಧನ ಕಾಲದಲ್ಲಿ ಮನೆಯಲ್ಲೇ ಉಳಿಯ ಬೇಕಾಗಿ ಬಂದಂತ ಸಂದರ್ಭದಲ್ಲಿ ಬಂದ ನೆನಪುಗಳನ್ನು ಅಕ್ಷರ ರೂಪಕ್ಕೆ ಇಳಿಸಿದಾಗ ಮೂಡಿದ ಬರಹವಿದು ಎಂದು ಲೇಖಕರು ಹೇಳಿದ್ದಾರೆ.

ಇದೊಂದು ಬಿಡಿ, ಬಿಡಿಯಾಗಿ ನೆನಪಿನ ಅಂಗಳದಿಂದ ಬರೆದ ಘಟನೆಗಳ ಗುಚ್ಛವೇ ಸರಿ. ಇದು ಅವರ ಆತ್ಮ ಕಥನ ಕೂಡ. ಬೇರೆ ಅತ್ಮ ಕಥೆಗಳಿಗಿಂತ ಇದು ವಿಭಿನ್ನ. ಇದಕ್ಕೆ ಮುಖ್ಯ ಕಾರಣವೆಂದರೆ ಇವರು ಆ ಘಟನೆಗಳನ್ನು ವ್ಯಂಗ್ಯ ಕಣ್ಣುಗಳಿಂದ ನೋಡಿದ್ದಾರೆ. ಏನಿದು ವ್ಯಂಗ್ಯ ಕಣ್ಣುಗಳೆಂದರೆ? “ಯಾವುದೇ ವಿಷಯವೇ ಇರಲಿ ವಕ್ರಕಣ್ಣಿನಿಂದ ನೋಡುವುದು ನನ್ನ ಅಭ್ಯಾಸ……ಹಾಗಾಗಿ ನೋವಿನ ಹಿಂದೆ ನಗು, ನಗುವಿನ ಹಿಂದೆ ನೋವು ತಾನಾಗಿಯೇ ಇಣುಕಿ ಬಿಡುತ್ತದೆ” ಎಂದು ‘ಸ್ವ…ನುಡಿ’ ಯಲ್ಲಿ ಲೇಖಕರು ಹೇಳಿದ್ದಾರೆ. “ಒಬ್ಬ ವ್ಯಕ್ತಿಯನ್ನು ಅವರ ಉದ್ದನೆಯ ಮೂಗಿನ ಮೂಲಕವೊ, ಮೀಸೆಯ ಮೂಲಕವೋ ಅಭಿವ್ಯಕ್ತಿಸುವ ಮಿಣುಕು ನೋಟವು ವ್ಯಂಗ್ಯ ಚಿತ್ರದ ಜೀವಾಳ. ಎಲ್ಲಾ ಘಟನೆಗಳಲ್ಲಿ ಅವರ ಮಿಣುಕುನೋಟ ಕಂಡುಬರುತ್ತದೆ. ಹಾಗಾಗಿ ಇದೊಂದು ‘ಮಿಣುಕುನೋಟಗಳ ಸ್ಮರಣೆಯಾತ್ರೆ’ ಎಂದು ಮುನ್ನಡಿ ಬರೆದಿರುವ ಅಕ್ಷರ. ಕೆ.ವಿ., ನೀನಾಸಂ ಹೇಳಿದ್ದಾರೆ.

ನೆನಪಿನಂಗಳವೆಂಬ ಮೊದಲ ಭಾಗದಲ್ಲಿ ಅವರ ಬಾಲ್ಯದ ಅನಾವರಣವಾಗಿದೆ. ಆ ಬಾಲ್ಯದ ಘಟನೆಗಳ ಜೊತೆ ಜೊತೆಗೆ ಮಲೆನಾಡಿನ ಚಿತ್ರಣ, ಆಚರಣೆಗಳು ತೆರೆದುಕೊಳ್ಳುತ್ತದೆ. ವಿಜಯದಶಮಿಯ ರಾತ್ರಿ ಹುಲಿವೇಷದವರು ಕುರಿ ಕಚ್ಚಿ ಎಸೆಯುವ ಪ್ರಸಂಗದಿಂದ ಪ್ರಾರಂಭವಾಗುವ ನೆನಪಿನಂಗಳ, ಕೃಷ್ಣಪ್ಪಯ್ಯ ಹೋಟೆಲ್ ನವರ ಬೆಣ್ಣೆ ಮಸಾಲೆ ದೋಸೆ, ಮಳೆಗಾಲದಲ್ಲಿ ಎತ್ತಿನಗಾಡಿಯ ಪ್ರಯಾಣ, ವ್ಯಾಘ್ರ ಶಿಕಾರಿಯ ಘಟನೆಗಳ ಮೂಲಕ ಐವತ್ತರ ದಶಕದ ಮಲೆನಾಡಿನ ಚಿತ್ರಣ ಕೂಡ ಕಟ್ಟಿಕೊಡುತ್ತದೆ. ಸಾಗರದಲ್ಲಿ ರಾತ್ರಿ ನಾಟಕವೊಂದನ್ನು ನೋಡಿದ ನಂತರ ಆ ರಾತ್ರಿ ಅಲ್ಲೇ ಉಳಿಯುವ ಪ್ರಸಂಗವೊಂದು ಬರುತ್ತದೆ. ಮೊದಲು ಒಂದು ಪೌರಾಣಿಕ ನಾಟಕದಲ್ಲಿ ನೋಡಿ ಸಂತೋಷಪಟ್ಟಿದ್ದ ರಾಜನ ಪಲ್ಲಂಗದ ಮೇಲೆ ಇವರಿಗೆ ಶಯನಿಸಿ ಎಂದು ಹೇಳಿ, ಸೈಡ್ ವಿಂಗ್ ನಲ್ಲಿದ್ದ ಪಲ್ಲಂಗವನ್ನು ಸ್ಟೇಜ್ ಮೇಲೆ ಎಳೆಸಿ ಹಾಕಿಸುತ್ತಾರೆ. ” ರಾಜನ ಮಂಚ…..ಅದರ ಮೇಲೆ ಎಷ್ಟೋ ತಿಂಗಳಿಂದ ತೊಳೆಯದ ಹಾಸಿಗೆ, ಬೆಡ್ ಶೀಟ್…. ಅದರ ಮೇಲೆ ನಾವು…… ಪ್ರೇಕ್ಷಕರಿಲ್ಲದ ಆ ರಂಗಸ್ಥಳದಲ್ಲಿ ……ನಾವಿಬ್ಬರೇ ಮೂಕ ಪಾತ್ರಧಾರಿಗಳು” ಈ ರೀತಿಯ ಒಳನೋಟಗಳು ಎಲ್ಲಾ ಘಟನೆಗಳಿಗೆ ಹೊಸ ನೋಟಗಳನ್ನು ತೋರಿಸುತ್ತದೆ.

ಇವರ ತಂದೆಯವರು ಪೇಟೆ ಬೀದಿಯಲ್ಲಿ ಹೋಗುವಾಗ ಹೋಟೆಲ್ನ ಮಾಲೀಕರು, ಬಟ್ಟೆ ಅಂಗಡಿ ಮಳಿಗೆಯವರು, ಸೈಕಲ್ ಮೇಲೆ ಬರುವವರು, ತರಕಾರಿ ಅಂಗಡಿಯವರು, ಕಾಫೀಪುಡಿ ಅಂಗಡಿಯವರು ಎಲ್ಲರೂ ಪಕ್ಕಕ್ಕೆ ಸರಿದು ನಿಂತು ಅವರಿಗೆ ನಮಸ್ಕಾರ ಮಾಡುತ್ತಿದ್ದರು. ನಿವೃತ್ತಿ ಆದ ಮೇಲೂ ಒಬ್ಬ ಕನ್ನಡ ಪಾಠ ಹೇಳಿಕೊಟ್ಟ ಮೇಷ್ಟ್ರಿಗೆ ಇಷ್ಟೊಂದು ಆತ್ಮೀಯತೆಯ ಗೌರವ ಸಿಗುತ್ತಿತ್ತು ಆ ಕಾಲದಲ್ಲಿ ಎಂದು ಒದಿದಾಗ ನಮಗೂ ಬಹುಶಃ ಬಹಳ ಸಂತೋಷವಾಗುತ್ತದೆ. ಅವರ ತಂದೆ ಸ್ವತಃ ಸಾಹಿತಿ, ಅಪ್ಪಟ ಗಾಂಧೀವಾದಿ, ನಿಷ್ಠುರ ಸತ್ಯವಾದಿ ಕೂಡ. ಆ ಕಾಲದಲ್ಲೇ ದಲಿತೋದ್ಧಾರವನ್ನು, ಅಂತರ್ಜಾತೀಯ ವಿವಾಹವನ್ನು ಪ್ರೋತ್ಸಾಹಿಸುತ್ತಿದ್ದರು. ಆದರೆ ಲೇಖಕರು ಎಸ್.ಎಸ್.ಎಲ್.ಸಿ. ಪ್ರಥಮ ದರ್ಜೆಯಲ್ಲಿ ಪಾಸಾದರೂ ಆರ್ಥಿಕ ತೊಂದರೆಯಿಂದ ಮನೆಯಲ್ಲಿ ಎರಡು ವರ್ಷ ಕೂರಬೇಕಾಯಿತು. ಆಗ ತೀರ್ಥಹಳ್ಳಿಯಲ್ಲಿ ಪಿ.ಯು.ಸಿ.ಯಾಗಲೀ, ಕಾಲೇಜಾಗಲೀ ಇರಲಿಲ್ಲ. ಆಗಲೇ ಅವರು ವ್ಯಂಗ್ಯ ಚಿತ್ರಗಳ ಕಲಿಕೆಗೆ ಅಂಚೆಯ ಕೋರ್ಸ್ ಸೇರಿ ಅದರಲ್ಲಿ ‘ಡಿಪ್ಲೊಮೊ’ ಪಡೆದರು. ನಂತರ ಕಲೆಯಲ್ಲಿ ಪದವಿ ಪಡೆಯಲು JJ School of Arts ನಿಂದ ಅರ್ಜಿ ಫಾರಂ ತರಿಸಿ, ಎಸ್.ಎಸ್.ಎಲ್.ಸಿ. ಅಂಕಪಟ್ಟಿಗೆ ಗೆಜೆಟೆಡ್ ಅಧಿಕಾರಿ ಸಹಿ ಮಾಡಿಸಲು ತೀರ್ಥಹಳ್ಳಿ ಆಸ್ಪತ್ರೆಯ ವೈದ್ಯಾಧಿಕಾರಿಯವರನ್ನು ಭೇಟಿಯಾದಾಗ, ಅವರು ಅಂಕಗಳನ್ನು ನೋಡಿ ಇಂಜನಿಯರಿಂಗ್ ಕಾಲೇಜು ಸೇರಲು ಹೇಳುತ್ತಾರೆ. ಆಗ ಮನೆಯಲ್ಲಿ ದಂಬಾಲು ಬಿದ್ದು, ಒಪ್ಪಿಸಿ ಓದಲು ಹೊರಡುತ್ತಾರೆ. ಆ ಸಮಯದಲ್ಲಿ “ಕಲೆಯನ್ನು ಮನಸ್ಸಂತೋಷಕ್ಕೆ ಇಟ್ಟುಕೋ, ಊಟಕ್ಕೆ ಬೇರೆ ಉದ್ಯೋಗ ನೋಡಿಕೋ” ಎಂದು ಇವರ ತಂದೆಯವರು ಹೇಳುತ್ತಾರೆ. ಇದು ಕಲೆಯು ಇನ್ನೂ ವಾಣಿಜ್ಯೀಕರಣ ಆಗದ ಕಾಲಘಟ್ಟವನ್ನು ತೋರಿಸುತ್ತದೆ.

ನೆನಪಿನಂಗಳದ ಮೊದಲರ್ಧದ ಭಾಗ ಬಾಲ್ಯದ ವಿಚಾರಗಳ ತೆರೆದಿಟ್ಟರೆ ನಂತರ ಘಟನೆಗಳು ಅವರ ಹೆಚ್ಚಿನ ವಿದ್ಯಾಭ್ಯಾಸ, ವೃತ್ತಿ ಜೀವನದ ಪ್ರಾರಂಭ, ಮದುವೆ, ವ್ಯಂಗ್ಯ ಚಿತ್ರಕಾರರ ಸಂಘ ಪ್ರಾರಂಭಿಸಿದ ವಿಷಯಗಳು, ವೃತ್ತಿ ಜೀವನದ ಮರೆಯದ ಘಟನೆಗಳು, ಕೋವಿಡ್ ಕಾಲದಲ್ಲಿ ಆಸ್ಪತ್ರೆಯ ವಾಸದ ಘಟನೆಗಳು ಬಂದಿವೆ. ಈ ಘಟನೆಗಳು ಪ್ರಸಕ್ತ ಪರಿಸ್ಥಿತಿಯನ್ನು ವಿವರಿಸುತ್ತಲೇ ಹಿಂತಿರುಗಿ ನೋಡಿದಾಗ ಮೂಡಿದ ಚಿತ್ರಣದ ರೀತಿ ತೆರೆದುಕೊಂಡಿವೆ. ಬೆಂಗಳೂರಿನ ಇಂದಿನ ಸ್ಥಿತಿ ವಿವರಿಸುತ್ತಾ ಪಿ.ಯು.ಸಿ. ಸೇರಲು ಬಂದಾಗ ಇದ್ದ ನಗರದ ಸ್ಥಿತಿ ವಿವರಿಸುತ್ತದೆ. “ನಾನು ಅಲ್ಲಿಯವರೆಗೆ ಉಸಿರಾಡುತ್ತಿದ್ದ ಗಾಳಿಯಲ್ಲಿ ಕನ್ನಡದ ಆಮ್ಲಜನಕವಿತ್ತೇ ವಿನಹಾ ಇಂಗ್ಲೀಷಿನ oxygen ಇರಲಿಲ್ಲ” ಎನ್ನುವ ಮಾತುಗಳು ಪಿ.ಯು.ಸಿ.ಯಲ್ಲಿ ಏಕ್ ದಂ ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿದಾಗ ಆದ ಉಸಿರಗಟ್ಟಿದ ವಾತಾವರಣದ ಬಗ್ಗೆ ಅವರದೇ ಆದ ರೀತಿಯಲ್ಲಿ ತಿಳಿಸುತ್ತದೆ. ಬದಲಾಗುತ್ತಿರುವ ನಗರವೇ ಆಗಿರಲಿ ಅಥವ ಬದಲಾಗದಿರುವ ರೈತರ ಪರಿಸ್ಥಿತಿಯೇ ಆಗಿರಲಿ ಘಟನೆಗಳ ಹಂದರದಲ್ಲಿ ತೆರೆದುಕೊಂಡಿವೆ. ಮದುವೆ ಮಾಡಿಸುವ ಭಟ್ಟರಿಗೆ “ನೀವು ಮಾಡಿಸಿದ ಮದುವೆಗಳು ಎಷ್ಟು ಗ್ಯಾರಂಟಿ period ದಾಟಿವೆ…?” ಎಂದು ಕೇಳುತ್ತಾ ‘ಇವತ್ತು ರಾತ್ರಿ ರಿಸೆಪ್ಷನ್, ನಾಳೆ ಬೆಳಿಗ್ಗೆ ತಾಳಿ ಕಟ್ಟಿ ಮದುವೆ ಅಂತ ಇಟ್ಕೋತಾರೆ…… ಮದುವೆ ಆಗೇ ಆಗುತ್ತದೆ ಅನ್ನೋದಕ್ಕೆ ಗ್ಯಾರಂಟಿ ಏನು?..” ಎಂದು ಹೇಳುತ್ತಾ “ಪಾಪ ಹಿಂದಿನ ದಿನವೇ ಉಡುಗೊರೆ ಕೊಟ್ಟು ಹೋದವರಿಗೆ ಮರುದಿನ ಬಂದು ವಾಪಾಸ್ ಕೇಳುವುದಕ್ಕೂ ಆಗುವುದಿಲ್ಲ” ಎಂದು ಮಿಣುಕು ನೋಟ ಬೀರುತ್ತಾ ಮಲೆನಾಡಿನ ಮಳೆಗಾಲದಲ್ಲಿ ತಮ್ಮ ಮದುವೆ ಸರಳವಾಗಿ ನಡೆದಿರುವುದನ್ನು ಘಟನೆಗಳ ಮೂಲಕ ತೆರೆದಿಟ್ಟಿರುವುದನ್ನು ಪುಸ್ತಕ ಓದಿಯೇ ಆನಂದಿಸಬೇಕು. ಸ್ವಲ್ಪ ಕುಳ್ಳಗಿನ ಹೆಸರಾಂತ ವ್ಯಂಗ್ಯ ಚಿತ್ರಕಾರರಾದ ಎಸ್.ಕೆ.ನಾಡಿಗ್ ಜೊತೆಗೆ ಹೋದಾಗ ಜನರ ಮಧ್ಯೆ ಕಳೆದು ಹೋದರೆ ಸಿಗರೇಟ್ ಹೊಗೆ ಎಲ್ಲಿ ಕಾಣುತ್ತಿದೆಯೋ ಅದರ ಕೆಳಗೆ ನಾಡಿಗರು ಖಂಡಿತಾ ಸಿಗುತ್ತದ್ದರು ಎಂದು ಓದಿದಾಗ ಕಿರುನಗೆ ಬರದೆ ಇರಲಿ ಸಾಧ್ಯವೇ? Mr.Citizen ಖ್ಯಾತಿಯ ಶ್ರೀ ಬಿ.ವಿ.ರಾಮಮೂರ್ತಿಯವರನ್ನು ಭೇಟಿಯಾದ ಕ್ಷಣಗಳು, ಕೋವಿಡ್ ಸಮಯದಲ್ಲಿ ಆಸ್ಪತ್ರೆ ಸೇರಿದ್ದಾಗ ಅವಲೋಕನದ ಮೂಲಕ ತೆರೆದಿಟ್ಟ ಜೀವನದ ಕ್ಷಣಗಳು ಆಪ್ತವಾಗುತ್ತದೆ.

ನೆನಪಿನಂಗಳದ ಎರಡನೇಯ ಭಾಗದಲ್ಲಿ ಕೆಲ ತಮಾಷೆಯ ಪ್ರಸಂಗಗಳನ್ನು ತೆರೆದಿಟ್ಟಿದ್ದಾರೆ. ಮಲೆನಾಡಿನ ತರಹ ಲುಂಗಿ ಉಟ್ಟು ಬಯಲುಸೀಮೆಯ ಪ್ರದೇಶದಲ್ಲಿ ಓಡಾಡಿದಾಗ ಉಂಟಾಗುವ ಪೇಚಿನ ಪ್ರಸಂಗವೇ ಇರಲಿ, ಆಸ್ಪತ್ರೆಯಲ್ಲಿ ಮಾಡುವ ಭಜನೆಯ ಪ್ರಸಂಗ, ಹಳೆಯ ಟೆಲಿಫೋನಿನಲ್ಲಿ ಕಿರುಚಿಕೊಂಡು ಮಾತನಾಡುವ ರೀತಿ, ಬಾಲ್ಯದಲ್ಲಿ ಟೂರಿಂಗ್ ಟಾಕೀಸ್ ನಲ್ಲಿ ನೋಡಲು ಆಗದ ಸಿನಿಮಾವನ್ನು ಮುಂದೆ ವೃತ್ತಿಯಲ್ಲಿ ವಿದ್ಯುತ್ ಪರೀಕ್ಷಕರಾಗಿದ್ದಾಗ ಹೋಗಿ ನೋಡಿದ್ದು, ಮೆಳ್ಳೆ ಗಣ್ಣಿನ ಮೀಟರ್ ರೀಡರ್ ನ ಮೇಲೆ ಬಂದ ಅಪಾದನೆ, ಇವೆಲ್ಲಾ ಒಂದು ಕಡೆಯಾದರೆ ಅವರು ತೆಗೆದುಕೊಂಡ ಸೆಕೆಂಡ್ ಹ್ಯಾಂಡ್ ಸ್ಕೂಟರ್ ಮತ್ತು ಕಾರುಗಳ ಜೊತೆ ಅನುಭವಿದ ಪೇಚಿನ ಪ್ರಸಂಗಗಳು ಇನ್ನೊಂದು ರೀತಿಯದು.

‘ಕಪ್ಪೆ ಗುಪ್ಪೆ’ಯ ‘ಚಿಂತಾಮಣಿ’ ‘ಫೋನ್-ಇನ್ -ಕಾರ್ಯಕ್ರಮ’ದಲ್ಲಿ ‘ವಾಸ್ತು ಪರಿಹಾರ’ ಪಡೆದು ‘ನಿಶ್ಚಿಂತಾಮಣಿ’ ಆಗುವ ಪ್ರಸಂಗ, ಕೃಷ್ಣಪ್ಪ ಮತ್ತು ಶೀನಪ್ಪ ನಾಲ್ಕಾಣೆಯಲ್ಲಿ ಕಳ್ಳು ಕುಡಿಯುವ ಪ್ರಸಂಗಗಳನ್ನು ಓದಿಯೇ ಆನಂದಿಸಬೇಕು.

ನೆನಪು ಕತೆಯಾಗಿ ಮೂರನೇಯ ಭಾಗದಲ್ಲಿ ಬಂದಿದೆ. ಹಲಸಿನ ಹಣ್ಣಿನ ಮರವೊಂದರ ಮೂಲಕ ಬಹುಶಃ ಕಳೆದ ಒಂದು ಶತಮಾನದಲ್ಲಿ ಆದ ಹಳ್ಳಿಯ ಬದಲಾವಣೆಯ ಚಿತ್ರಣ ಕಥೆಯ ರೂಪದಲ್ಲಿ ಬಂದಿದೆ. ಓದಿದಾಗ ಮನಸ್ಸು ತುಂಬಿ ಬರುತ್ತದೆ. ಇದನ್ನು ಓದಿದಾಗ ಇವರೇಕೆ ಇನ್ನೂ ಕಾದಂಬರಿಗಳನ್ನು ಬರೆದಿಲ್ಲವೆನ್ನಿಸಿತು.

ಪ್ರತಿಯೊಂದು ಬರಹದ ಇಣಕು ನೋಟಕ್ಕೆ ಸ್ವಾಮಿಯವರೇ ರಚಿಸಿದ ರೇಖಾ ಚಿತ್ರಗಳು ಮೂಡಿಬಂದಿವೆ. ರೇಖಾ ಚಿತ್ರಗಳು ಹೆಸರೇ ಹೇಳುವಂತೆ ಸಣ್ಣ, ಸಣ್ಣ ರೇಖೆಗಳಿಂದ ರಚಿತವಾಗಿರುವುದು. ಆ ರೇಖೆಗಳು ಸೇರಿದಾಗ ಮೂಡುವ ಸುಂದರ ಚಿತ್ರದ ತರಹ ಅವರ ಬರಹವೂ ಮೂಡಿ ಬಂದಿದೆ. ಎಲ್ಲೂ ಉದ್ದದ ವಾಕ್ಯ ರಚನೆಗಾಗಲೀ ಅಥವ ಅಲಂಕಾರವನ್ನಾಗಿ ಮೂಡಲು ಹೋಗದೆ ಸರಳವಾಗಿ ಬರೆದಿರುವುದು ಇನ್ನೊಂದು ಮುಖ್ಯ ಅಂಶ. ವೃತ್ತಿ ನಟರದ್ದು “ಬದುಕಿಗಾಗಿ ನಾಟಕ”, ವ್ಯಕ್ತಿತ್ವದ ತೂಕ “ಕ್ವಿಂಟಾಲ್” ಗಟ್ಟಲೆ, “Origin Shirt”(ಮೂಲಂಗಿ), “package ಮದುವೆ” ಈ ತರಹದ ಮಿಣುಕುನೋಟಗಳನ್ನು ಬರಹದ ಉದ್ದಕ್ಕೂ ಓದುತ್ತಾ ಹೋದಂತೆ ಸಮಯ ಕಳೆದಿದ್ದು ತಿಳಿಯದೆ ಪುಸ್ತಕ ಓದಿ ಮುಗಿದಿರುತ್ತದೆ. ಅವರ ಜೊತೆ ನಾವು ಕೂಡ ತೀರ್ಥಹಳ್ಳಿಯ ರಥಬೀದಿಯಲ್ಲಿ ಓಡಾಡಿ, ವಿಠೋಬರಾಯರ ಅಂಗಡಿಗೆ ಭೇಟಿಕೊಟ್ಟು, ಕೃಷ್ಣಪ್ಪಯ್ಯನ ಹೋಟೆಲ್ ನಲ್ಲಿ ಮಸಾಲೆತಿಂದು, ಬರುವಾಗ ದಾರಿಯಲ್ಲಿ ಫಣಿಯಜ್ಜಿ ಕೈಲಿ ಕೊಬ್ಬರಿ ಬೆಲ್ಲ ತೆಗೆದುಕೊಂಡು ತಿನ್ನುವ ಅನುಭವವಾದರೆ, ಇನ್ನೊಂದು ಕಡೆ ಎತ್ತರೆತ್ತರಕ್ಕೆ ಬೆಳೆದ ಲಂಟಾನ, ಈಚಲು ಗಿಡ, ನಾಚಿಕೆ ಮುಳ್ಳು, ಭಾವಿಕಟ್ಟೆ, ಎತ್ತರಕ್ಕೆ ಬೆಳೆದ ಗುಲಾಬಿ, ದಾಸವಾಳ ಗಿಡಗಳ ಮಧ್ಯೆ ಓಡಾಡಿದ ಅನುಭವವಾಗುತ್ತದೆ. ಹಾಗಾಗಿ ಇದು ಮನ ಮುಟ್ಟುತ್ತದೆ.

“ವ್ಯಂಗ್ಯ ಚಿತ್ರವನ್ನೇ ಕಲಾಭಿವ್ಯಕ್ತಿ ಮಾಡಿಕೊಂಡ ಕೆ.ಆರ್.ಸ್ವಾಮಿಯವರ ಬರಹ ಸಮುಚ್ಚಯದಲ್ಲಿ ವ್ಯಂಗ್ಯ ಚಿತ್ರಕಲೆಯ ವೈಶಿಷ್ಟ್ಯವಾದ ಲಘುವಿನಲ್ಲಿ ಗುರು ಕಾಣುವ, ಗುರುವಿನಲ್ಲಿ ತನಿ ಕಾಣುವ ಪರಿಯನ್ನು ಗಮನಿಸಬಹುದು” ಎಂದು ಗಿರೀಶ್ ಕಾಸರವಳ್ಳಿ ಬೆನ್ನಡಿಯಲ್ಲಿ ಹೇಳಿದ್ದಾರೆ. ಅದು ಅಕ್ಷರಶಃ ಸತ್ಯ.

ಉತ್ತಮ ಪುಸ್ತಕ ಕೊಟ್ಟ ಶ್ರೀಯುತ ಕೆ.ಆರ್.ಸ್ವಾಮಿಯವರಿಗೆ ಧನ್ಯವಾದಗಳು.


  • ಎನ್.ವಿ.ರಘುರಾಂ, ನಿವೃತ್ತ ಅಧೀಕ್ಷಕ ಅಭಿಯಂತರ(ವಿದ್ಯುತ್), ಕ.ವಿ.ನಿ.ನಿ., ಬೆಂಗಳೂರು.

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW